samachara
www.samachara.com
ಶಾ-ಮೋದಿ ಜೋಡಿಗೆ ‘ಸಂಘಿ ಪುತ್ರ’ನ ಟಾಂಗ್, 2019ಕ್ಕೆ ಗಡ್ಕರಿ ಬಿಜೆಪಿಯ ಹೊಸ ಸಾರಥಿ?
COVER STORY

ಶಾ-ಮೋದಿ ಜೋಡಿಗೆ ‘ಸಂಘಿ ಪುತ್ರ’ನ ಟಾಂಗ್, 2019ಕ್ಕೆ ಗಡ್ಕರಿ ಬಿಜೆಪಿಯ ಹೊಸ ಸಾರಥಿ?

ನಿತಿನ್ ಗಡ್ಕರಿ ಆರ್‌ಎಸ್‌ಎಸ್‌ ಕೇಂದ್ರ ಕಚೇರಿ ಇರುವ ನಾಗ್ಪುರದ ಸಂಸದರು. ಮೋದಿ, ಶಾಗಿಂತ ತುಸು ಹೆಚ್ಚೇ ಅವರು ಆರ್‌ಎಸ್‌ಎಸ್‌ ಜತೆ ಒಡನಾಟವನ್ನು ಇಟ್ಟುಕೊಂಡಿದ್ದಾರೆ.

ಬಿಜೆಪಿ ಮಾಜಿ ರಾಷ್ಟ್ರಾಧ್ಯಕ್ಷ, ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಮಾತುಗಳು ಮತ್ತೆ ವಿವಾದಕ್ಕೆ ಕಾರಣವಾಗಿವೆ. ಶಾಸಕರು ಮತ್ತು ಸಂಸದರ ಕಳಪೆ ಕಾರ್ಯವೈಖರಿಗೆ ಪಕ್ಷದ ಅಧ್ಯಕ್ಷರೇ ಜವಾಬ್ದಾರಿ ಎಂಬ ಅವರ ಹೇಳಿಕೆ ಬಿಜೆಪಿ ಪಕ್ಷದಲ್ಲಿ ಬಿಸಿ ಬಿಸಿ ಚರ್ಚೆಗೆ ನಾಂದಿ ಹಾಡಿದೆ.

ನವದೆಹಲಿಯಲ್ಲಿ ಐಬಿ ಶತಮಾನೋತ್ಸವ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಒಂದೊಮ್ಮೆ ನಾನು ಪಕ್ಷದ ಅಧ್ಯಕ್ಷನಾಗಿದ್ದರೆ, ನನ್ನ ಸಂಸದರು ಮತ್ತು ಶಾಸಕರು ಉತ್ತಮ ಕೆಲಸ ಮಾಡದಿದ್ದರೆ, ಯಾರು ಜವಾಬ್ದಾರಿ? ನಾನೇ,” ಎಂದು ಹೇಳಿದ್ದಾರೆ. ಈ ಮೂಲಕ ಅವರು ಅಮಿತ್‌ ಶಾ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ ಎಂಬ ಸರಳ ವ್ಯಾಖ್ಯಾನವನ್ನು ಮಾಧ್ಯಮಗಳು, ಸಾಮಾನ್ಯ ಜನರು ಮಾಡಿದ್ದಾರೆ.

ಬಿಜೆಪಿ ಮಧ್ಯ ಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಗಡ್ಕರಿ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿ ಕೇಂದ್ರಕ್ಕೆ ಬರುತ್ತಿದ್ದಾರೆ. ಮೊದಲಿಗೆ ಚುನಾವಣಾ ಫಲಿತಾಂಶ ಬಂದ ದಿನವೇ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿಲ್ಲದ ಹೆದ್ದಾರಿ ಖಾತೆಯ ಜಾಹೀರಾತು ಬಿಡುಗಡೆಯಾಗಿತ್ತು. ಇದರಲ್ಲಿ ಯೋಗಿ ಆದಿತ್ಯನಾಥ್‌ ಮತ್ತು ಗಡ್ಕರಿಯವರ ಚಿತ್ರ ಮಾತ್ರವೇ ಇತ್ತು.

ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿಲ್ಲದ ಹೆದ್ದಾರಿ ಶಿಲಾನ್ಯಾಸ ಕಾರ್ಯಕ್ರಮದ ಅಪರೂಪದ ಜಾಹೀರಾತು
ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿಲ್ಲದ ಹೆದ್ದಾರಿ ಶಿಲಾನ್ಯಾಸ ಕಾರ್ಯಕ್ರಮದ ಅಪರೂಪದ ಜಾಹೀರಾತು

ಇದಾದ ಬಳಿಕೆ ಅವರು ಕೆಲವು ದಿನಗಳ ಹಿಂದೆ ಅವರು, “ಯಶಸ್ಸಿಗೆ ಹಲವು ತಂದೆಯಂದಿರಿದ್ದರೆ, ಸೋಲು ಯಾವತ್ತೂ ಅನಾಥ. ಒಂದೊಮ್ಮೆ ಯಶಸ್ಸು ಸಿಕ್ಕಿದರೆ ಅದರ ಪಾಲು ಪಡೆದುಕೊಳ್ಳಲು ಸ್ಪರ್ಧೆಯೇ ಏರ್ಪಡುತ್ತದೆ, ಒಂದೊಮ್ಮೆ ಸೋಲಾದರೆ ಎಲ್ಲರೂ ಇನ್ನೊಬ್ಬರತ್ತ ಬೆರಳು ತೋರಿಸಲು ಆರಂಭಿಸುತ್ತಾರೆ,” ಎಂದಿದ್ದರು. ಪಂಚ ರಾಜ್ಯ ಚುನಾವಣಾ ಫಲಿತಾಂಶದ ನಂತರ ನಾಪತ್ತೆಯಾಗಿದ್ದ ಪ್ರಧಾನಿ ನರೇಂದ್ರ ಮೋದಿಗೆ ಅವರು ಈ ಮೂಲಕ ಟಾಂಗ್‌ ನೀಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಹೀಗಿದ್ದು ಇದನ್ನು ಸ್ವತಃ ಗಡ್ಕರಿ ತಳ್ಳಿ ಹಾಕಿದ್ದಾರೆ. ಪರೋಕ್ಷವಾಗಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಜೋಡಿ ವಿರುದ್ಧ ಮಾತನಾಡಿದಂತೆ ಮಾಡಿ ಕೊನೆಗೆ, “ನನ್ನ ಮತ್ತು ಪಕ್ಷದ ತೇಜೋವಧೆಗೆ ಮಾಡಲು ನನ್ನ ತಿರುಚಿದ ಹೇಳಿಕೆಗಳನ್ನು, ಸಂದರ್ಭೊಚಿತವಲ್ಲದ ಮಾತುಗಳನ್ನು ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳು ಬಳಸಿಕೊಳ್ಳುತ್ತಿವೆ,” ಎಂದಿದ್ದರು.

ಆದರೆ ಇದೆಲ್ಲಾ ಕಾಕತಾಳೀಯ ಅಲ್ಲ ಎಂಬುದಕ್ಕೆ ಇನ್ನೊಂದಿಷ್ಟು ಘಟನೆಗಳು ಪುಷ್ಠಿ ನೀಡುತ್ತವೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಮಹಾರಾಷ್ಟ್ರದ ಬಿಜೆಪಿ ನಾಯಕರೊಬ್ಬರು ಪ್ರಧಾನಿ ಹುದ್ದೆಗೆ ನಿತಿನ್‌ ಗಡ್ಕರಿಯನ್ನು ಕರೆ ತರಬೇಕು ಎಂದು ಆಗ್ರಹಿಸಿದ್ದರು.

