samachara
www.samachara.com
‘ಗ್ಯಬಾನ್‌ ದೇಶದ ಮೋದಿ’ಗೆ ಸೇನಾ ಕ್ರಾಂತಿಯ ಶಾಕ್‌: ಆಫ್ರಿಕಾದ ಈ ಪುಟ್ಟ ದೇಶದಲ್ಲಿ ನಡೆದಿದ್ದೇನು?
COVER STORY

‘ಗ್ಯಬಾನ್‌ ದೇಶದ ಮೋದಿ’ಗೆ ಸೇನಾ ಕ್ರಾಂತಿಯ ಶಾಕ್‌: ಆಫ್ರಿಕಾದ ಈ ಪುಟ್ಟ ದೇಶದಲ್ಲಿ ನಡೆದಿದ್ದೇನು?

ಅಲಿ ಬೋಂಗೋಗೆ ನಮ್ಮ ಪ್ರಧಾನಿ ಮೋದಿಯಂತೆ ವಿದೇಶಿ ಸುತ್ತುವ ಖಯಾಲಿ. ಹೀಗಾಗಿ ಹೆಚ್ಚಿನ ಸಮಯ ಅವರು ವಿದೇಶದಲ್ಲೇ ಇರುತ್ತಾರೆ. ಆದರೆ ಭಾಷಣಗಳಲ್ಲಿ ಮಾತ್ರ ಜನರನ್ನು ಮರುಳು ಮಾಡುತ್ತಾ ಬಂದಿದ್ದಾರೆ.

ವಿಫಲ ಸೇನಾ ಕ್ರಾಂತಿಗೆ ಆಫ್ರಿಕಾದ ಪುಟ್ಟ ದೇಶ ಗ್ಯಬಾನ್‌ ಸೋಮವಾರ ಸಾಕ್ಷಿಯಾಗಿದೆ.

ಇಲ್ಲಿನ ರಾಷ್ಟ್ರೀಯ ರೇಡಿಯೋವನ್ನು ವಶಕ್ಕೆ ಪಡೆದುಕೊಂಡ ‘ಸೇನಾ ಕ್ರಾಂತಿಕಾರಿ’ಗಳು, ದೇಶದ ಮೇಲೆ ಕಳೆದ 50 ವರ್ಷಗಳಿಂದ ಹಿಡಿತ ಹೊಂದಿರುವ ಅಧ್ಯಕ್ಷ ಅಲಿ ಬೊಂಗೋ ಕುಟುಂಬದ ಆಡಳಿತವನ್ನು ಕೊನೆಗಾಣಿಸಲು ಬಯಸಿದ್ದರು. ಆದರೆ ಸೇನಾ ಕ್ರಾಂತಿಗೆ ಮುಂದಾದ ಇಬ್ಬರು ಸೈನಿಕರನ್ನು ಹೊಡೆದುರುಳಿಸಿ ಮತ್ತು 7 ಜನರನ್ನು ಬಂಧಿಸುವುದರೊಂದಿಗೆ ಈ ಮಿಲಿಟರಿ ಕ್ರಾಂತಿಯನ್ನು ಅಲ್ಲಿನ ಆಡಳಿತ ವಿಫಲಗೊಳಿಸಿದೆ.

ನಡೆದಿದ್ದೇನು?:

ಸೋಮವಾರ ಮುಂಜಾನೆ 4.30ರ ಸುಮಾರಿಗೆ ನೇರವಾಗಿ ರೇಡಿಯೋ ಸ್ಟೇಷನ್‌ಗೆ ನುಗ್ಗಿ ಅದನ್ನು ವಶಕ್ಕೆ ಪಡೆದುಕೊಂಡ ಐವರು ಸೈನಿಕರು, ‘ಬೊಂಗೋ ಇನ್ನು ಮುಂದೆ ತಮ್ಮ ಅಧಿಕಾರ ನಡೆಸಲು ಅರ್ಹರಲ್ಲ’ ಎಂದು ಘೋಷಿಸಿದರು. ಈ ಮೂಲಕ ಅಧಿಕಾರಕ್ಕೆ ವಶಕ್ಕೆ ಪಡೆಯುವ ಸೂಚನೆ ನೀಡಿದರು. ‘ದೇಶದ ಅಧ್ಯಕ್ಷ ಅನಾರೋಗ್ಯದ ಹಿನ್ನೆಲೆಯಲ್ಲಿ ವಿದೇಶದಲ್ಲಿದ್ದಾರೆ. ಅವರ ಆರೋಗ್ಯದ ಬಗ್ಗೆ ಜನರಿಗೆ ಸುಳ್ಳುಗಳನ್ನು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪನೆ ಆಗಬೇಕು. ಅದಕ್ಕಾಗಿ ಮಧ್ಯಂತರ ಸಮಿತಿಯನ್ನು ರಚಿಸಬೇಕು ಎಂದು ಬಂಡಾಯ ಎದ್ದ ಸೈನಿಕರ ನಾಯಕ ರೇಡಿಯೋ ಮೂಲಕ ಘೋಷಿಣೆ ಮಾಡಿದ.

ಬೆನ್ನಿಗೆ ಅಲ್ಲಿಗೆ ನುಗ್ಗಿದ ರಕ್ಷಣಾ ಪಡೆಗಳು ಈ ಯತ್ನವನ್ನು ವಿಫಲಗೊಳಿಸಿವೆ. ಬೆನ್ನಿಗೆ ನಿಂತಿದ್ದ ಇಬ್ಬರು ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಹಾಗೂ 7 ಜನರನ್ನು ಬಂಧಿಸಿರುವುದಾಗಿ ಸರಕಾರಿ ವಕ್ತಾರರು ಖಚಿತಪಡಿಸಿದ್ದಾರೆ.

59 ವರ್ಷದ ಅಲಿ ಬೊಂಗೋ ದೇಶದ ಹಾಲಿ ಅಧ್ಯಕ್ಷರಾಗಿದ್ದು, ಅವರು ಕಳೆದ ಅಕ್ಟೋಬರ್‌ನಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿದ ವೇಳೆ ಪಾರ್ಶ್ವವಾಯುವಿಗೆ ಗುರಿಯಾಗಿದ್ದರು. ಈ ಘಟನೆ ಬಳಿಕ ಅವರು ಮೊರಕ್ಕೋ ದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ದೇಶದಿಂದ ದೂರವಿದ್ದಾರೆ. ಈ ಹಿಂದೆ ಕೊನೆಯ ಬಾರಿಗೆ ಡಿಸೆಂಬರ್‌ 31ರಂದು ಟಿವಿ ಪರದೆಗಳ ಮೇಲೆ ಕಾಣಿಸಿಕೊಂಡಿದ್ದ ಅವರು, ನನ್ನ ಬಲ ಕೈ ಎತ್ತಲಾಗುತ್ತಿಲ್ಲ ಎಂದಿದ್ದರು. ಅವರಿಗೆ ಸದ್ಯ ನಡೆಯಲು ಸಾಧ್ಯವಿದೆಯೇ ಎಂಬುದರ ಬಗ್ಗೆಯೂ ಅನುಮಾನಗಳಿವೆ.

ರಾಷ್ಟ್ರೀಯ ರೇಡಿಯೋದ ಕೇಂದ್ರ ಕಚೇರಿಯಲ್ಲಿ ಮಿಲಿಟರಿ ಕ್ರಾಂತಿಯ ಸಂದೇಶ ನೀಡುತ್ತಿರುವ ಲೆಫ್ಟಿನೆಂಟ್‌ ಕೆಲ್ಲಿ ಒಂಡೋ ಒಬಿಯಾಂಗ್‌.
ರಾಷ್ಟ್ರೀಯ ರೇಡಿಯೋದ ಕೇಂದ್ರ ಕಚೇರಿಯಲ್ಲಿ ಮಿಲಿಟರಿ ಕ್ರಾಂತಿಯ ಸಂದೇಶ ನೀಡುತ್ತಿರುವ ಲೆಫ್ಟಿನೆಂಟ್‌ ಕೆಲ್ಲಿ ಒಂಡೋ ಒಬಿಯಾಂಗ್‌.
/ಬಿಬಿಸಿ

