samachara
www.samachara.com
‘ಇಸ್ರೇಲ್ ಕೃಷಿ ಬಿಟ್ಟಾಕಿ’: ರೈತರ ಆತ್ಮಹತ್ಯೆ ತಡೆಯಲು ನಮ್ಮಲ್ಲೇ ಇದೆ ಯಶಸ್ವಿ ಮಾದರಿ!
COVER STORY

‘ಇಸ್ರೇಲ್ ಕೃಷಿ ಬಿಟ್ಟಾಕಿ’: ರೈತರ ಆತ್ಮಹತ್ಯೆ ತಡೆಯಲು ನಮ್ಮಲ್ಲೇ ಇದೆ ಯಶಸ್ವಿ ಮಾದರಿ!

ಸಂದಿಗ್ಧ ಸಂದರ್ಭದಲ್ಲಿ ಅಚ್ಚುತಾನಂದನ್‌ ಸೂಕ್ತ ತೀರ್ಮಾನ ತೆಗೆದುಕೊಳ್ಳಲೇಬೇಕಿತ್ತು. ಹಾಗೆ ಅವರೊಂದು ಕ್ರಾಂತಿಕಾರಕ ನಿರ್ಧಾರ ತೆಗೆದುಕೊಂಡರು. ಅದರಿಂದಾದ ಲಾಭಗಳು 11 ವರ್ಷಗಳ ನಂತರ ಇವತ್ತು ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸುತ್ತಿವೆ. ಏನದು?

ಅದು 2006. ಕೇರಳ ಭೀಕರ ಬರಗಾಲಕ್ಕೆ ತುತ್ತಾಗಿತ್ತು. ಅದೇ ಕಾಲಕ್ಕೆ ಇಲ್ಲಿನ ರೈತರು ಬೆಳೆಯುತ್ತಿದ್ದ ರಬ್ಬರ್‌, ಕರಿಮೆಣಸು ಮೊದಲಾದ ರಫ್ತು ಆಧರಿತ ಬೆಳೆಗಳ ಬೆಲೆಗಳೂ ಜಾಗತಿಕ ಮಾರುಕಟ್ಟೆಯಲ್ಲಿ ತಳ ಮುಟ್ಟಿತ್ತು. ರೈತರು ಸುಸ್ತಿದಾರರಾದರು. ಕೃಷಿಕರಿಗೆ ದಾರಿ ಕಾಣದಾಯಿತು. ಅದೊಂದೇ ವರ್ಷ 1500ಕ್ಕೂ (ರೈತ ಸಂಘಗಳ ಪ್ರಕಾರ) ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾದರು. ಈ ಸಂಖ್ಯೆ ಸರಕಾರಿ ದಾಖಲೆಗಳಲ್ಲಿ ಕಡಿಮೆ ಇತ್ತು. ಜತೆಗೆ ಮಹಾರಾಷ್ಟ್ರದ ವಿದರ್ಭ ಭಾಗದ ರೈತರ ಆತ್ಮಹತ್ಯೆಯಷ್ಟೇನೂ ಇರಲಿಲ್ಲ. ಆದರೂ ರೈತರ ಕೂಗು ದೆಹಲಿಯನ್ನೂ ಮುಟ್ಟಿತ್ತು. ಬೂಕರ್‌ ಪ್ರಶಸ್ತಿ ವಿಜೇತ ಬರಹಗಾರ್ತಿ ಅರುಂಧತಿ ರಾಯ್‌ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರ ಜತೆ ದೆಹಲಿ ರಸ್ತೆಗಳಲ್ಲಿ ಪಾದಯಾತ್ರೆ ಹೊರಟರು.

