samachara
www.samachara.com
ಭಾರತ್ ಬಂದ್: ಸ್ತಬ್ಧವಾದ ಕರ್ನಾಟಕ, ದೇಶಾದ್ಯಂತ ತಟ್ಟಿದ ಬಿಸಿ
COVER STORY

ಭಾರತ್ ಬಂದ್: ಸ್ತಬ್ಧವಾದ ಕರ್ನಾಟಕ, ದೇಶಾದ್ಯಂತ ತಟ್ಟಿದ ಬಿಸಿ

ಭಾರತ್ ಬಂದ್‌ನಿಂದಾಗಿ ರಾಜ್ಯದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಬ್ಧವಾದರೆ, ಸಾರಿಗೆ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಉಳಿದಂತೆ ರಾಜ್ಯಾದ್ಯಂತ ಎಲ್ಲೆಲ್ಲಿ ಏನೇನು ಬೆಳವಣಿಗೆಗಳು ನಡೆಯುತ್ತಿವೆ ಎಂಬುದರ ಸಂಪೂರ್ಣ ಚಿತ್ರಣ ಇಲ್ಲಿದೆ.

ಕೇಂದ್ರ ಸರಕಾರ ಜಾರಿಗೆ ತರಬೇಕು ಎಂದು ನಿರ್ದೇಶಿಸಿರುವ ಕಾರ್ಮಿಕ ವಿರೋಧಿ ನೂತನ ಮೋಟಾರು ಕಾಯ್ದೆ-2016ನ್ನು ಹಿಂಪಡೆಯಬೇಕು ಹಾಗೂ ಕಾರ್ಮಿಕರ ೧೨ ಕೋರಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕೇಂದ್ರದ ವಿರುದ್ಧ ರಾಷ್ಟ್ರಾದ್ಯಂತ ಕಾರ್ಮಿಕ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಎರಡು ದಿನಗಳ ಭಾರತ್ ಬಂದ್‌ಗೆ ರಾಜ್ಯದಲ್ಲಿ ಬೆಂಬಲ ವ್ಯಕ್ತವಾಗಿದೆ.

ಕಾರ್ಮಿಕ ಸಂಘಟನೆಗಳು ಘೋಷಿಸಿರುವ ಜನವರಿ 8- 9; ಎರಡು ದಿನಗಳ ಬಂದ್‌ಗೆ ಕೆಎಸ್ಆರ್‌ಟಿಸಿ ಸಾರಿಗೆ ಸಂಸ್ಥೆ ಸೇರಿದಂತೆ ರಾಜ್ಯದ ಬಹುತೇಕ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಇದರಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಬ್ಧವಾದರೆ, ಸಾರಿಗೆ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.

ಬಂದ್‌ನಿಂದ ಬಿಕೋ ಎನ್ನಿಸುವ ರಸ್ತೆಗಳು. (ಸಾಂದರ್ಭಿಕ ಚಿತ್ರ)
ಬಂದ್‌ನಿಂದ ಬಿಕೋ ಎನ್ನಿಸುವ ರಸ್ತೆಗಳು. (ಸಾಂದರ್ಭಿಕ ಚಿತ್ರ)

