ಬರಿದಾದ ‘ಎಚ್‌ಎಎಲ್‌’ ಖಜಾನೆ, ಸಿಬ್ಬಂದಿ ಸಂಬಳಕ್ಕಾಗಿ 1,000 ಕೋಟಿ ರೂ. ಸಾಲ!
COVER STORY

ಬರಿದಾದ ‘ಎಚ್‌ಎಎಲ್‌’ ಖಜಾನೆ, ಸಿಬ್ಬಂದಿ ಸಂಬಳಕ್ಕಾಗಿ 1,000 ಕೋಟಿ ರೂ. ಸಾಲ!

ಒಂದು ಕಾಲದಲ್ಲಿ ಶ್ರೀಮಂತ ಸಂಸ್ಥೆಯಾಗಿದ್ದ ಎಚ್‌ಎಎಲ್‌ನಲ್ಲಿ ಅಕ್ಟೋಬರ್‌ನಲ್ಲೇ ನಗದು ಖಾಲಿಯಾಗುವ ಸೂಚನೆ ಸಿಕ್ಕಿತ್ತು. ಎಚ್‌ಎಎಲ್‌ ಬಳಿ ಕೇವಲ ಮೂರು ತಿಂಗಳ ಸಂಬಳ ನೀಡುವಷ್ಟು ಮಾತ್ರ ಹಣವಿದೆ ಎಂದು ವರದಿಯಾಗಿತ್ತು.

ಹಲವು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಿಬ್ಬಂದಿಗಳ ಸಂಬಳಕ್ಕಾಗಿ ಸರಕಾರಿ ಸಂಸ್ಥೆ, ಬೆಂಗಳೂರು ಮೂಲದ ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಸಾಲ ಪಡೆಯುವ ಹಂತಕ್ಕೆ ಬಂದು ಮುಟ್ಟಿದೆ.

ಒಂದು ಕಾಲದಲ್ಲಿ ಶ್ರೀಮಂತ ಸಂಸ್ಥೆಯಾಗಿದ್ದ ಎಚ್‌ಎಎಲ್‌ನಲ್ಲಿ ಅಕ್ಟೋಬರ್‌ನಲ್ಲೇ ನಗದು ಖಾಲಿಯಾಗುವ ಸೂಚನೆ ಸಿಕ್ಕಿತ್ತು. ಎಚ್‌ಎಎಲ್‌ ಬಳಿ ಕೇವಲ ಮೂರು ತಿಂಗಳ ಸಂಬಳ ನೀಡುವಷ್ಟು ಮಾತ್ರ ಹಣವಿದೆ ಎಂದು ವರದಿಯಾಗಿತ್ತು. ಇದೀಗ ಮೂರು ತಿಂಗಳ ನಂತರ ಕೈಯಲ್ಲಿರುವ ನಗದೆಲ್ಲಾ ಬರಿದಾಗಿದ್ದು ಸಂಸ್ಥೆಯ 29,000 ಸಿಬ್ಬಂದಿಗಳ ಸಂಬಳಕ್ಕಾಗಿ ಸಾಲ ಎತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.

“ನಮ್ಮ ಕೈಯಲ್ಲಿರುವ ನಗದು ಋಣಾತ್ಮಕವಾಗಿದೆ. ಹೀಗಾಗಿ 1,000 ಕೋಟಿ ರೂಪಾಯಿ ಸಾಲ ಪಡೆಯಲು ಮುಂದಾಗಿದ್ದೇವೆ. ಮಾರ್ಚ್‌ 31ರ ಅಂತ್ಯಕ್ಕೆ ನಾವು 6,000 ಕೋಟಿ ರೂಪಾಯಿ ಸಾಲದಲ್ಲಿ ಇರಲಿದ್ದೇವೆ. ಇದು ಸಂಸ್ಥೆಯನ್ನು ಅಸ್ಥಿರತೆಗೆ ದೂಡಲಿದೆ. ನಾವು ದಿನ ದಿನತ್ಯದ ಕೆಲಸಗಳಿಗೆ ಸಾಲ ಪಡೆದುಕೊಳ್ಳಬಹುದು. ಆದರೆ ಪ್ರಾಜೆಕ್ಟ್‌ಗಳಿಗೆ ಸಾಲ ಪಡೆದುಕೊಳ್ಳುವಂತಿಲ್ಲ,” ಎಂದು ಎಚ್‌ಎಎಲ್‌ ಸಿಎಂಡಿ ಆರ್‌ ಮಾಧವನ್‌ ‘ಟೈಮ್ಸ್‌ ಆಫ್‌ ಇಂಡಿಯಾ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಎಚ್‌ಎಎಲ್‌ ಬೆಂಗಳೂರು.
ಎಚ್‌ಎಎಲ್‌ ಬೆಂಗಳೂರು.
/ಸಮಯಂ

