samachara
www.samachara.com
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಗಲ್ಲು; ಪೋಕ್ಸೊ ಕಾಯ್ದೆ ತಿದ್ದುಪಡಿಗೆ ಕೇಂದ್ರ ನಿರ್ಧಾರ
COVER STORY

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಗಲ್ಲು; ಪೋಕ್ಸೊ ಕಾಯ್ದೆ ತಿದ್ದುಪಡಿಗೆ ಕೇಂದ್ರ ನಿರ್ಧಾರ

ಕುಟುಂಬಸ್ಥರು, ಸಂಬಂಧಿಕರು ಹಾಗೂ ಪರಿಚಿತರಿಂದ ನಡೆಯುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಅದೆಷ್ಟೋ ಪ್ರಕರಣಗಳು ಕಾನೂನಿನ ಕುಣಿಕೆಯಿಂದ ದೂರ ಉಳಿಯುತ್ತಿರುವುದು ದುರಂತ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಕೇಂದ್ರ ಸರಕಾರ 2012ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯನ್ನು ಬಲಪಡಿಸಲು ಮುಂದಾಗಿದೆ. ಪೋಕ್ಸೊ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸಂಪುಟ ಸಭೆ ಶುಕ್ರವಾರ ಅನುಮೋದನೆ ನೀಡಿದೆ. ಹೊಸ ತಿದ್ದುಪಡಿಯ ಪ್ರಕಾರ 18 ವರ್ಷದೊಳಗಿನ ಹೆಣ್ಣು ಅಥವಾ ಗಂಡು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಅಪರಾಧಿಗಳಿಗೆ ಮರಣ ದಂಡನೆ ವಿಧಿಸಲು ಕಾನೂನಿನ ಅವಕಾಶ ದೊರೆಯಲಿದೆ.

ಹೊಸ ತಿದ್ದುಪಡಿ ಮಸೂದೆಯು ಸಂಸತ್‌ನಲ್ಲಿ ಮಂಡನೆಯಾಗಲಿದೆ. ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದರಿಂದ ಅವಧಿಯ ಕಾರಣಕ್ಕೆ ಲೋಕಸಭೆ ವಿಸರ್ಜನೆಯಾದರೂ ರಾಜ್ಯಸಭೆಯಲ್ಲಿ ಮಂಡನೆಯಾಗಿರುವ ಮಸೂದೆ ಬಿದ್ದು ಹೋಗುವುದಿಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಮೂಲಗಳು ತಿಳಿಸಿವೆ.

ಪೋಕ್ಸೊ ಕಾಯ್ದೆಯ 4, 5, 6, 9, 14, 15 ಮತ್ತು 42ನೇ ಸೆಕ್ಷನ್‌ಗಳಿಗೆ ತಿದ್ದುಪಡಿ ತರಲು ಕೇಂದ್ರ ಸರಕಾರ ನಿರ್ಧರಿಸಿದೆ. ಈವರೆಗೆ ಪೋಕ್ಸೊ ಕಾಯ್ದೆಯ ಸೆಕ್ಷನ್‌ 4ರಡಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ಕನಿಷ್ಠ ಏಳು ವರ್ಷ ಜೈಲು ಶಿಕ್ಷೆಯಿಂದ ಗರಿಷ್ಠ ಜೀವಿತಾವಧಿವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿತ್ತು. ಈ ಶಿಕ್ಷೆಯನ್ನು ಈಗ ಮರಣ ದಂಡನೆ ವಿಧಿಸುವವರೆಗೆ ವಿಸ್ತರಿಸಲು ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ.

