samachara
www.samachara.com
ಮಲ್ಪೆಯ 7 ಮೀನುಗಾರರು ನಾಪತ್ತೆ: 23 ದಿನ ಕಳೆದರೂ ಸ್ಪಂದಿಸದ ವ್ಯವಸ್ಥೆ
COVER STORY

ಮಲ್ಪೆಯ 7 ಮೀನುಗಾರರು ನಾಪತ್ತೆ: 23 ದಿನ ಕಳೆದರೂ ಸ್ಪಂದಿಸದ ವ್ಯವಸ್ಥೆ

ಕೊನೆಯ ಬಾರಿಗೆ ಇವರಿದ್ದ ಬೋಟ್‌ನ ಜಿಪಿಎಸ್‌ ಗೋವಾ ಮತ್ತು ರತ್ನಗಿರಿಯ ಮಧ್ಯದಲ್ಲಿ ಲೊಕೇಶನ್‌ ತೋರಿಸಿದೆ. ಅಲ್ಲಿಂದ ಎತ್ತ ತೆರಳಿದರು, ಏನಾದರು ಎಂಬುದರ ಬಗ್ಗೆ ವಿವರಗಳಿಲ್ಲ.

‘ಇದು ವ್ಯವಸ್ಥೆಯೊಂದು ಕಣ್ಣಿದ್ದು ಕುರುಡಾದ ದುರಂತ ಕಥೆ.’

ಎರಡು ಜಿಲ್ಲೆಗಳು, ಅದಕ್ಕೊಂದಿಷ್ಟು ಶಾಸಕರು, ಇಬ್ಬರು ಸಂಸದರು, ಸಮುದ್ರ ಕಾಯಲು ನೇಮಿಸಿದ ಕೋಸ್ಟಲ್‌ ಗಾರ್ಡ್‌, ಪೊಲೀಸ್‌ ಇಲಾಖೆ, ಸರಕಾರ...ಹೀಗೆ ಎಲ್ಲರನ್ನೂ ನೆಚ್ಚಿಕೊಂಡು, ನಂಬಿಕೊಂಡು ಈ 7 ಕುಟುಂಬಗಳ ಜನರು ಕಾದು ಕಾದು ಸುಸ್ತಾಗಿದ್ದಾರೆ. ಆದರೆ ಮೀನುಗಾರಿಕೆಗೆಂದು ಡಿಸೆಂಬರ್‌ 11ರಂದು ಸಮುದ್ರಕ್ಕೆ ಇಳಿದವರು ದಡ ಸೇರಿಲ್ಲ. ಹೋಗಲಿ ಅವರ ಕಥೆ ಏನಾಯ್ತು ಅಂತಲೇ ಗೊತ್ತಿಲ್ಲ. ಇದೀಗ ಹತಾಶರಾಗಿ ಇವರೆಲ್ಲಾ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಲು ನಿರ್ಧರಿಸಿದ್ದಾರೆ.

ಆಗಿದ್ದೇನು?

ಡಿಸೆಂಬರ್‌ 11ರಂದು ಆಳ ಸಮುದ್ರ ಮೀನುಗಾರಿಕೆಗೆಂದು ‘ಸುವರ್ಣ ತ್ರಿಭುಜ’ ಎಂಬ ಬೋಟು ಹತ್ತಿ ಕುಮಟಾದ ಹೊಲನಗದ್ದೆ ನಿವಾಸಿ ಲಕ್ಷ್ಮಣ ನಾರಾಯಣ ಹರಿಕಂತ್ರ, ಮಾದನಗೇರಿ ನಿವಾಸಿ ಸತೀಶ ಈಶ್ವರ ಹರಿಕಂತ್ರ, ಹೊನ್ನಾವರ ತಾಲೂಕಿನ ಮಂಕಿ ನಿವಾಸಿ ರವಿ ನಾಗಪ್ಪ ಹರಿಕಂತ್ರ, ಭಟ್ಕಳದ ಹರೀಶ ಶನಿಯಾರ ಮೊಗೇರ, ರಮೇಶ ಶನಿಯಾರ ಮೊಗೇರ, ದಾಮೋದರ ಹಾಗೂ ಬೋಟಿನ ಕ್ಯಾಪ್ಟನ್‌ ಮಲ್ಪೆಯ ಬಾಲಚಂದ್ರ ಮಲ್ಪೆ ಸೇರಿ ಒಟ್ಟು 7 ಜನ ಮೀನುಗಾರರು ತೆರಳಿದ್ದರು.

