samachara
www.samachara.com
ಸ್ಯಾಂಡಲ್‌ವುಡ್ & ಬ್ಲಾಕ್‌ ಮನಿ: ಬೆಳ್ಳಿತೆರೆಯ ಪರದೆ ಹಿಂದಿನ (ಅ)ವ್ಯವಹಾರದ ಕತೆ!
COVER STORY

ಸ್ಯಾಂಡಲ್‌ವುಡ್ & ಬ್ಲಾಕ್‌ ಮನಿ: ಬೆಳ್ಳಿತೆರೆಯ ಪರದೆ ಹಿಂದಿನ (ಅ)ವ್ಯವಹಾರದ ಕತೆ!

ರಿಯಲ್‌ ಎಸ್ಟೇಟ್‌ನ ಕಬಂಧ ಬಾಹುವಿನಲ್ಲಿ ಸಿಕ್ಕು ಕನ್ನಡ ಚಿತ್ರೋದ್ಯಮ ಅಕ್ಷರಶಃ ನಲುಗುತ್ತಿದೆ. ಈಗೇನಿದ್ದರೂ ಸ್ಯಾಂಡಲ್‌ವುಡ್‌ ಎಂದರೆ ಕಪ್ಪು ಹಣವನ್ನು ಬಿಳಿ ಮಾಡುವ ಮಾಧ್ಯಮ ಅಥವಾ ಉದ್ಯಮ. 

ಸುಮಾರು 9೦ ವರ್ಷಗಳ ಇತಿಹಾಸವಿರುವ ಕನ್ನಡ ಚಿತ್ರರಂಗ ಇವತ್ತಿಗೆ ರಾಷ್ಟ್ರೀಯ ಮಾರುಕಟ್ಟೆಯನ್ನು ಕಂಡುಕೊಂಡು ಚಿತ್ರೋದ್ಯಮ. ನಟಸಾರ್ವಭೌಮ ಡಾ. ರಾಜ್‌ ಕುಮಾರ್ ಅವರಿಂದ ಯಶ್‌ವರೆಗೆ ಇಲ್ಲಿ ಸಾಕಷ್ಟು ತಾರೆಗಳು ಮಿನುಗಿವೆ, ಮಿನುಗುತ್ತಿವೆ. ಹಾಗೂ, ಇವರನ್ನು ಮುಂದಿಟ್ಟುಕೊಂಡು ಕೋಟಿ ಕೋಟಿ ಉದ್ಯಮವೊಂದು ಬೆಳೆದು ನಿಂತಿದೆ. ಈವರೆಗೆ ಸುಮಾರು 5 ಸಾವಿರಕ್ಕೂ ಹೆಚ್ಚು ಚಿತ್ರಗಳು ಇಲ್ಲಿ ತಯಾರಾಗಿವೆ. ದಿನ ಕಳೆದಂತೆ ಕನ್ನಡ ಚಿತ್ರೋದ್ಯಮದ ವ್ಯವಹಾರ ಬಾಲಿವುಡ್‌ನ ನಟೋರಿಟಿಯನ್ನು ಒಳಗೊಳ್ಳಲು ಆರಂಭಿಸಿದೆ. ಇಂತಹದೊಂದು ಗುರುತರವಾದ ಆರೋಪಕ್ಕೆ ಗುರುವಾರ ನಡೆದ ಐಟಿ ದಾಳಿ ಹೊಸ ಸಾಕ್ಷಿಯನ್ನು ಮುಂದಿಟ್ಟಿದೆ.

ಇವತ್ತಿಗೆ ಸ್ಯಾಂಡಲ್‌ವುಡ್ ಕಪ್ಪು ಹಣವನ್ನು ಬಿಳಿಯನ್ನಾಗಿ ಬದಲಾಯಿಸಲು ಸೂಕ್ತ ವೇದಿಕೆ ಎಂದು ಹೇಳಲಾಗುತ್ತದೆಯಾದರೂ, ಇಲ್ಲಿ ಹಣ ಹೂಡುವವರು ಯಾರು? ಈ ಹಣ ಎಲ್ಲಿಂದ ಬರುತ್ತೆ? ಚಿತ್ರಗಳ ಮೇಲೆ ಹೂಡುವ ಹಣ ಅಷ್ಟೂ ಬ್ಲಾಕಾ? ಅಥವಾ ವೈಟಾ? ಇಂತಹ ಪ್ರಶ್ನೆಗಳಿಗೆ ಗಾಂಧಿನಗರದ ಮೂಲಗಳು ನೀಡುವ ಉತ್ತರವನ್ನು ನಿಮ್ಮ ಮುಂದಿಡುವ ಪ್ರಯತ್ನವನ್ನು ‘ಸಮಾಚಾರ’ ಇಲ್ಲಿ ಮಾಡಿದೆ.

