samachara
www.samachara.com
‘ಎಡಪಕ್ಷಗಳ ಜಿಜ್ಞಾಸೆ’: ಮುಷ್ಕರಕ್ಕೆ ಬರುವವರು ಚುನಾವಣೆ ಬಂದಾಗ ಯಾಕೆ ಮತ ಹಾಕಲ್ಲ?
COVER STORY

‘ಎಡಪಕ್ಷಗಳ ಜಿಜ್ಞಾಸೆ’: ಮುಷ್ಕರಕ್ಕೆ ಬರುವವರು ಚುನಾವಣೆ ಬಂದಾಗ ಯಾಕೆ ಮತ ಹಾಕಲ್ಲ?

ಕಮ್ಯುನಿಸ್ಟ್ ಪಕ್ಷಗಳು ಕರೆ ನೀಡುವ ಮುಷ್ಕರಕ್ಕೆ ಬರುವ ಜನ ಚುನಾವಣೆ ಬಂದಾಗ ಯಾಕೆ ಇತರೆ ರಾಜಕೀಯ ಪಕ್ಷಗಳನ್ನು ಪರ್ಯಾಯವಾಗಿ ಆತುಕೊಳ್ಳುತ್ತಾರೆ?

ನಿನ್ನೆ ಮೊನ್ನೆ ನಡೆದ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರ, 2018ರ ಮಾರ್ಚ್‌ 11 ಹಾಗೂ ನವೆಂಬರ್‌ 22ರಂದು ಮುಂಬೈನಲ್ಲಿ ನಡೆದ ರೈತರು ಹಾಗೂ ಶ್ರಮಿಕರ ಬೃಹತ್‌ ಪ್ರತಿಭಟನೆ, ನವೆಂಬರ್‌ 30ರಂದು ದೆಹಲಿಯಲ್ಲಿ ನಡೆದ ಕೃಷಿ ಕಾರ್ಮಿಕರ ಬೃಹತ್‌ ಪ್ರತಿಭಟನೆಗಳು, ಕಳೆದ ವರ್ಷ ಬೆಂಗಳೂರಿನಲ್ಲಿ ಆಹೋರಾತ್ರಿ ನಡೆದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ... ಹೀಗೆ ಸಾಲು ಸಾಲು ಎಡ ಪಕ್ಷ ಬೆಂಬಲಿತ ಕಾರ್ಮಿಕ ಹೋರಾಟಗಳು ‘ಕೆಂಬಾವುಟ’ದ ಪ್ರಭಾವವನ್ನು ಸಾಕ್ಷಿ ಸಮೇತ ಮುಂದಿಡುತ್ತಲೇ ಬಂದಿವೆ.

ಇವತ್ತಿಗೂ, ಅವತ್ತಿಗೂ ಭಾರತದಲ್ಲಿ ಕಾರ್ಮಿಕ ವರ್ಗವನ್ನು ದೊಡ್ಡ ಸಂಖ್ಯೆಯಲ್ಲಿ ಸಂಘಟಿಸುವ, ಬೀದಿಗಿಳಿಸುವ ತಾಕತ್ತು ಇರುವುದು- ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪುಕೊಂಡ- ಎಡ ಪಕ್ಷಗಳಿಗೆ ಮಾತ್ರ ಎಂಬುದನ್ನು ವಿಶ್ವ ಕಾರ್ಮಿಕ ಒಕ್ಕೂಟ ಕೂಡ ಹೇಳುತ್ತದೆ. ಆದರೆ; ಇಷ್ಟು ದೊಡ್ಡ ಸಂಖ್ಯೆಯ ಜನರನ್ನು ಕೆಂಬಾವುಟ ಹಿಡಿಸಿ, ಬೀದಿಗೆ ಕರೆತರುವ ಎಡಪಕ್ಷಗಳು ಯಾಕೆ ಚುನಾವಣೆ ರಾಜಕಾರಣದಲ್ಲಿ ಮುಗ್ಗರಿಸುತ್ತವೆ? ಮುಷ್ಕರಕ್ಕೆ ಬರುವ ಜನ ಚುನಾವಣೆ ಬಂದಾಗ ಯಾಕೆ ಇತರೆ ರಾಜಕೀಯ ಪಕ್ಷಗಳನ್ನು ಪರ್ಯಾಯವಾಗಿ ಆತುಕೊಳ್ಳುತ್ತಾರೆ?

