samachara
www.samachara.com
ಐಟಿ ದಾಳಿ ಸ್ಪೆಷಲ್: ಶ್ರೀಮಂತರು ಎಂಬ ತೆರಿಗೆ ಕಳ್ಳರು; ಬಡವರು ಎಂಬ ಆದಾಯ ಮೂಲಗಳು...
COVER STORY

ಐಟಿ ದಾಳಿ ಸ್ಪೆಷಲ್: ಶ್ರೀಮಂತರು ಎಂಬ ತೆರಿಗೆ ಕಳ್ಳರು; ಬಡವರು ಎಂಬ ಆದಾಯ ಮೂಲಗಳು...

2015ರ ಅಂಕಿ ಅಂಶದ ಪ್ರಕಾರ ದೇಶದ ಜನಸಂಖ್ಯೆಯ ಶೇ.1 ಭಾಗದಷ್ಟಿರುವ ಶ್ರೀಮಂತರು ದೇಶದ ಸಂಪತ್ತಿನ ಶೇ.53 ರಷ್ಟು ಪಾಲು ಹೊಂದಿದ್ದಾರೆ. ಹದಿನೈದು ವರ್ಷಗಳ ಹಿಂದೆ ದೇಶದ ಸಂಪತ್ತಿನಲ್ಲಿ ಶ್ರೀಮಂತರ ಪಾಲು ಶೇ.38ರಷ್ಟಿತ್ತು. 

ಭಾರತ ಇಂದು ವಿಶ್ವದಲ್ಲೇ ಅತ್ಯಂತ ವೇಗವಾಗ ಬೆಳೆಯುತ್ತಿರುವ ರಾಷ್ಟ್ರ. ಒಂದು ಕಾಲದಲ್ಲಿ ಬಡವರ, ಹಾವಾಡಿಗರ ರಾಷ್ಟ್ರ ಎಂದು ಪಾಶ್ಚಿಮಾತ್ಯರಿಂದ ಹೀಯಾಳಿಕೆಗೆ ಒಳಗಾಗುತ್ತಿದ್ದ ಭಾರತ, ಇಂದು ತಾಂತ್ರಿಕವಾಗಿ ಊಹೆಗೂ ನಿಲುಕದ ಎತ್ತರಕ್ಕೆ ಏರಿದೆ. ಅಷೇ ಅಲ್ಲ ದೇಶ ಆರ್ಥಿಕವಾಗಿ ಸಬಲವಾಗುತ್ತಿದೆ. ಅಫ್ರಾ ಏಷ್ಯಾ ಬ್ಯಾಂಕ್ ನೀಡುವ ಅಂಕಿ ಅಂಶದ ಪ್ರಕಾರ ಇಂದು ದೇಶದ ಒಟ್ಟು ಸಂಪತ್ತು ಸುಮಾರು 560 ಲಕ್ಷ ಕೋಟಿ. ಇದು ಜಗತ್ತಿನ ಸಿರಿವಂತ ದೇಶಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನದಲ್ಲಿದೆ. ಅಮೇರಿಕಾ, ಚೀನಾ, ಜಪಾನ್, ಬ್ರಿಟನ್ ಮತ್ತು ಜರ್ಮನಿ ಕ್ರಮವಾಗಿ ಮೊದಲ ಐದು ಸ್ಥಾನದಲ್ಲಿವೆ.

ಇದು ನಿಜಕ್ಕೂ ಹೆಮ್ಮೆ ಪಡುವ ಸಂಗತಿಯೇ. ಬ್ರಿಟೀಷ್ ಆಳ್ವಿಕೆ ನಂತರ ಭಾರತ ಆರ್ಥಿಕವಾಗಿ ದಿವಾಳಿತನದ ಹಂತಕ್ಕೆ ತಲುಪಿತ್ತು. ಜನರ ತಲಾ ಆದಾಯ 1 ರೂಪಾಯಿಗಿಂತಲೂ ಕಡಿಮೆಯಾಗಿತ್ತು. ಬಡತನ ಎಲ್ಲೆಡೆ ತಾಂಡವವಾಡುತ್ತಿತ್ತು. ಮಾನವ ಅಭಿವೃದ್ಧಿ ಸೂಚ್ಯಂಕ ಇನ್ನೂ ತನ್ನ ಖಾತೆಯನ್ನೇ ತೆರೆದಿರಲಿಲ್ಲ. ಆದರೆ ಅಂದಿನ ಭಾರತ ಸ್ಥಿತಿಯನ್ನು ಇಂದಿನ ಭಾರತದ ಆರ್ಥಿಕ ಸಾಧನೆಯ ಜೊತೆಗೆ ತಾಳೆ ಮಾಡಿದರೆ ನಮಗೆ ಅಚ್ಚರಿಯಾಗುವುದಂತೂ ದಿಟ.

