samachara
www.samachara.com
ಪೌರತ್ವ ಕಾಯ್ದೆ-2016ರ ವಿರುದ್ಧ ಭುಗಿಲೆದ್ದ ಈಶಾನ್ಯ: ಪರ & ವಿರೋಧ ವಾದಗಳ ತಿರುಳು ಏನು? 
COVER STORY

ಪೌರತ್ವ ಕಾಯ್ದೆ-2016ರ ವಿರುದ್ಧ ಭುಗಿಲೆದ್ದ ಈಶಾನ್ಯ: ಪರ & ವಿರೋಧ ವಾದಗಳ ತಿರುಳು ಏನು? 

ಅಸಲಿಗೆ ಏನಿದು ಪೌರತ್ವ ಕಾಯ್ದೆ-2016? ಈ ಕಾಯ್ದೆಯ ವಿರುದ್ಧ ಈಶಾನ್ಯದ ತಕರಾರೇಕೆ? ಈ ಕಾಯ್ದೆಯ ಕುರಿತು ಕೇಂದ್ರದ ನಿಲುವೇನು? ಇಲ್ಲಿದೆ ಕಂಪ್ಲೀಟ್ ಡೀಟೇಲ್.

ಕೇಂದ್ರ ಸರಕಾರದ ನೂತನ ಮೋಟಾರು ಕಾಯ್ದೆ-2016 ರನ್ನು ಖಂಡಿಸಿ ಒಂದೆಡೆ ವಿವಿಧ ಕಾರ್ಮಿಕ ಸಂಘಟನೆಗಳು ಜ.8-9 ರಂದು ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದ್ದರೆ, ಭಾರತ ಪೌರತ್ವ ಕಾಯ್ದೆ-2016 ನ್ನು ಖಂಡಿಸಿ ಅದೇ ದಿನ (ಜ.8) ಈಶಾನ್ಯ ರಾಜ್ಯಗಳು 11 ಗಂಟೆಗಳ ಬಂದ್‌ಗೆ ಕರೆ ನೀಡಿದ್ದವು. ಆದರೆ ‘ಭಾರತ್ ಬಂದ್’ ಮುಂದೆ ಈಶಾನ್ಯ ರಾಜ್ಯಗಳ ಕೂಗು ಯಾರಿಗೂ ಅಷ್ಟಾಗಿ ಕೇಳಿಸಲೇ ಇಲ್ಲ.

ಈಶಾನ್ಯ ರಾಜ್ಯಗಳ ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ಎನ್‌ಡಿಎ ಮಿತ್ರ ಪಕ್ಷಗಳ ವಿರೋಧದ ನಡುವೆಯೂ ಕೇಂದ್ರ ಸರಕಾರ, ಪೌರತ್ವ ಕಾಯ್ದೆ-2016 ನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದೆ. ಆದರೆ ಸರಕಾರದ ಈ ನಡೆಯನ್ನು ವಿರೋಧಿಸಿ ಈಶಾನ್ಯ ಭಾರತದ ಪ್ರಮುಖ ರಾಜಕೀಯ ಪಕ್ಷಗಳು ಹಾಗೂ 8 ಕ್ಕೂ ಅಧಿಕ ವಿದ್ಯಾರ್ಥಿ ಸಂಘಟನೆಗಳು ಮಂಗಳವಾರ ಈಶಾನ್ಯ ಬಂದ್ ಗೆ ಕರೆ ನೀಡಿದ್ದವು.

ಕೇಂದ್ರ ಸರಕಾರದ ಪೌರತ್ವ ಕಾಯ್ದೆ-2016 ವಿರೋದಿಸಿ ಈಶಾನ್ಯ ರಾಜ್ಯದಲ್ಲಿ ಪ್ರತಿಭಟನಾ ನಿರತ ಜನ.
ಕೇಂದ್ರ ಸರಕಾರದ ಪೌರತ್ವ ಕಾಯ್ದೆ-2016 ವಿರೋದಿಸಿ ಈಶಾನ್ಯ ರಾಜ್ಯದಲ್ಲಿ ಪ್ರತಿಭಟನಾ ನಿರತ ಜನ.

