samachara
www.samachara.com
ಉತ್ತರಪ್ರದೇಶದಲ್ಲಿ ಒಂದಾದ ‘ಸಮಾಜ’ ಪಕ್ಷಗಳು; ಕಾಂಗ್ರೆಸ್‌ಗೆ ಮೈತ್ರಿ ಗೊಂದಲ
COVER STORY

ಉತ್ತರಪ್ರದೇಶದಲ್ಲಿ ಒಂದಾದ ‘ಸಮಾಜ’ ಪಕ್ಷಗಳು; ಕಾಂಗ್ರೆಸ್‌ಗೆ ಮೈತ್ರಿ ಗೊಂದಲ

ಪ್ರಾದೇಶಿಕ ಪಕ್ಷಗಳನ್ನು ಬಿಟ್ಟು ಸ್ವತಂತ್ರವಾಗಿ ಚುನಾವಣೆ ಎದುರಿಸುವುದೂ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಕಷ್ಟವಿದೆ.

ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಪಕ್ಷಗಳ ಹಣೆಬರಹ ನಿರ್ಧರಿಸುವ ಉತ್ತರ ಪ್ರದೇಶದಲ್ಲಿ ‘ಸಮಾಜವಾದಿ’ ಪಕ್ಷಗಳು ಒಂದಾಗಿವೆ. ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ಒಟ್ಟಾಗಿ ಮುಂಬರುವ ಲೋಕಸಭಾ ಚುನಾವಣೆ ಎದುರಿಸಲು ನಿರ್ಧರಿಸಿವೆ. ಆದರೆ, ಉತ್ತರಪ್ರದೇಶದ ಮಹಾಮೈತ್ರಿಯ ವಿಚಾರದಲ್ಲಿ ಕಾಂಗ್ರೆಸ್‌ ಗೊಂದಲ ಮುಂದುವರಿದಿದೆ.

ಪಂಚರಾಜ್ಯಗಳ ಚುನಾವಣೆಯ ಬಳಿಕ ಕಳೆದ ತಿಂಗಳು ಕಾಂಗ್ರೆಸ್‌ ಕರೆದಿದ್ದ ಮಹಾಮೈತ್ರಿ ಸಭೆಗೆ ಈ ಎರಡೂ ಪಕ್ಷಗಳು ಗೈರಾಗಿದ್ದವು. ಮಹಾಮೈತ್ರಿಯಲ್ಲಿ ಕಾಂಗ್ರೆಸ್‌ ಜತೆಗೆ ಈ ಎರಡೂ ಪಕ್ಷಗಳು ಸೇರುವುದು ಅನುಮಾನ ಎಂಬ ಸೂಚನೆ ಆಗಲೇ ಸಿಕ್ಕಿತ್ತು. ಆದರೆ, ಕಾಂಗ್ರೆಸ್‌ನ ರಾಷ್ಟ್ರೀಯ ಪಕ್ಷ ಎಂಬ ಬಲಕ್ಕಿಂತ ಉತ್ತರಪ್ರದೇಶದ ಪ್ರಾದೇಶಿಕ ಪಕ್ಷಗಳ ಬಲವನ್ನು ಮುನ್ನೆಲೆಗೆ ತರಲು ಈ ಎರಡೂ ಪಕ್ಷಗಳು ನಿರ್ಧರಿಸಿರುವಂತಿದೆ. ಎಸ್‌ಪಿ- ಬಿಎಸ್‌ಪಿ ಮೈತ್ರಿಕೂಟದೊಂದಿಗೆ ಇತರೆ ಪಕ್ಷಗಳು ಸೇರಲು ಮುಕ್ತವಾಗಿದ್ದೇವೆ ಎಂದು ಎರಡೂ ಪಕ್ಷಗಳ ಮುಖಂಡರು ಘೋಷಿಸಿದ್ದಾರೆ.

