samachara
www.samachara.com
ಆರು ವರ್ಷಗಳ ನಂತರ 2 ದಿನಗಳ ‘ಭಾರತ್ ಬಂದ್’: ಯಾರಿಗೆಲ್ಲಾ ಬಿಸಿ ತಟ್ಟಲಿದೆ?
COVER STORY

ಆರು ವರ್ಷಗಳ ನಂತರ 2 ದಿನಗಳ ‘ಭಾರತ್ ಬಂದ್’: ಯಾರಿಗೆಲ್ಲಾ ಬಿಸಿ ತಟ್ಟಲಿದೆ?

ಈ ಕಾಯ್ದೆಯಿಂದಾಗಿ ಲಕ್ಷಾಂತರ ಮಂದಿ ನೇರವಾಗಿ ಹಾಗೂ ಪರೋಕ್ಷವಾಗಿ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಲಿದ್ದಾರೆ, ಅಲ್ಲದೆ ಇದು ಕಾರ್ಮಿಕರ ಕತ್ತು ಹಿಸುಕುವ ಕಾಯ್ದೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.

ಕೇಂದ್ರವು ಜಾರಿಗೆ ತರಲು ಉದ್ದೇಶಿಸಿರುವ ‘ಮೋಟಾರು ಕಾಯ್ದೆ-2016’ ಜತೆಗೆ, ಕೇಂದ್ರ ಸರ್ಕಾರದ ಎಲ್ಲಾ ವೈಫಲ್ಯಗಳನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳ ಒಕ್ಕೂಟ ಜನವರಿ 8 ಹಾಗೂ 9 ರಂದು (ಮಂಗಳವಾರ- ಬುಧವಾರ) ಎರಡು ದಿನಗಳ ಭಾರತ್ ಬಂದ್‌ಗೆ ಕರೆ ನೀಡಿದೆ.

ಆಲ್ ಇಂಡಿಯಾ ಟ್ರೇಡ್ ಯೂನಿಯನ್ (ಸಿಐಟಿಯು), ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐಎನ್‌ಟಿಯುಸಿ) ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ಭಾರತ್ ಬಂದ್‌ಗೆ ರಾಷ್ಟ್ರಾದ್ಯಂತ ಸಿದ್ಧತೆ ಕಾಣಿಸುತ್ತಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಿ ನೌಕರರು, ಬ್ಯಾಂಕ್ ನೌಕರರು, ಅಸಂಘಟಿತ ವಲಯದ ಕಾರ್ಮಿಕರು, ಆಟೋ-ಟ್ಯಾಕ್ಸಿ ಚಾಲಕರು ಹಾಗೂ ನಿರುದ್ಯೋಗಿ ಯುವಕರು ಸೇರಿದಂತೆ ಸುಮಾರು 13 ರಿಂದ 14 ಕೋಟಿ ಕಾರ್ಮಿಕರು ಎರಡು ದಿನದ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ. 2013ರ ನಂತರ ಎರಡು ದಿನಗಳ ಬಂದ್‌ಗೆ ನೀಡುರುವ ಕತೆ ಇದಾಗಿರುವುದರಿಂದ ಒಂದಷ್ಟು ವ್ಯತ್ಯಯಗಳನ್ನು ನಿರೀಕ್ಷಿಸಲಾಗುತ್ತಿದೆ.

ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಆಲ್ ಇಂಡಿಯಾ ಟ್ರೇಡ್ ಯೂನಿಯನ್, "ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿ ವರ್ಷ 1 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿತ್ತು. ಆದರೆ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಭಣವಾಗುತ್ತಿದೆ. ಇನ್ನೂ ಜಿಎಸ್‌ಟಿ ಪರಿಣಾಮದಿಂದಾಗಿ ರಾಷ್ಟ್ರಾದ್ಯಂತ ಸುಮಾರು 2 ಲಕ್ಷ ಸಣ್ಣ ಉದ್ಯಮಗಳು ನಷ್ಟದಿಂದಾಗಿ ಬಾಗಿಲು ಎಳೆದುಕೊಂಡಿವೆ. ಕಾರ್ಮಿಕರು ಕೆಲಸವನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ನಡುವೆ 'ಮೋಟಾರು ಕಾಯ್ದೆ-2016’ನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ಕಾರ್ಮಿಕರ ಮರಣ ಶಾಸನ ಬರೆಯಲು ಸಿದ್ದಾವಾಗಿದೆ," ಎಂದು ಬಂದ್‌ಗೆ ಕಾರಣಗಳನ್ನು ಮುಂದಿಟ್ಟಿದೆ.