ಸದ್ಯ ಎಚ್‌ಎಎಲ್‌ 1,950 ಕೋಟಿ ರೂಪಾಯಿಗಳ ಸಾಲದ ಹೊರೆ ಹೊತ್ತಿದ್ದು, ಇದರ ಮೇಲೆ ಇದೀಗ ಮತ್ತೆ 1,000 ಕೋಟಿ ರೂಪಾತಯಿ ಸಾಲವನ್ನು ಪಡೆದುಕೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣ ಭಾರತೀಯ ವಾಯುಸೇನೆಯಿಂದ ಎಚ್‌ಎಎಲ್‌ಗೆ ಬರಬೇಕಾಗಿರುವ ಹಣ. 2017ರ ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೆ ಏರ್‌ಫೋರ್ಸ್‌ ಎಚ್‌ಎಎಲ್‌ಗೆ ಯಾವುದೇ ಪಾವತಿಗಳನ್ನು ಮಾಡಿಲ್ಲ. ಅಕ್ಟೋಬರ್‌ ಅಂತ್ಯಕ್ಕೆ ವಾಯುಸೇನೆ ಎಚ್‌ಎಎಲ್‌ಗೆ 10,000 ಕೋಟಿ ರೂಪಾಯಿಗೂ ಹೆಚ್ಚಿನ ಹಣ ನೀಡಬೇಕಾಗಿತ್ತು. ಈ ಪ್ರಮಾಣ ಡಿಸೆಂಬರ್‌ 31ಕ್ಕೆ 15,700 ಕೊಟಿ ರೂಪಾಯಿಗೆ ಏರಿಕೆಯಾಗಿದೆ. ಮಾರ್ಚ್‌ 31ರ ಅಂತ್ಯಕ್ಕೆ ಇದು 20,000 ಕೋಟಿ ರೂಪಾಯಿಗಳನ್ನು ದಾಟಲಿದೆ ಎನ್ನುತ್ತಾರೆ ಮಾಧವನ್‌.

ಕೇಂದ್ರ ರಕ್ಷಣಾ ಇಲಾಖೆ 2017-18ರಲ್ಲಿ ಎಚ್‌ಎಎಲ್‌ಗೆ 13,700 ಕೋಟಿ ರೂಪಾಯಿಗಳ ಬಜೆಟ್‌ಗೆ ಅನುಮೋದನೆ ನೀಡಿತ್ತು. 2018-19ರಲ್ಲಿ ಹಳೆ ಬಾಕಿಯನ್ನೂ ಸೇರಿಸಿ 33,715 ಕೋಟಿ ರೂಪಾಯಿಗಳ ಬಜೆಟ್‌ಗೆ ಅನುಮೋದನೆ ನೀಡಲಾಗಿತ್ತು. ಇದರಲ್ಲಿ 20,287 ಕೋಟಿ ರೂಪಾಯಿಗಳು ಮಾತ್ರ ಸಂಸ್ಥೆಯ ಕೈಗೆ ಬಂದಿವೆ. ಇನ್ನೂ 16,420 ಕೋಟಿ ರೂಪಾಯಿಗಳು ಬಾಕಿ ಇತ್ತು. ಇವತ್ತಿಗೆ 15,700 ಕೋಟಿ ರೂಪಾಯಿಗಳ ಪಾವತಿ ಬಾಕಿ ಇದೆ. ಅಷ್ಟೂ ಹಣವನ್ನು ನಾವು ಅಡ್ವಾನ್ಸ್‌ ಆಗಿ ಕೇಳುತ್ತಿಲ್ಲ. ಇವೆಲ್ಲಾ ನಾವು ನೀಡಿದ ಉತ್ಪನ್ನಗಳು, ಸೇವೆಗಳಿಗೆ ನೀಡಬೇಕಾಗದ ಬಾಕಿ ಹಣ ಎಂದು ವಿವರಿಸುತ್ತಾರೆ ಮಾಧವನ್‌.