ಇದು ಕಾರ್ಮಿಕ ಪರ ರಾಜಕಾರಣವನ್ನು ನಡೆಸಿಕೊಂಡು ಬಂದ, ಸರಳ ಜೀವಿ ಅಂದಿನ ಕೇರಳ ಮುಖ್ಯಮಂತ್ರಿ ವಿ.ಎಸ್‌. ಅಚ್ಚುತಾನಂದನ್‌ ಪಾಲಿಗೆ ಸವಾಲಿನ ದಿನಗಳಾಗಿದ್ದವು. ಇಂಥಹ ಸಂದಿಗ್ಧ ಸಂದರ್ಭದಲ್ಲಿ ಅಚ್ಚುತಾನಂದನ್‌ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಲೇಬೇಕಿತ್ತು. ಹಾಗೆ ಅವರೊಂದು ಕ್ರಾಂತಿಕಾರಕ ನಿರ್ಧಾರ ತೆಗೆದುಕೊಂಡರು. ಅದರಿಂದಾದ ಲಾಭಗಳು 11 ವರ್ಷಗಳ ನಂತರ ಇವತ್ತು ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸುತ್ತಿವೆ. ಏನದು ಆ ನಿರ್ಧಾರ ಅಂತೀರಾ?

ಆತ್ಮಹತ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಚ್ಚುತಾನಂದನ್‌ ಮುಂದಾದಾಗ ಅವರ ಕಣ್ಣಿಗೆ ಬಿದ್ದವರು ಎಡಪಂಥೀಯ ಆರ್ಥಿಕ ತಜ್ಞ, ಜೆಎನ್‌ಯು ಪ್ರಧ್ಯಾಪಕ ಪ್ರಭಾತ್‌ ಪಟ್ನಾಯಕ್‌. ಅವರನ್ನು ಕೇರಳ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದರು. ಆ ಮೂಲಕ ಅವರು ಮುಖ್ಯಮಂತ್ರಿಗಳ ಅಘೋಷಿತ ಆರ್ಥಿಕ ಸಲಹೆಗಾರರಾದರು. ಹೊಸ ಜವಾಬ್ದಾರಿಯೊಂದಿಗೆ ಕೇರಳಕ್ಕೆ ಬಂದಿಳಿದ ಪಟ್ನಾಯಕ್‌, ‘ನಾವು ಏನದರೂ ಮಾಡಲೇಬೇಕು’ ಎಂಬ ತೀರ್ಮಾನಕ್ಕೆ ಬಂದರು. ಪತ್ನಿ, ಆರ್ಥಿಕ ತಜ್ಞೆಯೂ ಆಗಿರುವ ಉತ್ಸ ಪಟ್ನಾಯಕ್‌ ಅವರ ಜತೆ ಕೈಜೋಡಿಸಿದರು. ಆಗ ಅವರ ಗಮನಕ್ಕೆ ಬಂದಿದ್ದು ಸ್ವಾತಂತ್ರ್ಯ ಪೂರ್ವದಲ್ಲಿ ಪಂಜಾಬ್‌ನಲ್ಲಿ ಕಾರ್ಯರೂಪಕ್ಕೆ ಬಂದಿದ್ದ ‘ಸರ್‌ ಛೋಟು ರಾಮ್‌ ಕಮಿಷನ್‌’.

ಅಂದಿಗೆ ಈ ಛೋಟು ರಾಮ್‌ ಕಮಿಷನ್‌ ಸದಸ್ಯರು ಗ್ರಾಮ ಗ್ರಾಮಕ್ಕೆ, ಹಳ್ಳಿ ಹಳ್ಳಿಗೆ ತೆರಳಿ ರೈತರಿಂದ ಅರ್ಜಿಗಳನ್ನು ಪಡೆದು ಕೃಷಿಕರ ಸಾಲಮನ್ನಾ ಮಾಡಿದ್ದರು. ಇದರ ಅಧ್ಯಯನಕ್ಕೆ ಪಟ್ನಾಯಕ್‌ ಮತ್ತು ಇತರರು ಮುಂದಾದರು. ಮತ್ತು ಬ್ರಿಟೀಷರ ಕಾಲದ ಈ ವ್ಯವಸ್ಥೆಯನ್ನು ಹೊಸ ತಲೆಮಾರಿಗೆ ಅಳವಡಿಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಸಿದರು. ಹಾಗೆ ಹುಟ್ಟಿಕೊಂಡಿದ್ದೇ ‘ಕೇರಳ ರಾಜ್ಯ ರೈತರ ಋಣಭಾರ ಪರಿಹಾರ ಆಯೋಗ’.

