samachara
www.samachara.com
‘ಆಕ್ಸಿಡೆಂಟಲ್‌ ಫ್ರಾಡ್ಸ್‌’; ಮಗನಿಂದ 34 ಕೋಟಿ ಜಿಎಸ್‌ಟಿ ವಂಚನೆ, ತಂದೆಯಿಂದ 5,500 ಕೋಟಿ ಹಗರಣ!
COVER STORY

‘ಆಕ್ಸಿಡೆಂಟಲ್‌ ಫ್ರಾಡ್ಸ್‌’; ಮಗನಿಂದ 34 ಕೋಟಿ ಜಿಎಸ್‌ಟಿ ವಂಚನೆ, ತಂದೆಯಿಂದ 5,500 ಕೋಟಿ ಹಗರಣ!

ಆಕ್ಸಿಡೆಂಟಲ್ ಪ್ರೈಮ್‌ ಮಿನಿಸ್ಟರ್‌ ಸಿನಿಮಾದ ನಿರ್ದೇಶಕ ವಿಜಯ್‌ ಗುಟ್ಟೆ ಮತ್ಯಾರೂ ಅಲ್ಲ; ಮಹಾರಾಷ್ಟ್ರದ ಬಿಜೆಪಿ ನಾಯಕ, ಸಕ್ಕರೆ ಉದ್ಯಮದ ಕುಳ ರತ್ನಾಕರ್‌ ಗುಟ್ಟೆಯ ಮಗ. ಮಗನದೊಂದು ಹಗರಣವಾದರೆ ಅಪ್ಪನದು ಇನ್ನೊಂದು ಹಗರಣ.

ಸದ್ಯಕ್ಕೆ ದೇಶದಲ್ಲಿ ಸದ್ದು ಮಾಡುತ್ತಿರುವ ಚಲನಚಿತ್ರ ‘ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’. ಯುಪಿಎ-1 ಮತ್ತು ಯುಪಿಎ-2ರ ಅವಧಿಯಲ್ಲಿ ಪ್ರಧಾನಮಂತ್ರಿಯಾಗಿದ್ದ ಡಾ. ಮನಮೋಹನ್‌ ಸಿಂಗ್‌ ಮತ್ತು ಗಾಂಧಿ ಕುಟುಂಬದ ನಡುವಿನ ಸಂಬಂಧದ ಕಥಾ ಹಂದರವನ್ನು ಇದು ಹೊಂದಿದೆ. ಮನಮೋಹನ್‌ ಸಿಂಗ್‌ ಮಾಧ್ಯಮ ಸಲಹೆಗಾರರಾಗಿದ್ದ ‘ಸಂಜಯ್‌ ಬಾರು’ ಬರೆದ ‘ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಪುಸ್ತಕವನ್ನು ಆಧರಿಸಿ ಈ ಸಿನಿಮಾ ನಿರ್ಮಿಸಿರುವುದಾಗಿ ಚಿತ್ರ ತಂಡ ಹೇಳಿಕೊಂಡಿದೆ. ಅಂದ ಹಾಗೆ ಈ ಕಥೆಗೆ ಸಹ ಲೇಖನಿ ಹಿಡಿದವರು ಮತ್ತು ಚಿತ್ರದ ನಿರ್ದೇಶಕರು ವಿಜಯ್‌ ರತ್ನಾಕರ್ ಗುಟ್ಟೆ.

ಈ ಹಿಂದೆ ಇಮೋಷನಲ್‌ ಅತ್ಯಾಚಾರ್‌, ಟೈಮ್‌ ಬರಾ ವಯಿಟ್, ಬದ್ಮಾಶಿಯಾನ್‌ ಸಿನಿಮಾಗಳನ್ನು ನಿರ್ಮಿಸಿದ್ದ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ. ಈ ವಿಜಯ ರತ್ನಾಕರ್‌ ಗುಟ್ಟೆ ಮೇಲೆ ಹಲವು ಗುರುತರ ಆರೋಪಗಳಿವೆ. ಇದೇ ಆಗಸ್ಟ್‌ 3ರಂದು 34 ಕೋಟಿ ರೂಪಾಯಿ ಮೊತ್ತದ ಜಿಎಸ್‌ಟಿ ವಂಚನೆ ಆರೋಪದ ಮೇಲೆ ‘ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯ’ ಮುಂಬೈನಲ್ಲಿ ವಿಜಯ್‌ ಅವರನ್ನು ಬಂಧಿಸಿತ್ತು. ಈ ಸಂದರ್ಭದಲ್ಲಿ ಮುಂಬೈ ನ್ಯಾಯಾಲಯ ಅವರನ್ನು 11 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಆಗವರು ಆಕ್ಸಿಡೆಂಟಲ್‌ ಆಗಿ ಅರ್ಥರ್‌ ಜೈಲಿನಲ್ಲಿ ದಿನಗಳನ್ನು ಕಳೆಯಬೇಕಾಗಿ ಬಂದಿತ್ತು.