ನಾಪತ್ತೆಯಾದ 7 ಜನ ಮೀನುಗಾರರು.
ನಾಪತ್ತೆಯಾದ 7 ಜನ ಮೀನುಗಾರರು.

“ಸಾಮಾನ್ಯವಾಗಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದವರು 10-12 ದಿನಗಳಲ್ಲಿ ತೀರಕ್ಕೆ ವಾಪಸಾಗುವುದು ರೂಢಿ. ಕನ್ಯಾಕುಮಾರಿಯಿಂದ ಮುಂಬೈ ತೀರದವರೆಗೆ ಇವರು ಮೀನುಗಾರಿಕೆಗೆ ತೆರಳುವುದು ವಾಡಿಕೆ,” ಎನ್ನುತ್ತಾರೆ ಉಡುಪಿಯ ಮಲ್ಪೆಯ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಅಮೀನ್‌ ಪಡುಕರೆ. ಆದರೆ ಹಾಗೆ ತೆರಳಿದವರು ಇಂದಿನವರೆಗೆ ವಾಪಸ್‌ ಬಂದಿಲ್ಲ. ಇಂದಿಗೆ (ಜನವರಿ 4) ಇವರು ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿ 23 ದಿನಗಳು ಕಳೆದಿವೆ. ಮೀನುಗಾರಿಕೆಗೆ ತೆರಳಿದ ಎರಡು ದಿನದ ನಂತರ ಅವರ ಜತೆ ತೆರಳಿದ ಇತರ ಬೋಟ್‌ನವರ ಕಣ್ಣಿಗೆ ಬಿದ್ದಿದ್ದು ಬಿಟ್ಟರೆ ಮತ್ತೆಂದೂ ಇವರಾಗಲಿ, ಇವರ ಬೋಟ್‌ ಆಗಲಿ ಎಲ್ಲೂ ಕಾಣಿಸಿಕೊಂಡಿಲ್ಲ.

ಕೊನೆಯ ಬಾರಿಗೆ ಇವರ ಜಿಪಿಎಸ್‌ ಗೋವಾ ಮತ್ತು ರತ್ನಗಿರಿಯ ಮಧ್ಯದಲ್ಲಿ ಲೊಕೇಶನ್‌ ತೋರಿಸಿದೆ. ಅಲ್ಲಿಂದ ಎತ್ತ ತೆರಳಿದರು, ಏನಾದರು ಎಂಬುದರ ಬಗ್ಗೆ ವಿವರಗಳಿಲ್ಲ. ಎರಡು ದಿನಗಳ ಬಳಿಕ ಬೋಟ್‌ ಕಾಣಿಸದಿದ್ದಾಗ ಜತೆಗೆ ತೆರಳಿದವರು ಅನುಮಾನದಿಂದ ಡಿಸೆಂಬರ್‌ 14ರಂದು ಹುಡುಕಾಡಿದ್ದಾರೆ. ನಂತರ ಎಂದಿನಂತೆ ಬರಬಹುದು ಎಂದುಕೊಂಡು ಮೀನುಗಾರಿಕೆ ಮುಗಿಸಿ ತೀರಕ್ಕೆ ವಾಪಸಾಗಿದ್ದಾರೆ. ಆದರೆ ಮಲ್ಪೆಗೆ ಬಂದರೆ ಬೋಟ್‌ ಅಲ್ಲಿಗೂ ಬಂದಿರಲಿಲ್ಲ. ಒಂದೆರಡು ದಿನ ಕಾದು ನಂತರ ದೂರು ನೀಡಲಾಯಿತು.

