samachara
www.samachara.com
ಗೆದ್ದಿದ್ದು ಕೆಜಿಎಫ್‌, ಸೋತಿದ್ದು ಟಿವಿ9: ಇದು ವರ್ಷಾಂತ್ಯದಲ್ಲಿ ‘ಕಮರ್ಷಿಯಲ್‌’ ಸಿನೆಮಾ ನೀಡಿದ ಏಟು!
COVER STORY

ಗೆದ್ದಿದ್ದು ಕೆಜಿಎಫ್‌, ಸೋತಿದ್ದು ಟಿವಿ9: ಇದು ವರ್ಷಾಂತ್ಯದಲ್ಲಿ ‘ಕಮರ್ಷಿಯಲ್‌’ ಸಿನೆಮಾ ನೀಡಿದ ಏಟು!

ಕರ್ನಾಟಕ ಹಾಗೂ ಅದರ ಅಸ್ಮಿತೆ ಸ್ಯಾಂಡಲ್‌ವುಡ್ ಸಿನೆಮಾಗಳಲ್ಲೂ ಅಡಗಿರುತ್ತವೆ ಮತ್ತು ಕೆಲವೊಮ್ಮೆ ಕಮರ್ಶಿಯಲ್ ಆಚೆಗೂ ಸಂಪಾದಕೀಯ ತೀರ್ಮಾನಗಳು ತೆಗೆದುಕೊಳ್ಳಬೇಕಾಗುತ್ತದೆ...

ಕನ್ನಡ ಸಿನೆಮಾವೊಂದರ ಕುರಿತು ಅಪರೂಪದ ಕಂಪನಗಳನ್ನು ಸಮಾಜದಲ್ಲಿ ಎಬ್ಬಿಸಿದ ಕೆಜಿಎಫ್ ಬಿಡುಗಡೆಗೊಂಡು ನಾಳೆಗೆ ಒಂದು ವಾರ. ಸಮೂಹ ಮಾಧ್ಯಮದ 'ಕಲಾಕೃತಿ'ಯೊಂದರ ಕಮರ್ಷಿಯಲ್ ಸಾಧನೆಯನ್ನು ಅಳೆಯಲು ಇದು ಸರಿಯಾದ ಸಮಯ. ಜತೆಗೆ, ಕೆಜಿಎಫ್ ಬಿಡುಗಡೆಗೆ ಮುನ್ನ ಹಾಗೂ ನಂತರ ಸೃಷ್ಟಿಯಾದ ವಾದ ಸರಣಿಗಳನ್ನು ತೂಕಕ್ಕೆ ಹಾಕಲು ಕೂಡ.

ಸರಿಯಾಗಿ ಒಂದು ವಾರದ ಹಿಂದೆ, 'ಸಮಾಚಾರ' ಕೆಜಿಎಫ್ ಸಿನೆಮಾವನ್ನು ಇಟ್ಟುಕೊಂಡು 'ಕೆಜಿಎಫ್‌ ಅಥವಾ ಯಶ್‌: ಸ್ಯಾಂಡಲ್‌ವುಡ್‌ಗೆ ತುರ್ತಾಗಿ ಬೇಕಿರುವುದು ‘ಗಡಿ ದಾಟಿಸುವ ಅಂಬಿಗ’!' ಎಂಬ ಲೇಖನವನ್ನು ಪ್ರಕಟಿಸಿತ್ತು. ಈ ಕಾಲಘಟ್ಟದಲ್ಲಿ ಕನ್ನಡ ಸಿನೆಮಾವೊಂದು ಗಣತಂತ್ರ ವ್ಯವಸ್ಥೆಯಲ್ಲಿ ಇತರೆ ಕಡೆಗಳಿಗೂ ಪಸರಿಸುವ ಪ್ರಕ್ರಿಯೆಗೆ ಇದು ನಾಂದಿ ಹಾಡಬೇಕಿದೆ. ಅಂತಹ ಸಮಯದಲ್ಲಿ ಬಿಡುಗಡೆಗೊಳ್ಳುತ್ತಿರುವ ಕೆಜಿಎಫ್ ಅಥವಾ ಅದರ ನಾಯಕ ಯಶ್ ಇಂತಹದೊಂದು ನಿರೀಕ್ಷೆಯನ್ನು ಸಾಧ್ಯವಾಗಿಸುತ್ತಾರಾ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದೆವು. ಮತ್ತದಕ್ಕೆ ಉತ್ತರ ಈ ವರ್ಷಾಂತ್ಯಕ್ಕೆ ಸಿಗಲಿದೆ ಎಂದಿದ್ದೆವು.

