samachara
www.samachara.com
ಧರ್ಮದರ್ಶಿಗಳಿಂದ ರಾಜಕಾರಣಿಗಳವರೆಗೆ- ನಡುಕ ಹುಟ್ಟಿಸಿದ್ದ ದಕ್ಷ ಅಧಿಕಾರಿ ಮಧುಕರ ಶೆಟ್ಟಿ; ಇನ್ನಿಲ್ಲ...
COVER STORY

ಧರ್ಮದರ್ಶಿಗಳಿಂದ ರಾಜಕಾರಣಿಗಳವರೆಗೆ- ನಡುಕ ಹುಟ್ಟಿಸಿದ್ದ ದಕ್ಷ ಅಧಿಕಾರಿ ಮಧುಕರ ಶೆಟ್ಟಿ; ಇನ್ನಿಲ್ಲ...

ಕಡಿಮೆ ವಯಸ್ಸಿಗೆ ಐಪಿಎಸ್ ಆಗಿದ್ದ ಮಧುಕರ್ ಶೆಟ್ಟಿ ಬದುಕಿದ್ದರೆ ಕರ್ನಾಟಕ ಪೊಲೀಸ್ ಇಲಾಖೆಯ ಅತ್ಯುನ್ನತ ಹುದ್ದೆಯವರೆಗೆ ಅನಾಯಾಸವಾಗಿ ನಡೆದು ಬರುತ್ತಿದ್ದರು.

ಯುವ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಮಧುಕರ ಶೆಟ್ಟಿ ಅನಾರೋಗ್ಯದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಅಕಾಲಿಕ ಸಾವಿಗೀಡಾಗಿದ್ದಾರೆ. 47 ವರ್ಷ ವಯಸ್ಸಿನ 1999ನೇ ಬ್ಯಾಚ್‌ನ ಅಧಿಕಾರಿ ಕೆಲವು ದಿನಗಳ ಹಿಂದೆ ಹೈದ್ರಾಬಾದ್‌ನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಗಂಭೀರವಾಗಿದೆ ಎಂದು ಆರಂಭದ ವರದಿಗಳು ಹೇಳಿದರೂ, ನಿಧಾನವಾಗಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬ ಮಾಹಿತಿ ಇತ್ತು. ಆದರೆ ಶುಕ್ರವಾರ ರಾತ್ರಿ 8.45ರ ಸುಮಾರಿಗೆ ಮಧುಕರ ಶೆಟ್ಟಿ ಇನ್ನಿಲ್ಲ ಎಂಬ ಸುದ್ದಿ ಹೊರಬಿದ್ದಿದೆ.

ಉಡುಪಿ ಮೂಲದ ಮಧುಕರ ಶೆಟ್ಟಿ; ಪ್ರಯೋಗಶೀಲ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರ ಪುತ್ರ. ಉನ್ನತ ಶಿಕ್ಷಣವನ್ನು ಮುಗಿಸಿದ್ದು ಜೆಎನ್‌ಯುನ ಸಮಾಜ ಶಾಸ್ತ್ರ ವಿಭಾಗದಲ್ಲಿ. 1999ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಿದ ನಂತರ ಮಧುಕರ ಶೆಟ್ಟಿ ಬೆಂಗಳೂರು ಗ್ರಾಮೀಣ ಜಿಲ್ಲೆ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡರು. ಚಾಮರಾಜನಗರ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎಸ್‌ಪಿಯಾಗಿ ಕೆಲಸ ಮಾಡಿದರು. ಈ ನಡುವೆ ವೀರಪ್ಪನ್ ಎನ್‌ಕೌಂಟರ್ ಮಾಡಿದ ಟಾಸ್ಕ್‌ ಫೋರ್ಸ್‌ನ ಕೊನೆಯ ಹಂತದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ವಿಶ್ವಸಂಸ್ಥೆಯ ಯುದ್ಧಾಪರಾಧಗಳ ತನಿಖೆಯಲ್ಲಿ ಭಾಗವಹಿಸಿದರು. ಚಿಕ್ಕಮಗಳೂರಿನಲ್ಲಿ ನಕ್ಸಲ್ ವಿರೋಧಿ ಪಡೆ (ಎಎನ್‌ಎಫ್‌) ಎಸ್‌ಪಿಯಾಗಿಯೂ ಕೆಲಸ ಮಾಡಿದರು. ಲೋಕಾಯುಕ್ತದಲ್ಲಿ ಎಸ್‌ಪಿಯಾಗಿ, ರಾಜ್ಯಪಾಲರ ನಿವಾಸದಲ್ಲಿ Aide De Camp ಹುದ್ದೆಗಳನ್ನು ನಿಭಾಯಿಸಿದರು. ಕೆಲ ಕಾಲ ಬೆಂಗಳೂರು ಟ್ರಾಫಿಕ್ ಪೊಲೀಸ್ ವಿಭಾಗದಲ್ಲಿ ಆಯುಕ್ತರಾಗಿಯೂ ಇದ್ದರು. ಪೊಲೀಸ್ ನೇಮಕಾತಿ ಪ್ರಕ್ರಿಯೆಯಲ್ಲಿ ತಮ್ಮ ಹಿರಿಯಾಧಿಕಾರಿಗಳ ಲಂಚಗುಳಿತನವನ್ನು ವಿರೋಧಿಸಿ, ಪ್ರಮಾಣಿಕ ವ್ಯವಸ್ಥೆಯನ್ನು ಸೃಷ್ಟಿಸಲು ಪ್ರಯತ್ನ ನಡೆಸಿದರು.

