samachara
www.samachara.com
ಗ್ರಾವಿಟೇಷನಲ್‌ ಅಲ್ಲ ‘ಮೋದಿ ವೇವ್‌’: ಜಾಗತಿಕ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕಿದ  ಸೈನ್ಸ್‌ ಕಾಂಗ್ರೆಸ್‌!
COVER STORY

ಗ್ರಾವಿಟೇಷನಲ್‌ ಅಲ್ಲ ‘ಮೋದಿ ವೇವ್‌’: ಜಾಗತಿಕ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕಿದ ಸೈನ್ಸ್‌ ಕಾಂಗ್ರೆಸ್‌!

ಉದ್ಘಾಟನಾ ದಿನವೇ ವೇದಿಕೆಗೆ ನುಗ್ಗಿದ ಆಂಧ್ರ ಯುನಿವರ್ಸಿಟಿ ಕುಲಪತಿ ಜಿ. ನಾಗೇಶ್ವರ್‌ ರಾವ್‌ ಗೋಷ್ಠಿಯೊಂದರಲ್ಲಿ ಮಹಾಭಾರತದ ಕೌರವರು ಟೆಸ್ಟ್‌ ಟ್ಯೂಬ್‌ ಬೇಬಿ (ಪ್ರನಾಳ ಶಿಶು)ಗಳು ಎಂದು ಪ್ರತಿಪಾದಿಸಿದರು.

ವಿಜ್ಞಾನ ಕಂಡ ಮೇರು ವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೈನ್‌ರ E=mc2 ಸಮೀಕರಣಕ್ಕೆ ಹೊಸ ವ್ಯಾಖ್ಯಾನ ನೀಡಿದ್ದರು ಪರಮಹಂಸ ನಿತ್ಯಾನಂದ ಮಹಾಸ್ವಾಮಿಗಳು. ಈಗ ಅವರನ್ನೂ ಮೀರಿಸಿದ್ದಾರೆ ಭಾರತದ ಸೋ ಕಾಲ್ಡ್ ಮಹಾನ್‌ ವಿಜ್ಞಾನಿಗಳು.

ಪಂಜಾಬ್‌ನ ಜಲಂಧರ್‌ನಲ್ಲಿ ಜನವರಿ 3 ರಿಂದ 7ರ ವರೆಗೆ ನಡೆದ ‘106ನೇ ಇಂಡಿಯನ್‌ ಸೈನ್ಸ್‌ ಕಾಂಗ್ರೆಸ್‌’ ವೈಜ್ಞಾನಿಕ ಹಾಸ್ಯ ಚಟಾಕಿಗಳಿಗೆ ಸಾಕ್ಷಿಯಾಗಿದೆ. ಪುರಾಣಗಳನ್ನು ವಿಜ್ಞಾನವೆಂದು ಪ್ರತಿಪಾದಿಸಿದ ವಿಜ್ಞಾನಿಗಳು, ಪ್ರತಿಭಟನೆ, ಜೋಕ್ಸ್‌ಗಳಿಗೆ ಬುನಾದಿ ಹಾಕಿದ್ದಾರೆ.

ಇನ್ನೊಂದೆಡೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಕಳೆದಿದ್ದಾರೆ. ಬಿಬಿಸಿ, ಗಾರ್ಡಿಯನ್‌ನಂಥ ಖ್ಯಾತ ಮಾಧ್ಯಮಗಳು ಸೈನ್ಸ್‌ ಕಾಂಗ್ರೆಸ್‌ನಲ್ಲಿ ಹಿಂದೂ ಪುರಾಣ ಮತ್ತು ಧರ್ಮಾಧಾರಿತ ಸಿದ್ಧಾಂತಗಳು ಹೆಚ್ಚುತ್ತಿವೆ ಎಂದು ಟೀಕಿಸಿವೆ. ಜತೆಗೆ ಹಿಂದೊಮ್ಮೆ ಸಾವಿರಾರು ವರ್ಷಗಳ ಹಿಂದೆಯೇ ಭಾರತದಲ್ಲಿ ಪ್ಲಾಸ್ಟಿಕ್‌ ಸರ್ಜರಿ ಇತ್ತು ಎಂದು ಪ್ರತಿಪಾದಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ಮಾತುಗಳನ್ನು ಇವು ಈ ಸಮಯದಲ್ಲಿ ನೆನಪಿಸಿಕೊಂಡಿವೆ.

