samachara
www.samachara.com
ಇತಿಹಾಸ ಸೃಷ್ಟಿಸಿದ ಮಹಿಳೆಯರು: ಶಬರಿಮಲೆಯಲ್ಲೇ ಸಂಪ್ರದಾಯವಾದಿಗಳಿಗೆ ತಿರುಗೇಟು
COVER STORY

ಇತಿಹಾಸ ಸೃಷ್ಟಿಸಿದ ಮಹಿಳೆಯರು: ಶಬರಿಮಲೆಯಲ್ಲೇ ಸಂಪ್ರದಾಯವಾದಿಗಳಿಗೆ ತಿರುಗೇಟು

ದೇಗುಲ ಪ್ರವೇಶದ ಬೆನ್ನಿಗೆ ತಂತ್ರಿ ಕಂದರಾರು ರಾಜೀವರು ದೇವಸ್ಥಾನದ ಬಾಗಿಲು ಮುಚ್ಚಲು ನಿರ್ಧರಿಸಿದ್ದಾರೆ ಎಂದು ‘ಮಲಯಾಳ ಮನೋರಮಾ ಟಿವಿ’ ವರದಿ ಮಾಡಿದೆ.

ಬುಧವಾರ ಮುಂಜಾನೆ ನಡೆದ ಐತಿಹಾಸಿಕ ಬೆಳವಣಿಗೆಯಲ್ಲಿ, 10 ವರ್ಷ ಮೇಲ್ಪಟ್ಟ 50 ವರ್ಷ ಕೆಳಗಿನ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಸಿಕ್ಕಿದೆ. 40 ವರ್ಷ ಆಸುಪಾಸಿನ ಇಬ್ಬರು ಮಹಿಳೆಯರು ಇಂದು ಮುಂಜಾನೆ ಶಬರಿಮಲೆಯ ದೇವಸ್ಥಾನ ಪ್ರವೇಶಿಸಿರುವುದಾಗಿ ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಚಿತಪಡಿಸಿದ್ದಾರೆ.

ಋತುಮತಿಯಾಗುವ ಮಹಿಳೆಯರಿಗೆ ಈ ಹಿಂದಿನಿಂದಲೂ ಶಬರಿಮಲೆ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಆದರೆ ಸೆಪ್ಟೆಂಬರ್‌ 28ರಂದು ಸುಪ್ರೀಂ ಕೋರ್ಟ್‌ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು. ಹೀಗಿದ್ದೂ ಸುಪ್ರೀಂ ಕೋರ್ಟ್‌ ಆದೇಶವನ್ನು ಮೀರಿ ಬೆಟ್ಟದಲ್ಲಿರುವ ದೇವಾಲಯ ಪ್ರವೇಶಕ್ಕೆ ಬಿಜೆಪಿ, ಆರ್‌ಎಸ್‌ಎಸ್‌ ಮತ್ತು ಹಿಂದೂಪರ ಸಂಘಟನೆಗಳು ತಡೆ ಒಡ್ಡಿದ್ದವು. ಸರಣಿ ಪ್ರತಿಭಟನೆಗಳು, ರಥಯಾತ್ರೆಗಳು, ಸಮಾವೇಶಗಳು ಸೇರಿದಂತೆ ಮಹಿಳೆಯರ ಪರ ಮತ್ತು ವಿರುದ್ಧ ಶಕ್ತಿ ಪ್ರದರ್ಶನಗಳು ನಡೆದಿದ್ದವು.

ಇತ್ತೀಚಿನ ಬೆಳವಣಿಗೆಯಲ್ಲಿ ನಿನ್ನೆ ಅಂದರೆ ಮಂಗಳವಾರ ಕೇರಳದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಜಾರಿಗೆ ಒತ್ತಾಯಿಸಿ ಮತ್ತು ಲಿಂಗ ಸಮಾನತೆಗಾಗಿ ಮಹಿಳೆಯರು ‘ವನಿತಾ ಮಥಿಲ್’ ಹೆಸರಿನ್ಲಲಿ 620 ಕಿಲೋಮೀಟರ್‌ ಉದ್ದದ ‘ಮಹಿಳಾ ಗೋಡೆ’ ನಿರ್ಮಿಸಿದ್ದರು. ಇದಾದ ಬೆನ್ನಿಗೆ ಇಂದು ಬಿಂದು ಮತ್ತು ಕನಕದುರ್ಗ ಎಂಬ ಇಬ್ಬರು ಮಹಿಳೆಯರು ದೇವಸ್ಥಾನ ಪ್ರವೇಶಿಸಿದ್ದಾರೆ.

