ಐಎಎಸ್‌ ಹುದ್ದೆಗೆ ರಾಜೀನಾಮೆ; ರಾಜಕೀಯದ ಕಡೆಗೆ 2009ರ ಟಾಪರ್ ಶಾ ಫೈಸಲ್‌ ನಡಿಗೆ! 
COVER STORY

ಐಎಎಸ್‌ ಹುದ್ದೆಗೆ ರಾಜೀನಾಮೆ; ರಾಜಕೀಯದ ಕಡೆಗೆ 2009ರ ಟಾಪರ್ ಶಾ ಫೈಸಲ್‌ ನಡಿಗೆ! 

ಶಾ ಫೈಸಲ್‌ ತೀರ್ಮಾನವನ್ನು ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಓಮರ್‌ ಅಬ್ದುಲ್ಲಾ ಸ್ವಾಗತಿಸಿದ್ದು, “ಕಾರ್ಯಾಂಗದ ಸೋಲು, ರಾಜಕಾರಣದ ಗೆಲುವು,” ಎಂದು ಟ್ಟೀಟ್‌ ಮಾಡಿದ್ದಾರೆ.

ಸಾಮಾನ್ಯವಾಗಿ ವ್ಯವಸ್ಥೆಯೊಂದರ ಮೇಲೆ ನಂಬಿಕೆ ಕಳೆದುಕೊಂಡವರು ಅದರ ವಿರುದ್ಧ ಸಿನಿಕರಾಗುತ್ತಾರೆ. ಸ್ವಲ್ಪ ತಾಳ್ಮೆ ಇರುವವರು ವ್ಯವಸ್ಥೆಯೊಳಗೆ ಸೇರಿ ಅದನ್ನು ಸ್ವಚ್ಛಗೊಳಿಸಲು ಮುಂದಾಗುತ್ತಾರೆ. ಎರಡನೇ ಸಾಲಿಗೆ ಸೇರಿದವರು ಶಾ ಫೈಸಲ್‌.

ಶಾ ಫೈಸಲ್‌ ಹಿಂಸಾಚಾರ ಪೀಡಿತ ಜಮ್ಮು ಮತ್ತು ಕಾಶ್ಮೀರ ರಾಜ್ಯದಿಂದ ಬಂದವರು. 2009ರಲ್ಲಿ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಕ್ಕೆ ಮೊದಲ ರ್ಯಾಂಕ್‌ ಗಿಟ್ಟಿಸಿದವರು. ಈ ಮೂಲಕ ಕಣಿವೆ ರಾಜ್ಯದಲ್ಲಿ ಮಿಂಚು ಹರಿಸಿದವರು; ಇಲ್ಲಿನ ಯುವ ಜನತೆಯಲ್ಲಿ ಹೊಸ ಆಶಾಭಾವನೆ ಬಿತ್ತಿದವರು. ಐಎಎಸ್‌ ಅಧಿಕಾರಿಯಾಗಿ ವ್ಯವಸ್ಥೆಯನ್ನು ಬದಲಿಸಲು ಹೊರಟಿದ್ದ ಅವರು ಅದೇ ಕಾರ್ಯಾಂಗದ ಮೇಲೆ ನಂಬಿಕೆ ಕಳೆದುಕೊಂಡು ಈಗ ಅದರಿಂದ ಹೊರ ಬಂದಿದ್ದಾರೆ. ಸರಕಾರಿ ಹುದ್ದೆಗೆ ರಾಜೀನಾಮೆ ಬಿಸಾಕಿರುವ ಫೈಸಲ್‌ ಕಾಶ್ಮೀರದ ಜನರಿಗಾಗಿ ರಾಜಕೀಯ ಹಾದಿ ತುಳಿಯುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಟ್ಟೀಟ್‌ ಮಾಡಿರುವ ಅವರು “ಕಾಶ್ಮೀರದ ಅಸಾಮಾನ್ಯ ಹತ್ಯೆಗಳ ವಿರುದ್ಧ ಮತ್ತು ಕೇಂದ್ರ ಸರ್ಕಾರದ ವಿಶ್ವಾಸಾರ್ಹ ರಾಜಕೀಯ ತೊಡಗಿಸಿಕೊಳ್ಳುವಿಕೆಯ ಅನುಪಸ್ಥಿತಿಯಲ್ಲಿ ನಾನು ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಕಾಶ್ಮೀರಿಗಳ ಜೀವ ಮುಖ್ಯ,” ಎಂದಿದ್ದಾರೆ.

ಅವರ ತೀರ್ಮಾನವನ್ನು ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಓಮರ್‌ ಅಬ್ದುಲ್ಲಾ ಸ್ವಾಗತಿಸಿದ್ದಾರೆ. “ಕಾರ್ಯಾಂಗದ ಸೋಲು, ರಾಜಕಾರಣದ ಗೆಲುವು,” ಎಂದಿದ್ದಾರೆ. ಫೈಸಲ್‌ ಬಹುಶಃ ನ್ಯಾಷನಲ್‌ ಕಾನ್ಫರೆನ್ಸ್‌ ಸೇರಿ ಮುಂದಿನ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಈ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ನನ್ನ ತೀರ್ಮಾನ ತಿಳಿಸುವುದಾಗಿ ಅವರು ಹೇಳಿದ್ದಾರೆ.

