samachara
www.samachara.com
ಚುನಾವಣಾ ನೆಪ, ಪೀಠದ ಜಪ; ಬಯಲಿಗೆ ಬಿತ್ತು ಹವ್ಯಕ ದಾಯಾದಿಗಳ ಕೋಪ ತಾಪ
COVER STORY

ಚುನಾವಣಾ ನೆಪ, ಪೀಠದ ಜಪ; ಬಯಲಿಗೆ ಬಿತ್ತು ಹವ್ಯಕ ದಾಯಾದಿಗಳ ಕೋಪ ತಾಪ

ಪೀಠ ತ್ಯಾಗ ಮಾಡಬೇಕು ಎಂದು ಹೇಳಿದ್ದ ಎಂ. ಎನ್‌. ಭಟ್‌ರ ಹವ್ಯಕ ಮಹಾಸಭೆಯ ಅಧ್ಯಕ್ಷಗಿರಿಯನ್ನೇ ಕಿತ್ತುಕೊಳ್ಳಲು ರಾಘವೇಶ್ವರ ಸ್ವಾಮಿ ಪಡೆ ಸಜ್ಜಾಯಿತು. 2016-17ರಲ್ಲಿ ನಡೆದ ಚುನಾವಣೆಯನ್ನು ಮಠ ಪ್ರತಿಷ್ಠೆಯಾಗಿ ತೆಗೆದುಕೊಂಡಿತು.

ರಾಜ್ಯದ ಹವ್ಯಕ ಸಮುದಾಯದ ಒಳಗೆ ಕಳೆದ ಹಲವು ವರ್ಷಗಳಿಂದ ಹೊಗೆಯಾಡುತ್ತಿದ್ದ ವೈಮನಸ್ಸು ಸ್ಪಷ್ಟ ಕವಲು ತೆಗೆದುಕೊಂಡಿದೆ. ಮೇಲ್ನೋಟಕ್ಕೆ ಇದು ಜಾತಿಯೊಂದರ ಒಳಗೆ ಪಟ್ಟಕ್ಕಾಗಿ ಪ್ರಭಾವಿಗಳು ನಡೆಸುವ ಕಾಳಗದಂತೆ ಕಂಡರೂ ಆಳದಲ್ಲಿ ಸಮುದಾಯದ ಅಂತರಂಗದ ನಂಬಿಕೆಗಳಲ್ಲಿ ತಾಕಲಾಟ ಆರಂಭವಾಗಿದೆ. ಪರಿಣಾಮ ಎರಡು ಭಿನ್ನ ಬಣಗಳು ಬಹಿರಂಗ ಕಿತ್ತಾಟಕ್ಕೆ ಮುಂಬರುವ ಲೋಕಸಭೆ ಚುನಾವಣೆ ಮುನ್ನುಡಿ ಬರೆದಿದೆ.

ಏನಿದು ಬೆಳವಣಿಗೆ?

ಡಿಸೆಂಬರ್‌ 28, 29 ಮತ್ತು 30ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ದ್ವಿತೀಯ ವಿಶ್ವಹವ್ಯಕ ಸಮ್ಮೇಳನ’ವನ್ನು ಆಯೋಜನೆ ಮಾಡಲಾಗಿದೆ. ತನ್ನ ಅಮೃತ ಮಹೋತ್ಸವದ ಆಚರಣೆ ಹಿನ್ನೆಲೆಯಲ್ಲಿ ‘ಶ್ರೀ ಅಖಿಲ ಹವ್ಯಕ ಮಹಾಸಭೆ’ ಈ ಸಮ್ಮೇಳನವನ್ನು ಆಯೋಜಿಸಿದೆ. ಇದು ವಿವಾದ ಮೂಲವಾಗಿದೆ. ಈಗ ಹೊರಬಿದ್ದಿರುವ ಕಿತ್ತಾಟದ ವಿವರಗಳಿಗೆ ಹೋಗುವ ಮುನ್ನ ಈ ಮಹಾಸಭೆಯ ಹಿನ್ನೆಲೆಯನ್ನು ಗಮನಿಸಬೇಕಿದೆ.