ಸ್ತಬ್ಧವಾದ ಸಂಚಾರ ವ್ಯವಸ್ಥೆ

ಬಂದ್‌ ಹಿನ್ನೆಲೆಯಲ್ಲಿ ಮಂಗಳವಾರ ದೊಡ್ಡ ಸಂಖ್ಯೆಯಲ್ಲಿ ಬಸ್‌ಗಳು ಬೀದಿಗೆ ಇಳಿಯಲಿಲ್ಲ. ಸರ್ಕಾರಿ ಬಸ್‌ಗಳಿಲ್ಲದೆ ಪ್ರಯಾಣಿಕರು ಪರದಾಡುವಂತಹ ಸ್ಥಿತಿ ಎದುರಾಗಿತ್ತು. ಚಿತ್ರದುರ್ಗದ ಹಿರಿಯೂರು ತಾಲೂಕಿನಿಂದ ಚಿಕಿತ್ಸೆಗೆಂದು ದಾವಣಗೆರೆಗೆ ಆಗಮಿಸಿದ್ದ ಗರ್ಭಿಣಿ ಮಹಿಳೆ ಬಸ್ ಸಂಚಾರ ಇಲ್ಲದೆ ದಾವಣಗೆರೆ ಬಸ್ ನಿಲ್ದಾಣದಲ್ಲೇ ಮಲಗಿದ್ದ ದೃಶ್ಯ ಕಂಡು ಬಂದಿದೆ. ಇನ್ನೂ ರಾಜ್ಯದ ಎಲ್ಲಾ ಪ್ರಮುಖ ಬಸ್ ನಿಲ್ದಾಣಗಳೂ ಬಸ್‌ಗಳಿಲ್ಲದೆ ಬಣಗುಡುತ್ತಿದ್ದು, ಬಾಗಲಕೋಟೆ ಬಸ್ ನಿಲ್ದಾಣದಲ್ಲಿ ಯುವಕರು ಕ್ರಿಕೆಟ್ ಆಡಿ ಗಮನ ಸೆಳೆದರು.

ಭಾರತ್ ಬಂದ್‌ಗೆ ರಾಜ್ಯದಲ್ಲಿ ಕೆಲವು ಖಾಸಗಿ ಸಾರಿಗೆ ಸಂಸ್ಥೆಗಳು ಬಂದ್‌ಗೆ ಬೆಂಬಲ ಸೂಚಿಸಿ ರಸ್ತೆಗೆ ಇಳಿಯಲಿಲ್ಲ. ಆದರೆ ಓಲಾ, ಉಬರ್ ಸೇರಿದಂತೆ ಉಳಿದ ಖಾಸಗಿ ಸಂಸ್ಥೆಗಳು ಬಂದ್‌ಗೆ ಬೆಂಬಲ ಸೂಚಿಸಿಲ್ಲ. ಅಲ್ಲದೆ ಬೆರಳೆಣಿಕೆಯಷ್ಟು ಆಟೋಗಳು ಇಂದು ರಸ್ತೆಗೆ ಇಳಿದಿವೆ. ಹೀಗಾಗಿ ಆಟೋ ಚಾಲಕರು ಹಾಗೂ ಖಾಸಗಿ ಸಾರಿಗೆಯವರ ಜನರಿಂದ ದುಪ್ಪಟ್ಟು ಪ್ರಮಾಣದ ಹಣ ಸುಲಿಗೆ ಮಾಡುತ್ತಿರುವುದು ಕಂಡುಬಂದಿದೆ.

ರಾಜಧಾನಿಯಲ್ಲಿ ಪ್ರತಿಭನೆಯ ಕಾವು

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಕರೆ ನೀಡಲಾಗಿರುವ ಬಂದ್‌ಗೆ ಬೆಂಗಳೂರಿನ ಎಲ್ಲಾ ಕಾರ್ಮಿಕ ಸಂಘಟನೆಗಳೂ ಬೆಂಬಲ ಸೂಚಿಸಿವೆ. ಬಂದ್ ಪ್ರಯುಕ್ತ ನಗರದ ಟೌನ್ ಹಾಲ್ ಎದುರು ಜಮಾಯಿಸಿದ ಸಿಐಟಿಯು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಅಲ್ಲದೆ ಪ್ರತಿಭಟನಾಕಾರರು ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.

