samachara
www.samachara.com
ಇನ್ನೂ ನಿಂತಿಲ್ಲ ಕುನನ್- ಪೋಶ್ಪೊರ ಹೆಣ್ಣುಮಕ್ಕಳ ಕಣ್ಣೀರು: ಇದು ಸೇನೆಯ ಕರಾಳ ಅಧ್ಯಾಯ
COVER STORY

ಇನ್ನೂ ನಿಂತಿಲ್ಲ ಕುನನ್- ಪೋಶ್ಪೊರ ಹೆಣ್ಣುಮಕ್ಕಳ ಕಣ್ಣೀರು: ಇದು ಸೇನೆಯ ಕರಾಳ ಅಧ್ಯಾಯ

ಕುನನ್- ಪೋಶ್ಪೊರ ಅತ್ಯಾಚಾರದ ಕರಾಳ ಅಧ್ಯಾಯದಿಂದ ಇಂದಿಗೂ ಈ ಗ್ರಾಮಗಳ ಮಹಿಳೆಯರು ಕಣ್ಣೀರು ಸುರಿಸುತ್ತಲೇ ಇದ್ದಾರೆ.

ಸೈನಿಕರ ತ್ಯಾಗ- ಬಲಿದಾನಗಳ ಉಲ್ಲೇಖವಿಲ್ಲದೆ ದೇಶಭಕ್ತಿ ಕುರಿತಾದ ಯಾವ ಮಾತುಗಳೂ ಮುಗಿಯುವುದಿಲ್ಲ. ರಾಷ್ಟ್ರ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿ ಕೊಡುವ ಸೈನಿಕರ ತ್ಯಾಗ ನಿಜಕ್ಕೂ ಬೆಲೆಕಟ್ಟಲಾಗದಂಥದ್ದು. ದೇಶಕ್ಕೆ ದೇಶವೇ ಹೆಮ್ಮೆ ಪಡುವ ಸೇನಾ ವ್ಯವಸ್ಥೆಯ ಮೇಲೆಯೇ ಅಹಸ್ಯ ಪಡುವಂಥ ಘಟನೆಯೊಂದು ಎರಡು ದಶಕಗಳ ಹಿಂದೆ ಕಾಶ್ಮೀರದಲ್ಲಿ ನಡೆದು ಹೋಯಿತು. ಅಂದು ಸೈನ್ಯದ ‘ದಾಳಿ’ಗೆ ತುತ್ತಾದ ನಮ್ಮದೇ ದೇಶದ ಹೆಣ್ಣುಮಕ್ಕಳ ಕಣ್ಣೀರು ಇನ್ನೂ ನಿಂತಿಲ್ಲ.

ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಕುನನ್ ಹಾಗೂ ಪೋಶ್ಪೊರ ಎಂಬ ಗ್ರಾಮಗಳು ಭಾರತದ ಅತ್ಯಂತ ನತದೃಷ್ಟ ಕುಗ್ರಾಮಗಳು. ಭಾರತ- ಪಾಕಿಸ್ತಾನ ಗಡಿಭಾಗದಲ್ಲಿರುವ ಈ ಗ್ರಾಮಗಳಲ್ಲಿ ಗುಂಡಿನ ಮೊರೆತ ಸಾಮಾನ್ಯ. ಈ ಗ್ರಾಮಗಳ ಮೇಲೆ 27 ವರ್ಷಗಳ ಹಿಂದೆ (1991ರ ಫೆಬ್ರುವರಿ 23) ಭಾರತೀಯ ಸೇನೆ ನಡೆಸಿದ ದಾಳಿಯ ಗಾಯಗಳು ಇನ್ನೂ ಆರಿಲ್ಲ.