ಬೆಳ್ಳಿ ಪರದೆಯ ಮರೆಯಲ್ಲಿ:

ಸಮೂಹ ಮಾಧ್ಯಮಗಳ ಪೈಕಿ ಅತ್ಯಂತ ಹೆಚ್ಚು ಜನರನ್ನು ತಲುಪುವ ಶಕ್ತಿ ಇರುವುದು ಸಿನೆಮಾಗಳಿಗೆ. ಇದು ಅವುಗಳ ಶಕ್ತಿ ಹೇಗೋ, ಹಾಗೆಯೇ ಮಿತಿಯೂ ಕೂಡ. ಶಕ್ತಿ ಯಾಕೆಂದರೆ, ಒಂದು ಪತ್ರಿಕೆ, ಟಿವಿ, ರೇಡಿಯೋ ಪ್ರಭಾವಿಸಲು ಸಾಧ್ಯವಾಗದ ವರ್ಗವನ್ನೂ ಸಿನೆಮಾಗಳು ತಲುಪುತ್ತವೆ. ಆದರೆ ಹೀಗೆ ತಲುಪಬೇಕು ಎಂಬ ಕಾರಣಕ್ಕಾಗಿಯೇ ಅವು 'ಕರ್ಮರ್ಶಿಯಲ್' ಸೂತ್ರವೊಂದನ್ನು ಹೆಣೆದುಕೊಂಡಿವೆ; ಅದು ಸಿನೆಮಾ ಕ್ಷೇತ್ರದ ಮಿತಿಯೂ ಆಗಿದೆ. ಈ ಮಾತುಗಳಿಗೆ ಹೊಚ್ಚ ಹೊಸ ಸಾಕ್ಷಿಯನ್ನು ಕೆಜಿಎಫ್ ಸಿನೆಮಾ ನೀಡಿದೆ.

ಅವತ್ತು ಗುರುವಾರ; ಕೆಜಿಎಫ್ ಸಿನೆಮಾ ಬಿಡುಗಡೆಗೆ 12 ಗಂಟೆ ಬಾಕಿ ಇತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಿನೆಮಾಗೆ ನ್ಯಾಯಾಲಯದ ತಡೆಯಾಜ್ಞೆ ವಿಚಾರ ಹೊರಬಿತ್ತು. ನಿಧಾನವಾಗಿ ನ್ಯೂಸ್ ಚಾನಲ್‌ಗಳಲ್ಲಿ ಕೆಜಿಎಫ್ ಸಿನೆಮಾ ಕವರೇಜ್ ಆರಂಭಗೊಳ್ಳಲು ಇದು ಕಾರಣವಾಯಿತು. ಅಲ್ಲಿಂದ ಆಚೆಗೆ ಮುಂದಿನ 48 ಗಂಟೆಗಳಲ್ಲಿ ಕೆಜಿಎಫ್ ಸುತ್ತ 'ಸಾಮಾಜಿಕ ಕಂಪನ' ಕಾಣಲು ಶುರುವಾಯಿತು. ಸಾಮಾನ್ಯ ಜನ, ಬುದ್ದಿವಂತ ಜನ ಹೀಗೆ ವರ್ಗ ಮೀರಿ ಸಿನೆಮಾ ನೋಡಿಕೊಂಡು ಬಂದು ಅಭಿಪ್ರಾಯ ಹಂಚಿಕೊಳ್ಳಲು ಶುರುಮಾಡಿದರು. ಹೋಲಿಕೆಗಳನ್ನು ಮುಂದಿಟ್ಟರು. ಅಂತಿಮವಾಗಿ ಚಿತ್ರದ ಪ್ರತಿ ಫೇಮು (ಅತಿಶಯೋಕ್ತಿ ಅನ್ನಿಸಬಹುದು, ಕ್ಷಮಿಸಿ) ನಾನಾ ಆಯಾಮಗಳಲ್ಲಿ ಚರ್ಚೆಗೆ ಆಹಾರವಾದವು, ಅಭಿಪ್ರಾಯ- ಭಿನ್ನಾಭಿಪ್ರಾಯಗಳನ್ನು ಹುಟ್ಟು ಹಾಕಿದವು. ಕೆಲವು ಹಿರಿಯರು ರೀಮುಗಟ್ಟಲೆ ಪೇಪರ್‌ ನೆನಪಿಸಿಕೊಂಡು ಸಿನಿಕರಾಗಿ ದೂರ ಉಳಿದರು.

