‘ಸಿಬಿಐ ಬಾಸ್’ಅಲೋಕ್‌ ವರ್ಮಾ ವಜಾಕ್ಕೆ ಕಾರಣವಾದ ಆ 10 ಆರೋಪಗಳು & ಅವುಗಳ ಸತ್ಯಾಸತ್ಯತೆ
COVER STORY

‘ಸಿಬಿಐ ಬಾಸ್’ಅಲೋಕ್‌ ವರ್ಮಾ ವಜಾಕ್ಕೆ ಕಾರಣವಾದ ಆ 10 ಆರೋಪಗಳು & ಅವುಗಳ ಸತ್ಯಾಸತ್ಯತೆ

ನೇಮಕಾತಿ ಸಮಿತಿ ಸುಮಾರು 10 ಆರೋಪಗಳ ಆಧಾರದ ಮೇಲೆ ವರ್ಮಾ ಅವರನ್ನು ವರ್ಗಾವಣೆ ಮಾಡಿದೆ. ಈ ಹತ್ತೂ ಆರೋಪಗಳಿಗೆ ಸಂಬಂಧಿಸಿದಂತೆ ಕೇಂದ್ರ ವಿಚಕ್ಷಣ ಸಮಿತಿ (ಸಿವಿಸಿ) ತನಿಖೆ ನಡೆಸಿದ್ದು, ಇದರಲ್ಲಿ ಕಂಡು ಬಂದ ಅಂಶಗಳು ಆಸಕ್ತಿಕರವಾಗಿವೆ...

ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಸಿಬಿಐ ನಿರ್ದೇಶಕನ ಕುರ್ಚಿಯಲ್ಲಿ ಆಸೀನರಾಗಿ 48 ಗಂಟೆ ಕಳೆಯುವುದಕ್ಕೂ ಮೊದಲೇ ಅಲೋಕ್‌ ವರ್ಮಾ ಅವರನ್ನು ಪ್ರಧಾನಿ ನೇತೃತ್ವದ ಉನ್ನತಾಧಿಕಾರ ಸಮಿತಿ ವರ್ಗಾವಣೆ ಮಾಡಿದೆ.

ಹೀಗೊಂದು ತುರ್ತು ವರ್ಗಾವಣೆ ಸಹಜವಾಗಿಯೇ ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ರಫೇಲ್‌ ಡೀಲ್‌ನ ತನಿಖೆಯಿಂದ ತಪ್ಪಿಸಿಕೊಳ್ಳಲು ಮೋದಿ ಸರಕಾರ ಈ ವರ್ಗಾವಣೆ ಮಾಡಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ಸ್ವತಃ ಬಿಜೆಪಿ ಪಾಳಯದಲ್ಲಿರುವ ಸುಬ್ರಮಣಿಯನ್‌ ಸ್ವಾಮಿ, ‘ಇದೊಂದು ಆಘಾತಕಾರಿ ತೀರ್ಮಾನ’ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಪ್ರತಿನಿಧಿ ನ್ಯಾ. ಎ. ಕೆ. ಸಿಕ್ರಿ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸದಸ್ಯರಾಗಿರುವ ನೇಮಕಾತಿ ಸಮಿತಿ ಸುಮಾರು 10 ಆರೋಪಗಳ ಆಧಾರದ ಮೇಲೆ ವರ್ಮಾ ಅವರನ್ನು ವರ್ಗಾವಣೆ ಮಾಡಿದೆ. ಈ ಹತ್ತೂ ಆರೋಪಗಳಿಗೆ ಸಂಬಂಧಿಸಿದಂತೆ ಕೇಂದ್ರ ವಿಚಕ್ಷಣ ಸಮಿತಿ (ಸಿವಿಸಿ) ತನಿಖೆ ನಡೆಸಿದ್ದು, ಇದರಲ್ಲಿ ಕಂಡು ಬಂದ ಅಂಶಗಳು ಆಸಕ್ತಿಕರವಾಗಿವೆ; ಮತ್ತು ಪ್ರತಿ ಆರೋಪದ ತಿರುಳನ್ನು ‘ದಿ ಟೆಲಿಗ್ರಾಫ್‌’ ಪಟ್ಟಿ ಮಾಡಿದೆ. ವಿವರ ಕೆಳಗೆ ಇದೆ.

