samachara
www.samachara.com
ಬೆಂಕಿ ಚೆಂಡಿನಂತಾದ ಸುಡಾನ್‌, 11ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ಇದು ಆಫ್ರಿಕಾದ ಹೊಸ ಅರಬ್‌ ಸ್ಪ್ರಿಂಗ್?
COVER STORY

ಬೆಂಕಿ ಚೆಂಡಿನಂತಾದ ಸುಡಾನ್‌, 11ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ಇದು ಆಫ್ರಿಕಾದ ಹೊಸ ಅರಬ್‌ ಸ್ಪ್ರಿಂಗ್?

ಇತ್ತೀಚೆಗಷ್ಟೇ ಸಿರಿಯಾಕ್ಕೆ ಹೋಗಿ ಬಂದಿರುವ ಬಷೀರ್‌ ಅಲ್ಲಿನ ಅಧ್ಯಕ್ಷ ಬಷರ್‌ ಅಲ್‌ ಅಸದ್‌ ಮಾದರಿಯಲ್ಲಿ ವಿರೋಧಿಗಳ ಹುಟ್ಟಡಗಿಸುವ ಧೈರ್ಯದಲ್ಲಿದ್ದಾರೆ. ಆದರೆ ಸಿರಿಯಾದಲ್ಲಿ ನಡೆದ ಬೆಳವಣಿಗೆ ಸುಡಾನ್‌ನಲ್ಲಿ ನಡೆಯುವುದು ಕಷ್ಟ.

ಸುಡಾನ್‌; ದೇಶದ ಒಂದು ಭಾಗದಲ್ಲಿ ಕಿತ್ತು ತಿನ್ನುವ ಬಡತನ. ಜನ ಹೊತ್ತಿನ ತುತ್ತಿಗೆ ತತ್ವಾರ ಪಟ್ಟುಕೊಂಡು ದೋಚಿ ತಿನ್ನಲು ತೊಡಗಿರುವ ಈ ದೇಶಕ್ಕೊಬ್ಬ ಸರ್ವಾಧಿಕಾರಿ. ಆತನ ಭರಾಟೆ ಒಂದು ಕಡೆಯಾದರೆ ಇನ್ನೊಂದು ಕಡೆ ಬಂಡುಕೋರರು. ಇವರ ನಡುವೆ ಭ್ರಮ ನಿರಸನಗೊಂಡ ಜನ ಮೊದಲ ಬಾರಿಗೆ ಬೃಹತ್‌ ಸಂಖ್ಯೆಯಲ್ಲಿ ಬೀದಿಗೆ ಇಳಿದಿದ್ದಾರೆ. ಎಂದಿಗಿಂತ ತುಸು ಜೋರಾಗಿಯೇ ಹೋರಾಟ ಆರಂಭಗೊಂಡಿದ್ದು ದೇಶದ ಹೆಚ್ಚು ಕಡಿಮೆ ಎಲ್ಲಾ ಭಾಗಗಳಲ್ಲಿ ಕಳೆದ 10 ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ. ದೇಶದೊಳಗೆ ನಡೆಯುತ್ತಿರುವ ಈ ಬೆಳವಣಿಗೆಗಳು ‘ಅರಬ್‌ ಸ್ಪ್ರಿಂಗ್‌’ನ್ನು ನೆನಪಿಸುತ್ತಿದೆ.

2010ರಲ್ಲಿ ಟ್ಯುನಿಷಿಯಾದ ಮೂಲಕ ಆರಂಭಗೊಂಡ ‘ಅರಬ್‌ ಸ್ಪ್ರಿಂಗ್‌’ ಹಲವು ಸರ್ವಾಧಿಕಾರಿಗಳನ್ನು ಬಲಿ ಪಡೆದಿತ್ತು. ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳ ಬೆಂಬಲದೊಂದಿಗೆ ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದ ಜನರು ತರಹೇವಾರಿ ಹೋರಾಟಗಳನ್ನು ನಡೆಸಿದ್ದರು. ಕೆಲವು ದೇಶಗಳಲ್ಲಿ ಬಂದೂಕುಗಳೇ ಹೆಚ್ಚು ಮಾತನಾಡಿದ್ದವು. ಹಾಗೆ ಹುಟ್ಟಿಕೊಂಡು ಆಂತರಿಕ ಸಂಘರ್ಷ ಸಿರಿಯಾದಂಥ ದೇಶಗಳಲ್ಲಿ ಇನ್ನೂ ನಿಂತಿಲ್ಲ. ಇನ್ನು ಕೆಲವು ದೇಶಗಳು ಅರಾಜಕತೆಗೆ ಹೋಗಿ ಇನ್ನೂ ಚೇತರಿಸಿಕೊಂಡಿಲ್ಲ.