‘ಕೇರಳ ರಾಜ್ಯ ರೈತರ ಋಣಭಾರ ಪರಿಹಾರ ಆಯೋಗ’:

2007ರ ಜನವರಿಯಲ್ಲಿ ಆಯೋಗ ರಚನೆಯಾಯಿತು. ರೈತರು, ಕಾನೂನು ತಜ್ಞರು, ಕೃಷಿ ಹಣಕಾಸು ತಜ್ಞರು, ರಾಜಕಾರಣಿಗಳು ಮತ್ತು ಇತರರಿದ್ದ 7 ಜನರ ಆಯೋಗ ಇದಾಗಿತ್ತು. ಗ್ರಾಮ ಗ್ರಾಮಗಳಿಗೆ ಹೋಗುವುದು, ರೈತರ ಜತೆ ಖುದ್ದು ಮಾತುಕತೆ ನಡೆಸುವುದು, ರೈತರ ಸಾಲದ ಪ್ರಮಾಣವನ್ನು ನೋಡುವುದು, ಅವುಗಳ ಆಧಾರದ ಮೇಲೆ ಪರಿಹಾರ ಒದಗಿಸುವುದನ್ನು ಆಯೋಗ ತನ್ನ ಕಾರ್ಯವಿಧಾನವಾಗಿ ಆಯ್ಕೆ ಮಾಡಿಕೊಂಡಿತು.

ಆಯೋಗ ರಚನೆಯಾದ ಬೆನ್ನಲ್ಲೇ ರಾಜಧಾನಿ ತಿರುವನಂತಪುರಂನ ಕೇಂದ್ರ ಕಚೇರಿಯಲ್ಲಿ ಸುಮಾರು 25 ಸಿಬ್ಬಂದಿಗಳೊಂದಿಗೆ ಕೆಲಸ ಆರಂಭಿಸಲಾಯಿತು. ರೈತರಿಂದ ಅರ್ಜಿಗಳನ್ನು ಸ್ವೀಕರಿಸುವುದು, ಮುಂದಿನ ಪ್ರಕ್ರಿಯೆಗೆ ಚಾಲನೆ ನೀಡುವುದು ಆರಂಭಗೊಂಡಿತು. ಆಯೋಗ ರೈತರ ಸಾಲಮನ್ನಾಕ್ಕೆ ಕೈ ಹಾಕುವಾಗ ತನ್ನ ಮುಂದೆ ಒಂದಷ್ಟು ಸ್ವಯಂ ನಿಬಂಧನೆಗಳನ್ನು ವಿಧಿಸಿಕೊಂಡಿತು. ‘ರೈತರು ಸಹಕಾರಿ ಸಂಘಗಳಿಂದಲೇ ಸಾಲ ಪಡೆದಿರಬೇಕು. ಅರ್ಜಿದಾರ ರೈತರು ಸಣ್ಣ ಅಥವಾ ಮಧ್ಯಮ ಹಿಡುವಳಿದಾರರಾಗಿರಬೇಕು. ಆತ ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರಬೇಕು ಅಥವಾ ಗೇಣಿಗೆ ಪಡೆದಿರಬೇಕು. ಅರ್ಜಿದಾರನ ವಾರ್ಷಿಕ ಆದಾಯ 2 ಲಕ್ಷ ಮೀರುವಂತಿರಬಾರದು. 50,000 ರೂಪಾಯಿಗಿಂತ ಮೇಲ್ಪಟ್ಟ ಸುಸ್ತಿ ಸಾಲಗಳಿದ್ದರೆ ಮಾತ್ರ ಸಾಲ ಮನ್ನಾ ಮಾಡುವುದು. ಸಾಲಮನ್ನಾದ ಮೊತ್ತ ಗರಿಷ್ಠ ಒಂದು ಲಕ್ಷ ರೂಪಾಯಿ’ ಎಂಬುದು ಈ ಷರತ್ತುಗಳಾಗಿದ್ದವು.

