samachara
www.samachara.com
ಹೊಸ ವರ್ಷ- ಹಳೇ ರಾಜಕಾರಣ: ಲೋಕಸಭೆಗೆ ಕರ್ನಾಟಕ ಹೇಗೆ ಸಜ್ಜಾಗುತ್ತಿದೆ? 
COVER STORY

ಹೊಸ ವರ್ಷ- ಹಳೇ ರಾಜಕಾರಣ: ಲೋಕಸಭೆಗೆ ಕರ್ನಾಟಕ ಹೇಗೆ ಸಜ್ಜಾಗುತ್ತಿದೆ? 

ಎಡಮೈತ್ರಿಕೂಟದ ಚುನಾವಣಾ ಲೆಕ್ಕಾಚಾರಗಳು ಒಂದು ವೇಳೆ ಫಲಕೊಟ್ಟರೆ ಲೋಕಸಭೆಯಲ್ಲಿ ಬಿಜೆಪಿ ಸಂಖ್ಯೆ ಸ್ವಲ್ಪವಾದರೂ ತಗ್ಗಲಿದೆ.

2019 ಹೊಸ ವರ್ಷದ ಆಗಮನದ ಜತೆಗೆ ಲೋಕಸಭಾ ಚುನಾವಣೆಗೆ ದಿನಗಣನೆಯೂ ಶುರುವಾಗಿದೆ. ಏಪ್ರಿಲ್‌- ಮೇ ಹೊತ್ತಿಗೆ, ಅಂದರೆ ಮುಂದಿನ 150 ದಿನಗಳಲ್ಲಿ ಭಾರತದಲ್ಲಿ ಹೊಸ ಸರಕಾರವೊಂದು ಅಧಿಕಾರಕ್ಕೆ ಬಂದಿರುತ್ತದೆ. ಬಿಜೆಪಿ, ಕಾಂಗ್ರೆಸ್‌-ಎಡಪಕ್ಷಗಳ ಮೈತ್ರಿಕೂಟದ ಪೈಕಿ ಯಾರು ಅಧಿಕಾರಕ್ಕೇರಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಕೆಲವೇ ತಿಂಗಳಲ್ಲಿ ದೇಶದ ಶ್ರೀಸಾಮಾನ್ಯನ ಕೈಗೆ ಬಂದು ಹೋಗಿರುತ್ತದೆ.

ಪಂಚರಾಜ್ಯಗಳ ಚುನಾವಣೆಯ ಸೆಮಿಫೈನಲ್ ಸೋಲಿನಲ್ಲಿರುವ ಬಿಜೆಪಿ ರಾಷ್ಟ್ರಮಟ್ಟದ ಗೆಲುವಿಗೆ ಬೇಕಾದ ತಾಲೀಮಿನಲ್ಲಿ ತೊಡಗಿದೆ. ಉತ್ತರ ಭಾರತದ ಹೃದಯಭಾಗದ ಮೂರು ಪ್ರಮುಖ ರಾಜ್ಯಗಳಲ್ಲಿ ಅಧಿಕಾರಕ್ಕೇರುವ ಮೂಲಕ ತನ್ನ ಬಲ ಇನ್ನೂ ಉಡುಗಿಲ್ಲ ಎಂದು ತೋರಿಸಿರುವ ಕಾಂಗ್ರೆಸ್‌, ಲೋಕಸಭಾ ಚುನಾವಣೆಯಲ್ಲೂ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಭರವಸೆಯಲ್ಲಿದೆ. ಕಾಂಗ್ರೆಸ್‌ನ ಈ ಭರವಸೆಗೆ ಕಾರಣ ಪ್ರಾದೇಶಿಕ ಪಕ್ಷಗಳ ಬೆಂಬಲ ಹಾಗೂ ಗಟ್ಟಿಗೊಳ್ಳುತ್ತಿರುವ ಎಡಮೈತ್ರಿಕೂಟದ ಬಲ.