15,700 ಕೋಟಿ ರೂಪಾಯಿ ಬಾಕಿ ಹಣದಲ್ಲಿ 14,500 ಕೋಟಿ ರೂಪಾಯಿ ವಾಯು ಸೇನೆಯಿಂದ ಬರಬೇಕಾಗಿದ್ದರೆ, ಉಳಿದ ಹಣವನ್ನು ಭೂ ಸೇನೆ, ಜಲ ಸೇನೆ ಮತ್ತು ಕೋಸ್ಟ್‌ ಗಾರ್ಡ್‌ನಿಂದ ಬರಬೇಕಿದೆ. ಈ ಹಿಂದೆ ಐಎಎಫ್‌ ಸೆಪ್ಟೆಂಬರ್‌ 2017ರಲ್ಲಿ ಕೊನೆಯ ಬಾರಿಗೆ 2,000 ಕೋಟಿ ರೂಪಾಯಿಗಳನ್ನು ನೀಡಿತ್ತು. ಅಲ್ಲಿಂದ ನಂತರ ಯಾವುದೇ ಹಣ ನೀಡಿಲ್ಲ.

ಎಚ್‌ಎಎಲ್‌ನ ಹೆಚ್ಚಿನ ಉದ್ಯಮಗಳು ರಕ್ಷಣಾ ಇಲಾಖೆಯನ್ನು ಅವಲಂಬಿಸಿರುತ್ತವೆ. ರಕ್ಷಣಾ ಇಲಾಖೆ ಸೇನೆಗೆ ಬಜೆಟ್‌ ಮೀಸಲಿಡಬೇಕು. ಅವರುಗಳು ಅಲ್ಲಿಂದ ಹಣ ಪಡೆದುಕೊಂಡು ಅದನ್ನು ಎಚ್‌ಎಎಲ್‌ಗೆ ನೀಡಬೇಕಾಗುತ್ತದೆ. “ನಾವು ಯಾವತ್ತೂ ಶ್ರೀಮಂತರಾಗಿಯೇ ಇದ್ದೇವೆ. ಇದೇ ಮೊದಲ ಬಾರಿ ಅಥವಾ ಕಳೆದ ಎರಡು ಮೂರು ದಶಕಗಳಲ್ಲಿ ಮೊದಲ ಬಾರಿಗೆ ನಾವು ಹಣವನ್ನು ಸಾಲ ಪಡೆಯುತ್ತಿದ್ದೇವೆ,” ಎಂದು ಪರಿಸ್ಥಿತಿಯ ಗಂಭೀರತೆಯನ್ನು ತೆರೆದಿಡುತ್ತಾರೆ ಮಾಧವನ್‌.

ಹಾಲಿ ಲಭ್ಯವಿರುವ ಮಾಹಿತಿಗಳ ಪ್ರಕಾರ, 2003-04 ರಿಂದ 2017-18ರವರೆ ಎಚ್‌ಎಎಲ್‌ ಯಾವತ್ತೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣದ ಕೊರತೆ ಅನುಭವಿಸಿದ್ದಿಲ್ಲ. ಈ ಹಿಂದೆ 2003-04ರಲ್ಲಿ ಎಚ್‌ಎಎಲ್‌ ಬಳಿಯಲ್ಲಿ 4,851 ಕೋಟಿ ರೂಪಾಯಿ ಮೊತ್ತವಿತ್ತು. ಇದೇ ಕನಿಷ್ಠ. ಅದಕ್ಕಿಂತ ಕಡಿಮೆ ಹಣ ಎಂದೂ ಎಚ್‌ಎಎಲ್‌ ಬಳಿ ಇರಲಿಲ್ಲ. ಕಳೆದ ಮಾರ್ಚ್‌, 31ಕ್ಕೆ ಸೇನೆಯಿಂದ ಬರಬೇಕಾದ ಬಾಕಿ ಮೊತ್ತವನ್ನು ಬಿಟ್ಟೂ ಎಚ್‌ಎಎಲ್‌ ಬಳಿ 6,524 ಕೋರಿ ರೂಪಾಯಿ ಇತ್ತು. ಆದರೆ ಸೆಪ್ಟೆಂಬರ್‌ನಲ್ಲಿ ಈ ಪ್ರಮಾಣ 1,000 ಕೋಟಿ ರೂಪಾಯಿಗೆ ಇಳಿಕೆಯಾಗಿತ್ತು. ಇದೀಗ ಖಜಾನೆ ಪೂರ್ತಿ ಬರಿದಾಗಿದ್ದು ಡಿಸೆಂಬರ್‌ ಹೊತ್ತಿಗೆ ಸಂಬಳಕ್ಕೂ ಹಣವಿಲ್ಲದಾಗಿದೆ.

