samachara
www.samachara.com
ರಾಜ್ಯಸಭೆಯಲ್ಲಿ ‘ಪೌರತ್ವ ತಿದ್ದುಪಡಿ’ ಗದ್ದಲ; ಮಸೂದೆಗೆ ಅಸ್ಸಾಮಿಗಳ ತೀವ್ರ ವಿರೋಧ ಏಕೆ?
COVER STORY

ರಾಜ್ಯಸಭೆಯಲ್ಲಿ ‘ಪೌರತ್ವ ತಿದ್ದುಪಡಿ’ ಗದ್ದಲ; ಮಸೂದೆಗೆ ಅಸ್ಸಾಮಿಗಳ ತೀವ್ರ ವಿರೋಧ ಏಕೆ?

ಎನ್‌ಡಿಎಗೆ ರಾಜ್ಯಸಭೆಯಲ್ಲಿ ಸಂಖ್ಯಾ ಬಲ ಇಲ್ಲದಿರುವುದರಿಂದ ಪೌರತ್ವ ಮಸೂದೆ ಅಂಗೀಕಾರ ಕಷ್ಟ. ಹೀಗಾಗಿ ಇದು ಹಿಂದೂಗಳ ಓಲೈಕೆಯ ಬಿಜೆಪಿ ಪ್ರಯತ್ನ ಎಂಬುದು ಸ್ಪಷ್ಟ.

ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಪೌರತ್ವ (ತಿದ್ದುಪಡಿ) ಮಸೂದೆಯನ್ನ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಆದರೆ, ರಾಜ್ಯಸಭೆಯಲ್ಲಿ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ವಿಪಕ್ಷಗಳ ಗದ್ದಲದಿಂದ ರಾಜ್ಯಸಭೆ ಕಲಾಪವನ್ನು ಮುಂದೂಡಲಾಗಿದೆ.

ಬಾಂಗ್ಲಾದೇಶ, ಪಾಕಿಸ್ತಾನ, ಆಫ್ಘಾನಿಸ್ತಾನಗಳಿಂದ ವಲಸೆ ಬಂದಿರುವ ಸೂಕ್ತ ದಾಖಲೆಗಳಿಲ್ಲದ ಹಿಂದೂಗಳು, ಜೈನರು, ಪಾರ್ಸಿಗಳು ಸೇರಿದಂತೆ ಮುಸ್ಲಿಮೇತರ ಧರ್ಮೀಯರಿಗೆ ಪೌರತ್ವ ನೀಡುವ ಉದ್ದೇಶದಿಂದ ಈ ಮಸೂದೆ ಮಂಡಿಸಲಾಗಿದೆ. ಧರ್ಮದ ಆಧಾರದಲ್ಲಿ ವಲಸಿಗರಿಗೆ ಪೌರತ್ವ ನೀಡಲು ಬಿಜೆಪಿ ಸರಕಾರ ಮುಂದಾಗಿರುವುದಕ್ಕೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಲೋಕಸಭೆಯ ಒಪ್ಪಿಗೆ ದೊರೆತಿರುವ ನಾಗರಿಕ (ತಿದ್ದುಪಡಿ) ಮಸೂದೆ ಹಾಗೂ ಮೆಲ್ಜಾತಿಗಳ ಬಡವರಿಗೆ 10% ಮೀಸಲಾತಿ ನೀಡುವ ಸಂವಿಧಾನದ 124ನೇ ತಿದ್ದುಪಡಿ ಮಸೂದೆಗಳು ಬುಧವಾರ ರಾಜ್ಯಸಭೆಯಲ್ಲಿ ಚರ್ಚೆಗೆ ಬರುವ ನಿರೀಕ್ಷೆ ಇದೆ. ಆದರೆ, ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಈ ಮಸೂದೆಗಳನ್ನು ಮಂಡಿಸಿರುವ ಬಿಜೆಪಿ ಪೌರತ್ವ ಹಾಗೂ ಮೀಸಲಾತಿ ವಿಚಾರವನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