ಬೆಂಗಳೂರಿನ ಮೆಜೆಸ್ಟಿಕ್ ಪಕ್ಕದಲ್ಲಿರುವ ಗಾಂಧಿನಗರದ ಒಂದು ನೋಟ. 
ಬೆಂಗಳೂರಿನ ಮೆಜೆಸ್ಟಿಕ್ ಪಕ್ಕದಲ್ಲಿರುವ ಗಾಂಧಿನಗರದ ಒಂದು ನೋಟ. 
/masudhaq.com. 

1 ಕೋಟಿ ಇದ್ದರೆ 10 ಕೋಟಿ ಬೆಲೆ:

ಕನ್ನಡ ಚಿತ್ರರಂಗದಲ್ಲಿ ಯಾವ ನಿರ್ಮಾಪಕನೂ ಸಹ ಒಂದು ಚಿತ್ರಕ್ಕೆ ತಾನು ಅನೌನ್ಸ್‌ ಮಾಡಿದ ಬಜೆಟ್‌ ಹಣವನ್ನು ಬ್ಯಾಂಕಿನಿಂದ ಚೆಕ್ಕಿನ ಮೂಲಕ ತಂದು ಚಿತ್ರ ನಿರ್ಮಿಸಿದ ಇತಿಹಾಸವೇ ಇಲ್ಲ. ಒಂದು ಚಿತ್ರವನ್ನು ಅನೌನ್ಸ್‌ ಮಾಡುವಾಗ ಅಂದಾಜು ಇಷ್ಟು ಕೋಟಿ ಹಣ ವೆಚ್ಚವಾಗುತ್ತದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಾರಷ್ಟೇ. ಆದರೆ ವಾಸ್ತವದಲ್ಲಿ ಅದರ ಶೇ. 10ರಷ್ಟು ಹಣವನ್ನು ಮಾತ್ರ ಬ್ಯಾಂಕಿನಿಂದ ಚೆಕ್ಕಿನ ಮೂಲಕ ತರಲಾಗುತ್ತದೆ. ಈ ಹಣದಲ್ಲಿ ಎಲ್ಲಾ ಪ್ರಮುಖ ನಟ, ನಟಿಯರು ಹಾಗೂ ಇತರೆ ಕಲಾವಿದರಿಗೆ ತಂತ್ರಜ್ಞರಿಗೆ ಮುಂಗಡ ಹಣ ನೀಡಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ.

ಒಪ್ಪಂದವಾದ ಮೇಲೆ ಚಿತ್ರೀಕರಣ ಆರಂಭವಾಗುತ್ತದೆ. ಒಮ್ಮೆ ಶೂಟಿಂಗ್ ಆರಂಭವಾದ ಮೇಲೆ ಎಲ್ಲವೂ ನಗದು ವ್ಯವಹಾರವೇ. ಕಲಾವಿದರು ತಂತ್ರಜ್ಞರು ಸೇರಿದಂತೆ ಎಲ್ಲರಿಗೂ ನಗದು ರೂಪದಲ್ಲೇ ಹಣವನ್ನು ನೀಡಲಾಗುತ್ತದೆ. “ಸ್ಯಾಂಡಲ್‌ವುಡ್‌ನಲ್ಲಿ ಸಣ್ಣ ಪುಟ್ಟ ಕಲಾವಿದರು ಕೈಗೆ ಹಣ ಬಂದರೆ ಸಾಕಪ್ಪ ಎಂದು ನಿಟ್ಟುಸಿರು ಬಿಡುವ ಸ್ಥಿತಿ ಇದೆ. ಯಾರೊಬ್ಬರೂ ಬ್ಯಾಂಕಿನ ಮೂಲಕ ಹಣ ಕೊಡಿ ಎಂದು ಕೇಳುವ ಪರಿಪಾಠವೇ ಸ್ಯಾಂಡಲ್‌ವುಡ್‌ನಲ್ಲಿ ಇಲ್ಲ. ಹೀಗಾಗಿ ಕಲಾವಿದರು ಹಾಗೂ ತಂತ್ರಜ್ಞರ ಸಂಭಾವನೆ ಬಹುತೇಕ ನಗದು ವ್ಯವಹಾರವೇ ಆಗಿರುವುದರಿಂದ ಇಲ್ಲಿ ಯಾವುದಕ್ಕೂ ಸೂಕ್ತ ಲೆಕ್ಕಪತ್ರಗಳಾಗಲಿ ದಾಖಲೆಗಳಾಗಲಿ ಇರುವುದಿಲ್ಲ,” ಎನ್ನುತ್ತವೆ ಚಿತ್ರರಂಗದ ಮೂಲಗಳು.