ದೇಶವೇನೋ ಅಭಿವೃದ್ಧಿಯಾತ್ತಿದೆ ನಿಜ, ಇಂದು ಭಾರತದ ಸಂಪತ್ತು ಬರೋಬ್ಬರಿ 560 ಲಕ್ಷ ಕೋಟಿ ಎಂದರೆ ಅದು ಸುಮ್ಮನೆಯ ಮಾತಲ್ಲ. ಆದರೆ ಇಷ್ಟೆಲ್ಲಾ ಸಂಪತ್ತು ಇದ್ದರೂ, ಈಗಲೂ ಭಾರತವೇಕೆ ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ತಳಮಟ್ಟದಲ್ಲೇ ಇದೆ? ಹಸಿವು, ಬಡತನ ನಿರುದ್ಯೋಗ ಏಕೆ ತಾಂಡವವಾಡುತ್ತಿದೆ? ಹಾಗಾದ್ರೆ ಅಸಲಿಗೆ ಇಷ್ಟೆಲ್ಲಾ ಹಣ ಎಲ್ಲಿದೆ? ಯಾರ ಬಳಿ ಇದೆ? ಸರ್ಕಾರದ ಆರ್ಥಿಕ ನೀತಿಗಳು ಏಕೆ ಯಾವಾಗಲೂ ಶ್ರೀಮಂತರ ಪರವಾಗಿಯೇ ಇದೆ? ಅಸಲಿಗೆ ಶ್ರೀಮಂತರು ಹೇಗೆ ತೆರಿಗೆಗಳ್ಳರಾಗಿದ್ದಾರೆ? ಈ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ.

ಐಟಿ ದಾಳಿ ಸ್ಪೆಷಲ್: ಶ್ರೀಮಂತರು ಎಂಬ ತೆರಿಗೆ ಕಳ್ಳರು; ಬಡವರು ಎಂಬ ಆದಾಯ ಮೂಲಗಳು...

ಶ್ರೀಮಂತರ ತೆರಿಗೆ ಕಳ್ಳತನ

ಭಾರತದ ಮಟ್ಟಿಗೆ ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಲಾಗುತ್ತದೆಯಾದರೂ ತೆರಿಗೆ ವಿಚಾರದಲ್ಲಿ ಮಾತ್ರ ಶ್ರೀಮಂತರಿಗೆ ಒಂದು ನ್ಯಾಯ, ಬಡವರಿಗೆ ಒಂದು ನ್ಯಾಯ. ಭಾರತದಲ್ಲಿ ಶ್ರೀಮಂತರಿಗಿಂತ, ಬಂಡವಾಳಶಾಹಿಗಳಿಗಿಂತ ಬಡವರೇ ಹೆಚ್ಚು ಟ್ಯಾಕ್ಸ್ ಪೇಯರ್ ಎಂದರೆ ನೀವು ನಂಬಲೇ ಬೇಕು. ಸಾಮಾನ್ಯ ಜನ ಅದರಲ್ಲೂ ಪ್ರಮುಖವಾಗಿ ಭಾರತದ ಮಧ್ಯಮ ವರ್ಗದ ಜನ ತಮಗೇ ಅರಿವಿಲ್ಲದಂತೆ ತೆರಿಗೆ ಪಾವತಿಸುತ್ತಿರುತ್ತಾರೆ. ಅವರ ಖಾತೆಗೆ ಜಮೆ ಆಗುವ ಸಂಬಳದಿಂದ ಅವರು ಖರೀದಿಸುವ ಪ್ರತಿ ವಸ್ತುಗಳ ಮೇಲೆ ತೆರಿಗೆ ನೀಡುತ್ತಿರುತ್ತಾರೆ. ಆದರೆ ಕೋಟಿ ಕೋಟಿ ಹಣ ಗಳಿಸುವ ಶ್ರೀಮಂತರು ಹೇಗೆಲ್ಲಾ ತೆರಿಗೆಯಿಂದ ವಿನಾಯಿತಿ ಪಡೆಯುತ್ತಾರೆ? ಹಾಗೂ ಹೇಗೆಲ್ಲಾ ತೆರಿಗೆಯನ್ನು ವಂಚನೆ ಮಾಡುತ್ತಾರೆ ಗೊತ್ತಾ..?

