samachara
www.samachara.com
ಶಬರಿಮಲೆ ಪ್ರತಿಭಟನೆ ಹಿಂದಿದೆ ‘ನಿಯೊ-ಬ್ರಾಹ್ಮಣಿಸಂ’: ಏನದು?
COVER STORY

ಶಬರಿಮಲೆ ಪ್ರತಿಭಟನೆ ಹಿಂದಿದೆ ‘ನಿಯೊ-ಬ್ರಾಹ್ಮಣಿಸಂ’: ಏನದು?

ಪುರೋಹಿತಶಾಹಿಯನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿರುವ ಕಾಪಿಕ್ಕಾಡ್ ಅವರ ಮಾತುಗಳು ಶಬರಿಮಲೆ ಪ್ರತಿಭಟನೆ ಹಾಗೂ ಹಿಂದುತ್ವ ಸಂಘಟನೆಗಳ ಹಿಂದಿನ ಒಳಸುಳಿಗಳನ್ನು ಬಿಚ್ಚಿಡುತ್ತವೆ.

ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದ್ದರಿಂದ ಅಯ್ಯಪ್ಪ ದೇಗುಲ ಅಪವಿತ್ರಗೊಂಡಿದೆ ಎಂದು ಕೇರಳದಲ್ಲಿ ಹಿಂದುತ್ವ ಸಂಘಟನೆಗಳು ಗಲಭೆ ಸೃಷ್ಟಿಸಿವೆ. ಪ್ರತಿಭಟನೆಗಳು ಹಿಂಸಾಚಾರದ ಸ್ವರೂಪ ಪಡೆದುಕೊಂಡಿವೆ. ಈ ಪ್ರತಿಭಟನೆಗಳ ಮೂಲಕ ತಳಸಮುದಾಯದ ಕಾಲಾಳುಗಳನ್ನು ಮುಂಡಿಟ್ಟುಕೊಂಡು ಪುರೋಹಿತಶಾಹಿ ತನ್ನ ಸಾಂಪ್ರದಾಯಿಕ ಅಜೆಂಡಾ ಮರುಸ್ಥಾಪಿಸಲು ಹೊರಟಿದೆ. ಇದಕ್ಕೆ ಪ್ರತಿರೋಧ ತೋರುವ ದೊಡ್ಡ ದನಿಗಳು ರಾಷ್ಟ್ರಮಟ್ಟದಲ್ಲಿ ಕಾಣದಿದ್ದರೂ ಕೇರಳದಲ್ಲಿ ಈ ಪರಿಸ್ಥಿತಿಗೆ ಪ್ರತಿರೋಧ ತೋರುವ ಕೆಲವು ಭಿನ್ನದನಿಗಳಂತೂ ಮುನ್ನೆಲೆಗೆ ಬಂದಿವೆ. ಅಂಥವರ ಪೈಕಿ ಕೇರಳದ ‘ಭೂ ಅಧಿಕಾರ ಸಂರಕ್ಷಣ ಸಮಿತಿ’ಯ ಅಧ್ಯಕ್ಷ, ದಲಿತ ಹೋರಾಟಗಾರ ಸನ್ನಿ ಎಂ. ಕಾಪಿಕ್ಕಾಡ್ ಕೂಡಾ ಒಬ್ಬರು.

ಕೇರಳದಲ್ಲಿ ಹಿಂದುತ್ವ ಸಂಘಟನೆಗಳ ಮೇಲಾಟಕ್ಕೆ ಪ್ರತಿರೋಧವಾಗಿ ನಿಯೊ-ಬ್ರಾಹ್ಮಣಿಸಂ ವಿರೋಧಿ ಅಭಿಯಾನವನ್ನು ರೂಪಿಸುತ್ತಿರುವ ಪ್ರಮುಖ ದಲಿತ ಹೋರಾಟಗಾರ ಸನ್ನಿ ಎಂ. ಕಾಪಿಕ್ಕಾಡ್. ಮೇಲ್ವರ್ಗದ ಜಾತಿ ರಾಜಕಾರಣ ಹಾಗೂ ಶೂದ್ರ ಸಮುದಾಯಗಳ ಶ್ರೇಷ್ಠತೆಯ ವ್ಯವನದ ಬಗ್ಗೆ ತಳಸಮುದಾಯಗಳಲ್ಲಿ ಎಚ್ಚರ ಮೂಡಿಸುವ ಕೆಲಸವನ್ನು ಕಾಪಿಕ್ಕಾಡ್ ಕೇರಳದಲ್ಲಿ ಮಾಡುತ್ತಾ ಬಂದಿದ್ದಾರೆ. ಪುರೋಹಿತಶಾಹಿಯನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿರುವ ಕಾಪಿಕ್ಕಾಡ್ ಅವರ ಮಾತುಗಳು ಶಬರಿಮಲೆ ಪ್ರತಿಭಟನೆ ಹಾಗೂ ಹಿಂದುತ್ವ ಸಂಘಟನೆಗಳ ಹಿಂದಿನ ಒಳಸುಳಿಗಳನ್ನು ಬಿಚ್ಚಿಡುತ್ತವೆ. ಅವರು ಆಡುತ್ತಿರುವ ನಿಷ್ಠುರ ಮಾತುಗಳ ಕಾರಣಕ್ಕೇ ಅವರನ್ನು ಜೀವಂತವಾಗಿ ಸುಡುವ ಬೆದರಿಕೆಯನ್ನೂ ಹಿಂದುತ್ವ ಸಂಘಟನೆಗಳು ಹಾಕಿವೆ. ಕಾಪಿಕ್ಕಾಡ್ ‘ದಿ ಸ್ಕ್ರಾಲ್‌’ಗೆ ನೀಡಿರುವ ಸಂದರ್ಶನದ ಪ್ರಮುಖ ಭಾಗಗಳು ಇಲ್ಲಿವೆ:

ಸನ್ನಿ ಎಂ. ಕಾಪಿಕ್ಕಾಡ್
ಸನ್ನಿ ಎಂ. ಕಾಪಿಕ್ಕಾಡ್

ಹಿಂದುತ್ವ ಸಂಘಟನೆಗಳು ನಿಮ್ಮನ್ನು ಜೀವಂತ ಸುಡುವುದಾಗಿ ಬೆದರಿಕೆ ಹಾಕಿರುವುದೇಕೆ?

ಹಿಂದುತ್ವ ಸಂಘಟನೆಗಳು ನನ್ನನ್ನು ಜೀವಂತ ಸುಡುವುದಾಗಿ ಬೆದರಿಕೆ ಹಾಕಿವೆ. ಕೇರಳದಲ್ಲಿ ಹಿಂದುತ್ವ ಶಕ್ತಿಗಳ ವಿರುದ್ಧ, ಹಿಂದುತ್ವ ಸಂಘಟನೆಗಳು ದೇಶದ ಸಂವಿಧಾನ ಸುಡುವುದರ ವಿರುದ್ಧ ನಾನು ಬಹಿರಂಗವಾಗಿ ಮಾತನಾಡಿದ್ದಕ್ಕೆ ನನಗೆ ಜೀವ ಬೆದರಿಕೆ ಹಾಕಲಾಗುತ್ತಿದೆ. ಸಂವಿಧಾನ ಸುಡುವುದರ ಬದಲು ‘ತಂತ್ರ ಸಮುಚಯಮ್‌’ ಸುಡುವಂತೆ ನಾನು ಹೇಳಿದ್ದೆ. (ಕೇರಳದ ದೇವಸ್ಥಾನಗಳ ತಾಂತ್ರಿಕ ಆಚರಣೆಯ ಮೂಲ ಈ ‘ತಂತ್ರ ಸಮುಚಯಮ್‌’. ಸುಮಾರು 500 ವರ್ಷಗಳ ಹಿಂದೆ ಚೆನ್ನಾಸ್‌ ನಾರಾಯಣನ್‌ ನಂಬಿಯಾರ್ ರಚಿಸಿರುವ ತಾಂತ್ರಿಕ ಕೃತಿ ಇದು. 2016ರಲ್ಲಿ ಶಬರಿಮಲೆ ವಿಚಾರ ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬಂದಾಗ ಮುಟ್ಟು ಅಪವಿತ್ರ ಎಂದು ಹೇಳಲು ಶಬರಿಮಲೆ ಪ್ರಧಾನ ತಂತ್ರಿ ಈ ಕೃತಿಯ ಉಲ್ಲೇಖಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದ್ದರು. ಶೂದ್ರರಿಗಿಂತ ಕೆಳಜಾತಿಗಳ ಜನರು ಅಪವಿತ್ರ ಎಂದು ಹೇಳುವ ಈ ಕೃತಿ ಕೆಳಜಾತಿಗಳ ಜನರ ಪ್ರವೇಶದಿಂದ ದೇವಾಲಯ ಅಪವಿತ್ರವಾಗುತ್ತದೆ ಎಂದೂ ಈ ಕೃತಿ ಹೇಳುತ್ತದೆ.)

