ಪ್ರಾಥಮಿಕ ಹಂತದಲ್ಲಿ ‘ಭಾಷಾ’ ಮಾಧ್ಯಮ; ಚರ್ಚೆಗಳಾಚೆಗಿನ ಸತ್ಯಗಳು
COVER STORY

ಪ್ರಾಥಮಿಕ ಹಂತದಲ್ಲಿ ‘ಭಾಷಾ’ ಮಾಧ್ಯಮ; ಚರ್ಚೆಗಳಾಚೆಗಿನ ಸತ್ಯಗಳು

ಭಾಷಾ ಮಾಧ್ಯಮದ ವಿಚಾರ ಕೇವಲ ಪರ ಮತ್ತು ವಿರೋಧದ ನೆಲೆಗಳಲ್ಲಿ ಚರ್ಚೆಯಾಗುವುದಕ್ಕಿಂತ ವಾಸ್ತವ ಸ್ಥಿತಿಯ ನೆಲೆಗಟ್ಟಿನ ಮೇಲೆ ಚರ್ಚೆಯಾಗಬೇಕಿದೆ.

ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಚರ್ಚೆ ಮತ್ತೆ ನಡುಬೀದಿಗೆ ಬಂದಿದೆ. “ಕನ್ನಡ ಮಾಧ್ಯಮದಲ್ಲಿ ಕಲಿತ ನಾನೇನು ಪೆದ್ದನಾ?” ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಶ್ನೆ ಚರ್ಚೆಯ ಕಾವನ್ನು ತುಸು ಹೆಚ್ಚಿಸಿದೆ. ಸರಕಾರ ಹೊಸದಾಗಿ ಆರಂಭಿಸಲು ಮುಂದಾಗಿರುವ ಒಂದು ಸಾವಿರ ಇಂಗ್ಲಿಷ್‌ ಮಾಧ್ಯಮ ಶಾಲೆಗಳ ವಿಚಾರವಾಗಿ ಪರ- ವಿರೋಧ ಅಭಿಪ್ರಾಯಗಳು ಈಗ ಜೋರಾಗಿವೆ.

ಸರಕಾರ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ತೆರೆಯುವ ನಿಲುವನ್ನು ವಿರೋಧಿಸಿರುವ ಹಿರಿಯ ಸಾಹಿತಿಗಳು ಇದರ ವಿರುದ್ಧ ಗೋಕಾಕ್‌ ಮಾದರಿಯ ಹೋರಾಟ ರೂಪಿಸುವುದಾಗಿ ಹೇಳಿದ್ದಾರೆ. ಆದರೆ, ಅದೇ ಸಾಹಿತಿಗಳು ಹೇಳಿರುವ ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಕಲಿಸಬೇಕೆನ್ನುವ ಮಾತುಗಳು ಚರ್ಚೆಯ ಅಬ್ಬರದಲ್ಲಿ ಹಿನ್ನೆಲೆಗೆ ಸರಿದಿವೆ. ಸದ್ಯದ ಕಲಿಕಾ ಮಾಧ್ಯಮದ ಚರ್ಚೆ ಕನ್ನಡ ಮತ್ತು ಇಂಗ್ಲಿಷನ್ನು ಎರಡು ಭಾಗಗಳಾಗಿ ಒಡೆದಿರುವಂತೆ ಕಾಣುತ್ತಿದೆ.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಸರಿ. ಆದರೆ, ಇದನ್ನು ಕೇವಲ ಹೇಳಿಕೆಯಾಗಷ್ಟೇ ಮೆರೆಸುವ ಸರಕಾರಗಳು ಕನ್ನಡವನ್ನು ಡಿಜಿಟಲ್ ಕಾಲಘಟ್ಟದಲ್ಲಿ ‘ಅಕ್ಷರಶಃ’ ಬೆಳೆಸುವ ಕೆಲಸವನ್ನು ಮಾಡಿಲ್ಲ. ಕನ್ನಡವನ್ನು ಕೇವಲ ಭಾವನೆಯ ನೆಲೆಯಲ್ಲಷ್ಟೇ ನೋಡದೆ ತಂತ್ರಜ್ಞಾನದ ನೆಲೆಯಲ್ಲೂ ನೋಡಬೇಕೆಂದು ದಶಕಗಳ ಹಿಂದೆ ಪ್ರಯೋಗಕ್ಕೆ ಇಳಿದವರು ಕೆ.ಪಿ. ಪೂರ್ಣಚಂದ್ರ ತೇಜಸ್ವಿ. ಆದರೆ, ಕನ್ನಡವನ್ನು ತಂತ್ರಜ್ಞಾನಕ್ಕೆ ಅಳವಡಿಸುವ ಬೆಳವಣಿಗೆ ನೋಡಿದರೆ ಕನ್ನಡ ಇನ್ನೂ ಸಾವಿರಾರು ಮೈಲಿಗಳಷ್ಟು ಹಿಂದೆ ಇದೆ.