ಮಹಾರಾಷ್ಟ್ರದ ‘ವಸಂತ್‌ರಾವ್‌ ನಾಯಕ್‌ ಶೆತಿ ಸ್ವಾವಲಂಬನ್‌ ಮಿಷನ್‌’ನ ಮುಖ್ಯಸ್ಥರಾಗಿರುವ, ರಾಜ್ಯ ದರ್ಜೆ ಸಚಿವರ ರ್ಯಾಂಕ್‌ನ ಕಿಶೋರ್‌ ತಿವಾರಿ ಆರ್‌ಎಸ್‌ಎಸ್‌ ಮುಖ್ಯಸ್ಥರಾದ ಮೋಹನ್‌ ಭಾಗವತ್‌ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದರು. ಪತ್ರದಲ್ಲಿ ಅವರು, “ಆರ್‌ಎಸ್‌ಎಸ್ ಮುಖ್ಯಸ್ಥರು ಭಯ ಮುಕ್ತ ವಾತಾವರಣವನ್ನು ಸೃಷ್ಟಿಸಲು ಮತ್ತು ಸಾಮಾನ್ಯ ಜನರಲ್ಲಿ ನಂಬಿಕೆಯಿರಿಸಲು ಗಡ್ಕರಿಗೆ ಪಕ್ಷದ ಅಧಿಕಾರವನ್ನು ನೀಡಬೇಕು,” ಎಂದು ಕೇಳಿಕೊಂಡಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕೆಂದರೆ ಈ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಅವರು ಹೇಳಿದ್ದರು. ಈ ಎಲ್ಲಾ ಬೆಳವಣಿಗೆಗಳು ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿ ಒದಗಿಸುತ್ತಿವೆ.

ಈ ಪತ್ರ ಬರೆದ ಕೆಲವೇ ದಿನಗಳ ನಂತರ ನಿತಿನ್‌ ಗಡ್ಕರಿ ಆಡುತ್ತಿರುವ ಮಾತುಗಳು ಸಹಜವಾಗಿಯೇ ಕುತೂಹಲ ಹುಟ್ಟಿಸುತ್ತಿವೆ. ಕಾರಣ ಇಡೀ ಬಿಜೆಪಿ ಮತ್ತು ಕೇಂದ್ರ ಸರಕಾರದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ವಿರುದ್ಧ ಯಾರೂ ಸೊಲ್ಲೆತ್ತದ ಸಂದರ್ಭದಲ್ಲಿ ಗಡ್ಕರಿ ಬಾಯಿ ತುಂಬಾ ಮಾತುಗಳನ್ನಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಇಡೀ ಮೋದಿ ಸಂಪುಟದ ಸಚಿವರೆಲ್ಲಾ ಪ್ರಧಾನಿ ಅಣತಿಯಂತೆ ಕೆಲಸ ಮಾಡುತ್ತಿದ್ದರೆ ಗಡ್ಕರಿ ಮಾತ್ರ ಪೂರ್ಣ ಸ್ವಾತಂತ್ರ್ಯದಿಂದ ಕೆಲಸ ಮಾಡುತ್ತಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಜತೆ ನಿತಿನ್‌ ಗಡ್ಕರಿ
ಕಾರ್ಯಕ್ರಮವೊಂದರಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಜತೆ ನಿತಿನ್‌ ಗಡ್ಕರಿ
/ಪಿಟಿಐ