ಹಿಂದುತ್ವ ಹಾಗೂ ಬ್ರಾಹ್ಮಣಶಾಹಿಯ ಅಸಮಾನತೆ, ಅನಿಷ್ಟಗಳನ್ನು ಬೌದ್ಧಿಕವಾಗಿ ತರ್ಕಬದ್ಧವಾಗಿ ವಿರೋಧಿಸುತ್ತಿರುವ ದಲಿತ ನಾನು. ಹೀಗಾಗಿ ಅವರು ನನ್ನನ್ನು ಕೊಲ್ಲುವ ಬೆದರಿಕೆ ಹಾಕುತ್ತಿದ್ದಾರೆ. ಬಲಪಂಥೀಯ ಶಕ್ತಿಗಳು ಯಾವಾಗಲೂ ಲೇಖಕರು ಮತ್ತು ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿರುತ್ತವೆ. ಆದರೆ, ಈಗ ಅವರು ನನ್ನನ್ನು ಜೀವಂತ ಸುಡಲು ಹೊರಟಿದ್ದಾರೆ. ದಲಿತರನ್ನು ಸುಡುವುದು ಅವರಿಗೆ ಅಭ್ಯಾಸವಾಗಿದೆ. ಹಿಂದುತ್ವವಾದಿಗಳು ಈ ಹಿಂದೆ ದೇಶದಲ್ಲಿ ಸಾವಿರಾರು ದಲಿತರನ್ನು ಜೀವಂತ ಸುಟ್ಟಿದ್ದಾರೆ. ಆದರೂ ನಾನೇನು ಈ ಬೆದರಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಹಿಂದುತ್ವ ಶಕ್ತಿಗಳು ನನ್ನನ್ನು ಕೊಲ್ಲಲೇಬೇಕೆಂದು ನಿರ್ಧರಿಸಿದರೆ ಅವರು ಅದನ್ನು ಮಾಡೇ ಮಾಡುತ್ತಾರೆ. ಅವರ ಇಂಥ ಯೋಜನೆಗಳನ್ನು ಜಾರಿಗೆ ತರಲು ಅವರಲ್ಲಿ ಹಣಬಲ, ಜನಬಲ ಎರಡೂ ಇದೆ. ಆದರೆ, ನಾನು ಎಷ್ಟು ದಿನ ಬದುಕಿರುತ್ತೇನೋ ಅಷ್ಟೂ ದಿನವೂ ಹಿಂದುತ್ವ ಶಕ್ತಿಗಳ ಹಾಗೂ ಬ್ರಾಹ್ಮಣಶಾಹಿ ವಿರುದ್ಧ ಹೋರಾಡುತ್ತಲೇ ಇರುತ್ತೇನೆ.

ಶಬರಿಮಲೆ ಪ್ರತಿಭಟನೆ ಹಿಂದಿದೆ ‘ನಿಯೊ-ಬ್ರಾಹ್ಮಣಿಸಂ’: ಏನದು?

ಕೇರಳದ ಪ್ರಜ್ಞಾವಂತ ಉದಾರವಾದಿ ಸಮಾಜ ನಿರ್ಮಾಣಕ್ಕೆ ಕಾರಣ ತಾವು ಎಂದು ಕಮ್ಯುನಿಸ್ಟ್‌ ಪಕ್ಷಗಳು ಹೇಳಿಕೊಳ್ಳುತ್ತಿವೆ. ಶಬರಿಮಲೆ ತೀರ್ಪಿನ ಹಿನ್ನೆಲೆಯಲ್ಲಿ ನೋಡಿದರೆ ಇದು ನಿಜ ಎಂದು ನಿಮಗೆ ಅನಿಸುತ್ತದೆಯೇ?

ದಲಿತ ಮತ್ತು ಮಹಿಳಾ ಹಕ್ಕುಗಳ ಸಂಘಟನೆಗಳೂ ಕೂಡಾ ಎರಡು ದಶಕಗಳಿಂದ ಕೇರಳದ ಪ್ರಜ್ಞಾವಂತ, ಉದಾರವಾದಿ ಸಮಾಜ ನಿರ್ಮಾಣದ ಹಿಂದೆ ತಾವಿದ್ದೇವೆ ಎಂದು ಹೇಳಿಕೊಳ್ಳುತ್ತಿವೆ. ಆದರೆ, ಇದನ್ನು ಒಪ್ಪಲು ಕೇರಳದ ಸಮಾಜ ಸಿದ್ಧವಿಲ್ಲ. ಕೇರಳೀಯರಲ್ಲಿ ಉದಾರವಾದ ಇದೆ ಎಂಬುದನ್ನು ನಾನು ಒಪ್ಪುತ್ತೇನೆ. ಮುಂದುವರಿದ ಆಧುನಿಕ ಸಮಾಜದಲ್ಲಿ ಮಾತ್ರ ಈ ಉದಾರವಾದ ಮತ್ತು ಸಾಮಾಜಿಕ ಪ್ರಜ್ಞೆ ಇದೆ. ಆದರೆ, ಜಾತಿ ಕೂಡಾ ಈ ಪ್ರಜ್ಞೆಯನ್ನು ನಿರ್ಧರಿಸುವ ಅಂಶವಾಗಿರುತ್ತದೆ.