ಶುಕ್ರವಾರ ಜಲಂಧರ್‌ನಲ್ಲಿ 106ನೇ ಇಂಡಿಯನ್‌ ಸೈನ್ಸ್‌ ಕಾಂಗ್ರೆಸ್‌ ಆರಂಭಗೊಂಡಿತ್ತು; ಇದನ್ನು ಉದ್ಘಾಟಿಸಿದವರು ಇದೇ ಪ್ಲಾಸ್ಟಿಕ್‌ ಸರ್ಜರಿ ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ. ಉದ್ಘಾಟನಾ ದಿನವೇ ವೇದಿಕೆಗೆ ನುಗ್ಗಿದ ಆಂಧ್ರ ಯುನಿವರ್ಸಿಟಿ ಕುಲಪತಿ ಜಿ. ನಾಗೇಶ್ವರ್‌ ರಾವ್‌ ಗೋಷ್ಠಿಯೊಂದರಲ್ಲಿ ಮಹಾಭಾರತದ ಕೌರವರು ಟೆಸ್ಟ್‌ ಟ್ಯೂಬ್‌ ಬೇಬಿ (ಪ್ರನಾಳ ಶಿಶು)ಗಳು ಎಂದು ಪ್ರತಿಪಾದಿಸಿದರು. ಈ ಮೂಲಕ ಸಾವಿರಾರು ವರ್ಷಗಳ ಹಿಂದೆಯೇ ಸ್ಟೆಮ್‌ ಸೆಲ್‌ ಸಂಶೋಧನೆ ನಡೆದಿತ್ತು ಎಂದು ವಿವರಿಸಿದರು. ಮುಂದುವರಿದು, ರಾಮಾಯಣದ ರಾವಣನ ಬಳಿ 24 ವಿಮಾನಗಳಿದ್ದವು. ಶ್ರೀಲಂಕಾದಲ್ಲಿ ವಿಮಾನ ನಿಲ್ದಾಣಗಳಿತ್ತು. ದಶಾವತಾರ ಡಾರ್ವಿನ್‌ ಸಿದ್ಧಾಂತಗಳಿಗಿಂತ ಉತ್ತಮ. ಕಾರಣ ಮನುಷ್ಯರ ನಂತರ ಏನು ಬರುತ್ತದೆ ಎಂಬುದು ಮೊದಲೇ ಗೊತ್ತಿರುತ್ತದೆ ಎಂದು ಹೇಳಿದ್ದಾರೆ. ಅಂದ ಹಾಗೆ ಶ್ರೀಯುತರು ಇನ್‌ಆರ್ಗಾನಿಕ್‌ ಕೆಮೆಸ್ಟ್ರಿಯ ಪ್ರಾಧ್ಯಾಪಕರು.