*ಉಡುಗೊರೆ ನೀಡಿದ ಹಣಕ್ಕೆ ಇಲ್ಲ ತೆರಿಗೆ

ಮಧ್ಯಮವರ್ಗದ ಜನ ಕೇವಲ 2.5 ಲಕ್ಷಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯ ಮೂಲಕ ವಹಿವಾಟು ನಡೆಸಿದರೆ ಅವರು ಸರ್ಕಾರಕ್ಕೆ ತೆರಿಗೆ ನೀಡಲೇಬೇಕು. ಆದರೆ ಉಡುಗೊರೆಯಾಗಿ ನೀಡುವ ಹಣಕ್ಕೆ ತೆರಿಗೆ ಇಲ್ಲ. ಭಾರತದಲ್ಲಿ 80 ಕೋಟಿ ರೂಪಾಯಿವರೆಗೆ ಉಡುಗೊರೆಯನ್ನು ಕುಟುಂಬಸ್ಥರಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಉಡುಗೊರೆಯನ್ನು ಹಣದ ರೂಪದಲ್ಲಿ ಅಥವಾ ಇನ್ಯಾವುದೇ ರೂಪದಲ್ಲಿ ನೀಡಬಹುದು. ಹೀಗೆ ನೀಡಿದ ಹಣಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಹೀಗಾಗಿ ಭಾರತದ ಶ್ರೀಮಂತರ ಪೈಕಿ ಬಹುಪಾಲು ಜನ ತಮ್ಮ ಕುಟುಂಬಸ್ಥರ ಹೆಸರಿನಲ್ಲಿ ಉಡುಗೊರೆಯ ರೂಪದಲ್ಲಿ ಹಣವನ್ನು ವಿನಿಯೋಗಿಸುವ ಮೂಲಕ ತೆರಿಗೆಯಿಂದ ವಿನಾಯಿತಿ ಪಡೆಯುತ್ತಿದ್ದಾರೆ.

*ದೊಡ್ಡ ಹೂಡಿಕೆಗೆ ಇಲ್ಲ ತೆರಿಗೆ

ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಹಣ ಹೂಡಿ ವ್ಯವಹಾರ ಮಾಡುವವರಿಗೆ ತೆರಿಗೆಯಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಉಪಾಯಗಳಿವೆ. ಓರ್ವ ವ್ಯಕ್ತಿ ಯಾವುದೇ ವ್ಯವಹಾರಕ್ಕೆ 10 ಕೋಟಿ ಹೂಡಿಕೆ ಮಾಡಿದರೆ ಅದರಲ್ಲಿ ಸುಮಾರು ಶೇ.90 ರಷ್ಟು ಖರ್ಚಿನ ಲೆಕ್ಕದಲ್ಲಿ ತೋರಿಸಲಾಗುತ್ತದೆ. ಖರ್ಚಿನ ಲೆಕ್ಕದಲ್ಲಿ ತೋರಿಸಲಾದ ಹಣಕ್ಕೆ ಆದಾಯ ತೆರಿಗೆ ಇಲಾಖೆ ಕಾನೂನು ಚಾಪ್ಟರ್ 6ಎ ಸೆಕ್ಷನ್ 80ರ ಪ್ರಕಾರ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಹೀಗಾಗಿ ಹೂಡಿಕೆದಾರ ಕೇವಲ ಉಳಿದ ಶೇ.10 ರಷ್ಟು ಮೊತ್ತಕ್ಕೆ ಮಾತ್ರ ತೆರಿಗೆ ಕಟ್ಟುತ್ತಾನೆ. ಉಳಿದ ಶೇ.90 ರಷ್ಟು ಹಣ ತೆರಿಗೆಯಿಂದ ವಿನಾಯಿತಿ ಪಡೆಯಲಾಗಿರುತ್ತದೆ. ಭಾರತದಲ್ಲಿ ಬಹುಪಾಲು ಉದ್ಯಮಿಗಳು ತಮ್ಮ ತೆರಿಗೆ ಹಣವನ್ನು ಉಳಿಸಿಕೊಳ್ಳಲು ಬಳಸುವ ತೀರಾ ಸಾಮಾನ್ಯವಾದ ಉಪಾಯವಿದು.

*ಬೇನಾಮಿ ಎಂಬ ದೊಡ್ಡ ಮೊಸಳೆ

ಭಾರತದಲ್ಲಿ ಬಹುಪಾಲು ಶ್ರೀಮಂತರ ಸಂಪತ್ತು ಕರಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಈ ಬೇನಾಮಿಗಳ ಪಾತ್ರ ಮಹತ್ವವಾದದ್ದು. ಯಾವುದೇ ಉದ್ಯಮದಲ್ಲಿ ಗಳಿಸಿದ ಆದಾಯದಲ್ಲಿ ಉದ್ಯಮಿಯು ಯಾವುದೇ ಆಸ್ತಿಯನ್ನು ಖರೀದಿಸಿದರೆ ಅದಕ್ಕೆ ಶೇ.20 ರಿಂದ 30 ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಆದರೆ ಈ ಹಣವನ್ನು ಉಳಿಸುವ ನಿಟ್ಟಿನಲ್ಲಿ ಉದ್ಯಮಿಗಳು ಕಂಡುಕೊಂಡಿರುವ ಉಪಾಯವೇ ಬೇನಾಮಿ.