ಇಡೀ ದೇಶದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಮಹಾಮೈತ್ರಿಕೂಟ ರಚಿಸಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಯತ್ನಿಸುತ್ತಿರುವ ಹೊತ್ತಿನಲ್ಲಿ, ನಿರ್ಣಾಯಕ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ನೆಚ್ಚಿಕೊಳ್ಳದೆ ಪ್ರಾದೇಶಿಕ ಬಲದ ಮೇಲೆ ಚುನಾವಣೆ ಎದುರಿಸಲು ಎಸ್‌ಪಿ- ಬಿಎಸ್‌ಪಿ ಮುಂದಾಗಿರುವುದು ಕಾಂಗ್ರೆಸ್‌ಗೆ ತಕ್ಕಮಟ್ಟಿಗೆ ಇರುಸುಮುರುಸು ಉಂಟುಮಾಡಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಎಸ್‌ಪಿ- ಬಿಎಸ್‌ಪಿ ಮೈತ್ರಿಕೂಟದೊಂದಿಗೆ ಸೇರುವ ನಿರ್ಧಾರದಲ್ಲಿ ಗೊಂದಲ ಮುಂದುವರಿಸಿದೆ.

ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಬಹುಮತದೊಂದಿಗೆ ಜಯಗಳಿಸಿದ ಬಳಿಕ ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಳ್ಳಬೇಕೇ ಎಂಬ ಬಗ್ಗೆ ಕಾಂಗ್ರೆಸ್‌ ಗೊಂದಲ ಮುಂದುವರಿಸಿತ್ತು. ಮಹಾಮೈತ್ರಿ ಸಭೆಗೆ ಎಸ್‌ಪಿ- ಬಿಎಸ್‌ಪಿ ಗೈರನ್ನೂ ಗಂಭೀರವಾಗಿ ತೆಗೆದುಕೊಂಡಿರುವ ಕಾಂಗ್ರೆಸ್‌ ಸ್ವಂತ ಬಲದ ಮೇಲೆ ಉತ್ತರ ಪ್ರದೇಶ ಚುನಾವಣೆಯನ್ನು ಎದುರಿಸುವ ಸಾಧ್ಯತೆಯೂ ಇದೆ.

ಆಡಳಿತ ವಿರೋಧಿ ಅಲೆ?:

ಕೇಂದ್ರ ಸರಕಾರ ಹಾಗೂ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಆಡಳಿತ ವಿರೋಧಿ ಅಲೆ ಉತ್ತರ ಭಾರತದಲ್ಲಿ ಕಾಂಗ್ರೆಸ್‌ ಪರವಾಗಿ ಕೆಲಸ ಮಾಡಬಹುದೆಂಬ ಲೆಕ್ಕಾಚಾರಗಳು ಕೈ ಪಾಳಯದಲ್ಲಿವೆ. ದೇಶದ ಹೃದಯಭಾಗದ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವು ಸಿಗಲು ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಲೆಯೇ ಕಾರಣ ಎಂಬ ನಿರ್ಧಾರಕ್ಕೆ ಬಂದಿರುವ ಕಾಂಗ್ರೆಸ್, ಉತ್ತರ ಪ್ರದೇಶದಲ್ಲೂ ಇದೇ ಅಂಶ ಕಾಂಗ್ರೆಸ್‌ ಪರವಾಗಿ ಕೆಲಸ ಮಾಡಲಿದೆ ಎಂಬ ವಿಶ್ವಾಸದಲ್ಲಿದೆ.