ಇಂತಹದೊಂದು ಐತಿಹಾಸಿಕ ಜಿಜ್ಞಾಸೆಗೆ ಸಿದ್ಧ ಮಾದರಿಯ ಉತ್ತರ ಸದ್ಯ ಯಾರ ಬಳಿಯಲ್ಲೂ ಲಭ್ಯ ಇಲ್ಲ. ವಿಮರ್ಶೆ- ಆತ್ಮ ವಿಮರ್ಶೆ ಹೆಸರಿನಲ್ಲಿ ತಮ್ಮ ಕಾರ್ಯಚರಣೆಯನ್ನು ನಾನಾ ಹಂತಗಳಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವ ಎಡ ಪಕ್ಷಗಳಿಗೆ, ಇವತ್ತಿಗೂ ಭಾರತದ ಚುನಾವಣಾ ರಾಜಕಾರಣವನ್ನು ಒಗ್ಗಿಸಿಕೊಳ್ಳುವಲ್ಲಿ ತಾವು ಸೋಲುತ್ತಿರುವುದು ಎಲ್ಲಿ ಎಂಬುದು ಗೊತ್ತಾದಂತೆ ಕಾಣಿಸುತ್ತಿಲ್ಲ. ಪರಿಣಾಮ ಹೋರಾಟ, ಮುಷ್ಕರ, ಹರತಾಳಗಳ ವಿಚಾರದಲ್ಲಿ ಸರಕಾರಗಳನ್ನು ಮಣಿಸುವ ಇವು, ಚುನಾವಣೆ ಬಂದಾಗ ಜನರಿಗೆ ಪರ್ಯಾಯ ಅಂತ ಅನ್ನಿಸದೇ ಹೋಗಿವೆ. ಕಾರಣಗಳು ಏನಿರಬಹುದು?

ಯಾವುದೇ ವ್ಯವಸ್ಥೆ ಅಥವಾ ಸಿದ್ಧಾಂತ ಯಾರನ್ನಾದರೂ ಹಿಡಿದಿಟ್ಟುಕೊಂಡಿದೆ, ಪ್ರಭಾವಿಸುತ್ತಿದೆ ಎಂದರೆ ಅದಕ್ಕೆ ನಾನಾ ಕಾರಣಗಳು ಇರುತ್ತವೆ. ಮುಂಜಾನೆಯಿಂದ ಆರಂಭವಾಗುವ ಮನುಷ್ಯರ ದಿನಚರಿ ರಾತ್ರಿ ಮಲಗುವವರೆಗೂ ತನ್ನದೇ ಆದ ಆಚರಣೆಗಳ ಮೂಲಕ ಅಭಿವ್ಯಕ್ತಿಗೊಳ್ಳುತ್ತಿರುತ್ತದೆ. ಉದಾಹರಣೆಗೆ, ಬಹುಸಂಖ್ಯಾತ ಹಿಂದೂಗಳು ತುಳಸಿ ಪೂಜೆಯಿಂದ ಆರಂಭಿಸಿ, ದೇವರು- ದಿಂಡರು, ದೇವಸ್ಥಾನ, ಗುಡಿ- ಗುಂಡಾರಗಳ ಸುತ್ತ ಒಂದಷ್ಟು ಸಮಯವನ್ನು ಕಳೆಯುತ್ತಾರೆ. ಇದೇ ಮಾದರಿಯಲ್ಲಿ ಇತರ ಧರ್ಮಗಳ ಚೌಕಟ್ಟಿನಲ್ಲಿ ಇರುವವರೂ ತಮ್ಮ ದಿನಚರಿಯನ್ನು ರೂಢಿಸಿಕೊಂಡಿದ್ದಾರೆ. ಆದರೆ, ‘ಧರ್ಮವನ್ನು ಅಫೀಮು’ ಎಂದು ಘೋಷಿಸಿದ ಕಮ್ಯುನಿಸ್ಟ್ ಸಿದ್ದಾಂತ ಜನರ ಈ ರೂಢಿಗತ ಅಗತ್ಯಗಳಿಗೆ ಪರ್ಯಾಯವನ್ನು ಅತ್ಯಂತ ತೆಳುವಾದ ನೆಲೆಯಲ್ಲಿ ಹುಡುಕುತ್ತಿದೆ.

