samachara
www.samachara.com
ಶೇಖ್ ಹಸೀನಾ, ಖಲೀದಾ ಝೀಯಾ; ಬಾಂಗ್ಲಾದಲ್ಲಿ ‘ದಾದಿಮಾ’ಗಳ ಸಂಡೆ ಶೋ!
COVER STORY

ಶೇಖ್ ಹಸೀನಾ, ಖಲೀದಾ ಝೀಯಾ; ಬಾಂಗ್ಲಾದಲ್ಲಿ ‘ದಾದಿಮಾ’ಗಳ ಸಂಡೆ ಶೋ!

ಒಂದು ಕಡೆ ಆರ್ಥಿಕ ಪ್ರಗತಿ ಇನ್ನೊಂದು ಕಡೆ ಅಸಮಾನತೆ, ಭಿನ್ನ ಧ್ವನಿಗಳನ್ನು ಹತ್ತಿಕ್ಕುವ ಯತ್ನ; ಇಂಥಹದ್ದೊಂದು ಸಂಕೀರ್ಣ ವಾತಾವರಣದಲ್ಲಿ ಭಾನುವಾರದ ಮತದಾನಕ್ಕೆ ಬಾಂಗ್ಲಾದೇಶ ಸಾಕ್ಷಿಯಾಗಲಿದೆ. 

ಪಾಕಿಸ್ತಾನದ ನಂತರ ಇದೀಗ ಒಂದು ಕಾಲದಲ್ಲಿ ಪಾಕಿಸ್ತಾನದ ಭಾಗವೇ ಆಗಿದ್ದ ಬಾಂಗ್ಲಾದೇಶದಲ್ಲಿ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇದೇ ಭಾನುವಾರ ಭಾರತದ ನೆರೆಯ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ವ್ಯಾಪಕ ಹಿಂಸಾಚಾರ, ಅಪನಂಬಿಕೆ ಮತ್ತು ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ತಿಕ್ಕಾಟದ ನಡುವೆ ಈ ಚುನಾವಣೆ ನಡೆಯುತ್ತಿದೆ.

ಕಳೆದ 9 ವರ್ಷಗಳಿಂದ ದೇಶದ ಚುಕ್ಕಾಣಿ ಹಿಡಿದಿರುವ ಹಾಲಿ ಪ್ರಧಾನಿ ಶೇಖ್‌ ಹಸೀನಾ 5 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ನೀಡಿ ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅದೇ ವೇಳೆ ಸ್ಥಳೀಯ ನೆಲೆಯಲ್ಲಿ ತಮ್ಮ ಸರ್ವಾಧಿಕಾರಿ ಧೋರಣೆ, ರಾಜಕೀಯ ವಿರೋಧಿಗಳ ಹತ್ತಿಕ್ಕುವಿಕೆ, ಮಾಧ್ಯಮ ಸ್ವಾತಂತ್ರ್ಯದ ಹರಣ ಮೊದಲಾದ ಕಾರಣಗಳಿಗೆ ಭರಪೂರ ಟೀಕೆಗಳನ್ನು ಎದುರಿಸುತ್ತಿದ್ದಾರೆ. 71 ವರ್ಷದ ಹಸೀನಾ ದಾಖಲೆಯ ನಾಲ್ಕನೇ ಅವಧಿಗೆ ದೇಶದ ಪ್ರಧಾನಿ ಹುದ್ದೆಗೇರಲು ಮಹಾ ಮೈತ್ರಿಕೂಟದ ಜತೆ ಕಣಕ್ಕಿಳಿದಿದ್ದಾರೆ. ಮೈತ್ರಿಕೂಟವನ್ನು ಅವರದ್ದೇ ಪಕ್ಷ ಅವಾಮಿ ಲೀಗ್‌ ಮುನ್ನಡೆಸುತ್ತಿದೆ.