ಸಾಮಾನ್ಯವಾಗಿ ಚಲನ ಚಿತ್ರಗಳು ಇಂತಹದೊಂದು ಸಾಮಾಜಿಕ ಚರ್ಚೆಯನ್ನು ಆಗಾಗ್ಗೆ ಹುಟ್ಟು ಹಾಕುತ್ತಿರುತ್ತವೆ. "ಇತ್ತೀಚಿನ ವರ್ಷಗಳಲ್ಲಿ ಒಂದು ಸಿನೆಮಾ ಇಟ್ಟುಕೊಂಡು ಇಷ್ಟು ಚರ್ಚೆ ನಡೆದಿದ್ದು ಇದೇ ಮೊದಲು,'' ಎನ್ನುತ್ತಾರೆ ಹಿರಿಯ ಸಿನೆಮಾ ಪತ್ರಕರ್ತ ಶರಣು ಹುಲ್ಲೂರು. ಇದು ಒಂದು ಮಟ್ಟಿಗೆ ಸತ್ಯ ಕೂಡ. ಅಂತಿಮವಾಗಿ ಈ ಚರ್ಚೆಯಿಂದ ನಿರ್ಮಾಪಕನಿಗೆ ಲಾಭವಾಯಿತಾ ಎಂದು ಪರೀಕ್ಷಿಸಿ ನೋಡಲಾಗುತ್ತದೆ. "ನಿರ್ಮಾಪಕರೇ ಹೇಳಿಕೊಂಡ ಪ್ರಕಾರ ಕೆಜಿಎಫ್ ಈವರೆಗೆ 60-70 ಕೋಟಿ ಬಾಕ್ಸ್‌ ಆಫೀಸ್ ಕಲೆಕ್ಷನ್ ಮಾಡಿದೆ. ಕರ್ನಾಟಕ ಮಾರುಕಟ್ಟೆಯನ್ನು ದಾಟಿ ಹಣವನ್ನು ಬಾಚಿಕೊಂಡಿದೆ. ಒಂದು ಅರ್ಥದಲ್ಲಿ ಸಕ್ಸಸ್ ಅನ್ನಬಹುದು. ಸಿನೆಮಾಗೆ ಖರ್ಚಾಗಿದ್ದು 40 ಕೋಟಿ. ಇನ್ನೊಂದು 10 ಕೋಟಿ ಪಬ್ಲಿಸಿಟಿಗೆ ಖರ್ಚು ಮಾಡಿರಬಹುದು,'' ಎಂದು ಕೆಜಿಎಫ್ ಲೆಕ್ಕಾಚಾರವನ್ನು ಮುಂದಿಡುತ್ತಾರೆ ಶರಣು. ಇನ್ನೊಂದು ಮೂಲದ ಪ್ರಕಾರ ಒಟ್ಟಾರೆ ಎಲ್ಲಾ ಭಾಷೆಗಳಲ್ಲೂ ಸಿನೆಮಾ ಪಬ್ಲಿಸಿಟಿಗೆ ಖರ್ಚು ಮಾಡಿದ್ದು ಸುಮಾರು 22 ಕೋಟಿ.