ಮಧುಕರ್ ಶೆಟ್ಟಿ ಅವರ ಟ್ರಾಕ್‌ ರೆಕಾರ್ಡ್‌ ನೋಡುತ್ತಿದ್ದರೆ, ಆರಂಭದಿಂದಲೂ ಅವರು ಹುದ್ದೆಗಳನ್ನು ನಿಭಾಯಿಸಿಕೊಂಡು ಹೋಗುವ ಹಾದಿಯಲ್ಲಿಯೇ ಪಟ್ಟಭದ್ರ ವಿರೋಧಿಗಳನ್ನೂ ಸೃಷ್ಟಿಸಿಕೊಂಡೇ ಮುನ್ನಡೆದರು. ಪೊಲೀಸ್ ಇಲಾಖೆಯಲ್ಲಿ ಅದರಲ್ಲೂ ಐಪಿಎಸ್ ದರ್ಜೆಯಲ್ಲಿ ಅಪರೂಪವಾಗಿರುವ ಪ್ರಾಮಾಣಿಕತೆ ಹಾಗೂ ಸರಳ ನಡವಳಿಕೆ ಅವರಲ್ಲಿ ಕೊನೆಯವರೆಗೂ ಉಳಿದುಕೊಂಡಿತು. “ಅವರು ಎಷ್ಟು ಪ್ರಾಮಾಣಿಕ ಅಂದರೆ ತಿಂಗಳ ಕೊನೆಯಲ್ಲಿ ಡ್ರೈವರ್ ಹತ್ತಿರವೇ 500- 1,000 ಸಾಲ ತೆಗೆದುಕೊಳ್ಳುತ್ತಿದ್ದರು. ಮನೆಯಲ್ಲಿ ಆರ್ಡರ್ಲಿಗಳನ್ನು ಇಟ್ಟುಕೊಳ್ಳುತ್ತಿರಲಿಲ್ಲ. ಮನೆ ಕೆಲಸವನ್ನು ಅವರೇ ಮಾಡಿಕೊಳ್ಳುತ್ತಿದ್ದರು,’’ ಎಂದು ನೆನಪಿಸಿಕೊಳ್ಳುತ್ತಾರೆ ಲೋಕಾಯುಕ್ತದ ಉತ್ತುಂಗದ ದಿನಗಳಲ್ಲಿ ಮಧುಕರ್ ಶೆಟ್ಟರನ್ನು ಹತ್ತಿರದಿಂದ ಕಂಡ ಪತ್ರಕರ್ತ ಮುರಳೀಧರ್ ವಿ.

