samachara
www.samachara.com
‘ರಫೇಲ್‌ ಡೇ’: ಸುಪ್ರೀಂಗೆ ಮೇಲ್ಮನವಿ- ಪರಿಕ್ಕರ್‌ ‘ಬೆಡ್‌ರೂಂ’ ಆಡಿಯೋ ಲೀಕ್‌- ಜೆಪಿಸಿಗೆ  ಆಗ್ರಹ 
COVER STORY

‘ರಫೇಲ್‌ ಡೇ’: ಸುಪ್ರೀಂಗೆ ಮೇಲ್ಮನವಿ- ಪರಿಕ್ಕರ್‌ ‘ಬೆಡ್‌ರೂಂ’ ಆಡಿಯೋ ಲೀಕ್‌- ಜೆಪಿಸಿಗೆ ಆಗ್ರಹ 

ರಫೇಲ್‌ ಡೀಲ್‌ ಸಂಬಂಧ ವಿಡಿಯೋ ಲೀಕ್‌, ಸುಪ್ರೀಂ ಕೋರ್ಟ್‌ ತೀರ್ಪು ಮರು ಪರಿಶೀಲನೆ ಕೋರಿ ಅರ್ಜಿ ಸಲ್ಲಿಕೆ ಜತೆಗೆ ಲೋಕಸಭೆಯಲ್ಲಿ ಕಾವೇರಿದ ಚರ್ಚೆಗೆ ದೇಶ ಇಂದು ಸಾಕ್ಷಿಯಾಯಿತು.

ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ ತಣ್ಣಗಾಗಿದ್ದ ‘ರಫೇಲ್‌ ಡೀಲ್‌’ ವಿಚಾರ ಬುಧವಾರ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದೆ. ರಫೇಲ್‌ ಡೀಲ್‌ ಸಂಬಂಧ ವಿಡಿಯೋ ಲೀಕ್‌, ಸುಪ್ರೀಂ ಕೋರ್ಟ್‌ ತೀರ್ಪು ಮರು ಪರಿಶೀಲನೆ ಕೋರಿ ಅರ್ಜಿ ಸಲ್ಲಿಕೆ ಜತೆಗೆ ಲೋಕಸಭೆಯಲ್ಲಿ ಕಾವೇರಿದ ಚರ್ಚೆಗೆ ದೇಶ ಇಂದು ಸಾಕ್ಷಿಯಾಯಿತು.

ರಫೇಲ್‌ ಡೀಲ್‌ ಸಂಬಂಧ ಈ ಹಿಂದೆ ತನಿಖೆ ಕೋರಿ ಖ್ಯಾತ ವಕೀಲ ಮತ್ತು ಸಾಮಾಜಿಕ ಹೋರಾಟಗಾರ ಪ್ರಶಾಂತ್‌ ಭೂಷಣ್‌, ಬಿಜೆಪಿ ಮಾಜಿ ಕೇಂದ್ರ ಸಚಿವರುಗಳಾದ ಅರುಣ್‌ ಶೌರಿ ಮತ್ತು ಯಶವಂತ್‌ ಸಿನ್ಹಾ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಇದರ ಜತೆಗೆ ಇನ್ನೊಂದಷ್ಟು ಜನರೂ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಡಿಸೆಂಬರ್‌ 14ರಂದು ಸುಪ್ರೀಂ ಕೋರ್ಟ್‌ ತಳ್ಳಿ ಹಾಕಿತ್ತು. ಇದೀಗ ಈ ತೀರ್ಪು ಮರು ಪರಿಶೀಲನೆ ಕೋರಿ ಮೂವರು ಗಣ್ಯರು ಮತ್ತೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ತಮ್ಮ ಮರು ಪರಿಶೀಲನಾ ಅರ್ಜಿಯಲ್ಲಿ ಅರ್ಜಿದಾರರು, ನ್ಯಾಯಾಲಯದ ಆದೇಶ, “ಸರಕಾರ ಸಹಿ ಹಾಕದೆ ಸೀಲ್‌ ಮಾಡಿದ ಕವರಿನಲ್ಲಿ ನೀಡಿದ ತಪ್ಪು ಮಾಹಿತಿಗಳನ್ನು ಆಧರಿಸಿದೆ,” ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಈ ಪ್ರಕರಣವನ್ನು ತೆರೆದ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂದೂ ಮೂವರು ಕೋರಿಕೊಂಡಿದ್ದಾರೆ.

