samachara
www.samachara.com
ಪ್ರಿಂಟ್ ಮೀಡಿಯಾ ಎಂಬ ಮರುಭೂಮಿಯಲ್ಲಿ  ‘ಜಾಹೀರಾತು ದರ ಹೆಚ್ಚಳ’ ಎಂಬ ಓಯಸಿಸ್!
COVER STORY

ಪ್ರಿಂಟ್ ಮೀಡಿಯಾ ಎಂಬ ಮರುಭೂಮಿಯಲ್ಲಿ  ‘ಜಾಹೀರಾತು ದರ ಹೆಚ್ಚಳ’ ಎಂಬ ಓಯಸಿಸ್!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಅವಧಿ ಮಾಧ್ಯಮಗಳ ಪಾಲಿಗಂತೂ ‘ಸುವರ್ಣ ಯುಗ’ ಎಂದು ಕರೆಯಲಾಗುತ್ತಿದೆ. ಇದಕ್ಕೆ ಹೊಸ ಉದಾಹರಣೆಯೇ ಈ ಸರಕಾರಿ ಜಾಹೀರಾತುಗಳ ದರ ಹೆಚ್ಚಳ.

ಅಮಾನ್ಯೀಕರಣದ ನಂತರ ನೆಲಕ್ಕಚ್ಚಿದ್ದ, ಇತ್ತೀಚಿನ ಜಾಗತಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದುಬಾರಿ ನ್ಯೂಸ್‌ ಪ್ರಿಂಟ್‌ಗಳನ್ನು ಭರಿಸಲು ಪರದಾಡುತ್ತಿದ್ದ, ಡಿಜಿಟಲ್ ಆವಿಷ್ಕಾರದಿಂದ ಕೊನೆಯ ಮೊಳೆಗೆ ತಲೆಯೊಡ್ಡಿದ್ದ ಭಾರತದ ಪ್ರಿಂಟ್ ಮೀಡಿಯಾ ಪಾಲಿಗೆ ಇದು ಒಳ್ಳೆಯ ಸುದ್ದಿ!

ಕೇಂದ್ರ ಸರ್ಕಾರ ಪತ್ರಿಕೆಗಳಿಗೆ ನೀಡುವ ಜಾಹೀರಾತಿನ ಬೆಲೆಗಳನ್ನು ಶೇ.25ರಷ್ಟು ಏರಿಸಿದೆ . ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಏರ್ಪಡಿಸಿದ್ದ ‘8ನೇ ದರ ನಿರ್ಣಯ ಸಮಿತಿ’ಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಸಣ್ಣ ಹಾಗೂ ಮಾದ್ಯಮ ಗಾತ್ರದ ಪತ್ರಿಕೆಗಳಿಗೆ ಲಾಭವಾಗಲಿ ಎಂದು ಈ ನಿರ್ಣಯ ತೆಗೆದುಕೊಂಡಿದ್ದಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ. ಆದರೆ ಇದರ ಹಿಂದೆ ಬೇರೆಯೇ ಚುನಾವಣಾ ಲೆಕ್ಕಾಚಾರಗಳಿವೆ ಎನ್ನುತ್ತಿದ್ದಾರೆ ರಾಜಕೀಯ ಪಂಡಿತರು. ಇದೇನೆ ಇರಲಿ, ಡಿಜಿಟಲ್ ತಂತ್ರಜ್ಞಾನ ನಿಧಾನವಾಗಿ ಪ್ರಿಂಟ್ ಪತ್ರಿಕೋದ್ಯಮವನ್ನು ಅಪೋಷನ ತೆಗೆದುಕೊಳ್ಳುತ್ತಿರುವ ಈ ದಿನಗಳಲ್ಲಿ, ಕೇಂದ್ರದ ಈ ನಿರ್ಧಾರವನ್ನು ಮೇಲ್ನೋಟಕ್ಕೆ ಸ್ವಾಗತಿಸಲೇಬೇಕಿದೆ. ಆದರೆ ಸ್ವಲ್ಪ ಆಳಕ್ಕಿಳಿದರೆ ಆಳುವ ಸರಕಾರಗಳ ಇಂತಹ ನಡೆಗಳ ಹಿಂದೆ ಕಾಳಜಿಗಿಂತ ಆಮಿಷದ ದಟ್ಟ ವಾಸನೆ ಬಡಿಯುತ್ತದೆ.

