samachara
www.samachara.com
EVM ಮ್ಯಾಜಿಕ್: ಮಧ್ಯ ಪ್ರದೇಶದ 204 ಕ್ಷೇತ್ರಗಳಲ್ಲಿ ಬಿದ್ದ ಮತಗಳಿಗೂ ಲೆಕ್ಕ ಹಾಕಿದ್ದಕ್ಕೂ ತಾಳೆಯೇ ಇಲ್ಲ!
COVER STORY

EVM ಮ್ಯಾಜಿಕ್: ಮಧ್ಯ ಪ್ರದೇಶದ 204 ಕ್ಷೇತ್ರಗಳಲ್ಲಿ ಬಿದ್ದ ಮತಗಳಿಗೂ ಲೆಕ್ಕ ಹಾಕಿದ್ದಕ್ಕೂ ತಾಳೆಯೇ ಇಲ್ಲ!

ಮಧ್ಯ ಪ್ರದೇಶದಲ್ಲಿ ಮತಎಣಿಕೆ ಮುಕ್ತಾಯಗೊಂಡಾಗ, ಮತದಾನ ನಡೆದ ದಿನ ಬಿದ್ದ ಮತಗಳಿಗೂ ಎಣಿಕೆ ಮಾಡಿದಾಗ ಸಿಕ್ಕಿದ ಮತಗಳಿಗೂ ತಾಳೆಯಾಗದೇ ಇರುವುದು ಗಮನಕ್ಕೆ ಬಂದಿದೆ. ಇದು ಅಚ್ಚರಿಯ ಜತೆ ಅನುಮಾನವನ್ನು ಹುಟ್ಟಿಸಿದೆ.

ಎಲೆಕ್ಟ್ರಾನಿಕ್‌ ವೋಟಿಂಗ್‌ ಮೆಷೀನ್ ಅಥವಾ ಇವಿಎಂನ್ನು ಭಾರತದಲ್ಲಿ ಮತದಾನಕ್ಕೆ ಬಳಸಲಾಗುತ್ತದೆ. ಹಲವು ಗುರುತರ, ಗಂಭೀರ ಆರೋಪಗಳಿಗೆ ಗುರಿಯಾದ ಮೆಷೀನ್‌ ಇದು. ಇದರಲ್ಲಿರುವ ಮತಗಳನ್ನು ತಿರುಚಬಹುದು ಎಂಬ ಆರೋಪವನ್ನು ನರೇಂದ್ರ ಮೋದಿ ಪ್ರಧಾನಿಯಾದ ನಂತರ ವಿರೋಧ ಪಕ್ಷಗಳು ಮಾಡುತ್ತಲೇ ಬಂದಿವೆ. ಈ ಆರೋಪಗಳಿಂದ ಒಟ್ಟಾರೆ ಇವಿಎಂ ಮೇಲಿನ ನಂಬಿಕೆಯನ್ನು ಹಲವು ಜನರು ಕಳೆದುಕೊಂಡಿದ್ದಾರೆ. ಇದೀಗ ಈ ಅನುಮಾನಗಳಿಗೆ ಮತ್ತಷ್ಟು ಪುಷ್ಠಿ ನೀಡುವ ಬೆಳವಣಿಗೆ ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಡೆದಿದೆ.

ಆಗಿದ್ದೇನು?

ನವೆಂಬರ್‌ 28ರಂದು ಮಧ್ಯ ಪ್ರದೇಶ ವಿಧಾನಸಭೆಯ 230 ಸ್ಥಾನಗಳಿಗೆ ಮತದಾನ ನಡೆದಿತ್ತು. ಎಂದಿನಂತೆ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಒಳಗೊಂಡ ಮತಯಂತ್ರಗಳನ್ನು ಚುನಾವಣೆಗೆ ಬಳಸಲಾಗಿತ್ತು. ಹೀಗೆ ಬಿದ್ದ ಮತಗಳನ್ನು ಡಿಸೆಂಬರ್‌ 11ರಂದು ಎಣಿಕೆಗೆ ಒಳಪಡಿಸಲಾಯಿತು. ಎಣಿಕೆಗೆ ಒಳಪಡಿಸಿದಾಗ ಎಣಿಸಿದ ಮತಗಳಿಗೂ ಹಾಕಿದ ಮತಗಳ ಸಂಖ್ಯೆಗೂ ದೊಡ್ಡ ಮಟ್ಟಕ್ಕೆ ತಾಳೆಯಾಗದೇ ಇರುವುದು ಗಮನಕ್ಕೆ ಬಂದಿದೆ. ಇದು ಅಚ್ಚರಿಯ ಜತೆ ಅನುಮಾನವನ್ನು ಹುಟ್ಟಿಸಿದೆ.

