samachara
www.samachara.com
ಮೋದಿ, ಶಿವಲಿಂಗದ ಮೇಲಿರುವ ಚೇಳು ಎಂದಿದ್ದ ಝಡಾಫಿಯಾ; ಈಗ ಉತ್ತರ ಪ್ರದೇಶ ಉಸ್ತುವಾರಿ!
COVER STORY

ಮೋದಿ, ಶಿವಲಿಂಗದ ಮೇಲಿರುವ ಚೇಳು ಎಂದಿದ್ದ ಝಡಾಫಿಯಾ; ಈಗ ಉತ್ತರ ಪ್ರದೇಶ ಉಸ್ತುವಾರಿ!

2002ರಲ್ಲಿ ಗುಜರಾತ್‌ ಗಲಭೆ ನಡೆಯುವ ಸಂದರ್ಭದಲ್ಲಿ ರಾಜ್ಯದ ಗೃಹ ಖಾತೆಯನ್ನು ನಿರ್ವಹಿಸುತ್ತಿದ್ದವರು ಝಡಾಫಿಯಾ. ಮುಂದೆ 2004ರಲ್ಲಿ ಝಡಾಫಿಯಾ ಜಾಗಕ್ಕೆ ಅಮಿತ್‌ ಶಾ ಅವರನ್ನು ಕರೆ ತರಲಾಯಿತು.

ಹಿಂದಿ ಭಾಷಿಕ ಮೂರು ರಾಜ್ಯಗಳಲ್ಲಿ ಬಿಜೆಪಿ ಸೋತ ನಂತರ ಕಂಡು ಬಂದು ಹೊಸ ಬೆಳವಣಿಗೆ ಇದು. ಒಂದು ಕಾಲದಲ್ಲಿ ಮೋದಿಯ ಕಡು ಟೀಕಾಕಾರರಾಗಿದ್ದ, ಮೋದಿಯನ್ನು ‘ಶಿವಲಿಂಗದ ಮೇಲಿನ ಚೇಳು’ ಎಂದು ಕರೆದಿದ್ದ ಹಿರಿಯ ರಾಜಕಾರಣಿ ಗೋರ್ಧನ್ ಝಡಾಫಿಯಾ ಬಿಜೆಪಿಗೆ ವಾಪಸ್‌ ಬಂದಿದ್ದಾರೆ. ಭರ್ಜರಿ ಮರು ಪ್ರವೇಶ ಮಾಡಿರುವ ಅವರಿಗೆ ಉತ್ತರ ಪ್ರದೇಶದ ಚುನಾವಣಾ ಹೊಣೆಗಾರಿಕೆ ನೀಡಲಾಗಿದೆ.

ಯಾರು ಈ ಝಡಾಫಿಯಾ?

ಝಡಾಫಿಯಾ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಇಬ್ಬರಿಗೂ ಸಹೋದ್ಯೋಗಿಯಾಗಿದ್ದವರು. ವಿಶ್ವ ಹಿಂದೂ ಪರಿಷತ್‌ನಲ್ಲಿದ್ದ ಇವರು ಇದರ ನಾಯಕ ಪ್ರವೀಣ್‌ ತೋಗಾಡಿಯಾ ಆಪ್ತರಾಗಿದ್ದರು. 2002ರಲ್ಲಿ ಗುಜರಾತ್‌ ಗಲಭೆ ನಡೆಯುವ ಸಂದರ್ಭದಲ್ಲಿ ರಾಜ್ಯದ ಗೃಹ ಖಾತೆಯನ್ನು ನಿರ್ವಹಿಸುತ್ತಿದ್ದರು. ಮೂರು ದಿನಗಳ ಗಲಭೆ ವೇಳೆ ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ ಎಂಬ ಟೀಕೆಗೆ ಗುರಿಯಾಗಿದ್ದವರು. ಈ ಮೂರು ದಿನಗಳ ಅವಧಿಯಲ್ಲಿ ಸಾವಿರಕ್ಕೂ ಹೆಚ್ಚು ಜನರು ದೊಂಬಿ, ಘರ್ಷಣೆಯಲ್ಲಿ ಅಸುನೀಗಿದ್ದರು. ಅದರಲ್ಲಿ ಹೆಚ್ಚಿವನರು ಮುಸ್ಲಿಮರಾಗಿದ್ದರು.

