ಮತ್ತೆ ನೊಂದುಕೊಂಡ ‘ಸಾಂದರ್ಭಿಕ ಶಿಶು’; ಸರಕಾರ ನಡೆಸುವುದು ಕುಮಾರಸ್ವಾಮಿಗೆ ಕಷ್ಟವಾಗುತ್ತಿದೆಯೇ?
COVER STORY

ಮತ್ತೆ ನೊಂದುಕೊಂಡ ‘ಸಾಂದರ್ಭಿಕ ಶಿಶು’; ಸರಕಾರ ನಡೆಸುವುದು ಕುಮಾರಸ್ವಾಮಿಗೆ ಕಷ್ಟವಾಗುತ್ತಿದೆಯೇ?

ಸರಕಾರ ರಚನೆಯಾಗಿ ಆರು ತಿಂಗಳು ಕಳೆದರೂ ಇನ್ನೂ ಕುಮಾರಸ್ವಾಮಿ ಹಳೇ ರಾಗ ಹಾಡುತ್ತಿರುವುದು ಸಮ್ಮಿಶ್ರ ಸರಕಾರದಲ್ಲಿ ಎಲ್ಲವೂ ಸರಿ ಇಲ್ಲವೇನೋ ಎಂಬ ದಟ್ಟ ಅನುಮಾನಕ್ಕೆ ಕಾರಣವಾಗಿದೆ.

“ನಾನು ಸಾಂದರ್ಭಿಕ ಶಿಶು”, “ವಿಷವನ್ನು ಗಂಟಲಲ್ಲೇ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದೇನೆ”, “ಮೈತ್ರಿ ಸರಕಾರದಲ್ಲಿ ನಾನು ಸಂಪೂರ್ಣ ಸ್ವತಂತ್ರನಾಗಿಲ್ಲ” ಎಂದು ಹಲವು ಬಾರಿ ಬಹಿರಂಗವಾಗಿಯೇ ಹೇಳಿಕೆ ನೀಡಿ, ಜನರೆದುರು ಕಣ್ಣೀರು ಹಾಕಿದ್ದ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಈಗ ಮತ್ತೊಮ್ಮೆ ಕಾಂಗ್ರೆಸ್‌ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

“ಆಡಳಿತದಲ್ಲಿ ನನ್ನ ಕೈ ಕಟ್ಟಿ ಹಾಕಲಾಗಿದೆ. ನಾನು ಕಾಂಗ್ರೆಸ್‌ ನಾಯಕರ ತಾಳಕ್ಕೆ ಕುಣಿಯುವ ಪರಿಸ್ಥಿತಿ ಇದೆ. ಮುಖ್ಯಮಂತ್ರಿ ಹುದ್ದೆ ಬಿಸಿ ತುಪ್ಪವಾಗಿದೆ. ನಾನು ಅನುಭವಿಸುತ್ತಿರುವ ಪಾಡು ನನಗೇ ಗೊತ್ತು” ಎಂದು ಕುಮಾರಸ್ವಾಮಿ ಮಂಗಳವಾರ ನಡೆದ ಜೆಡಿಎಸ್‌ ಪಕ್ಷದ ಶಾಸಕಾಂಗ ಸಭೆಯಲ್ಲಿ ತಮ್ಮ ‘ನೋವ’ನ್ನು ಹೊರಹಾಕಿದ್ದಾರೆ.