ನಂತರ ಆಯೋಗ ಪ್ರತಿ ತಿಂಗಳು ಗ್ರಾಮಗಳಿಗೆ ತೆರಳಿ ಅಲ್ಲಿಯೇ ಕೆಲವು ದಿನಗಳ ಕಾಲ ತಂಗಿ ಯಾರು ಯಾರ ಸಾಲ ಮನ್ನಾ ಮಾಡಬೇಕು, ಎಷ್ಟು ಮಾಡಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳುತ್ತಿತ್ತು. ಹೀಗೆ 2007ನೇ ಇಸವಿಯಲ್ಲಿ 11,354 ರೈತರ 11 ಕೋಟಿ ರೂಪಾಯಿಗಳ ಸಾಲವನ್ನು ಮನ್ನಾ ಮಾಡಲಾಯಿತು.

ಇದರ ನಡುವೆಯೇ 2008ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾ ಘೋಷಣೆ ಮಾಡಿದ್ದೂ ಆಯೋಗದ ಪಾಲಿಗೆ ವರದಾನವಾಯಿತು. ಪರಿಣಾಮ ಆಯೋಗ ಸ್ಥಾಪನೆಗೊಂಡ ಎರಡೇ ವರ್ಷಕ್ಕೆ ಯಶಸ್ಸಿನ ಅಂಕಿ ಅಂಶಗಳು ಕೈಯಲ್ಲಿದ್ದವು. ಆತ್ಮಹತ್ಯೆಗಳ ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ಇದೀಗ ಆಯೋಗ ಸ್ಥಾಪನೆಗೊಂಡು 11 ವರ್ಷಗಳಾಗಿದ್ದು ಕೇರಳದಲ್ಲಿ ರೈತರ ಆತ್ಮಹತ್ಯೆ ಎಂಬುದು ಹೆಚ್ಚು ಕಡಿಮೆ ನಿಂತೇ ಹೋಗಿದೆ.

ಇಂದಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಮನ್ನಾ ಘೋಷಣೆ ಮಾಡುವ ರಾಜ್ಯಗಳ ಮುಂದೆ ಈ ಹೊಸ ಆಲೋಚನೆಯ ಯೋಜನೆ ಅತ್ಯಂತ ಕಡಿಮೆ ಖರ್ಚಿನದಾಗಿತ್ತು. ಜತೆಗೆ ಇದರ ಕಾರ್ಯಕ್ಷಮತೆಯೂ ಅತೀ ಹೆಚ್ಚಿನದಾಗಿತ್ತು.

ಯಶಸ್ವೀ ಯೋಜನೆ:

‘ಕೇರಳದಲ್ಲಿ ಬರಗಾಲದ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಆಯೋಗದ ಕೆಲಸವೂ ಕಡಿಮೆಯಾಯಿತು’ ಎನ್ನುತ್ತಾರೆ ಆಯೋಗದ ಸದಸ್ಯ ಎಸ್. ಜನಾರ್ಧನ್‌. ಆದರೆ ಇವತ್ತಿಗೂ ಇದೊಂದು ಯಶಸ್ವಿ ಯೋಜನೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎನ್ನುತ್ತಾರೆ ಅವರು. ಇದರ ಯಶಸ್ಸನ್ನು ನೋಡಿ ಈ ವರ್ಷ ರಾಜಸ್ಥಾನದ ತಂಡ ಕೇರಳಕ್ಕೆ ಬಂದು ಇದರ ಬಗ್ಗೆ ಅಧ್ಯಯನ ಕೂಡ ನಡೆಸಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಜನಾರ್ಧನ್.