ಕನ್ನಡದ ಚಿತ್ರತಾರೆಯರು. ಇವರು ಜನರಲ್ಲಿ ಕೊಳ್ಳುಬಾಕ ಸಂಸ್ಕೃತಿಯನ್ನು ಹುಟ್ಟುಹಾಕುವ ಜಾಹೀರಾತುಗಳಿಗೆ ರೂಪದರ್ಶಿಗಳು ಮಾತ್ರವಲ್ಲ, ಕೋಟಿ ವ್ಯವಹಾರ ನಡೆಸುವ ನಿರ್ಮಾಪಕರಿಗೆ ‘ಚಿನ್ನದ ಮೊಟ್ಟೆ’ ಇಡುವವರು ಕೂಡ. 
ಕನ್ನಡದ ಚಿತ್ರತಾರೆಯರು. ಇವರು ಜನರಲ್ಲಿ ಕೊಳ್ಳುಬಾಕ ಸಂಸ್ಕೃತಿಯನ್ನು ಹುಟ್ಟುಹಾಕುವ ಜಾಹೀರಾತುಗಳಿಗೆ ರೂಪದರ್ಶಿಗಳು ಮಾತ್ರವಲ್ಲ, ಕೋಟಿ ವ್ಯವಹಾರ ನಡೆಸುವ ನಿರ್ಮಾಪಕರಿಗೆ ‘ಚಿನ್ನದ ಮೊಟ್ಟೆ’ ಇಡುವವರು ಕೂಡ. 

ಪ್ರಖ್ಯಾತ ನಟರ ಪಾತ್ರ:

ಚಿತ್ರರಂಗದ ಮಟ್ಟಿಗೆ ಒಬ್ಬ ದೊಡ್ಡ ಹಿರೋ ಚಿತ್ರ ಅನೌನ್ಸ್‌ ಆಯಿತೆಂದರೆ ಆ ಚಿತ್ರದ ಬಜೆಟ್‌ನ ಅರ್ಧದಷ್ಟಾದರೂ ಹಿರೋಗೆ ಸಂಭಾವನೆ ಇರುತ್ತದೆ. ಕನ್ನಡ ನಟರು ‘ಬಿಳಿ ಆನೆ’ಗಳಿದ್ದಂತೆ ಎಂಬ ಮಾತು ಗಾಂಧಿನಗರದಲ್ಲಿ ಬಹಳ ಹಿಂದಿನಿಂದಲೇ ಚಾಲ್ತಿಯಲ್ಲಿದೆ. ತಮ್ಮ ಸಂಭಾವನೆಯ ಹಣವನ್ನು ಎಲ್ಲಾ ನಟರೂ ಚೆಕ್‌ ಮುಖಾಂತರ ವೈಟ್‌ ಮೋಡ್‌ನಲ್ಲೇ ಪಡೆಯುತ್ತಾರೆ ಎಂದು ಖಚಿತವಾಗಿ ಹೇಳುವುದು ಕಷ್ಟ.

"ನಟರು ತಮ್ಮ ಸಂಭಾವನೆಯ ಶೇ. 10ರಷ್ಟನ್ನು ಮಾತ್ರ ಚೆಕ್ ಮೂಲಕ ಪಡೆಯುತ್ತಾರೆ. ಉಳಿದ ಹಣವನ್ನು ನಗದು ರೂಪದಲ್ಲಿ ಅಥವಾ ಚಿತ್ರ ಮುಗಿದು ಚಿತ್ರರಂಗದಲ್ಲಿ ಪ್ರದರ್ಶನ ಕಂಡ ಮೇಲೆ ಚಿತ್ರಮಂದಿರದಿಂದ ಬರುವ ಶೇರ್‌ನಲ್ಲಿ ಇಂತಿಷ್ಟು ಎಂದು ಪರ್ಸೆಂಟೇಜ್‌ನಲ್ಲಿ ಹಣ ಪಡೆಯುತ್ತಾರೆ,’’ ಎನ್ನುತ್ತಾರೆ ಬಸವರಾಜ್ ಕೊಪ್ಪಳ. ಇವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಜತೆಗಿನ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಉತ್ತರ ಕರ್ನಾಟಕಕ್ಕಾಗಿಯೇ ಪ್ರತ್ಯೇಕ ಸಿನೆಮಾ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ.