ಪ್ರಿಂಟ್ ಮೀಡಿಯಾ ಎಂಬ ಮರುಭೂಮಿಯಲ್ಲಿ  ‘ಜಾಹೀರಾತು ದರ ಹೆಚ್ಚಳ’ ಎಂಬ ಓಯಸಿಸ್!

ಅಸಲಿಗೆ ಸರಕಾರಗಳು ಚುನಾವಣಾ ಸಂದರ್ಭದಲ್ಲಿ ಪತ್ರಿಕೆಗಳ ಜಾಹೀರಾತು ದರವನ್ನು ಏರಿಸುತ್ತಿರುವುದು ಇದೇ ಮೊದಲೇನಲ್ಲ. 2014 ರ ಲೋಕಸಭಾ ಚುನಾವಣಾ ತಯಾರಿಯಲ್ಲಿದ್ದ ಯುಪಿಎ ಸರಕಾರ 2013ರ ಆಗಸ್ಟ್‌ನಲ್ಲಿ 7ನೇ ದರ ನಿರ್ಣಯ ಸಮಿತಿಯನ್ನು ರಚಿಸಿತ್ತು. ಅಲ್ಲದೆ ಪತ್ರಿಕೆಗಳ ಜಾಹೀರಾತುಗಳ ಬೆಲೆಯನ್ನು ಶೇ.19 ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿತ್ತು.

ಚುನಾವಣಾ ಸಂದರ್ಭದಲ್ಲಿ ಮಾಧ್ಯಮಗಳನ್ನು ಸರಕಾರದ ಪರವಾಗಿ ಬಳಸಿಕೊಳ್ಳಬೇಕು ಎಂಬ ಉದ್ದೇಶದಿಂದಲೇ ಕಾಂಗ್ರೆಸ್ ಇಂತಹ ನಿರ್ಣಯಕ್ಕೆ ಮುಂದಾಗಿದೆ ಎಂದು 2013 ರಲ್ಲಿ ಯುಪಿಎ ಸರಕಾರವನ್ನು ಬಿಜೆಪಿ ಟೀಕಿಸಿತ್ತು. ಇಂದು ಅದೇ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಜಾಹೀರಾತುಗಳ ಬೆಲೆಯನ್ನು ಶೇ.25 ರಷ್ಟು ಏರಿಸಿದೆ.

ಆದರೆ ಐದು ವರ್ಷದ ಹಿಂದೆ ಮೋದಿಗಿದ್ದ ಜನಪ್ರಿಯತೆ ಇಂದು ಕಡಿಮೆಯಾಗಿರುವುದಂತೂ ನಿಜ. ಸರಕಾರದ ಮೇಲಿನ ಭರವಸೆಯನ್ನು ಜನ ಕಳೆದುಕೊಂಡಿದ್ದಾರೆ. ಹೀಗಾಗಿ ಮತ್ತೆ ತನ್ನ ಚಾರ್ಮ್ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮಾಧ್ಯಮದ ಮೊರೆ ಹೋಗಿರುವ ಸರಕಾರ ಆ ಕಾರಣಕ್ಕಾಗಿ ಇಂತಹ ಒಂದು ನಿರ್ಣಯ ತೆಗೆದುಕೊಂಡಿರುವ ಸಾಧ್ಯತೆ ಇದೆ. ಅಲ್ಲದೆ ಭಾರತೀಯ ಮಾಧ್ಯಮಗಳು ಇನ್ನಾದರೂ ಮೋದಿ ಭಜನೆಯನ್ನು ನಿಲ್ಲಿಸದಿರುವುದು ಇಂತಹ ಒಂದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಜಾಹೀರಾತು ಎಂಬ ಭಯಂಕರ ಉದ್ಯಮ