ಏನಿದು ಪೌರತ್ವ ಕಾಯ್ದೆ-2016..?

ಪಾಕಿಸ್ತಾನ, ಅಫಘಾನಿಸ್ತಾನ ಹಾಗೂ ಬಾಂಗ್ಲಾದೇಶ ಸೇರಿದಂತೆ ನೆರೆಹೊರೆಯ ದೇಶದಲ್ಲಿರುವ ಹಿಂದೂಗಳಿಗೆ ಭಾರತದ ಪೌರತ್ವ ನೀಡಲಾಗುವುದು ಎಂದು ಬಿಜೆಪಿ 2014ರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲೇ ಹೇಳಿತ್ತು. ಅದರಂತೆ ಭಾರತ ಪೌರತ್ವ ಕಾಯ್ದೆ-1955ನ್ನು ತಿದ್ದುಪಡಿ ಮಾಡಿರುವ ಎನ್‌ಡಿಎ ಸರಕಾರ, ನೂತನ ಕಾಯ್ದೆಯನ್ನು ಜುಲೈ 15, 2016ರಂದು ಲೋಕಸಭೆಯಲ್ಲಿ ಮಂಡಿಸಿತು.

ನೂತನವಾಗಿ ಮಂಡಿಸಲಾಗಿರುವ ಪೌರತ್ವ ಕಾಯ್ದೆ-2016 ಅಡಿಯಲ್ಲಿ ನೆರೆಹೊರೆಯ ದೇಶದಿಂದ ಭಾರತಕ್ಕೆ ಅನಧಿಕೃತವಾಗಿ ಆಗಮಿಸಿರುವ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಭಾರತದ ಪೌರತ್ವ ನೀಡಲು ಅವಕಾಶ ಮಾಡಿಕೊಡಲಾಗಿದೆ. ಈ ಕಾಯ್ದೆಯಿಂದಾಗಿ ಹಿಂದೂಗಳು, ಕ್ರಿಶ್ಚಿಯನ್ನರು, ಜೈನರ, ಬೌದ್ಧರು ಹಾಗೂ ಸಿಖ್ಖರಿಗೆ ಭಾರತದ ಪೌರತ್ವ ಲಭಿಸಲಿದೆ. ಆದರೆ ಇಸ್ಲಾಂ ಧರ್ಮದ ಷಿಯಾ ಹಾಗೂ ಸುನ್ನಿ ಪಂಗಡದವರಿಗೆ ಪೌರತ್ವ ನಿರಾಕರಿಸಲಾಗಿದೆ.

ಪೌರತ್ವ ಕಾಯ್ದೆ-1955 ರಲ್ಲಿ ಯಾವುದೇ ವ್ಯಕ್ತಿ ಭಾರತದ ಪೌರತ್ವ ಪಡೆಯಲು 12 ವರ್ಷ ಭಾರತದಲ್ಲಿ ನೆಲೆಸಿರಬೇಕು ಹಾಗೂ ಆ ಕುರಿತ ಸ್ಪಷ್ಟ ದಾಖಲೆ ಆತನಲ್ಲಿರಬೇಕು ಎನ್ನುತ್ತದೆ. ಅದರೆ ಸರಕಾರ ನೂತನವಾಗಿ ಮಂಡಿಸಿರುವ ಪೌರತ್ವ ಕಾಯ್ದೆ-2016 ರಲ್ಲಿ ವ್ಯಕ್ತಿಯೊಬ್ಬ ವೀಸಾ, ಪಾಸ್‌ಪೋರ್ಟ್ ಸೇರಿದಂತೆ ಯಾವೊಂದು ದಾಖಲೆ ಇಲ್ಲದೆ ಅನಧಿಕೃತವಾಗಿ ಕಳ್ಳತನದಿಂದ ಭಾರತಕ್ಕೆ ಆಗಮಿಸಿದ್ದರೂ, ಅಂತವರಿಗೆ ಪೌರತ್ವ ನೀಡಲು ಅನುವು ಮಾಡಿಕೊಡಲಾಗಿದೆ. ಅಲ್ಲದೆ 12 ವರ್ಷದ ಅವಧಿಯನ್ನು ಕೇವಲ 6 ವರ್ಷಕ್ಕೆ ಇಳಿಸಲಾಗಿದೆ. ಇದೂ ಕೂಡ ವಿರೋಧಕ್ಕೆ ಕಾರಣವಾಗಿದೆ.