ಅಸ್ಸಾಂನ ತೀವ್ರ ವಿರೋಧದ ಮಧ್ಯೆಯೂ ಪೌರತ್ವ ಮಸೂದೆ ಮಂಡಿಸಿದ ಕಾರಣಕ್ಕೆ ಅಸ್ಸಾಂನಲ್ಲಿ ಪ್ರತಿಭಟನೆಗಳ ಕಾವು ಹೆಚ್ಚಾಗಿದೆ. ಮೈತ್ರಿ ಪಕ್ಷದ ವಿರೋಧದ ನಡುವೆಯೂ ಕೇಂದ್ರ ಸರಕಾರ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರಿಂದ ಎನ್‌ಡಿಎ ಜತೆಗಿದ್ದ ಅಸ್ಸಾಂ ಗಣ ಪರಿಷತ್‌ (ಎಜಿಪಿ) ಪಕ್ಷ ಎನ್‌ಡಿಎ ಮೈತ್ರಿಕೂಟ ತೊರೆದಿದೆ.

“ಬಾಂಗ್ಲಾದೇಶಿ ವಲಸಿಗರ ಅಕ್ರಮ ವಲಸೆಯನ್ನು ನಾವು ಆರಂಭದಿಂದಲೂ ವಿರೋಧಿಸುತ್ತಲೇ ಬಂದಿದ್ದೇವೆ. 1985ರಲ್ಲಿ ನಮ್ಮ ಪಕ್ಷ ಸ್ಥಾಪನೆಯಾದ ಸಂದರ್ಭದಲ್ಲೇ ಬಾಂಗ್ಲಾದೇಶದಿಂದ ಬರುವ ವಲಸಿಗರನ್ನು ನಿಯಂತ್ರಿಸುತ್ತೇವೆ ಎಂದು ನಾವು ಅಸ್ಸಾಂ ಜನತೆಗೆ ಭರವಸೆ ನೀಡಿದ್ದೇವೆ. ನಮ್ಮ ಪಕ್ಷದ ಆಶಯಕ್ಕೆ ವಿರುದ್ಧವಾಗಿ ಕೇಂದ್ರ ಸರಕಾರ ಮಸೂದೆ ಜಾರಿಗೆ ತರಲು ಹೊರಟಿದೆ. ಹೀಗಾಗಿ ಕೇಂದ್ರದ ಈ ನಿಲುವನ್ನು ವಿರೋಧಿಸಿ ನಾವು ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿದ್ದೇವೆ” ಎಂದು ಅಸ್ಸಾಂ ಗಣ ಪರಿಷತ್‌ನ ಅಧ್ಯಕ್ಷ ಅಥುಲ್‌ ಬೋರಾ ತಿಳಿಸಿದ್ದಾರೆ.

ಅಸ್ಸಾಂನಲ್ಲಿರುವ ಸುಮಾರು 40 ಲಕ್ಷ ವಲಸಿಗರ ಮೇಲೆ ಈ ಮಸೂದೆ ನೇರ ಪರಿಣಾಮ ಬೀರಲಿದೆ. ಅಸ್ಸಾಂನಲ್ಲಿ ಕಳೆದ ವರ್ಷ ನಡೆಸಲಾದ ರಾಷ್ಟ್ರೀಯ ನಾಗರಿಕ ನೋಂದಣಿಯ (ಎನ್‌ಸಿಆರ್) ಅಂತಿಮ ಪಟ್ಟಿಯಿಂದ ಹೊರಗುಳಿದಿರುವ ವಲಸಿಗರಿಗೆ ಈ ಪೌರತ್ವ (ತಿದ್ದುಪಡಿ) ಮಸೂದೆಯ ಮೂಲಕ ಪೌರತ್ವ ಸಿಗುವ ನಿರೀಕ್ಷೆ ಇತ್ತು. ಆದರೆ, ಈ ಮಸೂದೆಯಿಂದ ಮುಸ್ಲಿಮರನ್ನು ಹೊರಗಿಟ್ಟಿರುವ ಕಾರಣಕ್ಕೆ ಅಸ್ಸಾಂನಲ್ಲಿರುವ ಭಾರೀ ಸಂಖ್ಯೆಯ ಮುಸ್ಲಿಮರಿಗೆ ಆತಂಕ ಶುರುವಾಗಿದೆ .