ಅವರೊಬ್ಬರು ಎಡವಟ್ಟು ಮಾಡಿಕೊಂಡರು:

ಹೀಗೆ, ಹೊರಗೆ ಇಷ್ಟೆಲ್ಲಾ ನಡೆಯುತ್ತಿರಬೇಕಾದರೆ ಅತ್ತ ಕನ್ನಡ ನಂಬರ್ 1 ವಾಹಿನಿ ‘ಟಿವಿ 9 ಕರ್ನಾಟಕ’ದಲ್ಲಿ ಮಾತ್ರ ಕೆಜಿಎಫ್ ಕುರಿತು ಬೇರೆಯದೇ ಆಲೋಚನೆ ಓಡುತ್ತಿತ್ತು. ಕೆಜಿಎಫ್ ವಿಚಾರದಲ್ಲಿ ಯಾವುದೇ ಸುದ್ದಿಯನ್ನು ಮಾಡದಂತೆ, ಒಂದು ಹೆಜ್ಜೆ ಮುಂದೆ ಹೋಗಿ ಚಿತ್ರದ ಬಗ್ಗೆ 'ನೆಗೆಟಿಚ್ ಕವರೇಜ್' ಮಾಡುವಂತೆ ವಾಹಿನಿಯ ಸಂಪಾದಕೀಯ ತೀರ್ಮಾನಗಳನ್ನು ತೆಗೆದುಕೊಳ್ಳುವ ಉತ್ತರ ಭಾರತ ಮೂಲದ ಮಹೇಂದ್ರ ಮಿಶ್ರಾ ಫರ್ಮಾನು ಹೊರಡಿಸಿದ್ದರು. ಪರಿಣಾಮ, ಬಹುತೇಕ ಉಳಿದ ಸುದ್ದಿ ವಾಹಿನಿಗಳು ಅಗತ್ಯಕ್ಕಿಂತ ಹೆಚ್ಚೇ ಕಟೌಟ್ ಆರಾಧನೆಯಲ್ಲಿ ಮುಳುಗಿದ್ದಾಗ, ಟಿವಿ 9 ಕರ್ನಾಟಕ ‘ಎನ್‌ಟಿಆರ್‌’ ತೆಲುಗು ಸಿನೆಮಾ ಕುರಿತು ಸುದ್ದಿ ಬಿತ್ತರಿಸಲು ಶುರುಮಾಡಿತು.

"ಮೊದಲೇ ಟಿವಿ9 ಕರ್ನಾಟಕಕ್ಕೆ ತೆಲುಗು ಸಿನೆಮಾ ಪ್ರಮೋಟರ್ಸ್‌ ಎಂಬ ಆರೋಪ ಇತ್ತು. ಜನ ಕೆಜಿಎಫ್ ಕುರಿತು ಕುತೂಹಲದಿಂದ ಇದ್ದಾಗ ತೆಲುಗು ಸಿನಿಮಾ ಕುರಿತು ಸುದ್ದಿ ಮಾಡಿದ್ದು ಅತ್ಯಂತ ತಪ್ಪು ನಿರ್ಧಾರ. ನಾನು ಗಮನಿಸಿದಂತೆ ಈ ಹತ್ತು ವರ್ಷಗಳಲ್ಲಿ ಇದು ಟಿವಿ 9 ಕರ್ನಾಟಕ ತೆಗೆದುಕೊಂಡ ಅಪರೂಪದ ಕೆಟ್ಟ ಸಂಪಾದಕೀಯ ತೀರ್ಮಾನ,'' ಎನ್ನುತ್ತಾರೆ ಪತ್ರಿಕೋದ್ಯಮ ಪ್ರಾಧ್ಯಾಪಕರೊಬ್ಬರು.

ಕರ್ನಾಟಕ ಹಾಗೂ ಅದರ ಅಸ್ಮಿತೆ ಸ್ಯಾಂಡಲ್‌ವುಡ್ ಸಿನೆಮಾಗಳಲ್ಲೂ ಅಡಗಿರುತ್ತವೆ ಮತ್ತು ಕೆಲವೊಮ್ಮೆ ಕಮರ್ಶಿಯಲ್ ಆಚೆಗೂ ಸಂಪಾದಕೀಯ ತೀರ್ಮಾನಗಳು ತೆಗೆದುಕೊಳ್ಳಬೇಕಾಗುತ್ತದೆ; ಎಡವಟ್ಟಾದರೆ ಏನಾಗುತ್ತದೆ ಎಂಬುದಕ್ಕೆ ಸದ್ಯ ಟಿವಿ 9 ಕರ್ನಾಟಕ ಎದುರಿಸುತ್ತಿರುವ ಟ್ರಾಲ್‌ಗಳು ಸಾಕ್ಷಿ. ಎಲ್ಲಾ ಸಮಯದಲ್ಲೂ ಬಹುಸಂಖ್ಯಾತ ಧ್ವನಿಯ ಜತೆಗೆ ನಿಂತವರು ಅಪರೂಪಕ್ಕೆ ಪಾಪ್ಯುಲಿಸಂಗೆ ವಿರುದ್ಧವಾಗಿ ನಿಂತರೆ ಸಮಾಜ ಅಷ್ಟು ಸುಲಭಕ್ಕೆ ನಂಬುವುದಿಲ್ಲ ಎಂಬುದನ್ನು ವಾರದ ಟಿಆರ್‌ಪಿ ಎತ್ತಿ ತೋರಿಸುತ್ತಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬಿದ್ದ ಆಪ್‌ ರೇಟಿಂಗ್ ಜನರ ಪ್ರತಿರೋಧವನ್ನು ದಾಖಲಿಸಿದೆ.