ಹಾಗಂಥ ಹಾಕಿದಮತಗಳಿಗಿಂತ ಇವಿಎಂ ಹೆಚ್ಚಿನ ಮತಗಳನ್ನು ತೋರಿಸುವುದು ಇದೇ ಮೋದಲೇನೂ ಅಲ್ಲ. ಕರ್ನಾಟಕ ಚುನಾವಣೆಯ ಸಂದರ್ಭದಲ್ಲೂ ಇದೇ ರೀತಿ ನಡೆದಿತ್ತು. ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಸ್ಪರ್ಧಿಸಿದ್ದ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 135Aನಲ್ಲಿ ಇವಿಎಂ ಮತ್ತು ವಿವಿಪ್ಯಾಟ್‌ ನಡುವೆ ಮತಗಳು ತಾಳೆಯಾಗದೆ ಗೊಂದಲ ಸೃಷ್ಟಿಯಾಗಿತ್ತು. ಕೊನೆಗೆ ಇಲ್ಲಿ ಅಣಕು ಮತದಾನದ ಸಂದರ್ಭದಲ್ಲಿ ಹಾಕಿದ್ದ ಮತಗಳನ್ನು ಇವಿಎಂಗಳಿಂದ ತೆಗೆದು ಹಾಕಿರಲಿಲ್ಲ ಎಂದು ಹೇಳಿದ್ದ ಚುನಾವಣಾ ಆಯೋಗ ನಿಯಮದಂತೆ ವಿವಿಪ್ಯಾಟ್‌ ಸ್ಲಿಪ್‌ಗಳನ್ನು ಎಣಿಕೆ ಮಾಡಲು ನಿರ್ಧರಿಸಿತ್ತು.

ಮತ್ತು ಇಲ್ಲಿ ಜಗದೀಶ್‌ ಶೆಟ್ಟರ್‌ 20,000 ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದರಿಂದ ಹಾಗೂ ಸಮಸ್ಯೆಯಾಗಿದ್ದ ಇವಿಎಂನ ಮತಗಳ ಸಂಖ್ಯೆ ಕೇವಲ 459 ಆಗಿದ್ದರಿಂದ ಕಾನೂನುಗಳನ್ನು ಮುಂದಿಟ್ಟು ಆ ಪ್ರಕಾರ ಅವರನ್ನು ವಿಜಯಿ ಎಂದು ಘೋಷಿಸಲಾಯಿತು. ಕರ್ನಾಟಕ ಚುನಾವಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಬಳಸಲಾಗಿತ್ತಾದರೂ, ಒಂದು ಕ್ಷೇತ್ರದಲ್ಲಿ ಒಂದು ಮತಗಟ್ಟೆಯ ಇವಿಎಂ ಮತ್ತು ವಿವಿಪ್ಯಾಟ್‌ನ ಮತಗಳು ತಾಳೆಯಾಗುತ್ತಿವೆಯೇ ಎಂದು ನೋಡಲಾಗುತ್ತಿದ್ದರಿಂದ ಹೆಚ್ಚಿನ ಕಡೆಗಳಲ್ಲಿ ಗೊಂದಲ ಸೃಷ್ಟಿಯಾಗುವ ಸಂದರ್ಭ ಒದಗಿ ಬಂದಿರಲಿಲ್ಲ.

ಆದರೆ ‘ಹುಬ್ಬಳ್ಳಿ-ಧಾರವಾಡ ಕೇಂದ್ರ’ ಕ್ಷೇತ್ರದ ಬೆಳವಣಿಗೆ ನಂತರ, ಈ ಹಿಂದಿದ್ದ ಗುಮಾನಿಗಳನ್ನೂ ಸೇರಿಸಿ ಈ ಇವಿಎಂ ಭಯಕ್ಕೆ ಅಂತ್ಯ ಹಾಡಲು ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲು ಹತ್ತಿದವು. ಶೇಕಡಾ 10 ರಿಂದ 30ರಷ್ಟು ಇವಿಎಂ ಮತ್ತು ವಿವಿಪ್ಯಾಟ್‌ಗಳ ಮತಗಳನ್ನು ಎಣಿಕೆ ಮಾಡಿ ತಾಳೆ ಹಾಕುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅವರುಗಳೆಲ್ಲಾ ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಹಲವು ಬೆಳವಣಿಗೆಗಳು ನಡೆದು ಇತ್ತೀಚೆಗಷ್ಟೇ ಮುಕ್ತಾಯಗೊಂಡ ಪಂಚ ರಾಜ್ಯಗಳ ಚುನಾವಣೆಗಳಲ್ಲಿ ಮತ್ತೆ ಹಳೇ ಪದ್ಧತಿಯಂತೆ ಪ್ರತಿ ಕ್ಷೇತ್ರದಲ್ಲಿ ಒಂದು ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ತಾಳೆ ಹಾಕಲು ಚುನಾವಣಾ ಆಯೋಗ ನಿರ್ಧರಿಸಿತ್ತು. ಅಸಲಿಗೆ ಸಮಸ್ಯೆ ಇಲ್ಲಿಂದ ಆರಂಭವಾಗಿತ್ತು.