ಆದರೆ, ಮಸೂದೆಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, “ಮಸೂದೆಯ ವ್ಯಾಪ್ತಿಗೆ ತಂದಿರುವ ಧರ್ಮಗಳ ಜನರು ಭಾರತದಿಂದ ಹೊರಗೆ ಹೋಗಿ ಬಾಳುವ ಆಯ್ಕೆಗಳೇ ಇಲ್ಲ. ಹೊಸ ಮಸೂದೆಯಿಂದ ಪೌರತ್ವ ಪಡೆಯುವ ಜನರು ಭಾರತದ ಯಾವ ರಾಜ್ಯದಲ್ಲಾದರೂ ನೆಲೆಸಬಹುದು” ಎಂದಿದ್ದಾರೆ.

Also read: ಮೇಲ್ಜಾತಿ ಬಡವರಿಗೆ 10% ಮೀಸಲಾತಿ: ಮಂಡನೆಯಾದ ಮಸೂದೆಯಲ್ಲೇನಿದೆ?

ಹಿಂದೂಗಳ ಓಲೈಕೆಗೆ ಮಸೂದೆಗಳು:

“ಮೋದಿ ನೇತೃತ್ವದ ಕೇಂದ್ರ ಸರಕಾರ ಲೋಕಸಭಾ ಚುನಾವಣೆಯಲ್ಲಿ ಹಿಂದೂ ಮತದಾರರನ್ನು ಓಲೈಸುವ ಸಲುವಾಗಿಯೇ ಸಂವಿಧಾನದ (124ನೇ ತಿದ್ದುಪಡಿ) ಮಸೂದೆ ಹಾಗೂ ಪೌರತ್ವ (ತಿದ್ದುಪಡಿ) ಮಸೂದೆಗಳನ್ನು ಲೋಕಸಭೆಯಲ್ಲಿ ಅಂಗೀಕರಿಸಿದೆ. ರಾಜ್ಯಸಭೆಯಲ್ಲಿ ಎನ್‌ಡಿಎಗೆ ಸಂಖ್ಯಾಬಲದ ಕೊರತೆ ಇರುವುದು ಗೊತ್ತಿದ್ದೇ ಈ ಮಸೂದೆಗಳನ್ನು ಮಂಡಿಸಲಾಗಿದೆ. ಈ ಮೂಲಕ ಚುನಾವಣೆಯ ವೇಳೆ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ” ಎಂದು ವಿಪಕ್ಷಗಳು ಆರೋಪಿಸಿವೆ.

“ಕೆಲವೇ ಧರ್ಮದ ವಲಸಿಗರನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತರಲು ಹೊರಟಿರುವ ಈ ಮಸೂದೆ ಸಂವಿಧಾನ ವಿರೋಧಿಯಾದುದು. ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರವಾಗುವುದು ಬಹುತೇಕ ಕಷ್ಟ. ಇದು ಅಸ್ಸಾಂನಲ್ಲಿ ಬಿಜೆಪಿಗೆ ತಿರುಗು ಬಾಣವಾಗುವ ಸಾಧ್ಯತೆ ಇದೆ” ಎಂದು ದೆಹಲಿಯ ‘ರೈಟ್ಸ್‌ ಅಂಡ್‌ ರಿಸ್ಕ್ಸ್‌ ಅನಲಿಸಿಸ್‌ ಗ್ರೂಪ್‌’ನ ನಿರ್ದೇಶಕ ಸುಹಾಸ್‌ ಚಕ್ಮ ಅಭಿಪ್ರಾಯಪಟ್ಟಿದ್ದಾರೆ.