ಮೂವರು ಸೇರಿ ಸುಪ್ರೀಂ ಕೋರ್ಟ್‌ಗೆ ರಫೇಲ್‌ ಡೀಲ್‌ ಸಂಬಂಧ ಮೇಲ್ಮನವಿ ಸಲ್ಲಿಸಿದ ವಿಚಾರ ಹೊರಬರುತ್ತಿದ ರಫೇಲ್‌ ಡೀಲ್‌ಗೆ ಸಂಬಂಧಿಸಿದ ಧ್ವನಿ ಮುದ್ರಿಕೆಯೊಂದು ಕೋಲಾಹಲವೆಬ್ಬಿಸಿದೆ. ಈ ಆಡಿಯೋ ಟೇಪನ್ನು ಕಾಂಗ್ರೆಸ್‌ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದೆ. ಆಡಿಯೋದಲ್ಲಿ ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮಾತನಾಡಿದ್ದು ರಫೇಲ್‌ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದ ದಾಖಲೆಗಳು ಮನೋಹರ್‌ ಪರಿಕ್ಕರ್‌ ಬೆಡ್‌ರೂಂನಲ್ಲಿದೆ ಎಂಬುದಾಗಿ ಹೇಳಿದ್ದಾರೆ ಎಂದು ಕಾಂಗ್ರೆಸ್‌ ಪ್ರತಿಪಾದಿಸಿದೆ. ರಫೇಲ್‌ ಡೀಲ್‌ ನಡೆಯುವ ಸಂದರ್ಭದಲ್ಲಿ ಪರಿಕ್ಕರ್‌ ರಕ್ಷಣಾ ಸಚಿವರಾಗಿದ್ದರು. ಆದರೆ ಸದ್ಯದ ಆಡಿಯೋದ ಸತ್ಯಾಸತ್ಯತೆ ಖಚಿತಪಟ್ಟಿಲ್ಲ.

“ಗೋವಾದ ಸಂಪುಟ ಸಭೆಯೊಂದರಲ್ಲಿ ರಫೇಲ್‌ ಡೀಲ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನನ್ನ ಫ್ಲ್ಯಾಟ್‌, ಬೆಡ್‌ರೂಂನಲ್ಲಿ ಇರುವುದರಿಂದ ನನ್ನನ್ನು ಯಾರೂ (ಮುಖ್ಯಮಂತ್ರಿ ಹುದ್ದೆಯಿಂದ) ತೆಗೆಯಲು ಸಾಧ್ಯವಿಲ್ಲ ಎಂದು ಪರಿಕ್ಕರ್‌ ಹೇಳಿರುವುದಾಗಿ ವಿಶ್ವಜಿತ್‌ ರಾಣೆ ಆಡಿಯೋ ಒಂದರಲ್ಲಿ ತಿಳಿಸಿದ್ದಾರೆ,” ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲ ಹೇಳಿದ್ದಾರೆ.

ಕಾಂಗ್ರೆಸ್‌ ಬಿಡುಗಡೆ ಮಾಡಿದ ಆಡಿಯೋದಲ್ಲಿ ಅಪರಿಚಿತ ವ್ಯಕ್ತಿಯ ಜತೆ ಸಂಪುಟ ಸಭೆಯ ಬಗ್ಗೆ ಮಾತನಾಡುವ ರಾಣೆ, ‘ಇದನ್ನು ಗೌಪ್ಯವಾಗಿಡಬೇಕು’ ಎಂದು ಹೇಳಿ ಮಾತು ಆರಂಭಿಸುತ್ತಾರೆ. “ಎಲ್ಲಾ ಮಾಹಿತಿಗಳು ನನ್ನ ಬೆಡ್‌ರೂಂನಲ್ಲಿವೆ ಎಂದು ಮುಖ್ಯಮಂತ್ರಿಗಳು ಆಸಕ್ತಿಕರ ಹೇಳಿಕೆ ನೀಡಿದ್ದಾರೆ” ಎಂದು ರಾಣೆ ಹೇಳುತ್ತಿದ್ದಂತೆ ಆ ಕಡೆ ಇರುವ ವ್ಯಕ್ತಿ “ಏನು ಹೇಳುತ್ತಿದ್ದೀರಿ ನೀವು?” ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ. ಇದಕ್ಕೆ ರಾಣೆ, “ನೀವು ಬೇಕಿದ್ದರೆ ಸಂಪುಟದಲ್ಲಿ ನಿಮಗೆ ಆಪ್ತರಾಗಿರುವವರ ಬಳಿ ಈ ಬಗ್ಗೆ ವಿಚಾರಿಸಬಹುದು,” ಎಂದಿದ್ದಾರೆ. ಮುಂದುವರಿದು, “ಅದರರ್ಥ ಅವರು ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡಿದ್ದಾರೆ. ರಫೇಲ್‌ಗೆ ಸಂಬಂಧಿಸಿದ ಪ್ರತಿ ದಾಖಲೆಯೂ ನನ್ನ ಫ್ಲ್ಯಾಟ್‌, ಬೆಡ್‌ರೂಂನಲ್ಲಿದೆ ಎಂದು ಅವರು ಹೇಳಿದ್ದಾರೆ,” ಎಂಬುದಾಗಿ ವಿವರಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸುರ್ಜೇವಾಲಾ, “ರಫೇಲ್‌ ಡೀಲ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಪರಿಕ್ಕರ್‌ ಬಳಿಯಲ್ಲಿವೆ. ಡೀಲ್‌ನಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಕೈಬಿಡಲಾಗಿದೆ. ಇವೆಲ್ಲವೂ ದಾಖಲೆಗಳಲ್ಲಿವೆ. ಈ ದಾಖಲೆಗಳೆಲ್ಲವೂ ಪರಿಕ್ಕರ್‌ ಬಳಿಯಲ್ಲಿವೆ. ಈ ದಾಖಲೆಗಳನ್ನು ಯಾಕೆ ಅಡಗಿಸಿಡಲಾಗಿದೆ?,” ಎಂದು ಪ್ರಶ್ನಿಸಿದ್ದಾರೆ.