ಭಾರತದಲ್ಲಿ ಧಾರ್ಮಿಕ ಆಚರಣೆಗಳ ಕುರಿತು ಒಳನೋಟಗಳನ್ನು ನೀಡುವ ಅಂಕಿ ಅಂಶಗಳಿವು. 
ಭಾರತದಲ್ಲಿ ಧಾರ್ಮಿಕ ಆಚರಣೆಗಳ ಕುರಿತು ಒಳನೋಟಗಳನ್ನು ನೀಡುವ ಅಂಕಿ ಅಂಶಗಳಿವು. 
/ದಿ ಹಿಂದೂ. 

“ಕಮ್ಯುನಿಸ್ಟ್‌ ಪಕ್ಷಗಳು ಸಮಾಜವಾದಿ ಸಿದ್ಧಾಂತದ ಜತೆಗೆ ಆಯಾ ಭಾಗದ ಸಾಂಸ್ಕೃತಿಕ ರಾಜಕೀಯದ ನೆಲೆಗಟ್ಟಿನಲ್ಲಿ ಚಳವಳಿ ರೂಪಿಸಬೇಕಿತ್ತು. ಕೇರಳದಲ್ಲಿ ನಾರಾಯಣ ಗುರು ರೂಪಿಸಿದ ಚಳವಳಿಯ ಸಿದ್ಧಾಂತಗಳನ್ನು ರೂಪಿಸಿಕೊಂಡ ಕಮ್ಯುನಿಸ್ಟ್‌ ಪಕ್ಷ ಅಲ್ಲಿ ಚುನಾವಣಾ ರಾಜಕೀಯದಲ್ಲೂ ಸಫಲವಾಗಲು ಸಾಧ್ಯವಾಗಿದೆ. ಕರ್ನಾಟಕದಲ್ಲಿ ಶ್ರಮಿಕ ಕೇಂದ್ರಿತವಾದ ವಚನ ಚಳವಳಿ, ಮಂಟೇಸ್ವಾಮಿ ಪರಂಪರೆಗಳ ಚಿಂತನೆಗಳ ಜತೆಗೆ ಕಮ್ಯುನಿಸ್ಟ್‌ ಚಳವಳಿ ಬೆಳೆಯಬೇಕಿತ್ತು, ಅದು ಸಾಧ್ಯವಾಗಲಿಲ್ಲ,” ಸಿಪಿಐ (ಎಂ) ಕರ್ನಾಟಕದ ಪ್ರಮುಖ ನಾಯಕಿ ಕೆ. ನೀಲಾ.

ಜನ ಧರ್ಮವನ್ನು ಯಾಕೆ ಆತುಕೊಂಡಿದ್ದಾರೆ? ಯಾಕೆ ಅತೀತ ಶಕ್ತಿಯೊಂದನ್ನು ನಂಬುತ್ತಾರೆ? ಸಾಮಾನ್ಯ ಜನರ ಸಂಕಷ್ಟಗಳಿಗೆ ಆರ್ಥಿಕ ಕಾರಣಗಳೇ ಮೂಲ ಅಂತ ಅನ್ನಿಸಿದರೂ, ಮನುಷ್ಯರ ಇಂತಹ ರೂಢಿಗತ ಆಚರಣೆಗಳ ನೆಲೆ ಇರುವುದು ಭಾವನೆಗಳ ಮೇಲೆ. ಇದಕ್ಕೆ ಕೇವಲ ವೈಜ್ಞಾನಿಕ- ವೈಚಾರಿಕ ‘ಚುಚ್ಚುಮದ್ದು’ ಸಾಕಾ? ಸಾಕಾಗುತ್ತಿಲ್ಲ ಎಂಬುದನ್ನು ಪ್ರತಿ ಚುನಾವಣೆ ಫಲಿತಾಂಶ ಹೇಳುತ್ತಲೇ ಇದೆ.

