samachara
www.samachara.com
ಆಕ್ಸಿಡೆಂಡಲ್‌ ಪಿಎಂ & ಸಿಎಂ; ‘ರಾಜಕೀಯ ಆಕಸ್ಮಿಕ’ದಲ್ಲಿ ಆಗ ದೇವೇಗೌಡ, ಈಗ ಕುಮಾರಸ್ವಾಮಿ!
COVER STORY

ಆಕ್ಸಿಡೆಂಡಲ್‌ ಪಿಎಂ & ಸಿಎಂ; ‘ರಾಜಕೀಯ ಆಕಸ್ಮಿಕ’ದಲ್ಲಿ ಆಗ ದೇವೇಗೌಡ, ಈಗ ಕುಮಾರಸ್ವಾಮಿ!

ಹುದ್ದೆಗೇರುವುದು, ಇಳಿಯುವುದೆಲ್ಲವೂ ಅಧಿಕಾರ ರಾಜಕಾರಣದ ತಂತ್ರಗಳ ಭಾಗವೇ ಹೊರತು ಯಾರೂ ಧುತ್ತೆಂದು ಕುರ್ಚಿಯ ಮೇಲೆ ಬಂದು ಕೂರಲು ಸಾಧ್ಯವಿಲ್ಲ, ರಾಜಕೀಯದಲ್ಲಿ ಯಾವುದೂ ಆಕಸ್ಮಿಕವೂ ಅಲ್ಲ.

‘ಆಕ್ಸಿಡೆಂಡಲ್‌ ಪ್ರೈಮ್‌ ಮಿನಿಸ್ಟರ್‌’ ಚಿತ್ರದ ಬಗ್ಗೆ ಮಾತುಕತೆಗಳು ಜೋರಾಗಿರುವ ಹೊತ್ತಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, “ನಾನೂ ಆಕ್ಸಿಡೆಂಡಲ್‌ ಪ್ರೈಮ್‌ ಮಿನಿಸ್ಟರ್‌” ಎಂದಿದ್ದಾರೆ. ಈ ಮೂಲಕ ರಾಜಕೀಯದಲ್ಲಿ ಇಂಥ ‘ಆಕ್ಸಿಡೆಂಟಲ್‌’ ಸನ್ನಿವೇಶಗಳು ಸಾಮಾನ್ಯ ಎಂಬುದನ್ನು ದೇವೇಗೌಡರ ಮಾತುಗಳು ಬಹುತೇಕ ಸ್ಪಷ್ಟಪಡಿಸಿವೆ.

ಮನಮೋಹನ್‌ ಸಿಂಗ್‌ ಪಾತ್ರದ ಮುಖ್ಯ ಭೂಮಿಕೆಯ ಮೂಲಕ ಕಾಂಗ್ರೆಸ್‌ನ ಅಂತರಂಗವನ್ನು ಬಯಲು ಮಾಡುವ ಉದ್ದೇಶದಿಂದ ನಿರ್ಮಾಣವಾಗಿರುವಂತೆ ಕಾಣುತ್ತಿರುವ ‘ಆಕ್ಸಿಡೆಂಡಲ್‌ ಪ್ರೈಮ್‌ ಮಿನಿಸ್ಟರ್‌’ ಚಿತ್ರದ ಟ್ರೈಲರ್‌ ಬಿಡುಗಡೆಯ ಬೆನ್ನಲ್ಲೇ, “‘ಆಕ್ಸಿಡೆಂಡಲ್‌ ಸಿಎಂ’ ಹೆಸರಿನ ಚಿತ್ರ ನಿರ್ಮಾಣವಾದರೆ ಕುಮಾರಸ್ವಾಮಿ ಅವರ ಪಾತ್ರವನ್ನು ಯಾರು ಮಾಡಲಿದ್ದಾರೆ?” ಎಂಬ ಬಿಜೆಪಿಯ ಅಣಕದ ಟ್ವೀಟ್‌ ಪ್ರಶ್ನೆಯೂ ಚರ್ಚೆಯಾಗುತ್ತಿದೆ. ಅತ್ತ ರಾಷ್ಟ್ರೀಯ ಮಟ್ಟದಲ್ಲಿ ‘ಆಕ್ಸಿಡೆಂಡಲ್‌ ಪ್ರೈಮ್‌ ಮಿನಿಸ್ಟರ್‌’ ಸದ್ದಾಗುತ್ತಿದ್ದರೆ, ಇತ್ತ ಕರ್ನಾಟಕದಲ್ಲಿ ‘ಆಕ್ಸಿಡೆಂಡಲ್‌ ಸಿಎಂ’ ಅಣಕ ಸದ್ದು ಮಾಡುತ್ತಿದೆ.