ಸೆಕ್ಷನ್‌ 5, 6 ಮತ್ತು 9ಕ್ಕೆ ತಿದ್ದುಪಡಿ ತರುವ ಮೂಲಕ ಮಕ್ಕಳು ಹಾಗೂ ಬಾಲಾಪರಾಧಿಗಳ ಮೇಲೆ ಪೊಲೀಸರು, ಜೈಲಿನ ಸಿಬ್ಬಂದಿ, ರಿಮ್ಯಾಂಡ್‌ ಹೋಮ್‌ ಸಿಬ್ಬಂದಿ, ಮಕ್ಕಳ ರಕ್ಷಣಾ ಕೇಂದ್ರಗಳ ಸಿಬ್ಬಂದಿ ಅಥವಾ ಕಾನೂನು ಜಾರಿಗೊಳಿಸುವ ಪ್ರಾಧಿಕಾರಗಳ ಯಾವುದೇ ಅಧಿಕಾರಿಗಳು ಎಸಗುವ ದೌರ್ಜನ್ಯಕ್ಕೂ ಕಡಿವಾಣ ಹಾಕಲು ಸಾಧ್ಯವಿದೆ. ಮಕ್ಕಳ ಮೇಲೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯವನ್ನು ಯಾರೇ ಎಸಗಿದರೂ ಶಿಕ್ಷೆಯ ಸ್ವರೂಪ ಬದಲಾಗದು. ಈ ಸೆಕ್ಷನ್‌ ಅಡಿ ಈವರೆಗೆ ಕನಿಷ್ಠ 10 ವರ್ಷ ಜೈಲು ಶಿಕ್ಷೆಯಿಂದ ಗರಿಷ್ಠ ಜೀವಿತಾವಧಿವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿತ್ತು.

ಮಕ್ಕಳ ಪೋರ್ನೊಗ್ರಫಿ ಮೇಲೆ ಕಡಿವಾಣ ಹಾಕಲು ಸೆಕ್ಷನ್‌ 14 ಮತ್ತು 15ಕ್ಕೆ ತಿದ್ದುಪಡಿ ತರಲಾಗುತ್ತಿದೆ. ಮಕ್ಕಳನ್ನು ಪೋರ್ನೊಗ್ರಫಿಗೆ ಬಳಸಿಕೊಳ್ಳುವ ಅಪರಾಧಿಗಳಿಗೆ ಕನಿಷ್ಠ 5 ವರ್ಷದಿಂದ ಗರಿಷ್ಠ 7ರಿಂದ 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿತ್ತು. ಮಕ್ಕಳ ಪೋರ್ನೊಗ್ರಫಿ ಸಂಗ್ರಹ ಹಾಗೂ ಪ್ರಸಾರ ಮಾಡುವವರಿಗೆ ಗರಿಷ್ಠ 3 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿತ್ತು. ಸೆಕ್ಷನ್‌ 14 ಮತ್ತು 15ಕ್ಕೆ ತಿದ್ದುಪಡಿ ತರುವ ಮೂಲಕ ಮಕ್ಕಳನ್ನು ಪೋರ್ನೊಗ್ರಫಿಗೆ ಬಳಸಿಕೊಳ್ಳುವ ಅಪರಾಧಿಗೆ ಕನಿಷ್ಠ ಜೀವಿತಾವಧಿ ಶಿಕ್ಷೆಯಿಂದ ಗರಿಷ್ಠ ಗಲ್ಲು ಶಿಕ್ಷೆ ಹಾಗೂ ಮಕ್ಕಳ ಪೋರ್ನೊಗ್ರಫಿ ಸಂಗ್ರಹ ಹಾಗೂ ಯಾವುದೇ ವಿಧಾನದಲ್ಲಿ ಪ್ರಸಾರ ಮಾಡುವ ಅಪರಾಧಿಗೆ ಭಾರೀ ದಂಡ ಹಾಗೂ ಜೈಲು ಶಿಕ್ಷೆ ಎರಡನ್ನೂ ವಿಧಿಸಲು ಕಾನೂನಿನ ಅವಕಾಶ ನೀಡಲಾಗುತ್ತಿದೆ.

ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಅವರು ಬೇಗ ಬೆಳೆಯುವಂತೆ ಮಾಡುವ ಹಾರ್ಮೋನ್‌ಗಳನ್ನು ಇಂಜೆಕ್ಟ್‌ ಮಾಡುವುದು, ರಾಸಾಯನಿಕ ಇಲ್ಲವೇ ಯಾವುದೇ ರೀತಿಯ ಔಷಧಗಳನ್ನು ಯಾವುದೇ ವಿಧಾನದಲ್ಲಿ ಮಕ್ಕಳಿಗೆ ಕೊಡುವುದು ಇನ್ನು ಮುಂದೆ ಸೆಕ್ಷನ್‌ 9ರಡಿ ಅಪರಾಧ ಎನಿಸಿಕೊಳ್ಳಲಿದೆ. ಈ ಅಪರಾಧಕ್ಕೂ ಗಲ್ಲು ಶಿಕ್ಷೆಯಾಗಲಿದೆ