ಶ್ರೀಮಂತರು ಮೂರನೇ ವ್ಯಕ್ತಿಯ ಮೂಲಕ ಆತನ ಕುಟುಂಬಸ್ಥರ, ಪರಿಚಯಸ್ಥರ ಹೆಸರಿನಲ್ಲಿ ಸ್ಥಿರಸ್ತಿ ಅಥವಾ ಚರಾಸ್ತಿಯನ್ನು ಖರೀದಿ ಮಾಡಲಾಗುತ್ತದೆ. ಅಥವಾ ನಗದು ರೂಪದಲ್ಲಿ ಹಣವನ್ನು ನೀಡಲಾಗುತ್ತದೆ. ಹೀಗೆ ಖರೀದಿ ಮಾಡಲಾಗುವ ಆಸ್ತಿ ಅಥವಾ ನಗದಿಗೆ ಯಾವುದೇ ಲೆಕ್ಕ ಇರುವುದಿಲ್ಲ. ಹೀಗಾಗಿ ಭಾರತದ ಶ್ರೀಮಂತ ವರ್ಗ ತಮ್ಮ ಸಂಪತ್ತಿನ ಬಹುಪಾಲು ಆಸ್ತಿಯನ್ನು ತಮ್ಮ ಬೇನಾಮಿ ಹೆಸರಿನಲ್ಲಿ ಖರೀದಿ ಮಾಡಿರುತ್ತಾರೆ. ಒಂದು ಅಂದಾಜಿನ ಪ್ರಕಾರ ವಿಶ್ವದಲ್ಲೇ ಅತಿ ಹೆಚ್ಚು ಬೇನಾಮಿಗಳನ್ನು ಹೊಂದಿರುವ ರಾಷ್ಟ್ರ ಭಾರತ.

*ಸಾಲ ತೋರಿಸಿ ತೆರಿಗೆ ಉಳಿಸುವ ಉದ್ಯಮಿಗಳು

ಸಾಮಾನ್ಯವಾಗಿ ಉದ್ಯಮಿಗಳು ಎಷ್ಟು ಕೋಟಿ ವ್ಯವಹಾರ ಮಾಡುತ್ತಾರೋ ಅಷ್ಟೇ ಕೋಟಿ ಸಾಲವನ್ನು ತೋರಿಸಿಕೊಳ್ಳುತ್ತಾರೆ. ಭಾರತ ಮಟ್ಟಿಗೆ ದೊಡ್ಡ ಮಟ್ಟದ ವ್ಯವಹಾರಗಳಲ್ಲಿ ತೊಡಗಿರುವ ಎಲ್ಲಾ ಉದ್ಯಮಿಗಳು ಸಾಲಗಾರರೇ, ಅಷ್ಟೇ ಏಕೆ ಮೊನ್ನೆ ತಾನೆ ಫೋಬ್ರ್ಸ್ ವರದಿಯಲ್ಲಿ 47.3 ಬಿಲಿಯನ್ ಡಾಲರ್ ಹೊಂದುವ ಮೂಲಕ ಭಾರತ ಶ್ರೀಮಂತರ ಪಟ್ಟಿಯಲ್ಲಿ ಸತತವಾಗಿ ಮೊದಲ ಸ್ಥಾನವನ್ನು ಅಲಂಕರಿಸಿರುವ ಮುಖೇಶ್ ಅಂಬಾನಿ ಸಹ ಸಾಲಗಾರನೆ.

ಉದ್ಯಮಿಗಳು ತಮ್ಮ ತೆರಿಗೆ ಹಣವನ್ನು ಉಳಿಸಿಕೊಳ್ಳುವ ಸಲುವಾಗಿ ವ್ಯವಸ್ಥಿಯವಾಗಿ ಕೃತಕ ಸಾಲವನ್ನು ತೋರಿಸಿಕೊಳ್ಳುತ್ತಾರೆ. ಅವರ ಆಸ್ತಿಯ ಮೌಲ್ಯದ ಶೇ.60 ರಿಂದ 70 ರಷ್ಟು ಸಾಲ ಇದೆ ಎಂಬಂತೆ ತೋರಿಸುತ್ತಾರೆ. ಭಾರತೀಯ ತೆರಿಗೆ ಕಾನೂನಿನ ಪ್ರಕಾರ ಸಾಲದಲ್ಲಿರುವ ಉದ್ಯಮಿಗೆ ತೆರಿಗೆಯಿಂದ ವಿನಾಯ್ತಿ ನೀಡಲಾಗುತ್ತದೆ.

ಐಟಿ ದಾಳಿ ಸ್ಪೆಷಲ್: ಶ್ರೀಮಂತರು ಎಂಬ ತೆರಿಗೆ ಕಳ್ಳರು; ಬಡವರು ಎಂಬ ಆದಾಯ ಮೂಲಗಳು...
/ಮನಿ ಕಂಟ್ರೋಲ್

*ಸರ್ಕಾರಿ ಅನುದಾನಿತ ತೆರಿಗೆ ವಿನಾಯ್ತಿ

ಒಂದೆಡೆ ಉದ್ಯಮಿಗಳು ಹೇಗೆ ತಮ್ಮ ತೆರಿಗೆ ಹಣವನ್ನು ಉಳಿಸಿಕೊಳ್ಳಬಹುದು ಎಂದು ಲೆಕ್ಕ ಹಾಕುತ್ತಿದ್ದರೆ, ಮತ್ತೊಂದೆಡೆ ಸರ್ಕಾರವೇ ಇಂತಹ ಉದ್ಯಮಿಗಳ ತೆರಿಗೆಯನ್ನು ಮನ್ನಾ ಮಾಡುವ ಮೂಲಕ ಕಾರ್ಪೋರೇಟ್ ನಿಷ್ಠೆಯನ್ನು ಕಾಲ ಕಾಲಕ್ಕೆ ತೋರಿಸುತ್ತಾರೆ ಬಂದಿದೆ.

ಭಾರತದಲ್ಲಿ 1992ರ ಮುಕ್ತ ಆರ್ಥಿಕ ನೀತಿ ಜಾರಿಯಾದ ನಂತರ ಊಹೆಗೂ ನಿಲುಕದಷ್ಟು ಎತ್ತರಕ್ಕೆ ಬೆಳೆದಿರುವ ಈ ಕಾರ್ಪೋರೇಟ್ ಸಂಸ್ಕೃತಿ ಇಲ್ಲಿನ ಸರ್ಕಾರವನ್ನೂ ಹಿಂದೆ ನಿಂತು ನಡೆಸಬಲ್ಲದು, ಆ ಮಟ್ಟಕ್ಕೆ ಈ ವ್ಯವಸ್ಥೆ ವ್ಯವಸ್ಥಿತವಾಗಿ ಬೆಳೆದು ನಿಂತಿದೆ. ಕಳೆದ ನಾಲ್ಕು ವರ್ಷದಲ್ಲಿ ಸರ್ಕಾರದಿಂದ ಮನ್ನಾ ಆಗಿರುವ ಕಾರ್ಪೋರೇಟ್ ತೆರಿಗೆ ಮಾತ್ರ ಸುಮಾರು 1.8 ಲಕ್ಷ ಕೋಟಿ. ಆದರೆ ಒಮ್ಮೆ ಯೋಚಿಸಿ ಇದೇ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಲು ಎಷ್ಟು ಯೋಚಿಸುತ್ತವೆ?, ಏನೆಲ್ಲಾ ಕಸರತ್ತು? ರೈತರ ಸಾಲ ಮನ್ನಾ ಹಿಂದೆ ಏನೆಲ್ಲಾ ರಾಜಕೀಯ? ಅಬ್ಬಬ್ಬಾ.

*ತಲೆಬುಡವಿಲ್ಲದ ತೆರಿಗೆ ನೀತಿ

ಜಿಎಸ್‍ಟಿ ಜಾರಿಯಾದ ನಂತರ ಪ್ರಜ್ಞಾವಂತರ ನಡುವಿನಿಂದ ಎದ್ದ ಏಕೈಕ ಪ್ರಶ್ನೆ ಎಂದರೆ ನಮ್ಮ ದೇಶದ ತೆರಿಗೆ ನೀತಿ ಶ್ರೀಮಂತರ ಪರವೋ? ಅಥವಾ ಬಡವರ ಪರವೋ? ಎಂದು. ಏಕೆಂದರೆ ಜಿಎಸ್‍ಟಿ ಹೆಸರಿನಲ್ಲಿ ವಿಧಿಸಲಾಗುತ್ತಿದ್ದ ತೆರಿಗೆ ಖಂಡಿತ ಬಡವರ ಪರವಾಗಿರಲಿಲ್ಲ ಎಂಬುದೇ ಸತ್ಯ. ಓರ್ವ ಶ್ರೀಮಂತ ಬಳಸುವ ಲಕ್ಷುರಿ ಐಶಾರಾಮಿ ಕಾರಿಗೆ ಶೇ.2 ರಷ್ಟು ತೆರಿಗೆ ವಿಧಿಸಿದ ಕೇಂದ್ರ ಸರ್ಕಾರ 114 ಕೋಟಿ ಜನ ಬಳಸುವ ದಿನನಿತ್ಯದ ಸಾಮಾನ್ಯ ವಸ್ತುಗಳ ಮೇಲೆ ಶೇ.18 ರಷ್ಟು ತೆರಿಗೆ ವಿಧಿಸಿತ್ತು. ಅಷ್ಟೇ ಏಕೆ ಹೆಣ್ಣು ಮಕ್ಕಳ ನ್ಯಾಪ್ಕಿನ್ ಮೇಲೆಯೂ ಬಾರೀ ತೆರಿಗೆ ವಿಧಿಸಿ ಚರ್ಚೆಗೆ ಗ್ರಾಸವಾಗಿತ್ತು. ಇವನ್ನೆಲ್ಲ ಒಮ್ಮೆ ಗಮನಿಸಿದರೆ ಖಂಡಿತ ನಮ್ಮ ತೆರಿಗೆ ಕಾನೂನು ಬಡವರ ಪರವಾಗಿಲ್ಲ ಎಂಬುದು ವೇದ್ಯವಾಗುತ್ತದೆ.

