samachara
www.samachara.com
ಸ್ಯಾಂಡಲ್‌ವುಡ್ ಪ್ರಮುಖರ ಮೇಲೆ ಐಟಿ ದಾಳಿ; ಕಪ್ಪು ಹಣದ ತನಿಖೆ ಕುರಿತಾದ ‘ಸಾಮಾನ್ಯ ಜ್ಞಾನ’ ಇಲ್ಲಿದೆ...
COVER STORY

ಸ್ಯಾಂಡಲ್‌ವುಡ್ ಪ್ರಮುಖರ ಮೇಲೆ ಐಟಿ ದಾಳಿ; ಕಪ್ಪು ಹಣದ ತನಿಖೆ ಕುರಿತಾದ ‘ಸಾಮಾನ್ಯ ಜ್ಞಾನ’ ಇಲ್ಲಿದೆ...

‘ಐಟಿ ದಾಳಿ’ ಎಂದು ಕರೆಯಲಾಗುವ ‘ಸರ್ಚ್‌ ಮತ್ತು ಸೀಝ್‌’ ಕಾರ್ಯಾಚರಣೆ ಕಪ್ಪು ಹಣದ ಬಗ್ಗೆ ತನಿಖೆ ನಡೆಸಲು ಐಟಿ ಇಲಾಖೆಗಿರುವ ಪ್ರಬಲ ಅಸ್ತ್ರ. ಆದರೆ ಐಟಿ ದಾಳಿ ಸುಖಾಸುಮ್ಮನೆ ನಡೆಯುವುದಿಲ್ಲ.

ಹೊಸ ವರ್ಷದ ಆರಂಭದಲ್ಲೇ ಆದಾಯ ತೆರಿಗೆ ಇಲಾಖೆ ಕರ್ನಾಟಕದಲ್ಲಿ ಸುದ್ದಿ ಕೇಂದ್ರಕ್ಕೆ ಬಂದಿದೆ. ‘ಐಟಿ ದಾಳಿ’ ಎಂಬ ಬೆಳವಣಿಗೆಗೆ ಕನ್ನಡ ಚಿತ್ರರಂಗ ಅಪರೂಪಕ್ಕೆ ಸಾಕ್ಷಿಯಾಗಿದೆ. ಪಕ್ಕದ ಚಿತ್ರರಂಗಗಳಲ್ಲಿ ಈ ಹಿಂದೆಯೇ ಸದ್ದು ಮಾಡಿದ್ದ ಐಟಿ ಅಧಿಕಾರಿಗಳು ಇಂದು ಚಂದನವನದಲ್ಲೂ ಸುದ್ದಿ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕರಾದ ಸಿ.ಆರ್‌. ಮನೋಹರ್‌, ಜಯಣ್ಣ, ರಾಕ್‌ಲೈನ್‌ ವೆಂಕಟೇಶ್‌, ವಿಜಯ್‌ ಕಿರಂಗದೂರು ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ನಿರ್ಮಾಪಕರಷ್ಟೇ ಅಲ್ಲದೆ ಕನ್ನಡ ಚಿತ್ರರಂಗದ ಖ್ಯಾತ ನಟರಾದ ಪುನೀತ್‌ ರಾಜ್‌ಕುಮಾರ್‌, ಶಿವರಾಜ್‌ ಕುಮಾರ್‌, ಯಶ್‌ ಮತ್ತು ಸುದೀಪ್‌ ಮನೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಐಟಿ ದಾಳಿ ಎಂದರೇನು?

ಆದಾಯ ತೆರಿಗೆ ಇಲಾಖೆಯ ‘ಹುಡುಕಾಟ ಮತ್ತು ಜಪ್ತಿ’ ಕಾರ್ಯಾಚರಣೆಯನ್ನು ಸಾಮಾನ್ಯ ಭಾಷೆಯಲ್ಲಿ ಐಟಿ ದಾಳಿ ಎಂದು ಕರೆಯುತ್ತಾರೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಅಕ್ರಮ ಹಣ ಇಟ್ಟುಕೊಂಡಿದ್ದಾರೆ ಎಂಬ ಗುಮಾನಿ ಬಂದರೆ ಅಂಥಹವರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ಹುಡುಕಾಟ ಮತ್ತು ಜಪ್ತಿ ಕಾರ್ಯಾಚರಣೆ ನಡೆಸುತ್ತಾರೆ.

