samachara
www.samachara.com
ಸೌಲಭ್ಯವೂ ಇಲ್ಲ, ಉಪನ್ಯಾಸಕರೂ ಇಲ್ಲ: ಇದು ಸಿದ್ದಾಪುರ ಗ್ರಾಮದ ಐಟಿಐ ಕಾಲೇಜಿನ ದುಃಸ್ಥಿತಿ
COVER STORY

ಸೌಲಭ್ಯವೂ ಇಲ್ಲ, ಉಪನ್ಯಾಸಕರೂ ಇಲ್ಲ: ಇದು ಸಿದ್ದಾಪುರ ಗ್ರಾಮದ ಐಟಿಐ ಕಾಲೇಜಿನ ದುಃಸ್ಥಿತಿ

ನಿರುದ್ಯೋಗ ಸಮಸ್ಯೆ ಬೆಟ್ಟದಷ್ಟು ಬೆಳೆದಿರುವ ಹೊತ್ತಲ್ಲಿ, ಯುವ ಜನರಿಗೆ ಸ್ವ ಉದ್ಯೋಗದ ದಾರಿ ತೋರಬೇಕಾಗಿದ್ದ ಆಲೂರು ಸಿದ್ಧಾಪುರದ ಐಟಿಐ ಕಾಲೇಜು ದುಃಸ್ಥಿತಿಯಗಳನ್ನೇ ಹಾಸು ಹೊದ್ದು ಕುಳಿತಿದೆ. 

ಕೊಡಗಿನ ತಾಲ್ಲೂಕು ಕೇಂದ್ರಗಳಲ್ಲಿ ಒಂದಾದ ಸೋಮವಾರಪೇಟೆಯಿಂದ 15 ಕಿಲೋಮೀಟರ್ ದೂರದಲ್ಲಿದೆ ಆಲೂರು ಸಿದ್ದಾಪುರ. ಇವತ್ತಿಗೆ ಆಲೂರು ಸಿದ್ಧಾಪುರ ಒಂದು ಮಾದರಿ ಗ್ರಾಮವಾಗಿ ಮಾರ್ಪಟ್ಟಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿ ಆಗಿದ್ದ ಜೆ.ಎಸ್. ವೀರೂಪಾಕ್ಷಯ್ಯನವರು ಕಾರಣ.

ಕೇವಲ ಒಂದು ದಶಕದ ಹಿಂದೆ ಕೊಡಗಿನ ಎಲ್ಲಾ ಗ್ರಾಮಗಳಂತೆ ಆಲೂರು ಸಿದ್ದಾಪುರ ಗ್ರಾಮವೂ ಇತ್ತು. ಆದರೆ ತಮ್ಮ ಹುಟ್ಟೂರನ್ನು ಅಭಿವೃದ್ದಿ ಮಾಡಿ ಕನಿಷ್ಟ ಹೋಬಳಿ ಕೇಂದ್ರವನ್ನಾಗಿ ಮಾಡಬೇಕೆಂದು ಪಣ ತೊಟ್ಟಿದ್ದರು ಕೆಎಎಸ್ ಅಧಿಕಾರಿಯಾಗಿ ನಿವೃತ್ತರಾದ ವೀರೂಪಾಕ್ಷಯ್ಯ. ಇವರ ಅವಿರತ ಶ್ರಮದಿಂದಾಗಿ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ, ಪದವಿ ಪೂರ್ವ ಕಾಲೇಜು, ಸರ್ಕಾರಿ ಐಟಿಐ, ಮೊರಾರ್ಜಿ ವಸತಿ ಶಾಲೆ ಹಾಗೂ ಇನ್ನಿತರ ಸೌಲಭ್ಯಗಳೂ ಬಂದಿವೆ.

ವಿರೂಪಾಕ್ಷಯ್ಯ ಬಿ.ಎಸ್. ಯಡಿಯೂರಪ್ಪನವರ ಆಪ್ತ ಕಾರ್ಯದರ್ಶಿಯಾಗಿದ್ದ ಕಾಲದಲ್ಲಿ¸2008ರಲ್ಲೇ ಆಲೂರು ಸಿದ್ಧಾಪುರಕ್ಕೆ ಐಟಿಐ ಕಾಲೇಜಿಗೆ ಬೇಡಿಕೆ ಇಟ್ಟಿದ್ದರು. ಹೀಗೆ 2008ರಲ್ಲಿ ರಾಜ್ಯ ಸರ್ಕಾರ ಆಲೂರು ಸಿದ್ದಾಪುರಕ್ಕೆ ಐಟಿಐ ಕಾಲೇಜ್ ಒಂದನ್ನು ಮಂಜೂರು ಮಾಡಿತು.

