ಚಟ್ಟವೇ ಸಾರಿಗೆ, ಹೆಣ್ಣು ಕೊಡೋರಿಲ್ಲ ಈ ಊರಿಗೆ; ‘ವಿಶ್ವಗುರು ಭಾರತ’ದಲ್ಲೊಂದು ನತದೃಷ್ಟ ಮಲ್ಲಳ್ಳಿ!
COVER STORY

ಚಟ್ಟವೇ ಸಾರಿಗೆ, ಹೆಣ್ಣು ಕೊಡೋರಿಲ್ಲ ಈ ಊರಿಗೆ; ‘ವಿಶ್ವಗುರು ಭಾರತ’ದಲ್ಲೊಂದು ನತದೃಷ್ಟ ಮಲ್ಲಳ್ಳಿ!

ಈ ಪುಟ್ಟ ಹಳ್ಳಿಯಲ್ಲಿ ಯಾರಾದರೂ ಖಾಯಿಲೆ ಬಿದ್ದರೆ, ಗರ್ಭಿಣಿಯರು ಅನಾರೋಗ್ಯಕ್ಕೀಡಾದರೆ ಚಟ್ಟ ಕಟ್ಟಿಯೇ ನಾಲ್ಕು ಜನರು ಹೊತ್ತು ಸಾಗಬೇಕಾದ ಪರಿಸ್ಥಿತಿ ಇದೆ.

ರಾಜೇಶ್‌; ಮಲ್ಲಳ್ಳಿ ಊರಿಗೆ ಸೇರಿದವನು. ಕೊಡಗು ಜಿಲ್ಲೆಯ ಸೋಮವಾರಪೇಟೆಯಿಂದ 24 ಕಿಲೋಮೀಟರ್‌ ದೂರದಲ್ಲಿದೆ ಈ ಹಳ್ಳಿ. ರಾಜೇಶ್‌ನಿಗೆ 28 ವರ್ಷ ತುಂಬಿದೆ. ಕಳೆದ ಮೂರು ವರ್ಷಗಳಿಂದ ಈತನಿಗೆ ಹೆಣ್ಣು ಹುಡುಕುತ್ತಿದ್ದಾರೆ ಮನೆಯಲ್ಲಿ. ಸಮಸ್ಯೆ ಏನೆಂದರೆ ಈತನಿಗೆ ಹೆಣ್ಣು ಕೊಡಲು ಯಾರೂ ಒಪ್ಪುತ್ತಿಲ್ಲ. ಇದೇ ಊರಿನ ಇನ್ನೊಬ್ಬ ಯುವಕ ಪೊನ್ನಪ್ಪ. ಈತನಿಗೂ ಮದುವೆ ವಯಸ್ಸು ಮೀರಿ ಅದಾಗಲೇ ಹಲವು ವರ್ಷ ಕಳೆದಿದೆ. ಈತನದ್ದೂ ಅದೇ ಸಮಸ್ಯೆ. ಹಣ್ಣು ಕೊಡುವವರು (?) ಯಾರು ಮುಂದೆ ಬರುತ್ತಿಲ್ಲ. ಕಾರಣ ಏನು ಎಂದು ಹುಡುಕಿಕೊಂಡು ಹೊರಟರೆ ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಜಿಲ್ಲೆಯ ಈ ಪುಟ್ಟ ಹಳ್ಳಿಯ ಜನರ ಸಂಕಷ್ಟಮಯ ಬದುಕು ತೆರೆದುಕೊಳ್ಳುತ್ತದೆ.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳೇ ಕಳೆದರೂ ಹೊರ ಜಗತ್ತಿಗೆ ಸುಲಭವಾಗಿ ಸಂಪರ್ಕಿಸುವ ಸ್ವಾತಂತ್ರ್ಯ ಮಾತ್ರ ಮಲ್ಲಳ್ಳಿಗೆ ಇನ್ನೂ ಸಿಕ್ಕಿಲ್ಲ. ಈ ಊರಿನ ಜನರು ಹೊರ ಜಗತ್ತನ್ನು ಕಾಣಲು ಎರಡು ಕಿಲೋಮೀಟರ್ ಕಾಡು ದಾರಿಯಲ್ಲಿ ನಡೆಯಲೇ ಬೇಕಿದೆ. ಅಷ್ಟೇ ಅಲ್ಲ, ತಾವು ಬೆಳೆದ ಭತ್ತ, ಕಾಫಿ, ಏಲಕ್ಕಿಯನ್ನು ಮಾರಾಟ ಮಾಡಲೂ ರಸ್ತೆ ಬದಿಯವರೆಗೆ ಹೊತ್ತುಕೊಂಡೇ ಬರಬೇಕಿದೆ. ನಂತರವೂ ಜೀಪ್‌ಗೆ ದುಬಾರಿ ಬಾಡಿಗೆ ನೀಡಿ ಪಟ್ಟಣ್ಣಕ್ಕೆ ಸಾಗಿಸಬೇಕು. ಈ ಪುಟ್ಟ ಹಳ್ಳಿಯಲ್ಲಿ ಯಾರಾದರೂ ಖಾಯಿಲೆ ಬಿದ್ದರೆ , ಗರ್ಭಿಣಿಯರು ಅನಾರೋಗ್ಯಕ್ಕೀಡಾದರೆ ಚಟ್ಟ ಕಟ್ಟಿಯೇ ನಾಲ್ಕು ಜನರು ಹೊತ್ತು ಸಾಗಬೇಕಾದ ಪರಿಸ್ಥಿತಿ ಇದೆ.

