samachara
www.samachara.com
ಆಂಧ್ರದಲ್ಲಿ ಜಗನ್‌ ಪಾದ‘ಯಾತ್ರಾ’: ಜ್ಯೂ. ರೆಡ್ಡಿ ಅಧಿಕಾರದ ನಡಿಗೆಗೆ ಮಮ್ಮುಟ್ಟಿಯ ಸಿನಿಮಾ ಸಾಥ್‌!
COVER STORY

ಆಂಧ್ರದಲ್ಲಿ ಜಗನ್‌ ಪಾದ‘ಯಾತ್ರಾ’: ಜ್ಯೂ. ರೆಡ್ಡಿ ಅಧಿಕಾರದ ನಡಿಗೆಗೆ ಮಮ್ಮುಟ್ಟಿಯ ಸಿನಿಮಾ ಸಾಥ್‌!

ಬರೋಬ್ಬರಿ 340 ದಿನಗಳ ಕಾಲ ರಾಜ್ಯದ ಉದ್ದಗಲಕ್ಕೂ ಮಿಂಚಿನ ಸಂಚಾರ ನಡೆಸಿರುವ ಅವರು 3,650 ಕಿಲೋಮೀಟರ್‌ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದ್ದಾರೆ.

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಗದ್ದುಗೆಯತ್ತ ವೈಎಸ್‌ಆರ್‌ ಕಾಂಗ್ರೆಸ್‌ ಮುಖ್ಯಸ್ಥ ಜಗನ್‌ಮೋಹನ್‌ ರೆಡ್ಡಿ ನಡಿಗೆ ಆರಂಭಿಸಿದ್ದಾರೆ. ಅವರಿಗೆ ಮಲಯಾಳಂ ಸೂಪರ್‌ಸ್ಟಾರ್‌ ಮಮ್ಮುಟ್ಟಿ ತಮ್ಮ ‘ಯಾತ್ರಾ’ ಸಿನಿಮಾದ ಮೂಲಕ ಸಾಥ್‌ ನೀಡಿದ್ದಾರೆ.

2014ರಲ್ಲಿ ನಡೆದಿದ್ದ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯ ಒಟ್ಟು 175 ಸ್ಥಾನಗಳಲ್ಲಿ 103 ಸ್ಥಾನಗಳನ್ನು ಗೆದ್ದು ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ (ಟಿಡಿಪಿ) ಅಧಿಕಾರದ ಗದ್ದುಗೆ ಎರಿದರೆ, ಜಗನ್‌ಗೆ ಸೇರಿದ ಹೊಸ ಪಕ್ಷ ವೈಎಸ್‌ಆರ್‌ ಕಾಂಗ್ರೆಸ್‌ 66 ಸ್ಥಾನಗಳನ್ನು ಗೆದ್ದು ವಿರೋಧ ಪಕ್ಷದಲ್ಲಿ ವಿರಾಜಮಾನವಾಗಿತ್ತು. ಹೀಗಾಗಿ ಈ ಬಾರಿ ಅಧಿಕಾರ ಹಿಡಿಯಲೇಬೇಕು ಎಂದು ಜಗನ್‌ ರೆಡ್ಡಿ ಪಣ ತೊಟ್ಟಿದ್ದಾರೆ. ಅದಕ್ಕೆ ಅವರು ಆಯ್ಕೆ ಮಾಡಿಕೊಂಡಿದ್ದು ಪಾದಯಾತ್ರೆಯನ್ನು; ತಂದೆ ರಾಜಶೇಖರ್ ರೆಡ್ಡಿ ರೀತಿಯಲ್ಲಿ.

ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ಇನ್ನೇನು ನಾಲ್ಕು ತಿಂಗಳಿರುವಾಗ ತಮ್ಮ ದಾಖಲೆ ಪಾದಯಾತ್ರೆಯನ್ನು ಜಗನ್‌ಮೋಹನ್‌ ರೆಡ್ಡಿ ಯಶಸ್ವಿಯಾಗಿ ಮುಗಿಸಿದ್ದಾರೆ. ಬರೋಬ್ಬರಿ 340 ದಿನಗಳ ಕಾಲ ರಾಜ್ಯದ ಉದ್ದಗಲಕ್ಕೂ ಮಿಂಚಿನ ಸಂಚಾರ ನಡೆಸಿರುವ ಜ್ಯೂನಿಯರ್ ರೆಡ್ಡಿ ಬರೋಬ್ಬರಿ 3,650 ಕಿಲೋಮೀಟರ್‌ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದ್ದಾರೆ. ಇದರೊಂದಿಗೆ ಭಾರತದ ರಾಜಕೀಯ ಇತಿಹಾಸದಲ್ಲಿ ಅತಿ ದೀರ್ಘಾವಧಿಯ, ಅತಿ ಹೆಚ್ಚು ಕಿಲೋಮೀಟರ್‌ಗಳ ಪಾದಯಾತ್ರೆಗೆ ನಡೆಸಿದ ಕೀರ್ತಿಗೆ ಯುವ ರಾಜಕಾರಣಿ ಪಾತ್ರರಾಗಿದ್ದಾರೆ.

ಜಗನ್‌ಮೋಹನ್‌ ರೆಡ್ಡಿ ಪಾದಯಾತ್ರೆಯ ಒಂದು ನೋಟ. 
ಜಗನ್‌ಮೋಹನ್‌ ರೆಡ್ಡಿ ಪಾದಯಾತ್ರೆಯ ಒಂದು ನೋಟ. 
/ನ್ಯೂಸ್‌ಜಿಜ್‌

ಆಂಧ್ರ ಪ್ರದೇಶದಲ್ಲಿ ಅಧಿಕಾರಕ್ಕಾಗಿ ಹೀಗೆ ಪಾದಯಾತ್ರೆ ನಡೆಸುವುದು ಹೊಸದೇನೂ ಅಲ್ಲ. ಜಗನ್‌ ಮೋಹನ್‌ ರೆಡ್ಡಿ ತಂದೆ ದಿವಂಗತ ವೈ.ಎಸ್‌. ರಾಜಶೇಖರ ರೆಡ್ಡಿ ಇಂಥಹದ್ದೇ ಪರಿಸ್ಥಿತಿಯಲ್ಲಿ ಪಾದಯಾತ್ರೆಯ ಮೊರೆ ಹೋಗಿದ್ದರು. ಅದು 2003 ಏಪ್ರಿಲ್‌. ಅದಾಗಲೇ ಸತತ ಎರಡು ಬಾರಿ ಆಗಿನ ಸಂಯುಕ್ತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಆಡಳಿತ ನಡೆಸಿದ್ದರು. ಚಂದ್ರಬಾಬು ನಾಯ್ಡು ಹೆಸರು ದೇಶದ ಉದ್ದಗಲಕ್ಕೂ ಹೆಸರುವಾಸಿಯಾಗಿತ್ತು. ನಾಯ್ಡು ಅವರನ್ನು ಚುನಾವಣಾ ರಾಜಕಾರಣದಲ್ಲಿ ಸೋಲಿಸಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಇತ್ತು. ಆಗ ಅಖಾಡಕ್ಕಿಳಿದವರು ರಾಜಶೇಖರ್‌ ರೆಡ್ಡಿ. ಏಪ್ರಿಲ್‌ 9ರಂದು ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾದಿಂದ 1,500 ಕಿಲೋಮೀಟರ್‌ಗಳ 60 ದಿನಗಳ ಪಾದಯಾತ್ರೆಯನ್ನು ಅವರು ಆರಂಭಿಸಿದ್ದರು.

