samachara
www.samachara.com
ಸುದ್ದಿಕೇಂದ್ರದಲ್ಲಿ ಎಚ್‌ಎಎಲ್: ರಾಜಕೀಯ ಆರೋಪಗಳ ಆಚೆಗೆ ಅಸಲಿ ಸಂಗತಿ ಇಲ್ಲಿದೆ...
COVER STORY

ಸುದ್ದಿಕೇಂದ್ರದಲ್ಲಿ ಎಚ್‌ಎಎಲ್: ರಾಜಕೀಯ ಆರೋಪಗಳ ಆಚೆಗೆ ಅಸಲಿ ಸಂಗತಿ ಇಲ್ಲಿದೆ...

ಕೇಂದ್ರ ಎಚ್‌ಎಎಲ್ ಜೊತೆಗೆ 1 ಲಕ್ಷ ಕೋಟಿ ಒಪ್ಪಂದ ಮಾಡಿಕೊಳ್ಳುವುದಿರಲಿ, ಅಸಲಿಗೆ ಈವರೆಗೆ ಮಾಡಿದ ಕೆಲಸಕ್ಕೆ ನೀಡಬೇಕಾದ 15,700 ಕೋಟಿ ಹಣವನ್ನೇ ಇನ್ನೂ ನೀಡಿಲ್ಲ. ಅಲ್ಲದೆ 6,500 ಕೋಟಿ ಹಣವನ್ನು 2018 ರಲ್ಲಿ ಹಿಂಪಡೆದಿತ್ತು. 

ಕಳೆದ ಮೂರು ದಿನಗಳಿಂದ ಸಂಸತ್‌ನಲ್ಲಿ ರಫೇಲ್ ಡೀಲ್ ಹಾಗೂ ಎಚ್‌ಎಎಲ್ (ಹಿಂದೂಸ್ತಾನ್ ಏರೋನಾಟಿಕ್ ಲಿಮಿಲೆಟ್)ಕುರಿತ ಆರೋಪ ಪ್ರತ್ಯಾರೋಪಗಳು ಕಾವು ಪಡೆದುಕೊಳ್ಳುತ್ತಲೇ ಇದೆ. ಈ ವಿಚಾರವಾಗಿ ಆಡಳಿತ ಹಾಗೂ ಪ್ರತಿಪಕ್ಷಗಳು ಕೆಸರೆರಚಾಟ ನಡೆಸುತ್ತಿವೆ.

ಸಂಸತ್‌ನಿಂದ ಹೊರಗೆ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನಡುವಿನ ಟ್ವೀಟ್ ಸಮರವೂ ಮುಂದುವರೆದಿದೆ. ಸಹಜವಾಗಿಯೇ ಇದು, ಎಚ್‌ಎಎಲ್ ವಿಚಾರದಲ್ಲಿ ಯಾರು ಸತ್ಯ ಹೇಳುತ್ತಿದ್ದಾರೆ, ಯಾರು ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಗೊಂದಲವನ್ನು ಸೃಷ್ಟಿಸಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ‘ಸಮಾಚಾರ’ ವಿವಾದದ ಅಸಲಿ ಸಂಗತಿಗಳನ್ನು ನಿಮಗಿಲ್ಲಿ ಕಟ್ಟಿಕೊಟ್ಟಿದೆ.