ಕಾರ್ಮಿಕ ಸಂಘದ ಪ್ರತಿಭಟನೆಯಲ್ಲಿ ಯಾವುಧೆ ಅಹಿತಕರ ಘಟನೆಗಳೂ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಹಿಸಿರುವ ಪೊಲೀಸ್ ಇಲಾಖೆ ಪ್ರತಿಭಟನೆಗೆ ಬಿಗಿ ಪೊಲೀಸ್ ಬಂದೋಬಸ್ತ್‌ ನೀಡಿದೆ. ಅಲ್ಲದೆ ಬಂದ್ ನಿಮಿತ್ತ ರಾಜಧಾನಿಯಾದ್ಯಂತ ಎಲ್ಲೂ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಕಟ್ಟೆಚ್ಚರವಹಿಸಿದೆ.

ಮೆಜೆಸ್ಟಿಕ್‌ನಲ್ಲಿ ಮಲಗಿದ ವಾಟಾಳ್

ಯಾವಾಗಲೂ ತಮ್ಮ ವಿಭಿನ್ನ ಪ್ರತಿಭಟನೆಗಳ ಮೂಲಕ ಗಮನ ಸೆಳೆಯುವ ವಾಟಾಳ್ ಪಕ್ಷದ ಮುಖಂಡ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ಕೇಂದ್ರ ಸರ್ಕಾರದ ವಿರುದ್ಧ ಇಂದು ಮೆಜೆಸ್ಟಿಕ್‌ನಲ್ಲಿ ಮಲಗಿ ಘೋಷಣೆ ಕೂಗುವ ಮೂಲಕ ಪ್ರತಿಭಟಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ನಿರತ ಸಿಐಟಿಯು ಕಾರ್ಯಕರ್ತರು.
ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ನಿರತ ಸಿಐಟಿಯು ಕಾರ್ಯಕರ್ತರು.

ಟಿಐಟಿಯು ಕಾರ್ಯಕರ್ತರ ಪ್ರತಿಭಟನೆ

ರಾಜ್ಯಾದ್ಯಂತ ಬಂದ್‌ ಬಿಸಿ ಏರಿದ್ದು, ಸಿಐಟಿಯು ಕಾರ್ಯಕರ್ತರು ರಾಜ್ಯದ ಅಲ್ಲಲ್ಲಿ ರಸ್ತೆಗಿಳಿದು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ವೃತ್ತದ ಬಳಿ ತಡೆ ನಡೆಸಿದ ಪ್ರತಿಭಟನಾಕಾರರ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದರಿಂದ ರಸ್ತೆಯಲ್ಲಿ ವಾಹನ ದಟ್ಟಣೆ ಅಧಿಕವಾಗಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಪೊಲೀಸರು ಎಷ್ಟೇ ಮನವೋಲಿಸಲು ಪ್ರಯತ್ನಿಸಿದರೂ ಪಟ್ಟು ಬಿಡದ ಪ್ರತಿಭಟನಾಕಾರರು ಎರಡು ಗಂಟೆಗೂ ಅಧಿಕ ಕಾಲ ರಸ್ತೆ ಬಂದ್ ಮಾಡಿ ಅಲ್ಲೇ ಊಟ ಮಾಡಿ ಪ್ರತಿಭಟಿಸಿದರು.

ಉಡುಪಿಯಲ್ಲೂ ಬಂದ್‌ನ ಬಿಸಿ ಜೋರಾಗಿಯೇ ಇತ್ತು. ಜಿಲ್ಲೆಯಲ್ಲಿ ವಿನೂತನವಾಗಿ ಪ್ರತಿಭಟಿಸಿದ ಅಂಚೆ ಕಚೇರಿ ಸಿಬ್ಬಂದಿಗಳು ತಮ್ಮ ಕಚೇರಿಯ ಎದುರೇ ಡೋಲು ಬಾರಿಸಿ ಘೋಷಣೆ ಕೂಗುವುದರ ಮೂಲಕ ಬಂದ್‌ಗೆ ತಮ್ಮ ಬೆಂಬಲವನ್ನು ಸೂಚಿಸಿದ್ದರು. ಇನ್ನೂ ಸಿಐಟಿಯು ಕಾರ್ಯಕರ್ತರು ಜಿಲ್ಲೆಯಲ್ಲಿ ಬೈಕ್ ರ್ಯಾಲಿ ಮಾಡುವ ಮೂಲಕ ಗಮನ ಸೆಳೆದರು.