ಭರಪೂರ ಜನಬೆಂಬಲದೊಂದಿಗೆ ಬರ ಪೀಡಿತ ಪ್ರದೇಶಗಳಲ್ಲಿ ಬಿರು ಬಿಸಿನಲ್ಲಿ ರಾಜಶೇಖರ್‌ ರೆಡ್ಡಿ ಪಾದಯಾತ್ರೆ ನಡೆಸಿದರು. ಪಾದಾಯತ್ರೆ ಮುಗಿಯುವ ಹೊತ್ತಿಗೆ ಚುನಾವಣೆಯೂ ಘೋಷಣೆಯಾಯಿತು. ಸಿಕ್ಕ ಸಿಕ್ಕವರ ಬಳಿ ಫಂಡ್‌ ಸಂಗ್ರಹಿಸಿ ಚುನಾವಣೆಗೆ ನಿಂತ ರೆಡ್ಡಿ ನೇತೃತ್ವದ ಕಾಂಗ್ರೆಸ್‌, ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಯನ್ನು ಧೂಳೀಪಟ ಮಾಡಿತ್ತು. ರೆಡ್ಡಿ ಪಾದಯಾತ್ರೆ ಫಲ ನೀಡಿತ್ತು. ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ 294 ಕ್ಷೇತ್ರಗಳಲ್ಲಿ ಯುಪಿಎ ಬರೋಬ್ಬರಿ 226 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಏಕಾಂಗಿಯಾಗಿ ಕಾಂಗ್ರೆಸ್‌ 185 ಸ್ಥಾನಗಳಲ್ಲಿ ಗೆಲುವು ಸಾಧಿಸಿತು.

ಹೀಗೆ ಮುಖ್ಯಮಂತ್ರಿಯಾದ ರಾಜಶೇಖರ್‌ ರೆಡ್ಡಿ ಜನಪ್ರಿಯ ಯೋಜನೆಗಳ ಸುರಿಮಳೆಯನ್ನೇ ಸುರಿಸಿದರು. ಪರಿಣಾಮ ಅವರು ಬದುಕಿದ್ದಷ್ಟು ದಿನ ಆಂಧ್ರ ಪ್ರದೇಶದ ಅನಭಿಷಿಕ್ತ ದೊರೆಯಾಗಿ ಮೆರೆದರು. ಮುಂದೆ 2009ರಲ್ಲಿ ನಡೆದ ಹೆಲಿಕಾಪ್ಟರ್‌ ಅವಘಡದಲ್ಲಿ ಅವರು ಸಾವನ್ನಪ್ಪಿದ್ದರು. ಅವರ ಈ ಜೀವನದ ಕಥೆಯನ್ನೇ ಇಟ್ಟುಕೊಂಡು ತೆಲುಗು ಮತ್ತು ಮಲಯಾಳ ಭಾಷೆಯಲ್ಲಿ ‘ಯಾತ್ರಾ’ ಎಂಬ ಅದ್ಧೂರಿ ವೆಚ್ಚದ ಚಿತ್ರ ನಿರ್ಮಾಣವಾಗಿದೆ. ಮಲಯಾಳಂ ಸೂಪರ್‌ಸ್ಟಾರ್‌ ಮಮ್ಮುಟ್ಟಿ ರಾಜಶೇಖರ್‌ ರೆಡ್ಡಿ ಪಾತ್ರದಲ್ಲಿ ತೆರೆ ಮೇಲೆ ಮಿಂಚಿದ್ದಾರೆ. ಇನ್ನೇನು ಇದೇ ಫೆಬ್ರವರಿ 8ರಂದು ಚಿತ್ರ ಬಿಡುಗಡೆಯಾಗಲಿದೆ. ಇದೇ ಹೊತ್ತಲ್ಲಿ ಜಗನ್‌ ತಮ್ಮ ಪಾದಯಾತ್ರೆಯನ್ನು ಮುಗಿಸಿರುವುದು ಕಾಕತಾಳೀಯ ಇರಲಿಕ್ಕಿಲ್ಲ.

‘ಯಾತ್ರಾ’ ಸಿನಿಮಾದಲ್ಲಿ ವೈಎಸ್‌ಆರ್‌ ಪಾತ್ರಧಾರಿ ಮಮ್ಮುಟ್ಟಿ.
‘ಯಾತ್ರಾ’ ಸಿನಿಮಾದಲ್ಲಿ ವೈಎಸ್‌ಆರ್‌ ಪಾತ್ರಧಾರಿ ಮಮ್ಮುಟ್ಟಿ.
/ಫಸ್ಟ್‌ಪೋಸ್ಟ್‌