ಇವರು ಹೇಳುವ ಪ್ರಕಾರ, ಕಲಾವಿದರು ಚೆಕ್‌ ಮೂಲಕ ಹಣ ಪಡೆದರೆ ಅದಕ್ಕೊಂದು ಅಕೌಂಟಬಲಿಟಿ ಎಂಬುದು ಇರುತ್ತದೆ. ಪ್ರತಿಯೊಂದು ಪೈಸೆಯೂ ಲೆಕ್ಕಕ್ಕೆ ಬರುತ್ತದೆ. ಆದರೆ ಈ ಎಲ್ಲಾ ವ್ಯವಹಾರ ಬಹುತೇಕ ನಗದು ರೂಪದಲ್ಲೇ ಇರುವುದರಿಂದ ಇದು ವೈಟ್‌ ವ್ಯವಹಾರ ಅಲ್ಲ ಎಂಬುದು ಚಿತ್ರರಂಗದಲ್ಲಿ ಪ್ರಚಲಿತದಲ್ಲಿರುವ ಸಾಮಾನ್ಯ ಜ್ಞಾನ.

ರೀಲ್‌ಗೆ ರಿಯಲ್‌ ಎಸ್ಟೇಟ್ ಹೂಡಿಕೆ:

ಇಂದು ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ದೊಡ್ಡ ಚಿತ್ರಗಳನ್ನು ನಿರ್ಮಿಸುತ್ತಿರುವವರ ಪೈಕಿ ಬಹುತೇಕ ಜನ ರಿಯಲ್‌ ಎಸ್ಟೇಟ್‌ ಕುಳಗಳೇ. ಇವರಲ್ಲಿ ಬಹುತೇಕ ಮಂದಿ ರಿಯಲ್‌ ಎಸ್ಟೇಟ್‌ನಲ್ಲಿ ದುಡಿದು ಲೆಕ್ಕ ತೋರಿಸಲು ಸಾಧ್ಯವಾಗದ ಹಣವನ್ನು ತಂದು ಚಿತ್ರೋದ್ಯಮದಲ್ಲಿ ಸುರಿಯುತ್ತಿದ್ದಾರೆ. ಕೆಲವರು ಅಲ್ಲಿ ದುಡಿದ ಹಣದಲ್ಲಿ ತಾವೇ ಚಿತ್ರ ನಿರ್ಮಿಸಿದರೆ, ಮತ್ತೆ ಕೆಲವರು ಅದೇ ದುಡ್ಡಿನಲ್ಲಿ ನಿರ್ಮಾಪಕನಿಗೆ ಬಡ್ಡಿಗೆ ಹಣ ನೀಡುವ ಫೈನಾನ್ಸ್‌ ವ್ಯವಹಾರವನ್ನು ಸದ್ದಿಲ್ಲದೆ ನಡೆಸುತ್ತಿದ್ದಾರೆ.

ಒಂದು ದೊಡ್ಡ ಚಿತ್ರ ಅನೌನ್ಸ್‌ ಆದ ತಕ್ಷಣ ಪ್ರೊಡ್ಯೂಸರ್‌ಗೆ ದೊಡ್ಡ ನಟನ ಕಾಲ್‌ಶೀಟ್‌ ಇದ್ದರೆ ಸಾಕು, ಆತನ ಮೇಲೆ ಹಣ ಸುರಿಯಲು ಗಾಂಧಿ ನಗರದಲ್ಲಿ ಹತ್ತಾರು ಫೈನಾನ್ಷಿಯರ್‌ಗಳ ದೊಡ್ಡ ದಂಡೇ ಇದೆ. ಇವೆಲ್ಲ ಲೆಕ್ಕ ತೋರಿಸಲು ಬಾರದ ರಿಯಲ್‌ ಎಸ್ಟೇಟ್‌ ಹಣ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗೆ ಚಿತ್ರರಂಗಕ್ಕೆ, ನಿರ್ಮಾಪಕನಿಗೆ ಬಡ್ಡಿಗೆ ಹಣ ನೀಡುವ ಇವರ ಬಳಿ ಯಾವ ಹಣಕ್ಕೂ ಲೆಕ್ಕ ಇರುವುದೇ ಇಲ್ಲ. ಇಲ್ಲಿ ಎಲ್ಲವೂ ಗಾಂಧಿ ಲೆಕ್ಕವಷ್ಟೇ.

