samachara
www.samachara.com
ಮೋದಿ ರೀತಿಯಲ್ಲೇ ಅಧಿಕಾರಕ್ಕೇರಿದ ಜೈರ್ ಬೋಲ್ಸೊನಾರೊ; ಬ್ರೆಜಿಲ್‌ಗೆ ಹೊಸ ಬಲಪಂಥೀಯ ಅಧ್ಯಕ್ಷ!
COVER STORY

ಮೋದಿ ರೀತಿಯಲ್ಲೇ ಅಧಿಕಾರಕ್ಕೇರಿದ ಜೈರ್ ಬೋಲ್ಸೊನಾರೊ; ಬ್ರೆಜಿಲ್‌ಗೆ ಹೊಸ ಬಲಪಂಥೀಯ ಅಧ್ಯಕ್ಷ!

ಅಲ್ಲೊಬ್ಬ ನಾಯಕ. ರಾಜಕಾರಣದಲ್ಲಿ ಬ್ಯಾಕ್ ಬೆಂಚ್‌ ಸೀಟರ್ ಅನ್ನಿಸಿಕೊಂಡಾತ. ಆಲೋಚನೆ ಹಾಗೂ ಪ್ರಚಾರ ವೈಖರಿಯಲ್ಲಿ ನರೇಂದ್ರ ಮೋದಿ ಹೋಲುವಾತ. ಯಾರೀತ? ಹಿನ್ನೆಲೆ ಏನು? ಸ್ಟೋರಿ ನೋಡಿ...

'ನೀವು ಇವರನ್ನು ಇಷ್ಟಪಡಬೇಕು ಅಥವಾ ದ್ವೇಷಿಸಬೇಕು, ಆದರೆ ನಿರ್ಲಕ್ಷಿಸಲು ಸಾಧ್ಯವಿಲ್ಲ'. ಈ ಮಾತುಗಳನ್ನು ಭಾರತದಲ್ಲಿ ಭರ್ಜರಿಯಾಗಿ ಪ್ರಚಾರಕ್ಕೆ ತಂದಿದ್ದು ನಿಮಗೆ ನೆನಪಿರಬಹುದು.

ಅದು 2014; ಭಾರತ ಮತ್ತೊಂದು ರಾಜಕೀಯ ಮನ್ವಂತರಕ್ಕೆ ಅಣಿಯಾಗುತ್ತಿದ್ದ ಕಾಲಘಟ್ಟ. ಗುಜರಾತ್ ಮೂಲದ ನರೇಂದ್ರ ಮೋದಿ, ಬಲಪಂಥೀಯ ಸಿದ್ಧಾಂತವನ್ನು ಪ್ರತಿಪಾದಿಸುವ ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದರು. ದೇಶದಲ್ಲಿ ಭ್ರಷ್ಟಾಚಾರ ವಿರೋಧಿ ಭಾವನೆ ಗಾಢವಾಗಿತ್ತು. ಐತಿಹಾಸಿಕ ಎನ್ನಿಸುವ ಲಂಚ ಪ್ರಕರಣಗಳು (ಕೋಲ್‌ಗೇಟ್‌, ಕಾಮನ್‌ವೆಲ್ತ್‌, 2ಜಿ ತರಂಗ ಹಂಚಿಕೆ) ನಡೆದು ಹೋಗಿದ್ದವು. ಜನರಿಗೆ ಬದಲಾವಣೆ ಬೇಕು ಅಂತ ಅನ್ನಿಸಿತ್ತು. ಇಂತಹ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸತ್ಯ, ಸುಳ್ಳುಗಳನ್ನು ಒಟ್ಟಿಗೆ ಸೇರಿಸಿ, ಮೇಲಿನ ಸಾಲನ್ನು ಮುಂದಿಟ್ಟು, ನರೇಂದ್ರ ಮೋದಿ ಎಂಬ ವ್ಯಕ್ತಿಯನ್ನು ದೇಶದ ಜನರಿಗೆ ಪರಿಚಯಿಸುವ ಕೆಲಸ ಮಾಡಲಾಯಿತು. ಪರಿಣಾಮ ಕಳೆದ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಹಾಗೂ ಅವರ ಪಕ್ಷ ಬಹುಮತ ಪಡೆಯುವ ಮೂಲಕ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಚುಕ್ಕಾಣಿ ಹಿಡಿದರು.

