samachara
www.samachara.com
‘ಚಳಿ ಚಳಿ ತಾಳೆನು...’: ಉತ್ತರದಿಂದ ದಕ್ಷಿಣದವರೆಗೆ- ಬೆಂಗಳೂರಿನಿಂದ ಮಂಗಳೂರಿನವರೆಗೆ...
COVER STORY

‘ಚಳಿ ಚಳಿ ತಾಳೆನು...’: ಉತ್ತರದಿಂದ ದಕ್ಷಿಣದವರೆಗೆ- ಬೆಂಗಳೂರಿನಿಂದ ಮಂಗಳೂರಿನವರೆಗೆ...

ಕರ್ನಾಟಕದಲ್ಲಿಯೂ ಚಳಿಯ ಅಬ್ಬರ ಜೋರಾಗಿದೆ. ಡಿಸೆಂಬರ್‌ 31ರಂದು ಬೀದರ್‌ನಲ್ಲಿ ಕನಿಷ್ಠ 6.4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಬೆಂಗಳೂರಿನಲ್ಲಿ ಸೋಮವಾರ ರಾತ್ರಿ 14 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

ಹೊಸ ವರ್ಷದ ಆಗಮನ ಜನರಿಗೆ ಅಕ್ಷರಶಃ ನಡುಕ ಹುಟ್ಟಿಸಿದೆ. ಚಳಿಗೆ ಜನ ಪತರಗುಟ್ಟಿ ಹೋಗುತ್ತಿದ್ದಾರೆ. ಉತ್ತರ ಭಾರತದಿಂದ ಆರಂಭಿಸಿ ದಕ್ಷಿಣ ಭಾರತದವರೆಗೆ ಎಲ್ಲೆಲ್ಲೂ ಉಷ್ಣಾಂಶ ಕುಸಿತವಾಗಿದ್ದು ಕೆಲವು ಭಾಗಗಳಲ್ಲಿ ದಾಖಲೆಯ ಮಟ್ಟಕ್ಕೆ ಉಷ್ಠಾಂಶ ಅಳೆಯುವ ಮಾಪನದ ಪಾದರಸದ ಮಟ್ಟ ಇಳಿಕೆಯಾಗಿದೆ.

ಮುಖ್ಯವಾಗಿ ಚಳಿಗೆ ಖ್ಯಾತಿ ಪಡೆದ ದೆಹಲಿಯಲ್ಲಿ ಡಿಸೆಂಬರ್‌ನ ಒಂದು ಶನಿವಾರ 2.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಎಂದಿನಂತೆ ಚಳಿಗಾಲದಲ್ಲಿ ದೆಹಲಿಯ ಉಷ್ಣಾಂಶದ ಜತೆ ಏರಿಕೆಯಾಗುವ ವಾಯು ಮಾಲಿನ್ಯದ ಪ್ರಮಾಣವೂ ಹೆಚ್ಚಾಗಿದೆ. ಉತ್ತರ ಭಾರತದಲ್ಲಿ ಬೀಸುತ್ತಿರುವ ಶೀತ ಗಾಳಿಗೆ ದೆಹಲಿ ತುತ್ತಾಗಿದೆ. ಆದರೆ ಹೊಸ ವರ್ಷಕ್ಕೆ ರಾಜಧಾನಿಯ ಬಿಸಿ ಸ್ವಲ್ಪ ಮಟ್ಟಿಗೆ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚುನಾವಣೆ ಎದುರಿಗಿಟ್ಟುಕೊಂಡು ದೆಹಲಿ ಬಿಸಿಯಾಗದಿದ್ದರೆ ಹೇಗೆ ಅಲ್ವಾ?

ಇನ್ನು, ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ಬೀಸುವ ಶೀತಗಾಳಿ ಈ ಬಾರಿ ದಕ್ಷಿಣ ಭಾರತದವರೆಗೂ ಆಗಮಿಸಿರುವುದು ವಿಶೇಷ. ಮಧ್ಯ ಪ್ರದೇಶ, ಒಡಿಶಾ, ಮಹಾರಾಷ್ಟ್ರವನ್ನು ದಾಟಿ ಕುಳಿರ್ಗಾಳಿ ಹೈದರಾಬಾದ್‌ಗೆ ಅಪ್ಪಳಿಸಿದೆ. 1981ರ ನಂತರ ಇದೇ ಮೊದಲ ಬಾರಿಗೆ ಅತ್ಯಂತ ಹೆಚ್ಚಿನ ಚಳಿ ಪುಣೆಯಲ್ಲಿ ದಾಖಲಾಗಿದೆ. ಇಲ್ಲಿ ಶನಿವಾರ 5.9 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿತ್ತು. ಪುಣೆ ಮಾತ್ರವಲ್ಲದೆ ನಾಗ್ಪುರ, ಮಾಲೆಗಾಂವ್, ಔರಂಗದಾಬಾದ್, ನಾಸಿಕ್‌ ಮೊದಲಾದೆಡೆಯೂ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಸದ್ಯದ ಹವಾಮಾನವನ್ನು ನೋಡಿ ಪ್ರತಿಕ್ರಿಯೆ ನೀಡಿರುವ ಭಾರತೀಯ ಹವಾಮಾನ ಇಲಾಖೆ ತಜ್ಞರು; ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್‌, ಪಂಜಾಬ್‌, ಹರ್ಯಾಣ, ಚಂಡೀಗಢ, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌, ಮಧ್ಯ ಪ್ರದೇಶ, ಸೌರಾಷ್ಟ್ರ ಮತ್ತು ಕಚ್ಛ್, ವಿದರ್ಭ ಹಾಗೂ ಮಧ್ಯ ಮಹಾರಾಷ್ಟ್ರದ ಭಾಗಗಳಲ್ಲಿ ಕುಳಿರ್ಗಾಳಿಯ ವಾರಾವರಣವಿದೆ ಎಂದಿದ್ದಾರೆ. ಇನ್ನೂ ಕೆಲವು ದಿನ ಇದೇ ವಾತಾವರಣ ಇರಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ.

ಈ ಕುಳಿರ್ಗಾಳಿಯ ತೀವ್ರತೆ ಎಷ್ಟಿದೆ ಎಂದರೆ 1980ರ ನಂತರ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ, ಹರ್ಯಾಣ, ಪಂಜಾಬ್‌ ಮತ್ತು ರಾಜಸ್ಥಾನದಲ್ಲಿ ನೀರು ಹೆಪ್ಪುಗಟ್ಟಿದೆ. ಕೆಲವು ಕಡೆಗಳಲ್ಲಿ ಸೊನ್ನೆ ಡಿಗ್ರಿಗಿಂತಲೂ ಕನಿಷ್ಠ ಉಷ್ಣಾಂಶವಿದೆ. ಜಮ್ಮು ಮತ್ತು ಕಾಶ್ಮೀರದ ಖ್ಯಾತ ದಾಲ್‌ ಸರೋವರದಲ್ಲಿ ಎರಡು ದಿನ ಹಿಂದೆ -7.2 ಡಿಗ್ರಿ ತಾಪಮಾನ ದಾಖಲಾಗಿದ್ದು, ಸರೋವರದ ಒಂದು ಭಾಗ ಪೂರ್ತಿ ಮಂಜುಗಡ್ಡೆಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪ್ರಖ್ಯಾತ ದಾಲ್‌ ಸರೋವರ ಹೆಪ್ಪುಗಟ್ಟುತ್ತಿದ್ದಾಗ...
ಜಮ್ಮು ಮತ್ತು ಕಾಶ್ಮೀರದ ಪ್ರಖ್ಯಾತ ದಾಲ್‌ ಸರೋವರ ಹೆಪ್ಪುಗಟ್ಟುತ್ತಿದ್ದಾಗ...
/ಡಿಎನ್‌ಎ

