samachara
www.samachara.com
ಹೀಗೊಂದು ಹೋರಾಟದ ಪ್ರೇಮಕಥೆ: ಈ ಅಪೂರ್ವ ಜೋಡಿ ಒಂದಾಗಿದ್ದು 72 ವರ್ಷಗಳ ಬಳಿಕ!
COVER STORY

ಹೀಗೊಂದು ಹೋರಾಟದ ಪ್ರೇಮಕಥೆ: ಈ ಅಪೂರ್ವ ಜೋಡಿ ಒಂದಾಗಿದ್ದು 72 ವರ್ಷಗಳ ಬಳಿಕ!

1946 ಡಿಸೆಂಬರ್ ತಿಂಗಳು; ಮದುವೆಯಾಗಿ 10 ತಿಂಗಳು ಕಳೆದಿತ್ತಷ್ಟೇ. ಇನ್ನೂ ಸರಿಯಾಗಿ ಸಂಸಾರ ಆರಂಭಗೊಂಡಿರಲಿಲ್ಲ. ಅಷ್ಟರಲ್ಲಾಗಲೇ ಕೇರಳದ ಕುವುಂಬಾಯಿ ಗ್ರಾಮದಲ್ಲಿ ರೈತರ ಹೋರಾಟವೊಂದು ಆರಂಭಗೊಂಡಿತ್ತು.

‘ಅಪೂರ್ವ ಸಂಗಮ’

ಬಹುಶಃ ಈ ಕಥೆಗೆ ಇದಕ್ಕಿಂತ ಒಳ್ಳೆಯ ಹೆಸರು ಸಿಗಲಾರದು. ಅರ್ಥಾತ್‌ ಇದು ಕಥೆಯಲ್ಲ ಜೀವನ. ಈ ಜೀವಂತ ಕಥಾನಕದ ನಾಯಕನ ಹೆಸರು ಇ.ಕೆ. ನಾರಾಯಣ ನಂಬಿಯಾರ್‌; ನಾಯಕಿ ಶಾರದಾ. ಕೇರಳದ ಕಣ್ಣೂರು ಇವರ ಹುಟ್ಟೂರು. ಇವರಿಬ್ಬರಿಗೆ ಮದುವೆಯಾದಾಗ ನಂಬಿಯಾರ್‌ಗೆ 17 ವರ್ಷ ವಯಸ್ಸು, ಶಾರದಾಗೆ 13 ವರ್ಷ. ಅಂದ ಹಾಗೆ ಈ ಮದುವೆ ನಡೆದಿದ್ದು 1946ರಲ್ಲಿ.

ಮದುವೆಯಾಗಿ 10 ತಿಂಗಳು ಕಳೆದಿತ್ತಷ್ಟೇ. ಇನ್ನೂ ಸರಿಯಾಗಿ ಸಂಸಾರ ಆರಂಭಗೊಂಡಿರಲಿಲ್ಲ. ಅಷ್ಟರಲ್ಲಾಗಲೇ ಕೇರಳದ ಕುವುಂಬಾಯಿ ಗ್ರಾಮದಲ್ಲಿ ರೈತರ ಹೋರಾಟವೊಂದು ಆರಂಭಗೊಂಡಿತ್ತು. ಮುಂದೆ ಹಿಂಸಾತ್ಮಕ ಪ್ರತಿಭಟನೆಯಾಗಿ ಬದಲಾಗಿತ್ತು. ಇದರ ನೇತೃತ್ವ ವಹಿಸಿದ್ದವರು ಶಾರದಾ ಮಾವ ತಳಿಯನ್‌ ರಾಮನ್‌ ನಂಬಿಯಾರ್‌ ಮತ್ತು ಗಂಡ ನಾರಾಯಣನ್‌. ಹೋರಾಟ ತೀವ್ರಗೊಂಡು, ಗೋಲಿಬಾರ್‌ ಎಲ್ಲ ನಡೆದ ಬಳಿಕ ಇಬ್ಬರೂ ಭೂಗತರಾಗಬೇಕಾಗಿ ಬಂತು.