ಮುಂದೆ 2004ರಲ್ಲಿ ಝಡಾಫಿಯಾ ಜಾಗಕ್ಕೆ ಅಮಿತ್‌ ಶಾ ಅವರನ್ನು ಕರೆ ತರಲಾಯಿತು. ಅಲ್ಲಿಂದ ಝಡಾಫಿಯಾ ಮೋದಿ ಮತ್ತು ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದರು. 2007ರಲ್ಲಿ ತಮ್ಮದೇ ‘ಮಹಾಗುಜರಾತ್‌ ಜನತಾ ಪಾರ್ಟಿ’ಯನ್ನು ಹುಟ್ಟುಹಾಕಿ ಬಿಜೆಪಿ ವಿರುದ್ಧ ಕಣಕ್ಕಿಳಿದಿದ್ದರು.

ಇದರ ನಡುವೆ 2010ರಲ್ಲಿ ‘ನ್ಯೂಸ್‌ ಎಕ್ಸ್‌’ಗೆ ಪ್ರತಿಕ್ರಿಯೆ ನೀಡಿದ್ದ ಝಡಾಫಿಯಾ ‘ಆರ್‌ಎಸ್‌ಎಸ್‌ ಪಾಲಿಗೆ ಮೋದಿ ಶಿವಲಿಂಗದ ಮೇಲಿನ ಚೇಳಿದ್ದಂತೆ’ ಎಂದು ವಿಶ್ಲೇಷಿಸಿದ್ದರು. ಚೇಳನ್ನು ಕೈಯಿಂದ ಮುಟ್ಟಿ ತೆಗೆಯಲೂ ಸಾಧ್ಯವಿಲ್ಲ, ಹಾನಿ ಮಾಡಲು ಶಿವಲಿಂಗದತ್ತ ಯಾವುದನ್ನೂ ಎಸೆಯಲು ಸಾಧ್ಯವಿಲ್ಲ ಎಂದು ಸಂಬಂಧದ ಸಂಕೀರ್ಣತೆಯನ್ನು ಕಟ್ಟಿಕೊಟ್ಟಿದ್ದರು.

ಹೀಗಿರುವಾಗಲೇ 2012ರ ಗುಜರಾತ್‌ ಚುನಾವಣೆ ಸಂದರ್ಭದಲ್ಲಿ ಮತ್ತೋರ್ವ ಮೋದಿ ವಿರೋಧಿ, ಗುಜರಾತ್‌ ಬಿಜೆಪಿಯ ಹಿರಿಯ ನಾಯಕ ಕೇಶುಭಾಯ್‌ ಪಟೇಲ್‌ ‘ಗುಜರಾತ್‌ ಪರಿವರ್ತನ್‌ ಪಾರ್ಟಿ (ಜಿಪಿಪಿ)’ ಹುಟ್ಟುಹಾಕಿದ್ದರು. ಈ ಸಂದರ್ಭದಲ್ಲಿ ತಮ್ಮ ಪಕ್ಷವನ್ನು ಅದರೊಂದಿಗೆ ವಿಲೀನಗೊಳಿಸಿ ಸಮಾನ ವೈರಿಯ ವಿರುದ್ಧ ಸಂಘಟಿತ ಹೋರಾಟಕ್ಕೆ ಇಳಿದಿದ್ದರು. ಆದರೆ ಈ ಚುನಾವಣೆಯಲ್ಲಿ ಜಿಪಿಪಿ ಕೇವಲ ಎರಡು ಸ್ಥಾನ ಗಳಿಸಲಷ್ಟೇ ಶಕ್ತವಾಗಿತ್ತು. ಜತೆಗೆ ಕೇಶುಭಾಯ್‌ ಪಟೇಲ್ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿತ್ತು.

ಕೊನೆಗೆ ಅನಿವಾರ್ಯವಾಗಿ ಅವರು 2014ರ ಲೋಕಸಭೆ ಚುನಾವಣೆ ಸಮಯದಲ್ಲಿ ಬಿಜೆಪಿಗೆ ವಾಪಸಾದರು. ಇದರಿಂದ ಚುನಾವಣಾ ಪ್ರಚಾರಕ್ಕೆ ಮೊದಲು ಮೋದಿಗೆ ವಿರೋಧಿ ಪಾಳಯದ ಒಂದು ತಲೆ ನೋವು ಕಡಿಮೆಯಾಗಿತ್ತು. ಹೀಗಾಗಿ ಝಡಾಫಿಯಾಗೆ ಬಿಜೆಪಿ ಕಿಸಾನ್‌ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿ 2015ರಲ್ಲಿ ಪುನರ್‌ವಸತಿ ಕಲ್ಪಿಸಲಾಯಿತು. ಅದರಾಚೆಗೆ ಅವರು ಪಕ್ಷದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದು ಎಲ್ಲೂ ಕಾಣಿಸಿಲ್ಲ.