ಸಮ್ಮಿಶ್ರ ಸರಕಾರ ರಚನೆಯಾದ ಆರಂಭದ ದಿನಗಳಲ್ಲಿ ಕುಮಾರಸ್ವಾಮಿ ಈ ರೀತಿಯ ಮಾತುಗಳನ್ನು ಹೇಳಿದ್ದು ಆ ಸಂದರ್ಭದಲ್ಲಿನ್ನೂ ಜೆಡಿಎಸ್‌ – ಕಾಂಗ್ರೆಸ್‌ ಪಕ್ಷಗಳ ಸಮನ್ವಯದ ಕೊರತೆ ಎನ್ನಲಾಗಿತ್ತು. ಆದರೆ, ಸರಕಾರ ರಚನೆಯಾಗಿ ಆರು ತಿಂಗಳು ಕಳೆದರೂ ಇನ್ನೂ ಕುಮಾರಸ್ವಾಮಿ ಹಳೇ ರಾಗ ಹಾಡುತ್ತಿರುವುದು ಸಮ್ಮಿಶ್ರ ಸರಕಾರದಲ್ಲಿ ಎಲ್ಲವೂ ಸರಿ ಇಲ್ಲವೇನೋ ಎಂಬ ದಟ್ಟ ಅನುಮಾನಕ್ಕೆ ಕಾರಣವಾಗಿದೆ.

ರಾಜ್ಯದ ಆಡಳಿತದ ಉನ್ನತ ಹುದ್ದೆಯಾದ ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ಕುಮಾರಸ್ವಾಮಿ ಪದೇ ಪದೇ ಇಂತಹ ಮಾತುಗಳನ್ನು ಹೇಳುತ್ತಿರುವುದಕ್ಕೂ, ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಮುರಿದು ಬೀಳಲಿದೆ ಎಂಬ ಬಿಜೆಪಿಯ ನಿರೀಕ್ಷೆಗಳಿಗೂ ತಾಳೆಯಾಗುವಂತೆ ಕಾಣುತ್ತಿದೆ. ಹೀಗಾಗಿ ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯದ ಸಮ್ಮಿಶ್ರ ಸರಕಾರದ ಭವಿಷ್ಯವನ್ನು ನಿರ್ಧರಿಸುವುದು ಸುಳ್ಳಲ್ಲ.

ಸಚಿವ ಸಂಪುಟ ರಚನೆ, ನಿಗಮ ಮಂಡಳಿಗಳ ನೇಮಕಾತಿ ಸೇರಿದಂತೆ ಯಾವುದೇ ಪ್ರಮುಖ ನಿರ್ಧಾರಗಳಿಗೂ ಕಾಂಗ್ರೆಸ್‌ ನಾಯಕರು ಜೆಡಿಎಸ್‌ ಅಭಿಪ್ರಾಯವನ್ನು ಪಡೆಯುತ್ತಿಲ್ಲ ಎಂಬ ಮಾತುಗಳು ಮತ್ತೆ ಮತ್ತೆ ಕೇಳಿಬಂದಿವೆ. ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಇದ್ದರೂ ಅದು ಸಮನ್ವಯ ಸಾಧಿಸಲು ವಿಫಲವಾಗಿದೆ ಎಂಬ ಮಾತುಗಳು ಜೆಡಿಎಸ್‌ ವಲಯದಲ್ಲಿವೆ. ಸಮನ್ವಯ ಸಮಿತಿಯಲ್ಲಿರುವವರು ಸಮನ್ವಯದಿಂದ ಸರಕಾರ ಮುನ್ನಡೆಸುವುದಕ್ಕಿಂತ ಸರಕಾರದಲ್ಲಿ ಬಿಕ್ಕಟ್ಟು ಸೃಷ್ಟಿಸುತ್ತಿದ್ದಾರೆ ಎಂಬ ಆರೋಪಗಳೂ ಇವೆ. ಕುಮಾರಸ್ವಾಮಿ ಮತ್ತೆ ತಮ್ಮ ಅಸಮಾಧಾನ ಹೊರ ಹಾಕಲು ಇದೇ ಕಾರಣ ಎನ್ನಲಾಗಿದೆ.