ಈ ದಾಳಿಯನ್ನು ಯಾಕೆ ಅಗತ್ಯ ಎಂಬುದಕ್ಕೂ ಇಲಾಖೆ ತನ್ನದೇ ಆದ ಸಮರ್ಥನೆಗಳನ್ನು ಹೊಂದಿದೆ. ತೆರಿಗೆ ತಪ್ಪಿಸಿ ವ್ಯಕ್ತಿಗಳು ಕಪ್ಪು ಹಣವನ್ನು ಸಂಪಾದನೆ ಮಾಡುತ್ತಾರೆ. ಇದನ್ನು ನಾನಾ ಸ್ವರೂಪದಲ್ಲಿ ಶೇಖರಿಸಿಟ್ಟಿರುತ್ತಾರೆ. ಅವುಗಳನ್ನು ಪ್ರಮುಖವಾದುದು ಚಿನ್ನ, ಆಸ್ತಿ, ಕಾರು, ಪೀಠೋಪಕರಣ ಸೇರಿದಂತೆ ಬೆಲೆಬಾಳುವ ವಸ್ತುಗಳ ರೂಪದಲ್ಲಿರಬಹುದು. ಹೊರ ಜಗ್ತತಿಗೆ ಈ ಕಪ್ಪು ವ್ಯವಹಾರಗಳು ಕಾಣದೇ ಇರುವದರಿಂದ ಇದನ್ನು ಪತ್ತೆ ಹಚ್ಚಲು ಐಟಿ ಅಧಿಕಾರಿಗಳು ದಾಳಿಯ ಮೊರೆ ಹೋಗುತ್ತಾರೆ. ಐಟಿ ಭಾಷೆಯಲ್ಲಿ ಇದನ್ನು ಹುಡುಕಾಟ ಮತ್ತು ಜಪ್ತಿ ಎಂದು ಕರೆಯುತ್ತಾರೆ.

ಕಪ್ಪು ಹಣದ ಬಗ್ಗೆ ತನಿಖೆ ನಡೆಸಲು ‘ಸರ್ಚ್‌ ಮತ್ತು ಸೀಝರ್‌’ ಎನ್ನುವುದು ಐಟಿ ಇಲಾಖೆಯ ಪ್ರಬಲ ಅಸ್ತ್ರ. ಆದರೆ ಐಟಿ ದಾಳಿ ಎಲ್ಲಾ ಸಂದರ್ಭದಲ್ಲಿಯೂ ನಡೆಯುವುದಿಲ್ಲ.

ಆದಾಯ ತೆರಿಗೆ ಇಲಾಖೆಯೊಳಗೆ ಗುಪ್ತಚರ ದಳವಿರುತ್ತದೆ; ಈ ದಳಗಳು ಮಾಹಿತಿ ನೀಡಿದಾಗ ಅಥವಾ ನಂಬಲರ್ಹ ಮೂಲಗಳು ತೆರಿಗೆ ವಂಚನೆಯ ಕುರಿತಂತೆ ಖಚಿತ ಮಾಹಿತಿಗಳನ್ನು ನೀಡಿದಾಗ, ಸರಕಾದ ಇಲಾಖೆಗಳಿಂದ ಮಾಹಿತಿಗಳು ಬಂದಾಗ, ತೆರಿಗೆದಾರರ ದಾಖಲೆಗಳನ್ನು ಪರಿಶೀಲಿಸಿದಾಗ ಅವ್ಯವಹಾರಗಳು ಕಂಡು ಬಂದರೆ, ಒಂದೊಮ್ಮೆ ಆದಾಯಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಿದ್ದರೆ, ಅಕೌಂಟ್‌ ಬುಕ್‌, ವೋಚರ್‌, ಇನ್‌ವಾಯ್ಸ್‌ಗಳಲ್ಲಿ ಸುಳ್ಳು ಮಾಹಿತಿಗಳನ್ನು ನೀಡಿದಾಗ, ರಿಯಲ್‌ ಎಸ್ಟೇಟ್‌ನಲ್ಲಿ ಅಕ್ರಮವಾಗಿ ಹಣ ಹೂಡಿದಾಗ, ಸರಿಯಾದ ಮೂಲಗಳಲ್ಲಿದೆ ಹಣವನ್ನು ಪಡೆದುಕೊಂಡಾಗ, ಶೇರು ವರ್ಗಾವಣೆಗಳನ್ನು ಮಾಡಿದಾಗ ಈ ದಾಳಿಗಳನ್ನು ನಡೆಸಲಾಗುತ್ತದೆ.