ಕುನನ್- ಪೋಶ್ಪೊರ ಗ್ರಾಮಗಳ ವ್ಯಾಪ್ತಿಯಲ್ಲಿ ಮುಸ್ತಾಕ್ ಉಲ್-ಇಸ್ಲಾಂ ಎಂಬ ಹೆಸರಿನ ಹಿಜ್ಜಿ ಇಸ್ಲಾಮಿ ಸಂಘಟನೆ ಹಾಗೂ ಭಾರತೀಯ ಸೈನ್ಯದ ನಡುವೆ ಘರ್ಷಣೆ ನಡೆಯುತ್ತಲೇ ಇರುತ್ತದೆ. ಅಂದೂ ಕೂಡಾ ಅಂಥದ್ದೇ ಘರ್ಷಣೆ ಆರಂಭವಾಗಿತ್ತು. ಕುನನ್‌- ಪೋಸ್ಪೊರ ಗಡಿ ಗ್ರಾಮಗಳಾದ ಕಾರಣ ಪಾಕಿಸ್ತಾನದಿಂದ ನುಸುಳಿ ಭಾರತಕ್ಕೆ ಬರುವ ಉಗ್ರಗಾಮಿಗಳು ಈ ಗ್ರಾಮವನ್ನು ದಾಟಿಯೇ ಬರಬೇಕು. ಹೀಗಾಗಿ ಗಡಿ ರಕ್ಷಣಾ ಪಡೆಯ ಸೈನಿಕರು (ಬಿಎಫ್‌ಎಸ್) ಈ ಭಾಗದಲ್ಲಿನ ಉಗ್ರರ ಚಟುವಟಿಕೆಗಳ ಮೇಲೆ ಕಟ್ಟೆಚ್ಚರ ವಹಿಸಿರುತ್ತಾರೆ. ಗ್ರಾಮದ ಪ್ರತಿ ಮನೆ, ಪ್ರತಿ ಜಾಗದಲ್ಲೂ ಉಗ್ರಗಾಮಿಗಳಿಗಾಗಿ ಸೇನಾಪಡೆಗಳು ಹುಡುಕಾಟ ನಡೆಯುತ್ತಲೇ ಇರುತ್ತವೆ.

ಇದೇ ಕಾರಣಕ್ಕಾಗಿ ಕೇಂದ್ರೀಯ ರಿಸರ್ವ್ ಪೊಲೀಸ್‌ ಹಾಗೂ ಗಡಿ ರಕ್ಷಣಾ ಪಡೆಯ ಅರೆ ಸೈನಿಕ ದಳಕ್ಕೆ ಇಲ್ಲಿ ಶಾಶ್ವತ ಬೆಟಾಲಿಯನ್ ನಿರ್ಮಿಸಿಕೊಡಲಾಗಿದೆ. 1991 ಫೆಬ್ರವರಿ 23ರ ರಾತ್ರಿ ಎಂದಿನಂತೆ ಉಗ್ರಗಾಮಿಗಳನ್ನು ಹುಡುಕುತ್ತಾ ಗ್ರಾಮಗಳಿಗೆ ಬಂದ ಸೈನಿಕರ ತಂಡ ವಿಚಾರಣೆಗಾಗಿ ಆ ಗ್ರಾಮದಲ್ಲಿರುವ ಎಲ್ಲಾ ಗಂಡಸರನ್ನು ತನ್ನ ಸೇನಾ ಬಿಡಾರಕ್ಕೆ ಕರೆಸಿಕೊಂಡಿತ್ತು. ಇತ್ತ ಗ್ರಾಮಗಳ ಗಂಡಸರ ವಿಚಾರಣೆ ನಡೆಯುತ್ತಿದ್ದರೆ, ಅತ್ತ ಕುನನ್- ಪೋಶ್ಪೊರ ಗ್ರಾಮಗಳ ಹೆಣ್ಣುಮಕ್ಕಳ ಮೇಲೆ ನಮ್ಮದೇ ದೇಶದ ಸೈನಿಕರು ಸಾಮೂಹಿಕ ಅತ್ಯಾಚಾರಕ್ಕೆ ನಡೆಸಿದ್ದರು.

“ಅಂದು ಗ್ರಾಮಗಳ ಮೇಲೆ ದಾಳಿ ನಡೆಸಿದ ಸೈನಿಕರು ಮಕ್ಕಳು ವಯಸ್ಸಾದವರೆನ್ನದೆ ಎಲ್ಲರ ಮೇಲೂ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು. ಸಹಕರಿಸದವರನ್ನು ದೈಹಿಕವಾಗಿ ಹೊಡೆದು ಹಿಂಸಿಸಿ ಕೊಡಲಾಗಿತ್ತು” ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಈ ಘಟನೆಯನ್ನು ಭಾರತದ ಮಾಧ್ಯಮಗಳಲ್ಲಿ ಆರಂಭದ ಕೆಲದಿನಗಳ ಕಾಲ ನಿಯಂತ್ರಿಸುವಲ್ಲಿ ಅಂದಿನ ಸರಕಾರ ಸಫಲವಾಗಿತ್ತು.