‘ಆಕ್ಸಿಡೆಂಡಲ್‌ ಪ್ರೈಮ್‌ ಮಿನಿಸ್ಟರ್‌’ ಚಿತ್ರವನ್ನು 2019ರ ಚುನಾವಣೆಗೂ ಮುನ್ನಾ ಕಾಂಗ್ರೆಸ್‌ನ ಕಾಲೆಳೆಯಲು ಬಿಜೆಪಿ ಬಳಸಿಕೊಳ್ಳಲು ಸಿದ್ಧವಾಗಿದೆ. ಚಿತ್ರದ ನಿರ್ಮಾಣದ ಹಿಂದಿರುವ ವ್ಯಕ್ತಿಗಳು ಹಾಗೂ ಚಿತ್ರದ ಟ್ರೈಲರ್‌ ಅನ್ನು ಬಿಜೆಪಿ ತನ್ನ ಟ್ವಿಟರ್‌ ಖಾತೆಯ ಮೂಲಕ ಹಂಚಿಕೊಂಡಿದ್ದನ್ನು ನೋಡಿದರೆ ಈ ಚಿತ್ರವನ್ನು ಬಿಜೆಪಿ ಖುದ್ದು ಪ್ರಮೋಟ್‌ ಮಾಡುತ್ತಿರುವುದು ಯಾವುದೇ ಮುಚ್ಚುಮರೆ ಇಲ್ಲದೆ ತೆರೆಯ ಮುಂದೆಯೇ ಕಾಣುತ್ತಿದೆ.

Also read: ‘ಆಕ್ಸಿಡೆಂಟಲ್‌ ಫ್ರಾಡ್ಸ್‌’; ಮಗನಿಂದ 34 ಕೋಟಿ ಜಿಎಸ್‌ಟಿ ವಂಚನೆ, ತಂದೆಯಿಂದ 5,500 ಕೋಟಿ ಹಗರಣ!

ಅತ್ತ ಬಿಜೆಪಿಯ ರಾಷ್ಟ್ರೀಯ ಸಾಮಾಜಿಕ ಜಾಲತಾಣ ಪಡೆ ಆಕ್ಸಿಡೆಂಟಲ್‌ ಎಳೆ ಹಿಡಿದು ಕಾಂಗ್ರೆಸ್‌ ಅನ್ನು ಅಣಕಿಸಲು ಶುರು ಮಾಡುತ್ತಿದ್ದಂತೆ ಕರ್ನಾಟಕ ಬಿಜೆಪಿಯ ಸಾಮಾಜಿಕ ಜಾಲತಾಣ ಪಡೆ ಕುಮಾರಸ್ವಾಮಿ ಕಾಲೆಳೆಯಲು ರಾಜ್ಯ ಚುನಾವಣಾ ಫಲಿತಾಂಶದ ನಂತರದ ‘ಆಕಸ್ಮಿಕ’ ಬೆಳವಣಿಗೆಗಳನ್ನು ಬಳಸಿಕೊಳ್ಳುತ್ತಿದೆ. 2018ರಲ್ಲಿ ರಾಜ್ಯದ ಮೂರು ದಿನಗಳ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅಧಿಕಾರ ಕೈ ತಪ್ಪಿದ್ದು ಹಾಗೂ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿಯಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು ಎಲ್ಲವನ್ನೂ ಆಕಸ್ಮಿಕ ಎಂದು ಬಿಂಬಿಸಲು ರಾಜ್ಯ ಬಿಜೆಪಿ ಮುಂದಾದಂತಿದೆ.