ಬದಲಿಗೆ ಝಡಾಫಿಯಾ ಹಾರ್ದಿಕ್‌ ಪಟೇಲ್‌ರನ್ನು ಮೋದಿ ವಿರುದ್ಧ ಎತ್ತಿ ಕಟ್ಟಿದರು ಎಂಬ ಆರೋಪವಿದೆ. ಸ್ವತಃ ಪಟೇಲ್‌ ಸಮುದಾಯದ ಪ್ರಬಲ ನಾಯಕರಾಗಿದ್ದ ಝಡಾಫಿಯಾ ಎಳಸು ಹುಡುಗ ಹಾರ್ದಿಕ್‌ ಹಿಂದೆ ನಿಂತು ಪಾಟೀದಾರ್‌ ಮೀಸಲಾತಿ ಆಂದೋಲನದ ಕಿಚ್ಚು ಹಚ್ಚಿದರು ಎಂಬ ಅನುಮಾನಗಳು ಇವತ್ತಿಗೂ ಇವೆ. ಮುಂದೆ ಹಾರ್ದಿಕ್‌ 2017ರ ಗುಜರಾತ್‌ ಚುನಾವಣೆ ಕಾಲದಲ್ಲಿ ಹೋದಲ್ಲಿ ಬಂದಲ್ಲಿ ಮೋದಿಗೆ ಎಡತಾಕುತ್ತಿದ್ದರು.

ಇಂತಹದ್ದೊಂದು ಹಿನ್ನೆಲೆಯ ವ್ಯಕ್ತಿಯನ್ನೀಗ 80 ಲೋಕಸಭಾ ಸ್ಥಾನಗಳಿರುವ, ದೆಹಲಿ ರಾಜಕಾರಣದ ಕಿಂಗ್‌ ಮೇಕರ್‌ ಉತ್ತರ ಪ್ರದೇಶದ ಚುನಾವಣಾ ಉಸ್ತುವಾರಿಯನ್ನಾಗಿ ಅಮಿತ್‌ ಶಾ ನೇಮಿಸಿದ್ದಾರೆ. ಚುನಾವಣಾ ಸಿದ್ಧತೆಯಲ್ಲಿ ಅವರಿಗೆ ದುಷ್ಯಂತ್‌ ಗೌತಮ್‌ ಮತ್ತು ನರೋತ್ತಮ್‌ ಮಿಶ್ರಾ ಸಾಥ್‌ ನೀಡಲಿದ್ದಾರೆ. ಶಾ ಅವರ ಈ ನಿರ್ಧಾರ ಸ್ವತಃ ಬಿಜೆಪಿಯೊಳಗಿನ ನಾಯಕರ ಹುಬ್ಬೇರಿಸಿದೆ.

ಇದು, ಮೂರು ರಾಜ್ಯಗಳ ಸೋಲಿನ ನಂತರ ಬಿಹಾರದಲ್ಲಿ ಸೀಟು ಹಂಚಿಕೆ ಸಂಬಂಧ ರಾಮ್‌ ವಿಲಾಸ್‌ ಪಾಸ್ವಾನ್‌ ಮುಂದೆ ಮಂಡಿಯೂರಿದ್ದ ಅಮಿತ್‌ ಶಾ ಅವರ ಎರಡನೇ ಅನಿವಾರ್ಯ ನಡೆ ಎಂಬ ಚರ್ಚೆಗಳೂ ನಡೆಯುತ್ತಿವೆ. ಒಟ್ಟಿನಲ್ಲಿ ಮೋದಿ-ಶಾ ಜೋಡಿ ಹಿಂದಿನ ಗತ್ತು ಗೈರತ್ತನ್ನು ಕಳೆದುಕೊಂಡಿದೆ. ಅದಕ್ಕೆ ಝಡಾಫಿಯಾ ನೇಮಕ ಮತ್ತು ಈ ಕೆಳಗಿನ ವಿಡಿಯೋವೇ ಸಾಕ್ಷಿ.