ಪೌರತ್ವ ಕಾಯ್ದೆ-೨೦೧೬ ವಿರೋಧಿಸಿ ಅಸ್ಸಾಂನಲ್ಲಿ ಪ್ರತಿಭಟನಾ ನಿರತ ಜನ.
ಪೌರತ್ವ ಕಾಯ್ದೆ-೨೦೧೬ ವಿರೋಧಿಸಿ ಅಸ್ಸಾಂನಲ್ಲಿ ಪ್ರತಿಭಟನಾ ನಿರತ ಜನ.

ಈಶಾನ್ಯ ಬಂದ್, ಭುಗಿಲೆದ್ದ ಗಲಭೆ:

ಮಂಗಳವಾರ ಸರಕಾರ ಲೋಕಸಭೆಯಲ್ಲಿ ಮಂಡಿಸಿರುವ ಪೌರತ್ವ ಕಾಯ್ದೆ-2016ನ್ನು ವಿರೋಧಿಸಿ ಈಶಾನ್ಯ ಭಾರತದಲ್ಲಿ ದೊಡ್ಡ ಗಲಭೆಯೇ ಸೃಷ್ಟಿಯಾಗಿದೆ. ನೂತನ ಮಸೂದೆಯನ್ನು ಖಂಡಿಸಿ ಅಸ್ಸಾಂ ಗಣ ಪರಿಷತ್ ಸೇರಿದಂತೆ ಈಶಾನ್ಯದ ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ಈಶಾನ್ಯ ವಿದ್ಯಾರ್ಥಿ ಒಕ್ಕೂಟ, ಅಸ್ಸಾಮ್ ವಿದ್ಯಾರ್ಥಿ ಪರಿಷತ್ ಸೇರಿದಂತೆ 8ಕ್ಕೂ ಹೆಚ್ಚು ವಿದ್ಯಾರ್ಥಿ ಸಂಘಟನೆಗಳು ಮಂಗಳವಾರ ಈಶಾನ್ಯ ರಾಜ್ಯಗಳ ಬಂದ್‌ಗೆ ಕರೆ ನೀಡಿದ್ದವು.

ಅಸ್ಸಾಂ ಬಂದ್ ಗೆ ಬೆಂಬಲ ಸೂಚಿಸಿ ವಾಣಿಜ್ಯ ಸಂಸ್ಥೆಗಳು ಹಾಗೂ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಮುಚ್ಚಲಾಗಿತ್ತು. ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಬ್ದವಾಗಿತ್ತು. ಪ್ರತಿಭಟನಾಕಾರರು ರಸ್ತೆಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಟೈರ್ ಸುಟ್ಟು ಪ್ರತಿಭಟಿಸಿದ್ದರು. ಕೆಲವೆಡೆ ರೈಲು ಸಂಚಾರಕ್ಕೆ ಅಡ್ಡಿಪಡಿಸಲಾಗಿದ್ದರೆ, ಮತ್ತೆ ಕೆಲವೆಡೆ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ. ಪ್ರತಿಭಟನೆಯಲ್ಲಿ ೫ ಜನರಿಗೆ ತೀವ್ರ ಗಾಯಗಳಾಗಿದ್ದವು ಎಂದು ವರದಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಒಟ್ಟಾರೆ ಈಶಾನ್ಯ ರಾಜ್ಯಗಳ ಬಂದ್ ನಿಂದಾಗಿ ಮಂಗಳವಾರ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿತ್ತು.

ಈಶಾನ್ಯ ಭಾರತ ಬಂದ್ ಎಫೆಕ್ಟ್‌....
ಈಶಾನ್ಯ ಭಾರತ ಬಂದ್ ಎಫೆಕ್ಟ್‌....