ಸಾಮಾಜಿಕ ಜಾಲತಾಣಗಳಲ್ಲಿ ಮಧುಕರ್ ಶೆಟ್ಟಿ ಸಾವಿಗೆ ಕಂಬನಿ ಮಿಡಿಯುತ್ತಿರುವ ಬಹುತೇಕರು ಅವರ ಪ್ರಾಮಾಣಿಕ ನಡತೆಯನ್ನು ನೆನಪಿಸಿಕೊಳ್ಳುತ್ತಿದ್ದಾರೆ ಕೂಡ.

ಹಾಗೆ ನೋಡಿದರೆ, ತಮ್ಮ 19 ವರ್ಷಗಳ ಪೊಲೀಸ್ ಸೇವೆಯಲ್ಲಿ ಮಧುಕರ್ ಶೆಟ್ಟಿ ಗುರುತರವಾದ ಹುದ್ದೆಗಳಿಂದ ದೂರವೇ ಉಳಿದರು. ಚಿಕ್ಕಮಗಳೂರಿನಲ್ಲಿರುವಾಗ ಜಿಲ್ಲೆಯಲ್ಲಿ ಅಕ್ಕಿ, ಅನ್ನದ ಹೆಸರಿನಲ್ಲಿ ನಡೆದುಕೊಂಡು ಬರುತ್ತಿರುವ ಪ್ರತಿಷ್ಠಿತ ದೇವಸ್ಥಾನವೊಂದರ ಧರ್ಮದರ್ಶಿಗಳ ತಮ್ಮನ ಜಮೀನಿನ ವಿಚಾರದಲ್ಲಿ ಕಾನೂನು ಕ್ರಮ ಜರುಗಿಸಲು ಮುಂದಾದರು. ಈ ಸಮಯದಲ್ಲಿ ಇವತ್ತು ಪ್ರತಿಪಕ್ಷದಲ್ಲಿರುವ ಶಾಸಕರೊಬ್ಬರು ಮಧ್ಯವರ್ತಿಯಾಗಿದ್ದುಕೊಂಡು ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಿಸಿ ಸೀಟಿ ಹೊಡೆದರು.

ಇನ್ನೊಂದು ಕಡೆ, ಈ ದೇಶದಲ್ಲಿ ನಕ್ಸಲೀಯರು ಪೊಲೀಸ್ ಅಧಿಕಾರಿ ಪರವಾಗಿ ಕರ ಪತ್ರ ಮುದ್ರಿಸಿ ಹಂಚಿದರು ಮತ್ತು ಇಂತಹದೊಂದು ಅಪರೂಪದ ಬೀಳ್ಕೊಡುಗೆ ಸಿಕ್ಕಿದ್ದು ಮಧುಕರ್ ಶೆಟ್ಟಿ ಅವರಿಗೆ ಮಾತ್ರ ಅನ್ನಿಸುತ್ತದೆ. ಚಿಕ್ಕಮಗಳೂರಿನಲ್ಲಿ ಇದ್ದಷ್ಟು ದಿನ ಸಾಮಾನ್ಯ ಜನರಿಗೆ ಹತ್ತಿರವಾಗಿದ್ದ ಅಧಿಕಾರಿ ಮುಂದೆ ರಾಜ್ಯಪಾಲರ ನಿವಾಸದಲ್ಲಿ ಗುರುತರವಲ್ಲದ ಹೊಣೆ ಹೊರಬೇಕಾಗಿ ಬಂತು. ಚಿಕ್ಕಮಗಳೂರು ಮೂಲದ ಧರ್ಮದರ್ಶಿಗಳ ಕುಟುಂಬದ ವಿರುದ್ಧದ ಆ ಒಂದು ನಡೆಯ ನಂತರ ಮಧುಕರ್ ಶೆಟ್ಟಿ ಮತ್ತೆ ಎಗ್ಸಿಕ್ಯೂಟಿವ್ ಪೋಸ್ಟ್‌ಗೆ ಬರಲು ಸಾಧ್ಯವಾಗಲೇ ಇಲ್ಲ. ಕರ್ನಾಟಕದಲ್ಲಿಯೂ ಹೆಚ್ಚು ಕಾಲ ಉಳಿಯಲಿಲ್ಲ.