“ಜನ ಹೋರಾಟಗಳಿಗೆ ದೇಹಗಳನ್ನು ಹೊತ್ತು ಬರುತ್ತಾರೆ. ಆತ್ಮಗಳನ್ನು ಮನೆಯಲ್ಲೇ ಬಿಟ್ಟು ಬಂದಿರುತ್ತಾರೆ. ಅವರ ಅಂತರಂಗದ ಭಾವನೆಗಳನ್ನು ತಟ್ಟುವಲ್ಲಿ, ಅರ್ಥ ಮಾಡಿಕೊಳ್ಳುವಲ್ಲಿ ವೈಚಾರಿಕ ನೆಲೆಯ ಸಂಘಟನೆಗಳು, ಪಕ್ಷಗಳು ವಿಫಲವಾಗಿವೆ,’’ ಎಂದು ವಿವರಿಸುತ್ತಾರೆ ನಿಜಗುಣ ಪ್ರಭು.

ಬಸವಾದಿ ಪರಂಪರೆಯನ್ನು ಪ್ರತಿಪಾದಿಸುವ ನಿಜಗುಣಾನಂದ ಸ್ವಾಮಿ, ವೈಚಾರಿಕ ನೆಲೆಯಲ್ಲಿ ವಿಚಾರಗಳನ್ನು ಹರಡುವ ಕೆಲಸ ಮಾಡುತ್ತಿದ್ದಾರೆ. “ಸಮತಾವಾದ ಕಾಯಕದ ಬಗ್ಗೆ ಮಾತ್ರವೇ ಮಾತನಾಡುತ್ತದೆ. ಆದರೆ ಕಾಯಕಕ್ಕೂ ಒಂದು ದೈವತ್ವದ ಅಗತ್ಯ ಇದೆ ಎಂಬುದು ನನ್ನ ನಂಬಿಕೆ. ಇದನ್ನೇ ಬಸವತತ್ವ ಪ್ರತಿಪಾದಿಸುತ್ತದೆ. ಕಾಯಕ ಎಂದರೇನೇ ಮೇಲು-ಕೀಳು. ಯಾವಾಗ ಪಾರದರ್ಶಕತೆ, ಮಾನವೀಯತೆ ಎಂಬ ದೈವತ್ವಗಳನ್ನು ತುಂಬಲು ನಮ್ಮಿಂದ ಸಾಧ್ಯವಾಗುತ್ತದೆಯೋ, ಆಗ ಮಾತ್ರ ನಿಜವಾದ ಸಮಾನತೆ ತರಲು ಸಾಧ್ಯವಾಗುತ್ತದೆ,’’ ಎನ್ನುತ್ತಾರೆ ನಿಜಗುಣಾನಂದ ಸ್ವಾಮಿ.

ಕಮ್ಯುನಿಸಂ ಎಂಬುದು ಡಿಗ್ನಿಟಿ ಆಫ್ ಲೇಬರ್ ಆದರೆ ಬಸವಯಿಸಂ ಡಿವಿನಿಟಿ ಆಫ್ ಲೇಬರ್. 
-ನಿಜಗುಣಾನಂದ ಸ್ವಾಮಿಜಿ

ಇಂತಹ ತಾತ್ವಿಕ ವಿಚಾರಗಳ ಹಿನ್ನೆಲೆಯಲ್ಲಿ ಕರ್ನಾಟಕದ ರಾಜಕೀಯದ ಅಂಕಿ ಅಂಶಗಳನ್ನೇ ಗಮನಿಸುವುದಾದರೆ, 1983ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 3 ಮೂರು ಸ್ಥಾನಗಳಲ್ಲಿ ಗೆದ್ದಿದ್ದ ಸಿಪಿಐ (ಎಂ) ಮುಂದೆ ಚುನಾವಣಾ ರಾಜಕೀಯದಲ್ಲಿ ತನ್ನ ಹಿಡಿತ ಕಳೆದುಕೊಳ್ಳುತ್ತಾ ಬಂತು. 2018ರ ವಿಧಾನಸಭಾ ಚುನಾವಣೆಯಲ್ಲಿ 19 ಕ್ಷೇತ್ರಗಳಲ್ಲಿ ಪ್ರಮುಖ ಎಡಪಕ್ಷ ಸ್ಪರ್ಧಿಸಿತ್ತು. ಹೈದರಾಬಾದ್ ಕರ್ನಾಟಕ, ದಕ್ಷಿಣ ಕನ್ನಡ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಗಂಭೀರವಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಸಿಪಿಐ (ಎಂ) ಪಕ್ಷ ಒಂದು ಕ್ಷೇತ್ರದಲ್ಲೂ ಗೆಲ್ಲಲಾಗಲಿಲ್ಲ. ಬಾಗೇಪಲ್ಲಿಯಲ್ಲಿ ಜಿ. ವಿ. ಶ್ರೀರಾಮರೆಡ್ಡಿ ಬಿಟ್ಟರೆ (51,697) ಉಳಿದ ಯಾವ ಸಿಪಿಐ (ಎಂ) ಅಭ್ಯರ್ಥಿಗಳೂ ಮೂರೂವರೆ ಸಾವಿರಕ್ಕಿಂತ ಹೆಚ್ಚಿನ ಮತಗಳನ್ನು ಪಡೆದುಕೊಳ್ಳಲಿಲ್ಲ.