ಕನ್ನಡ ಚಿತ್ರೋದ್ಯಮ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು ಕೇವಲ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂಬುದು ಮೂರ್ಖತನವಷ್ಟೇ. ಇಲ್ಲಿ ಕಲೆ ಯಾರಿಗೂ ಬೇಡವಾಗಿದೆ, ಎಲ್ಲವೂ ವ್ಯವಹಾರವಾಗಿ ಬದಲಾಗಿ ದಶಕಗಳೇ ಕಳೆದಿವೆ. ರಿಯಲ್‌ ಎಸ್ಟೇಟ್‌ನ ಕಬಂಧ ಬಾಹುವಿನಲ್ಲಿ ಸಿಕ್ಕು ಕನ್ನಡ ಚಿತ್ರೋದ್ಯಮ ಅಕ್ಷರಶಃ ನಲುಗುತ್ತಿದೆ. ಈಗೇನಿದ್ದರೂ ಸ್ಯಾಂಡಲ್‌ವುಡ್‌ ಎಂದರೆ ಕಪ್ಪು ಹಣವನ್ನು ಬಿಳಿ ಮಾಡುವ ಮಾಧ್ಯಮ ಅಥವಾ ಉದ್ಯಮ ಅಷ್ಟೇ.
ಬಸವರಾಜ್ ಕೊಪ್ಪಳ, ಅಧ್ಯಕ್ಷರು - ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ (ಉತ್ತರ ಕರ್ನಾಟಕ)

ಪ್ರೊಡಕ್ಷನ್‌ ನಗದುಮಯ:

ಯಾವುದೇ ಚಿತ್ರದಲ್ಲಿ ಪ್ರೊಡಕ್ಷನ್ ಎಂಬುದು ಅತಿ ಮುಖ್ಯವಾದ ಅಂಗ. ಒಂದು ಚಿತ್ರ ರೂಪಗೊಳ್ಳಲು ಈ ತಂಡದ ಶ್ರಮ ಅಗತ್ಯ. ಸಾಮಾನ್ಯವಾಗಿ ಒಂದು ಚಿತ್ರ ಸೆಟ್ಟೇರಿದರೆ ಇಂತಿಷ್ಟು ದಿನ ಶೂಟಿಂಗ್‌ ಎಂದು ಶೆಡ್ಯೂಲ್‌ ಮಾಡಲಾಗುತ್ತದೆ. ಸಣ್ಣ ಬಜೆಟ್‌ನ ಚಿತ್ರಗಳಾದರೆ ಒಂದು ದಿನಕ್ಕೆ ಸುಮಾರು 20 ರಿಂದ 30 ಹಾಗೂ ದೊಡ್ಡ ಬಜೆಟ್‌ನ ಚಿತ್ರವಾದರೆ ಸುಮಾರು 40 ರಿಂದ 50 ಜನ ಪ್ರದಿದಿನ ದುಡಿಯುತ್ತಾರೆ. (ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಹೇಳಿರುವಂತೆ ಅವರ ಕೆಜಿಎಪ್‌ ಚಿತ್ರಕ್ಕೆ ಪ್ರತಿ ದಿನ ಸುಮಾರು 1000 ಜನ ಕಲಾವಿದರು ಹಾಗೂ ತಂತ್ರಜ್ಞರು ದುಡಿಯುತ್ತಿದ್ದರಂತೆ)

ಕನ್ನಡದಲ್ಲಿ ತಯಾರಾದ ಅದ್ದೂರಿ ಚಿತ್ರ ಕೆಜಿಎಫ್‌ ಸೆಟ್‌ನ ಒಂದು ಚಿತ್ರ. 
ಕನ್ನಡದಲ್ಲಿ ತಯಾರಾದ ಅದ್ದೂರಿ ಚಿತ್ರ ಕೆಜಿಎಫ್‌ ಸೆಟ್‌ನ ಒಂದು ಚಿತ್ರ. 
/ಯೂಟ್ಯೂಬ್. 

ಶೂಟಿಂಗ್ ಆರಂಭಿಸುವ ಮುನ್ನ ಕ್ಯಾಮೆರಾ, ಲೈಟಿಂಗ್‌ ಸೇರಿದಂತೆ ಚಿತ್ರೀಕರಣಕ್ಕೆ ಬೇಕಾದ ಎಲ್ಲಾ ಪರಿಕರಗಳನ್ನು (ಇದನ್ನು ಚಿತ್ರೋದ್ಯಮದ ಭಾಷೆಯಲ್ಲಿ ಯೂನಿಟ್‌ ಎನ್ನಲಾಗುತ್ತದೆ) ಬಾಡಿಗೆಗೆ ಪಡೆಯಬೇಕು. ಒಂದು ಅಂದಾಜಿನ ಪ್ರಕಾರ ಹೀಗೆ ಬಾಡಿಗೆಗೆ ಕೊಡಲೆಂದೇ ಸ್ಯಾಂಡಲ್‌ವುಡ್‌ನಲ್ಲಿ ಸುಮಾರು 50 ಯೂನಿಟ್‌ಗಳಿವೆ. ಇವುಗಳ ಒಂದು ದಿನದ ಬಾಡಿಗೆಯೇ ಸುಮಾರು ಲಕ್ಷಗಳನ್ನು ದಾಟುತ್ತದೆ. ನಿರ್ದೇಶಕನಿಗೆ ಇವುಗಳನ್ನು ಹೊಂದಿಸಿಕೊಡುವ ಜವಾಬ್ದಾರಿ ಪ್ರೊಡಕ್ಷನ್‌ ಮ್ಯಾನೇಜರ್‌ನದು.

