samachara
www.samachara.com
3 ಭಾರತೀಯರು, 7 ದಿನ, 10 ಸಾವಿರ ಕೋಟಿ; ಇಸ್ರೋ ‘ಗಗನಯಾನ’ಕ್ಕೆ ಸಂಪುಟ ಸಮ್ಮತಿ
COVER STORY

3 ಭಾರತೀಯರು, 7 ದಿನ, 10 ಸಾವಿರ ಕೋಟಿ; ಇಸ್ರೋ ‘ಗಗನಯಾನ’ಕ್ಕೆ ಸಂಪುಟ ಸಮ್ಮತಿ

ಇಸ್ರೋ ಕೈಗೊಳ್ಳಲಿರುವ ಅತ್ಯಂತ ದೊಡ್ಡ ಬಾಹ್ಯಾಕಾಶ ಯೋಜನೆ ಇದಾಗಿದೆ. 2022ರ ವೇಳೆಗೆ ಭಾರತ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ ಎಂದು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.

ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ಮಹತ್ವಾಕಾಂಕ್ಷಿ ಗಗನಯಾನ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ. 10,000 ಕೋಟಿ ರೂಪಾಯಿಗಳ ಬೃಹತ್‌ ಯೋಜನೆ ಇದಾಗಿದೆ. ಯೋಜನೆಯಂತೆ ಮೂರು ಜನರ ತಂಡ ಬಾಹ್ಯಾಕಾಶದಲ್ಲಿ ಕನಿಷ್ಠ 7 ದಿನಗಳನ್ನು ಕಳೆದು ಭೂಮಿಗೆ ವಾಪಸಾಗಲಿದೆ.

ಇಸ್ರೋ ಕೈಗೊಳ್ಳಲಿರುವ ಅತ್ಯಂತ ದೊಡ್ಡ ಬಾಹ್ಯಾಕಾಶ ಯೋಜನೆ ಇದಾಗಿದೆ. 2022ರ ವೇಳೆಗೆ ಭಾರತ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ ಎಂದು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಈ ಮೂಲಕ ಅಪರೂಪದ ಸಾಧನೆ ಮಾಡಿದ ಕೇವಲ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆಯನ್ನು ಭಾರತಕ್ಕೆ ಕೊಡಿಸಲು ಇಸ್ರೋ ಸಿದ್ಧತೆ ನಡೆಸಿದೆ. ಕೇವಲ ರಷ್ಯಾ, ಅಮೆರಿಕಾ ಮತ್ತು ಚೀನಾ ಮಾತ್ರ ಈ ಸಾಧನೆ ಮಾಡಿದ ದೇಶಗಳಾಗಿವೆ.

2004 ರಿಂದ ಆರಂಭ…

ಮನುಷ್ಯನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಂಬಂಧ ಇಸ್ರೋ 2004ರಿಂದಲೇ ಸಿದ್ಧತೆ ಆರಂಭಿಸಿದೆ. ಯೋಜನೆಗೆ ಬೇಕಾದ ತಂತ್ರಜ್ಞಾನಗಳ ಅನ್ವೇಷಣೆ, ಸುಧಾರಣೆ, ಗಗನಯಾತ್ರಿಗಳನ್ನು ಹೊತ್ತುಯ್ಯುವ ಮತ್ತು ವಾಪಸ್‌ ಭೂಮಿಗೆ ಕರೆದುಕೊಂಡು ಬರುವ ವಾಹಕದ ಮಾದರಿ, ವಿನ್ಯಾಸದಲ್ಲಿ ತೊಡಗಿಸಿಕೊಂಡಿದೆ. ತಂತ್ರಜ್ಞಾನ ಅಭಿವೃದ್ಧಿಗಾಗಿಯೇ ಇಸ್ರೋ ಇಲ್ಲಿಯವರೆಗೆ 173 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.

ಯೋಜನೆಗೆ ಸಂಬಂಧಿಸಿದಂತೆ ಹಲವು ಪರೀಕ್ಷೆಗಳನ್ನು, ಪ್ರಯೋಗಗಳನ್ನು ಈಗಾಗಲೇ ನಡೆಸಲಾಗಿದೆ. ಉಡಾವಣೆಗೊಳಿಸಿದ ಉಪಗ್ರಹವನ್ನು ಮರಳಿ ಪಡೆಯುವ ಸಂಬಂಧ ಇಸ್ರೋ 2007ರಲ್ಲಿ ಯಶಸ್ವೀ ಪರೀಕ್ಷೆ ನಡೆಸಿದೆ. ‘ಸ್ಯಾಟಲೈಟ್‌ ರಿಕವರಿ ಎಕ್ಸ್‌ಪರಿಮೆಂಟ್‌’ನಲ್ಲಿ 550 ಕಿಲೋಗ್ರಾಂ ತೂಕದ ಉಪಗ್ರಹವನ್ನು ಕಕ್ಷೆಗೆ ಕಳುಹಿಸಿ ಭೂಮಿಗೆ ವಾಪಸ್‌ ಕರೆತರಲಾಗಿದೆ.