ಈ ತಿಂಗಳ ಆರಂಭದಲ್ಲಿ ಎಚ್‌ಎಎಲ್‌ ಸಂಬಳ ಮತ್ತು ಕೆಲವು ವಸ್ತುಗಳ ಖರೀದಿಗಾಗಿ 1,300ರಿಂದ 1400 ಕೋಟಿ ರೂಪಾಯಿಗಳನ್ನು ಕಡವಾಗಿ ಪಡೆದುಕೊಂಡಿದೆ. ಇದರಲ್ಲಿ ಸಂಬಳಕ್ಕಾಗಿಯೇ 358 ಕೋಟಿ ರೂಪಾಯಿಗಳು ವಿನಿಯೋಗವಾಗಿವೆ. ಹೀಗೆ ಕೇವಲ ಎರಡು ವರ್ಷಗಳ ಅವಧಿಯಲ್ಲಿ ದೇಶದ ಶ್ರೀಮಂತ, ಹೆಮ್ಮೆಯ ಸಂಸ್ಥೆಯೊಂದು ಸಾಲದ ಮನೆಯ ಬಾಗಿಲಲ್ಲಿ ಬಂದು ನಿಂತಿದೆ.

‘ಎಚ್‌ಎಎಲ್‌’ನ ಭವಿಷ್ಯದ ಯೋಜನೆಗಳಲ್ಲಿ ತುಮಕೂರಿನ ಈ ಹೆಲಿಕಾಪ್ಟರ್‌ ಫ್ಯಾಕ್ಟರಿಯೂ ಒಂದು.   ಸಂಸ್ಥೆಗೆ ಉಂಟಾಗಿರುವ ಹಣದ ಕೊರತೆ ಇಂಥಹ ಭವಿಷ್ಯದ ಯೋಜನೆಗಳ ಮೇಲೆ ಪರಿಣಾಮ ಬೀರಲಿದೆ.
‘ಎಚ್‌ಎಎಲ್‌’ನ ಭವಿಷ್ಯದ ಯೋಜನೆಗಳಲ್ಲಿ ತುಮಕೂರಿನ ಈ ಹೆಲಿಕಾಪ್ಟರ್‌ ಫ್ಯಾಕ್ಟರಿಯೂ ಒಂದು. ಸಂಸ್ಥೆಗೆ ಉಂಟಾಗಿರುವ ಹಣದ ಕೊರತೆ ಇಂಥಹ ಭವಿಷ್ಯದ ಯೋಜನೆಗಳ ಮೇಲೆ ಪರಿಣಾಮ ಬೀರಲಿದೆ.

“ಇನ್ನು ಮುಂದೆ ಪ್ರತಿ ತಿಂಗಳು ಈ ಸಾಲ ಏರಿಕೆಯಾಗುತ್ತಲೇ ಹೋಗುತ್ತದೆ. ಇದರಿಂದ ನಾವು ಸಮಸ್ಯೆಗೆ ಸಿಲುಕುತ್ತೇವೆ. ಖರೀದಿಯ ಆರ್ಡ್‌ರ್‌ಗಳನ್ನು ಪೂರೈಕೆ ಮಾಡಲಾಗುವುದಿಲ್ಲ. ನಾವು ಮುಂದೆ ಹೋಗಲಾಗುವುದಿಲ್ಲ. ಈ ಹಿಂದಿನ ಖರೀದಿಗಳ ಕಾರಣಗಳಿಂದ ಈ ವರ್ಷ ಹೇಗಾದರೂ ಹೊಂದಿಸಿಕೊಂಡು ಹೋಗಬಹುದು. ಆದರೆ ಏಪ್ರಿಲ್‌ನಿಂದ ಖರೀದಿಸಬೇಕಾಗಿರುವ ವಿಮಾನಗಳು ಸಿದ್ಧವಾಗುವುದಿಲ್ಲ; ರಿಪೇರಿ, ಪರೀಕ್ಷೆಗಳು ನಡೆಯುವುದಿಲ್ಲ. ಹಣವಿಲ್ಲದಿದ್ದರೆ ಏಪ್ರಿಲ್‌ನಿಂದ ಎಲ್ಲವೂ ಸ್ಥಗಿತಗೊಳ್ಳುವ ಪರಿಸ್ಥಿತಿ ಬರಲಿದೆ.,” ಎಂದು ಎಚ್ಚರಿಕೆ ನೀಡುತ್ತಾರೆ ಮಾಧವನ್‌.