ಮಧುಕರ್ ಶೆಟ್ಟಿ ಪ್ರಾಮಾಣಿಕರಾಗಿದ್ದರು, ಕಾನೂನನ್ನು ಅದರ ಮಾನವೀಯ ನೆಲೆಯಲ್ಲಿ ಅರ್ಥ ಮಾಡಿಕೊಂಡಿದ್ದರು ಮತ್ತು ಪ್ರಭಾವಿಗಳ ವಿರುದ್ಧ ಅದನ್ನು ಅಸ್ತ್ರವಾಗಿ ಮುಲಾಜಿಲ್ಲದೆ ಬಳಸುತ್ತಿದ್ದರು. ಬಳಸಿದ್ದಕ್ಕೆ ವಿಶೇಷ ಪಾರಿತೋಷಕವನ್ನಾಗಲೀ, ಪ್ರಚಾರವನ್ನಾಗಲೀ ಅವರು ಬಯಸುತ್ತಿರಲಿಲ್ಲ. ಕಡಿಮೆ ವಯಸ್ಸಿಗೆ ಐಪಿಎಸ್ ಆಗಿದ್ದ ಮಧುಕರ್ ಶೆಟ್ಟಿ ಬದುಕಿದ್ದರೆ ಕರ್ನಾಟಕ ಪೊಲೀಸ್ ಇಲಾಖೆಯ ಅತ್ಯುನ್ನತ ಹುದ್ದೆಯವರೆಗೆ ಅನಾಯಾಸವಾಗಿ ನಡೆದು ಬರುತ್ತಿದ್ದರು.

ಲೋಕಾಯುಕ್ತದಲ್ಲಿದ್ದಾಗ, ‘ನ್ಯಾ. ಸಂತೋಷ್ ಹೆಗಡೆ ಟೀಂ’ನಲ್ಲಿ ದೊಡ್ಡಮಟ್ಟದಲ್ಲಿ ಕೆಲಸ ಮಾಡಿದ ಅಧಿಕಾರಿಗಳ ಪೈಕಿ ಮಧುಕರ ಶೆಟ್ಟಿ ಕೂಡ ಒಬ್ಬರು. ಬೆಂಗಳೂರು ವಿಮಾನ ನಿಲ್ದಾಣ ಸಮೀಪದ ಬಂಡಿಕೊಡಗೆಹಳ್ಳಿ ಎಂಬ ಹಳ್ಳಿಯಲ್ಲಿ ಬಿಜೆಪಿ ನಾಯಕ ಕಟ್ಟಾ ಸುಬ್ರಮಣ್ಯ ನಾಯ್ಡು ಪುತ್ರ ಜಗದೀಶ್ ನಾಯ್ಡು ಭೂ ಅಕ್ರಮದಲ್ಲಿ ಪಾಲ್ಗೊಂಡ ಪ್ರಕರಣದಲ್ಲಿ ಅವರನ್ನು ಬಂಧಿಸುವ ಗಟ್ಟಿ ನಿರ್ಧಾರ ತೆಗೆದುಕೊಂಡರು. ಈ ಭೂ ಅಕ್ರಮ ಪ್ರಕರಣದ ತನಿಖೆ ಲೋಕಾಯುಕ್ತಕ್ಕೆ ಹಾಗೂ ಹೆಗಡೆ ಅವರಿಗೆ ಮೆರಗು ತಂದುಕೊಟ್ಟಿತ್ತು. ಮುಂದೆ, ಮಧುಕರ್ ಶೆಟ್ಟಿ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗಡೆ ಮೇಲೆಯೇ ದಿನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರೋಪ ಮಾಡಿದರು, ಗಣಿ ಅಕ್ರಮ ತನಿಖೆಯ ದಿನಗಳಲ್ಲಿ ಲೋಕಾಯುಕ್ತದೊಳಗೆ ತಮಗಿದ್ದ ಅಸಮಾಧಾನವನ್ನು ಹೊರಹಾಕಿದ್ದರು.