ತನಿಖೆ ನಡೆದುಬಂದ ದಾರಿ:

ಈ ಘಟನೆ ನಡೆದು ಎರಡು ದಶಕಗಳಾದರೂ ಭಾರತದ ಹೆಚ್ಚಿನ ಜನರಿಗೆ ಇದರ ಬಗ್ಗೆ ಮಾಹಿತಿ ಇಲ್ಲ. ಕುನನ್- ಪೋಶ್ಪೊರ ಗ್ರಾಮಗಳ ಮೇಲೆ ನಡೆದ ದಾಳಿಯ ಅಂತರರಾಷ್ಟ್ರೀಯ ವರದಿಗಳು ಭಾರತದ ಮಾನ ಇಡೀ ಜಗತ್ತಿನೆದುರು ಹರಾಜಾಗುವಂತೆ ಮಾಡಿತ್ತು. ಆದರೂ ಸರಕಾರ ಘಟನೆಯ ಕುರಿತು ತನಿಖೆಗೆ ಆದೇಶ ನೀಡಿರಲಿಲ್ಲ.

ಘಟನೆ ನಡೆದ ಸುಮಾರು ಒಂದು ವಾರದ ನಂತರ ಗ್ರಾಮಸ್ಥರೇ ದೂರು ನೀಡಲು ಮುಂದಾದರು. 1991ರ ಮಾರ್ಚ್ 5 ರಂದು ಗ್ರಾಮಸ್ಥರು ಸ್ಥಳೀಯ ಮ್ಯಾಜಿಸ್ಟ್ರೇಟ್ ಎಸ್.ಎಂ.ಯಾಸೀನ್ ಅವರಿಗೆ ಸೇನೆಯ ಅತ್ಯಾಚಾರದ ಬಗ್ಗೆ ದೂರು ನೀಡಿದ್ದರು. ಮಾರ್ಚ್ 7ರಂದು ಗ್ರಾಮಕ್ಕೆ ಭೇಟಿದ್ದ ನೀಡಿದ್ದ ಎಸ್.ಎಂ.ಯಾಸೀನ್ ಅತ್ಯಾಚಾರದ ಕುರಿತು 23 ಮಹಿಳೆಯರು ನೀಡಿದ ಹೇಳಿಕೆಯನ್ನು ದಾಖಲಿಸಿದ್ದರು. ಅಲ್ಲದೆ ಈ ಕುರಿತು ಸಮಗ್ರ ತನಿಖೆಗೆ ಆದೇಶಿಸಿದ್ದರು.

ಘಟನೆಯ ತನಿಖೆಗೆ ಆದೇಶದ ನಂತರ ಈ ಪ್ರಕರಣ ದೇಶದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಯಿತು. 23 ಮಹಿಳೆಯರು ನೀಡಿದ್ದ ಹೇಳಿಕೆ ಆಧಾರದಲ್ಲಿ ಮಾರ್ಚ್ 8ರಂದು ತ್ರೆಹ್‌ಗಾಮ್‌ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಯಿತು.

ಜಮ್ಮು ಕಾಶ್ಮೀರ ಹೈ ಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ಮುಫ್ತಿ ಬಹಾಉದ್ದೀನ್ ಫಾರೂಕೀ ನೇತೃತ್ವದ ಶೋಧನಾ ಸಮಿತಿ ಮಾರ್ಚ್ 17ರಂದು ಕುನನ್-ಪೋಶ್ಪೊರ ಅವಳಿ ಗ್ರಾಮಗಳಿಗೆ ಭೇಟಿ ನೀಡಿತ್ತು. ತನಿಖೆಯ ಅವಧಿಯಲ್ಲಿ, ಸೈನಿಕರಿಂದ ಅತ್ಯಾಚಾರಕ್ಕೆ ಈಡಾದ ಸುಮಾರು 53 ಮಹಿಳೆಯರ ವಿಚಾರಣೆ ನಡೆಸಿದ್ದರು. ಅಲ್ಲದೆ ಘಟನೆ ನಡೆದು 20 ದಿನಗಳಾಗಿದ್ದರೂ ಪೊಲೀಸ್ ಇಲಾಖೆ ಈ ಕುರಿತು ಯಾವುದೇ ತನಿಖೆ ನಡೆಸಿಲ್ಲ ಎಂದು ಛೀಮಾರಿ ಹಾಕಿದ್ದರು.

ಅಂದಿನ ಎಎಸ್‌ಪಿ ದಿಲ್‌ಬಾಗ್‌ ಸಿಂಗ್ ಪ್ರಕರಣದ ತನಿಖೆ ನಡೆಸುವುದನ್ನು ಬಿಟ್ಟು ರಜೆಯ ಮೇಲಿದ್ದರು. ಶೋಧನಾ ಸಮಿತಿ ತನ್ನ ವರದಿಯಲ್ಲಿ ಇದನ್ನೂ ಉಲ್ಲೇಖಿಸಿತ್ತು. ಮಾರ್ಚ್ 18ರಂದು ವಿಭಾಗೀಯ ಕಮೀಷನರ್ ವಜಾಹತ್ ಹಬೀಬುಲ್ಲಾ ಕೂಡಾ ಗ್ರಾಮಕ್ಕೆ ಭೇಟಿ ನೀಡಿ ಪ್ರಕರಣದ ಸಾಕ್ಷ್ಯಾಧಾರಗಳೊಂದಿಗೆ ಸರಕಾರಕ್ಕೆ ವರದಿ ಸಲ್ಲಿಸಿದ್ದರು.