ಈ ಸಂದರ್ಭದಲ್ಲಿ ನ್ಯಾಯಾಲಯದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದ ‘ಇಂಡಿಯನ್‌ ಎಕ್ಸ್‌ಪ್ರೆಸ್’, ಅನಿಮೇಷನ್‌ ಮತ್ತು ಮಾನವ ಸಂಪನ್ಮೂಲ ಸೇವೆ ಹೆಸರಿನಲ್ಲಿ ವಿಜಯ್‌ ಗುಟ್ಟೆಗೆ ಸೇರಿದ ವಿಆರ್‌ಜಿ ಡಿಜಿಟಲ್‌ ಕಾರ್ಪ್‌ ಪ್ರೈವೇಟ್‌ ಲಿ. ಸಂಸ್ಥೆಯು ಹಾರಿಝಾನ್‌ ಔಟ್‌ಸೋರ್ಸ್‌ ಸೊಲ್ಯೂಷನ್ಸ್‌ ಪ್ರೈವೇಟ್‌ ಲಿ.ನಿಂದ 34 ಕೋಟಿ ರೂಪಾಯಿಗಳ ನಕಲಿ ಜಿಎಸ್‌ಟಿ ಇನ್‌ವಾಯ್ಸ್‌ಗಳನ್ನು ಪಡೆದುಕೊಂಡಿದ್ದು ತಿಳಿದು ಬಂದಿತ್ತು. ಜಿಎಸ್‌ಟಿ ಸಂಬಂಧಿಸಿದಂತೆ 170 ಕೋಟಿ ರೂಪಾಯಿಗಳ ಹಗರಣ ಸಂಬಂಧ ಸರಕಾರಿ ಸಂಸ್ಥೆಗಳು ಹಾರಿಝಾನ್‌ ಕಂಪನಿ ಮೇಲೆ ಕಣ್ಣಿಟ್ಟಿದ್ದವು. ಇದರ ತನಿಖೆಯ ಆಳಕ್ಕಿಳಿದಾಗ ವಿಜಯ್‌ ಕೈವಾಡ ಬಯಲಾಗಿತ್ತು.

ಈ ಇನ್‌ವಾಯ್ಸ್‌ಗಳನ್ನು ಇಟ್ಟುಕೊಂಡು ವಿಆರ್‌ಜಿ ಡಿಜಿಟಲ್‌ ಸಂಸ್ಥೆ 28 ಕೋಟಿ ರೂಪಾಯಿ ತೆರಿಗೆ ಹಣವನ್ನು ಮರು ಪಾವತಿ ಮಾಡುವಂತೆ ಸೆನ್‌ವ್ಯಾಟ್‌ (ಸೆಂಟ್ರಲ್‌ ವ್ಯಾಲ್ಯೂ ಆಡೆಡ್‌ ಟ್ಯಾಕ್ಸ್‌) ಮನವಿ ಸಲ್ಲಿಸಿತ್ತು. ಅಂದರೆ ತೆರಿಗೆಯನ್ನು ಕಟ್ಟದೆ, ತೆರಿಗೆ ಕಟ್ಟಿದ್ದೇನೆಂದು ನಕಲಿ ಬಿಲ್‌ ತೋರಿಸಿ ಸರಕಾರದಿಂದ ಮರು ಪಾವತಿ ಹೆಸರಿನಲ್ಲಿ ಬಿಟ್ಟಿ ಹಣ ಪಡೆಯಲು ಮುಂದಾಗಿತ್ತು.

ಈ ಪ್ರಕರಣದ ತನಿಖೆಯನ್ನು ಇಲಾಖೆ ಕೈಗೆತ್ತಿಕೊಂಡ ವೇಳೆ ವಿಜಯ್‌ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ವಿಜಯ್‌ ಗುಟ್ಟೆ ಮತ್ಯಾರೂ ಅಲ್ಲ; ಮಹಾರಾಷ್ಟ್ರದ ಬಿಜೆಪಿ ನಾಯಕ, ಸಕ್ಕರೆ ಉದ್ಯಮದ ಕುಳ, ಗಂಗಾಖೇಡ್‌ ಸುಗರ್‌ ಆಂಡ್‌ ಎನರ್ಜಿ ಲಿ. ಮಾಲಿಕ ರತ್ನಾಕರ್‌ ಗುಟ್ಟೆಯ ಮಗ.

ಮಗ ಕಳ್ಳ, ಅಪ್ಪ ಮಹಾ ಕಳ್ಳ!