ಇದರಿಂದ ಶಾರದಾ ಒಂಟಿಯಾದರು. ಮಾವ ಮತ್ತು ಗಂಡ ಇಬ್ಬರೂ ಭೂಗತರಾದಾಗ ಮಧ್ಯ ರಾತ್ರಿ ಬಂದು ಪೊಲೀಸರು ಬಾಗಿಲು ತಟ್ಟುವುದು ನಡೆದಿತ್ತು. ಇದರಿಂದ ಇನ್ನೂ ಸರಿಯಾಗಿ ಸಂಸಾರ ಆರಂಭಿಸುವ ಮೊದಲೇ ಆಕೆ ತನ್ನ ತವರಿಗೆ ವಾಪಸಾದರು. ಕೊನೆಗೊಂದು ದಿನ ಎರಡು ತಿಂಗಳು ಬಿಟ್ಟು ಗಂಡ, ಮಾವ ಇಬ್ಬರೂ ಮದ್ರಾಸ್‌ ವಿಶೇಷ ಪೊಲೀಸರ ಕೈಗೆ ಸಿಕ್ಕು ಬಿದ್ದರು. ಭೂಮಿ ಹೋರಾಟದಲ್ಲಿ ಪಾಲ್ಗೊಂಡು ಜನರನ್ನು ರೊಚ್ಚಿಗೆಬ್ಬಿಸಿದ್ದಕ್ಕೆ ಅವರಿಬ್ಬರನ್ನೂ ಜೈಲಿಗೆ ತಳ್ಳಲಾಯಿತು.

‘ಅವತ್ತು ಖಾಲಿಯಾಗಿದ್ದ ದಂಪತಿ ಮನೆಯನ್ನು ಧ್ವಂಸ ಮಾಡಿ ಬೆಂಕಿ ಇಡಲಾಯಿತು’ ಎಂದು ನೆನಪಿಸಿಕೊಳ್ಳುತ್ತಾರೆ ನಾರಾಯಣನ್‌ ಸಂಬಂಧಿ ಮಧು ಕುಮಾರ್‌. ಮುಂದೆ ನಾರಾಯಣನ್‌ 8 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದರು. ಕಣ್ಣೂರು, ವಿಯ್ಯೂರು ಮತ್ತು ಸೇಲಂ ಹೀಗೆ ಮೂರು ಜೈಲುಗಳ ನಡುವೆ ಅವರು ತಮ್ಮ ಪಾಲಿನ ಶಿಕ್ಷೆಯನ್ನು ಅನುಭವಿಸುತ್ತಿದ್ದರು.

ಹೀಗಿರುವಾಗಲೇ ಫೆಬ್ರವರಿ 11, 1950ರಲ್ಲಿ ನಾರಾಯಣನ್‌ ತಂದೆಯನ್ನು ಸೇಲಂ ಜೈಲಿನಲ್ಲಿ ಕೊಲ್ಲಲಾಯಿತು. ನಾರಾಯಣನ್‌ ದೇಹದೊಳಕ್ಕೆ 22 ಗುಂಡಿನ ಚೂರುಗಳು ಹೊಕ್ಕಿದವು. ಇದರಲ್ಲಿ 19ನ್ನು ತೆಗೆಯಲಾಗಿದ್ದು ಇನ್ನೂ 3 ದೇಹದಲ್ಲೇ ಉಳಿದುಕೊಂಡಿವೆ ಎನ್ನುತ್ತಾರೆ ಮಧು.

ಅತ್ತ ನಾರಾಯಣ್‌ ಜೈಲಿನಲ್ಲಿದ್ದಾಗ, ಇತ್ತ ಶಾರದಾಗೆ ಆಕೆಯ ಕುಟುಂಬದವರು ಇನ್ನೊಬ್ಬಾತನ ಜತೆ ಮದುವೆ ನಡೆಸಿದರು. 1957ರಲ್ಲಿ ನಾರಾಯಣನ್ ಜೈಲಿನಿಂದ ಹೊರ ಬಂದಾಗ ಶಾರದಾ ಬೇರೊಬ್ಬನ ಜತೆಗಿದ್ದಳು. ಹೀಗಾಗಿ ಅವರೂ ಬೇರೆ ಒಬ್ಬಳು ಹುಡುಗಿಯನ್ನು ಹುಡುಕಿ ಮದುವೆಯಾದರು.

ಇದೆಲ್ಲಾ ನಡೆದು ಇಂದಿಗೆ 72 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಸಾಕಷ್ಟು ಬದಲಾವಣೆಗಳು ಜರುಗಿದವು. ಭಾರತಕ್ಕೆ ಸ್ವಾತಂತ್ರ್ಯ ಬಂತು. ಕೇರಳ ರಾಜ್ಯ ರಚನೆಯಾಯಿತು. ಕಣ್ಣೂರು ಬದಲಾಯಿತು. ಶಾರದಾ, ನಾರಾಯಣನ್‌ ಕುಟುಂಬಗಳೂ ಬದಲಾದವು. ಆದರೆ ಅವರಿಬ್ಬರ ನಡುವಿನ ಆತ್ಮೀಯತೆ ಮಾತ್ರ ಹಾಗೆಯೇ ಉಳಿದುಕೊಂಡಿತ್ತು.