ಅತ್ತ ಸಿನಿಮಾ- ಇತ್ತ ಪಾದಯಾತ್ರೆಯ ಬೆಂಬಲವನ್ನು ಬೆನ್ನಿಗಿಟ್ಟುಕೊಂಡಿರುವ ಜಗನ್ 2014ಕ್ಕಿಂತ ಉತ್ತಮ ಸ್ಥಿತಿಯಲ್ಲಿ ನಾನಿದ್ದೇನೆ ಅಂದುಕೊಂಡಿದ್ದಾರೆ. ಹಾಗೆ ನೋಡಿದರೆ 2014ರ ಚುನಾವಣೆಯಲ್ಲಿ ಅವರ ಪಕ್ಷ ಸೋಲು ಕಂಡರೂ ಟಿಡಿಪಿ ಮತ್ತು ವೈಎಸ್ಆರ್‌ ಕಾಂಗ್ರೆಸ್‌ ನಡುವೆ ಇದ್ದ ಮತಗಳ ಗಳಿಕೆಯ ವ್ಯತ್ಯಾಸ ಕೇವಲ ಶೇ. 2 ಮಾತ್ರ. ಜತೆಗೆ 2014ರಲ್ಲಿ ಟಿಡಿಪಿ ಜತೆ ಬಿಜೆಪಿ ಮತ್ತು ಸ್ಥಳೀಯ ಪಕ್ಷ ಜನಸೇನಾ ಮೈತ್ರಿಯಲ್ಲಿದ್ದವು. ಇವತ್ತು ಅವೆರಡೂ ಪಕ್ಷಗಳು ಅವರ ವಿರುದ್ಧ ನಿಂತಿವೆ.

ಇದರ ಲಾಭವನ್ನು ಪಡೆದುಕೊಳ್ಳಲೂ ಜಗನ್‌ ಮುಂದಾಗಿದ್ದಾರೆ. ಜತೆಗೆ ಬೆಂಬಲಕ್ಕೆ ಇರಲಿ ಎಂದು ನಾಯ್ಡು ಕಟ್ಟಾ ವಿರೋಧಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಜತೆಯೂ ಕೈ ಜೋಡಿಸಿದ್ದಾರೆ. ‘ನಾವಿಬ್ಬರು ಸೇರಿ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ತಂದುಕೊಡುತ್ತೇವೆ’ ಎಂದು ಅವರು ಜನರಲ್ಲಿ ಕನಸು ಬಿತ್ತಿದ್ದಾರೆ.

“ನಾವು ಯಾವುದೆ ರಾಷ್ಟ್ರೀಯ ಪಕ್ಷಗಳನ್ನಾಗಲೀ, ನಾಯ್ಡು ಅವರನ್ನಾಗಲಿ ನಂಬುವುದಿಲ್ಲ. ಅವರೆಲ್ಲರೂ ಆಂಧ್ರ ಪ್ರದೇಶಕ್ಕೆ ವಂಚಿಸಿದ್ದಾರೆ. ಯಾರೆಲ್ಲಾ ಆಂಧ್ರ ಪ್ರದೇಶದ ವಿಶೇಷ ಸ್ಥಾನಮಾನಕ್ಕೆ ಬೆಂಬಲ ನೀಡುತ್ತಾರೋ ಅವರನ್ನು ನಾವು ಬೆಂಬಲಿಸುತ್ತೇವೆ. ಅದಕ್ಕಾಗಿ ನಮಗೆ ಇಲ್ಲಿಂದ 25 ಸಂಸದ ಸ್ಥಾನಗಳು ಬೇಕಾಗಿವೆ ಮತ್ತು ತೆಲಂಗಾಣದ 17 ಸಂಸದರು ನಮ್ಮನ್ನು ಬೆಂಬಲಿಸಲಿದ್ದಾರೆ. ಇದರೊಂದಿಗೆ ನಾವು ದೊಡ್ಡ ಶಕ್ತಿಯಾಗಿ ಹೊರಹೊಮ್ಮಬಹುದು,” ಎಂದು ಜಗನ್‌ ಮೋಹನ್‌ ರೆಡ್ಡಿ ಗುಡುಗಿದ್ದಾರೆ.