ಫೈಸಲ್‌ ತಮ್ಮ ರಾಜೀನಾಮೆಯನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆಯನ್ನು ಸ್ವೀಕರಿಸುವುದಾಗಿ ಜಮ್ಮು ಮತ್ತು ಕಾಶ್ಮೀರ ಸಾಮಾನ್ಯ ಆಡಳಿತ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೃತ್ತಿಯಲ್ಲಿ ವೈದ್ಯರಾಗಿರುವ ಫೈಸಲ್‌ ಜಮ್ಮು ಮತ್ತು ಕಾಶ್ಮೀರ ವಿದ್ಯುತ್‌ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. 2009ನೇ ಸಾಲಿನ ಕೇಂದ್ರ ನಾಗರೀಕ ಸೇವಾ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್‌ ಗಿಟ್ಟಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರ ಕೇಡರ್‌ಗೆ ನಿಯೋಜನೆಗೊಂಡಿದ್ದರು. ಜಿಲ್ಲಾಧಿಕಾರಿಯಾಗಿ ವೃತ್ತಿ ಆರಂಭಿಸಿದ ಫೈಸಲ್‌, ಶಿಕ್ಷಣ ಇಲಾಖೆ ನಿರ್ದೇಶಕನ ಹುದ್ದೆಯನ್ನೂ ನಿಭಾಯಿಸಿದ್ದರು. ನಂತರ ಅಮೆರಿಕಾದ ಹಾರ್ವರ್ಡ್‌ ವಿಶ್ವವಿದ್ಯಾನಿಲಯಕ್ಕೆ ಉನ್ನತ ಅಧ್ಯಯನಕ್ಕೆ ತೆರಳಿ ಕಳೆದ ಜೂನ್‌ನಲ್ಲಿ ವಾಪಸಾಗಿದ್ದರು. ಅಲ್ಲಿಂದ ಬಂದವರೇ 6 ತಿಂಗಳು ಅಧಿಕಾರಿಯಾಗಿದ್ದು ಇದೀಗ ರಾಜೀನಾಮೆ ನೀಡಿದ್ದಾರೆ.

ಕಳೆದ ವರ್ಷ ಅವರು ಮಾಡಿದ್ದ ‘ರೇಪಿಸ್ತಾನ್‌’ ಎಂಬ ಟ್ಟೀಟ್‌ ಭಾರೀ ವಿವಾದವನ್ನು ಹುಟ್ಟುಹಾಕಿತ್ತು. ಈ ಹಿನ್ನೆಲೆಯಲ್ಲಿ ಅವರ ಟ್ಟೀಟ್‌ ಬಗ್ಗೆ ತನಿಖೆ ನಡೆಸುವಂತೆ ಜಮ್ಮು ಮತ್ತು ಕಾಶ್ಮೀರ ಸರಕಾರಕ್ಕೆ ಕೇಂದ್ರ ಸರಕಾರ ಸೂಚಿಸಿತ್ತು. ಫೈಜಲ್‌ ಈ ಹಿಂದೆಯೂ ಹಲವು ಬಾರಿ ವಿವಾದಕ್ಕೆ ಗುರಿಯಾಗಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಯಲ್ಲಿರುವ ಆರ್ಟಿಕಲ್‌ 35ಎಗೆ ಸಂಬಂಧಿಸಿದಂತೆ ಅವರು ನೇರವಾಗಿ ಚರ್ಚೆಗೆ ಧುಮುಕಿದ್ದರು. ಈ ಮೂಲಕ ಚರ್ಚೆಯಲ್ಲಿ ಪಾಲ್ಗೊಂಡ ಮೊದಲ ಸರಕಾರಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಹೀಗೆ ತಮ್ಮ ಹುದ್ದೆಯಾಚೆಗೆ ಸದ್ದು ಮಾಡುತ್ತಾ ಬಂದ ಫೈಸಲ್‌ ಈಗ ರಾಜಕೀಯ ಅಗ್ನಿ ಪರೀಕ್ಷೆಗೆ ಹೊರಟಿದ್ದಾರೆ.

ಇನ್ನೊಂದರ್ಥದಲ್ಲಿ ಕಾರ್ಯಾಂಗದಲ್ಲಿ ಕಳೆದುಕೊಂಡ ನಂಬಿಕೆಯನ್ನು ಶಾಸಕಾಂಗದಲ್ಲಿ ಹುಡುಕಲು ಹೊರಟಿದ್ದಾರೆ. ಆ ಮೂಲಕ ನೆತ್ತರಲ್ಲಿ ಮಿಂದೆದ್ದಿರುವ ಕಣಿವೆಯಲ್ಲಿ ರಾಜಕೀಯದ ಮೂಲಕ ಗುಲಾಬಿ ಅರಳಿಸಲು ಮುಂದಾಗಿದ್ದಾರೆ. ಅವರ ಈ ರಾಜಕೀಯ ಆಗಮನವನ್ನು ಕಾಶ್ಮೀರಗಳು ಕುತೂಹಲ ಮತ್ತು ನಿರೀಕ್ಷೆಯ ಕಣ್ಣುಗಳಿಂದ ನೋಡುತ್ತಿದ್ದಾರೆ. ಆ ನಿರೀಕ್ಷೆ ಹುಸಿಯಾಗದಿರಲಿ.