ದೂರಿನ ಮೇರೆಗೆ ಸ್ಥಳೀಯ ಕೋಸ್ಟಲ್‌ ಗಾರ್ಡ್‌ನವರು, ಸ್ಥಳೀಯ ಮೀನುಗಾರರು ಸಾಧ್ಯವಾದಷ್ಟು ಹುಡುಕಾಡಿದ್ದಾರೆ. ಗೋವಾಕ್ಕೂ ತೆರಳಿದ ಸ್ಥಳೀಯರು ಅಲ್ಲಿನ ಕೋಸ್ಟ್‌ಗಾರ್ಡ್‌ನವರು ಬೋಟ್‌ ನೀಡದಾಗ ಇವರೇ 10-15 ಹಣ ತೆತ್ತು ಖಾಸಗಿ ಬೋಟ್‌ನಲ್ಲಿ ನೋಡಿ ಹುಡುಕಾಡಿದ್ದಾರೆ. ಗೋವಾದ ಎಲ್ಲಾ ಒಳನಾಡು ಪ್ರದೇಶಕಗಳು, ಹಿನ್ನೀರು ಪ್ರದೇಶಗಳಲ್ಲೆಲ್ಲಾ ಹುಡುಕಾಡಿದ್ದಾರೆ. ರತ್ನಗಿರಿಯವರೆಗೆ ಹೋಗಿ ಬಂದಿದ್ದಾರೆ. ಸ್ಥಳೀಯ ಪೊಲೀಸ್‌, ಡಿಸಿಐಬಿ (ಜಿಲ್ಲಾ ಅಪರಾಧ ತನಿಖಾ ದಳ) ಸೇರಿದಂತೆ ಪೊಲೀಸರ ಎರಡು ತಂಡಗಳೂ ಹುಡುಕಾಡಿವೆ. ಸ್ಥಳೀಯ ಮೀನುಗಾರರು ಮೂರು ತಂಡಗಳಾಗಿ ಹುಡುಕಾಡಿದ್ದಾರೆ. ಆದರೆ ಯಾವುದೇ ವಿವರಗಳು ಲಭ್ಯವಾಗಿಲ್ಲ ಎನ್ನುತ್ತಾರೆ ಅವರು.

ಮೀನುಗಾರರ ದೂರಿನ ಮೇರೆಗೆ ಸ್ಥಳೀಯ ಶಾಸಕ ರಘುಪತಿ ಭಟ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಮತ್ತು ಜಿಲ್ಲಾಡಳಿತದ ಕಡೆಯಿಂದ ಗೋವಾ, ಮಾಹಾರಾಷ್ಟ್ರದ ಎಲ್ಲಾ ಕೋಸ್ಟ್‌ಗಾರ್ಡ್‌ಗಳಿಗೆ ಮಾಹಿತಿ ನೀಡಲಾಗಿದೆ. ಆದರೆ ಯಾವುದೇ ಸುಳಿವು ಸಿಕ್ಕಿಲ್ಲ.

ಏನಾಗಿರಬಹುದು?

ಸಾಮಾನ್ಯವಾಗಿ ಆಳ ಸಮುದ್ರದ ಮೀನುಗಾರಿಕೆಗೆ ಹೋದವರು ಬರಲಿಲ್ಲವೆಂದರೆ ಮೂರು ಕಾರಣಗಳಿರುತ್ತವೆ ಎಂದು ವಿವರಿಸುತ್ತಾರೆ ಪಡುಕೆರೆ. ಒಂದೋ ಏನಾದರೂ ತೊಂದರೆಯಾಗಿ, ಬೋಟ್‌ನ ಒಳಕ್ಕೆ ನೀರು ಬಂದು ಬೋಟ್‌ ಮುಳುಗಬೇಕು. ಇಲ್ಲದಿದ್ದಲ್ಲಿ, ಯಾವುದಾದರೂ ಹಡಗಿನವರು ಹೊಡೆದುಕೊಂಡು ಹೋಗಬೇಕು. ಈ ಎರಡೂ ಸಂದರ್ಭದಲ್ಲಿ ಬೋಟ್‌ ಒಮ್ಮೆಲೇ ಮುಳುಗುವುದಿಲ್ಲ. ಏಳೂ ಜನರ ಕೈಯಲ್ಲಿ ಮೊಬೈಲ್‌ಗಳಿತ್ತು. ಹೀಗಾಗಿ ಹೀಗೇನಾದರೂ ಆಗಿದ್ದರೆ ಅವರುಗಳು ಕರೆ ಮಾಡಬಹುದಾಗಿತ್ತು. ಜತೆಗೆ ಬೋಟ್‌ನಲ್ಲಿ ಥರ್ಮಕೋಲ್‌ ಮೊದಲಾದ ತೇಲುವ ವಸ್ತುಗಳು ಹಲವು ಇವೆ. ಅವುಗಳಾದರೂ ಕಣ್ಣಿಗೆ ಕಾಣಿಸಿಕೊಳ್ಳಬೇಕಿತ್ತು. ಇಲ್ಲಿ ಅದೂ ನಡೆದಿಲ್ಲ.