75 ವರ್ಷಗಳ ಇತಿಹಾಸ ಇರುವ ಈ ‘ಶ್ರೀ ಅಖಿಲ ಹವ್ಯಕ ಮಹಾಸಭೆ’ಯನ್ನು ಕಳೆದ 30-35 ವರ್ಷಗಳ ಕಾಲ ಮುನ್ನಡೆಸಿದ್ದವರು ಎಂ. ಎನ್‌. ಭಟ್‌ ಮದ್ಗುಣಿ. ಹವ್ಯಕ ಸಮುದಾಯದ ಪಾಲಿಗೆ ಹೊಸ ತಲೆಮಾರಿನ ಶ್ರೀಮಂತರು ಸೃಷ್ಟಿಯಾಗುವ ಮುಂಚಿನ ದಿನಗಳಲ್ಲಿ ‘ಬಿಗ್ ಶಾಟ್’ ಎಂದು ಕರೆಸಿಕೊಳ್ಳುತ್ತಿದ್ದವರು. ಸಹಜವಾಗಿಯೇ ಹೊಸನಗರ ಮೂಲಕ ರಾಮಚಂದ್ರಾಪುರ ಮಠದ ಆಡಳಿತ ಮಂಡಳಿಯಲ್ಲೂ ಇದ್ದರು. ಹಣಕಾಸಿನ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು.

2014ರಲ್ಲಿ ಮಠದ ಪೀಠಾಧಿಪತಿ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ಅತ್ಯಾಚಾರ ಪ್ರಕರಣ ಕೇಳಿ ಬಂದ ಎರಡು ವರ್ಷಗಳ ಅಂತರದಲ್ಲಿ ಮಠದ ಆಡಳಿತ ಮಂಡಳಿಯಿಂದ ಎಂ. ಎನ್‌. ಭಟ್‌ ಹೊರ ನಡೆದರು. ಅಷ್ಟೇ ಅಲ್ಲ, “ಅತ್ಯಾಚಾರ ಪ್ರಕರಣ ಕೇಳಿ ಬಂದ ಸಂದರ್ಭದಲ್ಲಿ ಮಠದಲ್ಲಿ ಸಭೆಗಳು ನಡೆದಿದ್ದವು. ಇದರಲ್ಲಿ ಆರ್‌ಎಸ್‌ಎಸ್‌ ನಾಯಕರೂ ಪಾಲ್ಗೊಂಡಿದ್ದರು. ಮಠದಲ್ಲಿ ಅಪಸವ್ಯ ನಡೆದಿದ್ದು ಹೌದು. ಈ ಕಾರಣಕ್ಕೆ ರಾಘವೇಶ್ವರ ಭಾರತಿ ಸ್ವಾಮೀಜಿ ಪೀಠ ತ್ಯಾಗ ಮಾಡಬೇಕು,” ಎಂದು 2016ರಲ್ಲಿ ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದರು.