ಹೆಚ್ಚು ಕಡಿಮೆ 2014ರಲ್ಲಿ ಭಾರತ ಇದ್ದ ಪರಿಸ್ಥಿತಿಯನ್ನು ಲ್ಯಾಟಿನ್ ಅಮೆರಿಕಾ ದೇಶಗಳ ಪೈಕಿ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಎನ್ನಿಸಿಕೊಂಡಿರುವ ಬ್ರೆಜಿಲ್ ಇವತ್ತು ಎದುರಿಸುತ್ತಿದೆ. ದೇಶದ ಆರ್ಥಿಕತೆ ದಿವಾಳಿ ಹಂತಕ್ಕೆ ಬಂದಿದೆ. ಸಾಲು ಸಾಲು ಹಗರಣಗಳು ಜನರನ್ನು ರೊಚ್ಚಿಗೆಬ್ಬಿಸಿವೆ. ಅಲ್ಲಿನ ಅಪರಾಧ ಪ್ರಕರಣಗಳ ಅತಿರೇಕದ ಮಟ್ಟವನ್ನು ಜನ ಭರಿಸುತ್ತಿದ್ದಾರೆ. ಪ್ರಮುಖ ನಗರಗಳ ಬೀದಿಗಳಲ್ಲಿ ರಕ್ತ ಹರಿಯುತ್ತಿದೆ. ಹಿಂದೆಂದೂ ಇಲ್ಲದಷ್ಟು ಜನರಲ್ಲಿ ರಾಜಕಾರಣಿಗಳ ಕುರಿತು ಅಸಹನೆ ಮನೆ ಮಾಡಿದೆ. ಅಧಿಕಾರಿ ವರ್ಗ ಸಾರ್ವಜನಿಕರ ನಂಬಿಕೆ ಕಳೆದುಕೊಂಡಿದೆ. ಪರಿಸ್ಥಿತಿ ಹೀಗಿರುವಾಗ, ಅಧಿಕಾರಿಗಳು ಹಾಗೂ ರಾಜಕಾರಣಿಗಳ ಭ್ರಷ್ಟಾಚಾರವನ್ನು ದೊಡ್ಡ ದನಿಯಲ್ಲಿ ವಿರೋಧಿಸಿದ, ಮೋದಿ ಮಾದರಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸತ್ಯ- ಸುಳ್ಳುಗಳನ್ನು ಹರಿಬಿಟ್ಟ ನಾಯಕನೊಬ್ಬ ಬ್ರೆಜಿಲ್ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿದ್ದಾರೆ; ಹೆಸರು ಜೈರ್ ಬೋಲ್ಸೊನಾರೊ.

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪತ್ನಿ ಜತೆ ಆಗಮಿಸುತ್ತಿರುವ ಜೈರ್‌ ಬೋಲ್ಸೊನಾರೊ.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪತ್ನಿ ಜತೆ ಆಗಮಿಸುತ್ತಿರುವ ಜೈರ್‌ ಬೋಲ್ಸೊನಾರೊ.
/ದಿ ವರ್ಜೀನಿಯನ್‌ ಪೈಲಟ್‌

ಅರ್ಧ ಬ್ರೆಜಿಲಿಯನ್ನರ ಪಾಲಿಗೆ ಜೈರ್ ಸರ್ವಾಧಿಕಾರಿ, ಇನ್ನರ್ಧ ಜನರಿಗೆ ಈಗ ದೇಶವನ್ನು ಅದು ಇವತ್ತಿರುವ ಹೀನಾಯ ಪರಿಸ್ಥಿತಿಯಿಂದ ಮೇಲೆತ್ತುವ ಧೀರೋದ್ಧಾತ. ಒಂದೋ ಇಷ್ಟಪಡಿ, ಇಲ್ಲ ದ್ವೇಷಿಸಿ ಆದರೆ ನಿರ್ಲಕ್ಷಿಸಲು ಸಾಧ್ಯವಿಲ್ಲ ಎನ್ನುವಂತಹ ವ್ಯಕ್ತಿತ್ವದ ಜೈರ್ ಬೋಲ್ಸೊನಾರೊ ಮಂಗಳವಾರ ಬ್ರೆಜಿಲ್ 38ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಂತಿಮ ಹಂತದ ಚುನಾವಣೆಯಲ್ಲಿ ಎಡಪಂಥೀಯ ವರ್ಕರ್ಸ್‌ ಪಾರ್ಟಿ (ಪಿಟಿ)ಯ ಫರ್ನಾಂಡೋ ಹಡ್ಡದ್‌ರನ್ನು ಸೋಲಿಸಿದ ಜೈರ್ ಪ್ರಜಾಪ್ರಭುತ್ವ ವ್ಯವಸ್ಥೆಯ ದೇಶವನ್ನು ಆಳುವ ಹೊಣೆ ಹೊತ್ತುಕೊಂಡಿದ್ದಾರೆ.