ಶೂಟಿಂಗ್‌ ನಡೆಯುತ್ತಿದ್ದರೆ ಶೂಟಿಂಗ್‌ನಲ್ಲಿರುವ ಕಲಾವಿದರಿಗೆ ಹಾಗೂ ತಂತ್ರಜ್ಞರಿಗಾಗಿ ಅಲ್ಲೇ ಅಡುಗೆ ಮಾಡಲಾಗುತ್ತದೆ. ಈ ಎಲ್ಲಾ ಉಸ್ತುವಾರಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಪ್ರೊಡಕ್ಷನ್‌ ಇಂಚಾರ್ಜ್‌ನದು. ಇನ್ನೂ ಶೂಟಿಂಗ್‌ ನಡೆಯುವ ಸ್ಥಳಕ್ಕೆ ಹೋದರೆ ಚಿತ್ರೀಕರಣ ಮುಗಿದ ಮೇಲೆ ಅಲ್ಲೆ ಅಣತಿ ದೂರದಲ್ಲಿ ಓರ್ವ ಕ್ಯಾಶಿಯರ್‌ ಕೈತುಂಬಾ ಹಣದ ತೈಲಿ ಹಿಡಿದು ಕುಳಿತಿರುವುದನ್ನು ಕಾಣಬಹುದು.

ಈತ ಅಂದಿನ ಚಿತ್ರೀಕರಣಕ್ಕಾಗಿ ದುಡಿದ ಸಣ್ಣ ಪ್ರಮಾಣದ ಕಲಾವಿದರು, ತಂತ್ರಜ್ಞರು ಸೇರಿದಂತೆ ಎಲ್ಲರಿಗೂ ಅಂದಿನ ಪೇಮೆಂಟ್‌ಅನ್ನು ನೀಡುತ್ತಾನೆ. ಕನ್ನಡದಲ್ಲಿ ದಿನಕ್ಕೆ ಸುಮಾರು 200 ರಿಂದ 2 ಸಾವಿರದವರೆಗೆ ದುಡಿಯುವ ತಂತ್ರಜ್ಞರಿದ್ದಾರೆ. ಇವರೆಲ್ಲರಿಗೂ ಅಂದೇ ನಗದು ರೂಪದಲ್ಲಿ ಹಣ ಕೊಟ್ಟು ಕಳಿಸಲಾಗುತ್ತದೆ. ಇನ್ನೂ ಶೂಟಿಂಗ್‌ ಯೂನಿಟ್‌ ಪರಿಕರಗಳಿಗೂ ನಗದು ರೂಪದಲ್ಲೇ ಅಂದೇ ಸೆಟಲ್ಮೆಂಟ್‌ ಮಾಡಲಾಗುತ್ತದೆ. ಹೀಗೆ ಸೆಟಲ್ ಮಾಡಲಾದ ಯಾವ ಹಣಕ್ಕೂ ಸೂಕ್ತ ಲೆಕ್ಕ ಇರುವುದಿಲ್ಲ. ಇನ್ನೂ ಹಣ ಪಡೆದ ಕಲಾವಿದರಿಗಾಗಲಿ, ತಂತ್ರಜ್ಞರಿಗಾಗಲಿ ತಮಗೆ ನೀಡಲಾದ ಹಣ ಕಪ್ಪೋ ಅಥವಾ ಬಿಳಿಯೋ ಎಂಬ ತರ್ಕದ ಅವಶ್ಯಕವಿರುವುದಿಲ್ಲ.

