samachara
www.samachara.com
ಕೆಪಿ ನಂಜುಂಡಿ ಟಿವಿ 1 ಶಟ್‌ಡೌನ್; ಕೋಡ್‌ ರೆಡ್‌ ಫಾರ್‌ ಕನ್ನಡ ಟಿವಿ ಜರ್ನಲಿಸಂ!
COVER STORY

ಕೆಪಿ ನಂಜುಂಡಿ ಟಿವಿ 1 ಶಟ್‌ಡೌನ್; ಕೋಡ್‌ ರೆಡ್‌ ಫಾರ್‌ ಕನ್ನಡ ಟಿವಿ ಜರ್ನಲಿಸಂ!

ಒಂದು ಕಡೆ ಮಾಧ್ಯಮ ಸಂಸ್ಥೆಗಳು, ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಗಳು ಪೂರ್ವ ತಯಾರಿಯಿಲ್ಲದೆ ಕುಳಿತಿರುವಾಗ ಕನ್ನಡ ಪತ್ರಿಕೋದ್ಯಮದ ಭವಿಷ್ಯ ಏನಾಗಿರಬಹುದು?

ಕರ್ನಾಟಕದ ಸುದ್ದಿ ವಾಹಿನಿ ಮಾರುಕಟ್ಟೆಯಲ್ಲಿ ಮತ್ತೊಂದು ವಾಹಿನಿ ಬಾಗಿಲು ಎಳೆದುಕೊಂಡಿದೆ. ಗುರುವಾರ ರಾತ್ರಿ ನಡೆದಿರುವ ಈ ಬೆಳವಣಿಗೆಯ ಪರಿಣಾಮ 120 ಪತ್ರಕರ್ತರು- ಸಿಬ್ಬಂದಿಗಳು ಯಾವುದೇ ಮುನ್ಸೂಚನೆಯೂ ಇಲ್ಲದೆ ಕೆಲಸ ಕಳೆದುಕೊಂಡಿದ್ದಾರೆ. ಅಂದಹಾಗೆ, ಕಾರ್ಯಚರಣೆಯನ್ನು ಹೀಗೆ ಏಕಾಏಕಿ ಸ್ಥಗಿತಗೊಳಿಸಿರುವ ವಾಹಿನಿಯ ಹೆಸರು ಟಿವಿ 1 ಮತ್ತು ಅದರ ಮಾಲೀಕರು ಕೆ. ಪಿ. ನಂಜುಂಡಿ.

ಕಳೆದ ಕೆಲವು ತಿಂಗಳುಗಳಲ್ಲಿ ಕನ್ನಡದ ಟಿವಿ ಪತ್ರಿಕೋದ್ಯಮ ಹಿಂದೆಂದೂ ಇಲ್ಲದಷ್ಟು ಅಸ್ಥಿರತೆಯನ್ನು ಎದುರಿಸುತ್ತಿದೆ. ಒಂದರ ಹಿಂದೊಂದು ವಾಹಿನಿಗಳು ಮುಚ್ಚಿಕೊಳ್ಳುತ್ತಿವೆ. ಇವುಗಳನ್ನು ಸಂಬಳಕ್ಕಾಗಿ ನೆಚ್ಚಿಕೊಂಡ ಪತ್ರಕರ್ತರು ಹಾಗೂ ಸಿಬ್ಬಂದಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ. ಒಂದು ಹಂತದಲ್ಲಿ ಭಾರಿ ಬೆಳವಣಿಗೆ, ವಿಸ್ತರಣೆ ಹಾಗೂ ಉದ್ಯೋಗ ಸೃಷ್ಟಿಯನ್ನು ಕಂಡಿದ್ದ ಮಾರುಕಟ್ಟೆ ತನ್ನ ಸ್ಯಾಚುರೇಷನ್ ಮುಟ್ಟಿದ ಮುನ್ಸೂಚನೆಯನ್ನು ಈ ಬೆಳವಣಿಗೆಗಳು ನೀಡುತ್ತಿವೆ.

