samachara
www.samachara.com
ರಾಜ್ಯಸಭೆ ಜರಡಿಯಲ್ಲಿ ‘ತ್ರಿವಳಿ ತಲಾಖ್‌’; ಮಸೂದೆಗೆ ಕಾಂಗ್ರೆಸ್ ವಿರೋಧವೇಕೆ?
COVER STORY

ರಾಜ್ಯಸಭೆ ಜರಡಿಯಲ್ಲಿ ‘ತ್ರಿವಳಿ ತಲಾಖ್‌’; ಮಸೂದೆಗೆ ಕಾಂಗ್ರೆಸ್ ವಿರೋಧವೇಕೆ?

ತ್ರಿವಳಿ ತಲಾಖ್‌ ಮಸೂದೆಯನ್ನು ಸಂಸತ್ತಿನ ಆಯ್ಕೆ ಸಮಿತಿಯ ಪರಾಮರ್ಶೆಗೆ ಒಳಪಡಿಸಬೇಕೆಂದು ಕಾಂಗ್ರೆಸ್‌ ಪಟ್ಟು ಹಿಡಿದಿರುವುದರಿಂದ ಮಸೂದೆ ಮತ್ತೆ ರಾಜ್ಯಸಭೆಯಲ್ಲಿ ನಿಂತಿದೆ.

ಕಾಂಗ್ರೆಸ್‌ನ ವಿರೋಧದ ನಡುವೆಯೇ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದ್ದ ಮುಸ್ಲಿಂ ಮಹಿಳೆಯರ ಮದುವೆ ಹಕ್ಕುಗಳ ರಕ್ಷಣೆ ಮಸೂದೆ-2018 (ತ್ರಿವಳಿ ತಲಾಖ್) ಈಗ ರಾಜ್ಯಸಭೆಯ ಮುಂದೆ ಬಂದಿದೆ. ಸೋಮವಾರ ರಾಜ್ಯಸಭೆಯಲ್ಲಿ ಮಂಡನೆಯಾಗಿರುವ ಮಸೂದೆಯನ್ನು ಅನುಮೋದಿಸಲು ಕಾಂಗ್ರೆಸ್ ಸೇರಿದಂತೆ ಇತರೆ ಪ್ರತಿಪಕ್ಷಗಳು ಹಿಂದೇಟು ಹಾಕಿವೆ. ತ್ರಿವಳಿ ತಲಾಖ್‌ ಗದ್ದಲದಿಂದ ರಾಜ್ಯಸಭೆಯ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಗಿದೆ.

ತ್ರಿವಳಿ ತಲಾಖ್‌ ಮಸೂದೆಗೆ ಕಳೆದ ಗುರುವಾರ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಮಸೂದೆ ವಿರೋಧಿಸಿ ಕಾಂಗ್ರೆಸ್‌ ಸಂಸದರು ಸಭಾತ್ಯಾಗ ನಡೆಸಿದ ಬಳಿಕ ಮಸೂದೆಯನ್ನು ಮತಕ್ಕೆ ಹಾಕಲಾಗಿತ್ತು. ಮಸೂದೆ ಪರವಾಗಿ 245 ಮತಗಳು ಹಾಗೂ ವಿರುದ್ಧವಾಗಿ 11 ಮತಗಳು ಬಂದಿದ್ದವು. ಲೋಕಸಭೆಯಲ್ಲಿ ಬಿಜೆಪಿಯ ಬಹುಮತದ ಕಾರಣದಿಂದ ಮಸೂದೆ ಅನುಮೋದನೆ ಪಡೆದಿದೆ. ಆದರೆ, ರಾಜ್ಯಸಭೆಯಲ್ಲಿ ಸಂಖ್ಯಾಬಲದ ಕೊರತೆಯಿಂದ ಸರಕಾರ ವಿಪಕ್ಷಗಳ ಮುಂದೆ ಮಣಿಯಬೇಕಾದ ಅನಿವಾರ್ಯವಿದೆ.

ಮುಸ್ಲಿಂ ಮಹಿಳೆಯರ ಪಾಲಿಗೆ ವರವಾಗಿರುವ ತ್ರಿವಳಿ ತಲಾಖ್‌ ಮಸೂದೆಯನ್ನು ಕಾಂಗ್ರೆಸ್‌ ಹಾಗೂ ಇತರೆ ವಿರೋಧ ಪಕ್ಷಗಳು ಈ ಮಸೂದೆಯನ್ನು ವಿರೋಧಿಸುತ್ತಿವೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ವಿಪಕ್ಷಗಳು ನಿಜಕ್ಕೂ ಈ ಮಸೂದೆಯನ್ನು ಸಂಪೂರ್ಣವಾಗಿ ವಿರೋಧಿಸುತ್ತಿಲ್ಲ. ಕರಡು ಮಸೂದೆಯಲ್ಲಿರುವ ಕೆಲವು ಅಂಶಗಳನ್ನು ತೆಗೆದು ಹಾಕಬೇಕು ಹಾಗೂ ಈ ಮಸೂದೆಯನ್ನು ಸಂಸತ್ತಿನ ಆಯ್ಕೆ ಸಮಿತಿಯ ಪರಾಮರ್ಶೆಗೆ ಒಳಪಡಿಸಬೇಕೆಂದು ಕಾಂಗ್ರೆಸ್‌ ಪಟ್ಟು ಹಿಡಿದಿದೆ.