ಇಂಥಹದ್ದೊಂದು ಇತಿಹಾಸವನ್ನು ಪಕ್ಕದಲ್ಲಿ ಇಟ್ಟುಕೊಂಡೇ ಈಗ ಸುಡಾನ್‌ನಲ್ಲಿ ಹೋರಾಟವೊಂದು ಆರಂಭಗೊಂಡಿದೆ. 1989ರಲ್ಲಿ ಮಿಲಿಟರಿ ಕ್ರಾಂತಿ ಮೂಲಕ ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ಅಧ್ಯಕ್ಷ ಒಮರ್‌ ಅಲ್‌ ಬಷೀರ್‌ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ. ಡಿಸೆಂಬರ್‌ 19ರಂದು ಮೊದಲ ಬಾರಿಗೆ ಬೆಲೆ ಏರಿಕೆ ವಿರೋಧಿ ಹೆಸರಿನಲ್ಲಿ ಹುಟ್ಟಿಕೊಂಡ ಪ್ರತಿಭಟನೆ ನಿಧಾನಕ್ಕೆ ‘ಸರಕಾರದ ವಿರೋಧಿ’ ರೂಪವನ್ನು ತಾಳಿದ್ದು ಇದು ಹೊಸ ‘ಅರಬ್‌ ಸ್ಪ್ರಿಂಗ್‌’ ಎಂದು ಕರೆಯಲ್ಪಡುತ್ತಿದೆ.

ಅಂದಿನಿಂದ ಇಂದಿನವರೆಗೆ...

ಹಾಗೆ ನೋಡಿದರೆ ಸುಡಾನ್‌ ಪಾಲಿಗೆ ಪ್ರತಿಭಟನೆಗಳು ಹೊಸತಲ್ಲ. ಇತ್ತೀಚಿನ ಉದಾಹರಣೆಗಳಲ್ಲೇ ಹಲವು ಸಂದರ್ಭದಲ್ಲಿ ಜನರು ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದರು. ಇದರಲ್ಲೇ ಒಂದು ವಿರೋಧವನ್ನು ತಡೆದುಕೊಳ್ಳಲಾರದೆ ಅರಬ್‌ ಸ್ಪ್ರಿಂಗ್‌ ಸಮಯದಲ್ಲೇ 2011ರಲ್ಲಿ ಸುಡಾನ್‌ ಇಬ್ಭಾಗವಾಗಿ ದಕ್ಷಿಣ ಸುಡಾನ್‌ ಉದಯಿಸಿತ್ತು.

ಇನ್ನು 2013ರ ಸೆಪ್ಟೆಂಬರ್‌ನಲ್ಲಿ ರಾಜಧಾನಿ ಖರ್ತೋಮ್‌ನಲ್ಲಿ ಹುಟ್ಟಿಕೊಂಡ ಪ್ರತಿಭಟನೆಯೊಂದನ್ನು 200 ಜನರ ಸಾವಿನೊಂದಿಗೆ ಕ್ರೂರವಾಗಿ ಹೊಸಕಿ ಹಾಕಿದ್ದರು ಅಧ್ಯಕ್ಷ ಒಮರ್‌ ಅಲ್‌ ಬಷೀರ್‌. ಮುಂದೆ 2015ರಲ್ಲಿ ಮತ್ತೊಂದು ಸುತ್ತಿನ ಹೋರಾಟ ಆರಂಭಗೊಂಡಾಗ ಚುನಾವಣಾ ಪ್ರಹಸನವನ್ನು ನಡೆಸಿ ಶೇಕಡಾ 96 ಮತಗಳೊಂದಿಗೆ ಅಧ್ಯಕ್ಷರು ಪುನರಾಯ್ಕೆಯಾಗಿದ್ದರು.

