samachara
www.samachara.com
‘ಇದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ’; ವರ್ಮಾ ರಾಜೀನಾಮೆ ಪತ್ರದ ಪೂರ್ಣಪಾಠ
COVER STORY

‘ಇದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ’; ವರ್ಮಾ ರಾಜೀನಾಮೆ ಪತ್ರದ ಪೂರ್ಣಪಾಠ

‘ಬಹುಮತ ಹೊಂದಿರುವ ಸರಕಾರವೊಂದು ತಾನು ನೇಮಿಸಿದ ಸದಸ್ಯರನ್ನೇ ಹೆಚ್ಚಿನ ಸಂಖ್ಯೆಯ ಹೊಂದಿರುವ ಸಿವಿಸಿ ಮೂಲಕ ಸಿಬಿಐನ್ನು ಒಂದು ಸಂಸ್ಥೆಯಾಗಿ ಹೇಗೆ ನಡೆಸಿಕೊಳ್ಳುತ್ತದೆ ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ.’

ಗುರುವಾರ ಜನವರಿ 10, 2019ರಂದು ಸಿಬಿಐ ನಿರ್ದೇಶಕರ ಸ್ಥಾನದಿಂದ ಅಲೋಕ್‌ ಕುಮಾರ್‌ ವರ್ಮಾ ಅವರನ್ನು ತೆಗೆದು ಹಾಕಲಾಗಿತ್ತು. ಕೇಂದ್ರ ವಿಚಕ್ಷಣ ಸಮಿತಿ (ಸಿವಿಸಿ) ನೀಡಿದ್ದ ವರದಿ ಆಧರಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರವಿರುವ ನೇಮಕಾತಿ ಸಮಿತಿ ಈ ತೀರ್ಮಾನ ತೆಗೆದುಕೊಂಡಿತ್ತು. ಅವರನ್ನು ಈ ಸಂದರ್ಭದಲ್ಲಿ ಅಗ್ನಿ ಶಾಮಕ ದಳ, ನಾಗರಿಕ ರಕ್ಷಣೆ ಮತ್ತು ಹೋಂ ಗಾರ್ಡ್ಸ್‌ ಡೈರೆಕ್ಟರ್‌ ಜನರಲ್‌ ಆಗಿ ವರ್ಗಾವಣೆ ಮಾಡಲಾಗಿತ್ತು.

ಆದರೆ, ಈ ಹುದ್ದೆ ವಹಿಸಿಕೊಳ್ಳಲು ನಿರಾಕರಿಸಿರುವ ಅಲೋಕ್‌ ವರ್ಮಾ ನೇರವಾಗಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಕಾರ್ಯದರ್ಶಿ ಸಿ. ಚಂದ್ರಮೌಳಿ ಅವರಿಗೆ ರಾಜೀನಾಮೆ ನೀಡಿ ‘ಭಾರತೀಯ ಪೊಲೀಸ್‌ ಸೇವೆ’ಯಿಂದ ಹೊರ ಬಂದಿದ್ದಾರೆ. ಈ ಸಂದರ್ಭದಲ್ಲಿ ಅವರು ಬರೆದಿರುವ ರಾಜೀನಾಮೆ ಪತ್ರ ತುಸು ಖಾರವಾಗಿ, ವೇದನೆಯಿಂದ ಬರೆದಂತಿದೆ. ಅದರ ಪೂರ್ಣ ಪಾಠವನ್ನು ಇಲ್ಲಿ ನೀಡಿದ್ದೇವೆ:

_____________________________________________________________

ಪ್ರೀತಿಯ ಚಂದ್ರಮೌಳಿಯವರೇ,

ಜನವರಿ 10, 2019ರಂದು ಕೆಳಗೆ ನನ್ನನ್ನು ಕೇಂದ್ರ ತನಿಖಾ ದಳ (ಸಿಬಿಐ)ನಿಂದ ವರ್ಗಾವಣೆ ಮಾಡಿ ಅಗ್ನಿ ಶಾಮಕ ದಳ, ನಾಗರಿಕ ರಕ್ಷಣೆ ಮತ್ತು ಹೋಂ ಗಾರ್ಡ್ಸ್‌ ಡೈರೆಕ್ಟರ್‌ ಜನರಲ್‌ ಆಗಿ ನೇಮಕ ಮಾಡಲಾಗಿದೆ.