ಆರೋಪ 1: ತನಿಖೆಯ ಮೇಲೆ ಪ್ರಭಾವ ಬೀರಲು ಲಂಚ ಸ್ವೀಕರಿಸಿದ್ದಾರೆ ಎನ್ನುವ ಆರೋಪ.

ಸಿವಿಸಿಗೆ ಸಿಕ್ಕಿರುವುದು: ನೇರವಾದ ಸಾಕ್ಷ್ಯಗಳು ಸಿಕ್ಕಿಲ್ಲ. ವರ್ಮಾ ನಡವಳಿಕೆಯಲ್ಲಿ ಜಾಗರೂಕರಾಗಿದ್ದರು/ಅನುಮಾನಗಳಿವೆ. ಸಾಂದರ್ಭಿಕ ಸಾಕ್ಷ್ಯಗಳನ್ನು ಪರೀಕ್ಷಿಸಲು ಇನ್ನಷ್ಟು ತನಿಖೆಯ ಅಗತ್ಯವಿದೆ.

ಆರೋಪ 2(ಎ): ಲಾಲು ಪ್ರಸಾದ್‌ ಯಾದವ್‌ಗೆ ಸಂಬಂಧಿಸಿದ ಐಆರ್‌ಸಿಟಿಸಿ ಪ್ರಕರಣದಲ್ಲಿ ಶಂಕಿತ ಆರೋಪಿಯೊಬ್ಬರ ಹೆಸರು ಬಿಟ್ಟಿರುವುದು.

ಸಿವಿಸಿ: ಆರೋಪ ದೃಢೀಕರಿಸಲ್ಪಟ್ಟಿದೆ ಮತ್ತು ಇದು ಶಿಸ್ತಿನ ಮತ್ತು ಇತರ ಕ್ರಮಗಳನ್ನು ಎದುರಿಸಬೇಕಾದ ಗಂಭೀರ ತಪ್ಪು ನಡವಳಿಕೆಯಾಗಿದೆ.

ಆರೋಪ 2(ಬಿ): ಪಾಟ್ನಾದಲ್ಲಿ ನಡೆಯಲಿದ್ದ ರೈಡ್‌ನ್ನು ತಪ್ಪಿಸಲು ಯತ್ನಿಸಿದರು.

ಸಿವಿಸಿ: ಆರೋಪ ಸಾಬೀತಾಗಿಲ್ಲ.

ಆರೋಪ 3: ಸಿಬಿಐ ಅಧಿಕಾರಿಯ ಸಹೋದರೊಬ್ಬರಿಗೆ ಸಂಬಂಧಿಸಿದ ಬ್ಯಾಂಕ್‌ ಹಗರಣದ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ಅನಗತ್ಯ ವಿಳಂಬ.

ಸಿವಿಸಿ: ಆರೋಪ ಸರಿಯಿಲ್ಲ ಎಂದು ತಿಳಿದು ಬಂದಿದೆ.

ಆರೋಪ 4: ಸಂಬಂಧಿಯೊಬ್ಬರಿಗೆ ಸಂಬಂಧಿಸಿದ ಬ್ಯಾಂಕ್‌ ಹಗರಣದ ತನಿಖೆಯ ಮೇಲೆ ನಿಗಾ ಇಡುವಂತೆ ಸಿಬಿಐ ಅಧಿಕಾರಿಯೊಬ್ಬರನ್ನು ನೇಮಿಸಿದ್ದರು.

ಸಿವಿಸಿ: ಆರೋಪ ಸಾಬೀತಾಗಿಲ್ಲ.

ಆರೋಪ 5: ಇಬ್ಬರು ಉದ್ಯಮಿಗಳಿಗೆ ಸಂಬಂಧಿಸಿದ ಗುಪ್ತಚರ ಮಾಹಿತಿಗಳನ್ನು ಇತರ ಏಜೆನ್ಸಿಗಳ ಜತೆ ಹಂಚಿಕೊಳ್ಳದೇ ಇರುವುದು.

ಸಿವಿಸಿ: ಆರೋಪ ಸಾಬೀತಾಗಿಲ್ಲ.