ಥಿಯೇಟರ್ ಶೇರ್ ಎಂಬ ಮೂಲ:

ಜಿಎಸ್‌ಟಿ ಜಾರಿಗೆ ಬಂದ ನಂತರ ಥಿಯೇಟರ್‌ಗಳಿಂದ ಬಂದ ಅಥವಾ ಬಂದಿದೆ ಎಂದು ತೋರಿಸುವ ಪ್ರತಿ ಪೈಸೆಯೂ ವೈಟ್ ಎನ್ನಿಸಿಕೊಳ್ಳುತ್ತದೆ. 
ಜಿಎಸ್‌ಟಿ ಜಾರಿಗೆ ಬಂದ ನಂತರ ಥಿಯೇಟರ್‌ಗಳಿಂದ ಬಂದ ಅಥವಾ ಬಂದಿದೆ ಎಂದು ತೋರಿಸುವ ಪ್ರತಿ ಪೈಸೆಯೂ ವೈಟ್ ಎನ್ನಿಸಿಕೊಳ್ಳುತ್ತದೆ. 

ಕೇಂದ್ರ ಸರ್ಕಾರ ಜಾರಿಗೆ ತಂದ ಜಿಎಸ್‌ಟಿಯಿಂದ ಯಾರಿಗೆ ಲಾಭವಾಯಿತು..? ಅಥವಾ ಯಾರಿಗೆ ನಷ್ಟವಾಯಿತು..? ಎಂದು ಸ್ಪಷ್ಟವಾಗಿ ಹೇಳುವುದು ಕಷ್ಟ. ಆದರೆ ಜಿಎಸ್‌ಟಿಯಿಂದ ಕಪ್ಪು ಹಣವನ್ನು ಬಿಳಿಯನ್ನಾಗಿಸುವ ಚಿತ್ರೋದ್ಯಮದ ರಿಯಲ್‌ ಎಸ್ಟೇಟ್‌ ಧನಿಗಳ ಪಾಲಿಗಂತು ದಿನವೂ ಚಿನ್ನದ ಮಳೆ ಎನ್ನಲಡ್ಡಿಯಿಲ್ಲ.

ಏಕೆಂದರೆ ಜಿಎಸ್‌ಟಿ ಜಾರಿಗೆ ಬರುವ ಮುಂಚೆ ಮನರಂಜನೆಗೆ ಪ್ರತ್ಯೇಕ ತೆರಿಗೆಗಳು ಇರಲಿಲ್ಲ. ಆದರೆ ಈಗ ಮನರಂಜನೆಯ ಮೇಲೆ ಶೇ 18ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಹೀಗಾಗಿ ಓರ್ವ ನಿರ್ಮಾಪಕ ತನ್ನ ಚಿತ್ರವನ್ನು ಯಾವುದೇ ಹಣದಲ್ಲಿ ನಿರ್ಮಿಸಿರಲಿ, ಆದರೆ ಆತನಿಗೆ ಚಿತ್ರಮಂದಿರದಿಂದ ಬರುವ ಹಣ ಜಿಎಸ್‌ಟಿ ತೆರಿಗೆ ಕಡಿತವಾಗಿ ವೈಟ್‌ ರೂಪದಲ್ಲಿ ಬರುತ್ತದೆ. ಅಲ್ಲಿಗೆ ನಿರ್ಮಾಪಕ ಸೇಫ್. ಹೀಗೆ ಕಪ್ಪು ಹಣವನ್ನು ಹೂಡಿದ ನಿರ್ಮಾಪಕ ಅದನ್ನು ಬಿಳಿಯಾಗಿಸಲು ಚಿತ್ರರಂಗ ಒಳ್ಳೆಯ ಮಾರ್ಗವಾಗಿದೆ. ಇನ್ನೂ ಸ್ವಲ್ಪ ಕಮಿಷನ್‌ ಕೊಟ್ಟರೆ ಜಿಎಸ್‌ಟಿ ತೆರಿಗೆಯನ್ನೂ ಕಡಿತಗೊಳಿ ಸರ್ಕಾರಕ್ಕೆ ನಾಮ ಬಳಿಯುವ ಸಿನಿ ಜಾಕಿಗಳ ಸಂಖ್ಯೆಯೂ ಇಲ್ಲಿ ಕಡಿಮೆ ಏನಲ್ಲ.