ಉದಾಹರಣೆಗೆ, 2007ರ ಅಜ್ಮೀರ್‌ ಸ್ಫೋಟ ಪ್ರಕರಣದಲ್ಲಿ ಆರ್‌ಎಸ್‌ಎಸ್‌ನ ಸುರೇಶ್‌ ನಾಯರ್ ಬಂಧನದ ವೇಳೆ ಕೇರಳೀಯರ ಪ್ರತಿಕ್ರಿಯೆಗಳನ್ನು ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ. ನಾಯರ್‌ ಹುಟ್ಟಿದ್ದು ಕೇರಳದಲ್ಲಿ. ಸ್ಫೋಟಕಗಳನ್ನು ದರ್ಗಾಗೆ ಸಾಗಿಸಿದ ಗಂಭೀರ ಆರೋಪ ನಾಯರ್‌ ಮೇಲಿದೆ. ನಾಯರ್‌ ಬಂಧನದ ಬಳಿಕ ಕೇರಳದ ಈ ಉನ್ನತ ಸಮಾಜ ಬಾಯಿ ತೆರೆಯಲಿಲ್ಲ. ಅದೇ ನಾಯರ್‌ ಜಾಗದಲ್ಲಿ ಕೇರಳದ ಮುಸ್ಲಿಂ ಒಬ್ಬನ ಬಂಧನವಾಗಿದ್ದರೆ ಭಯೋತ್ಪಾದನೆಯ ಸಂಚಿನ ಆಳ, ಅಗಲಗಳ ಸಿದ್ಧಾಂತಗಳನ್ನು ಇದೇ ನಾಯರ್‌ ಸಮುದಾಯದ ಜನ ಮುಂದಿಡುತ್ತಿದ್ದರು. ಕೇರಳದಲ್ಲಿ ಉದಾರವಾದ ಹಾಗೂ ಸಾಮಾಜಿಕ ಪ್ರಜ್ಞೆ ಜಾತಿಯೊಂದಿಗೆ ಜೋಡಿಸಿಕೊಂಡಿರುವುದು ಹೀಗೆ.

ಶಬರಿಮಲೆ ಪ್ರತಿಭಟನೆ ಹಿಂದಿದೆ ‘ನಿಯೊ-ಬ್ರಾಹ್ಮಣಿಸಂ’: ಏನದು?

ನೀವು ನಿಮ್ಮ ಭಾಷಣಗಳಲ್ಲಿ ಯಾವಾಗಲೂ ಕೇರಳದಲ್ಲಿ ನಿಯೊ-ಬ್ರಾಹ್ಮಣಿಸಂ (ಲಘು/ಅರೆ- ಬ್ರಾಹ್ಮಣಶಾಹಿ) ಬೆಳೆಯುತ್ತಿರುವ ಬಗ್ಗೆ ಮಾತನಾಡುತ್ತಿರುತ್ತೀರಿ. ಈ ನಿಯೊ-ಬ್ರಾಹ್ಮಣಿಸಂ ಅಂದರೆ ಏನು? ಇದು ಹೇಗೆ ಬೆಳೆಯುತ್ತಿದೆ?

ಕೇರಳ ಸಮಾಜದಲ್ಲಿ ಬ್ರಾಹ್ಮಣಶಾಹಿ ಹಬ್ಬುವುದು ನಿಂತಿಲ್ಲ. ಅದು ಈ ಕಾಲಕ್ಕೆ ತಕ್ಕಂತೆ ನನ್ನ ಕಾರ್ಯಸ್ವರೂಪ ಮತ್ತು ವೇಷವನ್ನು ಬದಲಿಸಿಕೊಂಡಿದೆ. ಆದರೆ, ಬ್ರಾಹ್ಮಣಶಾಹಿಯ ಬಲವೇ ಸರ್ವಶ್ರೇಷ್ಠ ಎಂಬ ಮೂಲ ಕಲ್ಪನೆ ಬದಲಾಗಿಲ್ಲ. 19ನೇ ಶತಮಾನದ ಹೊತ್ತಿಗೆ ಬ್ರಾಹ್ಮಣಶಾಹಿ ಧಾರ್ಮಿಕ ಆಚರಣೆಗಳ ಕಡೆಗೆ ಹೆಚ್ಚು ಗಮನ ಹರಿಸಿತ್ತು. ಆದರೆ, ಈ 21ನೇ ಶತಮಾನದಲ್ಲಿ ಬ್ರಾಹ್ಮಣಶಾಹಿ ತನ್ನ ಗಮನವನ್ನು ರಾಜಕೀಯದ ಕಡೆಗೆ ಹರಿಸಿದೆ. ಇಡೀ ಭಾರತವೇ ಬ್ರಾಹ್ಮಣಶಾಹಿ ಸಂಪ್ರದಾಯಗಳಿಗೆ ಅನುಗುಣವಾಗಿ ಬದುಕಬೇಕು ಎಂಬುದನ್ನು ದೇಶದಲ್ಲಿ ಬಿತ್ತಲಾಗುತ್ತಿದೆ. ಬ್ರಾಹ್ಮಣಶಾಹಿಯೇ ಶ್ರೇಷ್ಠ ಎಂಬುದನ್ನು ದೇಶದ ಹಿಂದುಳಿದ ಹಾಗೂ ದಲಿತ ಯುವಜನರ ತಲೆಗೆ ತುಂಬಲಾಗುತ್ತಿದೆ. ಈ ನಿಯೊ-ಬ್ರಾಹ್ಮಣಿಸಂನ ಹುಸಿ ಭ್ರಮೆಗೆ ಹೆಚ್ಚಿನ ಸಂಖ್ಯೆಯ ದಲಿತ ಯುವಕರು ಬಲಿಯಾಗುತ್ತಿದ್ದಾರೆ. ದೇಶದಲ್ಲೇ ಹೆಚ್ಚು ಪ್ರಜ್ಞಾವಂತ ರಾಜ್ಯ ಎಂದು ಹೇಳಿಕೊಳ್ಳುವ ಕೇರಳದಲ್ಲೂ ಈ ಭ್ರಮೆಯನ್ನು ಹೆಚ್ಚೆಚ್ಚು ಬಿತ್ತಲಾಗುತ್ತಿದೆ.