ಪಂಚರಾಜ್ಯಗಳ ಚುನಾವಣೆಯಲ್ಲೂ ಸವೆದು ಹೋಗಿರುವ ಮೋದಿ ಅಲೆ, ರಾಮ ಮಂದಿರ ನಿರ್ಮಾಣ ಹಾಗೂ ದೇಶವನ್ನು ಕಾಂಗ್ರೆಸ್‌ ಮುಕ್ತಗೊಳಿಸುವ ಮಾತನ್ನಾಡಿಕೊಂಡೇ ಬಂದ ಬಿಜೆಪಿ ಸದ್ಯ ಚುನಾವಣೆಗೆ ಹೊಸ ಸರಕಿನ ಕೊರತೆಯನ್ನು ಎದುರಿಸುತ್ತಿರುವಂತಿದೆ. ಕೇಂದ್ರದ ಬಿಜೆಪಿ ಸರಕಾರದ ವೈಫಲ್ಯಗಳು ಹಾಗೂ ಕೃಷಿ ಬಿಕ್ಕಟ್ಟು, ನಿರುದ್ಯೋಗ, ರಫೇಲ್‌ ಹಗರಣ, ಸಾಲಮನ್ನಾ ಭರವಸೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುವಷ್ಟು ಮತಬಲವನ್ನು ಮತ್ತೆ ಗಳಿಸಿಕೊಂಡಿದೆ.

ಬಹುತೇಕ ಇದೇ ವಿಚಾರಗಳೂ ಹೆಚ್ಚೂ ಕಡಿಮೆ ಶೈನ್‌ ಆಗಿ ಲೋಕಸಭಾ ಚುನಾವಣೆಗೂ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಚುನಾವಣಾ ವಿಷಯಗಳಾಗಲಿವೆ. ಹಿಂದುತ್ವ, ರಾಮ ಮಂದಿರ ನಿರ್ಮಾಣದ ಮಂತ್ರಗಳನ್ನೇ ಬಿಜೆಪಿ ಈ ಬಾರಿಯೂ ಹೊಸದಾಗಿ ಪಠಿಸುವ ಸಾಧ್ಯತೆ ಇದೆ. ಆದರೆ, ಮೋದಿ ಅಲೆ ಎಂಬುದನ್ನು ಖುದ್ದು ಬಿಜೆಪಿಯೇ ಈ ಬಾರಿ ಪ್ರಯೋಗಿಸುವ ಸಾಧ್ಯತೆ ಕಡಿಮೆ. ಮೋದಿ ಭಕ್ತರ ದಂಡನ್ನು ಚುನಾವಣಾ ಲಾಭವಾಗಿಸಿಕೊಳ್ಳುವ ಪ್ರಯತ್ನಗಳು ಒಂದು ಕಡೆ ಪಕ್ಷದ ಹೊರಗೆಂಬಂತೆ ನಡೆಯುತ್ತಿದ್ದರೆ, ಪಕ್ಷದೊಳಗೆ ಮೋದಿ ಅಲೆಯನ್ನು ಚುನಾವಣಾ ವಿಷಯವಾಗಿ ಮುಟ್ಟದಿರಲು ಈಗಾಗಲೇ ನಿರ್ಧರಿಸಿರುವಂತೆ ಕಾಣುತ್ತಿದೆ. ರಫೇಲ್‌ ಹಗರಣದಲ್ಲಿ ಸುಪ್ರೀಂಕೋರ್ಟ್‌ನ ಕ್ಲೀನ್‌ ಚಿಟ್‌ ಅನ್ನು, “ಕಾಂಗ್ರೆಸ್‌ನ ಅಪಪ್ರಚಾರ ವಿರುದ್ಧ ತಮ್ಮ ಗೆಲುವು” ಎಂದೂ ಬಿಜೆಪಿ ಬಿಂಬಿಸಿಕೊಳ್ಳದೆ ಇರದು.

