ಕಾವೇರಿದ ಕೇರಳ; ಶಬರಿಮಲೆ ಸುತ್ತ ಮುಂದುವರಿದ ಬಿಜೆಪಿ ಹರತಾಳ; ಕಂಪ್ಲೀಟ್ ಕವರೇಜ್...
COVER STORY

ಕಾವೇರಿದ ಕೇರಳ; ಶಬರಿಮಲೆ ಸುತ್ತ ಮುಂದುವರಿದ ಬಿಜೆಪಿ ಹರತಾಳ; ಕಂಪ್ಲೀಟ್ ಕವರೇಜ್...

ಮಹಿಳೆಯರ ದೇವಾಲಯ ಪ್ರವೇಶದಿಂದಾಗಿ ಕೇರಳ ಕಳೆದ ಎರಡು ದಿನಗಳಿಂದ ಅಕ್ಷರಶಃ ಯುದ್ಧಭೂಮಿಯಂತಾಗಿದೆ. ಕಳೆದ ಎರಡು ದಿನಗಳಿಂದ ಕೇರಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕಂಪ್ಲೀಟ್ ಡೀಟೈಲ್ ಇಲ್ಲಿದೆ.

ಕೇರಳದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಶತಮಾನಗಳ ಪರಂಪರೆ, ಸಂಪ್ರದಾಯವನ್ನು ಮುರಿದು ಇಬ್ಬರು ಮಹಿಳೆಯರು ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ. ಕನಕದುರ್ಗ (44) ಹಾಗೂ ಬಿಂದು (42) ಎಂಬ ಇಬ್ಬರು ಮಹಿಳೆಯರು ಹೊಸ ಇತಿಹಾಸಕ್ಕೆ ಕಾರಣವಾಗಿದ್ದಾರೆ; ಇದು ಹಳೇ ಸುದ್ದಿ!

ಈ ನಡುವೆ ಮಹಿಳೆಯರ ದೇವಾಲಯ ಪ್ರವೇಶದಿಂದಾಗಿ ಕೇರಳ ಕಳೆದ ಎರಡು ದಿನಗಳಿಂದ ಅಕ್ಷರಶಃ ಯುದ್ಧಭೂಮಿಯಂತಾಗಿದೆ. ಕಳೆದ ಎರಡು ದಿನಗಳಿಂದ ಕೇರಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕಂಪ್ಲೀಟ್ ಡೀಟೈಲ್ ಇಲ್ಲಿದೆ.

ಪಾಲಕ್ಕಾಡ್‌ನಿಂದ ತಿರುವನಂತಪುರಂವರೆಗೆ:

ಲಿಂಗ ಸಮಾನತೆಯನ್ನು ಎತ್ತಿಹಿಡಿಯುವ ಸಲುವಾಗಿ ಕೇರಳದ ಸುಮಾರು 35 ಲಕ್ಷ ಮಹಿಳೆಯರು ಜನವರಿ. 1 ಮಂಗಳವಾರ ಸಂಜೆ 4 ಗಂಟೆಗೆ ಪಾಲಕ್ಕಾಡ್ನ ತುತ್ತ ತುದಿಯಿಂದ ತಿರುವನಂತಪುರದವರೆಗೆ ಸುಮಾರು 620 ಕಿಮೀ ಉದ್ದದ ಮಹಿಳಾ ಗೋಡೆಯನ್ನು ನಿರ್ಮಿಸುವ ಮೂಲಕ ಐತಿಹಾಸಿಕ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಈ ಆಂದೋಲನದಲ್ಲಿ ಭಾಗವಹಿಸಿದ್ದ ಮಹಿಳೆಯರು ಜಾತ್ಯಾತೀತ ಮೌಲ್ಯ ಹಾಗೂ ಲಿಂಗಸಮಾನತೆಯನ್ನು ಎತ್ತಿ ಹಿಡಿಯುವುದಾಗಿಯೂ ಪ್ರಮಾಣ ಮಾಡಿದ್ದರು.

ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ಸಹ ಮಹಿಳೆಯರನ್ನು ಅಯ್ಯಪ್ಪನ ದರ್ಶನಕ್ಕೆ ತಡೆಯುತ್ತಿದ್ದ ಮೂಲಭೂತ ಹಾಗೂ ಸಂಪ್ರದಾಯವಾದಿಗಳ ವಿರುದ್ಧ ಕೇರಳದಲ್ಲಿ ಇಂತಹದ್ದೊಂದು ಪ್ರತಿಭಟನೆ ನಡೆದಿದ್ದು ಇದೇ ಮೊದಲು. ಅಲ್ಲದೆ ಈ ಪ್ರತಿಭಟನೆಗೆ ಸಾವಿರಾರು ಸಂಖ್ಯೆಯಲ್ಲಿ ಪುರುಷರೂ ಸಹ ಸಹಕರಿಸಿದ್ದರು. ಇಂತಹದ್ದೊಂದು ಐತಿಹಾಸಿಕ ಮಹಿಳಾ ಆಂದೋಲನವನ್ನು ಆಡಳಿತರೂಢ ಸಿಪಿಐ-ಎಂ ನೇತೃತ್ವದ ಎಲ್ ಡಿ ಎಫ್ ಸರ್ಕಾರವೇ ಆಯೋಜಿಸಿತ್ತು ಎಂಬುದು ಗಮನಾರ್ಹ.

ಬಿಜೆಪಿಯಿಂದ ಪಂಜಿನ ಮೆರವಣಿಗೆ:

ಅಯ್ಯಪ್ಪನ ದರ್ಶನಕ್ಕಾಗಿ ಲಕ್ಷಾಂತರ ಮಹಿಳೆಯರು ಮಹಿಳಾ ಗೋಡೆ ನಿರ್ಮಿಸಿ ಪ್ರತಿಭಟಿಸಿದ ಬೆನ್ನಿಗೆ ಇದನ್ನು ವಿರೋಧಿಸಿ ಬಿಜೆಪಿ ನೇತೃತ್ವದಲ್ಲಿ ಸಾವಿರಾರು ಮಹಿಳೆಯರು ಜನವರಿ.1 ರಂದು ಅಯ್ಯಪ್ಪ ಜ್ಯೋತಿ ಹಿಡಿದು, ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಶತಮಾನಗಳ ಪರಂಪರೆ, ಸಂಪ್ರದಾಯವನ್ನು ಉಳಿಸುವಂತೆ ಕೋರಿ ಕಾಸರಗೋಡಿನ ಹೊಸಂಗಡಿಯಿಂದ, ಕನ್ಯಾಕುಮಾರಿಯವರೆಗೆ ಮೆರವಣಿಗೆ ನಡೆಸಿದ್ದರು.

ಹಿಂದುತ್ವವಾದಿ ಗುಂಪುಗಳ ಒಕ್ಕೂಟವಾಗಿರುವ “ಶಬರಿಮಲೆ ಕರ್ಮ ಸಮಿತಿ” ಕಳೆದ ಮೂರು ತಿಂಗಳಿನಿಂದ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ವಿರುದ್ಧ ನಿರಂತರ ಪ್ರತಿಭಟನೆ ನಡೆಸುತ್ತಲೇ ಇದೆ.

ದೇವಾಲಯ ಶುದ್ಧೀಕರಣ:

ಅಯ್ಯಪ್ಪ ಸ್ವಾಮಿ ದೇವಾಲಯದ ಅರ್ಚಕರ ಪ್ರತಿರೋಧದ ನಡುವೆಯೂ ಮಹಿಳೆಯರಿಗೆ ಅಯ್ಯಪ್ಪ ದರ್ಶನಕ್ಕೆ ಪೊಲೀಸರು ಅವಕಾಶ ಕೊಟ್ಟಿದ್ದು ಅರ್ಚಕರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮಹಿಳೆಯರು ಅಯ್ಯಪ್ಪ ದರ್ಶನ ಪಡೆದ ನಂತರ ದೇಗುಲದಲ್ಲಿದ್ದ ಎಲ್ಲಾ ಭಕ್ತರನ್ನು ಹೊರಗೆ ಹೋಗುವಂತೆ ನಿರ್ದೇಶಿಸಲಾಯಿತು. ಅಲ್ಲದೆ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಗರ್ಭಗುಡಿಯ ಬಾಗಿಲು ಮುಚ್ಚಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಶುದ್ಧೀಕರಣ ವಿಧಿ ವಿಧಾನಗಳನ್ನು ನಡೆಸಲಾಯಿತು. ನಂತರ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ಕೇರಳ ಸಿಎಂ ಪಿಣರಾಯಿ ವಿಜಯನ್. 
ಕೇರಳ ಸಿಎಂ ಪಿಣರಾಯಿ ವಿಜಯನ್. 
/ಮಾತೃಭೂಮಿ

ಕೇರಳ ಸಿಎಂ ಆದೇಶ:

ಇಬ್ಬರು ಮಹಿಳೆಯರು ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಬೆನ್ನಿಗೆ ಪೊಲೀಸರಿಗೆ ನಿದೇರ್ಶನ ನೀಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ಇಚ್ಛಿಸುವ ಮಹಿಳೆಯರಿಗೆ ಸೂಕ್ತ ಭದ್ರತೆ ನೀಡುವಂತೆ ತಿಳಿಸಿದ್ದರು.