*ವಿದೇಶಕ್ಕೆ ಹರಿಯುತ್ತಿದೆ ಭಾರತ ಸಂಪತ್ತು

ಭಾರತದಲ್ಲಿ ತೆರಿಗೆ ತಪ್ಪಿಸಿದ ಹಣ ಸ್ವಿಜರ್‍ಲೆಂಡ್, ಮಾರಿಷಶ್, ಸಿಂಗಾಪುರ, ಹಾಂಗ್‍ಕಾಂಗ್, ಜರ್ಮನಿ ಹಾಗೂ ಲಗ್ಸೆಂಬರ್ಗ್‍ನ ಖಾಸಗಿ ಬ್ಯಾಂಕ್ ಆಶ್ರಯಧಾಮದಲ್ಲಿದೆ. ಇಲ್ಲಿ ಹಣ ಇಟ್ಟವರ ವಿವರಗಳನ್ನು ಈ ಬ್ಯಾಂಕುಗಳು ಅತ್ಯಂತ ಗೌಪ್ಯವಾಗಿಡುತ್ತವೆ. ಈ ಹಣದ ಪ್ರಮಾಣ ಏನಿಲ್ಲವೆಂದರೂ 80 ಲಕ್ಷ ಕೋಟಿಗಳನ್ನು ಧಾಟುತ್ತದೆ ಎಂದು ಅಂದಾಜು ಮಾಡಲಾಗಿದೆ. ಈ ಹಣದ ಮೇಲೆ ಕಡಿಮೆ ಎಂದರೂ 10 ಲಕ್ಷ ಕೋಟಿಗೂ ಅಧಿಕ ಹಣ ತೆರಿಗೆ ರೂಪದಲ್ಲಿ ಸಂಗ್ರಹವಾಗುತ್ತಿತ್ತು. ಈ ಹಣವನ್ನು ದೇಶದ ಅಭಿವೃದ್ಧಿಗೆ ಬಳಸಬಹುದಾಗಿತ್ತು. ಆದರೆ ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕಾದ ಹಣ ವಿದೇಶದಲ್ಲಿ ಕೊಳೆಯುತ್ತಾ ಕೂತಿದೆ. ಇನ್ನೂ 50 ದಿನಗಳಲ್ಲಿ ಕಪ್ಪು ಹಣವನ್ನು ಭಾರತಕ್ಕೆ ತರುತ್ತೇನೆ ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದು ಬೀಗಿದವರು ಕಾರ್ಪೋರೇಟ್ ಸಾಲವನ್ನು ಮನ್ನಾ ಮಾಡಿ ಮಗುಮ್ಮಾಗಿ ಕುಳಿತಿದ್ದಾರೆ.

*ಶ್ರೀಮಂತ ತೆರಿಗೆ ಕದ್ದರೂ ಬಡವನಿಗೆ ಬರೆ..!

ದೇಶದ ಪ್ರಮುಖ ಆದಾಯದ ಮೂಲ ತೆರಿಗೆ. ತೆರಿಗೆ ಸರಿಯಾಗಿ ಸಂಗ್ರಹವಾದರೆ ಮಾತ್ರ ದೇಶವನ್ನು ಅಭಿವೃದ್ಧಿ ಎಡೆಗೆ ನಡೆಸುವುದು ಸಾಧ್ಯ. ಸಂಗ್ರಹವಾದ ತೆರಿಗೆ ಹಣವನ್ನು ಸರ್ಕಾರಗಳು ಸಾಮಾನ್ಯವಾಗಿ ಮೂಲಭೂತ ಸೌಕರ್ಯ, ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆಯ ಮೇಲೆ ಹೆಚ್ಚು ವಿನಿಯೋಗಿಸುತ್ತದೆ. ಆದರೆ ತೆರಿಗೆ ವಸ್ತುನಿಷ್ಠವಾಗಿ ಸಂಗ್ರಹವಾಗದಿದ್ದಾಗ ಇವೇ ಸರ್ಕಾರಗಳು ತೆರಿಗೆ ರೂಪದಲ್ಲಿ ಹೆಚ್ಚು ಹಣವನ್ನು ಸಂಗ್ರಹಿಸುವ ಸಲುವಾಗಿ ದಿನೋಪಯೋಗಿ ವಸ್ತಗಳ ಬೆಲೆಯನ್ನು ಏರಿಸುತ್ತವೆ. ಶ್ರೀಮಂತ ಜನ ತೆರಿಗೆ ಕಳ್ಳತನ ಮಾಡಿದರು ಅದರ ಹೊರೆ ಮಾತ್ರ ಬಡವನಿಗೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದಿನನಿತ್ಯ ತೈಲದ ಬೆಲೆ ಇಳಿಕೆಯಾದರೂ ಸಹ, ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಇಳಿಸದಿರುವುದನ್ನು ನಾವಿಲ್ಲಿ ಸ್ಮರಿಸಬಹುದು.