ಆರು ತಿಂಗಳ ನಂತರ ಸರಕಾರದ ಬಂಡಿ ಸರಾಗವಾಗಿ ಉರುಳುತ್ತಿದೆ ಎನ್ನುವ ಸಮಯದಲ್ಲೇ ಕಾಂಗ್ರೆಸ್‌ ನಾಯಕರು ಹಳಿ ತಪ್ಪಿಸುತ್ತಿರುವ ಮಾತುಗಳನ್ನು ಕುಮಾರಸ್ವಾಮಿ ಹೇಳಿದ್ದಾರೆ. ಕಾಂಗ್ರೆಸ್‌ನ ಮೈತ್ರಿ ಜತೆಗೆ ಸರಕಾರ ನಡೆಸುವುದು ನಿಜಕ್ಕೂ ಜೆಡಿಎಸ್‌ಗೆ ಕಷ್ಟವಾಗುತ್ತಿದೆ ಎಂಬ ಸಂದೇಶವನ್ನು ಕುಮಾರಸ್ವಾಮಿ ಈಗ ಜೆಡಿಎಸ್‌ಪಿ ಸಭೆಯ ಮೂಲಕ ಹರಿಬಿಟ್ಟಿರುವಂತಿದೆ. ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ಬಿಕ್ಕಟ್ಟೂ ಕುಮಾರಸ್ವಾಮಿ ಅವರ ಬಾಯಿಯಿಂದ ಈ ಮಾತುಗಳನ್ನು ಆಡಿಸಿವೆ ಎನ್ನಲಾಗುತ್ತಿದೆ.

ಮತ್ತೆ ನೊಂದುಕೊಂಡ ‘ಸಾಂದರ್ಭಿಕ ಶಿಶು’; ಸರಕಾರ ನಡೆಸುವುದು ಕುಮಾರಸ್ವಾಮಿಗೆ ಕಷ್ಟವಾಗುತ್ತಿದೆಯೇ?

ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಳ್ಳುವ ಘೋಷಣೆ ಮಾಡಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಸೀಟು ಹಂಚಿಕೆ ಕುರಿತಂತೆ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಜೆಡಿಎಸ್‌ ಕೇಳುತ್ತಿದೆ. ಈ ಮಾತು ಖುದ್ದು ಕುಮಾರಸ್ವಾಮಿ ಹಾಗೂ ದೇವೇಗೌಡರ ಬಾಯಿಯಿಂದಲೇ ಬಂದಿದೆ. ಆದರೆ, ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್‌ ಅಲಿ 2:1 ಅನುಪಾತದಲ್ಲಿ ಸೀಟು ಹಂಚಿಕೆಯಾಗಲಿದೆ ಎಂದು ಹೇಳಿದ್ದರು.

ಒಂದು ವೇಳೆ 2:1 ಅನುಪಾತದಲ್ಲೇ ಸೀಟು ಹಂಚಿಕೆಯಾದರೆ ಜೆಡಿಎಸ್‌ಗೆ 10 ಅಥವಾ 10ಕ್ಕಿಂತಲೂ ಕಡಿಮೆ ಕ್ಷೇತ್ರಗಳು ಸಿಗಲಿವೆ. ಹೀಗಾಗಿ ಸಂಸತ್ತಿನ ಅಧಿವೇಶನ ಮುಗಿದ ಬಳಿಕ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಜತೆಗೆ ಸಭೆ ನಡೆಸಿ ಸೀಟು ಹಂಚಿಕೆ ವಿಚಾರವನ್ನು ಅಂತಿಮಗೊಳಿಸುತ್ತೇವೆ ಎಂದಿದ್ದ ದೇವೇಗೌಡ ಅಲ್ಲಿಗೆ ಸೀಟು ಹಂಚಿಕೆಯ ವಿಚಾರಕ್ಕೆ ಅಲ್ಪ ವಿರಾಮ ಹಾಕಿದ್ದರು. ಆದರೆ, ಕುಮಾರಸ್ವಾಮಿ ಜೆಡಿಎಸ್‌ ಪ್ರಾಬಲ್ಯವಿರುವ 12 ಕ್ಷೇತ್ರಗಳ ಬಗ್ಗೆ ಇನ್ನೂ ಪಟ್ಟು ಸಡಿಲಿಸಿಲ್ಲ ಎನ್ನಲಾಗಿದೆ. ಅಲ್ಲದೆ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿಯಲ್ಲಿರುವ ಕಾಂಗ್ರೆಸ್ ನಾಯಕರು ಎರಡೂ ಪಕ್ಷಗಳ ನಡುವೆ ಸಮನ್ವಯ ಸಾಧಿಸಲು ವಿಫಲವಾಗಿರುವುದೂ ಕುಮಾರಸ್ವಾಮಿ ಅಸಮಾಧಾನಕ್ಕೆ ಕಾರಣ ಎನ್ನಲಾಗುತ್ತಿದೆ.