2014ರಲ್ಲಿ ಗಗನಯಾನಿಗಳು ಪ್ರಯಾಣಿಸಲಿರುವ ಗಗನ ನೌಕೆಯ (Crew Module Atmospheric Re-entry Experiment - CARE) ಮರಳಿ ಪಡೆದುಕೊಳ್ಳುವ ಪರೀಕ್ಷೆಯನ್ನೂ ನಡೆಸಲಾಗಿದೆ. ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿ. (ಎಚ್‌ಎಎಲ್‌) ನಿರ್ಮಿಸಿಕೊಟ್ಟ 3,745 ಕೆಜಿ ತೂಕದ ಈ ಡಮ್ಮಿ ನೌಕೆಯನ್ನು ಬಾಹ್ಯಾಕಾಶಕ್ಕೆ ‘ಜಿಎಸ್‌ಎಲ್‌ವಿ ಮಾರ್ಕ್‌- 3’ ಮೂಲಕ ಉಡಾವಣೆ ಮಾಡಿ ಬಂಗಾಳ ಕೊಲ್ಲಿಯಲ್ಲಿ ಬೀಳುವಂತೆ ಮಾಡಿ ಮರಳಿ ಪಡೆಯಲಾಗಿದೆ.

ಗಗನಯಾನಿಗಳು ಪ್ರಯಾಣಿಸಲಿರುವ ನೌಕೆಯ ಭಾಗ ಬಂಗಾಳ ಕೊಲ್ಲಿಯಲ್ಲಿ ಬಿದ್ದಾಗ.
ಗಗನಯಾನಿಗಳು ಪ್ರಯಾಣಿಸಲಿರುವ ನೌಕೆಯ ಭಾಗ ಬಂಗಾಳ ಕೊಲ್ಲಿಯಲ್ಲಿ ಬಿದ್ದಾಗ.
/ಇಸ್ರೋ

ಇದರ ಜತೆಗೆ ಗಗನಯಾನಿಗಳು ಬಳಸಲಿರುವ ಸ್ಪೇಸ್‌ಸೂಟ್‌ (ಬಾಹ್ಯಾಕಾಶ ಉಡುಗೆ)ಗಳ ತಯಾರಿಯಲ್ಲಿಯೂ ಇಸ್ರೋ ಯಶಸ್ವಿಯಾಗಿದೆ. ಇಷ್ಟೇ ಅಲ್ಲದೇ ಜುಲೈ 5ರಂದು ಗಗನಯಾನಕ್ಕೆ ಸಂಬಂಧಿಸಿದಂತೆ ಇಸ್ರೋ ಪ್ಯಾಟ್ (Pad Abort Test – PAT) ಮಾದರಿಯ ವಿಶೇಷ ಪ್ರಯೋಗವನ್ನೂ ನಡೆಸಿದೆ. ಒಂದೊಮ್ಮೆ ರಾಕೆಟ್‌ ಉಡಾವಣೆ ವೇಳೆ ವಿಫಲವಾದರೆ ಗಗನಯಾತ್ರಿಗಳಿರುವ 12.5 ಟನ್‌ ತೂಕದ ಗಗನ ನೌಕೆ ವಾಹಕದಿಂದ ಬೇರ್ಪಡಲಿದೆ. ಈ ಮೂಲಕ ಗಗನಯಾತ್ರಿಗಳನ್ನು ರಕ್ಷಣೆ ಮಾಡಬಹುದಾಗಿದೆ.