ಇದೆಲ್ಲಾ ಗೊತ್ತಾಗಿದ್ದು ಇತ್ತೀಚೆಗೆ. ಹಳ್ಳಿಯಲ್ಲಿ ಕೃಷಿ ಮಾಡಿಕೊಂಡಿದ್ದ ಶಾರದಾ ಪುತ್ರ ಭಾರ್ಗವನ್‌ ಅದು ಹೇಗೋ ನಾರಾಯಣ್‌ ಸಂಬಂಧಿ ಕುಟುಂಬದ ಸಂಪರ್ಕಕ್ಕೆ ಬಂದಿದ್ದಾರೆ. ಹೀಗೆ ಮಾತಿಗೆ ಮಾತು ಬೆಳೆಯುತ್ತಾ ಎರಡೂ ಕುಟುಂಬಗಳ ಕೌಟುಂಬಿಕ ಇತಿಹಾಸವನ್ನು ಕೆದಕಿದ್ದಾರೆ. ಆಗ ತಮ್ಮ ಕುಟುಂಬಕ್ಕೂ ನಾರಾಯಣನ್‌ ಕುಟುಂಬಕ್ಕೂ ಸಂಬಂಧವಿರುವುದು ಗೊತ್ತಾಗಿದೆ. ಜತೆಗೆ ನಾರಾಯಣನ್‌ ಮತ್ತು ಶಾರದಾ ನಡುವಿನ ವಿವಾಹದ ರಹಸ್ಯವೂ ಬಯಲಾಗಿದೆ.

ಇದಾದ ಬಳಿಕ ಬಹು ವರ್ಷಗಳ ನಂತರ ಭೇಟಿಯೇ ಆಗದಿದ್ದ ಜೋಡಿಯನ್ನು ಒಟ್ಟು ಸೇರಿಸುವುದು ಎಂದು ನಿರ್ಧಾರವಾಯಿತು.

ಹೀಗೆ ಭೇಟಿಗೆ ಸಮಯ ನಿಗದಿಯಾಯಿತು...:
ಅಷ್ಟೊತ್ತಿಗೆ ಇಬ್ಬರ ಕುಟುಂಬದಲ್ಲೂ ಸಾಕಷ್ಟು ಬದಲಾವಣೆಗಳಾಗಿದ್ದವು. ಶಾರದಾ ಗಂಡ 30 ವರ್ಷಗಳ ಹಿಂದೆ ತೀರಿಕೊಂಡಿದ್ದರು. ಅವರಿಗೆ ಆರು ಮಕ್ಕಳು. ಅದರಲ್ಲಿ ಇಬ್ಬರು ತೀರಿಕೊಂಡು ನಾಲ್ವರು ಮಾತ್ರ ಉಳಿದಿದ್ದರು.

ಇತ್ತ ನಾರಾಯಣನ್‌ಗೆ ಮೊಮ್ಮಕ್ಕಳಾಗಿತ್ತು. ಅವರ ಮೊಮ್ಮಗಳು ಶಾಂತಾ, ಅಜ್ಜ ಪಾಲ್ಗೊಂಡಿದ್ದ ‘ಕವುಂಬಾಯಿ ಹೋರಾಟ’ದ ಬಗ್ಗೆ ‘ಡಿಸೆಂಬರ್‌ 30’ ಎಂಬ ಕಾದಂಬರಿ ಬರೆದು ಮುಗಿಸಿದ್ದರು. 1946ರ ಡಿಸೆಂಬರ್‌ನಲ್ಲಿ ನಡೆದ ‘ಪುನಮ್‌ ಕೃಷಿ’ಯ ಕಥಾವಸ್ತುವನ್ನು ಇದು ಹೊಂದಿತ್ತು. ಜಾಗತಿಕ ಆಯಾಮಗಳಿದ್ದ ಕಥೆಯದು.

