samachara
www.samachara.com
ನಾಲ್ಕನೇ ಬಾರಿಗೆ ಬಾಂಗ್ಲಾದೇಶದ ಗದ್ದುಗೆ ಏರಿದ ಹಸೀನಾ; ಭಾರತಕ್ಕೇನು ಲಾಭ?
COVER STORY

ನಾಲ್ಕನೇ ಬಾರಿಗೆ ಬಾಂಗ್ಲಾದೇಶದ ಗದ್ದುಗೆ ಏರಿದ ಹಸೀನಾ; ಭಾರತಕ್ಕೇನು ಲಾಭ?

ಹಸೀನಾ ಅಧಿಕಾರವಧಿಯಲ್ಲಿ ಬಾಂಗ್ಲಾದೇಶದ ಪಾದರಕ್ಷೆ, ವಸ್ತ್ರೋದ್ಯಮ ರಾಕೆಟ್‌ ವೇಗದಲ್ಲಿ ಅಭಿವೃದ್ಧಿ ಕಂಡಿದೆ. ಅದರ ನೇರ ಪರಿಣಾಮವನ್ನು ಭಾರತ ಅನುಭವಿಸುತ್ತಿದೆ.

ಬಾಂಗ್ಲಾದೇಶ ಸಂಸತ್‌ಗೆ ಭಾನುವಾರ ನಡೆದ ಚುನಾವಣೆಯಲ್ಲಿ ಪ್ರಧಾನಿ ಶೇಖ್‌ ಹಸೀನಾ ನೇತೃತ್ವದ ಅವಾಮಿ ಲೀಗ್‌ (ಎಎಲ್‌) ಭರ್ಜರಿ ಗೆಲುವು ಸಾಧಿಸಿದೆ ಎಂದು ಅಲ್ಲಿನ ಚುನಾವಣಾ ಆಯೋಗ ಘೋಷಿಸಿದೆ. ಆದರೆ ಈ ಚುನಾವಣೆಯನ್ನು ವಿರೋಧ ಪಕ್ಷಗಳು ತಿರಸ್ಕರಿಸಿದ್ದು ಇದೊಂದು ಪ್ರಹಸನ ಎಂದು ಕರೆದಿವೆ.

350 ಸದಸ್ಯ ಬಲದ ಬಾಂಗ್ಲಾದೇಶ ಸಂಸತ್‌ನಲ್ಲಿ 50 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದ್ದು ಉಳಿದ 300 ಸ್ಥಾನಗಳಿಗೆ ನಿನ್ನೆ ಭಾನುವಾರ ಚುನಾವಣೆ ನಡೆದಿತ್ತು. ಇದರಲ್ಲಿ ಅವಾಮಿ ಲೀಗ್‌ ಬರೋಬ್ಬರಿ 288 ಸ್ಥಾನಗಳನ್ನು ಗೆದ್ದುಕೊಂಡಿದೆ. ಖಲೀದಾ ಝೀಯಾ ನೇತೃತ್ವದ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಕ್ಷ (ಬಿಎನ್‌ಪಿ) ಕೇವಲ 6 ಸ್ಥಾನಗಳನ್ನು ಗೆದ್ದುಕೊಂಡು ಸೋಲೊಪ್ಪಿಕೊಂಡಿದೆ. 2014ರಲ್ಲಿ ನಡೆದ ಚುನಾವಣೆಯನ್ನು ಬಿಎನ್‌ಪಿ ಬಹಿಷ್ಕರಿಸಿತ್ತು. ಹೀಗಿದ್ದೂ 234 ಸ್ಥಾನಗಳನ್ನು ಗೆದ್ದಿದ್ದ ಅವಾಮಿ ಲೀಗ್‌ ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆದ್ದಿರುವುದು ಎಲ್ಲರ ಹುಬ್ಬೇರಿಸಿದೆ.

ಚುನಾವಣಾ ಆಯೋಗದ ಕಾರ್ಯದರ್ಶಿ ಹೆಲಾಲ್‌ ಉದ್ದಿನ್‌ ಅಹ್ಮದ್‌ ಫಲಿತಾಂಶ ಘೋಷಣೆ ಮಾಡುತ್ತಿದ್ದಂತೆ ಪತ್ರಿಕಾಗೋಷ್ಠಿ ನಡೆಸಿರುವ ವಿರೋಧ ಪಕ್ಷಗಳ ಒಕ್ಕೂಟ ‘ಜತಿಯಾ ಒಕಿಯಾ ಫ್ರಂಟ್‌’ ಇದೊಂದು ಪ್ರಹಸನದ ಚುನಾವಣೆ ಎಂದು ಕರೆದಿದೆ.