ಇಂದು ಮುಂಜಾನೆ ಋತುಮತಿಯಾಗುವ ವಯಸ್ಸಿನ ಮಹಿಳೆಯರು ದೇವಸ್ಥಾನ ಪ್ರವೇಶಿಸಿರುವ ವಿಡಿಯೋವನ್ನು ಮೊದಲಿಗೆ ಸ್ಥಳೀಯ ವಾಹಿನಿ ‘ನ್ಯೂಸ್‌ 24’ ಪ್ರಸಾರ ಮಾಡಿದೆ. ಕಪ್ಪು ಬಟ್ಟೆ ತೊಟ್ಟಿದ್ದ ಮಹಿಳೆಯರು ಪೊಲೀಸ್‌ ಭದ್ರತೆಯಲ್ಲಿ ದೇವಸ್ಥಾನ ಪ್ರವೇಶಿಸಿದ್ದಾರೆ. ಈ ಸುದ್ದಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕೂಡ ಖಚಿತಪಡಿಸಿದ್ದಾರೆ. ಮಹಿಳೆಯರು ದೇವಾಲಯದ ಮೆಟ್ಟಿಲುಗಳನ್ನು ಏರಿಲ್ಲ. ಗಣ್ಯರಿಗೆ ಪೊಲೀಸರಿಗೆ ಮತ್ತು ಮಾಧ್ಯಮಗಳಿಗೆ ಮೀಸಲಾದ ‘ವಿಶೇಷ ಪ್ರವೇಶ’ದ ಮೂಲಕ ಅವರು ದೇವಾಲಯ ಪ್ರವೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಹಿಳೆಯರು ಶಬರಿಮಲೆ ಪ್ರವೇಶಿಸಲು ಮೊದಲೇ ಯೋಜನೆ ಸಿದ್ಧಪಡಿಸಿಟ್ಟುಕೊಂಡಂತೆ ಕಾಣಿಸುತ್ತಿದೆ. ದೇಗುಲ ಪ್ರವೇಶಿಸಿರುವ ಮಹಿಳೆಯರು ಮಧ್ಯರಾತ್ರಿ 1 ಗಂಟೆಗೆ ಪಂಬಾ ಕ್ಯಾಂಪ್‌ನಿಂದ ದೇಗುಲದತ್ತ ಪ್ರಯಾಣ ಆರಂಭಿಸಿದ್ದರು. ಬೆಳಗ್ಗಿನ ಜಾವ 3.45 ನಿಮಿಷಕ್ಕೆ ಇವರು ದೇವಾಲಯ ತಲುಪಿದ್ದಾರೆ ಎಂದು ಮಲಯಾಳ ಮನೋರಮಾ ವರದಿ ಮಾಡಿದೆ. ಮಹಿಳೆಯರು ಪ್ರವೇಶದ ಸಂದರ್ಭದಲ್ಲಿ ದೇವಾಲಯದಲ್ಲಿ ಮಾಧ್ಯಮಗಳು ಮತ್ತು ಭಕ್ತರು ಕಡಿಮೆ ಸಂಖ್ಯೆಯಲ್ಲಿದ್ದರು. ಹೀಗಾಗಿ ಸುಲಭ ಪ್ರವೇಶ ಸಾಧ್ಯವಾಯಿತು. ಈ ಮಹಿಳೆಯರಿಗೆ ಯೂನಿಫಾರ್ಮ್‌ ಮತ್ತು ಸಾದಾ ಬಟ್ಟೆ ತೊಟ್ಟಿದ್ದ ಪೊಲೀಸರು ರಕ್ಷಣೆ ನೀಡಿದ್ದರು.