ಎರಡನೇ ಜಾಗತಿಕ ಯುದ್ಧ ಜಾರಿಯಲ್ಲಿದ್ದ 1943-44ರ ಅವಧಿಯಲ್ಲಿ ಕಣ್ಣೂರು ಭೀಕರ ಕಾಲರಾ ರೋಗಕ್ಕೆ ತುತ್ತಾಯಿತು. ಜಿಲ್ಲೆಯ ಕೆಳವರ್ಗದ ಸಾವಿರಾರು ಜನರು ರೋಗಕ್ಕೆ ಜೀವತೆತ್ತರು. ಆ ಸಂದರ್ಭದಲ್ಲಿ ಜನರು ಅನ್ನವಿಲ್ಲದೆ ಸಾಯುತ್ತಿದ್ದರು. ಎಲ್ಲೆಲ್ಲೂ ಕ್ಷಾಮ ತಾಂಡವವಾಡುತ್ತಿತ್ತು. ಇಂಥಹದ್ದೊಂದು ಸವಾಲಿನ ದಿನಗಳಲ್ಲಿ ‘ಹೆಚ್ಚು ಆಹಾರ ಬೆಳೆಯಿರಿ’ ಎಂಬ ಆಂದೋಲಕ್ಕೆ ‘ಕಿಸಾನ್‌ ಸಭಾ’ ಕರೆಕೊಟ್ಟಿತು. ಕಣ್ಣೂರಿನ ಮಂಗಟ್ಟುಪರಂಬದಿಂದ ಆಂದೋಲನ ಆರಂಭಗೊಂಡಿತು. ಜನಾಂದೋಲನವಾಗಿ ರೂಪುಗೊಂಡ ಈ ಹೋರಾಟದಲ್ಲಿ ಮೊದಲ ಬಾರಿಗೆ 50 ಎಕರೆ ಸರಕಾರಿ ಭೂಮಿಯನ್ನು ಬೇಸಾಯಕ್ಕೆ ಸಿದ್ಧಗೊಳಿಸಲಾಯಿತು. ಪೊಲೀಸರ ಮೂಲಕ ಈ ಹೋರಾಟವನ್ನು ಹತ್ತಿಕ್ಕಲು ಸರಕಾರ ಮುಂದಾಯಿತು; ಬಂಧನ, ಗದ್ದೆಗಳ ನಾಶ ನಡೆಯಿತು.

ಇದೇ ವೇಳೆಗೆ 1945ರಲ್ಲಿ ವಿಶ್ವಯುದ್ಧ ಕೊನೆಗೊಂಡಿತು. ಯುದ್ಧ ಮುಗಿದಾಗ ಎಲ್ಲೆಲ್ಲೂ ಆಹಾರಕ್ಕಾಗಿ ಹಾಹಾಕಾರ. ಜನರಿಗೆ ತಿನ್ನಲೂ ಕೂಳಿರಲಿಲ್ಲ. ಆಗ ಕಣ್ಣೂರಿನ ಕರಿವೆಲ್ಲೋರ್‌, ಪೊಮರಂ ಭಾಗಗಳಲ್ಲಿ ಬಡತನದ ವಿರುದ್ಧ ಹೋರಾಟ ಆರಂಭಗೊಂಡಿತು. ಕರಿವೆಲ್ಲೋರ್‌ನಿಂದ ಚಿರಕ್ಕಲ್‌ ಕವಿಲಕೊಂಗೆ ಸಾಗಣೆ ಮಾಡುತ್ತಿದ್ದ ಅಕ್ಕಿಯನ್ನು ಹೋರಾಟಗಾರರು ತಡೆದು ಜನರಿಗೆ ಹಂಚಿದರು. ಎ.ವಿ. ಕುಂ‍ಞಂಬು ಮತ್ತು ಕೆ ಕೃಷ್ಣನ್‌ ಮಾಸ್ಟರ್‌ ಈ ಹೋರಾಟವನ್ನು ಮುನ್ನಡೆಸುತ್ತಿದ್ದರು. ಇವರನ್ನು ಎದುರಿಸಲಾಗದೆ ಪೊಲೀಸರು ಗೋಲಿಬಾರ್‌ ನಡೆಸಿದಾಗ ಕುಂಞಂಬು ಮತ್ತು ಇನ್ನೋರ್ವ ಹೋರಾಟಗಾರರು ಸಾವನ್ನಪ್ಪಿದರು.