ಜಾಹೀರಾತು ಎಂಬುದು ಇಂದು ವಿಶ್ವದಲ್ಲೇ ಅತಿದೊಡ್ಡ ಉದ್ಯಮ. ಜಾಹೀರಾತುಗಳಿಲ್ಲದೆ ಯಾವುದೇ ಮಾಧ್ಯಮಗಳು ಬಹುಕಾಲಕ್ಕೆ ಉಸಿರಾಡುವುದು ಅಸಾಧ್ಯ. ಮಾಧ್ಯಮಗಳ ಆದಾಯದ ಶೇ. 70ರಷ್ಟು ಪಾಲು ಜಾಹೀರಾತುಗಳಿಂದಲೇ ಬರುತ್ತದೆ. ಭಾರತೀಯ ಮಾಧ್ಯಮಗಳ ಈ ಜಾಹೀರಾತುಗಳ ಆದಾಯದ ಪೈಕಿ ಸರಕಾರಿ ಜಾಹೀರಾತುಗಳ ಭಾಗ ಶೇ. 30 ರಷ್ಟು. ಹೀಗಾಗಿ ಕೇವಲ ಸರಕಾರಿ ಜಾಹೀರಾತುಗಳನ್ನು ಪಡೆಯುವ ಸಲುವಾಗಿಯೇ ಸ್ಥಳೀಯ ಹಾಗೂ ಸಣ್ಣ ಮಟ್ಟದ ಪತ್ರಿಕೆಗಳು ಹುಟ್ಟಿಕೊಂಡ ಉದಾಹರಣೆಗಳೂ ಇವೆ. ಜಾಹೀರಾತುಗಳು ಬರುವ ದಿನದಲ್ಲಿ ಮಾತ್ರ ಒಂದೆರಡು ಪ್ರತಿಗಳನ್ನು ಪ್ರಿಂಟ್ ಮಾಡಿ, ಸರಕಾರಿ ಕಚೇರಿಗಳಿಗೆ ಹಂಚಿ ಜಾಹೀರಾತು ಹಣವನ್ನು ಜೇಬಿಗೆ ಇಳಿಸುವ ಒಂದು ಸಣ್ಣ ಸಂಖ್ಯೆ ಈ ದೇಶದಲ್ಲಿದೆ.

ಸರಕಾರಿ ಜಾಹೀರಾತುಗಳ ಹೊರತಾಗಿ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳ ಅತ್ಯಂತ ದೊಡ್ಡ ಆದಾಯದ ಮೂಲ ಎಂದರೆ ಕಾರ್ಪೋರೇಟ್ ಜಾಹೀರಾತು. ಮಾಧ್ಯಮದ ಆದಾಯದ ಪಾಲಿನಲ್ಲಿ ಇವುಗಳ ಪಾಲು ಶೇ.70ರಷ್ಟು. ಇಂದು ಎಲ್ಲಾ ದೊಡ್ಡ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳು ಇಂತಹ ಕಾರ್ಪೋರೇಟ್ ಜಾಹೀರಾತುಗಳಿಂದಲೇ ನೂರಾರು ಕೋಟಿ ಆದಾಯ ಮಾಡಿಕೊಳ್ಳುತ್ತಿವೆ. 2017ರಲ್ಲಿ ಭಾರತೀಯ ಮಾಧ್ಯಮಗಳು ಇಂತಹ ಕಾರ್ಪೋರೇಟ್ ಜಾಹೀರಾತುಗಳ ರೂಪದಲ್ಲಿ ಗಳಿಸಿದ ಆದಾಯ ಸುಮಾರು 105 ಟ್ರಿಲಿಯನ್ ರೂಪಾಯಿ. ಇದು 2016 ರ ಆದಾಯಕ್ಕಿಂತ ಶೇ.13 ರಷ್ಟು ಅಧಿಕವಾಗಿದ್ದು, 2020 ರ ವೇಳೆಗೆ ಈ ಉದ್ಯಮ ಜಾಹೀರಾತಿನ ಮೂಲಕ ಸುಮಾರು 2 ಟ್ರಿಲಿಯನ್ ರೂ. ಆದಾಯದ ಗುರಿ ಹೊಂದಿವೆ.

ಜಾಹೀರಾತಿಗೆ ಖರ್ಚಾದ ಸರಕಾರಿ ಹಣವೆಷ್ಟು ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಅವಧಿ ಮಾಧ್ಯಮಗಳ ಪಾಲಿಗಂತೂ 'ಸುವರ್ಣ ಯುಗ’ ಎಂದು ಕರೆಯಲಾಗುತ್ತಿದೆ. ಇದಕ್ಕೆ ಲಭ್ಯ ಇರುವ ಅಂಕಿ ಅಂಶಗಳೇ ಕಾರಣ.