ಇದೇ ಸಂದರ್ಭದಲ್ಲಿ ಹವ್ಯಕ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆಯೂ ಸಮೀಪಿಸಿತ್ತು. ಪೀಠ ತ್ಯಾಗ ಮಾಡಬೇಕು ಎಂದು ಹೇಳಿದ್ದ ಎಂ. ಎನ್‌. ಭಟ್‌ರ ಅಧ್ಯಕ್ಷಗಿರಿಯನ್ನೇ ಕಿತ್ತುಕೊಳ್ಳಲು ರಾಘವೇಶ್ವರ ಸ್ವಾಮಿ ಪಡೆ ಸಜ್ಜಾಯಿತು. 2016-17ರಲ್ಲಿ ನಡೆದ ಚುನಾವಣೆಯನ್ನು ಮಠ ಪ್ರತಿಷ್ಠೆಯಾಗಿ ತೆಗೆದುಕೊಂಡಿತು. ಮಹಾಸಭೆಯ ಇತಿಹಾಸದಲ್ಲಿ ಕಂಡು ಕೇಳರಿಯದಂತೆ ಚುನಾವಣೆ ನಡೆಯಿತು. ಮನೆ ಮನೆಯಿಂದ ಮತದಾರರನ್ನು ಮಠದ ಕಡೆಯವರು ಬಸ್ಸುಗಳಲ್ಲಿ ಕರೆತಂದರು. ಎಂ.ಎನ್‌. ಭಟ್‌ ಚುನಾವಣೆ ಸೋತರು. ಅಂದುಕೊಂಡಂತೆ ರಾಘವೇಶ್ವರ ಸ್ವಾಮೀಜಿಗೆ ಬೇಕಾಗಿದ್ದ ಡಾ. ಗಿರಿಧರ್‌ ಕಜೆ ಮಹಾಸಭೆಯ ಅಧ್ಯಕ್ಷರಾದರು. ಸ್ವಾಮೀಜಿ ಬಾವ, ಪೂರ್ವಾಶ್ರಮದ ತಂಗಿಯ ಗಂಡನ ತಮ್ಮ ವೇಣು ವಿಘ್ನೇಶ್‌ ಮಹಾಸಭೆಯ ಕಾರ್ಯದರ್ಶಿಯಾದರು.

ಅಂದು ಅಖಿಲ ಹವ್ಯಕ ಮಹಾಸಭೆಯಿಂದ ಹೊರ ಬಂದ ಎಂ.ಎನ್‌. ಭಟ್‌ ಮದ್ಗುಣಿ ತಮ್ಮ ಮುಂದಾಳತ್ವದಲ್ಲಿ ‘ಅಖಿಲ ಹವ್ಯಕ ಒಕ್ಕೂಟ’ ಹುಟ್ಟು ಹಾಕಿದರು. ಅಲ್ಲಿಗೆ ಮೊದಲ ಬಾರಿಗೆ ಹವ್ಯಕ ಸಮಾಜ ಬಹಿರಂಗವಾಗಿ ಒಡೆದು ಇಬ್ಭಾಗವಾಯಿತು.

2019ರ ಚುನಾವಣೆ:

ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ.
ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ.
/ಒನ್‌ಇಂಡಿಯಾ

ಹೀಗೆ ಒಡೆದು ಇಬ್ಭಾಗವಾಗಿದ್ದ ಹವ್ಯಕ ಸಮುದಾಯ ಇದೀಗ ಮತ್ತೆ ಚರ್ಚೆಯ ಕೇಂದ್ರಕ್ಕೆ ಬಂದಿದ್ದು ದ್ವಿತೀಯ ವಿಶ್ವಹವ್ಯಕ ಸಮ್ಮೇಳನದ ಮೂಲಕ. ಸಾಮಾನ್ಯವಾಗಿ ಚುನಾವಣೆಗಳು ಬಂದಾಗ ಜಾತಿ ಸಮುದಾಯಗಳು ಬೆಂಗಳೂರಿನ ಅರಮನೆ ಮೈದಾನದಲ್ಲಿ ಶಕ್ತಿ ಪ್ರದರ್ಶನ ನಡೆಸುವುದು ವಾಡಿಕೆ. ಇದೇ ಹಿನ್ನೆಲೆಯಲ್ಲಿ 2019ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗ ಹವ್ಯಕ ಸಮುದಾಯ ತನ್ನ ಸಾಮರ್ಥ್ಯ ಪ್ರದರ್ಶನಕ್ಕೆ ಸಮ್ಮೇಳನವನ್ನು ವೇದಿಕೆ ಮಾಡಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವವರ ಪಟ್ಟಿಯಲ್ಲಿ ಶಂಕರ ಪರಂಪರೆಯ ಇಬ್ಬರು ಪೀಠಾಧಿಪತಿಗಳ ಹೆಸರಿತ್ತು. ಒಬ್ಬರು ನಿಸ್ಸಂಶಯವಾಗಿ ರಾಘವೇಶ್ವರ ಸ್ವಾಮೀಜಿ. ಇನ್ನೊಬ್ಬರು ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ. ಕೆಲವು ದಿನಗಳ ಹಿಂದೆ ಸಂಪ್ರದಾಯದಂತೆ ಮಹಾಸಭಾದ ಕಡೆಯವರು ಸ್ವರ್ಣವಲ್ಲೀ ಮಠಕ್ಕೆ ತೆರಳಿ ಸ್ವಾಮೀಜಿಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಅಲ್ಲಿಂದ ಪ್ರಸ್ತುತ ವಿವಾದ ಆರಂಭಗೊಂಡಿತ್ತು.