ಶೇಖ್ ಹಸೀನಾಗೆ ಮತ್ತೋರ್ವ ಮಹಿಳೆ 73 ವರ್ಷದ ಖಲೀದಾ ಝೀಯಾ ಸವಾಲೆಸೆಯುತ್ತಿದ್ದಾರೆ. ಅವರ ‘ಬಾಂಗ್ಲಾದೇಶ್‌ ನ್ಯಾಷನಲಿಸ್ಟ್‌ ಪಾರ್ಟಿ (ಬಿಎನ್‌ಪಿ)‘ ‘ಜಾತಿಯಾ ಓಕಿಯಾ ಫ್ರಂಟ್ (ಅಥವಾ ನ್ಯಾಷನಲ್‌ ಯುನಿಟಿ ಫ್ರಂಟ್‌)‘ ಎಂಬ ಒಕ್ಕೂಟವನ್ನು ರಚಿಸಿಕೊಂಡು ಅಖಾಡಕ್ಕಿಳಿದಿದೆ. ಈ ಮೂಲಕ ಎರಡು ಮೈತ್ರಿಕೂಟಗಳು ಸಾರ್ವತ್ರಿಕ ಚುನಾವಣೆಯಲ್ಲಿ ಬಲ ಪ್ರದರ್ಶನ ನಡೆಸಲಿವೆ.

ಝೀಯಾ ಜೈಲಲ್ಲಿ, ವಿರೋಧ ಪಕ್ಷಗಳಿಗೆ ನಾಯಕತ್ವದ ಕೊರತೆ:

1991-96 ಮತ್ತು 2001-06ರವರೆಗೆ ಎರಡು ಬಾರಿ ದೇಶದ ಪ್ರಧಾನಿಯಾಗಿದ್ದ ಝೀಯಾ ಸದ್ಯ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ ಢಾಕಾ ಬಂಧೀಖಾನೆಯಲ್ಲಿದ್ದಾರೆ. 30ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿರುವ ಅವರು ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನೂ ಕಳೆದುಕೊಂಡಿದ್ದಾರೆ. ಇದು ಹಸೀನಾ ಧ್ವೇಷದ ರಾಜಕಾರಣ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಾ ಬಂದಿವೆ.

ಹಸೀನಾ ಮತ್ತು ಝೀಯಾ ಇಬ್ಬರೂ ಬಾಂಗ್ಲಾದೇಶದ ಎರಡು ಪ್ರಮುಖ ರಾಜಕೀಯ ಕುಟುಂಬಗಳಿಗೆ ಸೇರಿದವರಾಗಿದ್ದು, ಮುಸ್ಲಿಂ ಬಾಹುಳ್ಯದ ದೇಶದಲ್ಲಿ ಪರಂಪರಾಗತವಾಗಿ ವೈರತ್ವವನ್ನು ಕಟ್ಟಿಕೊಂಡೇ ಬಂದಿದ್ದಾರೆ. ಅದರ ಮುಂದುವರಿದ ಭಾಗ ಎಂಬಂತೆ ಝೀಯಾ ಜೈಲಿನಲ್ಲಿದ್ದಾರೆ. ಅವರು ಜೈಲಿನಲ್ಲಿರುವುದರಿಂದ ವಿರೋಧಿ ಪಕ್ಷಗಳ ಗುಂಪನ್ನು ಆಕ್ಸ್‌ಫರ್ಡ್‌ ಪದವೀಧರ 82 ವರ್ಷದ ಕಮಲ್‌ ಹುಸೈನ್‌ ಮುನ್ನಡೆಸುತ್ತಿದ್ದಾರೆ. ಝೀಯಾ ಅನುಪಸ್ಥಿತಿಯಲ್ಲಿ ಒಂದೊಮ್ಮೆ ವಿರೋಧ ಪಕ್ಷಗಳು ಅಧಿಕಾರಕ್ಕೇರಿದಲ್ಲಿ ಪ್ರಧಾನ ಮಂತ್ರಿ ಯಾರಾಗಲಿದ್ದಾರಾ ಎಂಬುದು ಚುನಾವಣೆಗೆ 48 ಗಂಟೆಗಳಿರುವಾಗಲೂ ಪ್ರಶ್ನೆಯಾಗಿಯೇ ಉಳಿದಿದೆ.