ವಿಶೇಷ ಅಂದರೆ, ಈ ಚುನಾವಣೆಯಲ್ಲಿ ತಾವು ಗೆಲ್ಲದೆ ಹೋದರೆ ಅದು ಚುನಾವಣೆಯೇ ಅಲ್ಲ, ಫಲಿತಾಂಶವನ್ನು ತಾವು ಒಪ್ಪುವುದಿಲ್ಲ ಎಂದು ಮಾಜಿ ಮಿಲಿಟರಿ ಅಧಿಕಾರಿಯಾಗಿರುವ ಜೈರ್ ಬೋಲ್ಸೊನಾರೋ ಹಿಂದೊಮ್ಮೆ ಹೇಳಿದ್ದರು! ಇದೀಗ ಅವರೇ ಗೆದ್ದಿರುವ ಕಾರಣಕ್ಕೆ ತಮ್ಮ ಮಾತುಗಳನ್ನು ಅವರು ಹಿಂದೆ ಪಡೆದಿದ್ದಾರೆ.

ಯಾರೀತ ಜೈರ್?:

ಮಾರ್ಚ್‌ 21, 1955ರಲ್ಲಿ ಬ್ರೆಜಿಲ್‌ನ ಸಾವೋ ಪೌಲೋ ನಗರದಲ್ಲಿ ಹುಟ್ಟಿದವರು ಜೈರ್. ಇವರ ಕುಟುಂಬ 18ನೇ ಶತಮಾನದಲ್ಲಿ ಬ್ರೆಜಿಲ್‌ಗೆ ವಲಸೆ ಬಂದಿತ್ತು. ಹೈಸ್ಕೂಲ್‌ನ ಕೊನೆ ವರ್ಷದಲ್ಲಿ ಜೈರ್‌ ಬ್ರೆಜಿಲ್‌ನ ಮಿಲಿಟರಿಯನ್ನು ಸೇರಿಕೊಂಡರು. ಆ ದಿನಗಳಲ್ಲಿಯೇ ಮಹತ್ವಾಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದ ಜೈರ್ 1986ರಲ್ಲಿ ಸ್ಥಳೀಯ ನ್ಯೂಸ್ ಮ್ಯಾಗ್ಸೀನ್ ಒಂದಕ್ಕೆ ಸಂದರ್ಶನ ನೀಡುವ ಮೂಲಕ ಮೊದಲ ಬಾರಿಗೆ ಪ್ರಚಾರಕ್ಕೆ ಬಂದರು. ಮಿಲಿಟರಿಯಲ್ಲಿರುವ ಕಡಿಮೆ ಸಂಬಳ ಹಾಗೂ ಸೌಕರ್ಯಗಳ ಕುರಿತು ಆರೋಪ ಮಾಡಿದ ಜೈರ್ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿತ್ತು. ಆದರೂ ಸುಮಾರು 15 ವರ್ಷಗಳ ಕಾಲ ಮಿಲಿಟರಿ ವಾತಾವರಣದಲ್ಲಿಯೇ ಕಳೆದ ಜೈರ್ ಕೊನೆಗೆ ಕ್ಯಾಪ್ಟನ್ ಹುದ್ದೆಯನ್ನು ನಿರ್ವಹಿಸುವ ಹಂತದಲ್ಲಿ ಸೇನೆಯಿಂದ ಹೊರಬಿದ್ದರು; ರಾಜಕೀಯಕ್ಕೆ ಕಾಲಿಟ್ಟರು.