ಯಾವುದೇ ಉದ್ಯಮ ಇರಲಿ, ಕ್ಷೇತ್ರ ಇರಲಿ- ಅದರ ಬೆಳವಣಿಗೆಗೆ ಒಂದು ಕಾಲ ಮಿತಿ ಎಂಬುದು ಇರುತ್ತದೆ. ಅದರಲ್ಲೂ ಒಂದು ದಶಕ ಎಂಬುದು ಸುದೀರ್ಘ ಕಾಲಘಟ್ಟ. ಈ ಲೆಕ್ಕಾಚಾರದ ಪ್ರಕಾರ, ಯಶಸ್ವಿಯಾಗಿ ಒಂದು ದಶಕವನ್ನು ಪೂರೈಸಿದ ಕನ್ನಡದ 24/7 ಸುದ್ದಿ ವಾಹಿನಿಗಳ ಮಾರುಕಟ್ಟೆ ಇಷ್ಟೊತ್ತಿಗೆ ಹೊಸ ಅವಕಾಶಗಳನ್ನು ಹುಡುಕಿಕೊಳ್ಳಬೇಕಿತ್ತು. ಆದರೆ, ಇಂತಹದೊಂದು ದೂರಾಲೋಚನೆ ಇಲ್ಲದ ಮಾರುಕಟ್ಟೆ ಸಹಜವಾಗಿಯೇ ಬಿಕ್ಕಟ್ಟಿಗೆ ಸಿಲುಕಿದೆ ಮತ್ತು ಅದರ ಪರಿಣಾಮ ನಿರುದ್ಯೋಗ, ನೈತಿಕ ಮೌಲ್ಯಗಳ ಕುಸಿತ ಹಾಗೂ ಹೊಣೆಗೇಡಿತನಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ.

ನಡೆದಿದ್ದೇನು?:

ಗುರುವಾರ ರಾತ್ರಿ 9 ಗಂಟೆಗೆ ಬೆಂಗಳೂರು ಯಶವಂತಪುರದಲ್ಲಿರುವ ಟಿವಿ 1 ಕಚೇರಿಯಲ್ಲಿ ಪತ್ರಕರ್ತರು ಹಾಗೂ ಸಿಬ್ಬಂದಿಗಳ ಸಭೆ ಕರೆದ ಮಾಲೀಕ ಕೆ. ಪಿ. ನಂಜುಂಡಿ, “ನಾಳೆಯಿಂದ (ಜ.11) ಚಾನಲ್ ಪ್ರಸಾರವನ್ನು ನಿಲ್ಲಿಸುತ್ತಿದ್ದೇವೆ. ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸಿಕೊಳ್ಳಲು ಇನ್ನೊಂದು ಎರಡು ತಿಂಗಳ ಅವಕಾಶ ಬೇಕಿದೆ. ಅಲ್ಲೀವರೆಗೂ ನೀವು ಹೊರಗೆ ಇರಬೇಕು. ಎಲ್ಲವೂ ಸರಿಯಾದರೆ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ,’’ ಎಂದು ಹುಸಿ ಭರವಸೆ ಮೂಲಕ ಬೀಳ್ಕೊಡುಗೆ ಭಾಷಣ ಮಾಡಿದ್ದಾರೆ.