ಇದನ್ನೇ ಮುಂದಿಟ್ಟುಕೊಂಡು ಸೇನೆಯ ಒಂದು ಗುಂಪು ಕ್ರಾಂತಿಗೆ ಯೋಜನೆ ರೂಪಿಸಿತ್ತು. ಬೆಳಿಗ್ಗೆ ಬೆಳಿಗ್ಗೆ ರಾಷ್ಟ್ರೀಯ ರೇಡಿಯೋದ ಕೇಂದ್ರ ಕಚೇರಿಗೆ ನುಗ್ಗಿದ ಲೆಫ್ಟಿನೆಂಟ್‌ ಕೆಲ್ಲಿ ಒಂಡೋ ಒಬಿಯಾಂಗ್‌, ‘ಅಧ್ಯಕ್ಷರಿಗೆ ತಮ್ಮ ಕಚೇರಿಯನ್ನು ನಡೆಸುವ ಸಾಮರ್ಥ್ಯ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಅನುಮಾನಗಳಿವೆ’ ಎಂದು ಹೇಳಿದ್ದರು. ಅವರ ಈ ಸಂದೇಶದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಹಿಂಬದಿಯಲ್ಲಿಬ್ಬರು ಬಂದೂಕುಧಾರಿಗಳನ್ನು ನಿಲ್ಲಿಸಿಕೊಂಡು ಮಿಲಿಟರಿ ದಿರಿಸಿನಲ್ಲಿದ್ದರು. ‘ಪ್ಯಾಟ್ರಿಯಾಟಿಕ್‌ ಮೂವ್‌ಮೆಂಟ್‌ ಆಫ್‌ ದಿ ಡಿಫೆನ್ಸ್‌ ಆಂಡ್‌ ಸೆಕ್ಯುರಿಟಿ ಫೋರ್ಸಸ್‌ ಆಫ್‌ ಗ್ಯಬಾನ್‌’ ಈ ಸೇನಾ ಕ್ರಾಂತಿ ನಡೆಸುತ್ತಿದೆ ಎಂದು ವಿವರ ನೀಡಿದ ಅವರು, ತೈಲ ಸಂಪದ್ಭರಿತ ಆಫ್ರಿಕಾದ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪನೆಗಾಗಿ ಸೇನಾ ಕ್ರಾಂತಿಯನ್ನು ಬೆಂಬಲಿಸಿ ಬೀದಿಗೆ ಬರುವಂತೆ ಜನರಿಗೆ ಕರೆ ನೀಡಿದ್ದರು.

ಆದರೆ ಭಯಗೊಂಡ ಜನರು ಮನೆಯಿಂದ ಹೊರ ಬರುವ ಯತ್ನವನ್ನೇ ಮಾಡಲಿಲ್ಲ.

ಬದಲಿಗೆ ಕೇವಲ 300 ಜನರು ಮಾತ್ರ ರೇಡಿಯೋ ಕೇಂದ್ರದ ಸುತ್ತ ನೆರೆದು ಸೇನಾ ಕ್ರಾಂತಿಗೆ ತಮ್ಮ ಬೆಂಬಲ ಸೂಚಿಸಿದರು. ಅಷ್ಟೊತ್ತಿಗಾಗಲೇ ಸ್ಥಳಕ್ಕೆ ಬಂದಿದ್ದ ಅಧ್ಯಕ್ಷರ ಬೆಂಬಲಿಗ ಸೈನಿಕರು ಪ್ರತಿಭಟನಾಕಾರರನ್ನು ಚದುರಿಸಿ, ಸೇನಾ ಕ್ರಾಂತಿಕಾರಿಗಳನ್ನು ಹೊಡೆದುರುಳಿಸಿದರು.