ತಂತ್ರಜ್ಞಾನ ಸೇರಿದಂತೆ ಹೊಸ ಆವಿಷ್ಕಾರಗಳಿಗೆ ಕನ್ನಡವನ್ನು ಒಗ್ಗಿಸುವ ಹಾಗೂ ಹೊಸ ಪರಿಭಾಷೆಗೆ ಕನ್ನಡದ ನುಡಿಗಟ್ಟುಗಳನ್ನು, ಹೊಸ ಪದಗಳನ್ನು ಸೃಜಿಸುವ ಕಡೆಗೆ ಕನ್ನಡ ಜಗತ್ತಿನ ಗಮನ ಹೋಗಿಲ್ಲ. ತಂತ್ರಜ್ಞಾನದಿಂದ ಆರಂಭವಾಗಿ ಮೆಡಿಕಲ್, ಎಂಜಿನಿಯರಿಂಗ್ ಶಿಕ್ಷಣ ಸೇರಿದಂತೆ ಎಲ್ಲವನ್ನೂ ಇಂಗ್ಲಿಷ್‌ ಮೂಲಕವೇ ಸ್ವೀಕರಿಸುತ್ತಿರುವ ಕನ್ನಡ ಜಗತ್ತಿಗೆ ಈ ವಿಚಾರದಲ್ಲಿ ಚೀನಾ, ಜಪಾನ್‌ಗಳು ಮಾದರಿಯಾಗುತ್ತಿಲ್ಲ. ಹೊಸ ಲೋಕಜ್ಞಾನವನ್ನೆಲ್ಲಾ ಕನ್ನಡದಲ್ಲೇ ಸ್ವೀಕರಿಸುವ ಮಟ್ಟಕ್ಕೆ ಕನ್ನಡವನ್ನು ಕಟ್ಟದೇ ಇರುವುದೇ ಈ ಹೊತ್ತಿನ ಬಿಕ್ಕಟ್ಟುಗಳಿಗೆ ಕಾರಣ.

ಒಂದರಿಂದ ಏಳನೇ ತರಗತಿವರೆಗೆ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಕಲಿಸಿ. ಇಂಗ್ಲಿಷ್‌ ಬೇಡವೆಂದು ನಾವು ಹೇಳುತ್ತಿಲ್ಲ. ಒಂದು ಭಾಷೆಯಾಗಿ ಗುಣಮಟ್ಟದ ಇಂಗ್ಲಿಷ್‌ ಅನ್ನು ಕಲಿಸಿ. ಮಗುವಿನ ಮೂಲ ಕಲಿಕೆ ಮಾತೃಭಾಷೆಯಲ್ಲಿ ಆಗಬೇಕೆಂಬುದು ನಮ್ಮ ಒತ್ತಾಯ.
- ಚಂಪಾ, ಸಾಹಿತಿ