ಉತ್ತರ ಪ್ರದೇಶದಲ್ಲಿ ಚುನಾವಣಾ ನಂತರದ ಮೈತ್ರಿಗಿಂತ ಚುನಾವಣಾ ಪೂರ್ವದಲ್ಲೇ ಮೈತ್ರಿಕೂಟ ರಚಿಸಿಕೊಂಡರೆ ಬಿಜೆಪಿಯನ್ನು ಮಣಿಸುವ ಅವಕಾಶವಿದೆ ಎನ್ನಲಾಗಿದೆ. ಕಾಂಗ್ರೆಸ್‌ ಪಕ್ಷ ಉತ್ತರ ಪ್ರದೇಶದ ಮೈತ್ರಿ ಬಗ್ಗೆ ಎಸ್‌ಪಿ- ಬಿಎಸ್‌ಪಿ ಜತೆಗೆ ಮಾತುಕತೆಗೆ ಮೀನಮೇಷ ಎಣಿಸುತ್ತಿದ್ದ ಮಧ್ಯೆಯೇ ಈ ಎರಡೂ ಪಕ್ಷಗಳು ಮೈತ್ರಿ ಘೋಷಿಸಿವೆ. ಈ ಎರಡೂ ಪಕ್ಷಗಳು ಕಾಂಗ್ರೆಸ್‌ ಜತೆಗೆ ಮೈತ್ರಿಗೆ ಅರೆಮನಸ್ಸು ತೋರಿಸುತ್ತಲೇ ಬಂದಿವೆ. ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಂತೂ ಬಿಎಸ್‌ಪಿ ಕಾಂಗ್ರೆಸ್‌ನಿಂದ ಅಧಿಕೃತವಾಗಿಯೇ ಅಂತರ ಕಾಯ್ದುಕೊಂಡಿತ್ತು.

2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿ ಜತೆಗಿನ ಮೈತ್ರಿ ಕಾಂಗ್ರೆಸ್‌ಗೆ ಅನುಕೂಲಕರವಾಗಿರಲಿಲ್ಲ. ಕಾಂಗ್ರೆಸ್‌ – ಎಸ್‌ಪಿ ಮೈತ್ರಿಯ ಹೊರತಾಗಿಯೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿತ್ತು. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಮೇಲೆ ನಂಬಿಕೆ ಇಟ್ಟು ಮೈತ್ರಿಯಿಂದ ದೂರ ಉಳಿಯಬೇಕೇ ಅಥವಾ ಪ್ರಾದೇಶಿಕ ಪಕ್ಷಗಳೊಂದಿಗೆ ಸೇರಿ ಮೈತ್ರಿಕೂಟದಿಂದ ಚುನಾವಣೆ ಎದುರಿಸಬೇಕೆಂಬ ಗೊಂದಲದಲ್ಲಿ ಕಾಂಗ್ರೆಸ್‌ ಇದೆ.

ಆದರೆ, ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗೆ ವ್ಯತ್ಯಾಸವಿದ್ದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪ್ರಾದೇಶಿಕ ಪಕ್ಷಗಳ ಜತೆಗೆ ಸೇರಿದರೆ ಬಿಜೆಪಿಯನ್ನು ಮಣಿಸಬಹುದು ಎಂಬ ಅಭಿಪ್ರಾಯಗಳೂ ರಾಜ್ಯ ಕಾಂಗ್ರೆಸ್‌ನಲ್ಲಿವೆ. ಕಳೆದ ವರ್ಷ ನಡೆದ ಗೋರಖ್‌ಪುರ್‌ ಮತ್ತು ಫುಲ್‌ಪುರ್‌ ಲೋಕಸಭಾ ಉಪ ಚುನಾವಣೆಗಳಲ್ಲಿ ಬಿಜೆಪಿ ಸೋಲಿಗೆ ಎಸ್‌ಪಿ ಕಾರಣವಾಗಿದ್ದನ್ನು ಉದಾಹರಣೆಯಾಗಿ ಕೊಡುವ ಉತ್ತರಪ್ರದೇಶ ಕಾಂಗ್ರೆಸ್‌ ಮುಖಂಡರು ಮೈತ್ರಿಯಾದರೆ ಒಳಿತು ಎನ್ನುತ್ತಿದ್ದಾರೆ.

Also read: 21 ಪಕ್ಷಗಳ ‘ವಿಪಕ್ಷ ಮೈತ್ರಿಕೂಟ’ ಸಜ್ಜು; ಬಿಜೆಪಿ ಮಣಿಸುವ ತಂತ್ರಕ್ಕಾಗಿ ಮಹಾಮೈತ್ರಿ ಸಭೆ

ಡೋಲಾಯಮಾನ ಕಾಂಗ್ರೆಸ್‌:

ಮೈತ್ರಿಯಿಂದ ದೂರ ಉಳಿಯುವ ಮೂಲಕ ಸಾಂಪ್ರದಾಯಿಕ ಮತಗಳನ್ನು ಗುರಿಯಾಗಿಸಿಕೊಂಡು ಕೆಲಸ ಮಾಡಬೇಕೇ ಅಥವಾ ಹಿಂದುತ್ವ ಶಕ್ತಿಗಳ ವಿರುದ್ಧ ಜಾತ್ಯತೀತ ಪಕ್ಷಗಳ ಮೈತ್ರಿಕೂಟದ ಹೋರಾಟ ಎಂಬ ಘೋಷಣೆಯೊಂದಿಗೆ ಬಿಜೆಪಿಯನ್ನು ಎದುರಿಸಬೇಕೆ ಎಂಬ ಗೊಂದಲದಲ್ಲಿರುವ ಕಾಂಗ್ರೆಸ್‌ನ ಮೈತ್ರಿ ವಿಚಾರದಲ್ಲಿ ಸದ್ಯಕ್ಕೆ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ.

ಒಟ್ಟು 80 ಲೋಕಸಭಾ ಸ್ಥಾನಗಳಿರುವ ಉತ್ತರ ಪ್ರದೇಶ 2014ರ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಮಟ್ಟದ ಸಂಖ್ಯಾಬಲ ನೀಡಿತ್ತು. 72 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಉತ್ತರ ಪ್ರದೇಶದಲ್ಲಿ ಭರ್ಜರಿ ಗೆಲುವು ಕಂಡಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಇಬ್ಬರೇ ಗೆದ್ದಿದ್ದರೆ, ಉಳಿದ ಸ್ಥಾನಗಳಲ್ಲಿ ಎಸ್‌ಪಿ ಹಾಗೂ ಅಪ್ನಾ ದಳ್‌ ಪಕ್ಷಗಳು ಜಯ ಸಾಧಿಸಿದ್ದವು.

2017ರ ಲೋಕಸಭಾ ಉಪ ಚುನಾವಣೆಯ ಹೊತ್ತಿಗೆ ರಾಜ್ಯದ ಚಿತ್ರಣ ಸಂಪೂರ್ಣ ಬದಲಾಗಿತ್ತು. ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಪೈಕಿ ಒಂದರಲ್ಲೂ ಬಿಜೆಪಿ ಗೆಲ್ಲಲಿಲ್ಲ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕ್ಷೇತ್ರ ಗೋರಖ್‌ಪುರ್‌ ಮತ್ತು ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಕ್ಷೇತ್ರ ಫುಲ್‌ಪುರ್‌ಗಳು ಎಸ್‌ಪಿ ಪಾಲಾದವು. ಬಿಜೆಪಿಯ ಹುಕುಮ್‌ ಸಿಂಗ್‌ ನಿಧನದಿಂದ ತೆರವಾಗಿದ್ದ ಕೈರಾನಾ ಕ್ಷೇತ್ರ ರಾಷ್ಟ್ರೀಯ ಲೋಕದಳ ಪಕ್ಷದ ಪಾಲಾಗಿತ್ತು. ಹೀಗೆ ಉಪ ಚುನಾವಣೆಯಲ್ಲಿ ಮೂರೂ ಕ್ಷೇತ್ರಗಳನ್ನೂ ಬಿಜೆಪಿ ಕಳೆದುಕೊಂಡಿತ್ತು.

ಉಪ ಚುನಾವಣೆಗಳಲ್ಲಿ ಬಿಜೆಪಿ ಸೋಲನ್ನೇ ಪ್ರಮುಖ ಅಂಶವಾಗಿ ಪರಿಗಣಿಸಿರುವ ಕಾಂಗ್ರೆಸ್‌ ಈಗ ಎಸ್‌ಪಿ- ಬಿಎಸ್‌ಪಿ ಜತೆಗೆ ಮೈತ್ರಿಗೆ ರಾಜಕೀಯ ಲೆಕ್ಕಾಚಾರಗಳಲ್ಲಿ ಮುಳುಗಿದೆ. ಇದೇ ಹೊತ್ತಲ್ಲಿ ಎಸ್‌ಪಿ- ಬಿಎಸ್‌ಪಿ ಕೈ ಜೋಡಿಸುವ ಮೂಲಕ ಪ್ರಾದೇಶಿಕ ಪಕ್ಷಗಳ ಮೈತ್ರಿಯ ಚುನಾವಣಾ ಪ್ರಯೋಗಕ್ಕೆ ಮುಂದಾಗಿವೆ. ಆದರೆ, ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ನಡೆದುಕೊಳ್ಳುತ್ತಿರುವ ಕಾಂಗ್ರೆಸ್‌ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.