ವಿವಾದದ ಮೂಲ:

ಶನಿವಾರ ಅಧಿವೇಶನದಲ್ಲಿ ಎಚ್‌ಎಎಲ್ ವಿವಾದ ಬಿಗಿಲೆದ್ದಿತ್ತು. ರಫೇಲ್ ಒಪ್ಪಂದವನ್ನು ಎಚ್‌ಎಎಲ್ ಬದಲಿಗೆ ಫ್ರಾನ್ಸ್ ಮೂಲದ ಡಸಾಲ್ಟ್ ಕಂಪೆನಿಗೆ ನೀಡಿದ್ದರ ಪರಿಣಾಮ ಇಂದು ಎಚ್‌ಎಎಲ್ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ. ಕನಿಷ್ಟ ಉದ್ಯೋಗಿಗಳಿಗೆ ಸಂಬಳ ನೀಡಲು ಸಂಸ್ಥೆಯ ಬಳಿ ಹಣವಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ಪ್ರತಿಪಕ್ಷಗಳ ಟೀಕೆಗೆ ಸದನದಲ್ಲಿ ಉತ್ತರಿಸಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ರಫೇಲ್ ಒಪ್ಪಂದವನ್ನು ಸಮರ್ಥಿಸಿಕೊಂಡಿದ್ದರು. ಅಲ್ಲದೆ 2014 ರಿಂದ 2018 ಅವಧಿಯಲ್ಲಿ ಕೇಂದ್ರ ಸರಕಾರ ಎಚ್‌ಎಎಲ್ ಜೊತೆಗೆ 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಉಪಕರಣಗಳ ತಯಾರಿಕಾ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಿಕೆ ನೀಡಿದ್ದರು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಈ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ ಹೀಗೆಳೆದಿದ್ದ ರಾಹುಲ್ ಗಾಂಧಿ, "ಮೋದಿ ಹೇಳಿದ ಒಂದು ಸುಳ್ಳನ್ನು ಮರೆಮಾಚಲು ಬಿಜೆಪಿ ಮತ್ತೆ ಮತ್ತೆ ಸುಳ್ಳು ಹೇಳುತ್ತಾ ಸುಳ್ಳಿನ ಕೋಟೆಯನ್ನೇ ನಿರ್ಮಿಸುತ್ತಿದೆ, ಎಚ್‌ಎಎಲ್‌ ಜತೆ 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಸಾಮಾಗ್ರಿಗಳ ತಯಾರಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ನಿನ್ನೆಯ ಅಧಿವೇಶನದಲ್ಲಿ ಮತ್ತೊಂದು ಸುಳ್ಳು ಹೇಳಿದ್ದಾರೆ. ನಾಳಿನ ಅಧಿವೇಶನದಲ್ಲಿ ಅವರು ಈ ಕುರಿತ ದಾಖಲೆ ನೀಡಲಿ ಅಥವಾ ತಮ್ಮ ಸ್ಥಾನಕ್ಕೆ ರಾಜೀನಾಮೆ" ನೀಡಲಿ ಎಂದು ಆಗ್ರಹಿಸಿದ್ದರು.

ಸಚಿವೆಯ ಟ್ವೀಟ್ ಸಮರ

ಹೇಳಿಕೆ- ಪ್ರತಿಹೇಳಿಕೆಯಲ್ಲಿ ಮುಳುಗಿರುವ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ. 
ಹೇಳಿಕೆ- ಪ್ರತಿಹೇಳಿಕೆಯಲ್ಲಿ ಮುಳುಗಿರುವ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ. 

ರಾಹುಲ್ ಗಾಂಧಿ ಅವರ ಟೀಕೆಗೆ ಟ್ವೀಟ್ ಮೂಲಕವೇ ಉತ್ತರಿಸಿದ ಸಚಿವೆ ನಿರ್ಮಲಾ ಸೀತಾರಾಮನ್, "ರಾಹುಲ್‌ಗೆ ಸುಳ್ಳು ಹೇಳುವುದೇ ಖಯಾಲಿ. ರಕ್ಷಣಾ ವ್ಯವಸ್ಥೆ ಬಗ್ಗೆ ಅವರ ತಿಳುವಳಿಕೆ ನಿಜಕ್ಕೂ ಶೊಚನೀಯ. ಸಂಸತ್ತಿನಲ್ಲಿ ನಾವು ಹೇಳಿದ್ದನ್ನು ರಾಹುಲ್ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಅವರಿಗೆ ಎಲ್ಲವನ್ನೂ ಎಬಿಸಿಡಿಯಿಂದ ಹೇಳಿಕೊಡುವ ಅವಶ್ಯಕತೆ ಇದೆ ಎಂದು ಜರಿದಿದ್ದರು.