ಆಪ್ತ ಕಾರ್ಯದರ್ಶಿಗಳ ಆಸ್ಥೆಯಿಂದ ಸುಮಾರು ಎರಡು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಭವ್ಯ ಕಟ್ಟಡವೂ ಎದ್ದು ನಿಂತಿತು. ಇದರ ಉದ್ಘಾಟನೆಗೆ ಸ್ವತಃ ಯಡಿಯೂರಪ್ಪ ಅವರೇ ಬಂದಿದ್ದರು. ನೂತನವಾಗಿ ಆರಂಭಗೊಂಡ ಈ ಕಟ್ಟಡದ ಜತೆಗೇ ಎಲ್ಲ ಯಂತ್ರೋಪಕರಣಗಳೂ, ಸವಲತ್ತುಗಳೂ ಕಾಲೇಜಿಗೆ ಬಂದವು. ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರಿಂದಲೂ ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿತು. ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಯಿತು. ನೆನಪಿಡಿ ಇದೆಲ್ಲಾ ನಡೆದಿದ್ದು ತಾಲೂಕು ಕೇಂದ್ರವಾದ ಸೋಮವಾರಪೇಟೆಯಿಂದ 15 ಕಿಲೋಮೀಟರ್‌ ದೂರದಲ್ಲಿ. ಅದೂ ಒಂದು ಗ್ರಾಮದಲ್ಲಿ.

ಆದರೆ ಕಳೆದ ಐದು ವರ್ಷಗಳಿಂದ ಈ ಐಟಿಐ ಕಾಲೇಜಿಗೆ ಗ್ರಹಣ ಹಿಡಿದಿದೆ. ಒಂದು ಕಾಲದಲ್ಲಿ ಶೈಕ್ಷಣಿಕವಾಗಿ ಲವಲವಿಕೆಯಿಂದ ಇದ್ದ ಕಾಲೇಜು ಇಂದು ಪಾಳು ಬಿದ್ದಿದೆ. ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದೆ. ಸಿಬ್ಬಂದಿಗಳು, ಉಪನ್ಯಾಸಕರ ನೇಮಕವೇ ಆಗದೆ ಶೇಕಡಾ 90ರಷ್ಟು ಸ್ಥಾನಗಳು ಖಾಲಿ ಉಳಿದಿವೆ.

ಪರಿಣಾಮ ನಿರುದ್ಯೋಗ ಸಮಸ್ಯೆ ಬೆಟ್ಟದಷ್ಟು ಬೆಳೆದಿರುವ ಹೊತ್ತಲ್ಲಿ, ಯುವ ಜನರ ಕೈಗೆ ಉದ್ಯೋಗ ನೀಡಬೇಕಾಗಿದ್ದ, ಸ್ವ ಉದ್ಯೋಗದ ದಾರಿ ತೋರಬೇಕಾಗಿದ್ದ ಆಲೂರು ಸಿದ್ಧಾಪುರದ ಐಟಿಐ ಇದ್ದೂ ಇಲ್ಲದಂತಾಗಿದೆ. ಕೋಟಿಗಟ್ಟಲೆ ಹಣ ಖರ್ಚು ಮಾಡಿ ಗ್ರಾಮವೊಂದರಲ್ಲಿ ಕಟ್ಟಿದ ಅಪೂರ್ವ ಶಿಕ್ಷಣದ ದೇಗುಲ ಬಾಗಿಲೆಳೆದುಕೊಳ್ಳುವತ್ತ ಸಾಗಿದೆ.

ಸಮಸ್ಯೆ ಏನು?