ದೇವಾಲಯ ಪ್ರವೇಶಿಸಿರುವ ಬಿಂದು ತಲಶ್ಶೆರಿ ಕಾಲೇಜ್‌ ಆಫ್‌ ಲೀಗಲ್‌ ಸ್ಟಡೀಸ್‌ನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದರೆ, ಕನಕದುರ್ಗ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ. ದೇವಾಲಯದ ಪ್ರವೇಶ ನಂತರ ಇಬ್ಬರನ್ನೂ ಸುರಕ್ಷಿತ ಸ್ಥಳಕ್ಕೆ ಪೊಲೀಸರು ಕರೆದೊಯ್ದಿದ್ದಾರೆ. ಹಿಂದೂ ಪರ ಸಂಘಟನೆಗಳ ಬೆದರಿಕೆ ಹಿನ್ನೆಲೆಯಲ್ಲಿ ಮಲ್ಲಪ್ಪುರಂನ ಅಂಗಡಿಪ್ಪುರಂನಲ್ಲಿರುವ ಕನಕದುರ್ಗ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಇನ್ನು ಕೋಯಿಕ್ಕೋಡ್‌ನ ಕೊಯಿಲಾಂಡಿಯ್ಲಿರುವ ಬಿಂದು ಮನೆಯ ಮುಂದೆಯೂ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮನೆಗೆ ಬೀಗ ಹಾಕಲಾಗಿದ್ದು ಆಕೆಯ ಪತಿ ಹರಿಹರನ್‌ ಮತ್ತು 7 ವರ್ಷದ ಪುತ್ರಿ ಮನೆಯಿಂದ ಹೊರಗೆ ಇದ್ದಾರೆ ಎಂದು ತಿಳಿದು ಬಂದಿದೆ.

ದೇಗುಲ ಪ್ರವೇಶದ ಬೆನ್ನಿಗೆ ತಂತ್ರಿ ಕಂದರಾರು ರಾಜೀವರು ದೇವಸ್ಥಾನದ ಬಾಗಿಲು ಮುಚ್ಚಲು ನಿರ್ಧರಿಸಿದ್ದಾರೆ ಎಂದು ‘ಮಲಯಾಳ ಮನೋರಮಾ ಟಿವಿ’ ವರದಿ ಮಾಡಿದೆ.

ಕಳೆದ ವಾರ ಅಂದರೆ ಡಿಸೆಂಬರ್‌ 24ರಂದು ಇದೇ ಬಿಂದು ಮತ್ತು ಕನಕದುರ್ಗ ಶಬರಿಮಲೆಯ ಬೆಟ್ಟ ಹತ್ತಲು ಯತ್ನಿಸಿದ್ದರು. ಆದರೆ ಭಾರೀ ಪ್ರತಿಭಟನೆ ಮತ್ತು ತೀವ್ರ ಪ್ರತಿರೋಧದಿಂದ ಪ್ರಯತ್ನ ಯಶಸ್ವಿಯಾಗಿರಲಿಲ್ಲ. ಅದೇ ಮಹಿಳೆಯರೀಗ ಮರಳಿ ಯತ್ನದಲ್ಲಿ ದೇವಸ್ಥಾನ ಪ್ರವೇಶಿಸಿದ್ದಾರೆ. ಈ ಮೂಲಕ ಕೊನೆಗೂ ಸುಪ್ರೀಂ ಕೋರ್ಟ್‌ ತೀರ್ಪು ಜಾರಿಗೊಳಿಸಿ ಪಿಣರಾಯಿ ವಿಜಯನ್‌ ಸರಕಾರ ಹಿಂದೂ ಪರ ಸಂಘಟನೆಗಳಿಗೆ ಸಡ್ಡು ಹೊಡೆದಿದೆ. ಅದಕ್ಕಿಂತ ಹೆಚ್ಚಾಗಿ ತಮ್ಮಗಿದ್ದ ಹಕ್ಕನ್ನು ಮಹಿಳೆಯರು ಸಾಧಿಸಿದ್ದಾರೆ.