ಯಾಕೆ ಹೀಗೆ?

ಸ್ವರ್ಣವಲ್ಲೀ ಮತ್ತು ರಾಮಚಂದ್ರಾಪುರ ಎರಡೂ ಶಂಕರ ಪರಂಪರೆಯ ಮಠಗಳು. 36 ಸೀಮೆಗಳು ಸ್ವರ್ಣವಲ್ಲೀ ಮಠದವರಿಗೆ ಒಳಪಡುತ್ತವೆ ಎಂಬ ಲೆಕ್ಕಾಚಾರವಾದರೂ, ಇವತ್ತಿಗೆ ಶಿರಸಿ ಸುತ್ತಮುತ್ತಲಿನ ಪ್ರದೇಶಕ್ಕೆ ಮಠ ಸೀಮಿತಗೊಂಡಿದೆ. ಇದೇ ವೇಳೆ ‘ಕೇರಳದ ಚಂದ್ರಗಿರಿ ತೀರದಿಂದ ಗೋವಾದ ಮಾಡೋವಿ ನದಿವರೆಗಿನದ್ದು ನಮ್ಮ ವ್ಯಾಪ್ತಿ ಎಂದು ರಾಮಚಂದ್ರಾಪುರ ಮಠದವರು’ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಇವರೆಡು ಮಾತ್ರವಲ್ಲದೆ ಶಂಕರ ಪರಂಪರೆಯ ಇಂತಹ ಒಟ್ಟು 12 ಮಠಗಳಿವೆ.

ಇವುಗಳನ್ನು ಒಗ್ಗೂಡಿಸಲು 2003 ಮಾರ್ಚ್‌ 8ರ ಶನಿವಾರ ಶೃಂಗೇರಿ ಮಠದ ಮುಂದಾಳತ್ವದಲ್ಲಿ ಸ್ಥಾಪಿಸಲಾದ ಸಂಸ್ಥೆಯೇ ‘ಸನಾತನ ಧರ್ಮ ಸಂವರ್ಧಿನಿ ಸಭಾ’.

‘ಸನಾತನ ಧರ್ಮ ಸಂವರ್ಧಿನಿ ಸಭಾ’ದ 2003ರ ಸ್ಥಾಪನೆಯ ದಿನಗಳು.
‘ಸನಾತನ ಧರ್ಮ ಸಂವರ್ಧಿನಿ ಸಭಾ’ದ 2003ರ ಸ್ಥಾಪನೆಯ ದಿನಗಳು.

ಶಂಕರಾಚಾರ್ಯರ ತತ್ವ, ಪರಂಪರೆಗಳನ್ನು ಹರಡಲು ಈ ಪರಿಷತ್ತನ್ನು ಆರಂಭಿಸಲಾಗಿತ್ತು. ಇದರಲ್ಲಿ ಹವ್ಯಕ ಸಮುದಾಯದ ಕಡೆಯಿಂದ ಸ್ವರ್ಣವಲ್ಲೀ ಮತ್ತು ರಾಮಚಂದ್ರಾಪುರ ಎರಡೂ ಮಠಗಳಿದ್ದವು. ಹೀಗಿರುವಾಗಲೇ 2014ರಲ್ಲಿ ರಾಮಚಂದ್ರಾಪುರ ಮಠದ ಪೀಠಾಧಿಪತಿ ಮೇಲೆ ಅತ್ಯಾಚಾರ ಪ್ರಕರಣ ಕೇಳಿ ಬಂತು. ಅಲ್ಲಿಂದ ಹವ್ಯಕ ಸಮಾಜ, ಮಠಾಧಿಪತಿಗಳ ವಲಯ ಹಲವು ತಿರುವುಗಳನ್ನು ತೆಗೆದುಕೊಂಡಿತು.