ದಾಳಿ ನಡೆಸುವವರು ಯಾರು?

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 132(1)ರ ಪ್ರಕಾರ, ಪ್ರಧಾನ ಮಹಾ ನಿರ್ದೇಶಕರು ಅಥವಾ ನಿರ್ದೇಶಕರು, ಪ್ರಧಾನ ನಿರ್ದೇಶಕರು ಅಥವಾ ನಿರ್ದೇಶಕರು, ಪ್ರಧಾನ ಮುಖ್ಯ ಆಯುಕ್ತರು ಅಥವಾ ಮುಖ್ಯ ಆಯುಕ್ತರು, ಪ್ರಧಾನ ಆಯುಕ್ತರು ಅಥವಾ ಆಯುಕ್ತರು ದಾಳಿಗಳನ್ನು ನಡೆಸಬಹುದು. ಅಥವಾ ದಾಳಿಗೆ ಹೆಚ್ಚುವರಿ ನಿರ್ದೇಶಕರು, ಹೆಚ್ಚುವರಿ ಆಯುಕ್ತರು, ಜಂಟಿ ನಿರ್ದೇಶಕರು, ಜಂಟಿ ಆಯುಕ್ತರು, ಸಹಾಯಕ ನಿರ್ದೇಶಕರು, ಉಪ ನಿರ್ದೇಶಕರು, ಸಹಾಯಕ ಆಯುಕ್ತರು, ಉಪ ಆಯುಕ್ತರಿಗೆ ಸೂಚಿಸಬಹುದು.

ಅಥವಾ ಆದಾಯ ತೆರಿಗೆ ಅಧಿಕಾರಿಗಳೇ ದಾಳಿ ನಡೆಸಲು ಅವಕಾಶವಿದೆ. ಆದರೆ ಕೆಲವು ಷರತ್ತುಗಳ ಮೇಲೆ. ಒಂದೊಮ್ಮೆ ಆ ಅಧಿಕಾರಿ ತಾನು ಕಳುಹಿಸಿದ ನೋಟಿಸ್‌ ಅಥವಾ ಸಮನ್ಸ್‌ಗೆ ಉತ್ತರಿಸಲು ತೆರಿಗೆದಾರ ವಿಫಲವಾಗಿದ್ದಾನೆಂದ ಅನಿಸಿದರೆ ಅಥವಾ ಆತನ ಬಳಿಯಲ್ಲಿ ಹಣ ಅಥವಾ ಆಸ್ತಿ ಇದೆ ಎಂದು ಮನವರಿಕೆ ಆದರೆ ದಾಳಿ ನಡೆಸಬಹುದು.

ಯಾವ ಆಧಾರದಲ್ಲಿ ದಾಳಿ ನಡೆಸಲಾಗಿದೆ ಎಂಬುದನ್ನು ದಾಳಿಗೆ ಒಳಗಾದ ವ್ಯಕ್ತಿಗೆ ತಿಳಿದುಕೊಳ್ಳುವ ಅವಕಾಶವಿಲ್ಲ. ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗೆ ಮಾತ್ರ ಇದನ್ನು ತಿಳಿದುಕೊಳ್ಳುವ ಅವಕಾಶವಿದೆ.