ಸೋಲುಗಳ ಹಿಂದಿರುವ ಕಾರಣಗಳು ಸಾಮಾನ್ಯವಾಗಿ ಒಂದೇ ಆದರೂ, ಎಡಪಕ್ಷಗಳು ಗೆದ್ದ ಕೆಲವು ಪ್ರಕರಣಗಳನ್ನು ಹುಡುಕಿಕೊಂಡು ಹೋದರೆ ಬೇರೆಯದೇ ಒಳನೋಟಗಳು ಸಿಗುತ್ತವೆ. “ಬಾಬಾ ಬುಡನ್‌ಗಿರಿ ವಿಚಾರ ವಿವಾದವಾಗಿದ್ದ ದಿನಗಳು ಅವು. ನಾವು ಗೆಲ್ಲುತ್ತೀವಿ ಎಂಬ ಸಣ್ಣ ಕುರುಹು ಇರಲಿಲ್ಲ. ಇವತ್ತು ನಿಂತು ನೋಡಿದರೆ ಸಾತಿ ಸುಂದರೇಶ್ ಗೆಲುವಿನ ಹಿಂದೆ ನಾವು ಬಾಬಾ ಬುಡನ್‌ಗಿರಿ ವಿಚಾರದಲ್ಲಿ ತೆಗೆದುಕೊಂಡು ‘ಸಾಫ್ಟ್‌’ ಆದ ನಿಲುವು ಕಾರಣ ಅಂತ ಅನ್ನಿಸುತ್ತದೆ. ಇತರೆ ಕಮ್ಯುನಿಸ್ಟರ ಹಾಗೆ ನಾವು ದತ್ತಪೀಠವನ್ನು ವಿರೋಧಿಸಲು ಹೋಗಲಿಲ್ಲ, ಬದಲಿಗೆ ಭಾವೈಕ್ಯ ದತ್ತಪೀಠದ ಹೆಸರಿನಲ್ಲಿ ಹೊಸ ಆಚರಣೆಯನ್ನು ಹುಟ್ಟುಹಾಕಿದ್ದೆವು. ಭೂ ಹೋರಾಟವನ್ನೂ ಈ ಭಾಗದಲ್ಲಿ ಸಂಘಟಸಿದ್ದೆವು. ಇವೆಲ್ಲವೂ ಜಿಲ್ಲಾ ಪಂಚಾಯ್ತಿಯಲ್ಲಿ ಗೆಲ್ಲವು ಕಾರಣವಾಯಿತು,’’ ಎನ್ನುತ್ತಾರೆ ಸಿಪಿಐ ಪಕ್ಷದ ಜ್ಯೋತಿ ಅನಂತ ಸುಬ್ಬರಾವ್‌. ಇವರ ಪತಿ, ಕಮ್ಯುನಿಸ್ಟ್ ನಾಯಕ ಸಾತಿ ಸುಂದರೇಶ್ ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿಗೆ ಆಯ್ಕೆಯಾದ ಬಗೆಯನ್ನು ಇವರ ವಿವರಿಸುವುದು ಹೀಗೆ.