ನಾಯ್ಡು ರಾಷ್ಟ್ರ ರಾಜಕಾರಣದ ಸುತ್ತಾಟವನ್ನು ಟೀಕಿಸಿರುವ ಜಗನ್‌, ಎಲ್ಲೆಡೆ ಸುತ್ತಾಡುವವರಿಗೆ ರಾಜ್ಯದ ಜನರ ಸಮಸ್ಯೆಗಳನ್ನು ಪರಿಹರಿಸಲು ಸಮಯವಿಲ್ಲ ಎಂದು ಕಿಡಿಕಾರಿದ್ದಾರೆ. “ನಾಯ್ಡು ಹೋಗಿ ಕುಮಾರಸ್ವಾಮಿ ಜತೆ ಕಾಫಿ ಕುಡಿಯುತ್ತಾರೆ. ಆದರೆ ಅನಂತಪುರದ ರೈತರಿಗಾಗಿ ಸಮಯ ನೀಡುವುದಿಲ್ಲ. ನಾಯ್ಡು ಚೆನ್ನೈಗೆ ಹೋಗಿ ಸ್ಟಾಲಿನ್‌ ಜತೆ ಇಡ್ಲಿ ಸಾಂಬಾರ್‌ ಸವಿಯುತ್ತಾರೆ. ಮಮತಾ ಜತೆ ಕೋಳಿ ತಿನ್ನುತ್ತಾರೆ ಆದರೆ ಜನರ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ,” ಎಂದು ಟೀಕಿಸಿದ್ದಾರೆ.

ಯಾತ್ರೆಯುದ್ಧಕ್ಕೂ ನಾಯ್ಡುರನ್ನು ಟೀಕಿಸುತ್ತಲೇ ಬಂದಿರುವ ರೆಡ್ಡಿ, ತಮ್ಮ ಬೆಂಬಲಿಗರ ಕಾರುಗಳ ಮೇಲೆ ‘ನಾವು ನಿನ್ನನ್ನು ನಂಬುವುದಿಲ್ಲ ಚಂದ್ರಬಾಬು’ ಎನ್ನುವ ಸ್ಟಿಕರ್‌ಗಳು ಇರುವಂತೆ ನೋಡಿಕೊಂಡಿದ್ದರು. ಪ್ರತಿ ದಿನದ ಅಂತ್ಯದಲ್ಲೂ ಆರೋಪಗಳನ್ನು ಮುಗಿಸಿ, “ಈಗ ಜನರು ನಿಮ್ಮನ್ನು ನಂಬುವುದಿಲ್ಲ ಬಾಬು ಎನ್ನುತ್ತಿದ್ದಾರೆ,” ಎಂದು ಮಾತು ಮುಗಿಸುತ್ತಿದ್ದರು.

ದೇಶದ ರಾಜಕೀಯ ಇತಿಹಾಸವನ್ನು ನೋಡಿದರೆ ಪಾದಯಾತ್ರೆಗಳು ಕೈಕೊಟ್ಟ ಉದಾಹರಣೆಗಳು ತೀರಾ ಕಡಿಮೆ. ಹೀಗಾಗಿ ಜಗನ್‌ ನಾಯ್ಡುರನ್ನು ಕೆಳಕ್ಕಿಳಿಸಲಿದ್ದಾರೆ ಎನ್ನುವ ಮಾತುಗಳು ಆಂಧ್ರದಲ್ಲಿವೆ. ಮತ್ತು ಅದಕ್ಕೆ ಬೇಕಾದ ಸಿದ್ಧತೆಗಳನ್ನೂ ಅವರು ಮುಗಿಸಿದ್ದಾರೆ. ಚುನಾವಣೆ ಫಲಿತಾಂಶ ಆಂಧ್ರದಲ್ಲಿ ಮತ್ತೊಂದು ಸುತ್ತಿನ ಯುವ ರಾಜಕಾರಣಕ್ಕೆ ಮುನ್ನುಡಿ ಬರೆಯುತ್ತಾ ಎಂಬುದನ್ನು ಹೇಳಲಿದೆ. ಅದಕ್ಕಾಗಿ ಇನ್ನೊಂದು 120 ದಿನಗಳಷ್ಟೆ ಬಾಕಿ ಇವೆ.