ಮೋಟಾರ್ ಕಾಯ್ದೆ ತಿದ್ದುಪಡಿಗೆ ಒತ್ತಾಯ

ಕೇಂದ್ರ ಸರ್ಕಾರ ಜಾರಿಗೊಳಿಸಲು ನಿರ್ದೇಶಿಸಿರುವ ಮೋಟಾರ್ ಕಾಯ್ದೆ-2016ರಲ್ಲಿ ಶಿಕ್ಷೆ ಹಾಗೂ ದಂಡದ ಪ್ರಮಾಣವನ್ನು ನಾಲ್ಕರಿಂದ ಐದು ಪಟ್ಟು ಹೆಚ್ಚಿಸಲಾಗಿದೆ. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ 1 ರಿಂದ 5 ಸಾವಿರ ದಂಡ, ಸಿಗ್ನಲ್ ಜಂಪ್ ಮಾಡಿದರೆ 1 ಸಾವಿರ ದಂಡ, ಕುಡಿದು ವಾಹನ ಚಾಲನೆ ಮಾಡಿದರೆ 2 ರಿಂದ 10 ಸಾವಿರ ದಂಡ ಹಾಗೂ 10 ವರ್ಷ ಸೆರೆವಾಸ, ಹೆಲ್ಮೆಟ್ ಸೀಟ್ ಬೆಲ್ಟ್ ಇಲ್ಲದೆ ವಾಹನ ಓಡಿಸಿದರೆ 1 ಸಾವಿರ ದಂಡ, ವಾಹನಕ್ಕೆ ವಿಮೆ ಮಾಡಿಸದೆ ಇದ್ದರೆ 25000 ದಿಂದ 1 ಲಕ್ಷದವರೆಗೆ ದಂಡ, ವಾಹನ ಚಾಲನೆ ಮಾಡುವಾಗ ಮೊಬೈಲ್‌ನಲ್ಲಿ ಮಾತನಾಡಿದರೆ 5 ಸಾವಿರ ದಂಡ, ಸಾರ್ವಜನಿಕ ಸ್ಥಳದಲ್ಲಿ ಅತಿವೇಗದ ಚಾಲನೆಗೆ 2 ಸಾವಿರ ದಂಡ, ಅಪ್ರಾಪ್ತ ಮಕ್ಕಳಿಗೆ ವಾಹನ ಕೊಟ್ಟರೆ ವಾಹನದ ಮಾಲೀಕನಿಗೆ 25 ಸಾವಿರ ದಂಡ ಹಾಗೂ 2 ವರ್ಷ ಜೈಲು, ಅಪಘಾತದಲ್ಲಿ ವ್ಯಕ್ತಿ ಸಾವನ್ನಪ್ಪಿದರೆ 5 ರಿಂದ 10 ಲಕ್ಷ ಪರಿಹಾರ ಮತ್ತು 7 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡಲಾಗಿದೆ.

ಈ ಮೋಟಾರು ಕಾಯ್ದೆಯಿಂದ ಲಂಚಗುಳಿತನ ಹೆಚ್ಚಾಗುತ್ತದೆ, ಸಾರಿಗೆ ವಲಯದಲ್ಲಿ ಏಕಸ್ವಾಮ್ಯತೆ ಉಂಟಾಗಲಿದೆ, ಆಟೋ ರಿಕ್ಷಾ ಸೇರಿದಂತೆ ಸಾರಿಗೆ ವಲಯದಲ್ಲಿ ಸೃಷ್ಟಿಯಾಗಿರುವ ಸ್ವಯಂ ಉದ್ಯೋಗಕ್ಕೆ ಹೊಡೆತ ಬೀಳಲಿದೆ, ಖಾಸಗಿ ಬಸ್ ಸಂಸ್ಥೆಗಳ ಪರ್ಮೀಟ್ ವ್ಯವಸ್ಥೆಗೆ ಹೊಡೆತ ಬೀಳಲಿದೆ. ಈ ಕಾಯ್ದೆಯಿಂದಾಗಿ ಲಕ್ಷಾಂತರ ಮಂದಿ ನೇರವಾಗಿ ಹಾಗೂ ಪರೋಕ್ಷವಾಗಿ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಲಿದ್ದಾರೆ, ಅಲ್ಲದೆ ಇದು ಕಾರ್ಮಿಕರ ಕತ್ತು ಹಿಸುಕುವ ಕಾಯ್ದೆ ಹೀಗಾಗಿ ಈ ಕಾಯ್ದೆಯನ್ನು ಮರು ಪರಿಶೀಲಿಸಬೇಕು, ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿ ಕಳೆದ ಎರಡು ವರ್ಷಗಳಿಂದ ಎಡ ಪಕ್ಷಗಳು ಹಾಗೂ ವಿವಿಧ ಕಾರ್ಮಿಕ ಪಕ್ಷಗಳು ಈ ಕಾಯ್ದೆಯ ವಿರುದ್ಧ ಹೋರಾಡುತ್ತಲೇ ಬಂದಿದ್ದಾರೆ.