ಈ ಹಿಂದೆ 2014ರಲ್ಲಿ ಬಿಎನ್‌ಪಿ ಚುನಾವಣೆಯನ್ನು ಬಹಿಷ್ಕರಿಸಿತ್ತು. ಬಿಎನ್‌ಪಿಯ ಗೈರಿನಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧೆಯೇ ಏರ್ಪಡದೆ ಹಸೀನಾ ಸುಲಭವಾಗಿ ಅಧಿಕಾರಕ್ಕೇರಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಪಕ್ರಿಯೆಯನ್ನೇ ಅಂತರಾಷ್ಟ್ರೀಯ ವೀಕ್ಷಕರು ‘ಪ್ರಹಸನ’ ಎಂದು ಕಟು ಶಬ್ದಗಳಲ್ಲಿ ಟೀಕಿಸಿದ್ದರು. ಅದೇ ಭಯ ಈ ಬಾರಿಯ ಚುನಾವಣೆಯ ಮೇಲೆಯೂ ಇದೆ. ವಿರೋಧ ಪಕ್ಷಗಳ ಅಭ್ಯರ್ಥಿಗಳ ಮೇಲೆ ನಡೆದ ಹಲ್ಲೆ, ಸರಕಾರದಿಂದ ನಡೆಯುತ್ತಿರುವ ದೌರ್ಜನ್ಯಗಳು ಒಟ್ಟಾರೆ ಗಣತಂತ್ರ ಪ್ರಕ್ರಿಯೆಯನ್ನೇ ಅನುಮಾನಕ್ಕೀಡು ಮಾಡಿವೆ.

ಕಳೆದ ವಾರವಷ್ಟೇ ಬಾಂಗ್ಲಾದೇಶದ ಅಧಿಕಾರಿಗಳು ‘ಅಸಭ್ಯ’ ಮತ್ತು ‘ಅಶ್ಲೀಲ’ ಸರಕುಗಳಿವೆ ಎಂದು ಹೇಳಿ ಬಿಎನ್‌ಪಿಯ ವೆಬ್‌ಸೈಟನ್ನೇ ಬ್ಲಾಕ್‌ ಮಾಡಿದ್ದರು. ಕೆಲವು ಅವಧಿಗೆ ಪಕ್ಷದ ಫೇಸ್‌ಬುಕ್‌ ಪೇಜ್‌ನ್ನು ಕೂಡ ರದ್ದುಗೊಳಿಸಲಾಗಿತ್ತು. ಬೀದಿ ಹಿಂಸಾಚಾರಗಳಂತೂ ಸಾಮಾನ್ಯವಾಗಿದ್ದು ಇಲ್ಲಿಯವರೆಗೆ ಬಿಎನ್‌ಪಿಯ 4 ಮತ್ತು ಅವಾಮಿ ಲೀಗ್‌ನ ಇಬ್ಬರು ಸೇರಿ ಒಟ್ಟು 6 ಜನರು ಪ್ರಾಣ ತೆತ್ತಿದ್ದಾರೆ. ಚುನಾವಣಾ ಪ್ರಚಾರದ ವೇಳೆ ತಮ್ಮ ಪಕ್ಷದ 150ಕ್ಕೂ ಹೆಚ್ಚು ಅಭ್ಯರ್ಥಿಗಳ ಮೇಲೆ ದಾಳಿ ನಡೆದಿದೆ ಎಂದು ಬಿಎನ್‌ಪಿ ಹೇಳಿಕೊಂಡಿದೆ. 10ಕ್ಕೂ ಹೆಚ್ಚು ಅಭ್ಯರ್ಥಿಗಳು, ಪಕ್ಷದ 11,500 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಕಳೆದ ತಿಂಗಳು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಹೀಗಿದ್ದೂ ಇಲ್ಲಿನ ಚುನಾವಣಾ ಆಯೋಗ ಕಣ್ಣು ಮುಚ್ಚಿ ಕುಳಿತಿದೆ ಎಂಬ ಆರೋಪಗಳಿವೆ. ಈ ಕಾರಣಕ್ಕೆ ಮುಖ್ಯ ಚುನಾವಣಾ ಆಯುಕ್ತ ಪಕ್ಷಪಾತಿಯಾಗಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷಗಳು ಕೆ.ಎಂ.ನುರೂಲ್‌ ಹುದಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದವು. ಆದರೆ ಅವರು ರಾಜೀನಾಮೆ ನೀಡಲಿಲ್ಲ; ಪರಿಸ್ಥಿತಿಯಲ್ಲೂ ಯಾವುದೇ ಬದಲಾವಣೆಯಾಗಲಿಲ್ಲ. ಬದಲಿಗೆ 2014ರಲ್ಲಿ ಚುನಾವಣೆ ಬಹಿಷ್ಕರಿಸಿದವರು ತಮ್ಮ ಕಾರ್ಯತಂತ್ರ ವಿಫಲವಾಗುತ್ತಿದ್ದಂತೆ ಈ ಬಾರಿ ಹೊಸ ನಾಟಕ ಶುರುವಿಟ್ಟುಕೊಂಡಿದ್ದಾರೆ ಎಂದು ಶೇಖ್‌ ಹಸೀನಾ ಪಾಳಯ ಆರೋಪಿಸುತ್ತಿದೆ.