ಸುಮಾರು 2,063 ಚದರ ಮೀಟರ್‌ಗಳ ವಿಸ್ತೀರ್ಣದ ಭವ್ಯ ಮತ್ತು ವಿಶಾಲವಾದ ಕಟ್ಟಡ ಆಲೂರು ಸಿದ್ಧಾಪುರ ಐಟಿಐ ಆವರಣದಲ್ಲಿ ತಲೆ ಎತ್ತಿತ್ತು. ಸರ್ಕಾರ ಇಲ್ಲಿ ಕಟ್ಟಡ ಕಟ್ಟಿ, ಐಟಿಐ ಆರಂಭಿಸಿದಾಗ ಇಲ್ಲಿಗೆ 10 ಉಪನ್ಯಾಸಕರ ಹುದ್ದೆಗಳನ್ನು ಮಂಜೂರು ಮಾಡಲಾಗಿತ್ತು. ಬೋಧಕೇತರ ಸಿಬ್ಬಂದಿಗಳು, ಡಿ ದರ್ಜೆ ನೌಕರರು ಎಲ್ಲಾ ಸೇರಿದರೆ ಕಾಲೇಜಿನಲ್ಲಿ ಇರಬೇಕಾಗಿದ್ದ ಸಿಬ್ಬಂದಿಗಳ ಸಂಖ್ಯೆ ಬರೋಬ್ಬರಿ 26. ಆದರೆ ಕಾಲೇಜು ಪ್ರಾರಂಭದಿಂದಲೂ ಸರ್ಕಾರ ಇಲ್ಲಿಗೆ ಹುದ್ದೆಗಳನ್ನು ಮಂಜೂರು ಮಾಡಿತೇ ಹೊರತು ಅದಕ್ಕೆ ಸೂಕ್ತ ವ್ಯಕ್ತಿಗಳನ್ನು ನೇಮಿಸಲಿಲ್ಲ. ಆರಂಭದಲ್ಲಿ ಕೇವಲ ಎರಡು ಸಿಬ್ಬಂದಿಗಳನ್ನು ನೇಮಿಸಲಾಯಿತು. ಅದೂ ಕೂಡ ಎರವಲು ಸೇವೆಯ ಮೇಲೆ. ಈಗ ಇಲ್ಲಿ ಅತಿಥಿ ಉಪನ್ಯಾಸಕರೇ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಕಾಲೇಜಿಗೆ ಪೂರ್ಣ ಪ್ರಮಾಣದ ಸಿಬ್ಬಂದಿಗಳನ್ನು ನೇಮಕ ಮಾಡಲು, ಆ ಮೂಲಕ ಐಟಿಐ ಶಿಕ್ಷಣಕ್ಕೊಂದು ಶಾಶ್ವತ ರೂಪುರೇಷೆ ನೀಡಲು ಸರಕಾರಕ್ಕೆ ಸಾಧ್ಯವಾಗಿಲ್ಲ.

ತಳ ಅಂತಸ್ತಿನಲ್ಲಿ ಕಾಲೇಜು ಉದ್ಘಾಟನೆಯಾದ ಬಳಿಕ ಇಲ್ಲಿ ಮೊದಲ ಅಂತಸ್ತು ನಿರ್ಮಾಣ ಮಾಡಲು 2010ರಲ್ಲೇ ಸರಕಾರ 3 ಕೋಟಿ ರೂಪಾಯಿ ವೆಚ್ಚದ ಟೆಂಡರ್ ನೀಡಿತ್ತು. ಆದರೆ ಈವರೆಗೆ ಕಟ್ಟಡ ಕಾಮಗಾರಿ ಪೂರ್ಣಗೊಂಡು ಅದನ್ನು ಕಾಲೇಜಿಗೆ ಹಸ್ತಾಂತರಿಸಿಲ್ಲ. ಈಗ ಕಳಪೆ ಕಾಮಗಾರಿಯಿಂದಾಗಿ ಸೂರು ಕೂಡ ಮಳೆಗಾಲದಲ್ಲಿ ಸೋರುತ್ತಿದೆ. ಅದರ ದುರಸ್ತಿ ಕಾರ್ಯವೂ ನಡೆದಿಲ್ಲ.