ಇಂಥಹ ಪರಿಸ್ಥಿತಿಯಲ್ಲಿ ಊರಿಗೆ ಹೆಣ್ಣು ಕೊಡಲು ಯಾರು ತಾನೆ ಮುಂದೆ ಬಂದಾರು? ಹೀಗಾಗಿ ಇಲ್ಲಿನ ಯುವಕರೆಲ್ಲಾ ಇನ್ನೂ ಬ್ರಹ್ಮಚಾರಿಗಳಾಗಿ ದಿನ ಕಳೆಯುತ್ತಿದ್ದಾರೆ.

ಮಲ್ಲಳ್ಳಿಯಲ್ಲೊಂದು ಜಲಪಾತ ಇದೆ. ಇದನ್ನು ನೋಡಲು ರಾಜ್ಯದಿಂದ ನಿತ್ಯವೂ ಸಾವಿರಾರು ಜನ ಪ್ರವಾಸಿಗರು ಆಗಮಿಸುತ್ತಾರೆ. ರಾಜ್ಯ ಸರ್ಕಾರ ಪ್ರವಾಸಿಗರ ಅನುಕೂಲಕ್ಕಾಗಿ ಜಲಪಾತದವರೆಗೂ ಎರಡು ಕಿಲೋ ಮೀಟರ್ ಉದ್ದದ ಕಾಂಕ್ರೀಟ್‌ ರಸ್ತೆ ನಿರ್ಮಿಸಿದೆ. ಇದರಿಂದಾಗಿ ಮಲ್ಲಳ್ಳಿ ಗ್ರಾಮಕ್ಕೆ ಒಂದು ಕಿಲೋ ಮೀಟರ್‌ ಸಮೀಪದವರೆಗೆ ವಾಹನ ಕರೆತರುವ ಅವಕಾಶ ಸಿಕ್ಕಿದೆ. ಆದರೆ ಗ್ರಾಮದೊಳಕ್ಕೆ ಹೋಗಲು ರಸ್ತೆ ನಿರ್ಮಿಸಿಕೊಡಬೇಕು ಎಂದು ಇಲ್ಲಿನ ಚುನಾಯಿತ ಪ್ರತಿನಿಧಿಗಳಿಗೆ ಇನ್ನೂ ಅನಿಸಿಲ್ಲ.