ಬಿಜೆಪಿ ಹೇಳುವುದುದೇನು..?

ಪೌರತ್ವ ಕಾಯ್ದೆ-2016 ಕುರಿತು ಮಂಗಳವಾರ ಪ್ರತಿಕ್ರಿಯಿಸಿದ್ದ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ "ಭಾರತದ ನೆರೆಹೊರೆಯ ದೇಶದಲ್ಲಿ ಕಿರುಕುಳ ಅನುಭವಿಸುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ನೆರವು ನೀಡುವುದು ಈ ಮಸೂದೆಯ ಉದ್ದೇಶ. ಅಲ್ಲಿನ ಅಲ್ಪ ಸಂಖ್ಯಾತರಿಗೆ ಭಾರತ ಬಿಟ್ಟು ಬೇರೆ ನೆಲೆ ಇಲ್ಲ. ತೊಂದರೆಗೊಳಗಾದ ನೆರೆಹೊರೆಯ ದೇಶದ ಅಲ್ಪ ಸಂಖ್ಯಾತರಿಗೆ ಆಶ್ರಯ ನೀಡಬೇಕು ಎಂಬುದನ್ನು ದೇಶದ ಮೊದಲ ಪ್ರಧಾನಿ ಜವಹರ್‌ಲಾಲ್ ಸೇರಿದಂತೆ ಹಲವರು ಪ್ರತಿಪಾದಿಸಿದ್ದಾರೆ" ಎಂದು ಇತಿಹಾಸದ ಕಡೆಗೆ ಮುಖ ಮಾಡಿದ್ದರು.

ಇನ್ನೂ ಬುಧವಾರ ಮಹಾರಾಷ್ಟ್ರದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರದಾನಿ ಮೋದಿ, "ಪೌರತ್ವ ಕಾಯ್ದೆ-2016 ಅಡಿಯಲ್ಲಿ ಮುಸ್ಲೀಮೇತರ ಅಲ್ಪಸಂಖ್ಯಾತ ಸಮುದಾಯಕ್ಕೆ ಭಾರತದ ಪೌರತ್ವ ನೀಡುವುದರಿಂದ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯದ ಯುವಕರ ಹಕ್ಕು ಬಾದ್ಯತೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು" ಸ್ಪಷ್ಟನೆ ನೀಡಿದ್ದಾರೆ.

ಮಿತ್ರಕೂಟದಲ್ಲೇ ಬಿನ್ನಾಭಿಪ್ರಾಯ

ಬಿಜೆಪಿ ನಿಲುವಿಗೆ ಎನ್‌ಡಿಎ ಮಿತ್ರಕೂಟದಲ್ಲೇ ಬಿನ್ನಾಭಿಪ್ರಾಯ ಭುಗಿಲೆದ್ದಿದೆ. ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಪ್ರಮುಖ ರಾಜಕೀಯ ಪಕ್ಷಗಳು ಸರಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸಿವೆ. ಮಸೂದೆಯನ್ನು ವಿರೋಧಿಸಿ ಅಸ್ಸಾಂ ಗಣ ಪರಿಷತ್ (ಎಜಿಪಿ) ಈಗಾಗಲೇ ಎನ್‌ಡಿಎ ಮೈತ್ರಿಕೂಟವನ್ನು ತೊರೆದಿದೆ.