ಬಾಂಗ್ಲಾದೇಶದ ಜನಸಂದಣಿಯ ಬೀದಿಗಳಲ್ಲಿ ಚುನಾವಣಾ ಪ್ರಚಾರದ ಭರಾಟೆ.
ಬಾಂಗ್ಲಾದೇಶದ ಜನಸಂದಣಿಯ ಬೀದಿಗಳಲ್ಲಿ ಚುನಾವಣಾ ಪ್ರಚಾರದ ಭರಾಟೆ.
/ರಾಯ್ಟರ್ಸ್‌

ಪ್ರಮುಖ ಅಂಶಗಳು:

ಹಸೀನಾ ಸರ್ವಾಧಿಕಾರಿ ಧೋರಣೆ, ಮಾಧ್ಯಮಗಳನ್ನು ಹತ್ತಿಕ್ಕುವ ಯತ್ನ ಮತ್ತು 1971ರ ಬಾಂಗ್ಲಾ ವಿಮೋಚನಾ ಯುದ್ಧದ ಸಂದರ್ಭದಲ್ಲಿನ ಅಪರಾಧಗಳು ಚುನಾವಣೆಯಲ್ಲಿ ಹೆಚ್ಚಾಗಿ ಚರ್ಚೆಗೆ ಬಂದಿವೆ.

ಮಾಧ್ಯಮಗಳನ್ನು ಹತ್ತಿಕ್ಕುವ ಯತ್ನಕ್ಕೆ ಉದಾಹರಣೆಯಾಗಿ ಹಸೀನಾ ಜಾರಿಗೆ ತಂದಿರುವ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ 25ಕ್ಕೂ ಹೆಚ್ಚು ಪತ್ರಕರ್ತರು, 100ಕ್ಕೂ ಹೆಚ್ಚು ಫೇಸ್‌ಬುಕ್‌ ಬರಹಗಾರರು ಬಂಧನಕ್ಕೆ ಗುರಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ 107 ದಿನಗಳ ಸೆರೆಮನೆವಾಸದ ನಂತರ ಅಂತರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಕಾರ ಶಾಹಿದುಲ್‌ ಅಲಂ ಬಿಡುಗಡೆಯಾಗಿದ್ದು ಹಸೀನಾ ಸರಕಾರದ ಮಾಧ್ಯಮಗಳ ಮೇಲಿನ ನಿಯಂತ್ರಣಕ್ಕೆ ಹೊಸ ಸಾಕ್ಷಿ ಒದಗಿಸಿದೆ. ಜತೆಗೆ ಡಿಜಿಟಲ್‌ ಸೆಕ್ಯೂರಿಟಿ ಆಕ್ಟ್‌ ಸರಕಾರದ ವಿರುದ್ಧ ಹೋರಾಟಕ್ಕಿಳಿಯುವವರ ಧ್ವನಿಯನ್ನೇ ಉಡುಗಿಸಿದೆ. ನಾವು ಅಧಿಕಾರಕ್ಕೆ ಬಂದರೆ ಇದನ್ನು ರದ್ದುಗೊಳಿಸುವುದಾಗಿ ಬಿಎನ್‌ಪಿ ಚುನಾವಣಾ ದಾಳ ಉರುಳಿಸಿದೆ.