‘ದೊಡ್ಡ ಮೊತ್ತದ ಸಾಲ ಮನ್ನಾದ ಬದಲು ಇದು ಉತ್ತಮ. ಮತ್ತು ವರ್ಷ ಪೂರ್ತಿ ರೈತರ ಜತೆ ಯಾರೋ ಒಬ್ಬರು ನಿರಂತರ ಸಂಪರ್ಕದಲ್ಲಿರುತ್ತಾರೆ. ಆತ್ಮಹತ್ಯೆ ನಿಂತು ಹೋಗಲು ಇದೇ ಪ್ರಮುಖ ಕಾರಣ’ ಎನ್ನುತ್ತಾರೆ ಅವರು. 2017-18ರಲ್ಲಿ ಬಜೆಟ್‌ನಲ್ಲಿಯೂ ಈ ಆಯೋಗಕ್ಕೆ 355 ಕೋಟಿ ರೂಪಾಯಿಗಳನ್ನು ಎತ್ತಿಡಲಾಗಿದೆ. ಇದರಲ್ಲಿ ಮನೆ ಮನೆಗಳಿಗೆ ತೆರಳಿ ಆರ್ಥಿಕ ಪರಿಸ್ಥಿತಿಗಳನ್ನು ಅವಲೋಕಿಸಿ, ಕೇವಲ 213 ಕೋಟಿ ರೂಪಾಯಿಗಳನ್ನು ಆಯೋಗ ಇಲ್ಲಿಯವರೆಗೆ ರೈತರ ಸಾಲಗಳಿಗೆ ವಿನಿಯೋಗಿಸಿದೆ.

“ನಮ್ಮ ಭೇಟಿಗಳು ಅನಧಿಕೃತವಾಗಿರುತ್ತವೆ. ಒಂದೊಮ್ಮೆ ಮಗಳ ಶಿಕ್ಷಣ ಅಥವಾ ವೈದ್ಯಕೀಯ ಖರ್ಚುಗಳಿಗೆ ಸಂಬಂಧಿಸಿದ್ದಾಗಿದ್ದರೆ ನಾವು ನಮಗಿರುವ ಆಜ್ಞೆಯನ್ನು ಮೀರಿಯೂ ನಡೆದುಕೊಳ್ಳುತ್ತೇವೆ. ಕೆಲವರಿಗೆ ತಮಗಿರುವ ಸೌಲಭ್ಯಗಳ ಬಗ್ಗೆ ಅರಿವಿರುವುದಿಲ್ಲ. ಉದಾಹರಣೆಗೆ ಪ್ರಾಕೃತಿಕ ವಿಕೋಪಗಳಿಂದ ಬೆಳೆ ನಾಶವಾದರೆ ಸಿಗಬೇಕಾದ ಪರಿಹಾರಗಳ ಬಗ್ಗೆ ರೈತರಿಗೆ ಗೊತ್ತಿರುವುದಿಲ್ಲ. ಈ ಸಂದರ್ಭದಲ್ಲಿ ನಾವು ಅವರಿಗೆ ಪರಿಹಾರಕ್ಕೆ ಸೂಕ್ತ ವ್ಯವಸ್ಥೆಗಳನ್ನು ಮಾಡುತ್ತೇವೆ,” ಎಂದು ತಮ್ಮ ಕಾರ್ಯವಿಧಾನವನ್ನು ಬಿಡಿಸಿಡುತ್ತಾರೆ ಜನಾರ್ಧನ್.