1992ರಲ್ಲಿ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು, “ಕುನನ್- ಪೋಶ್ಪೊರದಲ್ಲಿ ಭಾರತೀಯ ಸೈನಿಕರು ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಇದು ಮಾನವ ಹಕ್ಕು ಉಲ್ಲಂಘನೆ” ಎಂದು ಹೇಳಿತ್ತು. 2004ರರಲ್ಲಿ ಜಮ್ಮು-ಕಾಶ್ಮೀರ ಮಾನವ ಹಕ್ಕುಗಳ ಆಯೋಗ ಈ ಪ್ರಕರಣವನ್ನು ಮತ್ತೆ ತನಿಖೆಗೆ ಒಳಪಡಿಸಿತ್ತು. ಹೀಗೆ ಪ್ರಕರಣ ವಿವಿಧ ಹಂತಗಳನ್ನು ದಾಟುತ್ತಾ ಬಂದಿದೆ. ಆದರೆ, ನೊಂದ ಮಹಿಳೆಯರಿಗೆ ನ್ಯಾಯ ಎಂಬುದು ಮರೀಚಿಕೆಯಾಗಿದೆ.

ನೊಂದವರ ಮೇಲೆ ಸಾಮಾಜಿಕ ಬಹಿಷ್ಕಾರ:

ಸೈನಿಕರು ಕುನನ್- ಪೋಶ್ಪೊರ ಗ್ರಾಮಗಳ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ನಂತರ ಸುತ್ತಮುತ್ತಲಿನ ಗ್ರಾಮಸ್ಥರು ಇವರ ಮೇಲೆ ಸಾಮಾಜಿಕ ಬಹಿಷ್ಕಾರ ಹೇರಿದರು. ಈ ಗ್ರಾಮಗಳ ಹೆಣ್ಣು ಮಕ್ಕಳನ್ನು ಮದುವೆಯಾಗುವವರೆ ಇಲ್ಲದಂತಾದರು. ಅಲ್ಲದೆ ಈ ಗ್ರಾಮಗಳ ಹೆಸರು ಕೇಳಿದರೇ ಅಪಮಾನಿಸುವವರ ಸಂಖ್ಯೆ ಹೆಚ್ಚಾಯಿತು. ಈ ಕಾರಣಕ್ಕೇ ಹೊರಗೆ ಹೋಗಿ ವಿದ್ಯಾಭ್ಯಾಸ ಪಡೆಯುವವರ ಸಂಖ್ಯೆಯೂ ಕುಸಿಯಿತು.

ಹೀಗೆ ಕುನನ್- ಪೋಶ್ಪೊರ ಮಹಿಳೆಯರು ಒಂದು ಕಡೆ ಸೈನಿಕರಿಂದ ಶೋಷಣೆಗೆ ಒಳಗಾಗಿದ್ದರೆ ಅತ್ಯಾಚಾರದ ನಂತರ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರಿಂದ ನಿರಂತರ ಅಪಮಾನ ಅನುಭವಿಸುತ್ತಲೇ ಬಂದಿದ್ದಾರೆ. ತಮಗೆ ನ್ಯಾಯಬೇಕೆಂದು ಇಲ್ಲಿ ಮಹಿಳೆಯರು ಪದೇ ಪದೇ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಆದರೆ, ಸರಕಾರಗಳ ದಿವ್ಯ ನಿರ್ಲಕ್ಷ್ಯದಿಂದ ಪ್ರಕರಣಕ್ಕೆ ತಾರ್ಕಿಕ ಅಂತ್ಯವಂತೂ ಸಿಕ್ಕಿಲ್ಲ. ಕುನನ್- ಪೋಶ್ಪೊರ ಅತ್ಯಾಚಾರದ ಕರಾಳ ಅಧ್ಯಾಯದಿಂದ ಇಂದಿಗೂ ಈ ಗ್ರಾಮಗಳ ಮಹಿಳೆಯರು ಕಣ್ಣೀರು ಸುರಿಸುತ್ತಲೇ ಇದ್ದಾರೆ.