ಹತ್ತನೇ ತರಗತಿಯ ನಂತರ ವಿಜ್ಞಾನ, ಎಂಜಿನಿಯರಿಂಗ್‌, ವಾಣಿಜ್ಯ ವಿಷಯಗಳನ್ನು ಕನ್ನಡದಲ್ಲಿ ಕಲಿಯಲು, ಕಲಿಸಲು ಗುಣಮಟ್ಟದ ಕನ್ನಡ ಮಾಧ್ಯಮದ ಪಠ್ಯಪುಸ್ತಕಗಳನ್ನು ರಚಿಸಲು ಇನ್ನೂ ಸರಕಾರಕ್ಕೆ ಸಾಧ್ಯವಾಗಿಲ್ಲ. ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ಎಲ್ಲಾ ವಿಷಯಗಳನ್ನೂ ಕಲಿತ ಕನ್ನಡದ ಮಕ್ಕಳಿಗೆ ಮುಂದೆ ಇಂಗ್ಲಿಷ್‌ ಭಾಷೆಯೇ ತೊಡಕಾಗಿ ವಿಜ್ಞಾನ, ಎಂಜಿನಿಯರಿಂಗ್‌ ಓದಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂಗ್ಲಿಷ್‌ ಮಾಧ್ಯಮ ಬೇಡವೆಂದರೆ ಕನ್ನಡದಲ್ಲಿ ಅದಕ್ಕೆ ಅಗತ್ಯವಾದುದನ್ನು ರೂಪಿಸುವ ಇಚ್ಛಾಶಕ್ತಿಯನ್ನು ಇಲ್ಲಿಯವರೆಗಿನ ಯಾವ ಸರಕಾರಗಳೂ ತೋರಿಲ್ಲ. ಸರಕಾರಿ ಕನ್ನಡ ಶಾಲೆಗಳ ಈ ಹೊತ್ತಿನ ಪರಿಸ್ಥಿತಿ ಹೇಗಿದೆ, ಮಕ್ಕಳ ಕಲಿಕೆಯ ಗುಣಮಟ್ಟ ಹಾಗೂ ಶಿಕ್ಷಕರ ಕಲಿಸುವ ಗುಣಮಟ್ಟ ಹೇಗಿದೆ ಎಂಬ ಬಗ್ಗೆ ಸರಕಾರ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಕನ್ನಡ ಉಳಿಸುವ ನಮ್ಮ ಸರಕಾರಗಳ ಮಾದರಿ ಇದು.

ಮಕ್ಕಳಿಗೆ ಜ್ಞಾನವನ್ನು ಸಮರ್ಪಕವಾಗಿ ಕಲಿಸುವ ಕಡೆಗೆ ಹೆಚ್ಚು ಗಮನ ಕೊಡಬೇಕೇ ಹೊರತು ಮಾಧ್ಯಮದ ಬಗ್ಗೆ ಅಲ್ಲ. ಇಂಗ್ಲಿಷ್‌ ಅನ್ನು ಕಲಿತು ಅದರಿಂದ ಅಭಿವೃದ್ಧಿ ಹೊಂದಿದ ಯಾವುದೇ ರಾಷ್ಟ್ರಗಳ ಉದಾಹರಣೆ ನಮ್ಮ ಮುಂದಿಲ್ಲ. ಹೀಗಾಗಿ ಇಂಗ್ಲಿಷ್‌ ಕಲಿತ ಮಾತ್ರಕ್ಕೆ ಅಭಿವೃದ್ಧಿ ಸಾಧ್ಯ ಎಂದು ಹೇಳಲು ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಚೀನಾ, ಜಪಾನ್‌ಗಳು ತಮ್ಮ ಭಾಷೆಗಳ ಮೂಲಕವೇ ಹೊಸ ಜ್ಞಾನವನ್ನು ಪಡೆಯುತ್ತಿರುವ ಸಂದರ್ಭದಲ್ಲಿ ಜ್ಞಾನಕ್ಕಾಗಿ ಈಗ ಇಂಗ್ಲಿಷ್ ಅಗತ್ಯ ಎಂದು ಹೇಳಲು ಸಾಧ್ಯವಿಲ್ಲ.
- ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಶಿವಮೊಗ್ಗ. 