ಐಟಿ ಅಧಿಕಾರಿಗಳ ಅಧಿಕಾರ ವ್ಯಾಪ್ತಿ:

ದಾಳಿ ನಡೆಸುವ ಐಟಿ ಅಧಿಕಾರಿಗಳಿಗೆ ಅವರದ್ದೇ ಆದ ಕೆಲವು ಅಧಿಕಾರ ವ್ಯಾಪ್ತಿಗಳಿವೆ. ಯಾವುದೇ ಕಟ್ಟಡ, ಸ್ಥಳದಲ್ಲಿ ಲೆಕ್ಕ ಪುಸ್ತಕ, ಇತರ ದಾಖಲೆಗಳು, ಹಣ, ಬೆಲೆಬಾಳುವ ವಸ್ತುಗಳು, ಚಿನ್ನಾಭರಣ ಅಥವಾ ಅಘೋಷಿತ ಆಸ್ತಿಗೆ ಸಂಬಂಧಿಸಿದ ಮಾಹಿತಿಗಳು ಇವೆ ಎಂದು ಅನಿಸಿದರೆ ಅಂಥಹ ಸ್ಥಳಗಳ ಮೇಲೆ ದಾಳಿ ನಡೆಸಬಹುದು. ಈ ಸಂದರ್ಭದಲ್ಲಿ ಒಂದೊಮ್ಮೆ ಬೀಗದ ಕೈಗಳು ಇಲ್ಲದಿದ್ದರೆ ಅದನ್ನು ಒಡೆಯಲೂಬಹುದು. ಒಂದೊಮ್ಮೆ ವ್ಯಕ್ತಿ ತನ್ನಲ್ಲಿ ವಸ್ತುಗಳನ್ನು ಬಚ್ಚಿಟ್ಟುಕೊಂಡಿದ್ದರೆ ಆತನನ್ನು ಪರಿಶೀಲನೆಯೂ ನಡೆಸಬಹುದು. ಹಾಗೂ ಈ ವಸ್ತುಗಳನ್ನು ಜಪ್ತಿ ಮಾಡುವ ಅಧಿಕಾರವೂ ಐಟಿಗೆ ಇದೆ. ಅಷ್ಟೇ ಅಲ್ಲದೆ ದಾಖಲೆಗಳ ಮೇಲೆ ಗುರುತುಗಳನ್ನು ಹಾಕಬಹುದು. ದಾಖಲೆಗಳ ಕಾಪಿಯನ್ನು ಪಡೆದುಕೊಳ್ಳಬಹುದು. ಪರಿಶೀಲನೆ ವೇಳೆ ಸಿಕ್ಕಿದ ಬೆಲೆಬಾಳುವ ವಸ್ತುಗಳ ಪಟ್ಟಿಯನ್ನು ತಯಾರಿಸಬಹುದು.

ಜಪ್ತಿ ಮಾಡಬಹುದಾದ ವಸ್ತುಗಳೇನು?

ಘೋಷಿಸದ ಹಣ, ಚಿನ್ನಾಭರಣ, ಅಕೌಂಟ್‌ ಪುಸ್ತಕ, ಚಲನ್‌, ಡೈರಿಗಳು, ಕಂಪ್ಯೂಟರ್‌ ಚಿಪ್‌ ಮತ್ತು ಇತರ ಡಾಟಾ ಸಂಗ್ರಹದ ವಸ್ತುಗಳು, ಆಸ್ತಿಗೆ ಸಂಬಂಧಿಸಿದ ದಾಖಲೆಗಳು, ಡೀಡ್‌ಗಳನ್ನು ಅಧಿಕಾರಿಗಳು ತಮ್ಮ ಜತೆಯಲ್ಲಿ ಕೊಂಡೊಯ್ಯಬಹುದು.