ಮಿಜೋರಾಂ, ಘೇಘಾಲಯ ಸರಕಾರಗಳು ಈಗಾಗಲೇ ಲೋಕಸಭೆಯಲ್ಲಿ ಈ ಮಸೂದೆಯನ್ನು ವಿರೋಧಿಸಿ ನಿರ್ಣಯ ಮಂಡಿಸಿವೆ. ಇದಲ್ಲದೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಸೇರಿದಂತೆ ಕಾಂಗ್ರೆಸ್ ಮಿತ್ರಪಕ್ಷವಾದ ಶೀವಸೇನೆ ಹಾಗೂ ಜೆಡಿಯು ಸಹ ಈ ಮಸೂದೆಯನ್ನು ಖಂಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮೇಘಾಲಯ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಪೀಪಲ್ ಪಾರ್ಟಿ (ಎನ್‌ಪಿಪಿ) ಅಧ್ಯಕ್ಷ ಕೆ. ಸಂಗ್ಮಾ, "ಇದು ತೀರಾ ಅನಿರೀಕ್ಷಿತ ಬೆಳವಣಿಗೆ. ನಮ್ಮ ವಿರೋಧದ ನಡುವೆಯೂ ಸರಕಾರ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದೆ. ಹೀಗಾಗಿ ಎನ್‌ಪಿಪಿ ಪಕ್ಷದ ಎಲ್ಲಾ ಮುಖಂಡರ ಸಭೆ ಕರೆಯಲಾಗಿದೆ,” ಎಂದಿದ್ದಾರೆ.

ಸಭೆಯಲ್ಲಿ ಚರ್ಚಿಸಿದ ನಂತರ ಎನ್‌ಡಿಎ ಮೈತ್ರಿಕೂಟದಲ್ಲಿ ಮುಂದುವರಿಯಬೇಕೆ? ಅಥವಾ ಮೈತ್ರಿಕೂಟ ತೊರೆಯಬೇಕೆ? ಎಂದು ನಿರ್ಣಯಿಸಲಾಗುವುದು ಎಂದಿದ್ದಾರೆ.

ನಿನ್ನೆಯ ಈಶಾನ್ಯ ರಾಜ್ಯಗಳ ಬಂದ್ ಬೆಂಬಲಿಸಿದ್ದ ಮಿಜೋರಾಮ್ ಮುಖ್ಯಮಂತ್ರಿ ಹಾಗೂ ಎನ್‌ಡಿಎ ಭಾಗವಾಗಿರುವ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ಪಕ್ಷದ ಮುಖ್ಯಸ್ಥ ಜೋರಾಮ್ತಾಂಗ, "ಕೇಂದ್ರ ಸರಕಾರ ಲೋಕಸಭೆಯಲ್ಲಿ ಮಂಡಿಸಿರು ಪೌರತ್ವ ಕಾಯ್ದೆ-೨೦೧೬ ದೇಶದ ಜಾತ್ಯಾತೀತ ವ್ಯವಸ್ಥೆಗೆ ವಿರುದ್ಧವಾದದ್ದು, ಹಾಗೂ ಈ ಮಸೂದೆ ಈಶಾನ್ಯ ಭಾಗದ ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ," ಎಂದು ಕಿಡಿಕಾರಿದ್ದಾರೆ.

ಇದಲ್ಲದೆ ಈಶಾನ್ಯ ರಾಜ್ಯದ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಕೇಂದ್ರ ಸರಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸಿವೆ.

ಪೌರತ್ವ ಕಾಯ್ದೆ-2016ರ ಕುರಿತ ತಕರಾರುಗಳೇನು.?

ಭಾರತದ ನೆರೆಹೊರೆಯ ದೇಶದಿಂದ ಅನಧಿಕೃತವಾಗಿ ಭಾರತಕ್ಕೆ ಆಗಮಿಸಿರುವ ಬಹುತೇಕ ಅಲ್ಪ ಸಂಖ್ಯಾತರ ಪ್ರಮುಖ ಆಶ್ರಯ ತಾಣ ಈಶಾನ್ಯ ಭಾರತ. ಕೇಂದ್ರ ಸರಕಾರವೇ ನೀಡುವ ಅಂಕಿಅಂಶಗಳ ಪ್ರಕಾರ ಈಶಾನ್ಯ ಭಾಗದಲ್ಲಿ ಶೇ.18ರಷ್ಟು ಅನಧಿಕೃತ ವಲಸಿಗರಿದ್ದಾರೆ.