ಆರೋಪ 6: ಹರ್ಯಾಣದ ಭೂಮಿ ಪರಭಾರೆ ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಲಂಚ ಸ್ವೀಕರಿಸಿದ್ದಾರೆ ಎನ್ನುವುದು.

ಸಿವಿಸಿ: ಸಮಯದ ಕಾರಣದಿಂದ ಕಡತದ ಮೇಲೆ ಕಣ್ಣಾಡಿಸುವುದನ್ನು ಬಿಟ್ಟು, ಆರೋಪಗಳ ಬಗ್ಗೆ ಗಮನ ಹರಿಸಲು ಸಾಧ್ಯವಾಗಿಲ್ಲ. ನಿರಂತರ ತನಿಖೆಯ ಅಗತ್ಯವಿದೆ.

ಆರೋಪ 7: ದೆಹಲಿ ವಿಮಾನ ನಿಲ್ದಾಣದಲ್ಲಿ ಐಜಿಐ ಆಗಿದ್ದಾಗ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಫಲ.

ಸಿವಿಸಿ: ಆರೋಪ ಭಾಗಶಃ ಸಾಬೀತಾಗಿದೆ. ಬೇರೆ ಬ್ರಾಂಚ್‌ ಸಿಬಿಐನಿಂದ ತನಿಖೆ ನಡೆಸುವಂತೆ ಶಿಫಾರಸ್ಸು ಮಾಡಲಾಗಿದೆ.

ಆರೋಪ 8: ಗೋ ಕಳ್ಳಸಾಗಣೆದಾರರಿಗೆ ಸಹಾಯ ಮಾಡಿದ್ದಾರೆ.

ಸಿವಿಸಿ: ಆರೋಪ ಸಾಬೀತಾಗಿಲ್ಲ.

ಆರೋಪ 9: ಆಂತರಿಕ ತನಿಖೆಯಲ್ಲಿ ಸಮಗ್ರತೆ ಮತ್ತು ಪ್ರತಿಕೂಲ ವರ್ತನೆಗಳ ಬಗ್ಗೆ ಗಂಭೀರ ಆರೋಪಗಳು ಕೇಳಿ ಬಂದಿದ್ದ ಇಬ್ಬರು ಅಧಿಕಾರಿಗಳನ್ನು ಸಂಸ್ಥೆಯೊಳಗೆ ಸೇರಿಸಿಕೊಳ್ಳಲು ಯತ್ನಿಸಿದ್ದು.

ಸಿವಿಸಿ: ಆರೋಪ ಸಾಬೀತಾಗಿದೆ.

ಆರೋಪ 10: ಜಾರಿ ನಿರ್ದೇಶನಾಲಯದ ಅಧಿಕಾರಿಯ ವಿರುದ್ಧದ ಸಿಬಿಐ ಪ್ರಕರಣದಲ್ಲಿ ಅನಗತ್ಯ ಮಧ್ಯ ಪ್ರವೇಶ.

ಸಿವಿಸಿ: ಭಾಗಶಃ ಆರೋಪ ಸಾಬೀತಾಗಿದೆ. ಆದರೆ ಇನ್ನೂ ಹೆಚ್ಚಿನ ತನಿಖೆ ಅಗತ್ಯವಿದೆ.

ಹೀಗೆ ಕೇಳಿ ಬಂದ ಒಟ್ಟು 11 ಆರೋಪಗಳಲ್ಲಿ 6 ಸಾಬೀತಾಗಿಲ್ಲ ಅಥವಾ ಹೆಚ್ಚಿನ ತನಿಖೆಯ ಅಗತ್ಯವಿದೆ ಎಂಬ ತೀರ್ಮಾನಕ್ಕೆ ಬರಲಾಗಿದೆ. ಮತ್ತು ಒಂದು ಪ್ರಕರಣವೇ ತಪ್ಪು ಎಂದು ತಿಳಿದು ಬಂದಿದೆ. ಇನ್ನುಳಿದ ನಾಲ್ಕು ಪ್ರಕರಣಗಳಲ್ಲಿ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಮೊದಲ ಹಂತದ ಆರೋಪ ಸಾಬೀತಾಗಿದೆ.