ಹಾಗೆ ನೋಡಿದರೆ, ಟಿವಿ 1 ಆರಂಭಗೊಂಡ ಕೆಲವೇ ದಿನಗಳಲ್ಲಿ ಸಮಸ್ಯೆಗೆ ಸಿಲುಕಿತ್ತು. ತಿರುಪತಿ ನಾಮದ ನೆಪ ಇಟ್ಟುಕೊಂಡು ‘ಧರ್ಮ ಯುದ್ಧ’ವೊಂದನ್ನು ಸೃಷ್ಟಿಸುವ ಅಪಾಯಕಾರಿ ನಡೆಯನ್ನು ಪ್ರದರ್ಶಿಸಿತ್ತು. ನಂತರ ಸಂಬಳ ನೀಡಲಾಗದೆ ಪತ್ರಕರ್ತರ ಪ್ರತಿಭಟನೆಗೆ ಸಾಕ್ಷಿಯಾಗಿತ್ತು. ಇದಾದ ನಂತರ ಇಲ್ಲಿನ ಸಂಪಾದಕೀಯ ವಿಭಾಗದಲ್ಲಿ ಹಾಗೂ ಹೂಡಿಕೆದಾರರಲ್ಲಿ ಮುಖಗಳು ಬದಲಾಗಿದ್ದವು. ಹೀಗೆ ಆರಂಭದಿಂದಲೂ ಸ್ಥಿರತೆ ಕಾಣಲು ಹೆಣಗಾಡಿಕೊಂಡೇ ಬಂದ ವಾಹಿನಿ ಇದೀಗ ಉಳಿದ ಪತ್ರಕರ್ತರಿಗೆ- ಸಿಬ್ಬಂದಿಗಳಿಗೆ ಚೆಕ್ ನೀಡಿ ಹೊರಗೆ ಕಳುಹಿಸಿ ಬಾಗಿಲು ಹಾಕಿಕೊಂಡಿದೆ. ಕೆಲವು ತಿಂಗಳ ಹಿಂದೆ ಹಿರಿಯ ಪತ್ರಕರ್ತ ಶಶಿಧರ್ ಭಟ್ ನೇತೃತ್ವದ ಸುದ್ದಿ ಟಿವಿ, ಉದಯ ನ್ಯೂಸ್‌, ನೌಹೀರಾ ಶೇಖ್‌ ಒಡೆತನದ ಟಿಟಿಸಿ ವಾಹಿನಿಗಳೂ ಇದೇ ರೀತಿ ಬಾಗಿಲೆಳೆದುಕೊಂಡವು. ಸಾಮುದಾಯಿಕ ಮರಗುವಿಕೆಯ ಸೂಕ್ಷ್ಮಗಳನ್ನು ಕಳೆದುಕೊಂಡಿರುವ ಮಾರುಕಟ್ಟೆಯಲ್ಲಿ ‘ಅಯ್ಯೋ ಪಾಪ’ಗಳ ಪಟ್ಟಿಗೆ ಇನ್ನೊಂದಿಷ್ಟು ಜನ ಸೇರ್ಪಡೆಯಾಗಿದ್ದಾರೆ.

ಪರಿಣಾಮಗಳೇನು?:

ಚಿತ್ರ ಸಾಂದರ್ಭಿಕ.
ಚಿತ್ರ ಸಾಂದರ್ಭಿಕ.
/ರಾಯ್ಟರ್ಸ್‌

ಯಾವುದೇ ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳದೆ ಅಸಹ್ಯಕವಾಗಿ ವಿಸ್ತರಣೆಗೊಳ್ಳುವ ಮಾರುಕಟ್ಟೆಯಲ್ಲಿ ಇಂತಹ ಘಟನೆಗಳು ನಡೆದಾಗ ಯಾರಿಗೂ ಅಯ್ಯೋ, ಪಾಪಾದ ಹೊರತಾಗಿ ಇನ್ನೇನು ಪ್ರತಿಕ್ರಿಯೆ ನೀಡಬೇಕು ಎಂಬುದು ಅರ್ಥವಾಗುವುದಿಲ್ಲ. ಉದಾಹರಣೆಗೆ ಕರ್ನಾಟಕ ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆ- ಪ್ರೆಸ್‌ ಕ್ಲಬ್‌ ಆಫ್‌ ಬೆಂಗಳೂರಿನ ಅಧ್ಯಕ್ಷ ಸದಾಶಿವ ಶೆಣೈ.