ಟಿವಿ ಹಾಗೂ ಆಡಿಯೋ ರೈಟ್ಸ್‌ನಲ್ಲೂ ಅಪಾರ ಲಾಭ

ಇಂದು ಸಿನಿಮಾ ಚಿತ್ರರಂಗದಲ್ಲಿ ಪ್ರದರ್ಶನ ಕಂಡು ಥಿಯೇಟರ್‌ನಲ್ಲಿ ದುಡಿಯುವುದಕ್ಕಿಂತ ಟಿವಿ ಹಾಗೂ ಆಡಿಯೋ ರೈಟ್ಸ್‌ನಲ್ಲಿ ದುಡಿಯುವುದೇ ಹೆಚ್ಚು. ಇದೇ ಕಾರಣಕ್ಕೆ ಟಿವಿಗಾಗಿಯೇ ಸಿನಿಮಾ ಮಾಡುವವರೂ ಇದ್ದಾರೆ. ಹೀಗೆ ಸಿನಿಮಾವೊಂದು ಟಿವಿಗೆ ಮಾರಾಟವಾದಾಗ ನಡೆಯುವ ವ್ಯವಹಾರಗಳು ಸಹ ಅಷ್ಟು ಪಾರದರ್ಶಕವಾಗಿರುವುದಿಲ್ಲ.

ದೊಡ್ಡ ಬಜೆಟ್ನ ಸಿನಿಮಾಗಳನ್ನು ಮಾತ್ರ ಕೊಳ್ಳುವ ಟಿವಿ ಮಂದಿ ನಿರ್ಮಾಪಕನ ಜೊತೆಗೆ ಮಾತನಾಡುವ ಹಣಕ್ಕೂ, ಚೆಕ್‌ ಮೂಲಕ ನೀಡುವ ಹಣಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಒಟ್ಟು ಮೊತ್ತದ ಶೇ 20 ಅಥವಾ 30ರಷ್ಟು ಹಣವನ್ನು ಮಾತ್ರ ಬ್ಯಾಂಕಿನ ಅಥವಾ ಚೆಕ್ ಮೂಲಕ ನೀಡಲಾಗುತ್ತದೆ. ಉಳಿದ ಹಣವನ್ನು ನಿರ್ಮಾಪಕನಿಗೆ ನಗದು ರೂಪದಲ್ಲೇ ನೀಡಲಾಗುತ್ತದೆ. ಹೀಗಾಗಿ ಈ ವ್ಯವಹಾರದ ಮೇಲೂ ನಿಗಾ ಇಡುವುದು ಅಸಾಧ್ಯವಾದ ಮಾತೇ ಸರಿ. ಇನ್ನೂ ಆಡಿಯೋ ರೈಟ್ಸ್‌ ಮೂಲಕ ಕೈಸೇರುವ ಹಣದ ಲೆಕ್ಕವೂ ಇದೇ ಕಥೆ.

ತೆರಿಗೆ ಕಳ್ಳರ ಮೇಲೆ ನಿಗಾ ಇಡಲು ಸರ್ಕಾರಗಳು ಚಾಪೆ ಕೆಳಗೆ ತೂರಿದರೆ, ತೆರಿಗೆಗಳ್ಳರು ರಂಗೋಲಿ ಕೆಳಗೆ ತೂರುತ್ತಾರೆ ಎಂಬುದಕ್ಕೆ ಕನ್ನಡ ಚಿತ್ರೋದ್ಯಮ ಒಂದು ಸ್ಪಷ್ಟ ಉದಾಹರಣೆ. ಇತರೆ ಚಿತ್ರರಂಗಗಳೂ ಇದಕ್ಕಿಂತ ಭಿನ್ನವಾಗೇನು ಇಲ್ಲ. ಆದರೆ ಒಂದು ಕಾಲದಲ್ಲಿ ಸಾಮಾಜಿಕ ಮೌಲ್ಯಗಳನ್ನು ಸಿನಿಮಾದ ಮೂಲಕ ಎತ್ತಿ ಹಿಡಿಯುತ್ತಿದ್ದ ಕನ್ನಡ ಚಿತ್ರರಂಗ, ಡಾ.ರಾಜ್‌ ಕುಮಾರ್, ಡಾ.ವಿಷ್ಣುವರ್ಧನ್‌ರಂತಹ ಮೇರು ನಟರನ್ನು ದೇಶಕ್ಕೆ ನೀಡಿದ ಕನ್ನಡಿಗರ ಹೆಮ್ಮೆಯ ಚಿತ್ರರಂಗ ಇಂದು ಕೇವಲ ಕಪ್ಪು ಹಣವನ್ನು ಬಿಳಿಯನ್ನಾಗಿಸುವ ಲಾಭಕೋರರ ಉದ್ಯಮವಾಗಿ ಬದಲಾಗುತ್ತಿದೆ ಎಂಬ ದಟ್ಟ ಆರೋಪಗಳು ಹಿಂದೆಯೇ ಕೇಳಿಬಂದಿತ್ತು. ಇದೀಗ ಐಟಿ ದಾಳಿ ಇಂತಹ ಆರೋಪಗಳಿಗೆ ಪುಷ್ಟಿ ನೀಡುತ್ತಿದೆ.