*ಹೆಚ್ಚುತ್ತಿರುವ ಅಸಮಾನ ಹಂಚಿಕೆ

ಆಕ್ಸ್ ಫ್ಯಾಮ್‍ನ 2015ರ ವರದಿಯ ಪ್ರಕಾರ 2000-2015ರ ನಡುವಿನ 15 ವರ್ಷಗಳ ಅವಧಿಯಲ್ಲಿ , ಭಾರತದಲ್ಲಿ ಸುಮಾರು 2284 ಬಿಲಿಯನ್ ಡಾಲರ್‍ನಷ್ಟು (155312000000000 ರೂಗಳು) ಸಂಪತ್ತು ಸೃಷ್ಟಿಯಾಗಿದೆ. ಅದರಲ್ಲಿ ಸುಮಾರು 1400 ಬಿಲಿಯನ್ ಡಾಲರ್ (ತೊಂಭತ್ತೈದು ಲಕ್ಷ ಇಪ್ಪತ್ತು ಸಾವಿರ ಕೋಟಿ ರೂಪಾಯಿ) ಅಂದರೆ ಒಟ್ಟು ಸಂಪತ್ತಿನ ಶೇ.61 ಭಾಗ ಒಟ್ಟು ಜನಸಂಖ್ಯೆಯ ಶೇ.1 ರಷ್ಟಿರುವ ಆಗರ್ಭ ಶ್ರೀಮಂತರ ಪಾಲಾಗಿದೆ. ಅವರ ಕೆಳಗಿರುವ ಜನ ಸಂಖ್ಯೆಯ ಶೇ.9 ರಷ್ಟಿರುವ ಶ್ರೀಮಂತರಿಗೆ 500 ಬಿಲಿಯನ್ ಡಾಲರ್ (ಮೂವತ್ನಾಲ್ಕು ಲಕ್ಷ ಕೋಟಿ ರೂಪಾಯಿ) – ಅಂದರೆ ಶೇ.21 ಭಾಗ ಪಾಲಿ ಸಿಕ್ಕಿದೆ. ಸಮಾಜದ ತಳದಲ್ಲಿರುವ ಶೇ.90 ಭಾಗದ ಮಂದಿಗೆ ಸಿಕ್ಕಿರುವುದು ಕೇವಲ 400 ಬಿಲಿಯನ್ ಡಾಲರ್ (ಇಪ್ಪತ್ತೇಳು ಲಕ್ಷ ಇಪ್ಪತ್ತು ಸಾವಿರ ರೂಪಾಯಿಗಳು) ಅಂದರೆ ಶೇ.18 ಭಾಗ ಮಾತ್ರ.

ವಿಶ್ವದ ಜನಸಂಖ್ಯೆ ಅರ್ಧಭಾಗ (ಅಂದರೆ 360 ಕೋಟಿ) ಜನರ ಬಳಿ ಇರುವ ಸಂಪತ್ತಿಗಿಂತಲೂ ಹೆಚ್ಚು ಸಂಪತ್ತು ಕೇವಲ 62 ಶ್ರೀಮಂತರ ಬಳಿ ಶೇಖರಣೆಯಾಗಿದೆ. ಐದು ವರ್ಷದ ಹಿಂದೆ, 388 ಮಂದಿ ಅತಿ ದೊಡ್ಡ ಶ್ರೀಮಂತರು ವಿಶ್ವದ ಅರ್ಧ ಸಂಪತ್ತನ್ನು ಹೊಂದಿದ್ದರು. ಇದು ಶ್ರೀಮಂತರು ಎಷ್ಟು ವೇಗವಾಗಿ ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ, ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.

ಭಾರತದಲ್ಲಿ ಸಂಪತ್ತಿನ ಹಂಚಿಕೆ ಹೀಗಿದೆ. 
ಭಾರತದಲ್ಲಿ ಸಂಪತ್ತಿನ ಹಂಚಿಕೆ ಹೀಗಿದೆ. 

*ಶ್ರೀಮಂತರು ಯಾರು..? ಎಷ್ಟು ಮಂದಿ?

2015ರ ಅಂಕಿ ಅಂಶದ ಪ್ರಕಾರ ದೇಶದ ಜನಸಂಖ್ಯೆಯ ಶೇ.1 ಭಾಗದಷ್ಟಿರುವ ಶ್ರೀಮಂತರು ದೇಶದ ಸಂಪತ್ತಿನ ಶೇ.53 ರಷ್ಟು ಪಾಲು ಹೊಂದಿದ್ದಾರೆ. ಹದಿನೈದು ವರ್ಷಗಳ ಹಿಂದೆ ದೇಶದ ಸಂಪತ್ತಿನಲ್ಲಿ ಶ್ರೀಮಂತರ ಪಾಲು ಶೇ.38 ರಷ್ಟಿತ್ತು. ಈ ಅವಧಿಯಲ್ಲಿ ಅವರ ಪಾಲು ಶೇ.15 ರಷ್ಟು ವೃದ್ಧಿಯಾಗಿರುವುದನ್ನು ನಾವಿಲ್ಲಿ ಗಮನಿಸಬಹುದು.