ಪ್ರಕರಣದ ಗಂಭೀರತೆಯನ್ನು ನಿಧಾನವಾಗಿ ಅರಿತುಕೊಂಡ ಸಭಾ 2018 ಫೆಬ್ರವರಿ 17ರಲ್ಲಿ ನಿರ್ಣಯವೊಂದನ್ನು ಕೈಗೊಂಡಿತು. ‘ಶಂಕರಾಚಾರ್ಯರ ಮಠಮ್ನಾಯ ಪ್ರಮಾಣ ಮತ್ತು ವೇದಪನಿಷತ್ತುಗಳ ಪ್ರಮಾಣಕ್ಕೆ ವ್ಯತಿರಿಕ್ತವಾದ ಜೀವನ ನಡೆಸುವ ಹಾಗೂ ಅತ್ಯಾಚಾರ-ಅನೈತಿಕ ಸಂಬಂಧವೇ ಮೊದಲಾದ ಗಂಭೀರ ಆರೋಪಗಳನ್ನು ಹೊತ್ತ ಮಠಾಧೀಶರನ್ನು ಈ ಸಂಸ್ಥೆಯಿಂದ ಕೈ ಬಿಡಲು ತೀರ್ಮಾನಿಸಲಾಗಿದೆ’ ಎಂಬ ಮಠಾಧಿಪತಿಗಳ ಹೆಸರಿಲ್ಲದ ರಕ್ಷಣಾತ್ಮಕ ನಿರ್ಧಾರವೊಂದನ್ನು ಪತ್ರಿಕಾ ಪ್ರಕಟಣೆಯ ಮೂಲಕ ಸಭಾ ಹೊರಹಾಕಿತು. ಹೀಗೆ ನಿರ್ಣಯ ಕೈಗೊಂಡ ಸಭೆಯಲ್ಲಿ ಸ್ವರ್ಣವಲ್ಲೀ ಮಠದವರೂ ಭಾಗವಹಿಸಿದ್ದರು. ಆದರೆ ರಾಮಚಂದ್ರಾಪುರ ಮಠದವರು ಇರಲಿಲ್ಲ.

‘ಸನಾತನ ಧರ್ಮ ಸಂವರ್ಧಿನಿ ಸಭಾ’ ಕೈಗೊಂಡ ನಿರ್ಣಯದ ವಾಕ್ಯಗಳು ಹೊಸನಗರದತ್ತ ಬೆಟ್ಟು ಮಾಡುತ್ತಿದ್ದವು.
‘ಸನಾತನ ಧರ್ಮ ಸಂವರ್ಧಿನಿ ಸಭಾ’ ಕೈಗೊಂಡ ನಿರ್ಣಯದ ವಾಕ್ಯಗಳು ಹೊಸನಗರದತ್ತ ಬೆಟ್ಟು ಮಾಡುತ್ತಿದ್ದವು.

ಹುಟ್ಟಿಕೊಂಡ ಸಮರ:

‘ಸನಾತನ ಧರ್ಮ ಸಂವರ್ಧಿನಿ ಸಭಾ’ದ ಪತ್ರಿಕಾ ಹೇಳಿಕೆಗೆ ವಿರುದ್ಧವಾಗಿ ಅದೇ ಸಂದರ್ಭದಲ್ಲಿ ಮಹಾಸಭಾ ಖಂಡನಾ ನಿರ್ಣಯವೊಂದನ್ನು ತೆಗೆದುಕೊಂಡಿತು. 11 ಜನ ಮಠಾಧಿಪತಿಗಳ ವಿರುದ್ಧ ಈ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿತ್ತು.