ಇದೇ ವೇಳೆ ಕೇಂದ್ರ ಕಚೇರಿಯಲ್ಲಿ ಒತ್ತೆಯಾಳುಗಳಾಗಿದ್ದ ಪತ್ರಕರ್ತರು ಮತ್ತು ತಾಂತ್ರಿಕ ಸಿಬ್ಬಂದಿಗಳನ್ನು ಸೈನಿಕರು ಬಿಡುಗಡೆ ಮಾಡಿದರು. ಈ ಮೂಲಕ ಕೆಲವೇ ಗಂಟೆಗಳಲ್ಲಿ ನಾಟಕೀಯ ‘ಸೇನಾ ಕ್ರಾಂತಿ’ ಮಕಾಡೆ ಮಲಗಿತು.

ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸರಕಾರಿ ವಕ್ತಾರರು, ‘ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಸರಕಾರ ತನ್ನ ಅಧಿಕಾರ ನಡೆಸುತ್ತಿದೆ. ಎಲ್ಲಾ ಸಂಸ್ಥೆಗಳು ತಮ್ಮ ಸರಿಯಾದ ಜಾಗದಲ್ಲಿ ಸರಿಯಾದ ಕೆಲಸವನ್ನು ನಿರ್ವಹಿಸುತ್ತಿವೆ,” ಎಂದು ಫ್ರಾನ್ಸ್‌ 24ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬೆಳವಣಿಗೆ ಬೆನ್ನಲ್ಲೇ ಸಮುದ್ರ ದಂಡೆಯಲ್ಲಿರುವ ರಾಜಧಾನಿ ಲಿಬ್ರೆವಿಲ್ಲೆಯಲ್ಲಿ ಕರ್ಫ್ಯೂ ಹೇರಲಾಗಿದ್ದು ಇಂಟರ್‌ನೆಟ್‌ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಮಿಟಲಿರಿ ಟ್ಯಾಂಕ್‌ಗಳು ಮತ್ತು ಸೈನಿಕರು ಇಲ್ಲಿನ ಬೀದಿಗಳಲ್ಲಿ ಗಸ್ತು ತಿರುಗುತ್ತಿದ್ದಾರೆ.

ಈ ಕ್ರಾಂತಿಯ ಪ್ರಯತ್ನದೊಂದಿಗೆ ಗ್ಯಬಾನ್‌ನಲ್ಲಿ ಬೊಂಗೋ ಕುಟುಂಬದ ವಿರುದ್ಧ ಜನ ಆಕ್ರೋಶಿತಗೊಂಡಿರುವುದು ಸ್ಪಷ್ಟವಾಗಿದೆ ಎಂದು ‘ಅಲ್‌ ಜಝೀರಾ’ ವಾಹಿನಿ ವರದಿ ಮಾಡಿದೆ.

ಗ್ಯಬಾನ್‌ನ ಮೋದಿ- ಈ ಬೋಂಗೋ:

ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಒಂದಷ್ಟು ವಿಚಾರಗಳಲ್ಲಿ ಹೋಲುತ್ತಾರೆ ಈ ಗ್ಯಬಾನ್‌ನ ಅಧ್ಯಕ್ಷ ಅಲಿ ಬೋಂಗೋ.

ಗ್ಯಬಾನ್‌ ಅಧ್ಯಕ್ಷ ಅಲಿ ಬೋಂಗೋ.
ಗ್ಯಬಾನ್‌ ಅಧ್ಯಕ್ಷ ಅಲಿ ಬೋಂಗೋ.
/ಅಲ್‌ಜಝೀರಾ

ಇವರ ಬೋಂಗೋ ಕುಟುಂಬ 1967ರಿಂದ ದೇಶದ ಅಧಿಕಾರವನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಬಂದಿದೆ. ಹಾಲಿ ಅಧ್ಯಕ್ಷರ ಅವರ ತಂದೆ ಓಮರ್‌ 2009ರಲ್ಲಿ ಸಾವಿಗೀಡಾದ ಬಳಿಕ ಅಲಿ ಬೋಂಗೋ ಅಧಿಕಾರಕ್ಕೇರಿದ್ದರು.