ಸುಪ್ರೀಂಕೋರ್ಟ್‌ ತೀರ್ಪಿನ ವಿರುದ್ಧ ನಡೆಯುತ್ತಿರುವ ಶಬರಿಮಲೆ ಪ್ರತಿಭಟನೆಗಳೂ ಕೂಡಾ ಈ ನಿಯೊ-ಬ್ರಾಹ್ಮಣಿಸಂ ಅಭಿಯಾನದ ಭಾಗವೇ?

ಖಂಡಿತ. ನಿಯೊ-ಬ್ರಾಹ್ಮಣಿಸಂ ಅಭಿಯಾನವೇ ಈ ಪ್ರತಿಭಟನೆಗಳನ್ನೂ ಸಂಘಟಿಸುತ್ತಿರುವುದು. ಮೇಲ್ವರ್ಗದ ನಾಯರ್‌ ಸಮುದಾಯ ಈ ಪ್ರತಿಭಟನೆಗಳನ್ನು ಮುನ್ನಡೆಸುತ್ತಿದೆ. ಬ್ರಾಹ್ಮಣಶಾಹಿ ಶಕ್ತಿಗಳನ್ನು ರಕ್ಷಿಸಿಕೊಳ್ಳಲು ‘ನಾಯರ್‌ ಸೇವಾ ಸಮಾಜ’ ಇತರೆ ಹಿಂದುತ್ವ ಸಂಘಟನೆಗಳ ಜತೆಗೆ ಕೈ ಜೋಡಿಸಿದೆ. ಚುನಾವಣಾ ರಾಜಕೀಯದ ಕಾರಣಕ್ಕೆ ಕೇರಳದ ಪ್ರಮುಖ ರಾಜಕೀಯ ಪಕ್ಷಗಳೂ ನಾಯರ್‌ ಸೇವಾ ಸಮಾಜದ ನಡೆಗಳನ್ನು ಪ್ರಶ್ನಿಸುತ್ತಿಲ್ಲ. ಇದನ್ನು ಸಂಘ ಪರಿವಾರ ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದೆ.

ಶಬರಿಮಲೆ ವಿಚಾರವಾಗಿ ಸುಪ್ರಿಂಕೋರ್ಟ್‌ ತೀರ್ಪಿಗೆ ವಿರುದ್ಧವಾಗಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಕೇರಳದ ಪ್ರಮುಖ ಎಡಪಕ್ಷಗಳು ತಪ್ಪಾಗಿ ವ್ಯಾಖ್ಯಾನಿಸುತ್ತಿವೆ. ಈಗ ನಡೆಯುತ್ತಿರುವ ಗಲಭೆಗಳಿಗೆ ಈ ಎಡಪಕ್ಷಗಳು ಕೇವಲ ಸಂಘ ಪರಿವಾರವನ್ನು ಮಾತ್ರ ಟೀಕೆ ಮಾಡುತ್ತಿವೆ. ನಾಯರ್‌ ಸಮುದಾಯ ಮುನ್ನಡೆಸುತ್ತಿರುವ ನಿಯೊ-ಬ್ರಾಹ್ಮಣಿಸಂ ಅಭಿಯಾನದ ಬಗ್ಗೆ ಈ ಪಕ್ಷಗಳು ಜಾಣ ಕುರುಡು ಪ್ರರ್ಶಿಸುತ್ತಿವೆ.

ಶಬರಿಮಲೆ ಪ್ರತಿಭಟನೆ ಹಿಂದಿದೆ ‘ನಿಯೊ-ಬ್ರಾಹ್ಮಣಿಸಂ’: ಏನದು?

ನಾಯರ್‌ಗಳನ್ನು ನೀವು ‘ಮಲಯಾಳಿ ಶೂದ್ರರು’ ಎಂದು ಕರೆದಿದ್ದೇಕೆ? ಕೇರಳದ ಸಮಾಜದ ಮೇಲೆ ಅವರ ಪ್ರಭಾವ ಎಂಥದ್ದು?

ನಾಯರ್‌ಗಳನ್ನು ನಾನು ಮಲಯಾಳಿ ಶೂದ್ರರು ಎಂದು ಕರೆಯಲು ಐತಿಹಾಸಿಕ ಆಧಾರಗಳಿವೆ. ಕೇರಳದಲ್ಲಿ ಕ್ಷತ್ರಿಕ ಸಮುದಾಯ ಇರಲಿಲ್ಲ. ಈ ಕೊರತೆಯನ್ನು ಬಂಡವಾಳ ಮಾಡಿಕೊಂಡ ಪ್ರಬಲ ಶೂದ್ರ ಸಮುದಾಯಗಳು ತಮ್ಮನ್ನು ಕ್ಷತ್ರಿಯರೆಂದು ಕರೆದುಕೊಂಡವು. ಮತ್ತು ಇದೇ ಸಮುದಾಯಗಳು ಇಂದು ಬ್ರಾಹ್ಮಣಶಾಹಿಯ ರಕ್ಷಣೆಗೆ ನಿಂತಿವೆ.