ಆದರೆ, ವಿಪಕ್ಷಗಳು ಹೇಳಿರುವ ತಿದ್ದುಪಡಿಗಳನ್ನು ಈಗಾಗಲೇ ಮಸೂದೆಯಲ್ಲಿ ಮಾಡಲಾಗಿದೆ ಎಂದು ವಾದಿಸುತ್ತಿರುವ ಕೇಂದ್ರ ಸರಕಾರವೂ ತನ್ನ ಪಟ್ಟು ಸಡಿಲಿಸಲು ಸಿದ್ಧವಿಲ್ಲ. ಹೀಗಾಗಿ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿರುವ ತ್ರಿವಳಿ ತಲಾಖ್‌ ಮಸೂದೆ ಸದ್ಯ ರಾಜ್ಯಸಭೆಯ ಅಡ್ಡಗತ್ತರಿಯಲ್ಲಿ ಸಿಲುಕಿದೆ.

Also read: ತಲಾಖ್.. ತಲಾಖ್.. ತಲಾಖ್.. ನಿಜಕ್ಕೂ ಏನಿದು ತ್ರಿವಳಿ ತಲಾಖ್?

‘ಕ್ರಿಮಿನಲ್‌ ಶಿಕ್ಷೆ ಸರಿಯಲ್ಲ’:

‘ಸಿವಿಲ್‌ ವ್ಯಾಜ್ಯಗಳಿಗೆ ಕ್ರಿಮಿನಲ್‌ ಶಿಕ್ಷೆ ಸರಿಯಲ್ಲ’ ಎಂದು ವಾದಿಸುತ್ತಿರುವ ಕಾಂಗ್ರೆಸ್‌, ತ್ರಿವಳಿ ತಲಾಖ್ ನೀಡುವ ಪತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುವುದನ್ನು ವಿರೋಧಿಸುತ್ತಿದೆ. “ಯಾವುದೇ ಧರ್ಮದಲ್ಲೂ ಹೆಂಡತಿಯನ್ನು ಬಿಡುವುದಕ್ಕೆ ಜೈಲು ಶಿಕ್ಷೆ ಇಲ್ಲ. ಆದರೆ, ಭಾರತದಲ್ಲಿ ಈ ಶಿಕ್ಷೆಯನ್ನು ಮುಸ್ಲಿಮರಿಗೆ ಮಾತ್ರ ಹೇರುತ್ತಿರುವುದು ಸರಿಯಲ್ಲ. ಮಸೂದೆಯಿಂದ ಜೈಲು ಶಿಕ್ಷೆಯನ್ನು ಕೈಬಿಡಬೇಕು” ಎಂಬುದು ಕಾಂಗ್ರೆಸ್‌ ಆಗ್ರಹ.

“ಪತಿ ಜೈಲಿಗೆ ಹೋದ ಮೇಲೆ ಆತನ ಹೆಂಡತಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಯಾರದ್ದು ಎಂಬ ಬಗ್ಗೆಯೂ ಮಸೂದೆಯಲ್ಲಿ ಸ್ಪಷ್ಟತೆ ಇಲ್ಲ. ಅಲ್ಲದೆ ಜೈಲು ಶಿಕ್ಷೆಯಂಥ ಕ್ರಮದಿಂದ ಮತ್ತೆ ಆ ಕುಟುಂಬ ಒಂದಾಗಲು ಹೇಗೆ ಸಾಧ್ಯ” ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ. ತ್ರಿವಳಿ ತಲಾಖ್‌ ಅನ್ನು ಕ್ರಿಮಿನಲ್‌ ಅಪರಾಧದ ವ್ಯಾಪ್ತಿಗೆ ತರುತ್ತಿರುವುದಕ್ಕೆ ಕಾಂಗ್ರೆಸ್‌ ತೀವ್ರವಾಗಿ ಆಕ್ಷೇಪಿಸುತ್ತಿದೆ.

ತ್ರಿವಳಿ ತಲಾಖ್‌ ಪದ್ಧತಿಯನ್ನು ಸುಪ್ರೀಂಕೋರ್ಟ್‌ ನಿಷೇಧಿಸಿರುವುದರಿಂದ ಮಸೂದೆಯನ್ನು ಸಂಸತ್ತಿನಲ್ಲಿ ಅನುಮೋದಿಸಬೇಕೆಂಬುದು ಸರಕಾರದ ವಾದ. ಸುಪ್ರೀಂಕೋರ್ಟ್‌ ತ್ರಿವಳಿ ತಲಾಖ್‌ ನಿಷೇಧಿಸಿರುವುದೇನೋ ಸರಿ; ಆದರೆ, ತ್ರಿವಳಿ ತಲಾಖ್‌ಗೆ ಜೈಲು ಶಿಕ್ಷೆ ವಿಧಿಸಬೇಕೆಂದು ಸುಪ್ರೀಂಕೋರ್ಟ್‌ ನಿರ್ದೇಶನವನ್ನೇನೂ ನೀಡಿಲ್ಲ ಎನ್ನುತ್ತಿದೆ ಕಾಂಗ್ರೆಸ್‌.