ರಾವ್‌ ಮಾತ್ರವಲ್ಲ ಇನ್ನೂ ಒಂದಷ್ಟು ಜನ ವಿಜ್ಞಾನಿಗಳು, ಪ್ರಾಧ್ಯಾಪಕರು ವಿಜ್ಞಾನದ ನಗೆ ಚಟಾಕಿಗಳನ್ನು ಹಾರಿಸಿದ್ದಾರೆ. ರಾವ್‌ ಅವರ ಗೋಷ್ಠಿಯಲ್ಲೇ ಮಾತನಾಡಿದ ತಮಿಳುನಾಡಿನ ವಿಜ್ಞಾನಿ ಕೆ. ಜೆ. ಕೃಷ್ಣನ್‌ ಐಸಾಕ್‌ ನ್ಯೂಟನ್‌, ಆಲ್ಬರ್ಟ್‌ ಐನ್‌ಸ್ಟೈನ್‌, ಸ್ಟೀಫನ್‌ ಹಾಕಿಂಗ್‌ ಎಲ್ಲರೂ ತಪ್ಪು ಎಂದಿದ್ದಾರೆ. “ಫಿಜಿಕ್ಸ್‌ನ ಎಲ್ಲಾ ಸಿದ್ಧಾಂತಗಳು ತಪ್ಪು. ಪ್ರಯೋಗಗಳು ಮಾತ್ರ ಸರಿ. ನನ್ನ ಸಿದ್ಧಾಂತ ಎಲ್ಲವನ್ನೂ ವಿವರಿಸುತ್ತದೆ. ಇದು ಏಕೀಕೃತ ಸಿದ್ಧಾಂತ (ಖಗೋಳ ಶಾಸ್ತ್ರ ಮತ್ತು ಕ್ವಾಂಟಮ್‌ ಭೌತಶಾಸ್ತ್ರವನ್ನು ವಿವರಿಸುತ್ತದೆ),” ಎಂದಿದ್ದಾರೆ.

ಒಂದೊಮ್ಮೆ ನನ್ನ ಸಿದ್ಧಾಂತವನ್ನು ಒಪ್ಪಿಕೊಂಡರೆ ಸದ್ಯದಲ್ಲೇ ಗುರುತ್ವಾಕರ್ಷಣ ಅಲೆಗಳಿಗೆ ‘ನರೇಂದ್ರ ಮೋದಿ ಅಲೆಗಳು’ ಎಂದೂ ಗ್ರಾವಿಟೇಷನಲ್‌ ಲೆನ್ಸಿಂಗ್‌ ಇಫೆಕ್ಟ್‌ಗೆ ‘ಹರ್ಷವರ್ಧನ್‌ ಇಫೆಕ್ಟ್‌’ (ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ) ಎಂದೂ ಮರು ನಾಮಕರಣ ಮಾಡುವುದಾಗಿ ಅವರು ಹೇಳಿದ್ದಾರೆ. ಇನ್ನೋರ್ವ ಭೂ ವಿಜ್ಞಾನಿ, ಪಂಜಾಬ್‌ ವಿವಿ ಪ್ರಾಧ್ಯಾಪಕ ಅಶು ಖೋಸ್ಲಾ ಡೈನೋಸರ್‌ಗಳ ಬಗ್ಗೆ ಬ್ರಹ್ಮನಿಗೆ ತಿಳಿದಿತ್ತು. ಆತ ಅದನ್ನು ವೇದಗಳಲ್ಲಿ ದಾಖಲಿಸಿದ್ದಾನೆ ಎಂದಿದ್ದಾರೆ.

ಈ ಹೇಳಿಕೆ ವಿಜ್ಞಾನಿಗಳು ಮತ್ತು ವಿಜ್ಞಾನದಲ್ಲಿ ಅಧ್ಯಯನ ನಿರತರನ್ನು ಕೆರಳಿಸಿದೆ. ಈ ಕಾರಣಕ್ಕೆ ಬೆಂಗಳೂರಿನ ‘ಇಂಡಿಯನ್‌ ಇನ್ಸಿಟ್ಯೂಟ್‌ ಆಫ್‌ ಸೈನ್ಸ್‌ (ಐಐಎಸ್‌ಸಿ)‘ನ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ತರ್ಕವಿಲ್ಲದ ಮಾತುಗಳ ವಿರುದ್ಧ ಭಾನುವಾರ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಇವರ ಜತೆ ‘ಅಖಿಲ ಕರ್ನಾಟಕ ವಿಚಾರವಾದಿಗಳ ವೇದಿಕೆ’ ಮತ್ತು ಬ್ರೇಕ್‌ಥ್ರೂ ಸೈನ್ಸ್‌ ಸೊಸೈಟಿ ಕೂಡ ಧ್ವನಿಗೂಡಿಸಿತ್ತು.