ಚಿತ್ರದುರ್ಗದಲ್ಲಿ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪಂಜಿನ ಮೆರವಣಿಗೆ ಮಾಡಿದರು. ಹುಬ್ಬಳ್ಳಿಯಲ್ಲಿ ಆಟೋ ರಿಕ್ಞಾ ಮಾಲೀಕರ ಹಾಗೂ ಚಾಲಕರ ಸಂಘದವರು ತಮಟೆ ಬಾರಿಸುತ್ತಾ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಶವಯಾತ್ರೆ ನಡೆಸುವ ಮೂಲಕ ಪ್ರತಿಭಟಿಸಿದರು. ಇನ್ನೂ ಕಲಬುರಗಿಯಲ್ಲಿ ರಸ್ತೆಯಲ್ಲೇ ಟೈರ್ ಸುಟ್ಟು ಪ್ರತಿಭಟಿಸಿದರೆ, ತುಮಕೂರಿನಲ್ಲಿ ಪ್ರತಿಭಟನಾಕಾರರು ಕೆಎಸ್ಆರ್‌ಟಿಸಿ ಬಸ್ ಮುಂದೆ ಮಲಗಿ ಪ್ರತಿಭಟಿಸಿದರು.

ಇದಲ್ಲದೆ ಬಳ್ಳಾರಿ ಬಾಗಲಕೋಟೆ, ರಾಯಚೂರು, ಕೋಲಾರ, ಚಿಕ್ಕಬಳ್ಳಾಪುರ, ಹುಬ್ಬಳ್ಳಿ, ಕಲಬುರಗಿ, ದಾವಣಗೆರೆ ಮೈಸೂರು, ಗದಗ ಹಾಗೂ ಚಿಕ್ಕೋಡಿ ಸೇರಿದಂತೆ ರಾಜ್ಯದ ನಾನಾ ಕಡೆ ಪ್ರತಿಭಟನಾಕಾರರು ರಸ್ತೆಗಿಳಿದು ಬೈಕ್ ರ್ಯಾಲಿ ಮಾಡುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದಾರೆ.

ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.

ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತ ಬಂದ್

ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಬಂದ್ ಮಾಡಿಸಿದರೆ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಡಿಜಿಪಿ ಹಾಗೂ ಐಜಿ ನೀಲಮಣಿ ರಾಜು ಎಚ್ಚರಿಕೆ ನೀಡಿದ್ದರು. ಆದರೆ ಭಾರತ್ ಬಂದ್‌ ಪ್ರಯುಕ್ತ ಇಂದು ರಾಜ್ಯಾದ್ಯಂತ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿದ್ದವು. ಚಿಕ್ಕಬಳ್ಳಾಪುರದಲ್ಲಿ ತೆರೆದಿದ್ದ ಪೆಟ್ರೋಲ್ ಬಂಕ್ ಒಂದನ್ನು ಮುಚ್ಚುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಇದರಿಂದಾಗಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಕೆಲಕಾಲ ಮಾತಿನ ಕಚಮಕಿ ನಡೆದಿತ್ತು. ಇದರ ಹೊರತಾಗಿ ರಾಜ್ಯದಲ್ಲಿ ಬೇರೆಲ್ಲೂ ಅಹಿತಕರ ಘಟನೆಗಳಾಗಿ, ಸಂಘರ್ಷಗಳಾಗಿ ಕಂಡುಬಂದಿಲ್ಲ.