ರಸ್ತೆಯೊಂದೇ ಅಲ್ಲ, ಗ್ರಾಮದಲ್ಲಿ ಸಂಕಷ್ಟಗಳ ಸರಮಾಲೆಯೇ ಇದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಮಲ್ಲಪ್ಪ. ನತದೃಷ್ಟ ಗ್ರಾಮದಲ್ಲಿ 24 ಕುಟುಂಬಗಳು ವಾಸವಿದ್ದು ಸುಮಾರು 15 ಕುಟುಂಬಗಳು ಮನೆಗೆ ಬೀಗ ಹಾಕಿಕೊಂಡು ಬೇರೆಡೆಗೆ ವಲಸೆ ಹೋಗಿದ್ದಾರೆ ಎಂಬ ವಿವರ ನೀಡುತ್ತಾರೆ ಅವರು. “ಇಲ್ಲಿ ಮಳೆಗಾಲದಲ್ಲಿ ಭಾರಿ (ವಾರ್ಷಿಕ 300 ಇಂಚಿಗೂ ಅಧಿಕ) ಮಳೆಯಾಗುತ್ತದೆ. ಈ ಮಳೆಗಾಲದ ಮೂರು ತಿಂಗಳು ವಿದ್ಯುತ್ ಇರುವುದಿಲ್ಲ. ಇಲ್ಲಿ ಯಾವುದೇ ಮೊಬೈಲ್ ಕಂಪೆನಿಯ ನೆಟ್‍ವರ್ಕ್ ಕೂಡ ಸಿಗುವುದಿಲ್ಲ. ಕಳೆದ ಬಾರಿ ಕೊಡಗಿನಲ್ಲಿ ಭೀಕರ ಮಳೆ ಸುರಿದಾಗ ಮರ ಬಿದ್ದು 8 ವಿದ್ಯುತ್ ಕಂಬಗಳು ಮುರಿದು ಹೋಗಿವೆ. ಇದು ಈವರೆಗೂ ರಿಪೇರಿಯಾಗಿಲ್ಲ. ಗ್ರಾಮದಿಂದ ರಸ್ತೆ ತಲುಪಲು ಒಂದು ಕಿಲೋ ಮೀಟರ್‌ಗೂ ಹೆಚ್ಚು ನಡೆಯಬೇಕು. ಗ್ರಾಮಸ್ಥರೇ 25 ಸಾವಿರ ರೂಪಾಯಿ ಖರ್ಚು ಮಾಡಿ ಕಚ್ಚಾ ರಸ್ತೆ ನಿರ್ಮಿಸಿಕೊಂಡಿದ್ದಾರೆ. ಆದರೆ ಈ ರಸ್ತೆ ಪೂರ್ತಿ ಗುಂಡಿ ಬಿದ್ದಿದ್ದು ವಾಹನ ಬಿಡಿ ಮನುಷ್ಯರೇ ನಡೆಯುವಂತಿಲ್ಲ,” ಎಂದು ಸಮಸ್ಯೆಗಳ ಸರಮಾಲೆಯನ್ನೇ ತೆರೆದಿಡುತ್ತಾ ಹೋದರು ಮಲ್ಲಪ್ಪ.

ಒಂದು ಕಾಲದಲ್ಲಿ ಈ ರಸ್ತೆಯಲ್ಲಿ ಕನಿಷ್ಠ ಜೀಪ್‌ ಆದರೂ ಓಡಾಡುತ್ತಿತ್ತು. ಈಗ ಅದೂ ಇಲ್ಲ ಎನ್ನುತ್ತಾರೆ ಅವರು. “ಕಳೆದ ಮಳೆಗಾಲದಲ್ಲಿ ರಸ್ತೆಗೆ ಬಿದ್ದ ಬೃಹತ್‌ ಮರವನ್ನು ಇನ್ನೂ ತೆಗೆದಿಲ್ಲ. ಯಾವುದಾದರು ರಾಜಕೀಯ ನಾಯಕರಿಗೆ ನಮ್ಮ ಊರಿನ ವಸ್ತು ಸ್ಥಿತಿ ತಿಳಿಸಿ ಹೇಳೋಣವೆಂದರೆ ಅವರ್ಯಾರು ಇಲ್ಲಿ ವರೆಗೆ ಬರುವುದಿಲ್ಲ. ಮತ ಕೇಳಲು ಬರುವವರು ಕಾರ್ಯಕರ್ತರು ಮಾತ್ರ,” ಎನ್ನುತ್ತಾರೆ ಮಲ್ಲಪ್ಪ.