ಆದರೆ ಕೆಲವೊಂದನ್ನು ಜಪ್ತಿ ಮಾಡಲು ನಿರ್ಬಂಧವಿದೆ. ಉದ್ಯಮದಲ್ಲಿ ತೊಡಗಿಸಿಕೊಂಡ ವಸ್ತುಗಳು, ಆದಾಯ ತೆರಿಗ ಇಲಾಖೆ ಮುಂದೆ ಘೋಷಿಸಿಕೊಂಡ ಹಣ ಅಥವಾ ಆಸ್ತಿ, ಲೆಕ್ಕ ಪುಸ್ತಕದಲ್ಲಿ ಉಲ್ಲೇಖಿಸಿದ ಆಸ್ತಿ, ವಿವರಣೆ ನೀಡಿದ ಹಣ, ಮೌಲ್ಯಾಧಾರಿತ ತೆರಿಗೆಯಲ್ಲಿ ಉಲ್ಲೇಖಿಸಿದ ಆಭರಣ, ಮದುವೆಯಾದ ಮಹಿಳೆಗೆ ಸೇರಿದ 500 ಗ್ರಾಂ ಚಿನ್ನ, ಮದುವೆಯಾಗದ ಮಹಿಳೆಗೆ ಸೇರಿದ 250 ಗ್ರಾಂ ಚಿನ್ನ, ಪುರುಷರಿಗೆ ಸೇರಿದ 100 ಗ್ರಾಂ ಚಿನ್ನವನ್ನು ಜಪ್ತಿ ಮಾಡುವಂತಿಲ್ಲ.

ದಾಳಿಗೆ ಗುರಿಯಾದವರ ಹಕ್ಕುಗಳು:

ದಾಳಿ ಮಾಡುವ ಸಂದರ್ಭದಲ್ಲಿ ದಾಳಿಗೆ ಗುರಿಯಾದ ವ್ಯಕ್ತಿಗೂ ಒಂದಷ್ಟು ಹಕ್ಕುಗಳಿರುತ್ತವೆ. ಮಹಿಳೆಯರನ್ನು ಮಹಿಳೆಯರೇ ಗೌರವಯುತವಾಗಿ ಪರಿಶೀಲನೆ ನಡೆಸಬೇಕು. ಆ ಪರಿಸರಕ್ಕೆ ಸೇರಿದ ಇಬ್ಬರು ಗೌರವಸ್ಥ, ಸ್ವತಂತ್ರ ನಿವಾಸಿಗಳು ಸಾಕ್ಷಿಗಳಾಗಿ ಇರಬೇಕು. ಒಂದೊಮ್ಮೆ ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆ ಮಾತ್ರವಿದ್ದು, ಸಂಪ್ರದಾಯದ ಪ್ರಕಾರ ಆಕೆ ಬಹಿರಂಗವಾಗಿ ಕಾಣಿಸಿಕೊಳ್ಳಬಾರದು ಎಂದಿದ್ದರೆ ಆ ಸಂದರ್ಭದಲ್ಲಿ ಪರಿಶೀಲನೆಯ ಆದೇಶವನ್ನು ಹಿಂತೆಗೆದುಕೊಳ್ಳಬಹುದು. ತುರ್ತು ಸಂದರ್ಭದಲ್ಲಿ ವೈದ್ಯರನ್ನು ಕರೆಸಿಕೊಳ್ಳಬಹುದು. ಶಾಲೆಗೆ ಹೋಗುವ ಮಕ್ಕಳಿದ್ದರೆ ಅವರ ಬ್ಯಾಗುಗಳನ್ನು ಪರಿಶೀಲನೆ ಮಾಡಿ ಕಳುಹಿಸಿಕೊಡಬೇಕು. ಊಟ, ಆಹಾರವನ್ನು ಕಾಲ ಕಾಲಕ್ಕೆ ಸೇವಿಸಬಹುದು. ಯಾವುದರ ಮೇಲಾದರೂ ಸೀಲು ಹಾಕಿದರೆ ಅದನ್ನು ಪರಿಶೀಲನೆ ನಡೆಸಬಹುದು. ಎಲ್ಲಾ ಅನುಬಂಧಗಳ ಜತೆ ಪಂಚನಾಮೆಯ ಪ್ರತಿ, ತನ್ನ ವಿರುದ್ಧ ಇಲಾಖೆ ನೀಡಿದ ಎಲ್ಲಾ ಹೇಳಿಕೆಗಳ ಪ್ರತಿ, ಸೂಕ್ತ ಅಧಿಕಾರಿಗಳ ಮುಂದೆ ವಶಕ್ಕೆ ಪಡೆದ ಅಕೌಂಟ್‌ ಪುಸ್ತಕದ ಮಾಹಿತಿ ಮತ್ತು ಅದರ ಪ್ರತಿಯನ್ನು ಪಡೆದುಕೊಳ್ಳುವ ಅವಕಾಶವಿದೆ.