ಈ ಕುರಿತು ಬುಧವಾರ ಮಾಧ್ಯಮದೆದುರು ಮಾತನಾಡಿದ್ದ ಪಿಣರಾಯಿ ವಿಜಯನ್ ಇಬ್ಬರು ಮಹಿಳೆಯರು ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಿದ್ದನ್ನು ಖಚಿತಪಡಿಸಿದ್ದರು. ಅಲ್ಲದೆ ದೇವಾಲಯ ಪ್ರವೇಶಿಸಲು ಇಚ್ಛಿಸುವ ಎಲ್ಲಾ ಮಹಿಳೆಯರಿಗೂ ಸೂಕ್ತ ಭದ್ರತೆ ನೀಡಲು ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದರು.

ಬಂದ್‌ಗೆ ಕರೆ ನೀಡಿದ ಬಿಜೆಪಿ:

ಇಬ್ಬರು ಮಹಿಳೆಯರು ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಿ ದೇವರ ದರ್ಶನ ಪಡೆದ ವಿಷಯ ತಿಳಿಯುತ್ತಿದ್ದಂತೆ ಕೇರಳದಾದ್ಯಂತ ಬುಧವಾರ ಪ್ರತಿಭಟನೆಗಳು ಕಾವು ಪಡೆದುಕೊಳ್ಳಲು ಆರಂಭಿಸಿದವು.

ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಶಬರಿಮಲೆ ಕರ್ಮ ಸಮಿತಿ ಬುಧವಾರ ಸಂಜೆ ಪಂದಳಂನಲ್ಲಿ ಪ್ರತಿಭಟನಾ ರ್ಯಾಲಿ ಆಯೋಜಿಸಿತ್ತು. ಈ ರ್ಯಾಲಿ ಸ್ಥಳೀಯ ಸಿಪಿಎಂ ಕಚೇರಿ ಬಳಿ ಆಗಮಿಸುವಾಗ ಪ್ರತಿಭಟನಾಕಾರರ ಮೇಲೆ ಕಲ್ಲುತೂರಾಟ ನಡೆದಿದೆ ಎನ್ನಲಾಗಿದೆ. ಈ ಕಲ್ಲು ತೂರಾಟದಲ್ಲಿ ತೀವ್ರ ಗಾಯಕ್ಕೊಳಗಾಗಿದ್ದ ಶಬರಿಮಲೆ ಕರ್ಮ ಸಮಿತಿ ಕಾರ್ಯಕರ್ತ ಚಂದ್ರನ್ ಉಣ್ಣಿತಾನ್ (50) ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಂಜೆ ಕೊನೆಯುಸಿರೆಳೆದಿದ್ದರು.

ಇದರ ಬೆನ್ನಿಗೆ ಕರ್ಮ ಸಮಿತಿ ಹಾಗೂ ಅಂತಾರಾಷ್ಟ್ರೀಯ ಹಿಂದೂ ಪರಿಷತ್ (ಎ ಎಚ್ ಪಿ) ಗುರುವಾರ ಕೇರಳ ಬಂದ್ ಗೆ ಕರೆ ನೀಡಿತ್ತು. ಇದಲ್ಲದೆ ಪ್ರತಿಭಟನೆಯ ಕಾವು ರಾಜ್ಯದ ನಾನಾಕಡೆಗಳಿಗೂ ಹಬ್ಬಿತ್ತು.

* ಬಿಜೆಪಿ ಕಾರ್ಯಕರ್ತರು ಕಾಸರಗೋಡು – ಮಂಗಳೂರು ಹೆದ್ದಾರಿಯಲ್ಲಿ ರಸ್ತೆ ತಡೆದು ಪ್ರತಿಭಟಿಸಿದ್ದರು.

* ತಿರುವನಂತಪುರಂ ವಿಧಾನಸಭಾ ಕಾರ್ಯಾಲಯದ ಎದುರು ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಅಲ್ಲದೆ ತಿರುವನಂತಪುರ ಹಾಗೂ ಕೊಲ್ಲಂನಲ್ಲಿ ಪೊಲೀಸರು, ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಲಾಗಿತ್ತು.

*ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಮುಖ್ಯಮಂತ್ರಿ ಕಚೇರಿಗೆ ನುಗ್ಗಲು ಯತ್ನಿಸಿದ್ದರೆ, ಮತ್ತೊಂದೆಡೆ ತಿರುವನಂತಪುರದಲ್ಲಿ ಪ್ರತಿಭಟನೆ ನಿರತ ಮಹಿಳೆಯರನ್ನು ಬಂಧಿಸಲಾಗಿತ್ತು.

*ಹಲವಾರು ಪ್ರದೇಶಗಳಲ್ಲಿ ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ ಬಿಜೆಪಿ-ಯುವಮೋರ್ಚಾ ಕಾರ್ಯಕರ್ತರು.

*ಚೆಂಗನ್ನೂರ್, ವೆಳ್ಳಾವೂರ್, ಮೂವಾಟ್ಟುಪ್ಪುಳ ಹಾಗೂ ಎಂ.ಸಿ.ರೋಡ್ ಸಾರಿಗೆ ಸಂಪೂರ್ಣ ಸ್ಥಗಿತವಾಗಿತ್ತು.

*ತಿರುವನಂತಪುರದ ಸಚಿವಾಲಯದ ಮುಂದೆ ಬೃಹತ್ ಮಟ್ಟದ ಪ್ರತಿಭಟನೆ ನಡೆಸಿದ ಬಿಜೆಪಿ, ಮುಷ್ಕರದ ನಡುವೆ ಸಿಪಿಎಂ-ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ ಪತ್ರಕರ್ತರ ಮೇಲೆ ಹಲ್ಲೆ ನಡೆಸಲಾಗಿತ್ತು.

*ಬಿಗಿ ಪೊಲೀಸ್ ಭದ್ರತೆಯನ್ನು ಮುರಿದು ಸಚಿವಾಲಯದ ಒಳಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರ ಬಂಧನ.

*ಕೊಚ್ಚಿ, ಕಚ್ಚೇರಿಪ್ಪಡಿಯಲ್ಲಿ ರಸ್ತೆ ತಡೆ ಹಾಗೂ ಪ್ರತಿಭಟನಾ ಮೆರವಣಿಗೆ.

*ನೆಯ್ಯಾಂಟಿಂಕರದ ತಿರುವಾಂಕೂರು ದೇವಸ್ವಂ ಮಂಡಳಿ ಕಚೇರಿಯಲ್ಲಿ ಕಪ್ಪು ಬಾವುಟ ಕಟ್ಟಿದ ಬಿಜೆಪಿ.

*ಕೊಚ್ಚಿ, ಪಟ್ಟನಂತಿಟ್ಟ, ಕೊಲ್ಲಂ, ತಿರುವನಂತಪುರಂ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಅಯ್ಯಪ್ಪಸ್ವಾಮಿ ಭಕ್ತರು ಅಯ್ಯಪ್ಪನ ಚಿತ್ರ ಹಿಡಿದು, ನಾಮ ಜಪಿಸುತ್ತಾ ಮೆರವಣಿಗೆ ನಡೆಸಿದರು.

ಬಂದ್- ಹಿಂಸಾಚಾರ- ಬಂಧನ: ಡಿಜಿಪಿ ಆದೇಶ

ಕರ್ಮ ಸಮಿತಿ ಹಾಗೂ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಗುರುವಾರ ಬಂದ್‌ಗೆ ಕರೆ ನೀಡಿದ ಬೆನ್ನಿಗೆ ಎಚ್ಚೆತ್ತ ಕೇರಳ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿ ಲೋಕನಾಥ್ ಬೆಹರಾ ಬಂದ್ ವೇಳೆ ಯಾವುದೇ ಹಿಂಸಾಚಾರ ನಡೆದರೆ ಪ್ರತಿಭಟನಾಕಾರರನ್ನು ಕೂಡಲೇ ಬಂಧಿಸಿ ಎಂದು ಆದೇಶ ನೀಡಿದ್ದರು.

ಯಾರೂ ಸಹ ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವುದು, ಗಲಭೆ ಮಾಡುವುದು, ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟು ಮಾಡುವುದು ಕಂಡು ಬಂದರೆ ಅಂತವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುವಂತೆ ಸೂಚಿಸಿದ್ದರು. ಅಲ್ಲದೆ ಪ್ರತಿಭಟನಾಕಾರರು ರಸ್ತೆ ಸಂಚಾರಕ್ಕೆ ತಡೆ ಒಡ್ಡಿದರೆ, ಸಾಮಾನ್ಯ ಜನ ಜೀವನ ಅಸ್ತವ್ಯಸ್ತವಾಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದರು.