ಇಷ್ಟೆಲ್ಲದರ ನಡುವೆ, “ಮಧುಕರ್ ಸ್ಟಡಿಗೆ ಫಾರಿನ್‌ಗೆ ಹೋಗಿದ್ದಾನೆ. ಆತ ಬಂದರೆ ಒಂದು ಒಳ್ಳೆಯ ಹುದ್ದೆ ಕೊಡಿಸಬಹುದು,’’ ಎಂದು ಅಂದಿನ ಸಿದ್ದರಾಮಯ್ಯ ಸರಕಾರದಲ್ಲಿದ್ದ ಕೆಲವು ಆಪ್ತರು ಹೇಳಿಕೊಳ್ಳುತ್ತಿದ್ದರು. ಅಮೆರಿಕಾದ ರಾಕರ್‌ಫೆಲ್ಲರ್ ಕಾಲೇಜ್ ಆಫ್ ಪಬ್ಲಿಕ್ ಅಫೇರ್ಸ್‌ ಅಂಡ್ ಪಾಲಿಸಿಯಲ್ಲಿ ಪಿಎಚ್‌ಡಿ ಅಧ್ಯಯನಕ್ಕೆ ತೆರಳಿದ್ದ ಮಧುಕರ್ ಶೆಟ್ಟಿ ‘ವ್ಯವಸ್ಥೆಯಿಂದ ಭ್ರಮನಿರಸಗೊಂಡಿದ್ದರು. ಅವರು ಮೂರು ವರ್ಷಗಳ ರಜೆಯನ್ನು ಇನ್ನೆರಡು ವರ್ಷಗಳಿಗೆ ಸಂಬಳ ರಹಿತ ರಜೆಯನ್ನಾಗಿ ವಿಸ್ತರಿಸಿದ್ದರು,’’ ಎಂದು ‘ದಿ ಹಿಂದೂ’ ಶೆಟ್ಟಿ ಅಧ್ಯಯನ ಮುಗಿಸಿ ಮರಳಿ ಕರ್ನಾಟಕ ಪೊಲೀಸ್ ಇಲಾಖೆ ಸೇವೆಗೆ ಬಂದಾಗ ವರದಿ ಮಾಡಿತ್ತು. ಕೊನೆಯವರೆಗೂ ಗುರುತರ ಸ್ಥಾನಗಳಿಂದ ದೂರ ಇಟ್ಟುಕೊಂಡು ಬಂದ ಮಧುಕರ್ ಶೆಟ್ಟರನ್ನು ಕರ್ನಾಟಕ ಸರಕಾರ ಮಾರ್ಚ್‌ 2, 2017ರಂದು ಹೈದ್ರಾಬಾದ್‌ಗೆ ಕಳುಹಿಸಿಕೊಟ್ಟಿತು.

ಸರಕಾರಿ ದಾಖಲೆಯಲ್ಲಿ ಮಧುಕರ್ ಶೆಟ್ಟಿ ನೆನಪು. 
ಸರಕಾರಿ ದಾಖಲೆಯಲ್ಲಿ ಮಧುಕರ್ ಶೆಟ್ಟಿ ನೆನಪು. 

“ಕ್ರಿಸ್ಮಸ್ ರಜೆ ದಿನ ಬೆಳಗ್ಗೆ ಆರುವರೆ ಸುಮಾರಿಗೆ ಅವರೇ ಎನ್‌ಪಿಎ (ನ್ಯಾಷನಲ್ ಪೊಲೀಸ್ ಅಕಾಡೆಮಿ)ಯ ವೈದ್ಯರಿಗೆ ಕರೆ ಮಾಡಿ ಆರೋಗ್ಯದಲ್ಲಿ ಏರುಪೇರಾದ ವಿಚಾರ ತಿಳಿಸಿದರು. ಇಲ್ಲಿನ ವೈದ್ಯರು ಪರೀಕ್ಷಿಸಿ ಕಾಂಟಿನೆಂಟಲ್ ಆಸ್ಪತ್ರೆಗೆ ಸೇರಿಸಿದರು. ಎಚ್1ಎನ್1 ಆಗಿದ್ದರಿಂದ ಹುಷಾರಾಗಿ ಬರುತ್ತಾರೆ ಎಂದು ನಂಬಿದ್ದೆವು. ಆದರೆ ಈಗ ಅವರ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ,’’ ಎಂದು ‘ಸಮಾಚಾರ’ಕ್ಕೆ ಮಾಹಿತಿ ನೀಡಿದರು ಎನ್‌ಪಿಎನಲ್ಲಿ ಮಧುಕರ ಶೆಟ್ಟಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಸಂತೋಷ್ ಬಾಲ.