ನಂತರ 2016ರಲ್ಲಿ ಸಣ್ಣ ಪುಟ್ಟ ಪ್ರತಿಭಟನೆಗಳು ನಡೆದಿದ್ದವು. ಬಳಿಕ ಇದೇ ಬೆಲೆ ಏರಿಕೆ ಮುಂದಿಟ್ಟುಕೊಂಡು ಕಳೆದ ಜನವರಿಯಲ್ಲಿ ಇನ್ನೊಮ್ಮೆ ಪ್ರತಿಭಟನೆ ನಡೆದಿತ್ತು. ಆದರೆ ಅದು ಪೊಲೀಸರ ಅಶ್ರುವಾಯು ಪ್ರಯೋಗಕ್ಕೆ ತಣ್ಣಗಾಗಿತ್ತು. ಆದರೆ ಈ ಬಾರಿಯ ಪ್ರತಿಭಟನೆ ವಿಚಿತ್ರವಾಗಿದೆ ಮತ್ತು ಹೆಚ್ಚು ತೀವ್ರತೆಯಿಂದ ಕೂಡಿದೆ.

ಮೊದಲಿಗೆ ಪ್ರತಿಭಟನೆ ಸುಡಾನ್‌ನ ಉತ್ತರದಲ್ಲಿರವ ಅಟ್ಬಾರಾದಿಂದ ಆರಂಭಗೊಂಡಿತ್ತು. ಅಟ್ಬಾರಾ ಮತ್ತು ಇಲ್ಲಿನ ನೈಲ್‌ ನದಿ ಪಾತ್ರದಲ್ಲಿರುವ ಹೆಚ್ಚಿನ ಪ್ರದೇಶಗಳು ತನ್ನ ಹಿಡಿತದಲ್ಲಿವೆ ಎಂದು ಬಷೀರ್‌ ಅಂದುಕೊಂಡಿದ್ದರು. ಕಾರಣ ಅವರ ಸರಕಾರದಲ್ಲಿರುವ ಹೆಚ್ಚಿನ ಉನ್ನತ ಅಧಿಕಾರಿಗಳು ಈ ಭಾಗದಿಂದ ಬಂದಿದ್ದರು. ಆದರೆ ಈ ಬಾರಿ ಇದೇ ಭಾಗದಲ್ಲಿ ಮೊದಲಿಗೆ ಪ್ರತಿಭಟನೆಗಳು ಹುಟ್ಟಿಕೊಂಡವು.

ಸುಡಾನ್‌ ಅಧ್ಯಕ್ಷ ಓಮರ್‌ ಅಲ್‌ ಬಷೀರ್‌
ಸುಡಾನ್‌ ಅಧ್ಯಕ್ಷ ಓಮರ್‌ ಅಲ್‌ ಬಷೀರ್‌
/ಟಟಯ್‌ಡಿಗಾಂಗ್

ಹಾಗೆ ಹುಟ್ಟಿಕೊಂಡ ಪ್ರತಿಭಟನೆಗಳು ನಿಧಾನಕ್ಕೆ ದೇಶವ್ಯಾಪಿ ಕಾಡ್ಗಿಚ್ಚಿನಂತೆ ಹಬ್ಬಿಕೊಂಡು ರಾಜಧಾನಿಗೂ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದು ಇಂದು ವಿರೋಧ ಪಕ್ಷದ ಪ್ರಮುಖ ನಾಯಕ, ಸುಡಾನ್‌ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ಒಮರ್‌ ಎಲ್‌ ಡಿಗಿಯರ್‌ರನ್ನು ಸುಡಾನ್‌ ಭದ್ರತಾ ಪಡೆಗಳು ಬಂಧಿಸಿವೆ. ಶುಕ್ರವಾರ ನೈಲ್‌ನ ಪಶ್ಚಿಮ ದಂಡೆ ಮೇಲಿರುವ ಒಂಡರ್ಮನ್‌ನಲ್ಲಿ ಪ್ರತಿಭಟನೆ ಆರಂಭಗೊಳ್ಳುತ್ತಿದ್ದಂತೆ ಅವರನ್ನು ಬಂಧಿಸಲಾಗಿದ್ದು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಪಕ್ಷ ಹೇಳಿದೆ.