ಕಾಂಗ್ರೆಸ್‌ ಲೋಕಸಭಾ ಚುನಾವಣೆಗೂ ಬಿಜೆಪಿ ಸರಕಾರದ ವೈಫಲ್ಯಗಳು, ಕೃಷಿ ಬಿಕ್ಕಟ್ಟು, ಸಾಲಮನ್ನಾ ವಿಷಯಗಳನ್ನೇ ಮುಖ್ಯವಾಗಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಪ್ರಾದೇಶಿಕ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್‌ ಸೀಟು ಹಂಚಿಕೆಯ ಮೂಲಕ ಕೇಂದ್ರದಲ್ಲಿ ಎಡಮೈತ್ರಿಕೂಟದ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದೆ. ಬಿಜೆಪಿ ರಾಷ್ಟ್ರೀಯ ವೈಫಲ್ಯ ಹಾಗೂ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಓಟು ಕೇಳುವ ಕಾಂಗ್ರೆಸ್‌ ರಾಷ್ಟ್ರಮಟ್ಟದಲ್ಲಿ ಕೃಷಿ ಬಿಕ್ಕಟ್ಟು ಹಾಗೂ ಸಾಲಮನ್ನಾ ವಿಷಯಗಳನ್ನು ಪ್ರಮುಖವಾಗಿ ಗುರಿಯಾಗಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು.

ಕರ್ನಾಟಕ ಬಿಜೆಪಿಗೆ ನಾಯಕತ್ವದ ಕೊರತೆ:

ಕರ್ನಾಟಕದ ಮಟ್ಟಿಗೂ ಈ ಎರಡೂ ರಾಷ್ಟ್ರೀಯ ಪಕ್ಷಗಳು ಬಹುತೇಕ ಇವೇ ವಿಷಯಗಳನ್ನು ಲೋಕಸಭಾ ಚುನಾವಣೆಯ ಮುಖ್ಯ ವಿಚಾರಗಳಾಗಿಸಿಕೊಳ್ಳಲಿವೆ. ಬಿಜೆಪಿ ಈಗಾಗಲೇ ಹಿಡಿತ ಹೊಂದಿರುವ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಜತೆಗೆ ಹೊಸ ಕ್ಷೇತ್ರಗಳನ್ನು ಗೆಲ್ಲುವ ಕಡೆಗೂ ಗಮನ ಹರಿಸಿದೆ. ಆದರೆ, ಮೇಲು ನೋಟಕ್ಕೆ ಎಲ್ಲವೂ ಸರಿ ಇರುವಂತೆ ಕಾಣುವ ಕರ್ನಾಟಕ ಬಿಜೆಪಿಯ ಆಂತರಿಕ ಒಡಕಿನ ಮಧ್ಯೆ ಬಿಜೆಪಿ ರಾಷ್ಟ್ರೀಯ ಕನಸು ಗರಿಷ್ಠ ಪ್ರಮಾಣದಲ್ಲಿ ನನಸಾಗುವುದು ಕಷ್ಟ. ಕರ್ನಾಟಕದ ಮೂಲಕ ದಕ್ಷಿಣ ಭಾರತವನ್ನು ಗೆಲ್ಲಬೇಕೆನ್ನುವ ಬಿಜೆಪಿ ಆಸೆ ಈಗಾಗಲೇ ನಿರಾಸೆಯಾಗಿದ್ದು, ಇರುವ ಸ್ಥಾನಗಳನ್ನಾದರೂ ಉಳಿಸಿಕೊಳ್ಳುವ ಕಡೆಗೇ ರಾಜ್ಯ ಬಿಜೆಪಿಯ ಗಮನ ಹೆಚ್ಚಾಗಲಿದೆ.

“ಬಿಜೆಪಿ ಹಿಂದುತ್ವ, ರಾಮ ಮಂದಿರ ನಿರ್ಮಾಣ ವಿಚಾರಗಳನ್ನೇ ಮತ್ತೆ ಹೊಸದಾಗಿ ಹೇಳುವ ಪ್ರಯತ್ನವನ್ನು ರಾಜ್ಯದಲ್ಲಿ ಮಾಡಬಹುದು. ಆದರೆ, ಬಿಜೆಪಿಗೆ ಕರ್ನಾಟಕದಲ್ಲಿ ಪಕ್ಷದ ಆಂತರಿಕ ಒಡಕೇ ತೊಡಕಾಗಲಿದೆ. ಕರ್ನಾಟಕ ಬಿಜೆಪಿಯಲ್ಲಿರುವ ನಾಯಕತ್ವದ ಕೊರತೆ ಹಾಗೂ ಪಕ್ಷದೊಳಗಿನ ಒಡಕುಗಳು ಬಿಜೆಪಿಗೆ ಸ್ವಲ್ಪಮಟ್ಟಿಗೆ ಲೋಕಸಭಾ ಚುನಾವಣೆಯಲ್ಲಿ ಹೊಡೆತ ಕೊಡಬಹುದು” ಎನ್ನುತ್ತಾರೆ ಹಿರಿಯ ರಾಜಕೀಯ ವಿಶ್ಲೇಷಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಹರೀಶ್‌ ರಾಮಸ್ವಾಮಿ.