ಆದರೆ ಈ ಆಡಿಯೋ ತಿರುಚಿದ್ದು ಎಂದು ಹೇಳಿರುವ ರಾಣೆ, ಪರಿಕ್ಕರ್‌ ರಫೇಲ್‌ ಬಗ್ಗೆ ಯಾವತ್ತೂ ಉಲ್ಲೇಖಿಸಿಲ್ಲ ಎಂದು ಪ್ರತಿಪಾದಿಸಿದ್ದಾರೆ. “ಆಡಿಯೊ ಟೇಪ್‌ನ್ನು ತಿರುಚಲಾಗಿದೆ. ಸಂಪುಟ ಮತ್ತು ಮುಖ್ಯಮಂತ್ರಿಗಳ ನಡುವೆ ಭಿನ್ನಾಭಿಪ್ರಾಯ ಹುಟ್ಟುಹಾಕಲು ಕಾಂಗ್ರೆಸ್‌ ಟೇಪ್‌ ತಿರುಚುವಷ್ಟು ಕೆಳಮಟ್ಟಕ್ಕೆ ಇಳಿದಿದೆ. ಪರಿಕ್ಕರ್‌ ರಫೇಲ್‌ ಬಗ್ಗೆಯಾಗಲೀ ದಾಖಲೆಗಳ ಬಗ್ಗೆಯಾಗಲೀ ಯಾವತ್ತೂ ಉಲ್ಲೇಖಿಸಿಲ್ಲ. ನಾನು ಈ ಬಗ್ಗೆ ಕ್ರಿಮಿನಲ್ ತನಿಖೆಗಾಗಿ ಅವರನ್ನು ಕೋರಿಕೊಂಡಿದ್ದೇನೆ,” ಎಂದಿದ್ದಾರೆ.

ಆದರೆ ಇದು ಇಲ್ಲಿಗೇ ನಿಂತಿಲ್ಲ. ಈ ವಿಚಾರ ಇಂದು ಲೋಕಸಭೆಯಲ್ಲೂ ಪ್ರಸ್ತಾಪವಾಯಿತು. ರಫೇಲ್‌ ಡೀಲ್‌ ಸಂಬಂಧ ಚರ್ಚೆಯಲ್ಲಿ ಪಾಲ್ಗೊಂಡು ಮಾತು ಆರಂಭಿಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇದರಲ್ಲಿ ಹಗರಣ ನಡೆದಿದೆ ಎಂದು ಒತ್ತಿ ಹೇಳಿದರು. ಈ ವೇಳೆ ಅವರು ಧ್ವನಿ ಮುದ್ರಿಕೆ ಪ್ಲೇ ಮಾಡಲು ಅವಕಾಶ ಕೇಳಿದರು. ಆದರೆ ಸ್ಪೀಕರ್‌ ಅವಕಾಶ ನೀಡದ್ದರಿಂದ ಅದರಲ್ಲಿತುವ ವಿಷಯವನ್ನು ಓದಿ ಹೇಳಿದರು.