ಈ ಶೇ.1 ಭಾಗದವರ ಪೈಕಿ ತುತ್ತ ತುದಿಯಲ್ಲಿರುವ ಬೆರಳೆಣಿಕೆಯ ಶೇ.0.2 ಮಂದಿ (25 ಲಕ್ಷ ಮಂದಿ) ದೇಶದ ಸಂಪತ್ತಿನಲ್ಲಿ ಶೇ.40 ಭಾಗ ಹೊಂದಿದ್ದಾರೆ. ಮತ್ತು ಶೇ.08 ಮಂದಿಯ ಸಂಪತ್ತಿನ ಪಾಲು ಶೇ.13ರಷ್ಟಿದೆ. ಇಂತವರನ್ನು ಆಗರ್ಭ ಶ್ರೀಮಂತರು ಎಂದೇ ಗುರುತಿಸಲಾಗುತ್ತದೆ. ಆಡಳಿತದಲ್ಲಿ ಯಾವ ಸರ್ಕಾರವಿದ್ದರೂ ಅವರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುವ ತಾಕತ್ತು ಇವರಿಗಿದೆ. ಇನ್ನೂ ಇವರ ಅನುಮತಿ ಇಲ್ಲದೆ ಸರ್ಕಾರಿ ಆಡಳಿತ ಹಂತದಲ್ಲಿ ತೆರಿಗೆಗೆ ಸಂಬಂಧಿಸಿದಂತೆ ಯಾವುದೇ ಯೋಜನೆಗಳು ರೂಪುಗೊಳ್ಳುವುದಿಲ್ಲ ಎಂಬುದು ಅಂಗೈ ಹುಣ್ಣಿನಷ್ಟೇ ಸತ್ಯ. ಆದರೆ ಆ ಕುರಿತ ಜನಸಾಮಾನ್ಯರಿಗೆ ಯಾವ ವಿಚಾರಗಳು ತಿಳಿಯದಂತೆ ನೋಡಿಕೊಳ್ಳಲಾಗುತ್ತದೆಯಷ್ಟೆ.

ಇನ್ನೂ ನಮ್ಮ ದೇಶದಲ್ಲಿ ಎರಡನೇ ಹಂತದಲ್ಲಿರುವ ಶ್ರೀಮಂತರ ಸಂಖ್ಯೆ ಸುಮಾರು ಶೇ.9 ರಷ್ಟು. ದೇಶದ ಸಂಪತ್ತಿನಲ್ಲಿ ಇವರ ಪಾಲು ಸುಮಾರು ಶೇ.23 ರಷ್ಟು, ಇನ್ನೂ ನಮ್ಮ ಸಮಾಜದಲ್ಲಿ ತಳದಲ್ಲಿರುವ ಶೇ.90 ರಷ್ಟು (113 ಕೋಟಿ ಜನ) ಜನರ ಸಂಪತ್ತಿನ ಪಾಲು ಕೇವಲ ಶೇ.19 ಮಾತ್ರ. 15 ವರ್ಷಗಳ ಹಿಂದೆ ದೇಶದ ಸಂಪತ್ತಿನ ಶೇ.33 ರಷ್ಟು ಪಾಲು ಹೊಂದಿದ್ದ ತಳಸಮುದಾಯದ ಜನರ ಪಾಲು, ಇಂದು ಕೇವಲ ಶೇ.24ಕ್ಕೆ ಇಳಿದಿರುವುದು ದೇಶದಲ್ಲಿ ಬಡತನ ಹೆಚ್ಚುತ್ತಿರುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಈ ನಡುವೆ ಕರ್ನಾಟಕದಲ್ಲಿ ತರಿಗೆ ಕದ್ದ ಆರೋಪದ ಮೇಲೆ ಶ್ರೇಷ್ಠ ನಟರ ಮನೆಗಳ ಮೇಲೆ ಐಟಿ ದಾಳಿ ಜಾರಿಯಲ್ಲಿದೆ. ಇವರು ಬೆಳ್ಳಿ ಪರದೆಯಲ್ಲಿ ಆದರ್ಶಮಯ ಜೀವನ ನಡೆಸುವ ಇವರು ತಪ್ಪು ಮಾಡಿದ್ದಾರಾ ಇಲ್ಲವಾ ಎಂಬುದನ್ನು ತನಿಖೆ ಹೇಳಬೇಕಿದೆ. ಆದರೆ ಅದಕ್ಕೂ ಮೊದಲು ಜನ ಈ ತೆರಿಗೆ ಮತ್ತು ಅದರ ಹಿಂದಿನ ರಾಜಕೀಯವನ್ನು ಅರ್ಥ ಮಾಡಿಕೊಳ್ಳಬೇಕಿದೆ.