‘ದ್ವಿತೀಯ ವಿಶ್ವಹವ್ಯಕ ಸಮ್ಮೇಳನ’ದ ಹಿನ್ನೆಲೆಯಲ್ಲಿ ಇದೀಗ ಆ ಘಟನೆ ಮತ್ತೆ ಮುನ್ನೆಲೆಗೆ ಬಂದಿದೆ.

ಹಳೆಯ ಘಟನೆಯನ್ನು ನೆನಪಿಸಿಕೊಂಡಿರುವ ಸ್ವರ್ಣವಲ್ಲೀ ಮಠದ ಭಕ್ತರು ಮತ್ತು ಅಖಿಲ ಹವ್ಯಕ ಒಕ್ಕೂಟದ ಸದಸ್ಯರು, ಸ್ವರ್ಣವಲ್ಲೀ ಸ್ವಾಮೀಜಿ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಭಾಗವಹಿಸಬಾರದು ಎಂದು ಪಟ್ಟು ಹಿಡಿದು ಕುಳಿತಿದ್ದರು. ಒಂದೊಮ್ಮೆ ಭಾಗವಹಿಸಬೇಕಿದ್ದರೆ ಈ ಹಿಂದೆ ಹೊರಡಿಸಿದ್ದ ಖಂಡನಾ ನಿರ್ಣಯಕ್ಕಾಗಿ ಮಹಾಸಭಾ, ಸನಾತನ ಸಂವರ್ಧಿನಿ ಸಭಾದ ಕ್ಷಮೆಯಾಚಿಸಬೇಕು ಹಾಗೂ ‘ಶ್ರೀ ಶಂಕರ ಪ್ರಣೀತ ಯತಿ ಧರ್ಮ ಪಥದಿಂದ ಪತಿತರಾದವರನ್ನು ಕಾರ್ಯಕ್ರಮದಿಂದ ದೂರವಿಡಬೇಕು’ ಎಂದು ಷರತ್ತು ಮುಂದಿಟ್ಟಿದ್ದರು. ಇದೀಗ ಭಕ್ತರು ಮತ್ತು ಒಕ್ಕೂಟದ ಮನವಿ ಮೇರೆಗೆ ಸಮ್ಮೇಳನದಿಂದ ಸ್ವರ್ಣವಲ್ಲೀ ಸ್ವಾಮೀಜಿ ದೂರ ಉಳಿದಿದ್ದಾರೆ.

ಸೋಂದಾ ಸ್ವರ್ಣವಲ್ಲೀ ಮಠದ ಭಕ್ತರು 24ನೇ ತಾರೀಕು ಹೊರಡಿಸಿದ ಪತ್ರಿಕಾ ಪ್ರಕಟಣೆ.
ಸೋಂದಾ ಸ್ವರ್ಣವಲ್ಲೀ ಮಠದ ಭಕ್ತರು 24ನೇ ತಾರೀಕು ಹೊರಡಿಸಿದ ಪತ್ರಿಕಾ ಪ್ರಕಟಣೆ.

ಈ ವಿಚಾರ ತಿಳಿಯುತ್ತಿದ್ದಂತೆ ತಮ್ಮ ನೇತೃತ್ವದಲ್ಲಿ ನಡೆಯುತ್ತಿರುವ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸ್ವತಃ ಅಖಾಡಕ್ಕಿಳಿದಿರುವ ರಾಘವೇಶ್ವರ ಸ್ವಾಮೀಜಿ, “ನಿರಪರಾಧಿ ಮಠವನ್ನು, ನಿಷ್ಕಾರಣವಾಗಿ ನಿರಂತರವಾಗಿ ಅಪಮಾನಗೊಳಿಸುವ ಈ ಪ್ರಕ್ರಿಯೆ ನಮ್ಮ ಸಂಸ್ಕೃತಿಗೆ, ಹವ್ಯಕ ಸಂಸ್ಕೃತಿಗೆ, ಭಾರತೀಯ ಸಂಸ್ಕೃತಿಗೆ ಒಪ್ಪುವಂಥದ್ದಲ್ಲ. ಯಾವ ದೇಶವೂ, ಯಾವ ಸಮಾಜವೂ, ಯಾವ ಸಂಸ್ಕೃತಿಯೂ ಒಪ್ಪುವಂಥದ್ದಲ್ಲ. ಆದರೆ ಈ ಕೆಡುಕು ಬೇರೆ ಬೇರೆ ರೂಪದಲ್ಲಿ ಮುಂದುವರಿತಾನೇ ಇದೆ. ಏನದಕ್ಕೆ ಉತ್ತರ? ವಿಶ್ವ ಹವ್ಯಕ ಸಮ್ಮೇಳನದ ಯಶಸ್ಸು,” ಎಂದು ಸಮ್ಮೇಳನದಲ್ಲಿ ಭಾಗವಹಿಸುವಂತೆ ಹವ್ಯಕರಿಗೆ ಕರೆ ನೀಡಿದ್ದಾರೆ.