ಡಿಸೆಂಬರ್‌ 11ರಂದು ಮತಗಳ ಎಣಿಕೆಗೆ ಕುಳಿತುಕೊಂಡಾಗ ದೊಡ್ಡ ಮಟ್ಟಕ್ಕೆ ಇವಿಎಂ ಮತ್ತು ವಿವಿಪ್ಯಾಟ್‌ಗಳ ನಡುವೆ ವ್ಯತ್ಯಾಸಗಳು ಕಾಣಿಸಿಕೊಂಡವು. ಅದರಲ್ಲೂ ಜಿದ್ದಾ ಜಿದ್ದಿನ ಕಾದಾಟಕ್ಕೆ ಸಾಕ್ಷಿಯಾದ ಮಧ್ಯ ಪ್ರದೇಶದಲ್ಲಿ ಇದರ ಹಾವಳಿ ಜೋರಾಗಿತ್ತು. ಬೆರಳೆಣಿಕೆಯ ಮತಗಳಲ್ಲಿ ಅಭ್ಯರ್ಥಿಗಳ ಸೋಲು ಗೆಲುವು ನಿರ್ಧಾರವಾಗುತ್ತಿದ್ದಾಗ ಇವಿಎಂ ಮತ್ತು ವಿವಿಪ್ಯಾಟ್‌ ನಡುವೆ ಕೆಲವೇ ಕೆಲವು ಮತಗಳು ತಾಳೆಯಾಗದೇ ಇದ್ದರೂ ಅದು ಫಲಿತಾಂಶದ ಮೇಲೆ ಪರಿಣಾಮ ಬೀಳುತ್ತಿತ್ತು. ಹೆಚ್ಚಿನ ಸಂದರ್ಭದಲ್ಲಿ ಚುನಾವಣಾ ಆಯೋಗ ನಿಯಮಗಳನ್ನು ಮುಂದಿಟ್ಟು ವಿವಿಪ್ಯಾಟ್‌ ಚೀಟಿಗಳನ್ನೇ ಲೆಕ್ಕ ಹಾಕಿತ್ತು. ಹೀಗಾಗಿ ಮಧ್ಯ ಪ್ರದೇಶ ಚುನಾವಣೆಯ ಫಲಿತಾಂಶ ಹೊರ ಬೀಳುವ ಹೊತ್ತಿಗೆ ಮಧ್ಯ ರಾತ್ರಿ ಕಳೆದಿತ್ತು.

ಇದೀಗ ಫಲಿತಾಂಶ ಘೋಷಣೆ, ಸರಕಾರ ರಚನೆಗಳೆಲ್ಲಾ ನಡೆದ ನಂತರ ಆಯೋಗ ಚುನಾವಣಾ ಪ್ರಕ್ರಿಯೆಗಳ ಅಧಿಕೃತ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಮತ ಎಣಿಕೆ ಸಂದರ್ಭದಲ್ಲಾದ ಗೊಂದಲಗಳು ಮತ್ತಷ್ಟು ಮುಂದುವರಿಯುವಂತಾಗಿದೆ. ಕಾರಣ ಮತಗಟ್ಟೆಗಳಲ್ಲಿ ಬಿದ್ದ ಒಟ್ಟು ಮತಗಳಿಗೂ ಲೆಕ್ಕ ಹಾಕಿದಾಗ ಸಿಕ್ಕಿದ ಮತಗಳಿಗೂ ತಾಳೆಯಾಗುತ್ತಿಲ್ಲ. ಕೆಲವು ಕಡೆಗಳಲ್ಲಿ ಬಿದ್ದ ಮತಗಳಿಗಿಂತ ಹೆಚ್ಚಿನ ಮತಗಳು ಲೆಕ್ಕ ಹಾಕಿದಾಗ ಸಿಕ್ಕಿವೆ. ಇನ್ನೂ ಕೆಲವು ಕಡೆಗಳಲ್ಲಿ ಹೆಚ್ಚಿನ ಜನರು ಮತ ಹಾಕಿದ್ದರೆ, ಕಡಿಮೆ ಲೆಕ್ಕ ಸಿಕ್ಕಿದೆ.