“ಯಾವ ವಾಹಿನಿಯೂ ನಮ್ಮನ್ನು ಕೇಳಿ ಆರಂಭವಾಗುವುದಿಲ್ಲ. ಹಾಗೆ ಮುಚ್ಚುವಾಗಲೂ ನಮ್ಮನ್ನು ಕೇಳಿ ಮುಚ್ಚುವುದಿಲ್ಲ. ಈ ಸಮಸ್ಯೆಗಳು ನಮ್ಮ ಅಧಿಕಾರದ ಪರಿಧಿಗೆ ಬರುವುದಿಲ್ಲ. ಹೀಗಾಗಿ ಕೆಲಸ ಕಳೆದುಕೊಂಡು ಬೀದಿಗೆ ಬೀಳುವ ಪತ್ರಕರ್ತರ ಸಮಸ್ಯೆಗೆ ನಮ್ಮಿಂದ ಸ್ಪಂದಿಸುವುದು ಸಾಧ್ಯವಿಲ್ಲ,’’ ಎಂಬುದು ಟಿವಿ 1 ಬೆಳವಣಿಗೆ ಕುರಿತು ಶೆಣೈ ನೀಡಿರುವ ಪ್ರತಿಕ್ರಿಯೆ.

ನಿಜ, ‘ಪ್ರೆಸ್‌ ಕ್ಲಬ್ ಆಫ್‌ ಬೆಂಗಳೂರು’ ಆಗಲೀ, ಕಾರ್ಯನಿರತ ಪತ್ರಕರ್ತ ಸಂಘಗಳಾಗಲಿ ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಗಳೇ ಹೊರತು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಅಲ್ಲ. ಹೀಗಾಗಿ ವಾಹಿನಿಗಳ ಆರಂಭಕ್ಕೆ ಅನುಮತಿ ನೀಡುವ ಅವಕಾಶ ಇಲ್ಲ ಎಂಬುದು ಸಾಮಾನ್ಯ ಜ್ಞಾನ. ಆದರೆ, ಕರ್ನಾಟಕದಲ್ಲಿ ಪತ್ರಿಕೋದ್ಯಮ ಇಂತಹದೊಂದು ಬಿಕ್ಕಟ್ಟನ್ನು ಎದುರಿಸುವ ಮುನ್ಸೂಚನೆಯನ್ನು ನೀಡಿದ ಸಮಯದಲ್ಲಿ ಪತ್ರಕರ್ತರನ್ನು ಎಚ್ಚರಿಸುವ, ತಾನು ಪ್ರತಿನಿಧಿಸುವ ಸಮುದಾಯದ ಸದಸ್ಯರಿಗೆ ಬಿಕ್ಕಟ್ಟಿನಿಂದ ಪಾರಾಗುವ ದಾರಿಗಳನ್ನು ಹುಡುಕಿಕೊಳ್ಳಲು ಅವಕಾಶಗಳನ್ನು ಸೃಷ್ಟಿಸುವ ಅಧಿಕಾರ ಇಲ್ಲವಾ? ಇದು ಅಧಿಕಾರ ವ್ಯಾಪ್ತಿಯ ಪ್ರಶ್ನೆ ಅಲ್ಲ, ಬದಲಿಗೆ ಸೃಜನಶೀಲ ಆಲೋಚನೆಗಳ ಮಿತಿ ಅಷ್ಟೆ.

ಒಂದು ಕಡೆ ಮಾಧ್ಯಮ ಸಂಸ್ಥೆಗಳು, ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಗಳು ಪೂರ್ವ ತಯಾರಿಯಿಲ್ಲದೆ ಕುಳಿತಿರುವಾಗ ಪತ್ರಿಕೋದ್ಯಮದ ಪರಿಸ್ಥಿತಿ ಏನಾಗಿರಬಹುದು?