ಇಂಡಿಯನ್‌ ಸೈನ್ಸ್‌ ಕಾಂಗ್ರೆಸ್‌ ವಿರುದ್ಧ ಬೆಂಗಳೂರಿನ ಐಐಎಸ್‌ಸಿ ಮುಂಭಾಗ ನಡೆದ ಪ್ರತಿಭಟನೆ.
ಇಂಡಿಯನ್‌ ಸೈನ್ಸ್‌ ಕಾಂಗ್ರೆಸ್‌ ವಿರುದ್ಧ ಬೆಂಗಳೂರಿನ ಐಐಎಸ್‌ಸಿ ಮುಂಭಾಗ ನಡೆದ ಪ್ರತಿಭಟನೆ.
/ಸ್ಕ್ರಾಲ್‌

ವಿಜ್ಞಾನದ ಸರ್ಕಸ್‌:

“ಈ ಹಿಂದಿನ ಸೈನ್ಸ್‌ ಕಾಂಗ್ರೆಸ್‌ಗಳಲ್ಲೂ ಈ ರೀತಿಯ ವಾದಗಳನ್ನು ಮಾಡಲಾಗಿದೆ. ಆದರೆ ಈ ಬಾರಿ ಎಲ್ಲಾ ಮಿತಿಗಳನ್ನು ದಾಟಿ ಹೋಗಿದ್ದಾರೆ,” ಎನ್ನುತ್ತಾರೆ ಐಐಎಸ್ಸಿಯ ಆಸ್ಟ್ರೋ ಫಿಸಿಕ್ಸ್‌ ಪ್ರಾಧ್ಯಾಪಕ ಪ್ರಜ್ವಲಾ ಶಾಸ್ತ್ರಿ. ಸದ್ಯಕ್ಕೆ ಸೈನ್ಸ್‌ ಕಾಂಗ್ರೆಸ್‌ಗೆ ಯಾವುದೇ ಬೆಲೆ ಇಲ್ಲ. ಉನ್ನತ ದರ್ಜೆಯ ಭಾರತೀಯ ವಿಜ್ಞಾನಿಗಳು ಅದರ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ವೆಂಕಟ್ರಾಮನ್‌ ರಾಮಕೃಷ್ಣನ್‌ ಇದನ್ನು ಸರ್ಕಸ್‌ ಎಂದು ಕರೆದಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಅವರು.

ಇದೇ ವೇಳೆ ಪ್ರಜ್ವಲಾ ಶಾಸ್ತ್ರಿ ದೇರಿದಂತೆ ಇತರರು ‘ಈ ಪೇಪರ್‌ಗಳನ್ನು ಮಂಡನೆ ಮಾಡಲು ಹೇಗೆ ಅವಕಾಶ ನೀಡಲಾಯಿತು?’ ಎಂಬುದನ್ನೂ ಪ್ರಶ್ನಿಸಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಂಡಿಯನ್ಸ್‌ ಸೈನ್ಸ್‌ ಕಾಂಗ್ರೆಸ್‌ ಕಾರ್ಯದರ್ಶಿ ಪ್ರೇಮೇಂದು ಪಿ. ಮಾಥುರ್‌, ನಮಗೂ ಈ ಮಂಡನೆಯಾದ ಪೇಪರ್‌ಗಳಿಗೂ ಸಂಬಂಧವಿಲ್ಲ ಎಂದು ಕೈತೊಳೆದುಕೊಂಡಿದ್ದಾರೆ.