1. ನೇಮಕಾತಿ ಸಮಿತಿ ಒಂದು ತೀರ್ಮಾನಕ್ಕೆ ಬರುವ ಮೊದಲು ಸಿವಿಸಿ ದಾಖಲು ಮಾಡಿಕೊಂಡ ವಿವರಗಳ ಬಗ್ಗೆ ವಿವರಣೆ ನೀಡುವ ಅವಕಾಶವನ್ನು ನೀಡಲಿಲ್ಲ. ನೈಸರ್ಗಿಕ ನ್ಯಾಯವನ್ನು ಅಸ್ತವ್ಯಸ್ತಗೊಳಿಸಲಾಯಿತು ಮತ್ತು ಸಿಬಿಐ ನಿರ್ದೇಶಕ ಹುದ್ದೆಯಿಂದ ತೆಗೆದು ಹಾಕುವುದನ್ನು ಅಂಗೀಕರಿಸಿ ಖಾತರಿಪಡಿಸಲು ಇಡೀ ಪ್ರಕ್ರಿಯೆಯನ್ನು ತಲೆಕೆಳಗೆ ಮಾಡಲಾಗಿದೆ. ಸದ್ಯ ಸಿಬಿಐನಿಂದ ತನಿಖೆಗೆ ಒಳಪಟ್ಟಿರುವ ದೂರುದಾರರಿಂದ ಪ್ರಸ್ತಾಪಿಸಲಾದ ಆರೋಪಗಳ ಆಧಾರದ ಮೇಲೆ ಈ ಸಂಪೂರ್ಣ ವರದಿಯನ್ನು ತಯಾರಿಸಲಾಗಿದೆ ಎಂಬುದನ್ನು ನೇಮಕಾತಿ ಸಮಿತಿ ಪರಿಗಣಿಸಿಲ್ಲ. ಅಷ್ಟೇ ಅಲ್ಲದೆ ಸಿ.ವಿ.ಸಿಯು ದೂರುದಾರರು ನೀಡಿದ ಹೇಳಿಕೆಗಳನ್ನೇ ನೇಮಕಾತಿ ಸಮಿತಿಗೆ ರವಾನಿಸಿರುವುದನ್ನು ಗಮನಿಸಬಹುದಾಗಿದೆ. ಈ ದೂರುದಾರರು ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದ ನಿವೃತ್ತ ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್‌ ಮುಂದೆ ಎಂದೂ ವಿವರಣೆ ನೀಡಿಲ್ಲ. ಅಷ್ಟೇ ಅಲ್ಲದೆ ನ್ಯಾ. ಪಟ್ನಾಯಕ್‌, ‘ಸಿವಿಸಿ ವರದಿಯಲ್ಲಿ ಉಲ್ಲೇಖಿತ ಅಂಶಗಳು/ತೀರ್ಮಾನಗಳು ನನ್ನದಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

2. ಸಂಸ್ಥೆಗಳು ನಮ್ಮ ಪ್ರಜಾಪ್ರಭುತ್ವದ ಪ್ರಬಲ ಮತ್ತು ಅತ್ಯಂತ ಗೋಚರ ಸಂಕೇತಗಳಲ್ಲಿ ಒಂದಾಗಿವೆ ಮತ್ತು ಭಾರತದಲ್ಲಿ ಇಂದು ಸಿಬಿಐ ಅತ್ಯಂತ ಪ್ರಮುಖ ಸಂಸ್ಥೆಯಾಗಿದೆ ಎಂಬುದು ಉತ್ಪ್ರೇಕ್ಷೆಯಲ್ಲ. ನಿನ್ನೆ ತೆಗೆದುಕೊಂಡ ನಿರ್ಧಾರಗಳು ಕೇವಲ ನನ್ನ ಕಾರ್ಯಚಟುವಟಿಕೆಗಳ ಪ್ರತಿಫಲನವಾಗಿಲ್ಲ, ಬದಲಿಗೆ ಬಹುಮತ ಹೊಂದಿರುವ ಸರಕಾರವೊಂದು ತಾನು ನೇಮಿಸಿದ ಸದಸ್ಯರನ್ನೇ ಹೆಚ್ಚಿನ ಸಂಖ್ಯೆಯ ಹೊಂದಿರುವ ಸಿವಿಸಿ ಮೂಲಕ ಸಿಬಿಐನ್ನು ಒಂದು ಸಂಸ್ಥೆಯಾಗಿ ಹೇಗೆ ನಡೆಸಿಕೊಳ್ಳುತ್ತದೆ ಎಂಬುದಕ್ಕೆ ತಾಜಾ ಉದಾಹರಣೆಯಾಗಿದೆ. ಇದು ಕನಿಷ್ಠ ಪ್ರಭುತ್ವವೊಂದು ಸಾಮೂಹಿಕ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ.