ಇನ್ನೊಂದು ಕಡೆ 1971ರ ಬಾಂಗ್ಲಾ ವಿಮೋಚನಾ ಯುದ್ಧಕ್ಕೆ ಸಂಬಂಧಿಸಿದಂತೆ ಬಿಎನ್‌ಪಿ ಮತ್ತು ಇಸ್ಲಾಮಿಸ್ಟ್‌ ಜಮಾತ್‌-ಇ-ಇಸ್ಲಾಮಿ ಪಕ್ಷದ 10 ಕ್ಕೂ ಹೆಚ್ಚು ನಾಯಕರನ್ನು ‘ನರಮೇಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧ’ಗಳ ಹೆಸರಿನಲ್ಲಿ ಹಸೀನಾ ಜೈಲಿಗೆ ತಳ್ಳಿದ್ದಾರೆ. ಅವರ ಈ ಎಲ್ಲಾ ನಡೆಗಳು ಚುನಾವಣೆಯಲ್ಲಿ ಪ್ರತಿಧ್ವನಿಸುತ್ತಿವೆ.

ಆದರೆ, ಈ ಎಲ್ಲಾ ಆರೋಪಗಳಾಚೆಗೆ ದೇಶದ ಆರ್ಥಿಕತೆಯನ್ನು ಹಸೀನಾ ಪ್ರಗತಿಯತ್ತ ಕೊಂಡೊಯ್ದಿರುವುದು ಚುನಾವಣೆಯಲ್ಲಿ ಅವರ ಪಾಲಿಗೆ ಲಾಭದಾಯಕವಾಗಿ ಪರಿಣಮಿಸಿದೆ. ಸದ್ಯ ಬಾಂಗ್ಲಾ 7.8ರ ದರದಲ್ಲಿ ಅಭಿವೃದ್ಧಿ ಕಾಣುತ್ತಿದ್ದು 8ರ ದರದಲ್ಲಿ ಬೆಳವಣಿಗೆ ಕಂಡಿದ್ದೇ ಆದಲ್ಲಿ 2020ರ ವೇಳೆಗೆ ಭಾರತೀಯರ ತಲಾ ಆದಾಯವನ್ನೂ ಹಿಂದಿಕ್ಕಲಿದೆ. ಸಿದ್ಧ ಉಡುಪುಗಳು ಬಾಂಗ್ಲಾಕ್ಕೆ ಭರಪೂರ ಆದಾಯವನ್ನು ತಂದುಕೊಡುತ್ತಿರುವುದರಿಂದ ದೇಶ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಇದೇ ಲೆಕ್ಕಾಚಾರದ ಮೇಲೆ ಬಾಂಗ್ಲಾದೇಶದ ಅಭಿವೃದ್ಧಿ ದರವನ್ನು 9ಕ್ಕೆ ಏರಿಕೆ ಮಾಡುವುದಾಗಿ ಆಡಳಿತರೂಢ ಅವಾಮಿ ಲೀಗ್‌ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ತಾವೇನು ಕಡಿಮೆ ಇಲ್ಲ ಎಂದಿರುವ ವಿರೋಧಿಗಳು, ಗಾರ್ಮೆಂಟ್‌ ನೌಕರರ ಕನಿಷ್ಠ ವೇತನ ಹೆಚ್ಚಳ, ಗ್ಯಾಸ್‌ ಮತ್ತು ವಿದ್ಯುತ್‌ ದರ ಏರಿಕೆಗೆ ತಡೆ ಹಾಕುವುದಾಗಿ ಭರವಸೆ ನೀಡಿವೆ. ಜತೆಗೆ ಕೇಂದ್ರ ಬ್ಯಾಂಕ್‌ಗೆ ಹೆಚ್ಚಿನ ಸ್ವಾಯತ್ತತೆ ನೀಡುವುದಾಗಿ ಸುಧಾರಣಾವಾದಿ ಮಂತ್ರ ಪಠಿಸಿವೆ.