ಬೋಂಗೋ ಕುಟುಂಬ ದೇಶದ ಸಂಪದ್ಭರಿತ ತೈಲದಿಂದ ಹಣ ಸಂಪಾದನೆ ಮಾಡುತ್ತಾ ಬಂದಿದೆ. ಆದರೆ ದೇಶದ ಅಭಿವೃದ್ಧಿ ಕಡೆಗೆ ಮಾತ್ರ ಗಮನ ಹರಿಸಿಲ್ಲ. ಇದಕ್ಕೆ ಸಾಕ್ಷಿಯಾಗಿ ದೇಶದ ಮೂರನೇ ಒಂದರಷ್ಟು ಜನರು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದಾರೆ ಎನ್ನುವ ಅಂಕಿ ಅಂಶಗಳನ್ನು ವಿಶ್ವಬ್ಯಾಂಕ್‌ ಮುಂದಿಟ್ಟಿದೆ.

ದೇಶದ ಪರಿಸ್ಥಿತಿ ಹೀಗಿದ್ದರೂ ಅಲಿ ಬೋಂಗೋಗೆ ನಮ್ಮ ಪ್ರಧಾನಿ ಮೋದಿಯಂತೆ ವಿದೇಶಿ ಸುತ್ತುವ ಖಯಾಲಿ. ಹೀಗಾಗಿ ಹೆಚ್ಚಿನ ಸಮಯ ಅವರು ವಿದೇಶದಲ್ಲೇ ಇರುತ್ತಾರೆ. ಈ ಹಿಂದೆ ಅವರ ತಂದೆ ಅಧ್ಯಕ್ಷರಾಗಿದ್ದಾಗಲೂ ಅವರು ವಿವಿಧ ಜವಾಬ್ದಾರಿಗಳನ್ನು ಹೊತ್ತು ಅಮೆರಿಕಾ, ಅರಬ್‌ ದೇಶಗಳಲ್ಲೇ ಸಮಯ ಕಳೆಯುತ್ತಿದ್ದರು. ಈಗಲೂ ಅದೇ ಚಾಳಿ ಮುಂದುವರಿಸಿದ್ದು, ಕೇವಲ ಭಾಷಣಗಳಲ್ಲೇ ಜನರನ್ನು ಮರುಳು ಮಾಡುತ್ತಾ ಬಂದಿದ್ದಾರೆ.

ಬಾಯಿ ಬಿಟ್ಟರೆ ನವೀಕರಣ, ಅನ್ವೇಷಣೆ ಎಂಬ ಪದಗಳನ್ನು ಪದೇ ಪದೇ ಪ್ರಸ್ತಾಪಿಸುತ್ತಿರುತ್ತಾರೆ. ದೇಶವನ್ನು ಬದಲಾಯಿಸುತ್ತೇನೆ, ನಾನು ಬದಲಾವಣೆಯ ಪ್ರವರ್ತಕ ಎಂದೆಲ್ಲಾ ಬಿಂಬಿಸಿಕೊಳ್ಳುತ್ತಾರೆ. ಆದರೆ ಅವರು ವಿದೇಶಿ ಸುತ್ತುತ್ತಿರುವಾಗ ಇತ್ತ ದೇಶದ ಪರಿಸ್ಥಿತಿ ಹಳ್ಳ ಹಿಡಿದಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರ ಪೂರ್ತಿ ಹದಗೆಟ್ಟಿದೆ.