3. ಓರ್ವ ಅಧಿಕಾರಿಯಾಗಿ ನನ್ನ ನಾಲ್ಕು ದಶಕಗಳ ಸಾರ್ವಜನಿಕ ಸೇವೆಯಲ್ಲಿ ನನ್ನ ಬದ್ಧತೆಯೇ ನನ್ನ ಚಾಲನಾ ಶಕ್ತಿಯಾಗಿದೆ. ನಾನು ಕಳಂಕವಿಲ್ಲದ ದಾಖಲೆಯೊಂದಿಗೆ ಭಾರತೀಯ ಪೊಲೀಸ್ ಸೇವೆಗೆ ಸೇವೆ ಸಲ್ಲಿಸಿದ್ದೇನೆ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಪುದುಚೇರಿ, ಮಿಜೋರಾಂ, ದೆಹಲಿ ಪೊಲೀಸ್‌ ಮುಖ್ಯಸ್ಥನಾಗಿ ಕೆಲಸ ನಿರ್ವಹಿಸಿದ್ದೇನೆ. ಜತೆಗೆ ದೆಹಲಿ ಬಂಧೀಖಾನೆ ಮತ್ತು ಸಿಬಿಐ ಮುಖ್ಯಸ್ಥನಾಗಿಯೂ ಕೆಲಸ ಮಾಡಿದ್ದೇನೆ. ನಾನು ಮುನ್ನಡೆಸಿದ ಪಡೆಗಳಿಂದ ಅಮೂಲ್ಯವಾದ ಬೆಂಬಲವನ್ನು ಪಡೆದುಕೊಂಡಿದ್ದಕ್ಕಾಗಿ ನಾನು ಅದೃಷ್ಟವಂತನಾಗಿರುತ್ತೇನೆ. ಇದು ಪ್ರಮುಖ ಸಾಧನೆಗಳಿಗೆ ಕಾರಣವಾಯಿತು ಮತ್ತು ಪಡೆಗಳ ಕಾರ್ಯಕ್ಷಮತೆ ಮತ್ತು ಅವರ ಕಲ್ಯಾಣದ ಮೇಲೆ ನೇರ ಸಂಬಂಧವನ್ನು ಹೊಂದಿದೆ. ನಾನು ಭಾರತೀಯ ಪೊಲೀಸ್‌ ಸೇವೆಗೆ ಮತ್ತು ವಿಶೇಷವಾಗಿ ನಾನು ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ.

4. ಅಲ್ಲದೆ, ಗಮನಿಸಬಹುದಾಗಿದ್ದೇನೆಂದರೆ ನನ್ನನ್ನು ಜುಲೈ 31, 2017 ರಂದು ಸಿಬಿಐ ನಿರ್ದೇಶಕನಾಗಿ ನೇಮಕ ಮಾಡಿದ ದಿನ 2019ರ ಜನವರಿ 31 ರವರೆಗೆ ಅಧಿಕಾರದ ಅವಧಿ ಎಂದು ನಿಗದಿಪಡಿಸಲಾಗಿತ್ತು. ಆದರೆ ನಾನು ಸಿಬಿಐನಿಂದ ವರ್ಗಾವಣೆಯಾಗಿರುವ ಅಗ್ನಿ ಶಾಮಕ ಸೇವೆ, ನಾಗರೀಕ ರಕ್ಷಣೆ ಮತ್ತು ಹೋಂ ಗಾರ್ಡ್‌ಗಳಿಗೆ ನಿರ್ದೇಶಕನಾಗಿ ಸೇವೆ ಸಲ್ಲಿಸಲು ವಯಸ್ಸಾಗಿರುವ ಕಾರಣ ಇಂದಿನಿಂದ ಅಧಿಕೃತವಾಗಿ ರಾಜೀನಾಮೆ ನೀಡಿದ್ದೇನೆ.

ಧನ್ಯವಾದಗಳು

ನಿಮ್ಮ ನಂಬುಗೆಯ
ಅಲೋಕ್‌ ಕುಮಾರ್‌ ವರ್ಮಾ