ಅಲ್ಲದೆ ಎಚ್‌ಎಎಲ್ ಜೊತೆಗಿನ ಒಪ್ಪಂದದ ಕುರಿತ ಮಾಹಿತಿ ನೀಡಿದ ಅವರು, "ಎಚ್‌ಎಎಲ್‌ ಗೆ 2014 ರಿಂದ 2018 ರ ಅವಧಿಯಲ್ಲಿ 26570 ಕೋಟಿ ರೂಪಾಯಿ ಮೊತ್ತ ರಕ್ಷಣಾ ಉಪಕರಣಗಳ ತಯಾರಿಕೆಗಾಗಿ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಇನ್ನೂ 73 ಸಾವಿರ ಕೋಟಿ ಮೌಲ್ಯದ ಒಪ್ಪಂದದ ಪ್ರಕ್ರಿಯೆ ಚಾಲನೆಯಲ್ಲಿದೆ. ರಫೇಲ್ ಹಾಗೂ ಎಚ್‌ಎಎಲ್ ವಿವಾದದಲ್ಲಿ ರಾಹುಲ್ ಗಾಂಧಿ ದೇಶದ ಜನತೆಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ" ಎಂದು ಟೀಕಿಸಿದರು.

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಸಮಯದಲ್ಲೇ ಅಂದಿನ ಸರ್ಕಾರ ಎಚ್‌ಎಎಲ್ ಜೊತೆಗೆ ಲಘು ಯುದ್ಧ ವಿಮಾನಗಳ ಪೂರೈಕೆಗಾಗಿ 52 ಸಾವಿರ ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈಗಿನ ಎನ್‌ಡಿಎ ಸರ್ಕಾರ ಅದನ್ನು ತನ್ನ ಹೆಸರಿಗೆ ಕ್ಲೈಮ್ ಮಾಡಲು ಹೊರಟಿದೆ. ಇನ್ನೂ 1 ಲಕ್ಷ ಕೋಟಿ ಒಪ್ಪಂದ ಎಂಬುದೆಲ್ಲ ರಾಜಕಾರಣಿಗಳು ನೀಡುವ ಆಶ್ವಾಸನೆಗಳಿದ್ದಂತೆ. ಈವರೆಗೆ ಎಚ್‌ಎಎಲ್‌ಗೆ ಕೇಂದ್ರದಿಂದ ಯಾವುದೇ ಕೆಲಸ ಬಂದಿಲ್ಲ. 
ಎಚ್‌ಎಎಲ್ ಮೂಲಗಳು. 

ಟೀಕಾಪ್ರಹಾರದ ಮುಂದುವರಿಕೆ:

ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ ಬೆನ್ನಿಗೆ ಮತ್ತೆ ಟೀಕಾಪ್ರಹಾರ ನಡೆಸಿದ ರಾಹುಲ್ ಗಾಂಧಿ, "ಶನಿವಾರದ ಅಧಿವೇಶನದಲ್ಲಿ ಎಚ್‌ಎಎಲ್‌ ಜೊತೆಗೆಗೆ 1 ಲಕ್ಷ ಕೋಟಿ ಮೌಲ್ಯದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದ ರಕ್ಷಣಾ ಸಚಿವೆ, ಇಂದು 26570 ಕೋಟಿ ರೂಪಾಯಿ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿದೆ, ಉಳಿದ 73 ಸಾವಿರ ಕೋಟಿ ರೂಪಾಯಿ ಮೌಲ್ಯದ ಒಪ್ಪಂದ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಹೇಳುತ್ತಾರೆ. ಇನ್ನೂ ಚಾಲನೆಯಲ್ಲೇ ಇರುವ ಒಪ್ಪಂದ ಪ್ರಕ್ರಿಯೆ ತಾಂತ್ರಿಕವಾಗಿ ಸಮ್ಮತವಲ್ಲ. ಹಾಗಾದರೆ ನಿರ್ಮಲಾ ಸೀತಾರಾಮನ್ ಸಂಸತ್‌ಗೆ ನೇರವಾಗಿ ಸುಳ್ಳು ಮಾಹಿತಿ ಕೊಟ್ಟಂತಾಗಲಿಲ್ಲವೇ? ಇನ್ನೂ 26570 ಕೋಟಿ ಮೌಲ್ಯದ ಒಪ್ಪಂದ ಆಗಿದೆ ಎಂದಾದರೆ ಎಚ್‌ಎಎಲ್ ಸಂಸ್ಥೆಗೆ ಏಕೆ ತನ್ನ ಉದ್ಯೋಗಿಗಳಿಗೆ ಸಂಬಳ ನೀಡಲೂ ಆಗದ ಸ್ಥಿತಿ ಎದುರಾಗುತ್ತಿತ್ತು.? ಎಂದು ಮರು ಪ್ರಶ್ನಿಸಿದ್ದಾರೆ.

'ಫ್ರಾನ್ಸ್ ಮೂಲದ ಡಸಾಲ್ಟ್ ಕಂಪೆನಿ ಒಂದೇ ಒಂದು ಚೆಟ್ ವಿಮಾನವನ್ನು ಭಾರತಕ್ಕೆ ನೀಡದೆ 20 ಸಾವಿರ ಕೋಟಿ ರೂಪಾಯಿ ಮುಂಗಡ ಹಣ ಪಡೆಯುತ್ತದೆ. ಆದರೆ ಎಚ್‌ಎಎಲ್ ಭಾರತೀಯ ರಕ್ಷಣಾ ಪಡೆಗೆ ಲಘು ವಿಮಾನಗಳನ್ನು ನೀಡಿದ್ದರೂ ಸಂಸ್ಥೆಗೆ ನೀಡಬೇಕಿರುವ 15700 ಕೋಟಿ ಹಣವನ್ನು ಕೇಂದ್ರ ಸರ್ಕಾರ ಏಕೆ ಬಾಕಿ ಉಳಿಸಿಕೊಂಡಿದೆ? ಎಚ್‌ಎಎಲ್ ನ ಇಂದಿನ ಪರಿಸ್ಥಿತಿಗೆ ಕೇಂದ್ರ ಸರ್ಕಾರವೇ ಕಾರಣ ಎಂದು ನೇರಾನೇರ ಟೀಕಿಸಿದ್ದಾರೆ.

ಅಲ್ಲದೆ 'ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಲಾದ ಒಪ್ಪಂದವನ್ನು ಮುರಿದು ಪ್ರಧಾನಿ ನರೇಂದ್ರ ಮೋದಿ 126 ಜೆಟ್ ಯುದ್ಧ ವಿಮಾನದ ಬದಲಿಗೆ 36 ಯುದ್ಧ ವಿಮಾನಗಳ ತಯಾರಿಕಾ ಒಪ್ಪಂದವನ್ನು ಫ್ರಾನ್ಸ್ ಮೂಲದ ಡಸಾಲ್ಟ್ ಕಂಪೆನಿಗೆ ಗುತ್ತಿಗೆ ನೀಡುವ ನಿರ್ಧಾರ ತೆಗೆದುಕೊಂಡಾಗ, ರಕ್ಷಣಾ ಇಲಾಖೆ ಹಾಗೂ ವಾಯುಸೇನೆಯ ಹಿರಿಯ ಅಧಿಕಾರಿಗಳು ಮೋದಿಯ ಹಸ್ತಕ್ಷೇಪವನ್ನು ಖಂಡಿಸಿದ್ದರೆ' ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಬೇಕು ಎಂದಿದ್ದಾರೆ.