“ಒಂದು ಹಂತಕ್ಕೆ ನೋಡಿದರೆ ಬಾಂಗ್ಲಾದೇಶ ಆರ್ಥಿಕವಾಗಿ ಅಭಿವೃದ್ಧಿಯಾಗಿದೆ. ಆದರೆ ಅಸಮಾನತೆ ಹೆಚ್ಚಾಗಿದೆ. ಜತೆಗೆ ಬ್ಯಾಂಕ್‌ಗಳು ಜನರ ರಕ್ತ ಹೀರುತ್ತಿವೆ,” ಎನ್ನುತ್ತಾರೆ ಅಮೆರಿಕಾರ ಇಲಿನೋಯ್ಸ್‌ ಸ್ಟೇಟ್‌ ವಿವಿಯ ಪ್ರಧ್ಯಾಪಕ ಅಲಿ ರಿಯಾಜ್‌.

ಒಂದು ಕಡೆ ಆರ್ಥಿಕ ಪ್ರಗತಿ ಇನ್ನೊಂದು ಕಡೆ ಅಸಮಾನತೆ, ಭಿನ್ನ ಧ್ವನಿಗಳನ್ನು ಹತ್ತಿಕ್ಕುವ ಯತ್ನ; ಇಂಥಹದ್ದೊಂದು ಸಂಕೀರ್ಣ ವಾತಾವರಣದಲ್ಲಿ ‘ಮುಕ್ತ ಮತ್ತು ನ್ಯಾಯ ಸಮ್ಮತ’ ಚುನಾವಣೆ ನಡೆಯಲಿದೆಯಾ ಎಂಬ ಉತ್ತರವಿಲ್ಲದ ಪ್ರಶ್ನೆಗಳ ನಡುವೆ ಭಾನುವಾರದ ಮತದಾನಕ್ಕೆ ಬಾಂಗ್ಲಾದೇಶ ಸಾಕ್ಷಿಯಾಗಲಿದೆ. 350 ಸದಸ್ಯ ಬಲದ ಬಾಂಗ್ಲಾದೇಶ ಸಂಸತ್‌ನಲ್ಲಿ 50 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದ್ದು 300 ಸ್ಥಾನಗಳಿಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು 10.41 ಕೋಟಿ ಜನರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇದು 17 ಕೋಟಿ ಜನಸಂಖ್ಯೆ ಇರುವ ಬಾಂಗ್ಲಾದೇಶದ ಭವಿಷ್ಯದ ದಿಕ್ಕನ್ನು ನಿರ್ಧರಿಸಲಿದೆ. ಆರ್ಥಿಕ ಪ್ರಗತಿಯನ್ನೂ ನೆಚ್ಚಿಕೊಂಡ ಹಸೀನಾ ಮತ್ತೆ ಅಧಿಕಾರದ ಗದ್ದುಗೆ ಏರಲಿದ್ದಾರಾ? ಅಥವಾ ಸುಧಾರಣಾವಾದಿಗಳಾಗಿ ಕಾಣುತ್ತಿರುವ ವಿರೋಧಿ ಪಾಳಯಕ್ಕೆ ಜನರು ಮಣೆ ಹಾಕಲಿದ್ದಾರಾ ಎಂಬುದಕ್ಕೆ ಬೆರಳೆಣಿಕೆಯ ದಿನಗಳಲ್ಲಿ ಉತ್ತರ ಸಿಗಲಿದೆ.