ಕೇರಳದಲ್ಲಿ ಶತಮಾನಗಳ ಹಿಂದೆ ಸರಕಾರಿ ಕೆಲಸದಲ್ಲಿ ತಮಿಳು ಬ್ರಾಹ್ಮಣರ ಪ್ರಾಬಲ್ಯ ಹೆಚ್ಚಾಗಿದ್ದಾಗ 1891ರಲ್ಲಿ ಸಾವಿರಾರು ಸಂಖ್ಯೆಯ ಮಲಯಾಳಿ ಶೂದ್ರರು ತಮಗೂ ಸರಕಾರಿ ಕೆಲಸದಲ್ಲಿ ಆದ್ಯತೆ ನೀಡುವಂತೆ ಟ್ರವಾಂಕೋರ್‌ ಮಹಾರಾಜರಿಗೆ ಮನವಿ ಪತ್ರ ಸಲ್ಲಿಸಿದ್ದರು. ಆ ಮನವಿ ಪತ್ರದಲ್ಲಿ ನಾಯರ್‌ಗಳೂ ಕೂಡಾ ತಮ್ಮನ್ನು ಶೂದ್ರರೆಂದು ಗುರುತಿಸಿಕೊಂಡಿದ್ದಾರೆ.

ಆಗ ಶೂದ್ರ ಸಮುದಾಯಗಳನ್ನು ಒಗ್ಗೂಡಿಸಿದ ನಾಯರ್‌ ಸಮುದಾಯ ದಿನ ಕಳೆದಂತೆ ತನ್ನ ಜಾತಿಯ ಶ್ರೇಷ್ಠತೆಯನ್ನು ಬಿಂಬಿಸಿಕೊಳ್ಳಲು ಆರಂಭಿಸಿತ್ತು. ನಾಯರ್‌ ಸೇವಾ ಸಮಾಜದ ಸ್ಥಾಪಕ ಮನ್ಥು ಪದ್ಮನಾಭನ್‌ ಈ ಶ್ರೇಷ್ಠತೆಯ ವ್ಯಸನವನ್ನು ಬಿತ್ತಿದ್ದರು. ಈಗ ಕೇರಳ ಸರಕಾರದ ಆಯಕಟ್ಟಿನ ಜಾಗಗಳಲ್ಲಿ ನಾಯರ್‌ ಸಮುದಾಯದವರಿದ್ದಾರೆ. ಆದರೆ, ಮೇಲ್ವರ್ಗದ ಜನರಿಗೆ ಸರಕಾರಿ ಕೆಲಸಗಳಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ವಾದಿಸುತ್ತಿರುವ ಇವರು, ಇದಕ್ಕಾಗಿ ಮೇಲ್ವರ್ಗದವರಿಗೆ ಉದ್ಯೋಗ ಮೀಸಲಾತಿ ಜಾರಿಗೆ ತರುವಂತೆ ಒತ್ತಾಯಿಸುತ್ತಿದ್ದಾರೆ. ಕೇರಳದಲ್ಲಿ ಕ್ರೈಸ್ತರು ಮತ್ತು ಮುಸ್ಲಿಂ ಸಮುದಾಯಗಳ ವಿರುದ್ಧ ಹಿಂದುಗಳಲ್ಲಿ ದ್ವೇಷ ಭಾವನೆ ಬಿತ್ತುತ್ತಿರುವುದೂ ಇವರೇ.

ಈಳವ ಸಮುದಾಯದ ನಾಯಕ ಆರ್‌. ಶಂಕರ್‌ ಜತೆಗೆ ‘ಹಿಂದೂ ಮಹಾಮಂಡಲ್‌’ ಕಟ್ಟಲು ಹೊರಟ ನಾಯರ್ ಸೇವಾ ಸಮಾಜದ ಸ್ಥಾಪಕ ಮನ್ಥು ಪದ್ಮನಾಭನ್‌ ಆ ಪ್ರಯತ್ನದಲ್ಲಿ ಸೋತರು. ಆದರೆ, ಸಂಘ ಪರಿವಾರ ಇಂದು ಏನು ಮಾಡುತ್ತಿದೆಯೋ ಅದನ್ನು ಪದ್ಮನಾಭನ್‌ ಕೇರಳದಲ್ಲಿ ಹಿಂದೆಯೇ ಮಾಡಿ ಆಗಿದೆ.