2015ರಿಂದ ಆರಂಭ:

ಇದೆಲ್ಲಾ ಆರಂಭವಾಗಿದ್ದು 2015ರ ನಂತರ. ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಹುಸಿ ವಿಜ್ಞಾನ ದೇಶದ ಮುಖ್ಯವಾಹಿನಿಯನ್ನೂ ಆಕ್ರಿಮಿಸಿಕೊಂಡಿದೆ ಎಂಬುದಾಗಿ ಬಿಬಿಸಿ ವಿಶ್ಲೇಷಿಸಿದೆ. ಆ ವರ್ಷ ಮುಂಬೈನಲ್ಲಿ ನಡೆದ ಸೈನ್ಸ್‌ ಕಾಂಗ್ರೆಸ್‌ನಲ್ಲಿ ಮೊದಲ ಬಾರಿಗೆ ಈ ತರ್ಕವಿಲ್ಲದ ಮಾತುಗಳು ಆರಂಭವಾಗಿತ್ತು. ಪೈಲಟ್‌ ತರಬೇತಿ ಶಾಲೆಯ ನಿವೃತ್ತರೊಬ್ಬರು ಇದರಲ್ಲಿ ಭಾರತೀಯರು 7,000 ವರ್ಷಗಳ ಹಿಂದೆಯೇ ವಿಮಾನ ಕಂಡು ಹಿಡಿದಿದ್ದರು ಎಂದು ವಾದಿಸಿದ್ದರು. ‘ಅದಾದ ಬಳಿಕ ನಾವು ಆನ್‌ಲೈನ್‌ ಪಿಟಿಷನ್‌ ಸಲ್ಲಿಸಿದ್ದಲ್ಲದೆ, ಸೈನ್ಸ್‌ ಕಾಂಗ್ರೆಸ್‌ ಅಧ್ಯಕ್ಷರಿಗೆ ಮನವಿಯನ್ನೂ ನೀಡಿದ್ದೆವು’ ಎಂದು ನೆನಪಿಸಿಕೊಳ್ಳುತ್ತಾರೆ ಕೊಲ್ಕತ್ತಾ ಮೂಲದ ಬ್ರೇಕ್‌ಥ್ರೂ ಸೈನ್ಸ್‌ ಸೊಸೈಟಿಯ ರಜನಿ ಕೆಎಸ್‌. ಆದರೆ ಇದೆಲ್ಲಾ ಕಣ್ತಪ್ಪಿನಿಂದ ಆಯಿತು ಎಂದು ಅಧ್ಯಕ್ಷರು ವಾದಿಸಿದರು. ಅಲ್ಲಿಂದ ನಂತರ ಪ್ರತೀ ವರ್ಷ ಸೈನ್ಸ್ ಕಾಂಗ್ರೆಸ್ ಇಂಥಹ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಾ ಬಂದಿದೆ. ಯಾವತ್ತೂ ವಿಜ್ಞಾನದ ವಿಷಯಕ್ಕೆ ಸುದ್ದಿಯಾಗಿದ್ದೇ ಇಲ್ಲ ಎನ್ನುತ್ತಾರೆ ಅವರು.

ಮೈಸೂರಿನಲ್ಲಿ 2016ರಲ್ಲಿ ನಡೆದಿದ್ದ 103ನೇ ಸೈನ್ಸ್‌ ಕಾಂಗ್ರೆಸ್‌ನಲ್ಲಿ, ನೀವು ಹುಲಿಯ ಚರ್ಮದ ಮೇಲೆ ಕುಳಿತು ಯೋಗ ಮಾಡಿದ್ರೆ ನಿಮಗೆ ವಯಸ್ಸಾಗುವುದಿಲ್ಲ. ಬದಲಿಗೆ ಈ ಪ್ರಕ್ರಿಯೆಯನ್ನು ವಿರುದ್ಧ ದಿಕ್ಕಿನಲ್ಲಿ ತಿರುಗಿಸಬಹುದು ಎಂದೊಬ್ಬರು ಪ್ರತಿಪಾದಿಸಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಅವರು. ಮುಂದೆ ತಿರುಪತಿಯಲ್ಲಿ ನಡೆದಿದ್ದ ಸೈನ್ಸ್‌ ಕಾಂಗ್ರೆಸ್‌ ತುಂಬಾ ಧಾರ್ಮಿಕ ಅಂಶಗಳೇ ತುಂಬಿಕೊಂಡಿದ್ದವು. 2018ರಲ್ಲಿ ಇಂಫಾಲ್‌ನಲ್ಲಿ ನಡೆದ ಕಾಂಗ್ರೆಸ್‌ನಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಹರ್ಷವರ್ಧನ್‌ ವೇದಗಳಲ್ಲಿ ಆಲ್ಬರ್ಟ್‌ ಐನ್‌ಸ್ಟೈನ್‌ರ E=mc2ಗಿಂತ ಉತ್ತಮ ಥಿಯರಿಗಳಿವೆ ಎಂದು ಸ್ಟೀಫನ್‌ ಹಾಕಿಂಗ್‌ ಹೇಳಿದ್ದಾಗಿ ಹೇಳಿದರು. ಹೀಗೆ ಇತ್ತೀಚೆಗೆ ಪ್ರತೀ ವರ್ಷವೂ ಸೈನ್ಸ್‌ ಕಾಂಗ್ರೆಸ್‌ ಭರಪೂರ ಮನರಂಜನೆ ನೀಡುತ್ತಲೇ ಬಂದಿದೆ.