ಐಪಿಸಿ ಸೆಕ್ಷನ್‌ 375 ಹಾಗೂ 376ರಡಿ ಅತ್ಯಾಚಾರ ಆರೋಪ ಸಾಬೀತಾಗಿರುವ ಅಪರಾಧಿಯ ವಿರುದ್ಧ ಪೋಕ್ಸೊ ಪ್ರಕರಣವೂ ದಾಖಲಾಗಿ ಈ ಆರೋಪವೂ ಸಾಬೀತಾದರೆ ಈ ಕಾಯ್ದೆಗಳ ಪೈಕಿ ಯಾವ ಕಾಯ್ದೆಯಲ್ಲಿ ಗರಿಷ್ಠ ಶಿಕ್ಷೆ ವಿಧಿಸಲು ಅವಕಾಶವಿದೆಯೋ ಆ ಶಿಕ್ಷೆಯನ್ನು ವಿಧಿಸುವಂತೆ ಫೋಕ್ಸೊ ಸೆಕ್ಷನ್‌ 42ರಲ್ಲಿ ಹೇಳಲಾಗಿದೆ. ಆದರೆ, ಶಿಕ್ಷೆ ಪ್ರಮಾಣವನ್ನು ಈಗ ಮರಣ ದಂಡನೆಗೆ ವಿಸ್ತರಿಸಲು ತಿದ್ದುಪಡಿ ಮಾಡಲಾಗುತ್ತಿರುವುದರಿಂದ ಇನ್ನು ಮುಂದೆ ಈ ಸೆಕ್ಷನ್‌ ಅಡಿ ಮರಣ ದಂಡನೆಯೇ ಗರಿಷ್ಠ ಶಿಕ್ಷೆಯಾಗಲಿದೆ.

ಜಮ್ಮು- ಕಾಶ್ಮೀರದ ಕಠುವಾದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಬಳಿಕ ಪೋಕ್ಸೊ ಕಾಯ್ದೆಯನ್ನು ಬಲಪಡಿಸಬೇಕೆಂಬ ಕೂಗು ಹೆಚ್ಚಾಗಿತ್ತು. ಪೋಕ್ಸೊ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‌ 376ರಡಿ ದಾಖಲಾಗುವ ಪ್ರಕರಣಗಳ ಪೈಕಿ ಶೇಕಡ 94.6ರಷ್ಟು ಲೈಂಗಿಕ ದೌರ್ಜನ್ಯಗಳು ಮಗುವಿನ ಸಂಬಂಧಿಕರಿಂದ ಅಥವಾ ಕುಟುಂಬಕ್ಕೆ ಪರಿಚಿತರಾಗಿರುವವರಿಂದ ನಡೆದಿವೆ ಎಂಬುದನ್ನು ಎನ್‌ಸಿಆರ್‌ಬಿ ಮಾಹಿತಿ ಬಹಿರಂಗ ಪಡಿಸಿದೆ.

ಕೇಂದ್ರ ಸರಕಾರವೇನೋ ಪೋಕ್ಸೊ ಕಾಯ್ದೆಯನ್ನು ಬಲಪಡಿಸಲು ಹೊರಟಿದೆ. ಸಂಸತ್ತಿನ ಒಪ್ಪಿಗೆ ಸಿಕ್ಕರೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಮರಣ ದಂಡನೆ ಶಿಕ್ಷೆ ಹಾಗೂ ಮಕ್ಕಳ ಪೋರ್ನೊಗ್ರಫಿ ಸಂಗ್ರಹ ಹಾಗೂ ಪ್ರಸಾರಕ್ಕೆ ಭಾರೀ ದಂಡದ ಕಾಯ್ದೆಯೂ ಬರಲಿದೆ. ಆದರೆ, ಕಾಯ್ದೆ ಸಮರ್ಪಕವಾಗಿ ಜಾರಿಗೊಳ್ಳಬೇಕಾದ್ದು ಮುಖ್ಯ. ಪೋಕ್ಸೊ ಕಾಯ್ದೆ ಜಾರಿಗೆ ಬಂದು ಆರು ವರ್ಷವಾದರೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ನಡೆಯುತ್ತಲೇ ಇವೆ. ಕುಟುಂಬಸ್ಥರು, ಸಂಬಂಧಿಕರು ಹಾಗೂ ಪರಿಚಿತರಿಂದ ನಡೆಯುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಅದೆಷ್ಟೋ ಪ್ರಕರಣಗಳು ಕಾನೂನಿನ ಕುಣಿಕೆಯಿಂದ ದೂರ ಉಳಿಯುತ್ತಿರುವುದು ದುರಂತ.