ದಾಳಿ ನಡೆದ ನಂತರವೂ ಒಂದಷ್ಟು ಹಕ್ಕುಗಳು ದಾಳಿಗೆ ಗುರಿಯಾದವರಿಗಿರುತ್ತವೆ. ವಶಕ್ಕೆ ಪಡೆದುಕೊಂಡು ದಾಖಲೆಗಳ ಪ್ರತಿಯನ್ನು ಪಡೆದುಕೊಳ್ಳುವುದು, ದಾಳಿಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸುವ ಅವಕಾಶಗಳಿರುತ್ತವೆ. ಅಧಿಕಾರಿಗಳ ಲೆಕ್ಕಾಚಾರಗಳನ್ನು ಪ್ರಶ್ನಿಸಿ ಆದಾಯ ತೆರಿಗೆ ಆಯುಕ್ತರಿಗೆ ಮನವಿಯನ್ನು ಸಲ್ಲಿಸಬಹುದು.

ದಾಳಿಗೆ ಗುರಿಯಾದವರು ಏನು ಮಾಡಬೇಕು?

ಹಕ್ಕುಗಳ ಜತೆಗೆ ದಾಳಿಗೆ ಗುರಿಯಾದವರಿಗೆ ಒಂದಷ್ಟು ಜವಾಬ್ದಾರಿಗಳೂ ಇವೆ. ಅಧಿಕಾರಿಗಳಿಗೆ ಮುಕ್ತವಾಗಿ ಪರಿಶೀಲನೆ ಮಾಡಲು ಅವಕಾಶ ನೀಡುವುದು, ದಾಖಲೆಗಳು ಎಲ್ಲೆಲ್ಲಿ ಇವೆ ಎಂಬುದರ ಮಾಹಿತಿ ನೀಡುವುದು. ಬೀರು, ಕಪಾಟು ಮೊದಲಾದೆಡೆ ದಾಖಲೆಗಳಿದ್ದರೆ ಅವುಗಳ ಕೀಲಿಕೈಯನ್ನು ಹಸ್ತಾಂತರಿಸುವುದು. ದಾಖಲೆಗಳ ಮಾಲಿಕತ್ವದ ಬಗ್ಗೆ ವಿವರಣೆಗಳನ್ನು ನೀಡುವುದು. ದಾರಿ ತಪ್ಪಿಸುವ, ಸುಳ್ಳು ಹೇಳುವ ಕೃತ್ಯವನ್ನು ಎಸಗದೇ ಇರುವುದು. ಸ್ಥಳದಲ್ಲಿರುವ ಎಲ್ಲಾ ವ್ಯಕ್ತಿಗಳನ್ನು ಪರಿಚಯಿಸುವುದು ಮತ್ತು ಅವರ ಜತೆಗಿನ ಸಂಬಂಧವನ್ನು ವಿವರಿಸುವುದು ದಾಳಿಗೆ ಗುರಿಯಾದವರ ಹೊಣೆಗಾರಿಕೆಯಾಗಿರುತ್ತದೆ. ಒಂದೊಮ್ಮೆ ತಪ್ಪು ಮಾಹಿತಿ ನೀಡಿದಲ್ಲಿ ದಾಳಿಗೆ ಒಳಗಾದವರು ಸೆಕ್ಷನ್‌ 413ರ ಪ್ರಕಾರ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ಯಾವುದೇ ವ್ಯಕ್ತಿಗಳನ್ನು ಸ್ಥಳಕ್ಕೆ ಬರಲು ಅವಕಾಶ ನೀಡುವಂತಿಲ್ಲ. ಸೂಕ್ತ ಅಧಿಕಾರಿಯ ಗಮನಕ್ಕೆ ತರದೇ ಯಾವುದೇ ವಸ್ತುಗಳ ಸ್ಥಳಗಳನ್ನು ಬದಲಿಸುವುದು, ದಾಖಲೆಗಳನ್ನು ನಾಶ ಮಾಡುವಂತಿಲ್ಲ. ಒಂದೊಮ್ಮೆ ಹಾಗೆ ಮಾಡಿದರೆ ಸೆಕ್ಷನ್‌ 204ರ ಅನ್ವಯ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಎಲ್ಲಾ ಪ್ರಶ್ನೆಗಳಿಗೂ ನಿಖರವಾದ ಉತ್ತರವನ್ನು ನೀಡಬೇಕಾಗುತ್ತದೆ. ಒಂದೊಮ್ಮೆ ಸುಳ್ಳು ಹೇಳಿಕೆಗಳನ್ನು ನೀಡಿದರೆ ಸೆಕ್ಷನ್‌ 181ರ ಪ್ರಕಾರ ಶಿಕ್ಷೆ ಎದುರಿಸಬೇಕಾಗುತ್ತದೆ. ಸಾಕ್ಷ್ಯಗಳನ್ನು ಒದಗಿಸುವಾಗಲೂ ಸುಳ್ಳು ಸಾಕ್ಷ್ಯಗಳನ್ನು ನೀಡುವಂತಿಲ್ಲ. ಒಂದೊಮ್ಮೆ ಸುಳ್ಳು ಸಾಕ್ಷ್ಯ ನೀಡಿದರೆ ಸೆಕ್ಷನ್‌ 191ರ ಅಡಿಯಲ್ಲಿ ವ್ಯಕ್ತಿಯನ್ನು ಶಿಕ್ಷಗೆ ಗುರಿ ಮಾಡಬಹುದು.