ಇಂಥಹ ದೇಶದಲ್ಲಿ 2016ರಲ್ಲೊಮ್ಮೆ ಚುನಾವಣೆ ನಡೆದಿತ್ತು. ಹಿಂಸಾಚಾರಕ್ಕೆ ಸಾಕ್ಷಿಯಾದ ಈ ಚುನಾವಣೆಯಲ್ಲಿ 20 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ದೇಶದಲ್ಲಿ ಕೆಲವೇ ಸಾವಿರ ಮತಗಳಿಂದ ಗೆದ್ದು ಬೋಂಗೋ ಮತ್ತೆ ಅಧ್ಯಕ್ಷರಾಗಿದ್ದರು. ಈ ಚುನಾವಣೆ ಸಂಪೂರ್ಣ ಅಕ್ರಮವಾಗಿ ನಡೆದಿತ್ತು ಎಂಬ ಆರೋಪಗಳಿವೆ. ಹೀಗಿದ್ದೂ ಜನರ ಭಾವನೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಅಧಿಕಾರವನ್ನು ಮುಂದುವರಿಸಿದರು ಬೋಂಗೋ.

ಮುಂದೆ ಬೋಂಗೋ ಅನಾರೋಗ್ಯಕ್ಕೆ ಗುರಿಯಾದ ನಂತರ ಇಲ್ಲಿನ ಸಾಂವಿಧಾನಿಕ ನ್ಯಾಯಾಲಯ ಸಂವಿಧಾನಕ್ಕೆ ತಿದ್ದುಪಡಿ ತಂದು ಅಧ್ಯಕ್ಷರ ಕೆಲವು ಅಧಿಕಾರವನ್ನು ಪ್ರಧಾನಿಗೆ ಮತ್ತು ಉಪಾಧ್ಯಕ್ಷರಿಗೆ ಹಂಚಿತ್ತು. ಇದನ್ನು ವಿರೋಧಿಗಳು ‘ನ್ಯಾಯಸಮ್ಮತವಲ್ಲ’ ಮತ್ತು ‘ಅಕ್ರಮ’ ಎಂದು ಕರೆದಿದ್ದರು. ಇದ್ಯಾವುದನ್ನೂ ಆಡಳಿತವರ್ಗ ಕಿವಿಗೆ ಹಾಕಿಕೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಪರಿಣಾಮ ಈ ಮಿಲಿಟರಿ ಕ್ರಾಂತಿಯ ಯತ್ನ ನಡೆಯಿತು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವಿಶ್ಲೇಷಿಸಿವೆ.

ಆಡಳಿತ ನಡೆಸುವವರು ಜನರ ಧ್ವನಿಗೆ ಕಿವಿಯಾಗದಿದ್ದರೆ, ತಾನು ನಡೆದಿದ್ದೇ ಹಾದಿ ಎಂದುಕೊಂಡರೆ ಏನಾಗುತ್ತದೆ ಎಂಬುದಕ್ಕೆ ದೂರದ ಆಫ್ರಿಕಾದ ಗ್ಯಬಾನ್‌ನಲ್ಲಿ ನಡೆದ ಬೆಳವಣಿಗೆ ಉದಾಹರಣೆಯಾಗಿದೆ. ಒಂದು ಕಾಲದಲ್ಲಿ ಫ್ರೆಂಚ್ ಕಾಲೋನಿ ದೇಶವಾಗಿದ್ದ ಈ ಪುಟ್ಟ ದೇಶದಲ್ಲಿ ಬದಲಾವಣೆಗೆ ಆಗ್ರಹವೊಂದು ಜೀವಂತವಾಗಿದೆ. ಆದರೆ ಜನ ಬೆಂಬಲ ಸಿಗದ ಹಿನ್ನೆಲೆಯಲ್ಲಿ ಪರ್ಯಾಯ ಎಂಬುದು ಮರೀಚಿಕೆಯಾಗಿ ಕಾಣಿಸುತ್ತಿದೆ.