ಕೇರಳದಲ್ಲಿ ಪುನರುತ್ಥಾನ ಚಳವಳಿ ರೂಪಿಸಿದ ನಾರಾಯಣ ಗುರು ಮತ್ತು ಅಯ್ಯನ್‌ಕಾಲಿ
ಕೇರಳದಲ್ಲಿ ಪುನರುತ್ಥಾನ ಚಳವಳಿ ರೂಪಿಸಿದ ನಾರಾಯಣ ಗುರು ಮತ್ತು ಅಯ್ಯನ್‌ಕಾಲಿ

ಕೇರಳದಲ್ಲಿ ನಿಯೊ-ಬ್ರಾಹ್ಮಣಿಸಂನ ರಾಜಕೀಯ ಸಿದ್ಧಾಂತಗಳ ವ್ಯಾಕರಣ ಈಗ ಹೇಗೆ ಬದಲಾಗಿದೆ?

ಎಡಪಂಥೀಯ ಸಿದ್ಧಾಂತಗಳನ್ನು ಒಪ್ಪಿಕೊಂಡಿದ್ದ ಕೇರಳದ ಸಮಾಜದಲ್ಲಿ ಸಮಾಜವಾದ, ಉದಾರವಾದ ಮತ್ತು ವರ್ಗ ಸಂಘರ್ಷಗಳ ರಾಜಕೀಯ ಪ್ರಜ್ಞೆ ಇತ್ತು. ಆದರೆ, ಈಗ ಆ ಜಾಗವನ್ನು ಬಲಪಂಥೀಯ ಸಂಪ್ರದಾಯ, ಆಚರಣೆ, ತಂತ್ರಿಗಳು, ರಾಜಮನೆತನ ಮತ್ತು ‘ತಂತ್ರ ಸಮುಚಯಮ್‌’ಗಳು ಆವರಿಸಿಕೊಳ್ಳುತ್ತಿವೆ. ಸುಪ್ರೀಂಕೋರ್ಟ್‌ ತೀರ್ಪಿನ ನಂತರ ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ.

ಹಲವು ರಾಜಕೀಯ ವಿಶ್ಲೇಷಕರು ಈ ಬೆಳವಣಿಗೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ, ನನ್ನ ಮಟ್ಟಿಗೆ ಇದು ಆಶ್ಚರ್ಯ ಎನಿಸಲಿಲ್ಲ. ಯಾಕೆಂದರೆ ನಿಯೊ-ಬ್ರಾಹ್ಮಣಿಸಂಗೆ ವಿರುದ್ಧವಾಗಿ ವರ್ಗ ರಾಜಕಾರಣ ಕೆಲಸ ಮಾಡುವುದಿಲ್ಲ ಎಂಬುದು ನನಗೆ ಗೊತ್ತಿತ್ತು. ಹೀಗಾಗಿ ಕೇರಳ ಪುನರುತ್ಥಾನ ಚಳವಳಿಯ ಕೆಲಸಗಳನ್ನು ಈ ಹೊತ್ತಿನಲ್ಲಿ ಮುನ್ನೆಲೆಗೆ ತಂದು ನೆನಪಿಸಬೇಕಾದ್ದು ಅಗತ್ಯ ಎಂದು ನನಗೆ ಅನ್ನಿಸಿದೆ. ಕೇರಳ ಪುನರುತ್ಥಾನಕ್ಕಾಗಿ ಈ ಹಿಂದೆ ಹೋರಾಟ ಮಾಡಿದವರ ಕೆಲಸವನ್ನು ನೆನಪಿಸುವ ಅಗತ್ಯ ಈಗ ಹೆಚ್ಚಾಗಿದೆ.

ಕೇರಳದ ಪುನರುತ್ಥಾನದ ಪ್ರಾಮುಖ್ಯತೆಯನ್ನು ಅರಿತಿರುವ ಸಿಪಿಐ(ಎಂ) ಮುಖಂಡರ ಪೈಕಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕೂಡಾ ಒಬ್ಬರು. ಕೇರಳದಲ್ಲಿ ಹಿಂದುತ್ವ ಸಂಘಟನೆಗಳು ‘ಶಬರಿಮಲೆ ಉಳಿಸಿ’ ಎಂದು ಅಬ್ಬರಿಸುತ್ತಿದ್ದ ಹೊತ್ತಿನಲ್ಲಿ, ಕೇರಳದ ಪುನರುತ್ಥಾನಕ್ಕಾಗಿ ಹೋರಾಡಿದ ನಾರಾಯಣ ಗುರು, ಅಯ್ಯನ್‌ಕಾಲಿ ಅವರ ಕೆಲಸಗಳನ್ನು ಸ್ಮರಿಸಬೇಕೆಂದು ವಿಜಯನ್‌ ಸಾರ್ವಜನಿಕ ಸಮಾರಂಭಗಳಲ್ಲಿ ಪದೇ ಪದೇ ಹೇಳುತ್ತಾ ಬರುತ್ತಿದ್ದಾರೆ. ಹಿಂದುತ್ವ ಸಂಘಟನೆಗಳನ್ನು ಎದುರಿಸಲು ಇದೊಂದು ಒಳ್ಳೆಯ ಮಾರ್ಗ ಎಂದು ನನಗೆ ಅನಿಸುತ್ತದೆ. ನಿಯೊ-ಬ್ರಾಹ್ಮಣಿಸಂ ಅಭಿಯಾನವನ್ನು ಒಡೆದುಹಾಕಲು ಕೇರಳ ಪುನರುತ್ಥಾನದ ನೆನಪು ಹಾಗೂ ಮಹತ್ವವನ್ನು ಸಾರಲು ಇದು ಸೂಕ್ತ ಸಮಯ ಎಂದು ವಿಜಯನ್‌ಗೆ ಗೊತ್ತಿದೆ.