ಸುಪ್ರೀಂಕೋರ್ಟ್‌ ಹೇಳಿದ್ದೂ ಅದೇ:

ಮಕ್ಕಳ ಪರಿಸರದಲ್ಲಿರುವ ಭಾಷೆಯಲ್ಲೇ ಮೂಲವಿಚಾರಗಳನ್ನು ಕಲಿಸಬೇಕೆಂಬುದು ಭಾಷಾತಜ್ಞರ, ಶಿಕ್ಷಣ ತಜ್ಞರ ಅಭಿಪ್ರಾಯ. ಮಗುವಿನ ಮೂಲ ಕಲಿಕೆ ಮಾತೃಭಾಷೆಯಲ್ಲೇ ಆಗಬೇಕೆಂದು ಸುಪ್ರೀಂಕೋರ್ಟ್‌ ಹೇಳಿದ್ದೂ ಅದನ್ನೇ. ಆದರೆ, ಉನ್ನತ ಶಿಕ್ಷಣಕ್ಕೆ, ಉದ್ಯೋಗಕ್ಕೆ ಇಂಗ್ಲಿಷ್‌ ಬೇಕೇಬೇಕು ಎಂಬ ವಾತಾವರಣ ಈಗ ನಿರ್ಮಾಣವಾಗಿರುವುದರಿಂದ ಕಡುಬಡವರಿಂದ ಹಿಡಿದು ಶ್ರೀಮಂತರವರೆಗೂ ತಮ್ಮ ಮಕ್ಕಳು ಇಂಗ್ಲಿಷ್‌ ಮಾಧ್ಯಮದಲ್ಲೇ ಕಲಿಯಬೇಕೆಂಬ ಮನಸ್ಥಿತಿ ಇದೆ.

ಭಾಷಾ ಮಾಧ್ಯಮದ ಜತೆಗೆ ಮೇಲು- ಕೀಳು ಪರಿಕಲ್ಪನೆಯೂ ಸೇರಿಕೊಂಡಿದೆ. ಇಂಗ್ಲಿಷ್‌ನ ಮೇಲರಿಮೆ ಹಾಗೂ ಕನ್ನಡದ ಕೀಳರಿಮೆ ಸಮಾಜದಲ್ಲಿ ಹೆಚ್ಚಾಗಿದೆ. ಇದೇ ಕಾರಣಕ್ಕೇ ಕಡುಬಡವರೂ ಇಂದು ತಮ್ಮ ಮಕ್ಕಳು ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯಬೇಕೆಂದು ಅವರ ಬದುಕಿಗೇ ಭಾರವೆನಿಸುವ ಡೊನೇಷನ್, ಫೀಸನ್ನು ಕಟ್ಟಿ ತಮ್ಮ ಮಕ್ಕಳನ್ನು ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಆದರೆ, ಅದೆಷ್ಟೋ ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಅನಧಿಕೃತವಾಗಿ ನಡೆಯುತ್ತಿವೆ, ಅವುಗಳಲ್ಲಿ ಗುಣಮಟ್ಟದ ಶಿಕ್ಷಣ ಇಲ್ಲ ಎಂಬುದು ಇಂಥ ಬಡ ಪೋಷಕರ ಗಮನಕ್ಕೆ ಬರುತ್ತಿಲ್ಲ.

“ನನ್ನದೇ ಅನುಭವದಲ್ಲಿ ನಾನು ಕಲಿತ ಶಾಲೆಗಗಳಲ್ಲಿ ಇಂಗ್ಲಿಷ್‌ ಒಂದು ಭಾಷೆಯಾಗಿ ಕಲಿಸಲಾಗಿತ್ತು. ಗಣಿತ, ವಿಜ್ಞಾನ, ಸಮಾಜಶಾಸ್ತ್ರ ಕನ್ನಡದಲ್ಲಿ ಕಲಿತೆವು. ಇಂಗ್ಲಿಷ್‌ ಪರಿಚಯ ಮಾಡಿಕೊಂಡೆವು. ಮುಂದೆ ಕಾಲೇಜು ಶಿಕ್ಷಣ ಇಂಗ್ಲಿಷ್‌ನಲ್ಲಿ ಕಲಿತೆವು. ನನ್ನ ಕುಟುಂಬದ ವಾತಾವರಣದಲ್ಲಿ ಕನ್ನಡವಿತ್ತು. ಈಗಲೂ ಪರಿಸ್ಥಿತಿ ಬದಲಾಗಿಲ್ಲ. ನಮ್ಮ ಬಹುತೇಕ ಕುಟುಂಬಗಳಲ್ಲಿ ‘ಇಂಗ್ಲಿಷ್‌’ ದಿನನಿತ್ಯದ ಭಾಷೆಯಲ್ಲ. ಹೀಗಾಗಿ ನನ್ನ ಮತ ‘ಇಂಗ್ಲಿಷ್‌’ ಒಂದು ಭಾಷೆಯಾಗಿ ಕಲಿಸಲಿ, ಚೆನ್ನಾಗಿ ಕಲಿಸಲಿ” ಎನ್ನುತ್ತಾರೆ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾಗಿದ್ದ ವಾಸುದೇವ ಶರ್ಮಾ.