“ಕರ್ನಾಟಕದಲ್ಲಿ ಕಾಂಗ್ರೆಸ್‌ ವಿಷಯಕ್ಕೆ ಬಂದಾಗ ರಾಹುಲ್‌ ಗಾಂಧಿ ನಾಯಕತ್ವಕ್ಕಿಂತಲೂ ಪಕ್ಷದ ವರ್ಚಸ್ಸು ಹೆಚ್ಚು ಕೆಲಸ ಮಾಡಲಿದೆ. ಕಾಂಗ್ರೆಸ್‌ನ ಸಿದ್ಧಾಂತ ಹಾಗೂ ನೀತಿ ನಿರೂಪಣೆಗಳು ಕರ್ನಾಟಕದ ಸಾಂಪ್ರದಾಯಿಕ ಕಾಂಗ್ರೆಸ್‌ ಮತದಾರರ ಮನಸ್ಸು ಬೇರೆ ಕಡೆಗೆ ಹರಿಯುವಂತೆ ಮಾಡುವುದು ಕಷ್ಟವಿದೆ. ಅಲ್ಲದೆ, ಈ ಚುನಾವಣೆಗೆ ಬಿಜೆಪಿ ಮತಗಳನ್ನು ಒಡೆಯುವ ಕಡೆಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಯೋಚಿಸುತ್ತಿಲ್ಲ. ಬದಲಿಗೆ ತಮ್ಮ ಸಾಂಪ್ರದಾಯಿಕ ಮತಗಳು ಬೇರೆ ಕಡೆಗೆ ಹೋಗದಂತೆ ಒಗ್ಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷಗಳು ತಳ ಹಂತದಲ್ಲಿ ಕೆಲಸ ಮಾಡುತ್ತಿವೆ” ಎನ್ನುತ್ತಾರೆ ಡಾ. ರಾಮಸ್ವಾಮಿ.

ಬಿಜೆಪಿ ಹಿಂದುತ್ವ, ರಾಮ ಮಂದಿರದ ವಿಚಾರಗಳನ್ನೇ ಹೊಸದಾಗಿ ಹೇಳುವ ಪ್ರಯತ್ನ ನಡೆಸಿದರೆ, ಕಾಂಗ್ರೆಸ್‌- ಜೆಡಿಎಸ್‌ ಕೃಷಿ ಬಿಕ್ಕಟ್ಟು, ಸಾಲಮನ್ನಾ ವಿಚಾರಗಳನ್ನು ಪ್ರಮುಖವಾಗಿ ಮುಂದಿಡಬಹುದು. ಆದರೆ, ರಾಷ್ಟ್ರೀಯ ಮಟ್ಟದಲ್ಲಿ ಈ ಹೊತ್ತಿನ ಪರಿಸ್ಥಿತಿ ನೋಡಿದರೆ ಮತ್ತೆ ಬಿಜೆಪಿಯೇ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆಯೇ ಹೆಚ್ಚಾಗಿದೆ.
- ಡಾ. ಹರೀಶ್‌ ರಾಮಸ್ವಾಮಿ, ರಾಜ್ಯಶಾಸ್ತ್ರ ಪ್ರಾಧ್ಯಾಪಕ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 2014ರಲ್ಲಿ 17 ಸ್ಥಾನಗಳನ್ನು ಗೆದ್ದಿತ್ತು. 2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರವನ್ನು ಕಳೆದುಕೊಂಡ ಬಿಜೆಪಿಯ ಬಲ ಈಗ ರಾಜ್ಯದಲ್ಲಿ 16. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅನಂತ್‌ ಕುಮಾರ್‌ ನಿಧನದಿಂದ ಬಿಜೆಪಿಯ ಒಂದು ಸ್ಥಾನ ತೆರವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣದ ಜಯನಗರ ಕ್ಷೇತ್ರವನ್ನು ಕಳೆದುಕೊಂಡ ಬಿಜೆಪಿಗೆ ಈ ಬಾರಿ, ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅನಂತ್‌ ಕುಮಾರ್‌ ನಿಧನದ ಅನುಕಂಪ ಕೆಲಸ ಮಾಡಲಿದೆಯೇ ನೋಡಬೇಕು.

ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಕೂಟದ ಲೆಕ್ಕಾಚಾರ:

ಕರ್ನಾಟಕದಲ್ಲಿ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದ ಕೆಲವೇ ತಿಂಗಳಲ್ಲಿ ಕಾಂಗ್ರೆಸ್‌ – ಜೆಡಿಎಸ್‌ ಲೋಕಸಭೆಗೂ ಮೈತ್ರಿ ಮುಂದುವರಿಯುವುದುನ್ನು ಖಚಿತ ಪಡಿಸಿದ್ದವು. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಮೈತ್ರಿ ಮಾಡಿಕೊಳ್ಳುತ್ತಿರುವುದಾಗಿ ಕಾಂಗ್ರೆಸ್‌ – ಜೆಡಿಎಸ್‌ ನಾಯಕರು ಅಕ್ಟೋಬರ್‌ ತಿಂಗಳಲ್ಲೇ ಘೋಷಿಸಿದ್ದರು. ಮೈತ್ರಿ ಹಾಗೂ ಸೀಟು ಹಂಚಿಕೆ ಹಂಚಿಕೆ ಮೂಲಕ ಕಾಂಗ್ರೆಸ್‌- ಜೆಡಿಎಸ್‌ಗೆ ಹಂಚಿಹೋಗುತ್ತಿದ್ದ ಮತಗಳನ್ನು ಒಗ್ಗೂಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ ಕೈ-ತೆನೆ ಮುಖಂಡರು.