ಭಾರತಕ್ಕೆ ಮೊದಲ ದಲಿತ ರಾಷ್ಟ್ರಪತಿಯಾಗಿ 1997ರಲ್ಲಿ ಕೆ.ಆರ್‌. ನಾರಾಯಣನ್‌, ಸುಪ್ರೀಂಕೋರ್ಟ್‌ನ ಮೊದಲ ದಲಿತ ಮುಖ್ಯ ನ್ಯಾಯಮೂರ್ತಿಯಾಗಿ 2007ರಲ್ಲಿ ಕೆ.ಜಿ. ಬಾಲಕೃಷ್ಣ ಆಯ್ಕೆಯಾಗಿದ್ದರು. ಇವರಿಬ್ಬರೂ ಕೇರಳದಿಂದ ಬಂದವರು. ಈ ಸಾಧನೆಗೆ ಕೇರಳದ ಪುನರುತ್ಥಾನ ಚಳವಳಿ ಕಾರಣ ಎಂದು ನಿಮಗೆ ಅನಿಸುತ್ತದೆಯೇ?

ನಿಜವಾಗಿಯೂ ಕೇರಳ ಪುನರುತ್ಥಾನ ಚಳವಳಿ ಕೇರಳದ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪುನರುತ್ಥಾನ ಚಳವಳಿಯ ನಂತರವೇ ದಲಿತರು ಹಾಗೂ ಸಮಾಜದ ತಳವರ್ಗದಿಂದ ಬಂದ ಜನ ಶಿಕ್ಷಣ ಪಡೆಯುವಂತಾಯಿತು. ಕೆ.ಆರ್‌. ನಾರಾಯಣನ್‌ ಕಾಂಗ್ರೆಸ್‌ನಲ್ಲಿದ್ದ ಕಾರಣಕ್ಕೆ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಸಾಧ್ಯವಾಯಿತು. ಅವರು ಒಂದು ವೇಳೆ ಸಿಪಿಐ(ಎಂ) ಪಕ್ಷದಲ್ಲಿ ಇದ್ದಿದ್ದರೆ ಅವರು ಅವರ ಹಳ್ಳಿಯ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಲು ಮಾತ್ರ ಸಾಧ್ಯವಿತ್ತು. ಸಿಪಿಐ(ಎಂ) ಇತಿಹಾಸದಲ್ಲಿ ಪಕ್ಷದ ಪಾಲಿಟ್‌ ಬ್ಯೂರೋದಲ್ಲಿ ಒಬ್ಬೇ ಒಬ್ಬ ದಲಿತನಿಗೂ ಈವರೆಗೆ ಜಾಗ ಸಿಕ್ಕಿಲ್ಲ.

ನಿಯೊ-ಬ್ರಾಹ್ಮಣಿಸಂ ಅಭಿಯಾನಕ್ಕೆ ಪ್ರತಿರೋಧವಾಗಿ ನಿಮ್ಮ ಮುಂದಿನ ನಡೆಗಳೇನು?

ಮೊದಲ ಹೆಜ್ಜೆಯಾಗಿ ನಾವು ಬ್ರಾಹ್ಮಣಶಾಹಿ ಸಾಂಪ್ರದಾಯಿಕ ನಂಬಿಕೆಗಳ ಹೇರುವಿಕೆಯನ್ನು ವಿರೋಧಿಸುತ್ತಿದ್ದೇವೆ. ಬ್ರಾಹ್ಮಣಶಾಹಿ ಅಧಿಕಾರವೇ ಶ್ರೇಷ್ಠ ಎಂಬುದು ಪ್ರಜಾಪ್ರಭುತ್ವ ವಿರೋಧಿಯಾದುದು ಎಂಬ ವಿಚಾರಗಳನ್ನು ನಾವು ತಳ ಸಮುದಾಯದಲ್ಲಿ ಬಿತ್ತುತ್ತಿದ್ದೇವೆ. ಬ್ರಾಹ್ಮಣಶಾಹಿಯನ್ನು ರಕ್ಷಿಸಲು ಸಂಘಟಿಸುತ್ತಿರುವ ಶಬರಿಮಲೆ ಪ್ರತಿಭಟನೆಗಳಿಂದ ದಲಿತರು, ಹಿಂದುಳಿದವರು, ಆದಿವಾಸಿಗಳು ಹೊರ ಬರಬೇಕಿದೆ. ಈ ಬಗ್ಗೆ ಎಚ್ಚರಿಕೆ ಮೂಡಿಸುವ ಕೆಲಸವನ್ನೂ ನಾವು ಮಾಡುತ್ತಿದ್ದೇವೆ.