ಅಸಲಿ ಸಂಗತಿ

ಎಚ್‌ಎಎಲ್ ಜೊತೆಗೆ 2014 ರಿಂದ 2018 ರ ಅವಧಿಯಲ್ಲಿ ಕೇಂದ್ರ ಸರ್ಕಾರ ಸುಮಾರು 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಒಪ್ಪಂದ ಮಾಡಿಕೊಂಡಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್‌ನಲ್ಲಿ ಮಾಹಿತಿ ನೀಡಿದ್ದರು. ಆದರೆ, "ಒಂದು ಲಕ್ಷ ರೂ. ಮೌಲ್ಯದ ಒಪ್ಪಂದ ನೀಡುವುದಿರಲಿ, ಈವರೆಗಿನ ಕೆಲಸಕ್ಕೆ ಈಗಾಗಲೇ ಬಿಡುಗಡೆ ಮಾಡಬೇಕಿರುವ 15,700 ಕೋಟಿ ರೂ ಹಣವನ್ನೇ ಇನ್ನೂ ಕೇಂದ್ರ ಬಿಡುಗಡೆ ಮಾಡಿಲ್ಲ. ಅಲ್ಲದೆ 2018 ರಲ್ಲಿ ಎರಡು ಹಂತದಲ್ಲಿ ಎಚ್‌ಎಎಲ್‌ನಿಂದ 6,500 ಕೋಟಿ ಹಣವನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿದೆ,” ಎನ್ನುತ್ತಿವೆ ಎಚ್‌ಎಎಲ್ ಮೂಲಗಳು.

ಕಳೆದ ಮೂರು ತಿಂಗಳಿನಿಂದ ಉದ್ಯೋಗಿಗಳಿಗೆ ಸಂಬಳ ಕೊಡುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿರುವ ಎಚ್‌ಎಎಲ್ ಉದ್ಯೋಗಿಗಳಿಗೆ ಸಂಬಳ ನೀಡುವ ಸಲುವಾಗಿ ಎಸ್‌ಬಿಐನಿಂದ 1 ಸಾವಿರ ಕೋಟಿ ಸಾಲ ಪಡೆದಿದೆ.

Also read: ಬರಿದಾದ ‘ಎಚ್‌ಎಎಲ್‌’ ಖಜಾನೆ, ಸಿಬ್ಬಂದಿ ಸಂಬಳಕ್ಕಾಗಿ 1,000 ಕೋಟಿ ರೂ. ಸಾಲ!

ಒಂದಷ್ಟು ಪ್ರಶ್ನೆಗಳು:

*ಕೇಂದ್ರ ಸರ್ಕಾರ ಎಚ್‌ಎಎಲ್‌ ಜೊತೆಗೆ ಒಂದು ಲಕ್ಷ ಕೋಟಿ ರೂ. ಮೌಲ್ಯದ ಒಪ್ಪಂದ ಮಾಡಿಕೊಂಡಿದೆ ಎಂದರೆ, ಈಗಾಗಲೇ ಮಾಡಿರುವ ಕೆಲಸಕ್ಕೆ ಸಲ್ಲಬೇಕಾದ 15700 ಕೊಟಿ ಹಣವನ್ನು ಏಕೆ ಬಾಕಿ ಉಳಿಸಿಕೊಂಡಿದೆ..?

*2018ರಲ್ಲಿ ಕೇಂದ್ರ ಸರ್ಕಾರ ಎಚ್‌ಎಎಲ್‌ನಿಂದ ಎರಡು ಹಂತದಲ್ಲಿ 6500 ಕೋಟಿ ಹಣವನ್ನು ಹಿಂದಕ್ಕೆ ಪಡೆಯಲು ಕಾರಣವೇನು?