ಮೋದಿ ನೇತೃತ್ವದ ಎನ್‌ಡಿಎ ಸರಕಾರ ಜಾಹೀರಾತುಗಳ ಮೇಲೆ ವ್ಯಯಿಸಿರುವ ಹಣದ ಮಾಹಿತಿ ನೀಡುವಂತೆ ಮುಂಬೈ ಮೂಲದ ಆರ್‌ಟಿಐ ಕಾರ್ಯಕರ್ತ ಅನಿಲ್ ಗುಲ್ಗಾಲಿ ಸಲ್ಲಿಸಿದ್ದ ಅರ್ಜಿಗೆ, ಮಾಹಿತಿ ಮತ್ತು ಪ್ರಸಾರ ಇಲಾಖೆ ನೀಡಿರುವ ಅಂಕಿ ಅಂಶಗಳು ಹೀಗಿವೆ. ಕೇಂದ್ರ ಸರಕಾರ ಕಳೆದ ಐದು ವರ್ಷದಲ್ಲಿ 4343.26 ಕೋಟಿ ರೂ.ಗಳನ್ನು ಕೇವಲ ಜಾಹೀರಾತುಗಳಿಗಾಗಿ ವಿನಿಯೋಗಿಸಿದೆ ಮತ್ತು ಬಹುಪಾಲು ಜಾಹೀರಾತುಗಳಲ್ಲಿ ಪ್ರಧಾನಿ ಮೋದಿ ಅವರನ್ನೇ ಪ್ರಚಾರದ ಸರಕಾಗಿ ಬಳಸಲಾಗಿದೆ ಎಂಬ ಮಾಹಿತಿ ನೀಡಿತ್ತು ಇಲಾಖೆ.

2014-15 ರಲ್ಲಿ ಮುದ್ರಣ ಮಾಧ್ಯಮಗಳ ಜಾಹೀರಾತಿಗೆ 424.85 ಕೋಟಿ ರೂ. ವ್ಯಯಿಸಿದ್ದರೆ, ದೃಶ್ಯ ಮಾಧ್ಯಮಗಳ ಜಾಹೀರಾತಿಗಾಗಿ ಕೇಂದ್ರ ಸರಕಾರ 448.97 ಕೋಟಿ ರೂ. ಗಳನ್ನು ವ್ಯಯಿಸಲಾಗಿದೆ. ಇನ್ನೂ ಇತರೆ ಮಾಧ್ಯಮಗಳ ಜಾಹೀರಾತು ಸೇರಿ ಎನ್‌ಡಿಎ ಅಧಿಕಾರ ಹಿಡಿದ ಮೊದಲ ವರ್ಷದಲ್ಲೇ ಸುಮಾರು 953.54 ಕೋಟಿ ರೂಪಾಯಿಗಳನ್ನು ಜಾಹೀರಾತಿಗಾಗಿ ವ್ಯಯಿಸಿ ಹೊಸ ದಾಖಲೆ ನಿರ್ಮಿಸಿತ್ತು.

ಇದೇ ರೀತಿ 2015-16 ರಲ್ಲಿ ಮುದ್ರಣ ಹಾಗೂ ದೃಶ್ಯ ಮಾದ್ಯಗಳ ಜಾಹೀರಾತಿಗೆ 1,171.11 ಕೋಟಿ ಹಾಗೂ 1916-17 ರಲ್ಲಿ 1263.15 ಕೋಟಿ ರೂ ಹಣ ನೀಡುವ ಮೂಲಕ ಕೇಂದ್ರ ಸರಕಾರ ಪ್ರಚಾರಕ್ಕೆ ಅಪಾರ ಹಣ ವಿನಿಯೋಗಿಸುವ ತನ್ನ ದಾಖಲೆಯನ್ನು ವರ್ಷದಿಂದ ವರ್ಷಕ್ಕೆ ತಾನೇ ಮುರಿಯುತ್ತಾ ಮುಂದೆ ಸಾಗಿದೆ.

ವಿಷಯ ಹೀಗಿರುವಾಗ, ಮಾಹಿತಿ ಮತ್ತು ಪ್ರಸಾರ ಇಲಾಖೆ ಮುದ್ರಣ ಮಾದ್ಯಮಗಳ ಜಾಹೀರಾತಿನ ವೆಚ್ಚವನ್ನು ಶೇ. 25ರಷ್ಟು ಏರಿಸಿದೆ ಎಂಬುದು ಗಮನಾರ್ಹ.