“ನಾವು ಈ ಪ್ರಹಸನದ ಚುನಾವಣೆಯನ್ನು ತಿರಸ್ಕರಿಸುತ್ತಿದ್ದೇವೆ ಮತ್ತು ಆಡಳಿತಾಂಗದ ಪಾತ್ರವಿಲ್ಲದ ಹೊಸ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗವನ್ನು ಕೋರುತ್ತೇವೆ,” ಎಂದು ವಿರೋಧ ಪಕ್ಷಗಳ ನಾಯಕ ಕಮಲ್‌ ಹೊಸೇನ್‌ ಹೇಳಿದ್ದಾರೆ.

ನಾಲ್ಕನೇ ಬಾರಿ ಗದ್ದುಗೆಗೆ:

ಶೇಖ್‌ ಹಸೀನಾ 1981ರಿಂದ ಅವಾಮಿ ಲೀಗ್‌ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ನಿರಂತರ ಅಧಿಕಾರದಲ್ಲಿರುವ ಅವರು ದೇಶದ ಆರ್ಥಿಕತೆಯನ್ನು ಬೆಳವಣಿಗೆಯತ್ತ ಕೊಂಡೊಯ್ದ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರ ಅವಧಿಯಲ್ಲಿ ದೇಶದ ಜಿಡಿಪಿ ದೊಡ್ಡ ಮಟ್ಟಕ್ಕೆ ಏರಿಕೆಯಾಗಿದ್ದಲ್ಲದೆ, ಚೀನಾ ಬಿಟ್ಟರೆ ಜಗತ್ತಿನ ಅತೀ ದೊಡ್ಡ ಜವಳಿ ಉತ್ಪನ್ನಗಳ ರಫ್ತು ದೇಶವಾಗಿ ಬಾಂಗ್ಲಾ ಹೆಸರು ಮಾಡಿದೆ.

ಆದರೆ ದೇಶದಲ್ಲಿ ವಿರೋಧ ಪಕ್ಷಗಳ ಮೇಲಿನ ವೈರತ್ವ, ಮಾಧ್ಯಮಗಳ ಮೇಲಿನ ನಿಯಂತ್ರಣ, ಸರ್ವಾಧಿಕಾರಿ ನಡೆಗಳ ಮೂಲಕವೂ ಅವರು ಕುಖ್ಯಾತವಾಗಿದ್ದಾರೆ. ಇದೇ ಕಾರಣಕ್ಕೆ ಭಾನುವಾರ ನಡೆದ ಚುನಾವಣೆಯೂ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. 6 ಲಕ್ಷ ಭದ್ರತಾ ಸಿಬ್ಬಂದಿಗಳ ನಿಯೋಜನೆ ನಡುವೆಯೂ ಮತದಾನದ ವೇಳೆ ನಡೆದ ಘರ್ಷಣೆಗಳಲ್ಲಿ 17 ಜನರು ಸಾವನ್ನಪ್ಪಿರುವುದೇ ಇದಕ್ಕೆ ಸಾಕ್ಷಿ.

ಭಾರತ ಬಾಂಗ್ಲಾ ಸಂಬಂಧ:

ಶೇಖ್‌ ಹಸೀನಾ ಬಾಂಗ್ಲಾದೇಶ ಚುನಾವಣೆ ಗೆದ್ದಿರುವುದು ಭಾರತದ ಪಾಲಿಗೆ ಒಳ್ಳೆಯ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗುತ್ತಿದೆ. 2014ರಲ್ಲಿ ಹೆಚ್ಚು ಕಡಿಮೆ ಒಂದೇ ಅವಧಿಗೆ ನರೇಂದ್ರ ಮೋದಿ ಭಾರತದಲ್ಲಿ ಹಾಗೂ ಹಸೀನಾ ಬಾಂಗ್ಲಾದಲ್ಲಿ ಅಧಿಕಾರಕ್ಕೇರಿದ್ದರು. ಈ ಅವಧಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ಸಂಬಂಧ ದೊಡ್ಡ ಮಟ್ಟಕ್ಕೆ ಸುಧಾರಣೆಯಾಗಿತ್ತು. ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದ ಈಶಾನ್ಯ ರಾಜ್ಯಗಳ ಬಂಡುಕೋರ ಶಕ್ತಿಗಳು, ಭಯೋತ್ಪಾದಕ ಸಂಘಟನೆಗಳನ್ನು ಬಾಂಗ್ಲಾದೇಶದಲ್ಲಿ ಮಟ್ಟ ಹಾಕಿ ಭಾರತಕ್ಕೆ ಸಹಾಯ ಮಾಡಿದ್ದಾರೆ ಎಂಬ ಅಭಿಪ್ರಾಯಗಳಿವೆ. ಜತೆಗೆ ಹೆಚ್ಚಿನ ಬಾಂಗ್ಲಾದೇಶ ಬಂದರುಗಳು, ರಸ್ತೆಗಳು ಭಾರತದ ಬಳಕೆಗೆ ಮುಕ್ತವಾಗಿವೆ.