ಒಂದೆಡೆ ಇದು ರೈತರ ಋಣಭಾರ ಇಳಿಸುವುದಲ್ಲದೆ ಬ್ಯಾಂಕ್‌ಗಳಿಗೂ ಸಹಾಯವಾಗುತ್ತಿದೆ ಎಂದು ವಿವರಿಸುತ್ತಾರೆ 30 ವರ್ಷಗಳ ಕಾಲ ಸಹಕಾರಿ ಬ್ಯಾಂಕೊಂದರ ಅಧ್ಯಕ್ಷರಾಗಿದ್ದ ಕೆ.ಆರ್‌. ಚಂದ್ರಮೋಹನ್‌. “ಎಲ್ಲಾ ಸಹಕಾರಿ ಬ್ಯಾಂಕ್‌ಗಳಲ್ಲೂ ದೀರ್ಘಕಾಲದ ಸುಸ್ತಿದಾರರು ಇದ್ದೇ ಇರುತ್ತಾರೆ. ಈ ಸಂದರ್ಭದಲ್ಲಿ ರಾಜ್ಯ ಸರಕಾರ ಮಧ್ಯವರ್ತಿಯಾಗಿ ನಿಂತು ರೈತರು ಮತ್ತು ಸಾಲ ನೀಡಿದವರ ನಡುವೆ ಸಾಲ ಮರುಪಾವತಿಯ ಬಗ್ಗೆ ಚರ್ಚೆಗಳು ನಡೆಯುತ್ತವೆ. ಇದರಿಂದ ವಸೂಲಾಗದ ಸಾಲದ ಸಮಸ್ಯೆಯನ್ನು ಪರಿಹರಿಸಲು ಬ್ಯಾಂಕ್‌ಗೆ ಸಹಾಯವಾಗುತ್ತದೆ,” ಎನ್ನುತ್ತಾರೆ ಅವರು.

ಹೀಗೊಂದು ಯಶಸ್ವೀ ಮಾದರಿಯನ್ನು ದೇಶಾದ್ಯಂತ ಅನುಕರಿಸಬಹುದಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಯೋಜನೆಗೆ ಅಡಿಪಾಯ ಹಾಕಿದ ಪ್ರಭಾತ್‌ ಪಟ್ನಾಯಕ್. ಹಾಗಂಥ ಆಯೋಗದ ಬಗ್ಗೆ ತಕರಾರುಗಳು ಇಲ್ಲವೆ ಇಲ್ಲ ಎಂದಲ್ಲ. ‘ಇದು ನಿಧಾನಗತಿಯ ಪ್ರಕ್ರಿಯೆ’ ಎಂಬ ಆರೋಪಗಳಿವೆ. ಆದರೆ ರೈತ ಸಮುದಾಯದ ನಂಬಿಕೆ ಕಳೆದುಕೊಂಡ ಈ ಆಡಳಿತ ವ್ಯವಸ್ಥೆಯಲ್ಲಿ ಆಶಾಭಾವನೆಯಾಗಿ ಆಯೋಗ ಕಣ್ಣ ಮುಂದೆ ನಿಂತಿದೆ. ಅದಕ್ಕಿಂತ ಹೆಚ್ಚಾಗಿ 40-50 ಸಾವಿರ ಕೋಟಿ ರೂಪಾಯಿಗಳ ಸಾಲಮನ್ನಾ ಎಂಬ ಬೃಹತ್‌ ಆರ್ಥಿಕ ಹೊರೆಯ ಜಾಗದಲ್ಲಿ ಸುಲಭ, ಸರಳ ಮತ್ತು ನಿರಂತರ ವ್ಯವಸ್ಥೆಯಾಗಿ ಇದು ಕಾಣಿಸುತ್ತಿದೆ.

ಅಧ್ಯಯನಕ್ಕಾಗಿ ವಿದೇಶ ಪ್ರವಾಸ ಮಾಡುವವರು, ಇಸ್ರೇಲ್‌ ಜಪದಲ್ಲಿರುವವರು ನಮ್ಮದೇ ದೇಶದೊಳಗೆ ಪಕ್ಕದ ರಾಜ್ಯದಲ್ಲಿ ಯಶಸ್ವಿಯಾಗಿರುವ ವ್ಯವಸ್ಥೆಯತ್ತ ಕಣ್ಣಾಡಿಸಬೇಕಿದೆ. ಇದಕ್ಕೆ ಪ್ರದರ್ಶನಗೊಳ್ಳಬೇಕಿರುವುದು ಸಾಲ ಮನ್ನಾ ಎಂಬ ‘ಜನಪ್ರಿಯತೆ’ ಎಡೆಗಿನ ಆಸಕ್ತಿಗಿಂತ ಇಚ್ಛಾಶಕ್ತಿ ಮುಖ್ಯ.

ಕೃಪೆ: ಲೈವ್‌ ಮಿಂಟ್‌