ಅಂದರೆ, ಹೋರಾಟ- ಹರತಾಳ ಏನೇ ಇರಲಿ, ಚುನಾವಣೆ ವಿಚಾರ ಬಂದಾಗ ಜನ ಭಾವನಾತ್ಮಕ ನೆಲೆಯಲ್ಲಿ ಮತ ಚಲಾಯಿಸುತ್ತಾರೆ ಮತ್ತು ಭಾರತದಲ್ಲಿ ಇಂತಹದೊಂದು ಭೂಮಿಕೆ ಇದೆ ಎಂಬುದನ್ನು ಕಮ್ಯುನಿಸ್ಟ್ ಪಕ್ಷಗಳ ಅನುಭದಲ್ಲೇ ಸಿಗುವ ಇಂತಹ ಘಟನೆಗಳು ಸಾರಿ ಹೇಳುತ್ತವೆ.

“ಆರ್ಥಿಕ ಹೋರಾಟಗಳಿಗೆ ಕಮ್ಯುನಿಸ್ಟ್ ಸಂಘಟನೆಗಳ ಜತೆಗೆ ದೊಡ್ಡ ಸಂಖ್ಯೆಯಲ್ಲಿ ಸೇರುವ ಜನಸಂಖ್ಯೆ ಮತಗಳಾಗಿ ಪರಿವರ್ತನೆಯಾಗದಿರಲು ಆಂತರಿಕ ಹಾಗೂ ಬಾಹ್ಯ ಕಾರಣಗಳಿವೆ. ಈಗಿನ ಚುನಾವಣಾ ರಾಜಕೀಯದಲ್ಲಿ ಕಾರ್ಪೊರೇಟ್‌ ಹಣ ಹಾಗೂ ಜಾತಿ ದೊಡ್ಡಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಆದರೆ, ಈ ರೀತಿಯ ಚುನಾವಣಾ ರಾಜಕೀಯ ಮಾಡಲು ಕಮ್ಯುನಿಸ್ಟ್ ಪಕ್ಷಗಳಿಗೆ ಸಾಧ್ಯವಿಲ್ಲ. ಚುನಾವಣಾ ಪ್ರಾತಿನಿಧ್ಯ ನೋಡಿದಾಗ ಹೆಚ್ಚಿನ ಕ್ಷೇತ್ರಗಳಲ್ಲಿ ಕಮ್ಯುನಿಸ್ಟ್‌ ಪಕ್ಷಗಳು ಸ್ಪರ್ಧಿಸದ ಕಾರಣ ಜನರೂ ಕಮ್ಯುನಿಸ್ಟ್‌ ಪಕ್ಷಗಳ ಚುನಾವಣಾ ರಾಜಕೀಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ” ಎಂಬುದು ಸಿಪಿಐ (ಎಂ) ರಾಜ್ಯ ಸಮಿತಿ ಸದಸ್ಯ ಕೆ. ಪ್ರಕಾಶ್‌ ಅವರ ಅಭಿಪ್ರಾಯ.

ಶ್ರೀಮಂತ ಪಕ್ಷಗಳ ಸಾಲಿನಲ್ಲಿಯೇ ಇರುವ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಾರ್ಟಿ ಕಡೆಯಿಂದ ಲಭ್ಯವಾಗುವ ಇಂತಹ ಯಾವುದೇ ಕಾರಣಗಳು ಅವು ಇವತ್ತಿರುವ ಸ್ಥಿತಿಯಿಂದ ಮೇಲೇಳುವ ಸಾಧ್ಯತೆಯನ್ನು ಮುಂದಿಡುವುದಿಲ್ಲ. ಬದಲಿಗೆ, ಚುನಾವಣಾ ರಾಜಕಾರಣದ ಮಿತಿಗಳನ್ನು ಗುರುತಿಸುವ ಅವು ಪರ್ಯಾಯವನ್ನು ಕಂಡುಕೊಳ್ಳುವಲ್ಲಿ ಯಾಕೆ ವಿಫಲವಾಗುತ್ತಿವೆ ಎಂಬುದನ್ನು ತಿಳಿಸುತ್ತವೆ. ಹೆಚ್ಚು ಕಡಿಮೆ ಇಂತಹದ್ದೇ ರಾಜಕೀಯ ಮಿತಿಗಳನ್ನು ಮೀರಿ ದಿಲ್ಲಿಯಲ್ಲಿ ಅಧಿಕಾರಕ್ಕೆ ಬಂದ ಆಮ್‌ ಆದ್ಮಿ ಪಕ್ಷದ ಗೆಲುವಿನಲ್ಲಿ ಮೂಲ ಪಾಠವೊಂದನ್ನು ಎಡಪಕ್ಷಗಳು ಮರೆತಂತೆ ಕಾಣಿಸುತ್ತವೆ. ಜನರಿಗೆ ಆರ್ಥಿಕ ಆಧಾರಿತ ಪರಿಹಾರಗಳ ಜತೆಗೆ, ಅವರನ್ನು ಭಾವನಾತ್ಮಕ ನೆಲೆಯಲ್ಲಿಯೂ ಒಳಗೊಳ್ಳಬೇಕಾದ ಅಗತ್ಯವನ್ನು ದಿಲ್ಲಿ ಪರ್ಯಾಯ ರಾಜಕಾರಣ ಮುಂದಿಟ್ಟಿತ್ತು ಎಂಬುದನ್ನು ಎಡಪಕ್ಷಗಳು ತುರ್ತಾಗಿ ಗುರುತಿಸಬೇಕಿದೆ.