ಇದಕ್ಕೆಲ್ಲಾ ಏನು ಹೇಳಬೇಕು ಎಂದೇ ಅರ್ಥವಾಗುವುದಿಲ್ಲ. ಈ ರೀತಿಯ ಹೇಳಿಕೆಗಳಿಂದ ಭಾರತೀಯ ವಿಜ್ಞಾನವೆಂದರೆ ಹಾಸ್ಯ ಚಟಾಕಿಗಳ ಎನ್ನುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರಜನಿ. ಇಂಥಹ ಬೆಳವಣಿಗೆಗಳಿಂದಾಗಿಯೇ ಇವತ್ತು ವಿಶ್ವದ 4,000 ಖ್ಯಾತ ವಿಜ್ಞಾನಿಗಳಲ್ಲಿ ಚೀನಿಯರು 400 ಜನರಿದ್ದರೆ 10 ಜನರು ಭಾರತೀಯರಿದ್ದಾರೆ ಎಂದು ಇದರ ಗಂಭೀರತೆಯನ್ನು ತೆರೆದಿಡುತ್ತಾರೆ ರಜನಿ.

ಈ ರೀತಿಯ ಸುಳ್ಳು ಹೇಳಿಕೆಗಳು ಭಾರತೀಯ ವಿಜ್ಞಾನದ ಬಹುದೊಡ್ಡ ವಿಜ್ಞಾನಿಗಳ ನೈಜ ಕೊಡುಗೆಯನ್ನೇ ಗೌಣವಾಗಿಸುತ್ತದೆ ಎಂದು ಬ್ರೇಕ್‌ಥ್ರೂ ವಿಜ್ಞಾನ ಸೊಸೈಟಿ ಆತಂಕ ವ್ಯಕ್ತಪಡಿಸಿದೆ. ಈ ಹಿನ್ನಲೆಯಲ್ಲಿ ಸೈನ್ಸ್‌ ಕಾಂಗ್ರೆಸ್‌ಗೆ ಖ್ಯಾತ ವಿಜ್ಞಾನಿ ಸಿಎನ್‌ಆರ್‌ ರಾವ್‌, ರೊದ್ದ ನರಸಿಂಹ ಮೊದಲಾದ ಗಣ್ಯರೂ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಿದ್ದೂ ಸರಕಾರಿ ದುಡ್ಡಿನಲ್ಲಿ ವಿಜ್ಞಾನದ ಸರ್ಕಸ್‌ ಮುಂದುವರಿದಿದೆ. ಸ್ವಾಮಿ ನಿತ್ಯಾನಂದರಿಗೂ ಈ ಪ್ರೊಫೆಸರ್‌ಗಳಿಗೂ ಸ್ವಲ್ಪವೂ ವ್ಯತ್ಯಾಸವಿಲ್ಲದಿದ್ದರೆ ಹೇಗೆ?