*ಎಚ್‌ಎಎಲ್ ತನ್ನ ನೌಕರರಿಗೆ ಕಳೆದ ಮೂರು ತಿಂಗಳಿನಿಂದ ಸಂಬಳ ನೀಡಲಾಗದೆ ಎಸ್‌ಬಿಐ ನಿಂದ 1 ಸಾವಿರ ಕೋಟಿ ಸಾಲ ಪಡೆದಿದೆ. ಈ ಕುರಿತು ಕೇಂದ್ರ ಸರ್ಕಾರ ಏಕೆ ಮೌನ ಮುರಿಯುತ್ತಿಲ್ಲ?

*ಕೇಂದ್ರ ಸರ್ಕಾರ ಯುದ್ಧ ವಿಮಾನಗಳ ಪೂರೈಕೆಗಾಗಿ ಕೇವಲ 15 ದಿನದಲ್ಲಿ ಆರಂಭವಾದ ಅನಿಲ್ ಅಂಬಾನಿ ಕಂಪೆನಿಯ ಮೇಲೆ ಇಷ್ಟೊಂದು ನಂಬಿಕೆ ಇಡುತ್ತದೆ ಎಂದಾದರೆ, ಆ ನಂಬಿಕೆ ದಶಕಗಳಿಂದ ದೇಶದ ರಕ್ಷಣಾ ವ್ಯವಸ್ಥೆಯ ಬೆನ್ನೆಲುಬಾಗಿರುವ ಎಚ್‌ಎಎಲ್ ಮೇಲೆ ಏಕಿಲ್ಲ?

ಹೀಗೆ ಸದನದಲ್ಲಿ ಎಚ್‌ಎಎಲ್‌ಗೆ ಒಂದು ಲಕ್ಷ ಕೋಟಿ ರೂ. ಮೌಲ್ಯದ ಒಪ್ಪಂದ ನೀಡಲಾಗಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿರುವ ಮಾಹಿತಿಯಿಂದಾಗಿ, ಕೇಂದ್ರ ಸರ್ಕಾರ ಹಾಗೂ ಎಚ್‌ಎಎಲ್ ನಡುವಿನ ಒಪ್ಪಂದದ ಕುರಿತು ಸಾಲು ಸಾಲು ಪ್ರಶ್ನೆಗಳನ್ನು ಎದುರಾಗಿವೆ. ಈನಡುವೆ ಕಳೆದ ಮೂರು ದಿನದಿಂದ ಅಧಿವೇಶನ ಹಾಗೂ ಸಮಾಜಿಕ ಜಾಲತಾಣದಲ್ಲಿ ಈ ಕುರಿತು ನಿರ್ಮಲಾ ಸೀತಾರಾಮನ್ ಹಾಗೂ ರಾಹುಲ್ ಗಾಂಧಿ ನಡುವೆ ದೊಡ್ಡ ಕದನವೇ ನಡೆಯುತ್ತಿದೆ. ಈ ಕುರಿತು ಸಂಸತ್‌ಗೆ ಸ್ಪಷ್ಟ ಉತ್ತರ ನೀಡಬೇಕಾದ ಪ್ರಧಾನಿ ನರೇಂದ್ರ ಮೋದಿ ಸಂಸತ್‌ ದಾರಿಯನ್ನೇ ಮರೆತಿದ್ದಾರೆ. ಆದರೆ ಕೇಂದ್ರದ ನೀತಿಯಿಂದ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ದೇಶದ ಹೆಮ್ಮೆಯ ಎಚ್‌ಎಎಲ್ ಇದೀಗ ತನ್ನ ಘನತೆಯನ್ನೂ ಕಳೆದುಕೊಳ್ಳುತ್ತಿದೆ. ಈ ರಾಜಕೀಯ ವಿವಾದದ ಆಚೆಗೆ ಗಮನಿಸಬೇಕಿರುವ ಸಂಗತಿ ಇದು.