ಇದಾದ ಬಳಿಕ ಇದರ ಮುಂದುವರಿದ ಭಾಗವೆಂಬಂತೆ 1946ರ ಡಿಸೆಂಬರ್‌ನಲ್ಲಿ ಹುಟ್ಟಿಕೊಂಡಿದ್ದೇ ಕವುಂಬಾಯಿ ಹೋರಾಟ. ಜಿಲ್ಲೆಯ ಪೂರ್ವ ಭಾಗದಲ್ಲಿ ಕವುಂಬಾಯಿಯಲ್ಲಿ ಪುನಂ ಕೃಷಿಗಾಗಿ ಬೇಡಿಕೆ ಕೇಳಿ ಬಂತು.

ಕವುಂಬಾಯಿ ರೈತ ಹೋರಾಟದ ಕಥೆ ಹೇಳುವ ಚಿತ್ರ.
ಕವುಂಬಾಯಿ ರೈತ ಹೋರಾಟದ ಕಥೆ ಹೇಳುವ ಚಿತ್ರ.
/ವಿಕಿಮೀಡಿಯಾ

ಪುನಮ್‌ ಅಂದರೆ ಕಟಾವಿನ ನಂತರ ಗದ್ದೆಯ ಸುತ್ತ ಬೆಳೆದ ಪೊದೆಗಳನ್ನು ತೆಗೆದು, ಅವುಗಳನ್ನು ಅಲ್ಲಿಯೇ ಸುಟ್ಟು ಮುಂದಿನ ಮುಂಗಾರು ಹಂಗಾಮಿಗೆ ಆ ಭಾಗವನ್ನು ಬೇಸಾಯಕ್ಕೆ ಸಿದ್ಧಗೊಳಿಸುವುದು. ಅಂದರೆ ಕಾಡು ಕಡಿದು ಗದ್ದೆ ನಿರ್ಮಿಸುವುದು. ಇದಕ್ಕೆ ಕೇರಳದಲ್ಲಿ ‘ಪುನಮ್‌ ಕೃಷಿ’ ಎಂದು ಕರೆಯುತ್ತಾರೆ. ಇದರ ನೇತೃತ್ವ ವಹಿಸಿದವರೇ ನಾರಾಯಣನ್‌ ಮತ್ತು ಅವರ ತಂದೆ ರಾಮನ್‌ ನಂಬಿಯಾರ್‌.

ಇದಕ್ಕೆ ಆಡಳಿತ ವರ್ಗ ವಿರೋಧ ವ್ಯಕ್ತಪಡಿಸಿತು. ಆದರೆ ರೈತರು ಪಟ್ಟು ಸಡಿಲಿಸದಾದಾಗ ಸ್ಥಳಕ್ಕೆ ಶಸ್ತ್ರ ಸಜ್ಜಿತ ಪೊಲೀಸರನ್ನು ಸರಕಾರ ಕಳುಹಿಸಿ ಕೊಟ್ಟಿತು. ಈ ಸಂದರ್ಭ ಅನ್ನದಾತರು ಮತ್ತು ಪೊಲೀಸರ ನಡುವೆ ದೊಡ್ಡ ಸಂಘರ್ಷವೇ ಏರ್ಪಟ್ಟಿತು. ಇದರಲ್ಲಿ ಐವರು ರೈತರು ಅಸುನೀಗಿದರು. ಈ ಕಥೆಯನ್ನು ಕಾದಂಬರಿ ಮೂಲಕ ತೆರೆದಿಟ್ಟಿದ್ದರು ನಾರಾಯಣನ್‌ ಮೊಮ್ಮಗಳು ಶಾಂತಾ.

ಏಳು ದಶಕಗಳ ಬಳಿಕ ಶಾರದಾ ಮನೆಗೆ:

ಮೊದಲೇ ಅಂದುಕೊಂಡಂತೆ ಪರಸಿನಿಕಡವುನಲ್ಲಿರುವ ಭಾರ್ಗವನ್‌ ಮನೆಗೆ ಶಾರದಾರನ್ನು ನೋಡಲು ತಮ್ಮ ಒಂದಷ್ಟು ಸಂಬಂಧಿಗಳ ಗುಂಪು ಕಟ್ಟಿಕೊಂಡು ನಾರಾಯಣನ್‌ ಹೊರಟು ನಿಂತರು. ನೆನಪಿಡಿ ಬರೋಬ್ಬರಿ 72 ವರ್ಷಗಳ ನಂತರ ತಮ್ಮ ಮನದನ್ನೆಯನ್ನು ಅವರು ಕಣ್ತುಂಬಿಕೊಳ್ಳಲು ಹೊರಟಿದ್ದಾರೆ. ತಮ್ಮ ಮೊದಲ ಮದುವೆ, 1946ರ ಚರಿತ್ರೆ ಎಲ್ಲವೂ ಅವರ ತಲೆಯಲ್ಲಿ ಓಡುತ್ತಿದ್ದವು.