ಕನ್ನಡ ಶಾಲೆಗಳ ಪರಿಸ್ಥಿತಿ:

ಒಂದು ಕಡೆ ಸರಕಾರ ಹೊಸದಾಗಿ ಒಂದು ಸಾವಿರ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ತೆರೆಯಲು ಹೊರಟಿದೆ. ಆದರೆ, ಈಗಿರುವ ಸರಕಾರಿ ಶಾಲೆಗಳ ಪರಿಸ್ಥಿತಿ ಭೀಕರವಾಗಿದೆ. ಹಲವು ಸರಕಾರಿ ಶಾಲೆಗಳ ಕಟ್ಟಡಗಳು ಸರಿಯಿಲ್ಲ, ಹಲವು ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಕರಿಲ್ಲ, ಹಲವೆಡೆ ಶಿಕ್ಷಕರಿದ್ದರೂ ಕಲಿಯಲು ಮಕ್ಕಳಿಲ್ಲ, ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸಲು ಪೋಷಕರು ಹಿಂದೇಟು ಹಾಕುತ್ತಿರುವುದರಿಂದ ಸರಕಾರಿ ಶಾಲೆಗಳು ಸಮೀಪದ ಶಾಲೆಗಳೊಂದಿಗೆ ವಿಲೀನವಾಗುತ್ತಿವೆ.

ಶಿಕ್ಷಣ ಇಲಾಖೆಯ ಬದ್ಧತೆ ಹಾಗೂ ಮೇಲ್ವಿಚಾರಣೆಯ ಕೊರತೆಯಿಂದ ಈಗಾಗಲೇ ಇರುವ ಸರಕಾರಿ ಶಾಲೆಗಳು ನರಳುತ್ತಿವೆ. ಇಂಥ ಶಾಲೆಗಳಿಗೆ ಬಡ ಮಕ್ಕಳು ಹೋಗಿ ಕನ್ನಡ ಉಳಿಸಬೇಕೆಂಬ ಮಾತು ಒಂದು ಹಂತದಲ್ಲಿ ಅಮಾನವೀಯ ಎಂದೂ ಅನಿಸುತ್ತದೆ. ಈಗಿರುವ ಶಾಲೆಗಳ ಬಗ್ಗೆ ಯೋಚಿಸದೆ ಹೊಸದಾಗಿ ಶಾಲೆಗಳನ್ನು ಆರಂಭಿಸಲು ಸರಕಾರ ಸಮರೋಪಾದಿಯಲ್ಲಿ ಹೊರಟಿದೆ.

ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್‌ ಒಂದು ಭಾಷೆಯಾಗಿ ಈಗಾಗಲೇ ಜಾರಿಯಲ್ಲಿದೆ. ಆದರೆ, ಗುಣಮಟ್ಟದ ಇಂಗ್ಲಿಷ್‌ ಶಿಕ್ಷಕರ ಕೊರತೆ ಇದೆ. ಸರಕಾರಿ ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಇಂಗ್ಲಿಷ್‌ ಕಲಿಸುವ ಶಿಕ್ಷಕರು ಸಿಕ್ಕರೆ ಅದು ಮಕ್ಕಳ ಅದೃಷ್ಟ. ಇಲ್ಲವಾದರೆ, ಒಂದನೇ ತರಗತಿಯಿಂದ ಇಂಗ್ಲಿಷ್‌ ಇದ್ದರೂ ಅದರಿಂದ ಹೆಚ್ಚೇನೂ ಪ್ರಯೋಜನವಿಲ್ಲ. ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಗ್ರಾಮಗಳ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡುವ ಮೊದಲು ಸರಕಾರಿ ಶಾಲೆಗಳ ಜೀರ್ಣೋದ್ಧಾರ ಮಾಡಲು ಮುಂದಾಗಬೇಕು.
-ವೀರಣ್ಣ ಮಡಿವಾಳರ, ಮುಖ್ಯ ಶಿಕ್ಷಕ