ಮಾಯಾವತಿ ಪ್ರಧಾನಿ ಕನಸು:

“ಎಸ್‌ಪಿ-ಬಿಎಸ್‌ಪಿ ಜತೆಗಿನ ಮೈತ್ರಿಗೆ ಕಾಂಗ್ರೆಸ್‌ ಸೇರಿದರೆ ಮಾಯಾವತಿ ಪ್ರಧಾನಮಂತ್ರಿ ಹುದ್ದೆ ಕೇಳುವ ಸಾಧ್ಯತೆ ಇದೆ. ಅಲ್ಲದೆ ರಾಹುಲ್‌ ಗಾಂಧಿ ಪ್ರಧಾನಿಯಾಗಲು ಮಾಯಾವತಿ ಬಿಡುವ ಸಾಧ್ಯತೆ ಕಡಿಮೆ. ಹೀಗಾಗಿಯೇ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಜತೆಗಿನ ಮೈತ್ರಿಗಿಂತಲೂ ಪ್ರಾದೇಶಿಕ ಪಕ್ಷ ಎಸ್‌ಪಿ ಜತೆಗೆ ಮೈತ್ರಿಗೆ ಮಾಯಾವತಿ ಹೆಚ್ಚು ಆಸಕ್ತಿ ತೋರಿದ್ದಾರೆ. ಒಂದು ವೇಳೆ ಲೋಕಸಭೆಯಲ್ಲಿ ಕಾಂಗ್ರೆಸ್‌ 100ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದರೆ ಮಾಯಾವತಿ ಪ್ರಧಾನಮಂತ್ರಿ ಹಾದಿ ಕಷ್ಟವಾಗಲಿದೆ. ಅಲ್ಲದೆ, ಉತ್ತರಪ್ರದೇಶದಲ್ಲಿ ಬಿಎಸ್‌ಪಿಯಿಂದ ದೂರ ಉಳಿದು ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ ಎಂಬುದು ಈಗ ಎಸ್‌ಪಿಗೂ ಅರಿವಾಗಿದೆ” ಎಂಬುದು ಅಲಹಾಬಾದ್‌ನ ಗೋವಿಂದ್‌ ವಲ್ಲಭ ಪಂತ್‌ ಸಮಾಜ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಬದ್ರಿ ನಾರಾಯಣ್‌ ಅವರ ಅಭಿಪ್ರಾಯ.

ಉತ್ತರ ಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳ ಒಗ್ಗಟ್ಟು ಹಾಗೂ ಬಿಜೆಪಿಯ ಹಿಂದುತ್ವ ಬಲದ ಮುಂದೆ ಕಾಂಗ್ರೆಸ್‌ ಯಾವ ನಿರ್ಧಾರಕ್ಕೆ ಬರುತ್ತದೆ ಎಂಬುದು ಈಗ ಮುಖ್ಯವಾಗಿದೆ. ಪ್ರಾದೇಶಿಕ ಪಕ್ಷಗಳನ್ನು ಬಿಟ್ಟು ಸ್ವತಂತ್ರವಾಗಿ ಚುನಾವಣೆ ಎದುರಿಸುವುದೂ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಕಷ್ಟವಿದೆ. ಹೀಗಾಗಿ ಕಾಂಗ್ರೆಸ್‌ ಉತ್ತರ ಪ್ರದೇಶದಲ್ಲಿ ಮೈತ್ರಿಕೂಟ ಸೇರುವ ನಿರ್ಧಾರವನ್ನು ಕೊನೆಯ ಕ್ಷಣದ ಲೆಕ್ಕಾಚಾರಕ್ಕೆ ಬಿಟ್ಟು ಕೂತಿದೆ.