ಇದಲ್ಲದೆ ಇದ್ದರೆ ಬೋಟ್‌ನ್ನು ಯಾರಾದರೂ ಅಪಹರಿಸಬೇಕು. ಆದರೆ ಮುಂಬೈ ದಾಳಿಯಾದ ನಂತರ ಸಮುದ್ರದಲ್ಲಿ ಕಣ್ಗಾವಲು ಕಟ್ಟುನಿಟ್ಟಾಗಿದ್ದು ಈ ರೀತಿಯ ಬೆಳವಣಿಗೆ ಸಾಧ್ಯವಿಲ್ಲ ಎನ್ನುತ್ತಾರೆ ಅವರು. ಜತೆಗೆ ಸಮುದ್ರಕ್ಕೆ ತೆರಳಿದವರೂ ಅನುಭವಿಗಳು. ಹತ್ತಾರು ವರ್ಷದಿಂದ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡವರು ಎನ್ನುವ ವಿವರಗಳನ್ನು ಅವರು ಮುಂದಿಡುತ್ತಾರೆ.

ಹೀಗಿರುವಾಗ ಇವರೆಲ್ಲಾ ಎಲ್ಲಿ ಹೋದರು. ಇವರಿಗೆ ಏನಾಯಿತು? ಎಂಬುದು ಯಕ್ಷ ಪ್ರಶ್ನೆಯಾಗಿಯೇ ಕಾಡುತ್ತಿದೆ. ಆದರೆ ಹುಡುಕಾಟ ಅಂತಿಮಗೊಂಡಿಲ್ಲ. ನಾವು ಹುಡುಕಾಡಿದ್ದು ಸೀಮಿತ ಜಾಗದಲ್ಲಿ ಮಾತ್ರ ಎನ್ನುವ ಮಾಹಿತಿಯನ್ನು ಮುಂದಿಡುತ್ತಾರೆ ಸತೀಶ್ ಅಮೀನ್‌ ಪಡುಕರೆ.

ಸ್ಥಳೀಯರು, ಪೊಲೀಸ್‌, ಕೋಸ್ಟ್‌ ಗಾರ್ಡ್‌ ಮತ್ತು ರಾಜ್ಯ ಸರಕಾರಕ್ಕೆ ಸಮುದ್ರದಲ್ಲಿ ಹುಡುಕಾಟಕ್ಕೆ ಮಿತಿಗಳಿವೆ. ತೀರದಿಂದ 12 ನಾಟಿಕಲ್‌ ಮೈಲ್‌ವರೆಗಿನ ಪ್ರದೇಶ ಮಾತ್ರ ರಾಜ್ಯಗಳ ವ್ಯಾಪ್ತಿಗೆ ಬರುತ್ತದೆ. ನಂತರದ್ದು ಕೇಂದ್ರದ ವ್ಯಾಪ್ತಿಗೆ ಬರುತ್ತದೆ. ರಾಜ್ಯದ ವ್ಯಾಪ್ತಿಯಲ್ಲಿ ಸಾಧ್ಯವಾದಷ್ಟು ಹುಡುಕಾಟ ಮಾಡಲಾಗಿದೆ. ಆದರೆ ಸದ್ಯ ಬೋಟ್‌ ನಾಪತ್ತೆಯಾಗಿರುವುದು ಕೇಂದ್ರದ ವ್ಯಾಪ್ತಿ ಪ್ರದೇಶದ ಗಡಿಯಲ್ಲಿ.