ಗ್ರಾಮದಲ್ಲಿ ಕುಡಿಯಲು ಸರಿಯಾದ ನೀರಿನ ವ್ಯವಸ್ಥೆಯೂ ಇಲ್ಲ. ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರಿನ ಸರಬರಾಜಿಗೆ ವ್ಯವಸ್ಥೆ ಮಾಡಲಾಗಿದ್ದರೂ ವಿದ್ಯುತ್‌ನ ಕಣ್ಣಾಮುಚ್ಚಾಲೆ ಆಟಕ್ಕೆ ಇದ್ದೂ ಇಲ್ಲದಾಗಿದೆ. ನಮಗಿರುವ ರಸ್ತೆಗೆ ಡಾಂಬರು ಹಾಕಿ ಕೊಡಿ ಎಂದು ಇದ್ದ ಬದ್ದ ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ದುಂಬಾಲು ಬಿದ್ದಿದ್ದಾರೆ. ಇಲ್ಲಿನ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಬಳಿ ತೆರಳಿ ರಸ್ತೆ ಮಾಡಿಕೊಡಿ ಕಷ್ಟ ತೋಡಿಕೊಂಡಿದ್ದಾರೆ. ಆದರೆ ಮೇಲಿಂದ ಮೇಲೆ ಗೆದ್ದ ಅವರು ಇತ್ತ ತಲೆ ಹಾಕಿಯೂ ಮಲಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಇದೇ ರೀತಿ ಆದರೆ ನಾವದರೂ ಇಲ್ಲಿ ಏನು ಮಾಡುವುದು. ಇರುವ ಕುಟುಂಬಗಳೂ ಅನಿವಾರ್ಯವಾಗಿ ವಲಸೆ ಹೋಗಬೇಕಷ್ಟೇ ಎಂದು ಅಳಲು ತೋಡಿಕೊಳ್ಳುತ್ತಾರೆ ಮಲ್ಲಪ್ಪ.

ಅಂದಹಾಗೆ, ಇತ್ತೀಚೆಗೆ ಪ್ರಕೃತಿ ವಿಕೋಪದಿಂದ ಕೊಡಗು ಜಿಲ್ಲೆ ನಿಧಾನವಾಗಿ ಯಥಾಸ್ಥಿತಿಗೆ ಮರಳುತ್ತಿದೆ. ಪ್ರವಾಸೋದ್ಯಮದ ಆದಾಯ ಆರಂಭವಾಗಿದೆ. ಆದರೆ ಮಲ್ಲಳ್ಳಿ ಗ್ರಾಮಕ್ಕೆ ಅಗತ್ಯ ಸೌಕರ್ಯಗಳು ಮಾತ್ರ ಸಿಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಲೋಕಸಭೆ ಚುನಾವಣೆ ಹತ್ತಿರದಲ್ಲಿದೆ. ಸಂಸದರು ತಮ್ಮ ಕಾರ್ಯಕರ್ತರನ್ನು ಮತ ಕೇಳಲು ಕಳುಹಿಸುವ ಬದಲು, ತಾವೇ ನಾಲ್ಕು ಹೆಜ್ಜೆ ಹಾಕಿದರೆ ತಮ್ಮ ವ್ಯಾಪ್ತಿಯಲ್ಲಿ ಬರುವ ‘ವಿಶ್ವ ಗುರು ಭಾರತ’ದ ಹಳ್ಳಿಯೊಂದರ ದರ್ಶನ ಮಾಡಿದಂತಾಗುತ್ತದೆ. ಜನರಿಗೂ ತಮ್ಮನ್ನು ಪ್ರತಿನಿಧಿಸಿದವರು ಇನ್ನೂ ಭೂಮಿ ಮೇಲೆ ಓಡಾಡಿಕೊಂಡಿದ್ದಾರೆ ಎಂಬ ಭಾವನೆಯೂ ಮೂಡಿಸಿದಂತಾಗುತ್ತದೆ. ಇದೆಲ್ಲದರ ನಂತರ ಊರಿಗೆ ಒಂದು ರಸ್ತೆ, ಕನಿಷ್ಟ ಸೌಕರ್ಯಗಳನ್ನು ಒದಗಿಸಿದರೆ, ದೇಶದ ಕುಗ್ರಾಮವೊಂದರ ಉದ್ಧಾರವೂ ಅದಂತಾಗುತ್ತದೆ.