ನ್ಯೂಸ್ ಪ್ರಿಂಟ್ ಮತ್ತದರ ಇತಿಹಾಸ:

ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ನ್ಯೂಸ್ ಪ್ರಿಂಟ್‌ಗಳ ಬೆಲೆ ಹೆಚ್ಚಾಗಿದೆ. ನ್ಯೂಸ್ ಪ್ರಿಂಟ್ ಬೆಲೆ ಏರಿಕೆ ಕಂಡಿರುವುದರಿಂದ ಕರ್ನಾಟದ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಮುಖ ಪತ್ರಿಕೆಗಳು ತಮ್ಮ ವೆಚ್ಚವನ್ನು ಸರಿದೂಗಿಸಲು ಎರಡು ಪುಟವನ್ನು ಕಡಿಮೆ ಮಾಡಿವೆ.

ಪತ್ರಿಕೋದ್ಯಮ ಹೀಗೊಂದು ಸವಾಲುಗಳನ್ನು ಎದುರುಗೊಳ್ಳುತ್ತಿರುವ ಸಂದರ್ಭದಲ್ಲಿ ತಮ್ಮ ವೆಚ್ಚ ಹಾಗೂ ಲಾಭವನ್ನು ಸರಿದೂಗಿಸಿಕೊಳ್ಳಲು ಸರಕಾರದ ಇಂತಹ ನಿರ್ಣಯಗಳು ಸಹಾಯಕವಾಗಲಿದೆ.

1994-95ರ ವರೆಗೆ ಭಾರತೀಯ ಸರಕಾರ ಇಲ್ಲಿನ ಎಲ್ಲಾ ನೋಂದಾಯಿತ ಪತ್ರಿಕೆಗಳಿಗೂ ವಿದೇಶದಿಂದ ನ್ಯೂಸ್ ಪ್ರಿಂಟ್ ಆಮದು ಮಾಡಿ ಕಡಿಮೆ ಬೆಲೆಗೆ ವಿತರಣೆ ಮಾಡುತ್ತಿತ್ತು. 1962ರಲ್ಲಿ ಇದಕ್ಕೆಂದೇ 'ನ್ಯೂಸ್ ಪ್ರಿಂಟ್ ಆಮದು ಕಾಯ್ದೆ'ಯನ್ನು ಜಾರಿಗೆ ತರಲಾಗಿತ್ತು. ಆದರೆ ದೇಶದಲ್ಲಿ ಹೆಚ್ಚುತ್ತಿದ್ದ ಓದುಗರ ಸಂಖ್ಯೆ ಹಾಗೂ ಮುದ್ರಣ ಮಾಧ್ಯಮಗಳಿಂದ ಹೆಚ್ಚಿದ ನ್ಯೂಸ್ ಪ್ರಿಂಟ್‌ ಬೇಡಿಕೆಗೆ ಸ್ಪಂದಿಸಲು ಸಾಧ್ಯವಾಗದ ಸರಕಾರ 1994-95ರಲ್ಲಿ ಈ ಕಾಯ್ದೆಯನ್ನು ಪರಿಷ್ಕರಿಸಿತ್ತು. ಅಲ್ಲದೆ ನ್ಯೂಸ್ ಪ್ರಿಂಟ್ ಪರವಾನಗಿಯನ್ನು ಸಾರ್ವಜನಿಕಗೊಳಿಸಿ ಆದೇಶಿಸಿತ್ತು. ಇದರಿಂದ ನ್ಯೂಸ್ ಪ್ರಿಂಟ್‌ಗಳನ್ನು ಖಾಸಗಿ ಸಂಸ್ಥೆಗಳೂ ಖರೀದಿ ಮಾಡಲು ಮುಂದಾದವು. ಇಂದು ದೇಶದ ಬಹುತೇಕ ದೊಡ್ಡ ಮಟ್ಟದ ಪತ್ರಿಕೆಗಳು ನ್ಯೂಸ್‌ ಪ್ರಿಂಟ್ ಗಳನ್ನು ತಾವೇ ಖರೀದಿಸಿಕೊಳ್ಳುತ್ತಿವೆ.

ಮುದ್ರಣ ಮಾಧ್ಯಮಗಳ ಜಾಹೀರಾತುಗಳ ಬೆಲೆಯನ್ನು ಸರಕಾರ ಶೇ. 25ರಷ್ಟು ಏರಿಸಿ ಆದೇಶ ಹೊರಡಿಸುತ್ತಿದ್ದಂತೆ ಷೇರುಪೇಟೆಯಲ್ಲಿ ನ್ಯೂಸ್ ಪ್ರಿಂಟ್ ಆಮದು ಮಾಡುವ ಹಾಗೂ ರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಷೇರಿನ ಬೆಲೆಯಲ್ಲಿ ಸಾಕಷ್ಟು ಏರಿಕೆ ಕಾಣಲಾರಂಭಿಸಿದೆ.