“ಎನ್‌ಪಿಎನಲ್ಲಿ ಅತ್ಯಂತ ಆರೋಗ್ಯವಂತ ವ್ಯಕ್ತಿ ಎಂದರೆ ಇವರೇ ಆಗಿದ್ದರು. ನಿಯಮಿತ ವ್ಯಾಮಾಯ, ಊಟ ಎಲ್ಲವೂ ಸರಿ ಇತ್ತು. ಆದರೂ ಏಕೆ ಹೀಗಾಯಿತು ಎಂಬುದು ಗೊತ್ತಿಲ್ಲ. ಅವರಂತಹ ಅಧಿಕಾರಿ ಜತೆಯಲ್ಲಿ ಇದ್ದು ಬದುಕು ಕಲಿತೆ,’’ ಎಂದು ಕಣ್ಣೀರಾದರು ಸಂತೋಷ್.

ಶನಿವಾರ ಮಧ್ಯಾಹ್ನದ ಹೊತ್ತಿಗೆ ಮಧುಕರ್ ಶೆಟ್ಟಿ ಅಂತ್ಯಕ್ರಿಯೆ ನಡೆಯಬಹುದು ಎಂಬುದು ಸದ್ಯದ ಮಾಹಿತಿ. ಈಗಾಗಲೇ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಬಿ. ಎಸ್. ಯಡಿಯೂರಪ್ಪ ಸೇರಿದಂತೆ ರಾಜಕೀಯ ಮುಖಂಡರು ಪ್ರಾಮಾಣಿಕ ಅಧಿಕಾರಿಯ ಸಾವಿಗೆ ಕಂಬನಿ ಮಿಡಿದಿದ್ದಾರೆ. ಅಧಿಕಾರದಲ್ಲಿದ್ದಾಗ ನಮ್ಮದೇ ನೆಲದಲ್ಲಿ ಹುಟ್ಟಿದ ದಕ್ಷ ಅಧಿಕಾರಿಯನ್ನು ಸಾಮಾನ್ಯ ಜನರಿಗೆ ಕಾನೂನು ಸೇವೆ ನೀಡಲು ಬಳಸಿಕೊಳ್ಳದ ಇವರುಗಳಿಂದ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳಲು ಸಾಧ್ಯವೂ ಇಲ್ಲ. ಅಧಿಕಾರ ವ್ಯವಸ್ಥೆ ಹಾಗೂ ಕರ್ನಾಟಕ ಪೊಲೀಸ್ ಇಲಾಖೆ ನಡುವಿನ ಎಲ್ಲಾ ಅಸಹ್ಯಗಳಿಂದ ದೂರವಿದ್ದ ಮಧುಕರ್ ಶೆಟ್ಟಿ ಹೈದ್ರಾಬಾದ್‌ನ ನ್ಯಾಷನಲ್ ಪೊಲೀಸ್ ಅಕಾಡೆಮಿಯಲ್ಲಿ ಹೊಸ ಅಧಿಕಾರಿಗಳಿಗೆ ಪಾಠ ಹೇಳಿಕೊಂಡಿದ್ದರು. ಇದೀಗ ಅಲ್ಲಿಯೂ ಬೇಡ ಎಂಬಂತೆ ತುಂಬು ಕುಟುಂಬ ಹಾಗೂ ಅಪಾರ ಸಂಖ್ಯೆ ಅಭಿಮಾನಿಗಳನ್ನು ಅಗಲಿದ್ದಾರೆ. ಕರ್ನಾಟಕ ಕಂಡ ಅಪರೂಪದ ಅಧಿಕಾರಿ ಮಧುಕರ್ ಶೆಟ್ಟಿ ಸ್ಥಾನವನ್ನು ಇನ್ನೊಬ್ಬರು ತುಂಬುವುದು ಸದ್ಯಕ್ಕೆ ಕಷ್ಟ.