2014ರಲ್ಲಿ 9 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌ ಉಪ ಚುನಾವಣೆಯಲ್ಲಿ ಬಳ್ಳಾರಿ ಗೆಲುವಿನೊಂದಿಗೆ ತನ್ನ ಸಂಖ್ಯೆಯನ್ನು 10ಕ್ಕೆ ಏರಿಸಿಕೊಂಡಿದೆ. ಮಂಡ್ಯ ಉಪ ಚುನಾವಣೆಯ ಗೆಲುವಿನ ಮೂಲಕ ಜೆಡಿಎಸ್‌ ಹಿಂದಿನ ಎರಡು ಸ್ಥಾನಗಳನ್ನು ಉಳಿಸಿಕೊಂಡಿದೆ. ರಾಜ್ಯದಲ್ಲಿ ಜೆಡಿಎಸ್‌ ಹಿಡಿತವಿರುವ ಕನಿಷ್ಠ 12 ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಜೆಡಿಎಸ್‌ ಈಗಾಗಲೇ ಕಾಂಗ್ರೆಸ್‌ ಮುಂದೆ ಬೇಡಿಕೆ ಇಟ್ಟಿದೆ. ವಕ್ಕಲಿಗರು ಹೆಚ್ಚಾಗಿರುವ ಹಾಗೂ ಜೆಡಿಎಸ್‌ ಪ್ರಭಾವವಿರುವ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಜೆಡಿಎಸ್‌ ತಂತ್ರ ರೂಪಿಸಿದೆ. ಇದಕ್ಕಾಗಿ ಹಾಸನ ಲೋಕಸಭಾ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್‌ಗೆ ಬಿಟ್ಟುಕೊಟ್ಟಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ತಾವು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಲೆಕ್ಕಾಚಾರ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಹಾಗೂ ಮಧ್ಯ ಕರ್ನಾಟಕ, ಹೈದರಾಬಾದ್‌ ಕರ್ನಾಡಕದ ಕೆಲವು ಭಾಗಗಳಲ್ಲಿ ಈಗಿರುಸ ಸ್ಥಾನಗಳನ್ನು ಕಾಂಗ್ರೆಸ್‌ ಉಳಿಸಿಕೊಳ್ಳಬಹುದು. ಆದರೆ, ಉತ್ತರ ಕರ್ನಾಟಕ, ಮುಂಬೈ ಕರ್ನಾಟಕ ಭಾಗದಲ್ಲಿ ಬಿಜೆಪಿ ಹಿಡಿತವಿರುವ ಕ್ಷೇತ್ರಗಳನ್ನು ಕಾಂಗ್ರೆಸ್‌ ಒಡೆಯುವುದು ಕಷ್ಟವಿದೆ. “ಮುಂಬೈ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಸಾಂಪ್ರದಾಯಿಕ ಮತಗಳ ಬಲವಿದೆ. ಲಿಂಗಾಯತ ಸಮುದಾಯದ ಲೆಕ್ಕಾಚಾರವೂ ಇಲ್ಲಿ ಕೆಲಸ ಮಾಡುತ್ತಿದೆ. ಹೀಗಾಗಿ ಈ ಭಾಗದಲ್ಲಿ ಈಗಾಗಲೇ ಬಿಜೆಪಿ ಗೆದ್ದಿರುವ ಸ್ಥಾನಗಳನ್ನು ಕಾಂಗ್ರೆಸ್‌ ಹೊಡೆದುಕೊಳ್ಳುವುದು ಅಷ್ಟು ಸುಲಭವಿಲ್ಲ” ಎಂಬುದು ಡಾ. ಹರೀಶ್‌ ರಾಮಸ್ವಾಮಿ ಅವರ ಅಭಿಪ್ರಾಯ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 10ರಿಂದ 12, ಜೆಡಿಎಸ್‌ 4ರಿಂದ 5 ಹಾಗೂ ಉಳಿದ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಇದೆ ಎಂಬುದು ಡಾ. ರಾಮಸ್ವಾಮಿ ಅವರ ರಾಜಕೀಯ ಅಂದಾಜು. ಒಂದು ವೇಳೆ ಈ ಅಂಕಿಸಂಖ್ಯೆಗಳು ನಿಜವಾದರೆ ಬಿಜೆಪಿಯ ಸ್ಥಾನ ರಾಜ್ಯದಲ್ಲಿ ಸ್ವಲ್ಪವಾದರೂ ಕುಸಿಯುವುದು ಖಚಿತ. ಒಂದು ವೇಳೆ ಕಾಂಗ್ರೆಸ್‌ 12, ಜೆಡಿಎಸ್‌ 5 ಸ್ಥಾನಗಳನ್ನು ಪಡೆದರೆ ಬಿಜೆಪಿ ಬಲ 11ಕ್ಕೆ ಇಳಿಯಲಿದೆ.

ಕರ್ನಾಟಕದಲ್ಲಿ ಈಗಾಗಲೇ ಕಡಿಮೆಯಾಗಿರುವ ಮೋದಿ ಅಲೆ, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಬಿತ್ತುತ್ತಿರುವ ಆಡಳಿತ ವಿರೋಧಿ ಅಲೆ ಹಾಗೂ ಪ್ರಾದೇಶಿಕ ಪಕ್ಷಗಳನ್ನು ಎತ್ತುತ್ತಿರುವ ಸ್ಥಳೀಯ ಸಮಸ್ಯೆ ಹಾಗೂ ಜಾತಿ ಲೆಕ್ಕಾಚಾರಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಲಿವೆ. ಎಡಮೈತ್ರಿಕೂಟದ ಈ ಲೆಕ್ಕಾಚಾರಗಳು ಒಂದು ವೇಳೆ ಫಲಕೊಟ್ಟರೆ ಲೋಕಸಭೆಯಲ್ಲಿ ಬಿಜೆಪಿ ಸಂಖ್ಯೆ ಸ್ವಲ್ಪವಾದರೂ ತಗ್ಗಲಿದೆ. ಅದರಲ್ಲಿ ರಾಜ್ಯದ ಪಾಲು ಎಷ್ಟಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.