1996ರ ಅತಂತ್ರದ ಪರಿಣಾಮ:

ಅದು 1996ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಸಮಯ. ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಯಾವ ಪಕ್ಷಗಳಿಗೂ ಸ್ಪಷ್ಟ ಬಹುಮತ ಸಿಗದಂತೆ ದೇಶದ ಮತದಾರ ಮಹಾತೀರ್ಪು ಕೊಟ್ಟಿದ್ದ. ಪ್ರಾದೇಶಿಕ ಪಕ್ಷಗಳ ಮೈತ್ರಿ ಕೂಟ ಹಾಗೂ ಕಾಂಗ್ರೆಸ್‌ ಬೆಂಬಲದೊಂದಿಗೆ ರಚನೆಯಾದ ತೃತೀಯ ರಂಗದಲ್ಲಿ ದೇವೇಗೌಡ ಪ್ರಧಾನಮಂತ್ರಿಯಾಗಿ ಆಯ್ಕೆಯಾದರು. ಆಗ ಪ್ರಧಾನಿ ಹುದ್ದೆಗೆ ದೇವೇಗೌಡರ ಹೆಸರನ್ನು ಮುಂದಿಟ್ಟಿದ್ದವರು ಟಿಡಿಪಿ ಮುಖಂಡ ಎನ್‌. ಚಂದ್ರಬಾಬು ನಾಯ್ಡು .

1996ರ ಜೂನ್‌ 1ರಿಂದ 1997ರ ಏಪ್ರಿಲ್‌ 21ರವರೆಗೆ ದೇವೇಗೌಡ ಪ್ರಧಾನಮಂತ್ರಿ ಹುದ್ದೆಯಲ್ಲಿದ್ದರು. ಕಾಂಗ್ರೆಸ್‌ ಬೆಂಬಲ ಹಿಂಪಡೆದ ಕಾರಣ ದೇವೇಗೌಡ ಅಧಿಕಾರದಿಂದ ಕೆಳಗಿಳಿಯಬೇಕಾಗಿ ಬಂತು. ಹಾಗೆ ನೋಡಿದರೆ ದೇವೇಗೌಡ ಪ್ರಧಾನಿಯಾಗಿದ್ದು ಆಕ್ಸಿಡೆಂಟಲ್‌ ಅಲ್ಲ; ಸುಮಾರು ಹತ್ತು ತಿಂಗಳ ಕಾಲ ಪ್ರಧಾನಿ ಹುದ್ದೆಯಲ್ಲಿದ್ದು ಹುದ್ದೆ ಬಿಟ್ಟು ಕೆಳಗಿಳಿಯಬೇಕಾಗಿ ಬಂದ ಸಂದರ್ಭ ಆಕ್ಸಿಡೆಂಟಲ್‌.

Also read: ಲೋಕಸಭೆ ಚುನಾವಣೆ 2019: ದೇವೇಗೌಡ ಎಂಬ ‘ಅಂಬ್ರೆಲಾ ಫಿಗರ್’!

‘ಸಾಂದರ್ಭಿಕ ಶಿಶು’ ಎಂಬ ಕುಮಾರಸ್ವಾಮಿ:

ಹೆಚ್ಚೂ ಕಡಿಮೆ ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶವೂ 1996ರ ಲೋಕಸಭಾ ಚುನಾವಣೆಯ ಫಲಿತಾಂಶದ ಮಾದರಿಯಲ್ಲೇ ಇತ್ತು. ಯಾರೇ ಸರಕಾರ ರಚಿಸಲು ಮುಂದೆ ಬಂದರೂ ತಮ್ಮ ಮನೆ ಬಾಗಿಲಿಗೆ ಬರುವುದು ಅನಿವಾರ್ಯ ಎಂಬುದು 37 ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್‌ಗೆ ಚೆನ್ನಾಗಿಯೇ ಗೊತ್ತಿತ್ತು. ಸ್ಪಷ್ಟ ಬಹುಮತಕ್ಕೆ ಅಗತ್ಯವಿದ್ದ 113 ಸ್ಥಾನಗಳ ಸಮೀಪಕ್ಕೆ ಬಂದು 104 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಕೈ ಕೈ ಹಿಚುಕಿಕೊಳ್ಳುವ ಪರಿಸ್ಥಿತಿ ಇತ್ತು.

ಬಿಜೆಪಿ ಮೀನ ಮೇಷ ಎಣಿಸುವುದಕ್ಕೂ ಮೊದಲೇ 80 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್‌ ಜೆಡಿಎಸ್‌ ಬಾಗಿಲು ಬಡಿದಿತ್ತು. ಇದರ ಮಧ್ಯೆಯೇ ಕೊರತೆ ಇದ್ದ ಸ್ಥಾನಗಳನ್ನೂ ಮುಂದೆ ಭರಿಸಿಕೊಳ್ಳುವ ಅತಿ ವಿಶ್ವಾಸದಲ್ಲಿ ಯಡಿಯೂರಪ್ಪ ರಾಜಭವನದ ಗಾಜಿನಮನೆಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿಯೇ ಬಿಟ್ಟರು.