ಡಿಬಿ ಕಾರ್ಪ್ ಷೇರಿನ ಬೆಲೆಯಲ್ಲಿ ಶೇ.7.2 ರಷ್ಟು ಏರಿಕೆ ಕಂಡಿದ್ದು, ಬುಧವಾರದ ಷೇರುಪೇಟೆ ಅಂತ್ಯಕ್ಕೆ ಪ್ರತಿ ಷೇರಿನ ಬೆಲೆ 183.00 ರೂಗೆ ಏರಿಕೆಯಾಗಿದೆ. ಹೆಚ್‌ಟಿ ಮೀಡಿಯಾ ಷೇರುಗಳು ಶೇ.15 ರಷ್ಟು ಏರಿಕೆ ಕಂಡರೆ, ಜಾಗರಣ್ ಪ್ರಕಾಶನ್ ಷೇರಿನ ಮೌಲ್ಯ ಶೇ.8.8 ರಷ್ಟು ಏರಿಕೆ ಕಂಡಿದೆ. ಇದು ಪ್ರಿಂಟ್ ಪತ್ರಿಕೋದ್ಯಮಕ್ಕೆ ಶುಭ ಸುದ್ದಿ.

ಎಂದಿನಂತೆ ಬಿಜೆಪಿಯ ಈ ನಡೆಯನ್ನು ಕೇವಲ ಚುನಾವಣಾ ಪ್ರಚಾರದ ಗಿಮಿಕ್ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಟೀಕಿಸಿದೆ. ಒಟ್ಟಿನಲ್ಲಿ ಭಾರತದಲ್ಲಿ ಚುನಾವಣಾ ಸಂದರ್ಭದಲ್ಲಿ ಎಲ್ಲಾ ಪಕ್ಷಗಳು ಜನ ಸಾಮಾನ್ಯರಿಗೆ ಆಮಿಷಗಳನ್ನು ನೀಡುವುದು ಸಾಮಾನ್ಯ. ಇದನ್ನು ಒಂದು ರೀತಿಯಲ್ಲಿ ಭಾರತೀಯ ಚುನಾವಣಾ ಸಂಪ್ರದಾಯ ಎಂದೇ ಬಣ್ಣಿಸಲಾಗುತ್ತದೆ. ಹೀಗಿರುವಾಗ ರಾಜಕೀಯ ಪಕ್ಷಗಳು, ಸರಕಾರಗಳು ಚುನಾವಣಾ ಸಂದರ್ಭದಲ್ಲೇ ಮಾಧ್ಯಮಗಳಿಗೆ ಇಂತಹ ಲಾಭದಾಯಕ ಪ್ಯಾಕೇಜ್‌ಗಳನ್ನು ಘೋಷಿಸುವುದೂ ಸಹ ಇಂಥಹದ್ದೇ ಒಂದು ಆಮಿಷವಾಗಿ ಕಂಡರೆ ಅಚ್ಚರಿ ಏನಿಲ್ಲ.

ಅದೇನೆ ಇರಲಿ 2014 ರಲ್ಲಿ ಮಾಧ್ಯಮಗಳಿಗೆ ಭರ್ಜರಿ ಗಿಫ್ಟ್ ಕೊಟ್ಟ ಹೊರತಾಗಿಯೂ ಕಾಂಗ್ರೆಸ್ ಚುನಾವಣೆಯಲ್ಲಿ ಸೋತು ಮಕಾಡೆ ಮಲಗಿತ್ತು. ಇಂದು ಅದೇ ತಂತ್ರಕ್ಕೆ ಬಿಜೆಪಿಯೂ ಕೈ ಹಾಕಿದೆ. ಪರಿಣಾಮ ಏನಾಗಲಿದೆ ಎಂಬುದನ್ನು ಇನ್ನೈದು ತಿಂಗಳಲ್ಲಿ ಭಾರತದ ಮತದಾರ ತಿಳಿಸಲಿದ್ದಾನೆ. ಅಲ್ಲೀವರೆಗೂ ಪ್ರಿಂಟ್ ಮೀಡಿಯಾ ಒಂದು ದೀರ್ಘ ಉಸಿರೆಳೆದುಕೊಳ್ಳಬಹುದು.