“ಇದು ತುಂಬಾ ದಿನ ಉಳಿಯುವ ಕೆಲಸ ಅಲ್ಲ. ಅರ್ಜೆಂಟ್ ಆಗಿ ಕಾಸು ಮಾಡಬೇಕು. ಒಂದು ಸೆಟಲ್‌ಮೆಂಟ್ ಆದರೂ ಸಾಕು; ಫೀಲ್ಡ್‌ ಬಿಟ್ಟು ಹೋಗುತ್ತೇನೆ,’’ ಎಂಬ ಮಾತುಗಳು ಇವತ್ತು ಸುದ್ದಿ ವಾಹಿನಿಯಗಳ ವಲಯದಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿವೆ. ಒಂದಷ್ಟು ಜನ ಇದನ್ನು ಗಂಭೀರವಾಗಿ ತೆಗೆದುಕೊಂಡು ಗಾಯದ ಮೇಲೆ ಬರೆ ಎಳೆದುಕೊಳ್ಳುತ್ತಿದ್ದಾರೆ ಕೂಡ. ಆಳಕ್ಕಿಳಿದು ನೋಡಿದರೆ, ಕರ್ನಾಟಕದಲ್ಲಿ ಪತ್ರಕರ್ತರು, ಸಿಬ್ಬಂದಿಗಳು ಎದುರಿಸುತ್ತಿರುವ ಅತಂತ್ರತೆ, ಅಭದ್ರತೆ ಹಾಗೂ ಬಿಕ್ಕಟ್ಟಿನಿಂದಾಗಿ ಹುಟ್ಟಿಕೊಂಡಿರುವ ಪರ್ಯಾಯದ ಮಾದರಿ ಇದು. ಯಾವ ಮೌಲ್ಯಗಳ ಕಾರಣಕ್ಕೆ ಪತ್ರಿಕೋದ್ಯಮ, ಪತ್ರಕರ್ತರು ಹಾಗೂ ಅವರ ಪ್ರಾತಿನಿಧಿಕ ಸಂಸ್ಥೆಗಳಿಗೆ ಸಮಾಜ ಒಂದು ಸ್ಥಾನಮಾನ ನೀಡಿತ್ತೋ, ಅದನ್ನೇ ಮರೆತು ಮುನ್ನಡೆದರೆ ಭವಿಷ್ಯದ ದಿನಗಳು ಹೇಗಿರಬಹುದು?

ಪರಿಹಾರಗಳೇನು?:

ಪತ್ರಿಕೋದ್ಯಮ ಅಂದು-ಇಂದು-ನಾಳೆ.
ಪತ್ರಿಕೋದ್ಯಮ ಅಂದು-ಇಂದು-ನಾಳೆ.

ಹಾಗಂತ ಸುದ್ದಿ ವಾಹಿನಿಗಳ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಇಂತಹ ಬೆಳವಣಿಗೆಗಳು ಹೊಸತಲ್ಲ ಮತ್ತು ತೀರಾ ಆತಂಕ ಪಡುವ ಅಗತ್ಯವೂ ಇಲ್ಲ. ಪ್ರಪಂಚದ ಮುಂದುವರಿದ ಪತ್ರಿಕೋದ್ಯಮದ ಮಾರುಕಟ್ಟೆಗಳು ಇಂತಹದೊಂದು ಬಿಕ್ಕಟ್ಟನ್ನು ದಾಟಿಕೊಂಡೇ ಬಂದಿವೆ.