ಗದ್ದಲ ಗಲಾಟೆಯ ನಡುವೆ ಆಗಾಗ ಮುಂದೂಡುತ್ತಲೇ ನಡೆದ ಕಲಾಪದಲ್ಲಿ ಜಂಟಿ ಸದನ ಸಮಿತಿ ತನಿಖೆಗೆ ರಾಹುಲ್‌ ಗಾಂದಿ ಒತ್ತಾಯಿಸಿದರು. ಈ ಬೇಡಿಕೆಗೆ ಧ್ವನಿಗೂಡಿಸಿದ ಎನ್‌ಡಿಎ ಸದಸ್ಯ ಪಕ್ಷ ಶಿವಸೇನೆ, “ಕಂಪನಿ ಹೊಂದಿರದ, ಕೇವಲ ಪೇಪರ್‌ ಮೇಲೆ ಕಂಪನಿ ಇರುವ ವ್ಯಕ್ತಿಗೆ ಕಾಂಟ್ರಾಕ್ಟ್‌ ನೀಡುವ ಇದೆಂಥಾ ಆಫ್‌ಸೆಟ್‌ ಕಾಂಟ್ರಾಕ್ಟ್‌? ಎಚ್‌ಎಎಲ್‌ ಬಳಿ ಎಲ್ಲಾ ಸಂಪನ್ಮೂಲಗಳಿತ್ತು. ಒಂದೊಮ್ಮೆ ಸರಕಾರಕ್ಕೆ ಸ್ಪಷ್ಟತೆ ಇದ್ದರೆ ಜಂಟಿ ಸದನ ಸಮಿತಿಗೆ ತನಿಖೆಗೆ ಹೆದರುವುದು ಯಾಕೆ,” ಎಂದು ಶಿವಸೇನೆ ಸಂಸದ ಅರವಿಂದ್‌ ಸಾವಂತ್‌ ಪ್ರಶ್ನಿಸಿದರು. ‘ರಫೇಲ್‌ ಡೀಲ್‌ ಮೂಲಕ ತನಗಾಗಿ ಮತ್ತು ರಿಲಯನ್ಸ್‌ಗಾಗಿ ತಾನು ಕೆಲಸ ಮಾಡುತ್ತೇನೆ’ ಎಂಬುದನ್ನು ಸರಕಾರ ಖಚಿತಪಡಿಸಿದೆ ಎಂದು ಸಿಪಿಐಎಂ ಸಂಸದ ಮೊಹಮ್ಮದ್‌ ಸಲೀಮ್‌ ಕಿಡಿಕಾರಿದರು.

ಕಾಂಗ್ರೆಸ್‌ನ ಜಂಟಿ ಸದನ ಸಮಿತಿ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದ ಟಿಡಿಪಿ ಸಂದಸ ಜಯದೇವ್‌ ಗಲ್ಲ, ‘ರಫೇಲ್‌ ಡೀಲ್‌ನ ಗೌಪ್ಯ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ದಾಖಲೆಗಳು ಪರಿಕ್ಕರ್‌ ಬೆಡ್‌ರೂಂ ತಲುಪಿದ್ದು ಹೇಗೆ ಎಂದು ಸರಕಾರ ಉತ್ತರಿಸಬೇಕು,’ ಎಂದು ಆಗ್ರಹಿಸಿದರು.

ಆದರೆ ಇದಕ್ಕೆ ಉತ್ತರಿಸಲು ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿರಲಿಲ್ಲ. ಅವರು ಕೋಣೆಯಲ್ಲಿ ಅಡಗಿಕೊಂಡಿದ್ದಾರೆ ಎಂದು ರಾಹುಲ್‌ ಗಾಂಧಿ ಆರೋಪ ಮಾಡಿದಾಗಲೂ ಮೋದಿ ಹೊರಬರಲಿಲ್ಲ. ಎಐಎಡಿಎಂಕೆ ಸಂಸದರ ಹಿಂದೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅಡಗಿಕೊಂಡಿದ್ದಾರೆ ಎಂದಾಗಲು ಅವರು ತುಟಿ ಬಿಚ್ಚಲಿಲ್ಲ. ಬದಲಿಗೆ ಸರಕಾರದ ಪರ ಜೇಟ್ಲಿ ಕಾಂಗ್ರೆಸ್ ಆರೋಪಗಳಿಗೆ ಉತ್ತರಿಸಲು ಎದ್ದು ನಿಂತರು. ಗದ್ದಲದ ನಡುವೆ ರಾಹುಲ್‌ ಗಾಂಧಿಯನ್ನು ಕಿಚಾಯಿಸುವ, ಸುಪ್ರೀಂ ಕೋರ್ಟ್‌ನ ತೀರ್ಪನ್ನೇ ಮುಂದಿಟ್ಟುಕೊಂಡು ಅವರು ರಫೇಲ್‌ ಡೀಲ್‌ನಲ್ಲಿ ಹಗರಣ ನಡೆದೇ ಇಲ್ಲ ಎಂದು ವಾದಿಸಿದರು. ಅವರಿಂದ ಸರಿಯಾದ ಉತ್ತರ ಬರುವ ಮೊದಲೇ ದಿನದ ಮಟ್ಟಿಗೆ ಕಲಾಪ ಅಂತ್ಯಗೊಂಡಿತು. ಆದರೆ ರಫೇಲ್‌ ಡೀಲ್‌ ಎಂಬ ಬೂದಿ ಮುಚ್ಚಿದ ಕೆಂಡ ಹೊಗೆಯಾಡುತ್ತಲೇ ಇದೆ.