ಅಂದ ಹಾಗೆ ಗಡ್ಕರಿ ಆರ್‌ಎಸ್‌ಎಸ್‌ ಕೇಂದ್ರ ಕಚೇರಿ ಇರುವ ನಾಗ್ಪುರದ ಸಂಸದರು. ಮೋದಿ, ಶಾಗಿಂತ ಹೆಚ್ಚಾಗಿ ಗಡ್ಕರಿ ಆರ್‌ಎಸ್‌ಎಸ್‌ ಜತೆ ನಂಟನ್ನು ಹೊಂದಿದ್ದಾರೆ. ಇವರ ಬಗ್ಗೆ ವ್ಯಕ್ತಿ ಚಿತ್ರ ಬರೆದಿದ್ದ ಕ್ಯಾರವಾನ್‌ ಗಡ್ಕರಿಯನ್ನು ‘ಸಂಘದ ಪುತ್ರ’ ಎಂದು ಕರೆದಿತ್ತು. ಮತ್ತು ಒಂದೊಮ್ಮೆ ಆರ್‌ಎಸ್‌ಎಸ್‌ ಮೋದಿಯನ್ನು ಬದಲಾಯಿಸಲು ಇಚ್ಛಿಸಿದರೆ ಗಡ್ಕರಿ ನಮ್ಮ ಮೊದಲ ಆಯ್ಕೆ ಎಂದು ನಾಗ್ಪುರದ ವ್ಯಕ್ತಿಗಳು ಹೇಳಿದ್ದಾಗಿ ವರದಿ ಮಾಡಿತ್ತು.

ಇದಕ್ಕೆ ಅದರದ್ದೇ ಆದ ಕಾರಣಗಳೂ ಇವೆ. ಆರ್‌ಎಸ್‌ಎಸ್‌ ಜತೆಗೆ ಗಟ್ಟಿಯಾದ ನಂಟು ಹೊಂದಿರುವವರು ನಿತಿನ್‌ ಗಡ್ಕರಿ. ಮುಂಬೈನ ಕಾರ್ಪೊರೇಟ್‌ ವ್ಯಕ್ತಿಗಳ ಜತೆ ಉತ್ತಮ ಸಂಬಂಧ ಹೊಂದಿರುವ ಅವರು ಹಣದ ಥೈಲಿಯನ್ನು ಕೈಯಲ್ಲೇ ಹಿಡಿದುಕೊಂಡು ಓಡಾಡುತ್ತಿರುತ್ತಾರೆ. ಜನಪ್ರಿಯ ನಾಯಕರಲ್ಲದಿದ್ದರೂ ಪಕ್ಷದೊಳಗೆ ಮತ್ತು ಪಕ್ಷದಾಚೆಗೂ ರಾಷ್ಟ್ರ, ರಾಜ್ಯ ಮಟ್ಟದ ನಾಯಕರುಗಳ ಜತೆ ಉತ್ತಮ ಒಡನಾಟವನ್ನು ಹೊಂದಿದ್ದಾರೆ. ಬಿಡಿಸಿ ಹೇಳಬೇಕೆಂದರೆ ಇಂದಿನ ತಲೆಮಾರಿನಲ್ಲಿ ಯಶಸ್ವೀ ರಾಜಕಾರಣಿಗೆ ಇರಬೇಕಾದ ಅರ್ಹತೆಗಳು ಅವರಿಗಿವೆ; ಜನಪ್ರಿಯತೆ ಒಂದನ್ನು ಬಿಟ್ಟು.

ಹೀಗೊಂದು ಹಿನ್ನೆಲೆಯ ವ್ಯಕ್ತಿ ಸುಖಾ ಸುಮ್ಮನೆ ಪರೋಕ್ಷವಾಗಿಯಾದರೂ ಮೋದಿ-ಶಾಗೆ ಸಂಬಂಧಿಸಿದ ಮಾತುಗಳನ್ನು ಆಡಲು ಸಾಧ್ಯವಿಲ್ಲ. ಅದೂ ಎರಡೆರಡು ಬಾರಿ! ಇದರ ಉದ್ದೇಶ ಏನು? ಗಡ್ಕರಿ ಏನನ್ನು ಹೇಳಲು ಹೊರಟಿದ್ದಾರೆ? ಇದು ಅವರದ್ದೇ ಮಾತುಗಳಾ ಅಥವಾ ಆರ್‌ಎಸ್‌ಎಸ್‌ ಮಾತುಗಳಾ ಎಂಬ ಪ್ರಶ್ನೆಗಳಿಗೆ ಕಾಲವೇ ಉತ್ತರ ಹೇಳಲಿದೆ.