ಭಾರ್ಗವನ್‌ ಮನೆಯ ಮುಂದೆ ಬಂದು ನಿಂತಾಗ ಆರಂಭದಲ್ಲಿ ನಾರಾಯಣನ್‌ ಭೇಟಿಯಾಗಲು ಶಾರದಾ ಒಪ್ಪಲಿಲ್ಲ. ಆಕೆಗೆ ಈಗ 89 ವರ್ಷ ವಯಸ್ಸಾಗಿತ್ತು. ನಾರಾಯಣನ್‌ಗೆ 93. ಅಂಥಹದ್ದರಲ್ಲಿ ಹರೆಯದ ಉತ್ಸಾಹಗಳು ಇರಲು ಸಾಧ್ಯವೂ ಇಲ್ಲ. ಆದರೆ ಪರಿ ಪರಿಯಾಗಿ ಕೇಳಿಕೊಂಡ ನಂತರ ಶಾರದಾ ಮನೆಯಿಂದ ಹೊರ ಬಂದರು.

ನಾರಾಯಣನ್‌ ಬಿಟ್ಟ ಕಣ್ಣು ಬಿಟ್ಟು ನೋಡುತ್ತಲೇ ಇದ್ದರು. ದೃಷ್ಟಿ ತುಸು ಮಂದವಾಗಿತ್ತು. ಆಕೆ ಬಂದು ತಲೆ ತಗ್ಗಿಸಿ ಪಕ್ಕದಲ್ಲೇ ಕುಳಿತುಕೊಂಡರು. ಆಕೆಯೂ ಮಾತನಾಡಲಿಲ್ಲ. ಇವರೂ ಏನೂ ಹೇಳಲಿಲ್ಲ. ಸ್ವಲ್ಪ ಹೊತ್ತು ನೀರವ ಮೌನ ಆವರಿಸಿತು. ಭಾವುಕತೆಯಿಂದ ಇಬ್ಬರ ಕಣ್ಣಾಲಿಗಳೂ ಒದ್ದೆಯಾದವು.

ಮೆಲ್ಲ ಬಾಯ್ದೆರದ ಶಾರದಾ, “ನನಗೆ ಯಾರ ಮೇಲೂ ಕೋಪವಿಲ್ಲ,” ಎಂದು ನಾರಾಯಣನ್‌ ಬಳಿ ಪಿಸುಗುಟ್ಟಿದರು. “ಮತ್ಯಾಕೆ ನೀನು ಸುಮ್ಮನಿದ್ದಿ? ಯಾಕೆ ನೀನು ಏನೂ ಹೇಳುತ್ತಿಲ್ಲ?” ಎಂದು ತಲೆ ತಗ್ಗಿಸಿ ಕುಳಿತಿದ್ದ ಶಾರದಾರನ್ನು ಪ್ರಶ್ನಿಸಿದರು ನಾರಾಯಣನ್‌.

ಅಲ್ಲಿಗೆ 72 ವರ್ಷಗಳಲ್ಲಿ ಮೊದಲ ಬಾರಿಗೆ ದಂಪತಿಗಳ ಭೇಟಿ, ಮಾತುಕತೆ ಎಲ್ಲವೂ ನಡೆಯಿತು. ನಾರಾಯಣನ್‌ ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ಶಾರದಾ ಮನೆಯಿಂದ ತೆರಳಿದರು. ಆದರೆ ಇಲ್ಲಿಗೇ ಮುಗಿದಿಲ್ಲ. ನಾರಾಯಣನ್‌ ಕುಟುಂಬಕ್ಕಾಗಿ ಭಾರ್ಗವನ್‌ ತಮ್ಮ ಮನೆಯಲ್ಲಿ ಭೋಜನಕೂಟವೊಂದನ್ನು ಹಮ್ಮಿಕೊಂಡಿದ್ದಾರೆ. ಅಲ್ಲಿ ಮತ್ತೊಮ್ಮೆ ಅಪೂರ್ವ ಜೋಡಿಗಳ ಸಮಾಗಮವಾಗಲಿದೆ. ಬಹುಶಃ ನಾರಾಯಣನ್‌ ಮತ್ತು ಶಾರದಾ ಇಬ್ಬರೂ ಈ ದಿನವನ್ನು ಎದುರು ನೋಡುತ್ತಿರಬಹುದು.