ಆಪ್‌ ರೇಟಿಂಗ್‌ನಲ್ಲಿ ಒಂದು ಸ್ಟಾರ್ ನೀಡಿ ಆಂಧ್ರ ಮೂಲದ ಟಿವಿ 9 ಕರ್ನಾಟಕ ವಿರುದ್ಧ ಸೇಡು ತೀರಿಸಿಕೊಂಡ ಕನ್ನಡಿಗರು. 
ಆಪ್‌ ರೇಟಿಂಗ್‌ನಲ್ಲಿ ಒಂದು ಸ್ಟಾರ್ ನೀಡಿ ಆಂಧ್ರ ಮೂಲದ ಟಿವಿ 9 ಕರ್ನಾಟಕ ವಿರುದ್ಧ ಸೇಡು ತೀರಿಸಿಕೊಂಡ ಕನ್ನಡಿಗರು. 

"ಇದು ಯಶ್ ಮತ್ತು ಮಹೇಂದ್ರ ಮಿಶ್ರಾ ನಡುವಿನ ಇಗೋ ಕ್ಲಾಶ್‌ ಪರಿಣಾಮ,'' ಎನ್ನುತ್ತವೆ ವಾಹಿನಿಯ ಆತ್ಮೀಯ ಮೂಲಗಳು. "ಕೆಜಿಎಫ್ ವಿಚಾರದಲ್ಲಿ ಕೊನೆಯ ದಿನದವರೆಗೂ ಕಮರ್ಶಿಲ್ ವಿಚಾರದಲ್ಲಿ ಮಾತುಕತೆ ಎರಡೂ ಕಡೆಯಿಂದಲೂ ನಡೆಯಲಿಲ್ಲ. ಹೀಗಾಗಿ ಬಿಡುಗಡೆ ದಿನ ಮತ್ತು ಮಾರನೇ ದಿನ ನೆಗೆಟಿವ್ ಕವರೇಜ್‌ಗೆ ತೀರ್ಮಾನ ತೆಗೆದುಕೊಳ್ಳಲಾಯಿತು. ಇದಕ್ಕೆ ಸಂಪಾದಕೀಯ ವಿಭಾಗದ ಎಲ್ಲರ ಒಪ್ಪಿಗೆ ಇರಲಿಲ್ಲ,'' ಎನ್ನುತ್ತವೆ ಅವು. ಅಂತರಂಗದಲ್ಲಿ ಏನೇ ಇರಲಿ, ಅಂತಿಮವಾಗಿ ಕರ್ನಾಟಕ, ಕನ್ನಡವನ್ನು ಕೆಜಿಎಫ್ ನೆಪ ಇಟ್ಟುಕೊಂಡು 'ಗಡಿ ದಾಟಿಸುವ' ಪ್ರಕ್ರಿಯೆಯಿಂದ ಟಿವಿ 9 ಕರ್ನಾಟಕ ಹೊರಗುಳಿಯಿತು ಮತ್ತು ಸುದ್ದಿ ವಾಹಿನಿಗಳಿಗೆ ಪಾಠವೊಂದನ್ನು ಹೇಳಿಕೊಟ್ಟಿತು.