ಈ ರತ್ನಾಕರ್‌ ಗುಟ್ಟೆಯದ್ದು ಇನ್ನೊಂದು ಕಥೆ. ಈತ ಬರೋಬ್ಬರಿ 5,500 ಕೋಟಿ ರೂಪಾಯಿ ಮೊತ್ತದ ಬ್ಯಾಂಕ್‌ ಹಗರಣದ ಆರೋಪ ಎದುರಿಸುತ್ತಿದ್ದಾರೆ. ಈ ಸಂಬಂಧ ಜುಲೈ 17ರಂದು ಮಹಾರಾಷ್ಟ್ರ ವಿಧಾನ ಪರಿಷತ್‌ನಲ್ಲಿ ಮಾತನಾಡಿದ್ದ ವಿರೋಧ ಪಕ್ಷದ ನಾಯಕ, ಎನ್‌ಸಿಪಿ ಶಾಸಕ ಧನಂಜಯ್‌ ಮುಂಡೆ, ರತ್ನಾಕರ್‌ ಒಡೆತನಕ್ಕೆ ಸೇರಿದ 8 ಕಂಪನಿಗಳು ಬ್ಯಾಂಕ್‌ಗಳಿಗೆ 5,500 ಕೋಟಿ ರೂಪಾಯಿ ಪಂಗನಾಮ ಹಾಕಿವೆ ಎಂದು ಆರೋಪಿಸಿದ್ದರು. ಮುಂದುವರಿದು ಈ ಹಣವನ್ನು ಬೇರೆ ಬೇರೆ ಖಾತೆಗೆ ವರ್ಗಾಯಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿದ್ದರು.

“ರತ್ನಾಕರ್‌ ಗುಟ್ಟೆ 22 ಬೋಗಸ್‌ ಕಂಪನಿಗಳನ್ನು ತೆರೆದು 26,000 ರೈತರಿಗೆ ಮೋಸ ಮಾಡಿದ್ದಾರೆ. 2015ರಲ್ಲಿ ಗಂಗಾಖೇಡ್‌ ಶುಗರ್‌ ಫ್ಯಾಕ್ಟರಿ 600 ರೈತರ ಹೆಸರಿನಲ್ಲಿ ‘ಹಾರ್ವೆಸ್ಟ್‌ ಆಂಡ್‌ ಟ್ರಾನ್ಸ್‌ಪೋರ್ಟ್‌ ಸ್ಕೀಂ’ ಅಡಿಯಲ್ಲಿ ಸಾಲಗಳನ್ನು ಪಡೆದಿತ್ತು. ಇದೀಗ ಈ ರೈತರು ಬ್ಯಾಂಕ್‌ನಿಂದ ನೋಟಿಸ್‌ಗಳನ್ನು ಪಡೆಯುತ್ತಿದ್ದಾರೆ. ಸುಮಾರು 25 ಲಕ್ಷ ರೂಪಾಯಿವರೆಗಿನ ಬ್ಯಾಂಕ್‌ ಸಾಲಗಳು ಈ ರೈತರ ಹೆಸರಿನಲ್ಲಿವೆ,” ಎಂದು ವಿವರಿಸಿದ್ದರು. ಇದೇ ಆರೋಪದ ಮೇಲೆ ಜುಲೈ 5ರಂದು ರತ್ನಾಕರ್‌ ಗುಟ್ಟೆ ಮೇಲೆ ಹಲವು ಎಫ್‌ಐಆರ್‌ಗಳು ದಾಖಲಾಗಿವೆ. ಆದರೆ ಇಲ್ಲಿಯವರೆಗೆ ಮಹಾರಾಷ್ಟ್ರದ ಬಿಜೆಪಿ ಸರಕಾರ ಅವರನ್ನು ಬಂಧಿಸಿಲ್ಲ.

ಅಂದ ಹಾಗೆ 2014ರಲ್ಲಿ ಗುಟ್ಟೆ ಮಹಾರಾಷ್ಟ್ರ ವಿಧಾನಸಭೆಗೆ ಗಂಗಾಖೇಡ್‌ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಇನ್ನೊಂದು ಕಡೆ ಬಿಜೆಪಿ ವ್ಯಾಪಕ ಪ್ರಚಾರ ನೀಡುತ್ತಿರುವ ‘ಆಕ್ಸಿಡೆಂಟಲ್‌ ಪ್ರೈಮ್ಸ್‌ ಮಿನಿಸ್ಟರ್‌’ ಚಿತ್ರವನ್ನು ಅವರ ಪುತ್ರ ನಿರ್ದೇಶಿಸಿದ್ದಾರೆ. ಹೀಗೊಂದು ಮಾಹಿತಿಯನ್ನು ವಿಜಯ್‌ ಗುಟ್ಟೆ ಮತ್ತು ರತ್ನಾಕರ್‌ ಗುಟ್ಟೆ ಅವರನ್ನು ಬಂಧಿಸಬೇಕು, ತನಿಖೆಗೆ ಒಳಪಡಿಸಬೇಕು ಎಂದು ಬಯಸುವವರು ಗಮನಿಸದಿದ್ದರೆ ತಪ್ಪಾಗುತ್ತದೆ!