ಕನ್ನಡ ಶಾಲೆಯಲ್ಲಿ ಇಂಗ್ಲಿಷ್‌, ಇಂಗ್ಲಿಷ್‌ ಶಾಲೆಯಲ್ಲಿ ಕನ್ನಡ:

ಜಗತ್ತಿನ ಯಾವ ಭಾಷೆಯೂ ಕೀಳಲ್ಲ. ಇಂಗ್ಲಿಷ್‌ ಸೇರಿದಂತೆ ಎಷ್ಟೇ ಭಾಷೆ ಕಲಿತರೂ ವ್ಯಕ್ತಿಯ ಮಾತೃಭಾಷೆಯ ಮೇಲಿನ ಪ್ರೀತಿ ಕಡಿಮೆಯಾಗದು. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒಂದು ಭಾಷೆಯಾಗಿ ಗುಣಮಟ್ಟದ ಇಂಗ್ಲಿಷ್‌ ಕಲಿಸುವಂತೆ, ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಭಾಷೆಯಾಗಿ ಗುಣಮಟ್ಟದ ಕನ್ನಡವನ್ನೂ ಕಲಿಸಲಿ. ಇದರಿಂದ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳ ಬಗ್ಗೆ ಇರುವ ಅಂತರ ಕಡಿಮೆಯಾಗಲು ಸಾಧ್ಯ.

ಭಾಷಾ ಮಾಧ್ಯಮದ ವಿಚಾರ ಕೇವಲ ಪರ ಮತ್ತು ವಿರೋಧದ ನೆಲೆಗಳಲ್ಲಿ ಚರ್ಚೆಯಾಗುವುದಕ್ಕಿಂತ ವಾಸ್ತವ ಸ್ಥಿತಿಯ ನೆಲೆಗಟ್ಟಿನ ಮೇಲೆ ಚರ್ಚೆಯಾಗಬೇಕಿದೆ. ಕನ್ನಡದ ಮೂಲಕವೇ ಆಲೋಚನಾ ಕ್ರಮ ರೂಪಿಸಲು ಕನ್ನಡದ ಪರಿಭಾಷೆಯಲ್ಲೇ ಜ್ಞಾನ ಹಂಚುವ ಪ್ರಕ್ರಿಯೆ ನಡೆಯಬೇಕು. ಇದಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಎಲ್ಲವನ್ನೂ ಕನ್ನಡದಲ್ಲೇ ಕಲಿಯುವ ಗುಣಮಟ್ಟದ ಕನ್ನಡ ಪಠ್ಯಗಳು ಕಲಿಕೆಯ ಎಲ್ಲಾ ಹಂತದಲ್ಲೂ ಸಿಗಬೇಕು. ಅಲ್ಲಿಯವರೆಗೂ ಮಾತೃಭಾಷಾ ಮಾಧ್ಯಮದ ಕಲಿಕೆಯ ಜತೆಗೆ ಮುಂದೆ ಅನಿವಾರ್ಯವಾಗುವ ಇಂಗ್ಲಿಷ್‌ ಅನ್ನು ಗುಣಮಟ್ಟದಲ್ಲಿ ಕಲಿಸಬೇಕು. ಭಾಷಾ ಮಾಧ್ಯಮದ ವಿಚಾರದಲ್ಲಿ ಭಾವನೆಯ ಜತೆಗೆ ವಾಸ್ತವವನ್ನೂ ನೋಡಬೇಕು.