ಮುಂದೇನು?:

ಹೊಸ ತಲೆಮಾರಿನಲ್ಲಿ 'ಮುಂಗಾರು ಮಳೆ' ಕನ್ನಡ ಸಿನೆಮಾಗಳಿಂದ ದಕ್ಷಿಣ ಭಾರತದ ಸಿನೆಮಾ ಎಷ್ಟರ ಮಟ್ಟಿಗೆ ಹಣ ಹೊಳೆ ಹರಿಸಬಹುದು ಎಂಬುದನ್ನು ತೋರಿಸಿತ್ತು. ಅದರ ನಂತರ ದೊಡ್ಡ ಮಟ್ಟದ ಬಂಡವಾಳದ ಹೂಡಿಕೆ ಕಂಡಿದ್ದ ಕೆಜಿಎಫ್ ಕೂಡ ನಿಧಾನವಾಗಿ 100 ಕೋಟಿ ಕ್ಲಬ್ ಸೇರಿಕೊಳ್ಳುವ ಸಾಧ್ಯತೆ ತೋರಿಸಿದೆ. ಕಮರ್ಶಿಯಲ್ ಸಿನೆಮಾ ಎಂದರೆ ಬಾಕ್ಸಾಫೀಸ್ ಕಲೆಕ್ಷನ್ ಎಂಬ ಸೀಮಿತ ಆಲೋಚನೆ ಇರುವ ಈ ದಿನಗಳಲ್ಲಿ ಸಾಮಾನ್ಯ ಜನ ಮನೋರಂಜನೆ ಆಚೆಗೆ, ದೊಡ್ಡ ನಿರೀಕ್ಷೆಗಳನ್ನು ಇಂತಹ ಸಿನೆಮಾಗಳಿಂದಾಗಲಿ, ಅದರ ನಟ- ನಟಿಯರಿಂದಾಗಲೀ ಬಯಸುವುದು ಕಷ್ಟ. ಹೀಗಾಗಿ, ಡಾ. ಕೆ. ಪುಟ್ಟಸ್ವಾಮಿ ಅಭಿಪ್ರಾಯ ಪಟ್ಟಂತೆ, "ಎಲ್ಲ ಚಿತ್ರರಂಗದಲ್ಲಿರುವ ಅಪಸವ್ಯಗಳಂತೆ ಕನ್ನಡ ಚಿತ್ರರಂಗದಲ್ಲೂ ಇವೆ. ಸ್ವಲ್ಪ ಹೆಚ್ಚೇ ಇವೆ. ಅದಕ್ಕಿರುವ ಕಾರಣಗಳು ಹಲವಾರು. ಸೀಮಿತ ಮಾರುಕಟ್ಟೆ ಒಂದೆಡೆ. ಸೃಜನಶೀಲತೆ ಕೊರತೆ ಮತ್ತೊಂದೆಡೆ. ಇಂಥ ಸಂದರ್ಭದಲ್ಲಿ ಕೆಜಿಎಫ್ ಚಿತ್ರ ಅಳವಡಿಸಿಕೊಂಡಿರುವ ವಾಣಿಜ್ಯ ಸಾಧ್ಯತೆ ಚಿತ್ರರಂಗಕ್ಕೆ ಹೊಸ ದಾರಿಯೊಂದನ್ನು ತೆರೆಯಬಹುದು," ಎಂದು ಹಾರೈಸಬಹುದು.

ಇದೇ ವೇಳೆ, “ದೊಡ್ಡ ಕಮರ್ಷಿಯಲ್ ಸಿನೆಮಾಗಳು ಬರುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೂಡಿಕೆ ಹೆಚ್ಚಾಗುತ್ತದೆ. ಕನ್ನಡ ಮಾರುಕಟ್ಟೆ ಕೂಡ ವಿಸ್ತಾರಗೊಳ್ಳುತ್ತದೆ. ಕೆಜಿಎಫ್‌ನಿಂದ ಆಗಿರುವ ದೊಡ್ಡ ಲಾಭ ಇದು. ಆದರೆ, ಮಾರುಕಟ್ಟೆ ವಿಸ್ತರಣೆಗೊಳ್ಳುವ ಸಮಯದಲ್ಲಿ ಇಲ್ಲಿರುವ ಸಣ್ಣ ಸಿನೆಮಾಗಳ ಮಾರುಕಟ್ಟೆಯನ್ನೂ ಉಳಿಸಿಕೊಳ್ಳಬೇಕು. ದೊಡ್ಡದು ಸಣ್ಣದ್ದನ್ನು ನುಂಗುವಂತಾಗಬಾರದು,’’ ಎಂಬ ಎಚ್ಚರಿಕೆ ಮಾತುಗಳನ್ನಾಡುತ್ತಾರೆ ನಿರ್ದೇಶಕ, ನಟ ಬಿ. ಸುರೇಶ್.