230ರಲ್ಲಿ ಮತಗಳು ತಾಳೆಯಾಗುತ್ತಿರುವುದು 26ರಲ್ಲಿ ಮಾತ್ರ!

ಈ ಪರಿಸ್ಥಿತಿ ಎಲ್ಲಿಯವರೆಗೆ ಮುಟ್ಟಿದೆ ಎಂದರೆ 230 ವಿಧಾನಸಭಾ ಕ್ಷೇತ್ರಗಳಲ್ಲಿ 26ರಲ್ಲಿ ಮಾತ್ರ ಹಾಕಿದ ಮತಗಳಿಗೂ ಲೆಕ್ಕ ಹಾಕಿದಾಗ ಸಿಕ್ಕಿದ ಮತಗಳಿಗೂ ತಾಳೆಯಾಗಿದೆ. ಅಂದರೆ ಶೇಕಡಾ 90ರಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿದ್ದ ಮತಗಳಿಗೂ ಎಣಿಕೆಯಾದ ಮತಗಳಿಗೂ ಸಂಬಂಧವೇ ಇಲ್ಲ.

ಯಾವ ಕ್ಷೇತ್ರದಲ್ಲಿ ಎಷ್ಟು ಮತಗಳು ತಾಳೆಯಾಗುತ್ತಿಲ್ಲ ಎಂಬುದನ್ನು ರವಿ ಗೌತಮ್‌ ಎಂಬವರು ಪಟ್ಟಿ ಮಾಡಿ ಟ್ಟಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ.

ಇವೆಲ್ಲವೂ ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ ಪಡೆದುಕೊಂಡು ಮಾಹಿತಿಗಳನ್ನು ಆಧರಿಸಿ ತಯಾರಿಸಿರುವುದಾಗಿ ಅವರು ಹೇಳಿದ್ದಾರೆ. ಮಧ್ಯ ಪ್ರದೇಶದ ಚುನಾವಣಾ ಆಯೋಗ ಮತದಾನದ ದಿನ ಮತ ಹಾಕಿದವರು ಮತ್ತು ಮತ ಎಣಿಕೆಯ ವಿವರಗಳನ್ನು ಪ್ರತ್ಯೇಕವಾಗಿ ಪ್ರಕಟಿಸಿದೆ. ಇವುಗಳಲ್ಲಿ 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿದ್ದ ಮತಗಳು ಮತಗಳು ಮತ್ತು ಎಣಿಕೆ ಮಾಡುವಾಗ ಸಿಕ್ಕಿದ ಮತಗಳನ್ನು ‘ಸಮಾಚಾರ’ ಸ್ವತಂತ್ರವಾಗಿ ಪರಿಶೀಲನೆಗೆ ಒಳಪಡಿಸಿದಾಗ ‘ರವಿ ಗೌತಮ್‌’ ಹಾಕಿರುವ ಲೆಕ್ಕ ಸರಿಯಾಗಿರುವುದು ತಿಳಿದು ಬಂದಿದೆ.

ಅವರ ಈ ಟ್ಟೀಟ್‌ನ್ನು ಕಾಂಗ್ರೆಸ್‌ ಹಿರಿಯ ನಾಯಕ ಶಶಿ ತರೂರ್‌ ಶೇರ್‌ ಮಾಡಿದ್ದಾರೆ. ಮತ್ತು ಮಾಜಿ ಮುಖ್ಯ ಚುನಾವಣಾ ಆಯುಕ್ತ ಡಾ.ಎಸ್‌.ವೈ. ಖುರೇಷಿ ‘ಈ ವಿಚಾರವನ್ನು ಚುನಾವಣಾ ಆಯೋಗದ ಗಮನಕ್ಕೆ ತಂದಿರುವುದಾಗಿ’ ಹೇಳಿದ್ದಾರೆ. ಆದರೆ ಚುನಾವಣಾ ಆಯೋಗ ಇದುವರೆಗೆ ಯಾವುದೇ ಸ್ಪಷ್ಟನೆಗಳನ್ನು ನೀಡಿಲ್ಲ. ಇವಿಎಂ ತಿರುಚಲಾಗುತ್ತದೆ ಎಂಬ ಆರೋಪಗಳು ಸರಣಿಯಾಗಿ ಕೇಳಿ ಬಂದ ಹೊತ್ತಲ್ಲಿಯೇ ನಡೆದಿರುವ ಈ ಬೆಳವಣಿಗೆ ಭಾರತದ ಚುನಾವಣಾ ಪ್ರಕ್ರಿಯೆ ಮೇಲೆಯೇ ಅನುಮಾನಗಳನ್ನು ಹುಟ್ಟುಹಾಕಿದೆ.