ಆದರೆ ಇದೇ ಅವಧಿಯಲ್ಲಿ ಬಾಂಗ್ಲಾದೇಶ ಭಾರತಕ್ಕೆ ದೊಡ್ಡ ಮಟ್ಟದ ಹೊಡೆತನ್ನೂ ನೀಡಿದೆ. ಕಳೆದ 7-8 ವರ್ಷಗಳಲ್ಲಿ ಇಲ್ಲಿ ಪಾದರಕ್ಷೆ, ವಸ್ತ್ರೋದ್ಯಮ ರಾಕೆಟ್‌ ವೇಗದಲ್ಲಿ ಅಭಿವೃದ್ಧಿ ಕಂಡಿದೆ. ಅದರ ನೇರ ಪರಿಣಾಮವನ್ನು ಭಾರತ ಅನುಭವಿಸುತ್ತಿದೆ. ಭಾರತದ ಹೆಚ್ಚಿನ ಜವಳಿ, ಪಾದರಕ್ಷೆಗಳ ಮಾರುಕಟ್ಟೆಯನ್ನು ಬಾಂಗ್ಲಾದೇಶ ಕಸಿದುಕೊಂಡಿದೆ. ಜವಳಿ ಉತ್ಪನ್ನಗಳ ರಫ್ತಿನಲ್ಲಿ ಬಾಂಗ್ಲಾದೇಶ ನಾಗಾಲೋಟದಲ್ಲಿದ್ದು ಇದರ ಹಿಂದೆ ಇರುವವರು ಇದೇ ಶೇಖ್‌ ಹಸೀನಾ. ಇದಕ್ಕೆ ಭಾರತದ ಕೆಲವು ತಪ್ಪುಗಳ ಕೊಡುಗೆಯೂ ಇದೆ.

ದೇಶದಲ್ಲಿ ಜಾರಿಗೆ ತಂದ ಡಿಮಾನಟೈಸೇಷನ್‌, ಜಿಎಸ್‌ಟಿ ಇಲ್ಲಿನ ಉದ್ಯಮಗಳಿಗೆ ಋಣಾತ್ಮಕವಾಗಿ ಪರಿಣಮಿಸಿದ್ದರೆ ಇದೇ ಅವಧಿಯಲ್ಲಿ ಬಾಂಗ್ಲಾ ಇದರ ಸದುಪಯೋಗ ಪಡಿಸಿಕೊಂಡು ಮತ್ತಷ್ಟು ಚಿಗಿತುಕೊಂಡಿತು. ಜತೆಗೆ ಕಡಿಮೆ ಕೂಲಿ, ಭಾರತಕ್ಕಿಂತ ತುಸು ಕಡಿಮೆ ಕರೆನ್ಸಿ ಮೌಲ್ಯ, ಶೇಕಡಾ 85ರಷ್ಟು ಮಹಿಳಾ ಕಾರ್ಮಿಕರು ಮೂರು ಪಾಳಿಯಲ್ಲಿ ಕೆಲಸ ಮಾಡುವ ವಾತಾವರಣ ಜವಳಿ ಉದ್ಯಮದ ಬೆಳವಣಿಗೆಗೆ ಪೂರಕವಾಯಿತು. ಪರಿಣಾಮ ಇವತ್ತು ಬಾಂಗ್ಲಾದ ಜವಳಿ ಉದ್ಯಮದ ಗಾತ್ರ 2.13 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿ ಮುನ್ನುಗ್ಗುತ್ತಿದೆ. ವುಡ್‌ಲ್ಯಾಂಡ್‌, ಎಚ್‌&ಎಂ, ಮಾರ್ಕ್‌ ಆಂಡ್‌ ಸ್ಪೆನ್ಸರ್‌ನಿಂದ ಆರಂಭಿಸಿ ಹೆಚ್ಚು ಹೆಚ್ಚು ಕಡಿಮೆ ಜಗತ್ತಿನ ಎಲ್ಲಾ ಅತ್ಯುನ್ನತ ಬ್ರ್ಯಾಂಡ್‌ಗಳ ಉತ್ಪಾದನಾ ಘಟಕಗಳು ಬಾಂಗ್ಲಾದೇಶದಲ್ಲಿವೆ. ಇದು ಭಾರತದ ಸಾಂಪ್ರದಾಯಿಕ ಬಟ್ಟೆ ಉದ್ಯಮಕ್ಕೆ ಹೊಡೆತ ನೀಡುತ್ತಿದೆ. ಶೇಖ್‌ ಹಸೀನಾ ಗೆದ್ದ ಹೊತ್ತಲ್ಲಿ ಭಾರತ-ಬಾಂಗ್ಲಾ ಸುಧಾರಿತ ಸಂಬಂಧದಾಚೆಗೆ ಇದನ್ನೂ ಗಮನಿಸಬೇಕಿದೆ.