ಕೆಜಿಎಫ್ ಸಿನೆಮಾದಲ್ಲಿ ‘ನಟ ಯಶ್ ಬಿಟ್ಟರೆ, ಹೆಚ್ಚು ಸಂಭಾವನೆ ಪಡೆದ ಜ್ಯೂನಿಯರ್ ಆರ್ಟಿಸ್ಟ್ ನಾನು’ ಎಂದು ತಮಾಷೆಯಾಗಿ ಹೇಳಿಕೊಳ್ಳುವ ಬೀಸು ಮಾತುಗಳು ‘ಗಡಿ ದಾಟಿಸುವ’ ಪ್ರಕ್ರಿಯೆ ಒಳಗೊಳ್ಳಬೇಕಾದ ಸೂಕ್ಷ್ಮತೆಗಳನ್ನು ತಿಳಿ ಹೇಳುತ್ತವೆ. “ಕೆಜಿಎಫ್ ಸಿನೆಮಾದಲ್ಲಿ ಮೈನಿಂಗ್ ಕತೆ ಭಾರತದ ಹಲವು ರಾಜ್ಯಗಳ ಸಮಸ್ಯೆಯೂ ಹೌದು. ಇಂತಹ ಒಂದು ಕತೆ ಗೆದ್ದರೆ, ಹೀಗೆ ಇಡೀ ದೇಶಕ್ಕೆ, ಪ್ಯಾನ್ ಇಂಡಿಯಾಗೆ ಪೂರಕವಾಗಿರುವ ಕತೆಗಳು ಇನ್ನಷ್ಟು ಹುಟ್ಟಿಕೊಳ್ಳುತ್ತವೆ. ಅದೇ ವೇಳೆ ನಮ್ಮ ಸ್ಥಳೀಯ ನೆಲೆಯ ಕತೆಗಳು ಉಸಿರಾಡಲು ಜಾಗ ಮಾಡಿಕೊಡಬೇಕಾಗುತ್ತದೆ,’’ ಎನ್ನುತ್ತಾರೆ ಅವರು.

ಅಂತಿಮವಾಗಿ ಕೆಜಿಎಫ್ ಕನ್ನಡದ ಗಡಿ ದಾಟಿದೆ. ಹೊಸ ಸಾಧ್ಯತೆಗಳನ್ನು ತೋರಿಸಿದೆ. ಅದೇ ವೇಳೆ, ಸ್ಥಳೀಯ ಸಿನೆಮಾ ರಂಗದ ಉಳಿವಿನ ಎಚ್ಚರಿಕೆಯನ್ನೂ ಮುಂದಿಟ್ಟಿದೆ. ಕನ್ನಡ ಚಿತ್ರರಂಗದ ಭವಿಷ್ಯದ ನಡೆಗಳಷ್ಟೆ ಕೆಜಿಎಫ್ ಪರಿಣಾಮಗಳನ್ನು ಇನ್ನಷ್ಟು ನಿಚ್ಚಳವಾಗಿ ಕಟ್ಟಿಕೊಡಲು ಸಾಧ್ಯ. ಅದಕ್ಕಾಗಿ ಇನ್ನೊಂದು ವರ್ಷ ಕಾಯಲೇಬೇಕಿದೆ.

(ಈ ವರದಿಗಾಗಿ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಂಗದೂರು ಅವರುಗಳನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಪ್ರತಿಕ್ರಿಯೆ ಲಭ್ಯವಾಗಲಿಲ್ಲ. ಕೆಜಿಎಫ್ ಬಾಕ್ಸಾಫೀಸ್ ಲೆಕ್ಕಾಚಾರಗಳನ್ನು ಅವರ ಮೂಲಕವೇ ಖಾತ್ರಿಪಡಿಸಿಕೊಳ್ಳುವುದು ಒಳ್ಳೆಯದು).

Join Samachara Official. CLICK HERE