ಮಧ್ಯ ಪ್ರದೇಶದಲ್ಲಿಯೂ ಶೀತ ವಾತಾವರಣ ಮುಂದುವರಿದಿದ್ದು ಮಧ್ಯ ಸೇವಿಸಿ ಮನೆಯ ಹೊರಗೆ ಶನಿವಾರ ಮಲಗಿದ್ದ ವ್ಯಕ್ತಿಯೊಬ್ಬರು ಭಾನುವಾರ ಸಾವನ್ನಪ್ಪಿದ್ದಾರೆ. ಇಲ್ಲಿನ ಮಂಡ್ಲ, ಉಮಾರಿಯಾ, ಬುಂದೇಲ್‌ಖಂಡ್‌ ಭಾಗದಲ್ಲಿ ಮಂಜಿನ ಸಣ್ಣ ಪದರ ಸೃಷ್ಟಿಯಾಗಿದ್ದು ವರದಿಯಾಗಿದೆ. ಪಚ್‌ಮರಿ ಬೆಟ್ಟದಲ್ಲಂತೂ -2 ಡಿಗ್ರಿ ತಾಪಮಾನ ದಾಖಲಾಗಿದೆ.

ಕೊಲ್ಕತ್ತಾ ನಗರದಲ್ಲಿಯೂ ಹಲವು ವರ್ಷಗಳ ನಂತರ 2-3 ಡಿಗ್ರಿಗೆ ತಾಪಮಾನ ಕುಸಿತವಾಗಿದೆ. ಬೆಟ್ಟ ಪ್ರದೇಶ ದಾರ್ಜಲಿಂಗ್‌ನಲ್ಲಿ 10 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮಂಜು ಬಿದ್ದಿದೆ. ಇಲ್ಲಿ 4-5 ಡಿಗ್ರಿಯಷ್ಟು ತಾಪಮಾನವಿದೆ. ಈ ಬಾರಿ ಚಳಿ ಗಾಳಿ ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಒಡಿಶಾ, ಮಹಾರಾಷ್ಟ್ರವನ್ನು ದಾಟಿ ತೆಲಂಗಾಣಕ್ಕೂ ಇದು ಕಾಲಿಟ್ಟಿದೆ. ಒಡಿಶಾದ ಪ್ರವಾಸಿ ಸ್ಥಳ ಕಂದಮಾಲ್‌ ಜಿಲ್ಲೆಯ ದರಿಂಗಿಬಾದಿಯಲ್ಲಿ ಸೋಮವಾರ 3 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಛತ್ತೀಸ್‌ಗಢದಲ್ಲೂ ನಿನ್ನೆ ಥರ್ಮೋಮೀಟರ್‌ ಮೂರು ಡಿಗ್ರಿಗಳನ್ನು ತೋರಿಸುತ್ತಿತ್ತು. ಹೈದರಾಬಾದ್‌ನಲ್ಲಿ ಸೋಮವಾರ ಉಷ್ಣಾಂಶ 9.5 ಡಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದರೆ ತೆಲಂಗಾಣದ ಕೆಲವು ಭಾಗಗಳಲ್ಲಿ ಕನಿಷ್ಠ ತಾಪಮಾನ 8.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ದಕ್ಷಿಣಕ್ಕೆ ಹೋಲಿಸಿದರೆ ಉತ್ತರದಲ್ಲಿ ಚಳಿ ಹೆಚ್ಚಾಗಿದ್ದು ಸದ್ಯ ದೇಶದಲ್ಲಿ ಅತಿ ಕಡಿಮೆ ಉಷ್ಣಾಂಶವಿರುವ ಪ್ರದೇಶಗಳು ಪಂಜಾಬ್‌, ಉತ್ತರ ಪ್ರದೇಶ, ಹರ್ಯಾಣ, ಬಿಹಾರ, ಮಧ್ಯ ಪ್ರದೇಶ, ರಾಜಸ್ಥಾನ್‌ಗಳಲ್ಲಿದೆ ಎಂದು ‘ಸ್ಕೈಮೆಟ್‌ ವೆದರ್‌’ ವರದಿ ಮಾಡಿದೆ.