ಮೊದಲು ರೇಡಿಯೋ ಆರಂಭಗೊಂಡಾಗ ದಿನ ಪತ್ರಿಕೆಗಳ ಸುದ್ದಿಯನ್ನೇ ಓದುವ ಪರಿಪಾಠ ಇತ್ತು. ನಂತರ ರೇಡಿಯೋಗಾಗಿಯೇ ಪ್ರತ್ಯೇಕ ಪರಿಣಿತಿಯನ್ನು ಬೆಳೆಸಿಕೊಳ್ಳಲಾಯಿತು. ಟಿವಿ ಆರಂಭಗೊಂಡಾಗ ಕಪ್ಪು ಪರದೆಯಲ್ಲಿ ರೇಡಿಯೋ ಮಾದರಿಯಲ್ಲಿ ಸುದ್ದಿಗಳನ್ನು ಧ್ವನಿ ಮೂಲಕ ನೀಡಲಾಗುತ್ತಿತ್ತು. ಇವತ್ತು ಟಿವಿ ಮಾರುಕಟ್ಟೆ ಬೆಳೆದು ಬಂದ ಬಗೆಯನ್ನು ಜಗತ್ತು ನೋಡುತ್ತಿದೆ.

ಹಾಗೆಯೇ, ಇಂದು ಪಶ್ಚಿಮದ ದೇಶಗಳಿಂದ ಹಿಡಿದು ಯುರೋಪ್‌ವರೆಗೆ, ನಮ್ಮದೇ ಪಕ್ಕದ ಆಂಧ್ರ, ಕೇರಳ ಹಾಗೂ ತಮಿಳುನಾಡುಗಳಲ್ಲಿ ಡಿಜಿಟಲ್ ಪತ್ರಿಕೋದ್ಯಮ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ಒಂದು ಮಾರುಕಟ್ಟೆ ತನ್ನ ಗರಿಷ್ಠ ಮಿತಿಯನ್ನು ಮುಟ್ಟಿದಾಗಲೇ ಹೊಸ ಮಾರುಕಟ್ಟೆ ತೆರೆದುಕೊಳ್ಳುವ ಬಗೆಯನ್ನು ಅವಕಾಶವಾಗಿ ಇಲ್ಲಿ ಬಳಸಿಕೊಳ್ಳಲಾಗುತ್ತಿದೆ.

ಈ ಸಮಯದಲ್ಲಿ ಗಮನಿಸಬೇಕಿರುವುದು ಏನೆಂದರೆ, ಹೊಸ ಮಾರುಕಟ್ಟೆ ಹೊಸ ಕೌಶಲ್ಯಗಳನ್ನು ಬೇಡುತ್ತದೆ. ಅದನ್ನು ಬೆಳೆಸುವ ಕೆಲಸವನ್ನು ಪ್ರಾತಿನಿಧಿಕ ಸಂಸ್ಥೆಗಳು ಮಾಡಬೇಕು. ಮಾಧ್ಯಮ ಸಂಸ್ಥೆಗಳೂ ಈ ನಿಟ್ಟಿನಲ್ಲಿ ಆಲೊಚನೆ ಮಾಡಬೇಕು. ಪ್ರತಿ ವರ್ಷ 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ‘ಮಾಸ್ ಕಮ್ಯುನಿಕೇಶನ್’ ಕಲಿಸಿ ಹೊರಗೆ ಬಿಡುತ್ತಿರುವ ಕಾಲೇಜುಗಳು ಹಾಗೂ ವಿಶ್ವವಿದ್ಯಾನಿಲಯಗಳು ಪಠ್ಯಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಇಂತಹ ಆರೋಗ್ಯಪೂರ್ಣ ಪರ್ಯಾಯಗಳ ಕಡೆ ಆಲೋಚನೆ ಮಾಡದೇ ಹೋದರೆ, ಮೌಲ್ಯ ಕಳೆದುಕೊಂಡು ಪತ್ರಿಕೋದ್ಯಮ ಮಾರುಕಟ್ಟೆಯನ್ನು ಪ್ರತಿನಿಧಿಸಿದ ಕಳಂಕವನ್ನು ಎಲ್ಲರೂ ಒಟ್ಟಾಗಿ ಹೊತ್ತುಕೊಳ್ಳಬೇಕಾಗುತ್ತದೆ.