samachara
www.samachara.com
ಕಾರ್ಯಕಾರಿಣಿ, ಚುನಾವಣೆ, ನಾಯಕತ್ವ; ಅಮಿತ್‌ ಶಾ- ರಾಜ್ಯ ಬಿಜೆಪಿ ಮುಖಂಡರ ಸಭೆಯ ಗುಟ್ಟೇನು?
COVER STORY

ಕಾರ್ಯಕಾರಿಣಿ, ಚುನಾವಣೆ, ನಾಯಕತ್ವ; ಅಮಿತ್‌ ಶಾ- ರಾಜ್ಯ ಬಿಜೆಪಿ ಮುಖಂಡರ ಸಭೆಯ ಗುಟ್ಟೇನು?

ಲೋಕಸಭಾ ಚುನಾವಣೆಯ ಸಿದ್ಧತೆಗಳ ಜತೆಗೆ ಕರ್ನಾಟಕ ವಿಧಾನಸಭೆಯಲ್ಲಿ ಮತ್ತೆ ಅಧಿಕಾರ ಹಿಡಿಯುವ ದೃಷ್ಟಿಯಿಂದಲೂ ಕರ್ನಾಟಕ ಬಿಜೆಪಿ ಮುಖಂಡರೊಂದಿಗಿನ ಅಮಿತ್‌ ಶಾ ಸಭೆ ನಿರ್ಣಾಯಕ ಎನಿಸಿದೆ.

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಶುರುವಾಗಿವೆ. ಇಂದಿನಿಂದ ದೆಹಲಿಯ ರಾಮಲೀಲಾ ಮೈದಾನದಲ್ಲಿ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಆರಂಭವಾಗಿದೆ. ದೇಶದ ಎಲ್ಲಾ ರಾಜ್ಯಗಳ ಬಿಜೆಪಿ ಮುಖಂಡರಿಗೂ ಇದು ಎರಡು ದಿನಗಳ ಕಾರ್ಯಕಾರಿಣಿಯಾದರೆ; ಕರ್ನಾಟಕದ ಮುಖಂಡರ ಪಾಲಿಗೆ ಇದು ಮೂರು ದಿನಗಳ ಕಾರ್ಯಕಾರಿಣಿ! ಮೊದಲ ಎರಡು ದಿನಗಳ ಮಾತುಕತೆಗಿಂತಲೂ ಮೂರನೇ ದಿನದ ಮಾತುಕತೆ ರಾಜ್ಯ ಬಿಜೆಪಿ ಮುಖಂಡರ ಪಾಲಿಗೆ ಮುಖ್ಯದ್ದಾಗಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳನ್ನು ಗುರಿಯಾಗಿಸಿಕೊಂಡಿರುವ ಬಿಜೆಪಿ ಇದಕ್ಕಾಗಿ ಕರ್ನಾಟಕದ ಮೂಲಕ ರಹದಾರಿ ಕಂಡುಕೊಳ್ಳುವ ಗಂಭೀರ ಪ್ರಯತ್ನದಲ್ಲಿದೆ. ಕರ್ನಾಟಕದ ಮೂಲಕ ದಕ್ಷಿಣ ಭಾರತದ ಅಧಿಪತ್ಯ ಸಾಧಿಸಲು 2018ರ ರಾಜ್ಯ ವಿಧಾನಸಭಾ ಚುನಾವಣೆಯಿಂದಲೇ ‘ರಣತಂತ್ರ’ ರೂಪಿಸುತ್ತಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಕಾರ್ಯಕಾರಿಣಿ ಬಳಿಕ ಕರ್ನಾಟಕದ ಶಾಸಕರು ಹಾಗೂ ಸಂಸದರ ಜತೆಗೆ ವಿಶೇಷ ಸಭೆ ನಡೆಸಲು ಮುಂದಾಗಿದ್ದಾರೆ.

ಭಾನುವಾರ ಅಮಿತ್‌ ಶಾ ಜತೆಗೆ ಕರ್ನಾಟಕ ಬಿಜೆಪಿ ಮುಖಂಡರ ಕ್ಲೋಸ್‌ಡೋರ್‌ ಮೀಟಿಂಗ್‌ ನಡೆಯಲಿದೆ. ಸಭೆಯಲ್ಲಿ ಕರ್ನಾಟಕದಲ್ಲಿ ಈ ಬಾರಿಯ ಲೋಕಸಭಾ ಚುನಾವಣಾ ವಿಷಯಗಳು, ಸೀಟು ಹಂಚಿಕೆ ಹಾಗೂ ವಿಶೇಷವಾಗಿ ಕೇರಳ ಹಾಗೂ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಪಕ್ಷದ ಬಲ ಹೆಚ್ಚಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆಯೂ ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯ ಕೇಳುವ ಸಾಧ್ಯತೆ ಇದೆ ಎನ್ನುತ್ತವೆ ಪಕ್ಷದ ಮೂಲಗಳು.