ಕರ್ನಾಟಕದಲ್ಲೂ ಚಳಿಯ ನಡುಕ:

ಕರ್ನಾಟಕದಲ್ಲಿಯೂ ಚಳಿಯ ಅಬ್ಬರ ಜೋರಾಗಿದೆ. ಡಿಸೆಂಬರ್‌ 31ರಂದು ಬೀದರ್‌ನಲ್ಲಿ ಕನಿಷ್ಠ 6.4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಮಳೆಗೆ ಹೆಸರಾದ ಆಗುಂಬೆಯಲ್ಲಿ 12.4 ಡಿಗ್ರಿ ತಾಪಮಾನವಿದ್ದರೆ, ಬೆಳಗಾವಿ ವಿಮಾನ ನಿಲ್ದಾಣ 11.4, ಬಳ್ಳಾರಿಯಲ್ಲಿ 13, ವಿಜಯಪುರದಲ್ಲಿ 9.4, ಗದಗ 12.5, ಕಲಬುರಗಿ 12, ಹಾಸನದಲ್ಲಿ 10.6, ಮಡಿಕೇರಿಯಲ್ಲಿ 13.3, ಮಂಡ್ಯ 16.2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.

ಬೆಂಗಳೂರಿನಲ್ಲಿ ಸೋಮವಾರ ರಾತ್ರಿ 14 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ಕೆಎಐಎಲ್‌ನಂತ ಪ್ರದೇಶದಲ್ಲಿ 12.6 ಡಿಗ್ರಿಗೆ ಇಳಿಕೆಯಾಗಿತ್ತು ಎಂದು ಹವಾಮಾನ ಇಲಾಖೆ ಹೇಳಿದೆ. ಮುಂದಿನ ಕೆಲವು ದಿನಗಳಲ್ಲಿ ಬೆಂಗಳೂರಿನಲ್ಲಿ ಮತ್ತಷ್ಟು ಚಳಿ ಇರಲಿದೆ ಎಂದು ಇಲಾಖೆ ಹೇಳಿದೆ.

ಆದರೆ ಕರಾವಳಿ ಭಾಗದಲ್ಲಿ ಮತ್ತು ದಕ್ಷಿಣ ಒಳನಾಡಿನ ಕೆಲವು ಪ್ರದೇಶದಲ್ಲಿ ಹೆಚ್ಚಿನ ತಾಪಮಾನವಿದೆ. ಮೈಸೂರಿನಲ್ಲಿ 16.8 ಡಿಗ್ರಿ ಇದ್ದರೆ ಕರಾವಳಿಯ ನಗರಗಳಾದ ಮಂಗಳೂರಿನಲ್ಲಿ 21.5, ಕಾರವಾರದಲ್ಲಿ 22.3 ಡಿಗ್ರಿ ತಾಪಮಾನ ಇದೆ. ರಾಜ್ಯದ ಜನರು ನಡುಗುತ್ತಿದ್ದರೆ ಈ ಎರಡೂ ನಗರ ವಾಸಿಗಳು ಮಾತ್ರ ಬೆಚ್ಚಗಿದ್ದಾರೆ. ಹೀಗಾಗಿ ಡಿಸೆಂಬರ್‌ ಚಳಿಯ ನಡುವೆ ಬೆಚ್ಚಗಿನ ಪ್ರವಾಸ ಬೇಕೆನ್ನುವವರು ಕರಾವಳಿ ಕಡೆ ಮುಖಮಾಡಬಹುದು. ಚಳಿಯೇ ರೊಮ್ಯಾಂಟಿಕ್‌ ಅನ್ನುವವರು ಬೆಂಗಳೂರು ಬಿಟ್ಟು ಎಲ್ಲೂ ಹೋಗಬೇಡಿ. ಮುಂಬರಲಿರುವ ಚಳಿಯ ದಿನಗಳು ನಿಮಗಾಗಿ ಕಾದಿವೆ.