ರಿಪೇರಿ ಮತ್ತು ಪರಿಕ್ಷಾರ್ಥ ಹಾರಾಟ ಮೊದಲಾದ ಉದ್ಯಮದಿಂದಲೇ ಎಚ್‌ಎಎಲ್‌ ಪ್ರತಿ ವರ್ಷ 6,000 ಕೊಟಿ ರೂಪಾಯಿಗಳ ಆದಾಯ ಗಳಿಸುತ್ತಿದೆ. ಅವುಗಳಲ್ಲಿ ಐಎಎಫ್‌ನ ಪಾಲೇ ದೊಡ್ಡದು. ಒಂದೊಮ್ಮೆ ಎಚ್‌ಎಎಲ್‌ ಕೈಯಲ್ಲಿ ಹಣವಿಲ್ಲದಿದ್ದರೆ ಅದು ಉಳಿದವರ ಮೇಲೆ ಪರಿಣಾಮ ಬೀರುತ್ತದೆ. “ಇದೊಂದು ದೊಡ್ಡ ಸಮಸ್ಯೆ. ನಮ್ಮ ಮೇಲೆ ಅವಲಂಬಿತರಾದ 2,000 ಕ್ಕೂ ಹೆಚ್ಚು ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳಿವೆ. ಹಣದ ಕೊರತೆಯಿದ್ದರೂ ಇಲ್ಲಿಯವರೆಗೆ ಹೇಗೋ ನೀಡುತ್ತಾ ಬಂದಿದ್ದೇವೆ. ಇನ್ನು ಮುಂದೆ ಇವರ ಹಣವನ್ನು ಬಾಕಿ ಉಳಿಸಿಕೊಳ್ಳಬೇಕಾಗುತ್ತದೆ,” ಎಂದು ಅಸಹಾಯಕತೆ ತೋಡಿಕೊಳ್ಳುತ್ತಾರೆ ಮಾಧವನ್‌.

ಇದರಿಂದ ಎಚ್‌ಎಲ್‌ ನೀಡಬೇಕಾಗಿರುವ ಸೇವೆಗಳಿಗೆ, ಭವಿಷ್ಯದ ವಿಮಾನ ಮತ್ತು ಹೆಲಿಕಾಕ್ಟರ್‌ ನಿರ್ಮಾಣ ಯೋಜನೆಗಳಿಗೆ ಅಡಚಣೆ ಉಂಟಾಗಲಿದೆ. ಪರಿಸ್ಥಿತಿ ಹೇಗಿದೆ ಎಂದರೆ ಯಾರ ಬಳಿಯಲ್ಲೋ ಒಂದಷ್ಟು ಹಣ ತಂದು ಮುಂದುವರಿಸೋಣ ಎನ್ನುವ ಪರಿಸ್ಥಿತಿಯೂ ಇಲ್ಲ ಎನ್ನುತ್ತಾರೆ ಮಾಧವನ್‌. ಹೀಗೆ 79 ವರ್ಷಗಳ ಇತಿಹಾಸ ಇರುವ ಸಂಸ್ಥೆಯೊಂದು ಸಾಲ ಎತ್ತುತ್ತಿದ್ದರೆ ದೇಶದ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಇದಕ್ಕೆಲ್ಲಾ ಮೂಕ ಸಾಕ್ಷಿಗಳಾಗಿ ನಿಂತಿದ್ದಾರೆ. ರಫೇಲ್‌ ಸಮರ್ಥನೆಗಿಳಿದವರು, ಅನಿಲ್‌ ಅಂಬಾನಿಯ ಬೆನ್ನಿಗೆ ನಿಂತವರು ತಮ್ಮ ನಿಲುವುಗಳನ್ನು ಬಹಿರಂಗಗೊಳಿಸಬೇಕಾದ ಸಮಯ ಇದು. ಎಲ್ಲದಿದ್ದಲ್ಲಿ ಎಚ್‌ಎಎಲ್‌ ವೈಭವನ್ನು ಇತಿಹಾಸದ ಪುಸ್ತಕದಲ್ಲಿ ಓದುವ ದಿನಗಳು ದೂರವಿಲ್ಲ.

ಪೂರಕ ಮಾಹಿತಿ: ಟೈಮ್ಸ್‌ ಆಫ್‌ ಇಂಡಿಯಾ

Join Samachara Official. CLICK HERE