ಪರೀಕ್ಷೆಗಳು ಮುಂದೂಡಿಕೆ, ವಿದ್ಯಾರ್ಥಿಗಳ ಪರದಾಟ

ಭಾರತ್ ಬಂದ್ ಪ್ರಯುಕ್ತ ರಾಜ್ಯದಾದ್ಯಂತ ಬಹುತೇಕ ಜಿಲ್ಲಾಡಳಿತಗಳು ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಪಿಯುಸಿ ವಿದ್ಯಾರ್ಥಿಗಳಿಗೆ ನಡೆಯಬೇಕಿದ್ದ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಪದವಿ ಪೂರ್ವ ಶಿಕ್ಷಣಾ ಇಲಾಖೆ ಮುಂದೂಡಿದೆ. ಇನ್ನೂ ಇಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿ ಬೆಂಗಳೂರು ವಿಶ್ವವಿದ್ಯಾನಿಲಯ ಆದೇಶ ಹೊರಡಿಸಿದೆ.

ಹುಬ್ಬಳ್ಳಿಯ ಚೇತನಾ ಕಾಲೇಜಿನಲ್ಲಿರುವ ಜೆಇಇ ಪರೀಕ್ಷೆಗೆಂದು ಕೆಲ ವಿದ್ಯಾರ್ಥಿಗಳು ನಿನ್ನೆ ರಾತ್ರಿಯೇ ವಿಜಯಪುರದಿಂದ ಹೊರಟು ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಆದರೆ ಹುಬ್ಬಳ್ಳಿಯಿಂದ ಧಾರವಾಡಕ್ಕೆ ತೆರಳಲು ಬಸ್ ಇಲ್ಲದೆ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಎದುರಾಗಿತ್ತು. ಇನ್ನೂ ಬಂದ್ ಕುರಿತು ತಲೆ ಕೆಡಿಸಿಕೊಳ್ಳದ ಮೈಸೂರಿನಲ್ಲಿ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಎಂದಿನಂತೆ ಪರೀಕ್ಷೆಗಳನ್ನು ನಡೆಸಿದೆ.

ಬಿಕೋ ಎನ್ನುತ್ತಿದೆ ಬೆಂಗಳೂರು

ಬಂದ್ ಎಫೆಕ್ಟ್‌ನಿಂದಾಗಿ ಬೆಂಗಳೂರು ಸಂಪೂರ್ಣವಾಗಿ ಬಿಕೋ ಎನ್ನುತ್ತಿದೆ. ಕೆಎಸ್ಆರ್‌ಟಿಸಿ ಹಾಗೂ ಬಿಎಂಟಿಸಿ ಸಂಸ್ಥೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದರೂ, ಬೆರಳೆಣಿಕೆಯ ಬಿಎಂಟಿಸಿ ಬಸ್‌ ಗಳು ಮಾತ್ರ ಇಂದು ರಸ್ತೆಗೆ ಇಳಿದಿದ್ದವು. ಇದರಿಂದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಪ್ರಯಾಣಿಕರು ಕಾದು ಕುಳಿತಿರುವ ಸ್ಥಿತಿ ಎದುರಾಗಿದೆ. ಇನ್ನೂ ಯಾವಾಗಲೂ ಜನನಿಬಿಡವಾಗಿ ಕಾಣುವ ಮೆಜೆಸ್ಟಿಕ್, ಎಸ್‌ಪಿ ರಸ್ತೆ, ಹಾಗೂ ಮಾರ್ಕೆಟ್‌ ಹಾಗೂ ಯಶವಂತಪುರ ಎಪಿಎಮ್‌ಸಿ ಮಾರ್ಕೆಟ್ ಇಂದು ಖಾಲಿ ಹೊಡೆಯುತ್ತಿತ್ತು. ಬಂದ್ ನಿಂದಾಗಿ ಮೆಟ್ರೋ ಸಂಚಾರಕ್ಕೆ ಯಾವ ತಡೆತಡೆಯೂ ಇಲ್ಲ. ಆದರೆ ಮೆಟ್ರೋಗೆ ಸಂಪರ್ಕ ಕಲ್ಪಿಸುವ ಬಸ್ ಸಾರಿಗೆ ಇಲ್ಲದ ಕಾರಣ ಮೆಟ್ರೋ ಸಹ ಇಂದು ಖಾಲಿ ಖಾಲಿಯಾಗಿ ಕಾಣುತ್ತಿತ್ತು.