“ಸಮ್ಮಿಶ್ರ ಸರಕಾರದಲ್ಲಿ ಎರಡೂ ಪಕ್ಷಗಳ ಮುಖಂಡರ, ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಸರಕಾರ ನಡೆಸಬೇಕು. ಈ ಹಿಂದೆ ಕಾಂಗ್ರೆಸ್‌ ಜತೆಗೆ ಜೆಡಿಎಸ್‌ ಮೈತ್ರಿ ಮಾಡಿಕೊಂಡ ಸಂದರ್ಭದಲ್ಲೂ ಎರಡೂ ಪಕ್ಷಗಳ ಅಭಿಪ್ರಾಯವನ್ನು ಪಡೆದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಆದರೆ, ಈಗ ಕಾಂಗ್ರೆಸ್‌ ಮುಖಂಡರು ಒಂದು ಹೇಳಿದರೆ, ಜೆಡಿಎಸ್‌ನವರು ಇನ್ನೊಂದು ಹೇಳುತ್ತಾರೆ. ಪಕ್ಷಗಳ ಮುಖಂಡರು ಹೀಗೆ ಬಹಿರಂಗವಾಗಿ ಹೇಳಿಕೆಗಳನ್ನು ಕೊಡುತ್ತಾ ಹೋಗುವುದು ಸರಿಯಲ್ಲ. ಈ ಬೆಳವಣಿಗೆ ಸಮ್ಮಿಶ್ರ ಸರಕಾರ ಸುಗಮವಾಗಿ ಆಡಳಿತ ನಡೆಸುವ ದೃಷ್ಟಿಯಿಂದ ಒಳ್ಳೆಯದಲ್ಲ” ಎನ್ನುತ್ತಾರೆ ಜೆಡಿಎಸ್‌ನ ಹಿರಿಯ ಮುಖಂಡ ಬಸವರಾಜ ಹೊರಟ್ಟಿ.

“ಸರಕಾರದಲ್ಲಿ ಎರಡೂ ಪಕ್ಷಗಳ ಪಾತ್ರ ಮುಖ್ಯ. ಹೀಗಾಗಿ ಸಮನ್ವಯ ಸಮಿತಿಯಲ್ಲಿರುವ ಎರಡೂ ಪಕ್ಷಗಳ ನಾಯಕರು ಸಮನ್ವಯ ಸಮಿತಿಯಲ್ಲಿ ಕುಳಿತು ಚರ್ಚೆ ನಡೆಸಬೇಕು. ಭಿನ್ನಾಭಿಪ್ರಾಯ, ಭಿನ್ನ ನಿಲುವುಗಳಿದ್ದರೆ ಸಮನ್ವಯ ಸಮಿತಿಯಲ್ಲಿ ಮಾತನಾಡಿ ಒಮ್ಮತದ ನಿರ್ಧಾರಕ್ಕೆ ಬರಬೇಕು. ಅದು ಬಿಟ್ಟು ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ಕೊಡುತ್ತಾ ಹೋಗುವುದು ಸರಕಾರದ ಭವಿಷ್ಯಕ್ಕೆ ಒಳ್ಳೆಯದಲ್ಲ” ಎಂಬುದು ಅವರ ಅಭಿಪ್ರಾಯ.