ರಾಜಕಾರಣಿಗಳಲ್ಲದೆ ವಿರೋಧ ಪಕ್ಷದ ನಾಯಕರ ಜತೆ ಕರ್ತೋಮ್‌ನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸುಡಾನ್‌ನ ಖ್ಯಾತ ಕವಿ ಮಹಮದ್‌ ತಹಾ ಅವರನ್ನೂ ಬಂಧಿಸಿದುವುದಾಗಿ ಸುಡಾನ್ ಬರಗಹಾರರ ಸಂಘ ಹೇಳಿದೆ. ಈ ಸರಣಿ ಇಲ್ಲಿಗೇ ನಿಂತಿಲ್ಲ. ಇಬ್ಬರು ಲೇಖಕರೂ ಬಂಧಿತರಾಗಿರುವುದಾಗಿ ಸುಡಾನ್‌ ಪತ್ರಕರ್ತರ ಸಂಘ ಹೇಳಿಕೆ ನೀಡಿದೆ. ಸರಕಾರದ ವಿರುದ್ಧ ಎಲ್ಲಾ ಸಮುದಾಯದವರು ಆಕ್ರೋಶಗೊಂಡಿರುವುದನ್ನು ಇದು ಎತ್ತಿ ತೋರಿಸುತ್ತಿದೆ.

ಪ್ರತಿಭಟನೆ ಹತ್ತಿಕ್ಕಲು ವಿಫಲ ಯತ್ನ:

ವಿರೋಧಿ ಗುಂಪು ಆರ್ಥಿಕ ಅಂಶಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವುದರಿಂದ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲೂ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ನಗದು ಅಪಮೌಲ್ಯೀಕರಣ, ಇಂಧನ ಕೊರತೆ, ಬ್ರೆಡ್‌ನ ಬೆಲೆ ಏರಿಕೆಗೆ ಜನರು ಕಂಗಲಾಗಿದ್ದು ಆಳುವ ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸಣ್ಣ ಪುಟ್ಟ ಪ್ರತಿರೋಧದ ಮೂಲಕ ವಿರೋಧಿಗಳನ್ನು ಸುಮ್ಮನಾಗಿಸಬಹುದು ಎಂದು ಅಂದುಕೊಂಡಿದ್ದ ಅಧ್ಯಕ್ಷರ ನಿರೀಕ್ಷೆ ಸುಳ್ಳಾಗಿದೆ.

ಹೀಗಾಗಿ ಪ್ರತಿಭಟನೆಯನ್ನು ಹತ್ತಿಕ್ಕಲು ಸರಕಾರ ದಂಡ ಪ್ರಯೋಗಕ್ಕೆ ಮುಂದಾಗಿದೆ. ಪರಿಣಾಮ ಇಲ್ಲಿಯವರೆಗೆ 19 ಜನರು ಅಸುನೀಗಿದ್ದಾರೆ ಎಂದು ಸರಕಾರ ಹೇಳಿದೆ. ಆದರೆ ಅಮ್ನೆಸ್ಟಿ ಇಂಟರ್‌ನ್ಯಾಷನ್‌ ಮಾತ್ರ 37 ಜನರು ಸಾವನ್ನಪ್ಪಿದ್ದಾರೆ ಎಂದು ಲೆಕ್ಕ ಹಾಕಿದೆ. ಜತೆಗೆ 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಿದೆ. ಈ ಸಂಬಂಧ ತನಿಖೆ ನಡೆಸುವಂತೆ ವಿಶ್ವಸಂಸ್ಥೆ ಶುಕ್ರವಾರ ಸುಡಾನ್‌ ತನಿಖಾ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಸದ್ಯಕ್ಕೆ ಈ ಪ್ರತಿಭಟನೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಬೆಲೆ ಏರಿಕೆ ವಿರುದ್ಧ ಆರಂಭಗೊಂಡ ಪ್ರತಿಭಟನೆ ದೇಶವ್ಯಾಪಿ ಸರಕಾರಿ ವಿರೋಧಿ ಚಳವಳಿಯಾಗಿ ಮಾರ್ಪಾಟುಗೊಂಡಿದೆ ಎಂದು ಅಲ್‌ಜಝೀರಾ ವರದಿ ಮಾಡಿದೆ. ಸುಡಾನ್‌ನ ವೈದ್ಯರೂ ಸೇರಿದ್ದಂತೆ ಮೇಲ್ವರ್ಗದ ಸಮುದಾಯಗಳು ಪ್ರತಿಭಟನೆಯಲ್ಲಿ ನಿರತರಾಗಿದ್ದು, ಸರಕಾರ ಬೀಳುವವರೆಗೆ ವಿರಮಿಸುವುದಿಲ್ಲ ಎಂದು ಘೋಷಿಸಿವೆ. ಇದರ ನಡುವೆಯೇ ಗುರುವಾರ ಸಭೆ ಸೇರಿರುವ ಎಲ್ಲಾ ವಿರೋಧ ಪಕ್ಷಗಳು ಮತ್ತಷ್ಟು ಹೆಚ್ಚಿನ ಪ್ರತಿಭಟನೆಗೆ ಕರೆ ನೀಡಿವೆ.