ಜತೆಗೆ ಎಲ್ಲಾ ಕಾರ್ಯವನ್ನು ಬದಿಗೊತ್ತಿ ಅರಮನೆ ಮೈದಾನದಲ್ಲಿ ಸೇರುವ ಮೂಲಕ, “ಹವ್ಯಕ ಸಾಗರದಲ್ಲಿ ಈ ಕೊಳಕು ಕಾಲುವೆ ಕಳೆದು ಹೋಗಬೇಕು, ತೊಳೆದು ಹೋಗಬೇಕು. ಅದು ನಮ್ಮೆಲ್ಲರ ಆದ್ಯ ಕರ್ತವ್ಯ. ಗುರುಪೀಠದ ಇಚ್ಛೆ,” ಎಂದೆಲ್ಲಾ ಧಾರ್ಮಿಕ ನಂಬಿಕೆಯ ದಾಳ ಉರುಳಿಸಿದ್ದಾರೆ. ಅಂದ ಹಾಗೆ ಶಕ್ತಿ ಪ್ರದರ್ಶನ ಕಾರ್ಯಕ್ರಮದಲ್ಲಿ ಅಮಿತ್‌ ಷಾ, ದೇವೇಗೌಡರಿದಂದ ಆರಂಭಿಸಿದ ರಾಜಕಾರಣಿಗಳು, ಸುಪ್ರಿಂ ಕೋರ್ಟ್‌ ಹೈಕೋರ್ಟ್‌ ನ್ಯಾಯಮೂರ್ತಿಗಳು, ರಾಜ್ಯ ಪ್ರಮುಖ ಮಾಧ್ಯಮಗಳ ಸಂಪಾದಕರು ಹೀಗೆ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.

ಒಂದು ಪುಟ್ಟ ಸಮುದಾಯ, ಅದು ನಂಬಿಕೊಂಡು ಬಂದ ಪೀಠದ ಪರಿಕಲ್ಪನೆಯನ್ನು ಜೀವಂತವಾಗಿಟ್ಟುಕೊಳ್ಳಲು ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಯನ್ನೂ ಬಳಸಿಕೊಳ್ಳಲು ಹೊರಟಿದೆ. ಅದೇ ವೇಳೆ, ಸಮುದಾಯದಲ್ಲಿ ಎರಡು ಭಿನ್ನ ದನಿಗಳು ಹುಟ್ಟಿಕೊಳ್ಳುವ ಮೂಲಕ ‘ದಾಯಾದಿ ಕಲಹ’ವನ್ನು ಜೀವಂತವಾಗಿಟ್ಟಿವೆ. ಸಮುದಾಯಕ್ಕೆ ಚುನಾವಣೆಯಿಂದ ಏನಾಗುತ್ತೋ, ಬಿಡುತ್ತೋ; ಚುನಾವಣೆ ನೆಪದಲ್ಲಿ ಪೀಠದ ಅಸ್ಥಿತ್ವ ಸಾಬೀತುಪಡಿಸಲು ಸರ್ವ ಸಂಘ ಪರಿತ್ಯಾಗಿಗಳು ಹೊರಟಿದ್ದಾರೆ, ಅದಷ್ಟೆ ಈ ಕಾಲದ ಸತ್ಯ.