Also read: ತ್ರಿವಳಿ ತಲಾಖ್ 'ಸಂವಿಧಾನ ಬಾಹಿರ': ಕೇಂದ್ರ ಸರಕಾರದ ಅಂಗಳಕ್ಕೆ ಚೆಂಡು; ಕಾನೂನು ರಚಿಸಲು 6 ತಿಂಗಳ ಕಾಲಾವಕಾಶ

ಎರಡನೇ ಬಾರಿ ರಾಜ್ಯಸಭೆ ಮುಂದೆ:

ತ್ರಿವಳಿ ತಲಾಖ್‌ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗುತ್ತಿರುವುದು ಇದು ಎರಡನೇ ಬಾರಿ. 2017ರ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಮಸೂದೆ ಮಂಡಿಸಿ ಅಂಗೀಕಾರ ಪಡೆಯಲಾಗಿತ್ತು. ರಾಜ್ಯಸಭೆಯಲ್ಲಿ ಅಂಗೀಕಾರ ಸಾಧ್ಯವಾಗಿರಲಿಲ್ಲ. ಈಗ ಮಸೂದೆ ಮತ್ತೆ ರಾಜ್ಯಸಭೆಯ ಜರಡಿಗೆ ಬಂದು ಬಿದ್ದಿದೆ.

2017ರ ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್‌ ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸಿತ್ತು. ಸುಪ್ರೀಂಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ವರ್ಷದ ಸೆಪ್ಟೆಂಬರ್‌ನಲ್ಲಿ ತ್ರಿವಳಿ ತಲಾಖ್ ನಿಷೇಧಿಸಿ ಸುಗ್ರೀವಾಜ್ಞೆ ಹೊರಡಿಸಿತ್ತು. ಕೇಂದ್ರದ ಈ ಸುಗ್ರೀವಾಜ್ಞೆ ಆರು ತಿಂಗಳ ಕಾಲ ಜಾರಿಯಲ್ಲಿರುತ್ತದೆ. ಅಧಿವೇಶನ ಆರಂಭವಾದ 42 ದಿನಗಳಲ್ಲಿ ಮಸೂದೆಗೆ ಅಂಗೀಕಾರ ಪಡೆಯುವುದು ಅನಿವಾರ್ಯ. ಇಲ್ಲವಾದರೆ ಈ ಸುಗ್ರೀವಾಜ್ಞೆ ರದ್ದಾಗುತ್ತದೆ.

ಡಿಸೆಂಬರ್‌ 15ಕ್ಕೆ ಆರಂಭವಾಗಿರುವ ಸಂಸತ್ತಿನ ಚಳಿಗಾಲದ ಅಧಿವೇಶನ ಪೂರ್ವನಿಗದಿಯಂತೆ ಜನವರಿ 5ರವರೆಗೆ ನಡೆಯಲಿದೆ. ಈಗಾಗಲೇ ಅಧಿವೇಶನ ಆರಂಭವಾಗಿ 15 ದಿನಗಳು ಕಳೆದಿವೆ. ತ್ರಿವಳಿ ಮಸೂದೆ ರಾಜ್ಯಸಭೆಯಲ್ಲಿ ಬಂದು ನಿಂತಿದೆ. ಸದನದ ಹೊರಗೆ ವಿಪಕ್ಷಗಳ ಮನವೊಲಿಸುವ ಸರಕಾರದ ಪ್ರಯತ್ನವೂ ಕೈಕೊಟ್ಟಿದೆ.

ವಿಪಕ್ಷಗಳ ಗದ್ದಲ ಬುಧವಾರವೂ ಮುಂದುವರಿದರೆ ಸಂಸತ್ತಿನ ಆಯ್ಕೆ ಸಮಿತಿಯ ಪರಾಮರ್ಶೆಗೆ ಒಪ್ಪಿಸಿ, ತಿದ್ದುಪಡಿಯೊಂದಿಗೆ ಮಸೂದೆ ಮಂಡಿಸುವುದು ಸರಕಾರಕ್ಕೆ ಅನಿವಾರ್ಯವಾಗಲಿದೆ. ಅಂದಹಾಗೆ ಕಾಂಗ್ರೆಸ್‌ ಮಾತ್ರವಲ್ಲ ಬಿಜೆಡಿ, ಎಐಎಡಿಎಂಕೆ ಪಕ್ಷಗಳೂ ಈ ಮಸೂದೆಯನ್ನು ವಿರೋಧಿಸುತ್ತಿವೆ.

Also read: ತ್ರಿವಳಿ ತಲಾಖ್ ತೀರ್ಪು: 'ಸಿಹಿ'ಯ ನಿಜವಾದ ಪಾಲುದಾರರು ಕರ್ನಾಟಕದ ನಸ್ರೀನ್ 'ಮಿಠಾಯಿ'!