ಅದು 1988ರ ಸಮಯ. ಜೈರ್ ಬೋಲ್ಸೊನಾರೋ ಕ್ರಿಶ್ಚಿಯನ್ ಡೆಮಾಕ್ರಟಿಕ್ ಪಾರ್ಟಿಯಿಂದ ರಿಯೋ ಡಿ ಜನೈರೋ ನಗರದ ಪಾಲಿಕೆ ಸದಸ್ಯರಾಗಿ ಆಯ್ಕೆಯಾದರು. ಮಿಲಿಟರಿ ಹಿನ್ನೆಲೆಯಿಂದ ಬಂದು ರಾಜಕಾರಣಿಯಾಗುವ ಅವರ ಕನಸಿಗೆ ಇದು ಮೊದಲ ಅಡಿಗಲ್ಲಾಯಿತು. ಮುಂದಿನ ಎರಡು ವರ್ಷಗಳ ಅಂತರದಲ್ಲಿ ಪಕ್ಷದ ಉಪಾಧ್ಯಕ್ಷರಾದರು. ಮುಂದೆ ಅವರು ನಾನಾ ಪಕ್ಷಗಳನ್ನು ಬದಲಿಸಿದರು. ಒಟ್ಟು 27 ವರ್ಷಗಳ ಕಾಲ ಚುನಾಯಿತ ಪ್ರತಿನಿಧಿಯಾಗಿ ಒಟ್ಟು 171 ಕಾಯ್ದೆಗಳನ್ನು, ಒಂದು ಸಂವಿಧಾನದ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. ಸೋಶಿಯಲ್ ಕ್ರಿಶ್ಚಿಯನ್ ಪಾರ್ಟಿಯಿಂದ ಹೊರಬಿದ್ದವರು ಸೋಷಿಯಲ್ ಲಿಬರಲ್ ಪಾರ್ಟಿಯಲ್ಲಿ ಕೆಲಸ ಮಾಡಿದರು. ಇದು ಬಲಪಂಥೀಯ ವಿಚಾರಧಾರೆಯನ್ನು ಅಪ್ಪಿಕೊಂಡ ಕಾರಣಕ್ಕೆ ಒಂದು ತಂಡ ಪಕ್ಷವನ್ನು ಬಿಟ್ಟು ಹೊರನಡೆಯಿತು. ಪರಿಣಾಮ 2018ರ ಚುನಾವಣೆಯಲ್ಲಿ ಜೈರ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ನಾಮಕರಣಗೊಂಡರು.

ಮೋದಿ ಮಾದರಿ ಚುನಾವಣೆ:

ಜೈರ್‌ ಪರ ಭರ್ಜರಿ ಚುನಾವನಾ ಪ್ರಚಾರ.
ಜೈರ್‌ ಪರ ಭರ್ಜರಿ ಚುನಾವನಾ ಪ್ರಚಾರ.
/ಲ್ಯಾಂಪಾಕ್‌ ರೆಕಾರ್ಡ್‌

ಮುಂದೆ ನಡೆದಿದ್ದು ಚುನಾವಣೆಗಾಗಿ ಭರ್ಜರಿ ಪ್ರಚಾರ. "ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿದರು ಜೈರ್. ಅಷ್ಟೆ ಅಲ್ಲ, ಹತ್ತು ಲಕ್ಷ ಡಾಲರ್‌ಗೂ ಹೆಚ್ಚು ಹಣವನ್ನು ಚಂದಾ ರೂಪದಲ್ಲಿ ಜನರಿಂದ ಸಂಗ್ರಹಿಸಿದರು,'' ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ಒಂದು ಕಡೆ ದೇಶದಲ್ಲಿ ನಡೆದ ಭ್ರಷ್ಟಾಚಾರ ಹಗರಣಗಳ ತನಿಖೆ ನಡೆಯುತ್ತಿತ್ತು. ಮಾಜಿ ಅಧ್ಯಕ್ಷರು ಸೇರಿದಂತೆ ದೊಡ್ಡ ದೊಡ್ಡ ತಲೆಗಳು ವಿಚಾರಣೆಗೆ ಹಾಜರಾಗಬೇಕಾಗಿ ಬಂತು. ಕೆಲವು ಅಧ್ಯಕ್ಷೀಯ ಆಕಾಂಕ್ಷಿಗಳು ಬಂಧನಕ್ಕೆ ಒಳಗಾದರು. ಶೇ. 12ರಷ್ಟು ಯುವ ಜನತೆ ಉದ್ಯೋಗವಿಲ್ಲದೆ ಬೀದಿಯಲ್ಲಿದ್ದಾಗ ನಡೆಯುತ್ತಿದ್ದ ಇಂತಹ ಬೆಳವಣಿಗೆಗಳನ್ನು ಜೈರ್ ಚೆನ್ನಾಗಿಯೇ ಬಳಸಿಕೊಂಡರು.