ಚುನಾವಣಾ ರಣತಂತ್ರಗಳು ಹಾಗೂ ಲೋಕಸಭೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಚುನಾವಣಾ ವಿಷಯಗಳ ಬಗ್ಗೆ ಎರಡು ದಿನಗಳ ಕಾರ್ಯಕಾರಿಣಿಯಲ್ಲಿ ಅಮಿತ್‌ ಶಾ, ನರೇಂದ್ರ ಮೋದಿ, ಅರುಣ್‌ ಜೇಟ್ಲಿ ಸೇರಿದಂತೆ ಹಲವು ಮುಖಂಡರು ಮಾತನಾಡುತ್ತಾರೆ. ಭಾನುವಾರ ಕರ್ನಾಟಕದ ಶಾಸಕರು, ಸಂಸದರ ಜತೆಗೆ ಅಮಿತ್‌ ಶಾ ಸಭೆ ನಿಗದಿಯಾಗಿದೆ. ಸಭೆಗೆ ಅಜೆಂಡಾ ಗೊತ್ತು ಮಾಡಿಲ್ಲ. ರಾಜ್ಯ ನಾಯಕರೊಂದಿಗಿನ ಅಮಿತ್‌ ಶಾ ಸಭೆಯಲ್ಲಿ ಯಾವೆಲ್ಲಾ ವಿಚಾರಗಳು ಚರ್ಚೆಯಾಗುತ್ತವೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.
- ವಾಮನಾಚಾರ್ಯ, ಬಿಜೆಪಿ ವಕ್ತಾರ

ರಾಜ್ಯದಲ್ಲಿ ಲೋಕಸಭಾ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ಹಾಗೂ ಅನಂತಕುಮಾರ್‌ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಅವರ ಪತ್ನಿಯನ್ನೇ ಕಣಕ್ಕಿಳಿಸಬೇಕೇ ಅಥವಾ ಮತ್ತೊಬ್ಬ ಪ್ರಭಾವಿ ಬಿಜೆಪಿ ಅಭ್ಯರ್ಥಿಯನ್ನು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸಬೇಕೆ ಎಂಬ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಯಾವ ಯಾವ ಕ್ಷೇತ್ರಕ್ಕೆ ಯಾರು ಸ್ಪರ್ಧಿಸಬೇಕು ಎಂಬ ಆಯ್ಕೆಯ ನಿರ್ಧಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಹೆಚ್ಚಿನ ಅಧಿಕಾರ ಕೊಡುವ ಮಾತುಗಳೂ ಕೇಳಿಬರುತ್ತಿವೆ. ಅಲ್ಲದೆ ರಾಜ್ಯ ಬಿಜೆಪಿಯೊಳಗೆ ನಾಯಕರ ಮಧ್ಯೆ ಇರುವ ಬಿನ್ನಾಭಿಪ್ರಾಯಗಳನ್ನು ನಿವಾರಿಸುವ ದೃಷ್ಟಿಯಿಂದಲೂ ಈ ಸಭೆ ಮಹತ್ವದ್ದಾಗಿದೆ.

ರಾಜ್ಯ ಬಿಜೆಪಿಯ ನಾಯಕತ್ವದ ವಿಚಾರದಲ್ಲಿ ಯಡಿಯೂರಪ್ಪ ಹಾಗೂ ಕೆ.ಎಸ್‌.ಈಶ್ವರಪ್ಪ ಮಧ್ಯೆ ಮುಸುಕಿನ ಗುದ್ದಾಟ ಇದ್ದೇ ಇದೆ. ಮೇಲ್ನೋಟಕ್ಕೆ ಎಲ್ಲವೂ ಸರಿ ಇರುವಂತೆ ಕಂಡರೂ ಬಿಎಸ್‌ವೈ ಹಾಗೂ ಈಶ್ವರಪ್ಪ ನಡುವಿನ ವೈಮನಸ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಇದು ಯಾವ ಹೊತ್ತಿನಲ್ಲಾದರೂ ಬಿಜೆಪಿಯಲ್ಲಿ ಬೆಂಕಿ ಹೊತ್ತಿಸಬಹುದು. ಹೀಗಾಗಿ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ತಾತ್ಕಾಲಿಕವಾಗಿಯಾದರೂ ಮರೆತು ಚುನಾವಣೆಗಾಗಿ ಒಟ್ಟಾಗಿ ಕೆಲಸ ಮಾಡುವಂತೆ ರಾಜ್ಯ ನಾಯಕರ ಮನಒಲಿಸಲು ಅಮಿತ್‌ ಶಾ ಮುಂದಾಗಿದ್ದಾರೆ.