ಈ ಕುರಿತು ‘ಸಮಾಚಾರ’ದೊಂದಿಗೆ ಮಾತನಾಡಿದ ಕಾಲೇಜಿನ ತರಬೇತಿ ಅಧಿಕಾರಿ ಗಂಗಾಧರ್, ತಾವು ಮತ್ತು ಕಾಲೇಜಿನ ಪ್ರಿನ್ಸಿಪಾಲ್ ಶಿವ ಕುಮಾರ್ ಮಾತ್ರ ಖಾಯಂ ನೌಕರರಾಗಿದ್ದೇವೆ. ಉಳಿದ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎನ್ನುವ ವಿವರ ನೀಡಿದರು. ಸಿಬ್ಬಂದಿಗಳ ಕೊರತೆಯಿಂದ ಕಾಲೇಜಿನ ತುಂಬಾ ಕಸ-ಕಡ್ಡಿ ತುಂಬಿ ತುಳುಕಾಡುತ್ತಿದೆ. ಕಸ ಗುಡಿಸುವವರ ಹುದ್ದೆ ಹಲವು ವರ್ಷಗಳಿಂದ ಖಾಲಿ ಬಿದ್ದಿದೆ. ಬಾಲಕರ ಶೌಚಾಲಯ ಕಟ್ಟಿ ತಿಂಗಳುಗಳೇ ಉರುಳಿದ್ದರೂ ಸ್ವಚ್ಛ ಮಾಡುವವರಿಲ್ಲದೆ ಶೌಚಕ್ಕೆ ಬಯಲನ್ನೇ ಆಶ್ರಯಿಸುವ ಪರಿಸ್ಥಿತಿ ಇದೆ.

ಅತ್ತ ಕಾಲೇಜಿನ ಕಟ್ಟಡವನ್ನೇ ಪೂರ್ಣಗೊಂಡಿಲ್ಲ. ಇತ್ತ ಸಿಬ್ಬಂದಿಗಳಿಗಾಗಿ 8 ವಸತಿ ಗೃಹಗಳ ನಿರ್ಮಾಣ ಮಾಡಲಾಗಿದ್ದು ಅವುಗಳಿಗೆ ಇನ್ನೂ ನೀರು ಹಾಗೂ ವಿದ್ಯುತ್ ಸಂಪರ್ಕ ನೀಡಿಲ್ಲ. ಹೀಗಾಗಿ ಇವು ಸ್ಥಳೀಯ ಪುಂಡ ಪೋಕರಿಗಳ ರಾತ್ರಿ ಚಟುವಟಿಕೆಗಳ ತಾಣಗಳಾಗಿವೆ. ನಿರ್ಮಾಣ ಕೆಲಸ ಪೂರ್ಣಗೊಂಡಿರುವ ನಾಲ್ಕು ವಸತಿ ಗೃಹಗಳಲ್ಲೂ ವಾಸಿಸುವವರಿಲ್ಲದೆ ಪಾಳು ಬಿದ್ದಿವೆ. ಅಷ್ಟಕ್ಕೂ ಸಿಬ್ಬಂದಿಗಳೇ ನೇಮಕವಾಗದಿದ್ದಾಗ ಇದನ್ನು ಬಳಸುವವರಾದರೂ ಯಾರು?

ಸಿಬ್ಬಂದಿಗಳನ್ನು ನೇಮಿಸಿ, ಕಾಲೇಜು ಕಟ್ಟಡ ಪೂರ್ಣಗೊಳಿಸಿಕೊಡಿ, ಇರುವ ಸೌಲಭ್ಯಗಳು ಜನರಿಗೆ ಉಪಯೋಗವಾಗಲಿ ಎಂದು ಮೇಲಧಿಕಾರಿಗಳಿಗೆ ಹತ್ತಾರು ಪತ್ರ ಬರೆದರೂ ಪರಿಣಾಮ ಶೂನ್ಯ ಎಂದು ಅಲವತ್ತುಕೊಳ್ಳುತ್ತಾರೆ ತರಬೇತಿ ಅಧಿಕಾರಿ ಗಂಗಾಧರ್.

ಒಟ್ಟಾರೆ ಇಲ್ಲಿಗೆ ಸರ್ಕಾರ ಇಲ್ಲಿಯವರಗೆ ಸುಮಾರು 10 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ವೆಚ್ಚ ಮಾಡಿದೆ. ಆದರೆ ಸೂಕ್ತ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇದರ ಸದುಪಯೋಗವಾಗುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟವರು ಇದರ ಬಗ್ಗೆ ಎಚ್ಚೆತ್ತುಕೊಂಡರೆ ಊರಿಗೂ ಉಪಕಾರವಾಗಲಿದೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯಕ್ಕೂ ಬುನಾದಿ ಹಾಕಿಕೊಟ್ಟಂತಾಗುತ್ತದೆ.