ಈ ಹಿನ್ನೆಲೆಯಲ್ಲಿ ನೇಮಕಾತಿ ಸಮಿತಿ ಸಭೆಯಲ್ಲಿ ಖರ್ಗೆ ವಜಾ ತೀರ್ಮಾನವನ್ನು ಆಕ್ಷೇಪಿಸಿದ್ದರು. ‘ಯಾವುದೇ ಪ್ರಕರಣದಲ್ಲಿ ಆರ್ಥಿಕ ಲಾಭ ಪಡೆದುಕೊಂಡ ದಾಖಲೆಗಳಿಲ್ಲ. ಉಚ್ಛಾಟನೆ ಮಾಡುವಂಥ ಸಾಕ್ಷಗಳಿಲ್ಲ. ಎಲ್ಲದರಲ್ಲೂ ಸಾಂದರ್ಭಿಕ ಸಾಕ್ಷ್ಯಗಳ ಮೇಲೆ ತೀರ್ಮಾನಕ್ಕೆ ಬರಲಾಗಿದೆ,’ ಎಂಬುದನ್ನು ಸಭೆಯ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಅವರು, ‘ಆರೋಪಗಳು ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಮೇಲೆ ವ್ಯಕ್ತಿಯೊಬ್ಬರು ದೋಷಿ ಎಂದು ತೀರ್ಮಾನಿಸಲು ಸಾಧ್ಯವಿಲ್ಲ’ ಎಂಬ ಸುಪ್ರೀಂ ಕೋರ್ಟ್‌ ತೀರ್ಪನ್ನೂ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದಾರೆ.

ಜತೆಗೆ ವರ್ಮಾ ಅವರ ಅಭಿಪ್ರಾಯ ಕೇಳದ ಸಮಿತಿ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂಬುದಾಗಿಯೂ ವಾದಿಸಿದ್ದಾರೆ. ಹೀಗಿದ್ದೂ ನ್ಯಾ. ಸಿಕ್ರಿ ಮತ್ತು ಪ್ರಧಾನಿ ತೀರ್ಮಾನದ ಮೇಲೆ ವರ್ಮಾ ಅವರನ್ನು ವರ್ಗಾವಣೆ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ನಡೆದಿರುವ ಘಟನೆಗಳ ಬಗ್ಗೆ ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿರುವ ಖರ್ಗೆ, ‘ವರ್ಮಾ ಅವರನ್ನು ವಜಾ ಮಾಡಲು ಪೂರ್ವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ, ಇದಕ್ಕೆ ಬೇಕಾದ ಕಾರಣಗಳು ಮತ್ತು ಪ್ರಕ್ರಿಯೆಗಳನ್ನು ನಂತರ ಸೃಷ್ಟಿ ಮಾಡಲಾಗಿದೆ’ ಎಂದಿದ್ದಾರೆ. ಈ ಕಾರಣಕ್ಕೆ ನೇಮಕಾತಿ ಆಯೋಗ ಸ್ವತಂತ್ರ ತನಿಖೆಗೆ ಆದೇಶ ನೀಡಬೇಕು ಎಂದವರು ಆಗ್ರಹಿಸಿದ್ದಾರೆ. ಜತೆಗೆ ಅಕ್ಟೋಬರ್‌ 23ರ ಮಧ್ಯ ರಾತ್ರಿ ಸರಕಾರ ವರ್ಮಾ ಅವರನ್ನು ವಜಾಗೊಳಿಸಿರುವ ಕ್ರಮದ ಬಗ್ಗೆಯೂ ಅವರು ತನಿಖೆಗೆ ಕೋರಿದ್ದಾರೆ.

ಆದರೆ ಬಿಜೆಪಿ ಮಾತ್ರ ಖರ್ಗೆ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿದ್ದು, “ಖರ್ಗೆ ಅಲೋಕ್‌ ವರ್ಮಾ ಅವರನ್ನು ನೇಮಕ ಮಾಡುವಾಗಲೂ ವಿರೋಧಿಸಿದ್ದರು. ಇದೀಗ ವಜಾ ಮಾಡುವಾಗಲು ವಿರೋಧಿಸುತ್ತಿದ್ದಾರೆ,” ಎಂದು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಟ್ಟೀಟ್‌ ಮಾಡಿದ್ದಾರೆ.