ಯಡಿಯೂರಪ್ಪ ಹಾಗೂ ಈಶ್ವರಪ್ಪ ಭಿನ್ನಾಭಿಪ್ರಾಯಕ್ಕಿಂತ ಕರ್ನಾಟಕ ಬಿಜೆಪಿಯೊಳಗಿನ ಎರಡನೇ ಹಂತದ ನಾಯಕರ ನಿಯಂತ್ರಣ ಪಕ್ಷಕ್ಕೆ ಬಿಸಿತುಪ್ಪವಾಗಿದೆ. ಬಿಜೆಪಿಯ ರಾಜ್ಯ ನಾಯಕತ್ವದ ವಿಚಾರಕ್ಕೆ ಬಂದಾಗ ಯಡಿಯೂರಪ್ಪ ಪಕ್ಷದೊಳಗೆ ಹಿಡಿತ ಕಳೆದುಕೊಂಡಿದ್ದಾರೆ ಎಂಬ ಮಾತುಗಳೂ ಇವೆ. ಕೆಜೆಪಿಯಿಂದ ಬಿಜೆಪಿ ವಾಪಸ್‌ ಬಂದ ಬಳಿಕ ಯಡಿಯೂರಪ್ಪ ಮಾತನ್ನು ರಾಜ್ಯದ ಎರಡನೇ ತಲೆಮಾರಿನ ನಾಯಕರು ಅಷ್ಟಾಗಿ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂಬ ಮಾತುಗಳೂ ಇವೆ. ಹೀಗಾಗಿ ಸೀಟು ಹಂಚಿಕೆ ನಿರ್ಧಾರದಲ್ಲಿ ಯಡಿಯೂರಪ್ಪಗೆ ಹೆಚ್ಚಿನ ಅಧಿಕಾರ ನೀಡುವ ಮೂಲಕ ರಾಜ್ಯ ನಾಯಕತ್ವ ಬಲಪಡಿಸುವ ನಿಟ್ಟಿನಲ್ಲೂ ಬಿಜೆಪಿ ಹೈಕಮಾಂಡ್‌ ಯೋಚಿಸಿದೆ.

ಒಂದು ಕಾಲದಲ್ಲಿ ಕರ್ನಾಟಕ ಬಿಜೆಪಿಯ ಬೆಂಕಿ ಉಗುಳುವ ನಾಯಕರೆಂದು ಕರೆಸಿಕೊಂಡ ಅನಂತ್‌ಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ, ನಳಿನ್‌ ಕುಮಾರ್ ಕಟೀಲು ಮೊದಲಾದವರಿಗೆ ಲೋಕಸಭಾ ಚುನಾವಣೆಯವರೆಗೂ ಎಲ್ಲೆಂದರಲ್ಲಿ ಬೆಂಕಿ ಉಗುಳದಂತೆ ಎಚ್ಚರಿಸುವ ಸಾಧ್ಯತೆಗಳೂ ಇವೆ. ಮುಂಬರುವ ಚುನಾವಣೆಯ ದೃಷ್ಟಿಯಿಂದ ರಾಜ್ಯಮಟ್ಟದ ಬಿಜೆಪಿ ನಾಯಕರು ಬಹಿರಂಗ ಹೇಳಿಕೆಗಳನ್ನು ನೀಡದಂತೆ ಹಾಗೂ ಪಕ್ಷಕ್ಕೆ ಡ್ಯಾಮೇಜ್‌ ಆಗುವಂಥ ಚಟುವಟಿಕೆಗಳಿಂದ ದೂರ ಇರುವಂತೆ ಅಮಿತ್‌ ಶಾ ತಾಕೀತು ಮಾಡುವ ಸಾಧ್ಯತೆಯೂ ಇದೆ.

ಸೀಟು ಹಂಚಿಕೆ ಹಾಗೂ ರಾಜ್ಯ ಮಟ್ಟದ ಚುನಾವಣಾ ವಿಷಯಗಳ ಬಗ್ಗೆಚರ್ಚೆ ನಡೆಸಲು ಇನ್ನೂ ರಾಜ್ಯದಲ್ಲಿ ಪ್ರಾಥಮಿಕ ಮಾತುಕತೆಗಳೇ ನಡೆದಿಲ್ಲ. ಅಲ್ಲದೆ ರಾಜ್ಯದಲ್ಲಿ ಲೋಕಸಭಾಚುನಾವಣೆ ಕುರಿತಂತೆ ಇನ್ನೂ ಬಿಜೆಪಿಯ ತಳಮಟ್ಟದ ಸಭೆಗಳಾಗಿಲ್ಲ. ಹೀಗಾಗಿ ಭಾನುವಾರದ ಸಭೆಯಲ್ಲಿ ಚುನಾವಣಾ ವಿಚಾರ ಪ್ರಮುಖವಾಗಿ ಚರ್ಚೆಗೆ ಬರುವುದು ಅನುಮಾನ.
- ಎಂ.ಬಿ. ಭಾನುಪ್ರಕಾಶ್‌, ಬಿಜೆಪಿ ಮುಖಂಡ

ಕರ್ನಾಟಕ ವಿಧಾನಸಭೆಯಲ್ಲಿ ಬಹುಮತ ಪಡೆದರೂ ಸರಕಾರ ರಚಿಸಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಬಿಜೆಪಿ, ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಸೆಳೆಯುವ ‘ಸೂಕ್ತ ಮಾರ್ಗ’ದ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ. ಆದರೆ, ಲೋಕಸಭಾ ಚುನಾವಣೆ ಮುಗಿಯುವವರೆಗೆ ಈ ಪ್ರಯತ್ನವನ್ನು ತಾತ್ಕಾಲಿಕವಾಗಿ ಮುಂದೂಡುವ ಬಗ್ಗೆಯೂ ಮಾತುಕತೆಗಳು ನಡೆಯಲಿವೆ. ಸರಕಾರ ರಚನೆಗೆ ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸಿದ್ದೇ ಆದರೆ ಅದು ಹುಸಿಯಾಗಬಾರದು ಹಾಗೂ ಆಪರೇಷನ್‌ ಕಮಲ ಎಂಬ ಕಳಂಕ ಪಕ್ಷಕ್ಕೆ ಅಂಟಬಾರದು ಎಂಬ ಕಡೆಗೂ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಶಬರಿಮಲೆ ವಿಚಾರ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಈ ಬಾರಿಯ ಗಂಭೀರ ಚುನಾವಣಾ ವಿಷಯ. ಹೀಗಾಗಿ ಶಬರಿಮಲೆ ವಿಚಾರದಲ್ಲಿ ಕೇರಳದಲ್ಲಿ ಹೊತ್ತಿರುವ ಕಾವಿನ ಬಿಸಿಯನ್ನು ಕರ್ನಾಟಕದ ಚುನಾವಣಾ ಲಾಭವಾಗಿಯೂ ಬಳಸಿಕೊಳ್ಳುವ ಸಂಬಂಧ ಸಭೆಯಲ್ಲಿ ಚರ್ಚೆಗಳು ನಡೆಯಲಿವೆ. ಶಬರಿಮಲೆ ವಿಚಾರ ಹಾಗೂ 10% ಮೀಸಲಾತಿ ವಿಚಾರಗಳನ್ನು ಚುನಾವಣೆಗೆ ಬಳಸಿಕೊಳ್ಳುವ ಹಾಗೂ ಆ ಮೂಲಕ ಮತಬೇಟೆಗೆ ಮುಂದಾಗುವ ತಂತ್ರಗಳು ಸಭೆಯಲ್ಲಿ ಚರ್ಚೆಗೆ ಬರಲಿವೆ ಎನ್ನಲಾಗಿದೆ.

ಒಟ್ಟಿನಲ್ಲಿ ರಾಜ್ಯ ಬಿಜೆಪಿಯ ಪಾಲಿಗೆ ಈ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಲೋಕಸಭಾ ಚುನಾವಣೆ ಹಾಗೂ ಪಕ್ಷದ ರಾಜ್ಯ ನಾಯಕತ್ವದ ವಿಚಾರದಿಂದಲೂ ಪ್ರಮುಖವಾಗಿದೆ. ಲೋಕಸಭಾ ಚುನಾವಣೆಯ ಸಿದ್ಧತೆಗಳ ಜತೆಗೆ ಕರ್ನಾಟಕ ವಿಧಾನಸಭೆಯಲ್ಲಿ ಮತ್ತೆ ಅಧಿಕಾರ ಹಿಡಿಯುವ ದೃಷ್ಟಿಯಿಂದಲೂ ಕರ್ನಾಟಕ ಬಿಜೆಪಿ ಮುಖಂಡರೊಂದಿಗಿನ ಅಮಿತ್‌ ಶಾ ಸಭೆ ನಿರ್ಣಾಯಕ ಎನಿಸಿದೆ.