ಇಂಥಹದ್ದೊಂದು ಗಗನಯಾತ್ರೆಯ ಬಗ್ಗೆ ಇಸ್ರೋ ಈ ಹಿಂದೆಯೇ ಚಿಂತನೆ ನಡೆಸಿತ್ತಾದರೂ ಮಾನವ ಸಹಿತ ಬಾಹ್ಯಾಕಾಶ ಯಾತ್ರೆಗೆ ಬೇಕಾದ ಸಾಮರ್ಥ್ಯದ ಉಡಾವಣಾ ವಾಹಕ ಇಸ್ರೋ ಬಳಿಯಲ್ಲಿ ಇರಲಿಲ್ಲ. ಈ ಹಿನ್ನಲೆಯಲ್ಲಿ ಇದರ ಅಭಿವೃದ್ಧಿ ನಡೆಯುತ್ತಿತ್ತು. ಇದೀಗ ಇಸ್ರೋ ಶಕ್ತಿಶಾಲಿ ‘ಜಿಎಸ್‌ಎಲ್‌ವಿ ಮಾರ್ಕ್‌-3’ ಸರಣಿಯ ಉಡಾವಣಾ ವಾಹಕವನ್ನು ಅಭಿವೃದ್ಧಿಪಡಿಸಿದ್ದು ಗಗನಯಾತ್ರಿಗಳನ್ನು ಹೊತ್ತೊಯ್ಯವ ಸಾಮರ್ಥ್ಯ ಹೊಂದಿದೆ.

ಜಿಎಸ್‌ಎಲ್‌ವಿ ಮಾರ್ಕ್‌- 3 ಉಪಗ್ರಹ ಉಡಾವಣಾ ವಾಹಕ.
ಜಿಎಸ್‌ಎಲ್‌ವಿ ಮಾರ್ಕ್‌- 3 ಉಪಗ್ರಹ ಉಡಾವಣಾ ವಾಹಕ.
/ಇಸ್ರೋ

ಇಸ್ರೋ ತಾಂತ್ರಿಕ ಕೆಲಸಗಳನ್ನು ಪೂರೈಸಲಿದ್ದರೆ, ಗಗನಯಾತ್ರೆಗೆ ತೆರಳಲಿರುವ ಸದಸ್ಯರನ್ನು ಭಾರತೀಯ ವಾಯು ಸೇನೆ ಸಜ್ಜುಗೊಳಿಸಲಿದೆ. ಮತ್ತು ಬಹುಶಃ ರಷ್ಯಾ ಹಾಗೂ ಫ್ರಾನ್ಸ್‌ ಇವರಿಗೆ ಬೇಕಾದ ಅಗತ್ಯ ತರಬೇತಿಗಳನ್ನು ನೀಡಲಿದೆ. ಇದಕ್ಕಾಗಿ ಎರಡೂ ದೇಶಗಳ ಜತೆ ಭಾರತ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ.

ಸದ್ಯದ ಲೆಕ್ಕಾಚಾರಗಳ ಪ್ರಕಾರ, ಎಲ್ಲವೂ ಅಂದುಕೊಂಡಂತೆ ಸಾಗಿದರೆ 2022ರ ವೇಳೆಗೆ ಮೂವರು ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳಿ ವಾಪಸಾಗಲಿದ್ದಾರೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿರುವ ರಾಕೆಟ್‌ ಮೂವರು ಭಾರತೀಯರನ್ನು 400 ಕಿಲೋಮೀಟರ್‌ ಎತ್ತರದ ಕಕ್ಷೆಗೆ ಕೊಂಡೊಯ್ಯಲಿದೆ. ಅಲ್ಲಿ ಕನಿಷ್ಠ 7 ದಿನಗಳನ್ನು ಕಳೆಯಲಿರುವ ಗಗನಯಾನಿಗಳು ನಂತರ ಭೂಮಿಗೆ ವಾಪಸಾಗಲಿದ್ದಾರೆ.

ಈ ಕುರಿತು ಮಾತನಾಡಿರುವ ಇಸ್ರೋ ಅಧ್ಯಕ್ಷ ಡಾ. ಕೆ. ಶಿವನ್‌, “ಇಸ್ರೋದ ವೇಳಾಪಟ್ಟಿ ಬಿಗಿಯಾಗಿದೆ. ಹೀಗಿದ್ದೂ ಇಸ್ರೋ ಇದನ್ನು ಸಾಧಿಸಲಿದೆ,” ಎಂದಿದ್ದಾರೆ. ಇದೀಗ ಭಾರತೀಯರು ಕುತೂಹಲದಿಂದ ಇಸ್ರೋದ ಗಗನಯಾನವನ್ನು ಎದುರು ನೋಡುತ್ತಿದ್ದಾರೆ. ಆದರೆ 2022ರವರೆಗೆ ಇದಕ್ಕಾಗಿ ಕಾಯಲೇಬೇಕಾಗಿದೆ.