ದೇವೇಗೌಡ ಪ್ರಧಾನಮಂತ್ರಿ ಹುದ್ದೆಗೇರಿದ ಸಂದರ್ಭಕ್ಕಿಂತಲೂ ಹೆಚ್ಚು ಆಕ್ಸಿಡೆಂಟಲ್‌ ಆಗಿ ಮುಖ್ಯಮಂತ್ರಿ ಹುದ್ದೆಗೇರಿದ್ದು ಕುಮಾರಸ್ವಾಮಿ. ವಾರಗಳ ಅಂತರದಲ್ಲಿ ಕುಮಾರಸ್ವಾಮಿ ತಾಜ್‌ ವೆಸ್ಟ್‌ಎಂಡ್‌ ಹೋಟೆಲ್‌, ಶಾಂಗ್ರಿಲಾ ಹೋಟೆಲ್‌, ಪದ್ಮನಾಭವನಗರದ ದೇವೇಗೌಡರ ಮನೆಗೆ ಟ್ರಿಪ್‌ ಹಾಕುತ್ತಲೇ ಮೇ 17ರ ‘ಶುಭ’ ಗುರುವಾರದ ಮಧ್ಯಾಹ್ನ ಕಾಂಗ್ರೆಸ್ ಜತೆ ಸೇರಿ ಸರಕಾರ ರಚಿಸುವ ನಿರ್ಧಾರ ಘೋಷಿಸಿದ್ದರು. ಕಾಂಗ್ರೆಸ್‌ನ ‘ಬೇಷರತ್‌’ ಬೆಂಬಲದೊಂದಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯೂ ಆದರು.

Also read: ಅಧಿಕಾರದ ಆಸೆ ಇಲ್ಲ; ಬಂದಾಗ ಬಿಡಲು ಸನ್ಯಾಸಿ ಅಲ್ಲ: ಕುಮಾರಸ್ವಾಮಿ ಉರುಳಿಸಿದ ‘ಶಾಂಗ್ರಿಲಾ ದಾಳ’!

ಅಧಿಕಾರಕ್ಕೆ ಬಂದ ಬಳಿಕ, “ನಾನು ಸಾಂದರ್ಭಿಕ ಶಿಶು” ಎಂದು ಕಣ್ಣೀರು ಹಾಕುವ ಮೂಲಕ ಕುಮಾರಸ್ವಾಮಿ ಸುದ್ದಿಯಾಗಿದ್ದರು. ಇದೇ ಮಾತನ್ನು ಹಿಡಿದು ಬಿಜೆಪಿ ಆಗಲೂ ಕುಮಾರಸ್ವಾಮಿ ಹಾಗೂ ಮೈತ್ರಿ ಸರಕಾರವನ್ನು ಅಣಕಿಸಿತ್ತು. ಈಗ ಕುಮಾರಸ್ವಾಮಿ ಅಣಕಿಸಲು ಈ ಹಿಂದಿನ ಆಕಸ್ಮಿಕ ಸನ್ನಿವೇಶವನ್ನೇ ಬಿಜೆಪಿ ಮತ್ತೆ ಮುನ್ನೆಲೆಗೆ ತಂದು ನಿಲ್ಲಿಸಿಕೊಂಡಿದೆ.

ರಾಜಕೀಯದಲ್ಲಿ ಆಕಸ್ಮಿಕ ಎನ್ನುವುದು ಸುಳ್ಳಲ್ಲದಿದ್ದರೂ ಪೂರ್ತಿಯಾಗಿ ಸತ್ಯವಂತೂ ಅಲ್ಲ. ದೇವೇಗೌಡ ಪ್ರಧಾನಮಂತ್ರಿಯಾಗಿದ್ದು, ಮನಮೋಹನ್‌ ಸಿಂಗ್‌ ಪ್ರಧಾನಮಂತ್ರಿಯಾಗಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು – ಇವೆಲ್ಲವೂ ಅಧಿಕಾರ ರಾಜಕಾರಣದ ತಂತ್ರಗಳ ಭಾಗವೇ ಹೊರತು ಯಾರೂ ಧುತ್ತೆಂದು ಕುರ್ಚಿಯ ಮೇಲೆ ಬಂದು ಕುಂತವರಲ್ಲ, ರಾಜಕೀಯದಲ್ಲಿ ಯಾವುದೂ ಆಕಸ್ಮಿಕವೂ ಅಲ್ಲ.