ಅಯ್ಯಪ್ಪನ ಸನ್ನಿಧಿ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ ಬಿಂದು ಮತ್ತು ಕನಕದುರ್ಗಾ. 
ಅಯ್ಯಪ್ಪನ ಸನ್ನಿಧಿ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ ಬಿಂದು ಮತ್ತು ಕನಕದುರ್ಗಾ. 

ದರ್ಶನ; ಹರ್ಷ ವ್ಯಕ್ತಪಡಿಸಿದ್ದ ಬಿಂದು:

ಒಂದೆಡೆ ಪ್ರತಿಭಟನೆಗಳು ನಡೆಯುತ್ತಿದ್ದರೆ ಮತ್ತೊಂದೆಡೆ ಅಯ್ಯಪ್ಪನ ದರ್ಶನ ಪಡೆದ ಬಿಂದು ಹರ್ಷ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆ ಲಿಂಗ ಸಮಾನತೆಯೆಡೆಗಿನ ಮೊದಲ ಹೆಜ್ಜೆ ಎಂದು ಅಭಿಪ್ರಾಯ ಪಟ್ಟಿದ್ದರು. ಅಲ್ಲದೆ ತಾವು ಪವಿತ್ರವಾದ 18 ಮೆಟ್ಟಿಲುಗಳನ್ನು ಹತ್ತಿ ಅಯ್ಯಪ್ಪನ ದರ್ಶನ ಪಡೆಯಲಿಲ್ಲ. ಬದಲಾಗಿ ಪೊಲೀಸರು ನಮ್ಮನ್ನು ಪ್ರತ್ಯೇಕ ಮಾರ್ಗದಲ್ಲಿ ಕರೆದೊಯ್ದು ದೇವರ ದರ್ಶನ ಮಾಡಿಸಿದ್ದರು ಎಂದು ಸ್ಪಷ್ಟಪಡಿಸಿದರು.

ಸದ್ಯದ ಬೆಳವಣಿಗೆಗಳು:

ಕರ್ಮ ಸಮಿತಿ ಹಾಗೂ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಗುರುವಾರ ಕರೆ ನೀಡಿದ್ದ ಬಂದ್ ಹಿಂಸಾಚಾರದೆಡೆಗೆ ತಿರುಗಿದೆ. ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವವರ ವಿರುದ್ಧ ನಿಧಾರ್ಕ್ಷಿಣ್ಯ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆ ಸೂಚಿಸಿದ್ದರೂ ಪ್ರತಿಭಟನಾಕಾರರ ಅದನ್ನು ಗಂಭೀರವಾಗಿ ಪರಿಗಣಿಸುವಂತೆ ಕಾಣುತ್ತಿಲ್ಲ.

ಬಿಜೆಪಿ ಕಾರ್ಯಕರ್ತರು ರಾಜ್ಯದ ಹಲವೆಡೆ ಒತ್ತಾಯಪೂರರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೆ ರಾಷ್ಟ್ರೀಯ ಹೆದ್ದಾರಿಗಳಲ್ಲ ರಸ್ತೆ ತಡೆದು ಪ್ರತಿಭಟಿಸುತ್ತಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ಥವಾಗಿದೆ.

ಸಿಎಂ ಕಾರಿಗೆ ಮುತ್ತಿಗೆ ಹಾಕಲು ವಿಫಲ ಯತ್ನವೊಂದನ್ನು ಬಿಜೆಪಿ ಕಾರ್ಯಕರ್ತರು ನಡೆಸಿದರು.

ತಿರುವನಂತಪುರಂ ಸಿಪಿಎಂ ಕಚೇರಿಯ ಎದುರು ಪ್ರತಿಭಟನಾಕಾರರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಇನ್ನೂ ನಿನ್ನೆಯ ಪ್ರತಿಭಟನೆಯಲ್ಲಿ ಗಾಯಾಳುವಾಗಿದ್ದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಂದ್ರನ್ ಉಣ್ಣಿತಾನ್ (50) ಸಾವಿಗೆ ಸಿಪಿಎಂ ಹೊಣೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸಿಪಿಎಂ ಕಚೇರಿಯಿಂದ ಎಸೆಯಲಾಗಿದ್ದ ಕಲ್ಲು ಚಂದ್ರನ್ ಉಣ್ಣಿತಾನ್ ತಲೆಗೆ ಬಿದ್ದು ಪೆಟ್ಟಾಗಿದ್ದರಿಂದಲೇ ಆತ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ.