samachara
www.samachara.com
ಕಪ್ಪೆ ಚಿಪ್ಪುಗಳ ನಾಪತ್ತೆ; ಉತ್ತರ ಕನ್ನಡದ ನದಿಗಳತ್ತ ಬೇಕಿದೆ ತುರ್ತು ಗಮನ...
COVER STORY

ಕಪ್ಪೆ ಚಿಪ್ಪುಗಳ ನಾಪತ್ತೆ; ಉತ್ತರ ಕನ್ನಡದ ನದಿಗಳತ್ತ ಬೇಕಿದೆ ತುರ್ತು ಗಮನ...

ಜಿಲ್ಲೆಯ ಹೆಚ್ಚು ಕಡಿಮೆ ಎಲ್ಲಾ ನದಿಗಳೂ ಕಲುಷಿತಗೊಂಡಿವೆ. ಪರಿಣಾಮ ಇವುಗಳಲ್ಲಿದ್ದ ಜೀವಿಗಳು ಕಣ್ಮರೆಯಾಗುತ್ತಿವೆ. ಅವುಗಳಲ್ಲೊಂದು ಕಪ್ಪೆಚಿಪ್ಪು.

ಉತ್ತರ ಕನ್ನಡದ ನದಿಗಳು ಇನ್ನಿಲ್ಲದಂತೆ ಮಲಿನಗೊಳ್ಳುತ್ತಿವೆ. ಇದರ ತೀವ್ರತೆಯ ಪ್ರಮಾಣ ಜಿಲ್ಲೆಯ ಜಲ, ವನ್ಯ ಜೀವಿ ಹಾಗೂ ಸಸ್ಯ ಸಂಕುಲಗಳ ಅಸ್ತಿತ್ವಕ್ಕೇ ಧಕ್ಕೆ ತರುವಂತಿವೆ. ಅಪರೂಪದ ಕಪ್ಪೆ ಚಿಪ್ಪುಗಳು ಅಳಿವಿನಂಚಿಗೆ ಬಂದಿವೆ.

2011ರ ಗಣತಿ ಪ್ರಕಾರ ಉತ್ತರ ಕನ್ನಡ ಜಿಲ್ಲೆಯ ಒಟ್ಟು ಜನಸಂಖ್ಯೆ 14,37,169. ಇದರಲ್ಲಿ ಪಟ್ಟಣ ವಾಸಿಗರು 4,18,981 ಮತ್ತು ಗ್ರಾಮೀಣ ಭಾಗದಲ್ಲಿ 10,18,188 ಜನರು ವಾಸಿಸುತ್ತಾರೆ. ಅಂದರೆ ಜಿಲ್ಲೆಯ ಮೂರನೇ ಎರಡಂಶ ಜನರು ಗ್ರಾಮೀಣ ಭಾಗದಲ್ಲಿದ್ದರಾರೆ. ಕೇವಲ ಮೂರನೇ ಒಂದು ಭಾಗದಷ್ಟಿರುವ ಪಟ್ಟಣದ ಜನರಿಂದ ಉತ್ಪಾದನೆಯಾಗುವ ಘನತ್ಯಾಜ್ಯ ವಿಲೇವಾರಿಯೇ ಇನ್ನಿಲ್ಲದಂತೆ ಕಾಡುತ್ತಿರುವಾಗ, ಪಟ್ಟಣದ ಎರಡು ಪಟ್ಟು ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮೀಣ ಭಾಗಗಳಲ್ಲಿ ಘನತ್ಯಾಜ್ಯ ವಿಲೇವಾರಿ ಹೇಗೆ ನಡೆಯುತ್ತಿರಬಹುದು?

ಮೊದಲೆಲ್ಲಾ ಘನ ತ್ಯಾಜ್ಯ ಉತ್ಪಾದನೆ ಪೇಟೆಗಳಿಗೆ ಮಾತ್ರ ಸೀಮಿತವಾಗಿತ್ತು. ಈಗಿನ ಸುಧಾರಿತ ಸಂಪರ್ಕ ಮತ್ತು ಸಂಚಾರ ವ್ಯವಸ್ತೆಯಿಂದ ಪಟ್ಟಣಗಳಲ್ಲಿ ದೊರೆಯುವ ಎಲ್ಲಾ ವಸ್ತು, ಪದಾರ್ಥಗಳೂ ಗ್ರಾಮೀಣ ಭಾಗದ ಹಳ್ಳಿಯ ಕೊನೆಯಲ್ಲಿರುವ ಪುಟ್ಟ ಅಂಗಡಿಗಳಲ್ಲೂ ದೊರೆಯುತ್ತಿವೆ. ಪರಿಣಾಮ ಅವುಗಳ ಉಪಯೋಗದ ಪ್ರಮಾಣವೂ ಹೆಚ್ಚಿದೆ. ಆದರೆ ಪೇಟೆಯಂತೆ ಘನ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಲು ಗ್ರಾಮೀಣ ಭಾಗಗಳಲ್ಲಿ ವ್ಯವಸ್ಥೆಗಳಿಲ್ಲ. ಎಲ್ಲೆಂದರಲ್ಲಿ ಎಸೆಯಲ್ಪಟ್ಟ ಈ ರೀತಿಯ ತ್ಯಾಜ್ಯಗಳು ಮಳೆಗಾಲದಲ್ಲಿ ಹತ್ತಿರದ ಹಳ್ಳ, ನದಿಗಳಿಗೆ ಸೇರಿ ಆಳದ ನೀರಿನಲ್ಲಿ ಸೇರಿಕೊಳ್ಳುತ್ತವೆ ಅಥವಾ ಸಮುದ್ರ ಸೇರುತ್ತವೆ.

ಬೇಡ್ತಿ ನದಿಯ ಉಪನದಿಯಲ್ಲಿ ಹರಿಯುತ್ತಿರುವ ಮಲಿನ ನೀರು.
ಬೇಡ್ತಿ ನದಿಯ ಉಪನದಿಯಲ್ಲಿ ಹರಿಯುತ್ತಿರುವ ಮಲಿನ ನೀರು.
/ಸಿಇಎಸ್‌

ಗ್ರಾಮೀಣ ಭಾಗಗಳಲ್ಲಿ ಬಿಸಾಡಲ್ಪಡುವ ಕಾರ್ಖಾನೆಗಳ ತ್ಯಾಜ್ಯ, ಅವುಗಳ ಕಲುಷಿತ ನೀರು, ತಿಂಡಿ ಪೊಟ್ಟಣಗಳ ಕವರ್, ಪ್ಲಾಸ್ಟಿಕ್ ಬಾಟಲಿ, ಕ್ಯಾನ್, ಹೊಟೇಲ್‌ಗಳ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ, ಸಾರ್ವಜನಿಕ ಸಮಾರಂಭಗಳಲ್ಲಿ ಉತ್ಪಾದಿತ ತ್ಯಾಜ್ಯ, ಇಲೆಕ್ಟ್ರಾನಿಕ್ ವಸ್ತುಗಳು, ಮದ್ಯದ ಬಾಟಲಿಗಳು, ಗ್ರಾಮೀಣ ಸಂತೆ ತ್ಯಾಜ್ಯ, ಗುಟ್ಕಾ ತ್ಯಾಜ್ಯ ನದಿಗಳನ್ನು ಬಂದು ಸೇರುತ್ತಿರುತ್ತವೆ. ಅಲ್ಲದೆ ಪಶುಸಂಗೋಪನೆ, ಕೃಷಿ ಮತ್ತು ತೋಟಗಾರಿಕೆಯ ರಾಸಾಯನಿಕ, ಕೀಟನಾಶಕಗಳ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಹಳ್ಳಕ್ಕೆ ಎಸೆಯಲ್ಪಟ್ಟು ಅವುಗಳೆಲ್ಲಾ ನದಿ ಸೇರಿ ಮಲಿನಗೊಂಡಿವೆ. ಜತೆಗೆ ಈ ನದಿಯ ನೀರು ಸಮುದ್ರವನ್ನೂ ಕಲುಷಿತಗೊಳಿಸುತ್ತಿದೆ.

ಇದು ಜಿಲ್ಲೆಯ ಒಂದೆರಡು ನದಿಗಳ ಕಥೆಯಲ್ಲ. ಹೆಚ್ಚು ಕಡಿಮೆ ಎಲ್ಲಾ ನದಿಗಳೂ ಕಲುಷಿತಗೊಂಡಿವೆ. ಪರಿಣಾಮ ಇವುಗಳಲ್ಲಿದ್ದ ಜೀವಿಗಳು ಕಣ್ಮರೆಯಾಗುತ್ತಿವೆ. ಅವುಗಳಲ್ಲೊಂದು ಕಪ್ಪೆಚಿಪ್ಪು.

ಬರಿದಾಗುತ್ತಿದೆ ಬಳಚು (ಕಪ್ಪೆ ಚಿಪ್ಪು) ಸಂತತಿ:

ಬಳಚು ಅಥವಾ ಕಪ್ಪೆ ಚಿಪ್ಪು ಕರಾವಳಿಗರಿಗೆ ಪ್ರಿಯವಾದ ಆಹಾರ. ಇವು ನದಿ ಸಮುದ್ರವನ್ನು ಸೇರುವ ಅಳಿವೆ ಪ್ರದೇಶದಲ್ಲಿ ಸಿಹಿ ಮತ್ತು ಉಪ್ಪು ನೀರಿನ ಸಂಘದಲ್ಲಿ ಬೆಳೆಯುವ ಜೀವಿಗಳು. ನೀರಿನ ಮಾಲಿನ್ಯದಿಂದ ಇವುಗಳೀಗ ಅವನತಿಯ ಹಾದಿಯಲ್ಲಿವೆ. ಭಾರತೀಯ ವಿಜ್ಞಾನ ಸಂಸ್ಥೆಯನ್ನೊಳಗೊಂಡಂತೆ ವಿವಿಧ ವಿಜ್ಞಾನ ಸಂಸ್ಥೆಗಳು 2012 ರಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ನಡೆಸುತ್ತಿರುವ ಅಧ್ಯಯನದಿಂದ ಬಳಚು ಜೀವಿಗಳು ಅಳಿವಿನಂಚಿಗೆ ಸರಿಯುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಇದರಿಂದ ಈ ಕಪ್ಪೆ ಚಿಪ್ಪುಗಳನ್ನೇ ಕಸುಬಾಗಿ ನೆಚ್ಚಿಕೊಂಡಿದ್ದ ಎಷ್ಟೋ ಕುಟುಂಬಗಳು ಬದಲಿ ಉದ್ಯೋಗ ಹುಡುಕಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ.

ಕಪ್ಪೆ ಚಿಪ್ಪುಗಳ ನಾಪತ್ತೆ; ಉತ್ತರ ಕನ್ನಡದ ನದಿಗಳತ್ತ ಬೇಕಿದೆ ತುರ್ತು ಗಮನ...

“ಬಳಚುಗಳು ಫೈಲಮ್ ವೆನರೊಯ್ಡಾ ಕುಟುಂಬಕ್ಕೆ ಸೇರಿದವುಗಳಾಗಿದ್ದು ಭಾರತದ ಪಶ್ಚಿಮ ಕರಾವಳಿ ಭಾಗದಲ್ಲಿ ಮೆರಿಟ್ರಿಕ್ಸ್, ಮೆರಿಟ್ರಿಕ್ಸ್ ಕಾಸ್ಟಾ, ಕಟೆಲಿಶಿಯಾ ಓಪಿಮಾ, ಪಾಫಿಯಾ ಮಲಬಾರಿಕಾ, ಮಿಲ್ಲೂರಿಟಾ ಸಿಪ್ರಿನೋಯ್ಡ್ಸ್ (ಕೊಂಕಣಿಯಲ್ಲಿ ‘ಖುಬೆ’) ಜಾತಿಯ ಕಪ್ಪೆ ಚಿಪ್ಪುಗಳು ಹೇರಳವಾಗಿ ದೊರೆಯುತ್ತಿದ್ದವು. ಆದರೆ, ಇತ್ತೀಚೆಗೆ ಇವು ಗಣನೀಯವಾಗಿ ಕಡಿಮೆಯಾಗುತ್ತಿವೆ. ಈ ಕಪ್ಪೆ ಚಿಪ್ಪುಗಳು ಸಮುದ್ರದಲ್ಲಿ ಹೆಚ್ಚಾಗಿದ್ದರೆ ನೀರು ಶುದ್ಧವಾಗಿದೆ ಎಂದು ಅರ್ಥ. ಇವುಗಳ ಸಂಖ್ಯೆ ಕಡಿಮೆಯಾದರೆ ಸಮುದ್ರ ನೀರು ಕುಲುಷಿತವಾಗಿದೆ ಎಂದುಕೊಳ್ಳಬಹುದು,” ಎನ್ನುತ್ತಾರೆ ‘ವೈಲ್ಡ್ ಲೈಫ್ ವೆಲ್ಫೇರ್ ಸೊಸೈಟಿ’ಯ ಜೀವ ವೈವಿಧ್ಯ ಸಂಶೋಧಕ ಮಂಜುನಾಥ ನಾಯಕ.

“ಜಿಲ್ಲೆಯ ನದಿ (ಕಾಳಿ, ಅಘನಾಶಿನಿ, ಗಂಗಾವಳಿ, ಶರಾವತಿ ಮುಂತಾದ) ಗಳಲ್ಲಿ ಅತಿಯಾದ ಮರಳು ಗಣಿಗಾರಿಕೆ, ತ್ಯಾಜ್ಯಗಳನ್ನು ನದಿಗಳಿಗೆ ಬಿಡುವುದು, ಭಾರೀ ಲೋಹಗಳಾದ ಪಾದರಸ, ಸೀಸ, ಸತು, ಕ್ಯಾಡ್ಮಿಯಂ ನೀರಿಗೆ ಸೇರುತ್ತಿರುವುದು ಜಲಜೀವಿಗಳ ಪಾಲಿಗೆ ಮಾರಕವಾಗಿ ಪರಿಣಮಿಸಿದೆ. ನದಿಗಳಲ್ಲಿ ಮರಳು ಬರಿದಾಗುತ್ತ ಹೋದಂತೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ನದಿಗಳಿಗೆ ಕಡಿಮೆಯಾಗುತ್ತವೆ,” ಎಂಬುದಾಗಿ ಮಾಲಿನ್ಯದ ಹಿಂದಿನ ವಿವರಗಳನ್ನು ತೆರೆದಿಡುತ್ತಾರೆ ಕಡಲ ಜೀವ ವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ. ಶಿವಕುಮಾರ ಹರಗಿ. ಇವೆಲ್ಲವೂ ಕಳೆದ 10 ವರ್ಷಗಳಲ್ಲಿ ಆಗಿರುವ ಬದಲಾವಣೆಗಳು ಎನ್ನುತ್ತಾರೆ ಅವರು.

“ಹತ್ತು ವರ್ಷಗಳ ಹಿಂದೆ ಒಂದು ತಾಸಿನಲ್ಲಿ ಒಂದು ಗೋಣಿ ಚೀಲದಷ್ಟು ಕಪ್ಪು ಚಿಪ್ಪು ತೆಗೆಯಲು ಸಾಧ್ಯವಾಗುತ್ತಿತ್ತು. ಈಗ ಒಂದು ತಾಸಿನಲ್ಲಿ ಒಂದು ಕೆ.ಜಿ.ಯಷ್ಟು ಸಿಕ್ಕರೆ ನಮ್ಮ ಅದೃಷ್ಟ. ಅದರಲ್ಲೂ ಸತ್ತಿರುವ ಚಿಪ್ಪುಗಳು ಸಿಗುವುದೇ ಹೆಚ್ಚು” ಎನ್ನುತ್ತಾರೆ ಕಾರವಾರದ ಮೀನುಗಾರ, ಜಗದೀಶ ಅಂಬಿಗ. ಇವೆಲ್ಲಾ ಘನ ತ್ಯಾಜ ನಿರ್ವಹಣೆಯಲ್ಲಿ ತೋರಿದ ಬೇಜವಾಬ್ದಾರಿ ನಡೆಯ ಪರಿಣಾಮಗಳು.

ಘನ ತ್ಯಾಜ್ಯ ನಿರ್ವಹಣೆ ಹೇಗಿದೆ?

ಜಿಲ್ಲೆಯ ಹನ್ನೊಂದು ತಾಲೂಕಿನಲ್ಲೂ ಅಂತಹ ಪರಿಣಾಮಕಾರಿಯಾದ ಘನತ್ಯಾಜ್ಯ ನಿರ್ವಹಣೆ ಇಲ್ಲದಿದ್ದರೂ ಪಟ್ಟಣದ ತ್ಯಾಜ್ಯಗಳನ್ನು ಕನಿಷ್ಠ ಒಂದೆಡೆ ಪೇರಿಸುವ ವ್ಯವಸ್ಥೆ ಇದೆ. ಆದರೆ ಜನಸಂಖ್ಯೆಯ ಮುಕ್ಕಾಲು ಪಾಲು ವಾಸಿಸುವ ಗ್ರಾಮೀಣ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಯಾವುದೇ ಪರಿಣಾಮಕಾರಿ ವ್ಯವಸ್ಥೆಗಳಿಲ್ಲ. ಇದರಿಂದ ನದಿ ನೀರು ಮಾಲಿನ್ಯಗೊಳ್ಳುತ್ತಿವೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತಿದ್ದು ಇದರ ಬಗ್ಗೆ ಹೆಚ್ಚಿನ ಜನರಿಗೆ ಅರಿವಿಲ್ಲ. ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲೂ ಆಡಳಿತ ಕಚೇರಿ ಸಮೀಪದಲ್ಲಿ ಮಾತ್ರ ಕಸದ ತೊಟ್ಟಿಗಳಿವೆ. ಈ ಭಾರೀ ತೊಟ್ಟಿಗಳನ್ನು ವರ್ಷಕ್ಕೊಮ್ಮೆ ಸ್ವಚ್ಛಗೊಳಿಸಿದರೆ ಅದೇ ಹೆಚ್ಚು. ಕೇಳಿದರೆ ‘ಕಾರ್ಮಿಕರ ಕೊರತೆ’ ಎಂಬ ಸಬೂಬು ಹೇಳುತ್ತಾರೆ. ಪರಿಸ್ಥಿತಿ ಹೀಗಿರುವಾಗ ಗ್ರಾಮೀಣ ಭಾಗದ ಉಳಿದ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣೆಯನ್ನು ನಿರೀಕ್ಷಿಸುವುದು ಕಷ್ಟ.

ಹೀಗಾಗಿ ಈ ಕಸ, ಇದರ ಜತೆ ಇರುವ ಟಾಕ್ಸಿಕ್ ವಸ್ತುಗಳು ಮಳೆ ನೀರಿನೊಂದಿಗೆ ಇಂಗಿ ಬಾವಿ, ಕೆರೆಗಳನ್ನು ಸೇರಿ ನೀರನ್ನು ಇನ್ನಿಲ್ಲದಂತೆ ಮಲೀನಗೊಳಿಸುತ್ತಿವೆ. ಇದರಿಂದ ಪ್ರತಿ ಹಳ್ಳಿಗಳಲ್ಲೂ ಕ್ಯಾನ್ಸರ್, ಸಕ್ಕರೆ ಖಾಯಿಲೆ, ಹೃದ್ರೋಗಗಳು ಹೆಚ್ಚುತ್ತಿವೆ. ಇದನ್ನು ತಡೆಗಟ್ಟಲು ಇರುವುದು ಒಂದೇ ದಾರಿ. ಪರಿಸರ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಇಲಾಖೆಗಳು ಗ್ರಾಮೀಣ ಭಾಗದ ಘನತ್ಯಾಜ್ಯ ನಿರ್ವಹಣೆ ಬಗ್ಗೆ ತುರ್ತಾಗಿ ಗಮನ ಹರಿಸಬೇಕಿದೆ. ತ್ಯಾಜ್ಯ ನೀರಿನ ಮೂಲಗಳನ್ನು ಸೇರದಂತೆ ಗಮನಹರಿಸಬೇಕಿದೆ.