ಈ ಕಾರಣಕ್ಕೆ ಸ್ಥಳೀಯ ಮೀನುಗಾರರು ಜಿಲ್ಲಾಧಿಕಾರಿ, ಎಸ್‌ಪಿಗೆ ಮನವಿ ನೀಡಿದ್ದರು. ‘ದೂರು ನೀಡಿದ ಮೇರೆಗೆ ಕೇಂದ್ರ ಸರಕಾರದ ವತಿಯಿಂದ ಹೆಲಿಕಾಪ್ಟರ್‌ನಲ್ಲಿ ಹುಡುಕಾಟ ನಡೆಸಿದ್ದಾರೆ ಎನ್ನುತ್ತಿದ್ದಾರೆ. ಆದರೆ ಹುಡುಕಾಟ ನಡೆಸಿದ್ದನ್ನು ನೋಡಿದವರಿಲ್ಲ. ನಮಗೆ ಹುಡುಕಾಟ ಮಾಡಿದ ನಂಬಿಕೆಯೂ ಇಲ್ಲ,’ ಎನ್ನುತ್ತಾರೆ ಪಡುಕೆರೆ.

ಸ್ಥಳೀಯ ವ್ಯಾಪ್ತಿಯಲ್ಲಿ ಸಿಕ್ಕದೇ ಇದ್ದಲ್ಲಿ ಗಡಿ ಮೀರಿ ಹೋಗಿರಬಹುದು. ಅಥವಾ ಬೋಟ್‌ ಅಪಹರಣ ಮಾಡಿರಬಹುದು. ಇದಕ್ಕೆ ಕೇಂದ್ರದ ನೌಕಾ ಸೇನೆ ಮೊದಲಾದವರೇ ಸಹಾಯಕ್ಕೆ ಬರಬೇಕು ಎನ್ನುತ್ತಾರೆ ಅವರು. ಹೀಗಿರುವಾಗ ಮೀನುಗಾರರ ನಾಪತ್ತೆ ವಿಚಾರದಲ್ಲಿ ಕೇಂದ್ರ ಸರಕಾರ ನಿರ್ಲಕ್ಷ್ಯ ತಾಳಿದೆ ಎಂಬ ಗಂಭೀರ ಆರೋಪವನ್ನು ಸ್ಥಳೀಯರು ಮಾಡುತ್ತಿದ್ದಾರೆ. ಜತೆಗೆ ಎರಡೂ ಜಿಲ್ಲೆಗಳ ಸಂಸದರ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ.

ಆರಂಭದಲ್ಲೇ ದೂರು ನೀಡುವಾಗ ತಡವಾಗಿತ್ತು. ನಂತರ ಸ್ಥಳೀಯ ಮಟ್ಟದಲ್ಲಿ ಹುಡುಕಾಡಿ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮತ್ತು ಉತ್ತರ ಕನ್ನಡ ಸಂಸದ ಅನಂತ್‌ ಕುಮಾರ್‌ ಹೆಗಡೆ ಗಮನಕ್ಕೆ ತರಲಾಗಿತ್ತು. ಆದರೆ ಅವರು ತುರ್ತಾಗಿ ಸ್ಪಂದಿಸುವ ಬದಲು ನಿನ್ನೆಯಷ್ಟೇ ಗೃಹ ಇಲಾಖೆಗೆ ಮನವಿ ನೀಡಿದ್ದಾರೆ ಎನ್ನುತ್ತಾರೆ ಪಡುಕೆರೆ. ಇದು ಮನವಿಗಳಲ್ಲಿ ಆಗುವ ಕೆಲಸವಲ್ಲ. ತುರ್ತಾಗಿ ಒತ್ತಡ ಹೇರಿ ಹುಡುಕಾಡಬೇಕು ಎಂಬುದನ್ನು ಇಬ್ಬರೂ ಅರ್ಥ ಮಾಡಿಕೊಂಡಂತೆ ಕಾಣಿಸುತ್ತಿಲ್ಲ. ಮನವಿ ನೀಡುವಾಗಲೂ ಕರಂದ್ಲಾಜೆ ಇರಲಿಲ್ಲ. ಅನಂತ್‌ ಕುಮಾರ್‌ ಹೆಗಡೆ ‘ಶಬರಿಮಲೆ ವಿಚಾರದಲ್ಲಿ ಹಿಂದೂಗಳ ಮೇಲೆ ಅತ್ಯಾಚಾರವಾಗಿದೆ’ ಎನ್ನುವುದರಲ್ಲಿ ನಿರತರಾಗಿದ್ದರು. ಆದರೆ ಏಳೂ ಜನ ಮೀನುಗಾರರ ಮನೆಗಳಲ್ಲಿ ಸೂತಕದ ಛಾಯೆ ಆವರಿಸಿದೆ.