ಗಡಿಪಾರಿಗೆ ಒತ್ತಾಯ:

“ಬಾಂಗ್ಲಾದೇಶದಿಂದ ಅಸ್ಸಾಂಗೆ ಬರುವ ವಲಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಲವು ವರ್ಷಗಳಿಂದ ಅಕ್ರಮವಾಗಿ ವಲಸಿಗರು ಅಸ್ಸಾಂ ಸೇರುತ್ತಿದ್ದಾರೆ. ಅಸ್ಸಾಂನಲ್ಲಿ ಈಗಾಗಲೇ ಅಕ್ರಮ ಮುಸ್ಲಿಂ ವಲಸಿಗರ ಸಂಖ್ಯೆ ಹೆಚ್ಚಾಗಿದೆ. ಅಕ್ರಮ ವಲಸಿಗರನ್ನು ಗಡಿಪಾರು ಮಾಡಬೇಕಿದ್ದ ಸರಕಾರ ಅವರಿಗೆ ಪೌರತ್ವ ನೀಡಲು ಮುಂದಾಗಿದೆ. ಧರ್ಮ, ವರ್ಗ ಎಂದು ನೋಡದೆ ಎಲ್ಲಾ ಅಕ್ರಮ ವಲಸಿಗರನ್ನು ಸರಕಾರ ಗಡಿಪಾರು ಮಾಡಬೇಕು” ಎಂದು ಅಸ್ಸಾಂನ ವಿದ್ಯಾರ್ಥಿ ಸಂಘಟನೆಯ (ಎಎಎಸ್‌ಯು) ನಾಯಕ ಸಮುಜ್ಜಲ್‌ ಭಟ್ಟಾಚಾರ್ಯ ಒತ್ತಾಯಿಸಿದ್ದಾರೆ.

1971ರಲ್ಲಿ ಬಾಂಗ್ಲಾ ವಿಮೋಚನೆಯ ನಂತರ ಭಾರತಕ್ಕೆ ವಲಸೆ ಬರುವ ಬಾಂಗ್ಲಾದೇಶಿಯರ ಸಂಖ್ಯೆ ಹೆಚ್ಚಾಗಿದೆ. 1971ಕ್ಕೂ ಮೊದಲು ಭಾರತಕ್ಕೆ ಬಂದ ಬಾಂಗ್ಲಾದೇಶಿಯರಿಗೆ ಭಾರತ ಸರಕಾರ ಪೌರತ್ವ ಮಂಜೂರು ಮಾಡಿದ್ದ ಕಾರಣಕ್ಕೆ ಅಸ್ಸಾಂ ಮೂಲಕ ಭಾರತಕ್ಕೆ ವಲಸೆ ಬರುವ ಬಾಂಗ್ಲಾದೇಶಿಯರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ವಲಸಿಗರ ಹೆಚ್ಚಳ ಅಸ್ಸಾಂಗೆ ದೊಡ್ಡ ಸಮಸ್ಯೆಯಾಗಿದೆ.

ಪೌರತ್ವ (ತಿದ್ದುಪಡಿ) ಮಸೂದೆಯಿಂದ ಮುಸ್ಲಿಮರನ್ನು ಹೊರಗಿಟ್ಟ ಕಾರಣಕ್ಕೆ ಕೆಲವರು ಪ್ರತಿಭಟನೆ ನಡೆಸುತ್ತಿದ್ದರೆ, ಬಾಂಗ್ಲಾದೇಶದ ವಲಸಿಗರನ್ನು ತಡೆಯಬೇಕಾದ ಸರಕಾರ ಅವರಿಗೆ ಪೌರತ್ವ ನೀಡಲು ಮುಂದಾಗಿದೆ ಎಂಬ ಕಾರಣಕ್ಕೆ ಮಸೂದೆಯನ್ನು ವಿರೋಧಿಸಿ ಅಸ್ಸಾಂನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಎನ್‌ಡಿಎಗೆ ರಾಜ್ಯಸಭೆಯಲ್ಲಿ ಸಂಖ್ಯಾ ಬಲ ಇಲ್ಲದಿರುವುದರಿಂದ ಈ ಮಸೂದೆ ಅಂಗೀಕಾರವಾಗುವುದು ಕಷ್ಟ. ಹೀಗಾಗಿ ಇದು ಬಿಜೆಪಿ ಸರಕಾರದ ಹಿಂದೂಗಳ ಓಲೈಕೆಯ ಪ್ರಯತ್ನ ಎಂಬುದು ಬಹುತೇಕ ಸ್ಪಷ್ಟವಾಗುತ್ತಿದೆ.