ಬೆಂಗಳೂರಿನಲ್ಲಿ ಮಾಲ್‌ಗಳು ಹಾಗೂ ಚಿತ್ರಮಂದಿರಗಳು ಎಂದಿನಂತೆ ತೆರೆದೇ ಇದ್ದವು. ಆದರೆ ಜನಸಾಮಾನ್ಯರು ಆ ಕಡೆ ಸುಳಿಯದ ಕಾರಣ ಬೆಂಗಳೂರಿನ ಬಹುತೇಕ ಮಾಲ್ ಹಾಗೂ ಚಿತ್ರಮಂದಿರಗಳು ಗ್ರಾಹಕರಿಲ್ಲದೆ ಬಣಗುಡುತ್ತಿದ್ದವು.

ವಿಧಾನ ಸೌಧ ಖಾಲಿ ಖಾಲಿ

ಬಂದ್ ಪ್ರಯುಕ್ತ ಸರ್ಕಾರಿ ರಜೆ ಘೋಷಿಸಲಾಗಿಲ್ಲ ಆದರೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ವಿಧಾನಸೌಧ, ವಿಕಾಸಸೌಧ ಹಾಗೂ ಉದ್ಯೋಗಸೌಧಕ್ಕೆ ಆಗಮಿಸುವ ಸರಕಾರಿ ನೌಕರರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿತ್ತು. ಅಲ್ಲದೆ ವಿವಿಧ ಕೆಲಸಗಳಿಗಾಗಿ ರಾಜ್ಯದ ನಾನಾ ಮೂಲೆಯಿಂದ ವಿಧಾನಸೌಧದ ಕಡೆಗೆ ಮುಖಮಾಡುವ ಜನ ಸಹ ಬಂದ್ ನಿಂದಾಗಿ ಇಂದು ಅತ್ತಕಡೆ ಸುಳಿಯಲಿಲ್ಲ. ಪರಿಣಾಮ ವಿಧಾನಸೌಧ ಹಾಗೂ ಇತರೆ ಸರ್ಕಾರಿ ಕಚೇರಿಗಳು ಇಂದು ಜನರಿಲ್ಲದೆ ಖಾಲಿ ಖಾಲಿಯಾಗಿತ್ತು.

ಒಟ್ಟಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ “ಭಾರತ್ ಬಂದ್‌”ಗೆ ರಾಜ್ಯದಲ್ಲಿ ಬೇಷಾರತ್ ಬೆಂಬಲ ವ್ಯಕ್ತವಾಗಿದೆ. ನಾಳೆಯೂ ಬಂದ್ ಇರಲಿದ್ದು ಇದರ ಕಾವು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಬಂದ್‌ನಿಂದಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾವಿರಾರು ಕೋಟಿ ಹಣವನ್ನು ಕಳೆದುಕೊಳ್ಳಲಿದೆ. ಆದರೆ ಕೇಂದ್ರ ಮೋಟಾರು ಕಾಯ್ದೆ-2016 ನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡುತ್ತಿರುವ ಮೂರನೇ ಪ್ರತಿಭಟನೆ ಇದಾಗಿದ್ದು, ಈಗಾಲಾದರೂ ಸರಕಾರ ಕಾರ್ಮಿಕರ 12 ಕೋರಿಗೆಗೆ ಕಿವಿಯಾಗುತ್ತಾ.? ಮೋಟಾರು ಕಾಯ್ದೆ-2016 ನ್ನು ತಿದ್ದುಪಡಿ ಮಾಡುತ್ತಾ? ಕಾರ್ಮಿಕರ ಸಮಸ್ಯೆಗೆ ಪರಿಹಾರ ಒದಗಿಸುತ್ತಾ? ಎಂಬುದನ್ನು ಕಾದು ನೋಡಬೇಕಿದೆ.