ಕೇಂದ್ರ ಸರಕಾರ ನೂತನವಾಗಿ ಮಂಡಿಸಿರುವ ಪೌರತ್ವ ಕಾಯ್ದೆ-2016ರ ಪ್ರಕಾರ ಈ ಎಲ್ಲಾ ವಲಸೆಗಾರರಿಗೂ ಭಾರತದ ಪೌರತ್ವ ಲಭ್ಯವಾಗುತ್ತದೆ. ಸರಕಾರದ ಈ ನಡೆಯಿಂದ ಸ್ಥಳೀಯ ಸಂಸ್ಖೃತಿ ಹರಣವಾಗಲಿದೆ. ಈಶಾನ್ಯ ಭಾಗದ ವಿಶಿಷ್ಟ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಮೇಲೆ ಪ್ರಭಾವ ಬೀರಲಿದೆ. ಅಲ್ಲದೆ ಸ್ಥಳೀಯ ಯುವಕರಿಗೆ ಸಿಗಬೇಕಾದ ಅವಕಾಶಗಳಿಗೆ ವಲಸಿಗರೆ ಪ್ರಬಲ ಪ್ರತಿಸ್ಫರ್ಧಿಗಳಾಗುತ್ತಾರೆ. ಇದರಿಂದ ಈಶಾನ್ಯ ರಾಜ್ಯದ ಯುವಕರು ಉದ್ಯೋಗಾವಕಾಶ ವಂಚಿತರಾಗುವ ಸಾಧ್ಯತೆ ಇದೆ ಎನ್ನುವುದು ಈ ಮಸೂದೆಯನ್ನು ವಿರೋಧಿಸುವವರ ವಾದ.

ಒಟ್ಟಿನಲ್ಲಿ ನೆರೆಯ ದೇಶಗಳಲ್ಲಿ ಕಿರುಕುಳ ಅನುಭವಿಸುತ್ತಿರುವ ಅಲ್ಪ ಸಂಖ್ಯಾತರಿಗೆ ಭಾರತದಲ್ಲಿ ಬದುಕಲು ಅವಕಾಶ ಕಲ್ಪಿಸಿಕೊಡಬೇಕು ಎನ್ನುವ ವಾದ ಕೇಂದ್ರ ಸರಕಾರದ್ದಾದರೆ, ಅತಿ ಹೆಚ್ಚು ವಲಸಿಗರಿಂದಲೇ ತುಂಬಿ ಹೋಗಿರುವ ಈಶಾನ್ಯ ರಾಜ್ಯಕ್ಕೆ, ತಮ್ಮ ಸ್ಥಳೀಯ ಸಂಸ್ಕೃತಿ ಹಾಗೂ ಯುವಕರ ಅವಕಾಶಗಳ ಕುರಿತ ಚಿಂತೆ. ವಾದ-ವಿವಾದಗಳು ಏನೇ ಇರಲಿ ಪ್ರಜಾಪ್ರಭುತ್ವ ಪರಿಕಲ್ಪನೆಯಡಿಯಲ್ಲಿ ಕೇಂದ್ರ ಸರಕಾರಗಳು ಯಾವುದೇ ನಿರ್ಣಯ ತಳೆಯುವ ಮುನ್ನ ಎಲ್ಲಾ ರಾಜ್ಯಗಳ ಅಭಿಪ್ರಾಯ ಪಡೆಯುವುದು ಕಡ್ಡಾಯ. ಆದರೆ ಪೌರತ್ವ ಕಾಯ್ದೆ-2016 ಸಂಬಂಧಿಸಿದಂತೆ ಕೇಂದ್ರ ಸರಕಾರ ಈಶಾನ್ಯ ರಾಜ್ಯಗಳ ಅಭಿಪ್ರಾಯವನ್ನು ಪರಿಗಣಿಸದೇ ಹೋದದ್ದು ಮಾತ್ರ ದುರಂತವೇ ಸರಿ. ಇದರ ಮುಂದುವರಿದ ಭಾಗವಾಗಿ ಅವರ ಬಂದ್, ಹರತಾಳಗಳು ದೇಶದ ಗಮನ ಸೆಳೆಯದೇ ಹೋಗಿದ್ದು ಮತ್ತೊಂದು ದೊಡ್ಡ ದುರಂತ ಅಷ್ಟೆ.