ದಾಖಲು ಮಾಡಿಕೊಂಡ ಹೇಳಿಕೆಗಳು, ಜಪ್ತಿ ಮಾಡಿದ ವಸ್ತುಗಳು, ಪಂಚನಾಮೆಗಳ ಮೇಲೆ ಸಹಿ ಹಾಕಬೇಕಾಗುತ್ತದೆ. ಪರಿಶೀಲನೆ ಪ್ರಕ್ರಿಯೆ ಶೀಘ್ರವಾಗಿ ಕೊನೆಗೊಳ್ಳಲು ಮತ್ತು ಶಾಂತವಾಗಿ ಪೂರ್ಣಗೊಳ್ಳಲು ದಾಳಿಗೆ ಒಳಗಾದವರು ಸಹಕಾರ ನೀಡುವುದು ಅಗತ್ಯ. ಹುಡುಕಾಟ ಮುಗಿದ ನಂತರವೂ ಇದೇ ರೀತಿಯ ಸಹಕಾರ ನೀಡಬೇಕಾಗುತ್ತದೆ. ಇಲ್ಲದಿದ್ದಲ್ಲಿ ಬಂಧನ ನಡೆಸಲು ಅವಕಾಶ ಕೋರಿ ಐಟಿ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಬಹುದಾಗಿದೆ.

ಇವಿಷ್ಟು ‘ಐಟಿ ದಾಳಿ’ಯ ಪ್ರಕ್ರಿಯೆಗಳು. ಈ ನಡುವೆ ಮುಂದುವರಿದಿರುವ ಐಟಿ ದಾಳಿಯ ಕುರಿತು ಇಲಾಖೆ ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಸದ್ಯ ಸ್ಯಾಂಡಲ್‌ವುಡ್ ಪ್ರಮುಖರ ಮೇಲೆ ನಡೆದಿರುವ ದಾಳಿಯ ಕುರಿತು ನಿಖರ ಮಾಹಿತಿ ಇನ್ನಷ್ಟೆ ಹೊರಬರಬೇಕಿದೆ. ಈವರೆಗೆ ನೀವು ನೋಡುತ್ತಿರುವ ದಾಳಿ ಬಗೆಗಿನ ಸುದ್ದಿಗಳು ಅಂತೆಕಂತೆಗಳ ಸಂತೆ ಅಷ್ಟೆ.