ಸದ್ಯದ ಪ್ರತಿಭಟನೆಗಳ ತೀವ್ರತೆ ನೋಡಿದರೆ ಇದು ನಿಲ್ಲುವ ಲಕ್ಷಣಗಳು ಇಲ್ಲ ಎಂದು ದೋಹಾ ಕಾಲೇಜಿನ ಡೀನ್‌ ಅಬ್ದೆಲ್‌ವಹಾಬ್‌ ಎಲ್‌ ಅಫೆಂಡಿ ಅಭಿಪ್ರಾಯಪಟ್ಟಿದ್ದಾರೆ. ಹಲವು ಕಾರಣಗಳಿಗೆ ಈ ಪ್ರತಿಭಟನೆ ವಿಶಿಷ್ಟವಾಗಿದೆ. ಇದು ಕೇವಲ ಮೇಲ್ವರ್ಗದವರ ಪ್ರತಿಭಟನೆಯಲ್ಲ. ರಾಜಧಾನಿಯಲ್ಲಿ ಹುಟ್ಟಿಕೊಂಡ ಪ್ರತಿರೋಧವೂ ಅಲ್ಲ. ಅರಬ್‌ ಸ್ಪ್ರಿಂಗ್‌ಗಿಂತ ಹೆಚ್ಚಾಗಿ ಸ್ಥಳೀಯ ಮಟ್ಟದಲ್ಲಿ ನಾಯಕರನ್ನು ಕಂಡುಕೊಂಡು ಹೋರಾಟ ಮುಂದುವರಿದಿರುವುದನ್ನು ನೋಡಿದರೆ ಇದು ಬಷೀರ್‌ ಕುರ್ಚಿಗೆ ಕಂಟಕವಾಗಲಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಇತ್ತೀಚೆಗಷ್ಟೇ ಸಿರಿಯಾಕ್ಕೆ ಹೋಗಿ ಬಂದಿರುವ ಬಷೀರ್‌ ಅಲ್ಲಿನ ಅಧ್ಯಕ್ಷ ಬಷರ್‌ ಅಲ್‌ ಅಸದ್‌ ಮಾದರಿಯಲ್ಲಿ ವಿರೋಧಿಗಳ ಹುಟ್ಟಡಗಿಸುವ ಧೈರ್ಯದಲ್ಲಿದ್ದಾರೆ. ಜತೆಗೆ ಪಕ್ಕದ ಈಜಿಪ್ಟ್‌ ಕೂಡ ಅಧ್ಯಕ್ಷರಿಗೆ ಬೆಂಬಲ ನೀಡಿದೆ. ಆದರೆ ಸಿರಿಯಾದಲ್ಲಿ ನಡೆದ ಬೆಳವಣಿಗೆ ಸುಡಾನ್‌ನಲ್ಲಿ ನಡೆಯುವುದು ಕಷ್ಟ ಎನ್ನುತ್ತಾರೆ ಅಫೆಂಡಿ. ಜನ ಸಂಘಟಿತರಾಗಿ ದೇಶದ ಎಲ್ಲಾ ಭಾಗಗಳಿಂದ ಹೋರಾಟಕ್ಕೆ ಧುಮುಕಿರುವುದು ಅಧ್ಯಕ್ಷರಿಗಿದ್ದ ಆಯ್ಕೆಗಳನ್ನು ಕಸಿದುಕೊಂಡಿದೆ. ಯಾವುದಕ್ಕೂ ಮುಂದಿನ ಕೆಲವು ದಿನಗಳಲ್ಲಿ ನಡೆಯಲಿರುವ ಬೆಳವಣಿಗೆಗಳು ಸುಡಾನ್‌ನ ಭವಿಷ್ಯವನ್ನು ನಿರ್ಧರಿಸಲಿವೆ. ಅಂದ ಹಾಗೆ ಸುಡಾನ್‌ ಕೂಡ ತೈಲ ಸಂಪದ್ಭರಿತ ದೇಶ ಎಂಬುದನ್ನು ಈ ಸಂದರ್ಭದಲ್ಲಿ ಮರೆತರೆ ತಪ್ಪಾಗುತ್ತದೆ.