ಅಂದಹಾಗೆ, ಎಡ ಪಕ್ಷಗಳ ರಾಜಕೀಯ ಸೋಲಿಗೆ ಇಲ್ಲಿ ನೀಡುವ ಕಾರಣಗಳ ಆಚೆಗೂ ಬೇರೆಯದೇ ಒಳನೋಟಗಳಿವೆ. ಎಡಪಕ್ಷಗಳು ಜಾತಿ ವ್ಯವಸ್ಥೆಯನ್ನು ಸರಿಯಾಗಿ ಗುರುತಿಸಲು ಸೋತಿದ್ದೂ ಕೂಡ ಅವುಗಳ ಸೋಲಿಗೆ ಕಾರಣ ಎಂಬ ವಾದಗಳಿವೆ. ಇದರ ಜತೆಗೆ 2009ರಲ್ಲಿ ಜ್ಯೋತಿ ಬಸು ತರಹದ ಮತ್ಸದ್ಧಿ ನಾಯಕ ದೇಶದ ಪ್ರಧಾನಿ ಆಗುವ ಅವಕಾಶವನ್ನು ತಳ್ಳಿಹಾಕಿದಂತಹ ಐತಿಹಾಸಿಕ ತಪ್ಪುಗಳೂ ಕೂಡ ಇವತ್ತು ಎಡಪಕ್ಷಗಳು ಬಲ ಕಳೆದುಕೊಳ್ಳಲು ಕಾರಣ ಎಂದು ತಜ್ಞರು ಗುರುತಿಸುತ್ತಾರೆ.

ಒಟ್ಟಾರೆ, ಮುಷ್ಕರಗಳನ್ನು ಯಶಸ್ವಿಯಾಗಿ ನಡೆಸುವ ಕಮ್ಯುನಿಸ್ಟ್ ಪಕ್ಷಗಳು, ರಾಜಕಾರಣದ ವಿಚಾರದಲ್ಲಿ ಹೊಸ ಒಳನೋಟಗಳನ್ನು ಒಳಗೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಧಿಕಾರಕ್ಕೆ ಬರುತ್ತಿರುವ ಎಡಪಕ್ಷಗಳು ‘ಜನಪ್ರಿಯ ರಾಜಕಾರಣ’ದ ನೆಲೆಯಲ್ಲಿಯೇ ಕಾರ್ಯಚರಣೆ ನಡೆಸುತ್ತಿರುವ ಸಂದರ್ಭದಲ್ಲಿ, ರಷ್ಯಾದಂತಹ ಕಮ್ಯುನಿಸ್ಟ್ ದೇಶದಲ್ಲಿ ಅಲ್ಲಿನ ಆಡಳಿತವೇ ‘ದೇಶ ಪ್ರೇಮ’ದ ಹೊಸ ಪಾಠ ಹೇಳಿಕೊಡಲು ಹೊರಟ ಸಮಯದಲ್ಲಿ ಭಾರತದ ಎಡಪಕ್ಷಗಳು ಹೊಸ ಆಲೋಚನೆಗೆ ತೆರೆದುಕೊಳ್ಳದೆ ಬೇರೆ ದಾರಿ ಇಲ್ಲ ಅಷ್ಟೆ.