ಚಿತ್ರ ಸಾಂಕೇತಿಕ. 
ಚಿತ್ರ ಸಾಂಕೇತಿಕ. 

ಬಂದ್‌ಗೆ ರೈತರ ಬೆಂಬಲ

ರಾಷ್ಟ್ರಾವ್ಯಾಪಿ ಭಾರತ್ ಬಂದ್‌ಗೆ ಕರೆ ನೀಡಿರುವ ವಿವಿಧ ಕಾರ್ಮಿಕ ಸಂಘಟನೆಗಳ ಕರೆಗೆ ಹಲವಾರು ರೈತ ಸಂಘಟನೆಗಳು ಬೆಂಬಲ ಸೂಚಿಸಿವೆ. ಆಲ್ ಇಂಡಿಯಾ ಕಿಸಾನ್ ಸಂಘ (ಎಐಕೆಎಸ್), ಭೂಮಿ ಅಧಿಕಾರ್ ಆಂದೋಲನ್ ಸೇರಿದಂತೆ ಹಲವಾರು ರೈತ ಸಂಘಟನೆಗಳು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯದ ವಿರುದ್ಧ ರಸ್ತೆಗಿಳಿದು ಹೋರಾಟ ನಡೆಸಲು ನಿರ್ಧರಿಸಿವೆ.

ಕೃಷಿ ರಂಗದಲ್ಲಿನ ವೈಫಲ್ಯ ಹಾಗೂ ಕೃಷಿ ಭೂಮಿಯನ್ನು ಕಾರ್ಪೋರೇಟ್ ಕಂಪೆನಿಗಳಿಗೆ ನೀಡಿದ ಕೇಂದ್ರ ಸರ್ಕಾರದ ವಿರುದ್ಧ ರೈತರು ರಾಷ್ಟ್ರಾದ್ಯಂತ ರೈಲ್ ರೋಖೋ ಚಳುವಳಿ ಮಾಡುವ ಮೂಲಕ ಪ್ರತಿಭಟಿಸಲಿದ್ದಾರೆ ಎಂದು ಸಿಪಿಐ(ಎಂ) ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹನಾನ್‌ ಮೊಲ್ಲಾ ತಿಳಿಸಿದ್ದಾರೆ.

ಕರ್ನಾಟಕದಲ್ಲೂ ಬೆಂಬಲ

ಕೇಂದ್ರದ ವಿರುದ್ಧ ಕಾರ್ಮಿಕ ಸಂಘಟನೆಗಳು ಹಾಗೂ ಎಡ ಪಕ್ಷಗಳು ಕರೆ ನೀಡಿರುವ ಎರಡು ದಿನಗಳ ಭಾರತ್ ಬಂದ್‌ಗೆ ಕರ್ನಾಟಕದಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಎರಡು ದಿನಗಳ ಬಂದ್‌ಗೆ ಬೆಂಬಲ ಸೂಚಿಸಿರುವ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಮುಂದಿನ ಎರಡು ದಿನಗಳ ಕಾಲ ಬಸ್‌ಗಳು ರಸ್ತೆಗಿಳಿಯುವುದಿಲ್ಲ ಎಂದು ತಿಳಿಸಿವೆ. ಈ ಕುರಿತು ರಾಜ್ಯ ಸಾರಿಗೆ ಸಚಿವರೂ ಸ್ಪಷ್ಟನೆ ನೀಡಿದ್ದಾರೆ. ಕರಾವಳಿ ಭಾಗ ಸೇರಿದಂತೆ ರಾಜ್ಯಾದ್ಯಂತ ಖಾಸಗಿ ಬಸ್‌ ಸಂಸ್ಥೆಗಳು ಹಾಗೂ ಆಟೋ-ಟ್ಯಾಕ್ಸಿಗಳು ಸಹ ಭಾರತ್ ಬಂದ್‌ಗೆ ಬೆಂಬಲ ಸೂಚಿಸಿವೆ. ಪರಿಣಾಮ ಮುಂದಿನ ಎರಡು ದಿನಗಳ ಕಾಲ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ ಸ್ತಬ್ಧವಾಗಲಿದ್ದು, ದೂರದ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಪರದಾಡುವಂತಹ ಸ್ಥಿತಿ ಎದುರಾಗಲಿದೆ.

ಬಂದ್ ಪರಿಣಾಮ ಎರಡು ದಿನಗಳ ಕಾಲ ರಾಜ್ಯಾದಂತ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದರೆ ತುರ್ತು ಆಂಬ್ಯುಲೆನ್ಸ್ ಸೇವೆ, ಆಸ್ಪತ್ರೆ ಹಾಗೂ ಮೆಡಿಕಲ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.