ಅಪರಾಧ ಪ್ರಕರಣಗಳನ್ನು ತಡೆಯುವ ಮಾತುಗಳನ್ನು ಆಡಿದರು. ಅದಕ್ಕಾಗಿ ಪೊಲೀಸ್ ಇಲಾಖೆಯನ್ನು ಮಿಲಿಟರಿ ಮಾದರಿಯಲ್ಲಿ ಬೆಳೆಸುವುದಾಗಿ ಭರವಸೆಯೊಂದನ್ನು ತೂರಿ ಬಿಟ್ಟರು. ಉದಾರವಾದಿ ಹಣಕಾಸು ತಜ್ಞರನ್ನು ತಮ್ಮ ಆರ್ಥಿಕ ಸಚಿವರಾಗಿ ನೇಮಕ ಮಾಡಿಕೊಳ್ಳುವುದಾಗಿ ಹೇಳಿದರು. ಉದ್ಯೋಗ ಸೃಷ್ಟಿಯ ಆಶ್ವಾಸನೆ ನೀಡಿದರು. ಹೀಗೆ, ಅಧಿಕಾರಕ್ಕೆ ಬಂದರೆ ಸ್ವರ್ಗವನ್ನೇ ಧರೆಗೆ ಇಳಿಸುವ ಮಾತುಗಳನ್ನು ಆಡಿದರು ಜೈರ್. ಜನರಿಗೂ ಬೇರೆ ದಾರಿ ಕಾಣದೆ ಅವರನ್ನು ಇವತ್ತು ಗೆಲ್ಲಿಸಿ ಅಧಿಕಾರ ನೀಡಿದ್ದಾರೆ.

ಕೆಲವು ವಿಶ್ಲೇಷಣೆಗಳ ಪ್ರಕಾರ, ಜೈರ್ ಹೇಳಿದ್ದೆಲ್ಲವನ್ನೂ ಆಚರಣೆಗೆ ತರುವುದು ಕಷ್ಟ ಇದೆ. ಚುನಾವಣೆಯಲ್ಲಿ ನೀಡುವ ಭರವಸೆಗಳನ್ನು ಈಡೇರಿಸುವುದು ಸುಲಭ ಅಲ್ಲ ಕೂಡ. ಆದರೆ ಜನ ಚುನಾವಣೆಗಳಲ್ಲಿ ಬದಲಾವಣೆಯನ್ನು ಹೇಗೆ ನಿರೀಕ್ಷಿಸುತ್ತಾರೆ ಮತ್ತು ಅದನ್ನು ಜೈರ್ ತರಹದ ನಾಯಕರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ಬ್ರೆಜಿಲ್ ಹೊಸ ಉದಾಹರಣೆ ಅಷ್ಟೆ. ಹೆಚ್ಚು ಕಡಿಮೆ ಮೋದಿ ಮಾದರಿಯಲ್ಲಿ ಪ್ರಚಾರ ನಡೆಸಿ, ಅಧಿಕಾರಕ್ಕೇರಿದ ಜೈರ್ ಬ್ರೆಜಿಲ್ ಜನರಿಗೆ ಎಷ್ಟರ ಮಟ್ಟಿಗೆ ಸೇವೆ ಸಲ್ಲಿಸುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ ಮತ್ತು ಅವುಗಳು ಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಲಿವೆ.

ಚಿತ್ರ ಕೃಪೆ: ದಿ ಇಂಟರ್‌ಸೆಪ್ಟ್‌