ಇವರಲ್ಲಿ ಒಬ್ಬರ ಮನೆಗೆ ಕೆಲ ದಿನ ಹಿಂದೆ ಹೋಗಿದ್ದೆ. ಅಲ್ಲಿನ ಪರಿಸ್ಥಿತಿ ನೋಡಿ ಭಯವಾಯಿತು. ನೇರವಾಗಿ ಬಂದು ಬಿಟ್ಟೆ ಎನ್ನುತ್ತಾರೆ ಪಡುಕೆರೆ. ಜೀವ ಹೋಗುವ ಸಮಯದಲ್ಲೂ ಫಾರ್ಮಾಲಿಟೀಸ್‌ ಬಗ್ಗೆ ಗಮನ ಹರಿಸುವ ರಾಜಕಾರಣಿಗಳ ಬಗ್ಗೆ ಅವರು ಆಕ್ರೋಶಿತರಾಗಿದ್ದರು. ಮಹಾರಾಷ್ಟ್ರ, ಗೋವಾದಲ್ಲಿ ಬಿಜೆಪಿ ಸರಕಾರವಿದೆ. ಅಲ್ಲಿಯ ಸರಕಾರಗಳ ಜತೆ ಮಾತನಾಡಿ ಮೊದಲೇ ಹುಡುಕಾಡಿದ್ದರೆ ಆಗುತ್ತಿತ್ತು. ಆದರೆ ಅದನ್ನು ಮಾಡಲಿಲ್ಲ. ಈಗ ಮನವಿ ನೀಡುತ್ತಾ ಕುಳಿತುಕೊಂಡಿದ್ದಾರೆ ಎನ್ನುತ್ತಾರೆ ಅವರು.

ಭಟ್ಕಳದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಮೀನುಗಾರರು.
ಭಟ್ಕಳದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಮೀನುಗಾರರು.
/ಕಡಲ ಕನ್ನಡಿ

ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗದ ಈ ನಿರ್ಲಕ್ಷ್ಯಕ್ಕೆ ಬೇಸತ್ತು ಭಟ್ಕಳದಲ್ಲಿ ಮೀನುಗಾರರು ಗುರುವಾರ ಬೃಹತ್‌ ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಮುತುವರ್ಜಿ ವಹಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಮಂತ್ರಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತಂದು ನಾಪತ್ತೆಯಾದ 7 ಜನ ಮೀನುಗಾರರು ಸುರಕ್ಷಿತವಾಗಿ ಮರಳುವಂತೆ ಮಾಡಬೇಕು. ಈ ಬೇಡಿಕೆಯನ್ನು 4 ದಿನದೊಳಗೆ ಈಡೇರಿಸದಿದ್ದರೆ ಮೀನುಗಾರರು ಜಿಲ್ಲೆಯಾದ್ಯಂತ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದ್ದಾರೆ ಎಂದು ಎಚ್ಚರಿಸಲಾಗಿದೆ. ಜತೆಗೆ ಇದೇ ಜನವರಿ 6ರಂದು ರಾಷ್ಟ್ರೀಯ ಹೆದ್ದಾರಿ 66ನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸಲು ಮಲ್ಪೆಯ ಮೀನುಗಾರರು ಸಿದ್ಧತೆ ನಡೆಸಿದ್ದಾರೆ.

ಅದಕ್ಕೂ ಮೊದಲ ಕರ್ನಾಟಕದಲ್ಲಿರುವ ಕೇಂದ್ರದ ಸಚಿವರು, ಸಂಸದರು ಎಚ್ಚೆತ್ತುಕೊಳ್ಳಬೇಕಾಗಿದೆ. ಜತೆಗೆ ಐಟಿ ದಾಳಿ ಗುಂಗಲ್ಲಿ ಕಳೆದು ಹೋದವರೂ, 23 ದಿನಗಳ ನಂತರವಾದರೂ ಈ ಮೀನುಗಾರರತ್ತ ಕಣ್ತೆರೆದು ನೋಡಬೇಕಾಗಿದೆ.

ಚಿತ್ರ ಕೃಪೆ: ಮ್ಯಾಂಗಲೋರ್‌ ಟುಡೇ