ನಿನ್ನೆ ನಡೆದ ಶಾಸಕಾಂಗ ಸಭೆಗೆ ತಾವು ಹೋಗಿರಲಿಲ್ಲ ಎಂದ ಹೊರಟ್ಟಿ, ಸಮ್ಮಿಶ್ರ ಸರಕಾರದಲ್ಲಿ ಬಿಕ್ಕಟ್ಟುಗಳು ಇರುವುದು ಸತ್ಯ ಎಂಬುದನ್ನು ಒಪ್ಪಿಕೊಂಡರು. ಭಿನ್ನಾಭಿಪ್ರಾಯಗಳು ದೊಡ್ಡದಾಗಿ ಬೆಳೆಯಲು ಒಂದು ಪಕ್ಷವನ್ನೇ ದೂರುವುದು ಸರಿಯಲ್ಲ ಎಂದ ಅವರು, “ಎರಡೂ ಪಕ್ಷಗಳ ನಾಯಕರು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ಸಮಸ್ಯೆಗಳನ್ನು ಪಕ್ಷ ಹಾಗೂ ಸರಕಾರದ ವೇದಿಕೆಗಳಲ್ಲಿ ಇತ್ಯರ್ಥ ಪಡಿಸಿಕೊಳ್ಳುವುನ್ನು ಎರಡೂ ಪಕ್ಷಗಳ ಮುಖಂಡರು ಕಲಿಯಬೇಕು. ಇಲ್ಲದಿದ್ದರೆ ಸಮಸ್ಯೆಗಳು ಬೆಳೆಯುತ್ತಲೇ ಹೋಗುತ್ತವೆ. ಆ ಮೇಲೆ ಆಡಳಿತ ನಡೆಸುವುದಕ್ಕಿಂತ ಬೆಳೆದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತಾ ಕೂರಬೇಕಾಗುತ್ತದೆ” ಎಂದರು.

ಹೊರಟ್ಟಿ ಅವರ ಮಾತುಗಳನ್ನು ಗಮನಿಸಿದರೆ ಕುಮಾರಸ್ವಾಮಿ ಹೇಳುತ್ತಿರುವುದು ‘ಅರ್ಧಸತ್ಯ’ ಎನಿಸುತ್ತದೆ. ಸರಕಾರದಲ್ಲಿ ತಲೆದೋರಬಹುದಾದ ಸಮಸ್ಯೆಗಳ ಪರಿಹಾರಕ್ಕೆಂದೇ ಸಮನ್ವಯ ಸಮಿತಿ ಇರುವಾಗ ಕುಮಾರಸ್ವಾಮಿ ಪದೇ ಪದೇ ಹೀಗೆ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹರಿಬಿಡುತ್ತಿರುವುದು ಮುಂಬರುವ ಲೋಕಸಭಾ ಚುನಾವಣೆಯ ಮೇಲೂ ಪರಿಣಾಮ ಬೀರಲಿದೆ. ಈ ಪರಿಣಾಮ ಬೀರಲೆಂದೇ ಕುಮಾರಸ್ವಾಮಿ ಇಂತಹ ಮಾತುಗಳನ್ನು ಆಡುತ್ತಿರುವಂತಿದೆ. ಬಹಿರಂಗವಾಗಿ ಅಸಮಾಧಾನ ಹೊರಹಾಕುವ ಮೂಲಕ ಕಾಂಗ್ರೆಸ್‌ ಹೈಕಮಾಂಡ್‌ ಗಮನ ಸೆಳೆಯುವುದು ಹಾಗೂ ಸೀಟು ಹಂಚಿಕೆಯ ಲೆಕ್ಕಾಚಾರದ ತಮ್ಮ ಪಟ್ಟನ್ನು ಬಿಗಿಗೊಳಿಸುವುದು ಕುಮಾರಸ್ವಾಮಿ ತಂತ್ರದಂತೆ ಕಾಣುತ್ತಿದೆ.

ಚಿತ್ರಕೃಪೆ: ಡೆಕ್ಕನ್‌ ಕ್ರಾನಿಕಲ್